
ಸೌಮ್ಯ
ಭೂಮಿ ಮೇಲಿರುವ ಪ್ರತಿಯೊಂದು ಜೀವಿಯೂ ಏನಾದರೊಂದನ್ನು ಅರಸಿ ತಮ್ಮ ಪಯಣವನ್ನು ಸಾಗಿಸುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಂದು ಜೀವ ತನ್ನದೇ ಉಸಿರ ಅರಸಿ ಪಯಣ ನಡೆಸಿತ್ತು.
ಒಮ್ಮೆ ಎಂಬತ್ತೈದರ ಆಸುಪಾಸಿನ ವೃದ್ಧೆಯೋರ್ವಳು ಆ ಊರಿನ ಪ್ರತಿಷ್ಠಿತ ಲಾಯರ್ ಮನೆಯ ಮುಂದೆ ಹೋಗಿ ಕುಳಿತರು. ವಕೀಲರು ಐದಾರು ಬಾರಿ ಆ ಮುದುಕಿಯನ್ನು ನೋಡಿ ಯಾರೋ ಭಿಕ್ಷುಕಳಾಗಿರಬೇಕೆಂದುಕೊಂಡು ಒಂದೆರೆಡು ಬಾರಿ “ಮುಂದಕ್ಕೆ ಹೋಗಮ್ಮ ಇಲ್ಲಿ ನಿಲ್ಲಬೇಡ ಹೀಗೆಲ್ಲ ಕೂರಬೇಡ” ಎಂದು ಬೈದು ಕಳಿಸಿ ಬಿಟ್ಟರು. ಆತ ಮತ್ತು ಆತನ ಪಿಎ ಎಷ್ಟೇ ಬೈದರು ಆ ವೃದ್ಧೆ ಕೂತ ಜಾಗದಿಂದ ಇಂಚು ಕದಲಲಿಲ್ಲ. ಕೋಪಕ್ಕೆ ಕೈ ಕೊಟ್ಟ ವಕೀಲ ವೃದ್ಧೆಯ ಬಳಿ ಬಂದು “ತಗೊಳಮ್ಮ ಈ ಹತ್ತು ರೂಪಾಯಿ ಜಾಗ ಖಾಲಿ ಮಾಡು ಮೊದಲು ಇಲ್ಲಿಂದ, ತಥ್ ಎಲ್ಲಿಂದ ಬರ್ತೀರ ನಮ್ಮ ತಲೆ ಕೆಡಿಸೋಕಂತ್ಲೇ ಮೊದಲೇ ಇವತ್ತು ಬೆಳಗ್ಗೆಯಿಂದ ಮನಸ್ಸು ಸರಿಯಿಲ್ಲ. ಹೋಗಮ್ಮ ಇಲ್ಲಿಂದ ಮೊದಲು” ಎಂದು ಬೈದನು.
“ಸಾರು ( ಸಾರ್ ) ನೀವು ಈ ಊರಲ್ಲೇ ದೊಡ್ಡ ವಕೀಲ ಸಾಹೇಬ್ರಂತೆ ನನಗೆ ಈ ದುಡ್ಡು ಬೇಡ ಸ್ವಾಮಿ, ನಂದು ಒಂದು ಕೇಸ್ ಇದೆ ಗೆಲ್ಲಿಸಿ ಕೊಡ್ತೀರಾ? ದುಡ್ಡು ಬದಲು ನನ್ನ ಹತ್ತಿರ ಇಷ್ಟು ಒಡವೆ ಇದೆ. ಆಗಲ್ಲ ಅಂತ ಮಾತ್ರ ಹೇಳಬೇಡಿ” ಎಂದು ತನ್ನ ಸೆರಗಿನಂಚಲ್ಲಿ ಕಟ್ಟಿ ಜೋಪಾನವಾಗಿ ಇಟ್ಟಿದ್ದ ಎರಡು ಬಳೆ, ಒಂದೆರೆಡೆಳೆ ಅವಲಕ್ಕಿ ಮಾಲೆಯನ್ನು ವಕೀಲರ ಮುಂದೆ ಇಟ್ಟು ಕೈ ಜೋಡಿಸಿದಳು.
ವಕೀಲನಿಗೋ ಆಶ್ಚರ್ಯ ಮತ್ತು ತನ್ನ ಮೇಲೆ ಸಿಟ್ಟು ದುಪ್ಪಟ್ಟಾಗಿ ಮನದಲ್ಲೇ ನೊಂದುಕೊಂಡು, “ಅಯ್ಯೋ ಅಮ್ಮ ಇದು ನಿಮ್ಮ ಬಳಿಯೇ ಇರಲಿ. ದಯವಿಟ್ಟು ನನ್ನನ್ನು ಕ್ಷಮಿಸಿ ನೀವು ಮೊದಲು ಒಳಗೆ ಬನ್ನಿ, ಏನಾಯ್ತು? ನಿಮಗೆ ಯಾರಾದರೂ ಮೋಸ ಮಾಡಿದ್ರ? ನೀವು ಎಲ್ಲಿಂದ ಬಂದಿದ್ದೀರ? ಯಾರ ಮೇಲೆ ಕೇಸ್ ಹಾಕಬೇಕು?” ಎಂದೆಲ್ಲಾ ಪ್ರಶ್ನಿಸಿದರು.
“ನಾನು ನನ್ನ ಮಗನ ಮೇಲೆ ಕೇಸ್ ಹಾಕಬೇಕು ಸ್ವಾಮಿ,” ಎಂದಿತು.
“ಏನು ನಿಮ್ಮ ಮಗನ ಮೇಲಾ!” ಎಂದು ಆಶ್ಚರ್ಯವಾಗಿ ವಕೀಲರು ಕೇಳಿದಾಗ, “ಹೌದು ಸ್ವಾಮಿ ನನ್ನ ಮಗನ ಮೇಲೆ ಕೇಸ್ ಹಾಕಬೇಕು” ಎಂದಿತು ಅಜ್ಜಿ. ಹೀಗೆ ಅಜ್ಜಿಯ ಕಥೆಯೆಲ್ಲವನ್ನು ಕೇಳಿದ ವಕೀಲರು ಕ್ಷಣ ಅಚ್ಚರಿಗೊಳಗಾದರೂ ಸಹ ಕೂಡಲೇ “ಅವ್ವಾ ಪ್ರಪಂಚದಲ್ಲೇ ಇದೇ ಮೊದಲಿರಬೇಕೆನೊ ಇಂತಹ ಕೇಸ್ ಇಂತಹ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುತ್ತಿರುವುದು. ಆಗಲಿ ಅವ್ವ ನಿಮಗಾಗಿ ಈ ಕೇಸ್ ನಾನು ದಾಖಲಿಸ್ತೀನಿ. ವಕೀಲ ವೃತ್ತಿಯಲ್ಲೇ ಇದು ಪ್ರಥಮ ಚಾಲೆಂಜ್ ಆಗಿರಲಿ, ಖಂಡಿತ, ಖಂಡಿತ ನಿಮಗಾಗಿ ನಾನು ವಾದ ಮಾಡುವೆ” ಎಂದು ಅಜ್ಜಿಯ ವಿವರಗಳನ್ನೆಲ್ಲಾ ತೆಗೆದುಕೊಂಡು ಪೆಟಿಷನ್ ಫೈಲ್ ಮಾಡಿ ಅಜ್ಜಿಯ ಮಗನಿಗೂ ನೋಟಿಸ್ ಕಳಿಸಿದರು.
ನೋಟಿಸ್ ನೋಡಿದ ಮಗ ಕೆಂಡಮಂಡಲವಾದ. ತಾಯಿಯನ್ನುಕಂಡೊಡನೆ ಕೊಲ್ಲುವಷ್ಟು ಆಕ್ರೋಶ ಆತನಲ್ಲಿ ಮೂಡಿತು. ಆದರೆ ನೋಟಿಸ್ ನಲ್ಲಿ ಇದ್ದಂತಹ “ನಿಮ್ಮ ತಾಯಿ ತನ್ನ ಹಕ್ಕನ್ನು ಕೇಳುತ್ತಿದ್ದಾರೆ. ಅದನ್ನು ಹಿಂತಿರುಗಿಸಿ ಅಥವಾ ಕೋರ್ಟಿಗೆ ಹಾಜರಾಗಿ” ಎಂಬ ಸಾಲುಗಳನ್ನು ನೋಡಿ, “ಛೇ ಇಂತಹ ತಾಯಿಯೂ ಇರುತ್ತಾಳಾ? ಆಸ್ತಿಯನ್ನು ಹಿಂಪಡೆಯಲು ಮಗನ ಮೇಲೆ ಕೇಸ್ ದಾಖಲಿಸಿದ್ದಾಳೆ, ಆದದ್ದು ಆಗಲಿ ನಾನು ಯಾವುದೇ ಕಾರಣಕ್ಕೂ ಆಕೆಗೆ ಆಸ್ತಿ ಬಿಟ್ಟು ಕೊಡುವುದಿಲ್ಲ” ಎಂದು ಶಪಥ ಮಾಡಿ ತನ್ನ ವಕೀಲರ ಮೂಲಕ, ಕೋರ್ಟಿಗೆ ಬರಲು ಸಿದ್ಧನಾಗಿದ್ದೇನೆಂದು ನೋಟಿಸ್ ಕಳಿಸಿದನು.

ಹೀಗೆ ಕೇಸ್ ಕೋರ್ಟಿಗೂ ಬಂದಿತು. ಎಂಬತ್ತೈದರ ವೃದ್ಧೆ ತೋಳು ತುಂಬಾ ಸೆರಗ ಹೊದ್ದು ತನ್ನ ನಿಶ್ಯಕ್ತಿಗೊಳಗಾದ ಕಾಲನ್ನು ಎಳೆದುಕೊಂಡೇ ಕಟಕಟೆಯೊಳಗೆ ನಿಂತರು. ನ್ಯಾಯಧೀಶರು ನಿತ್ಯ ನಿಯಮಗಳನ್ನು ಪೂರೈಸಿ ಅಜ್ಜಿಯ ಕಥೆ ಆಲಿಸಲು ಶುರುವಿಟ್ಟರು.
“ಯುವರ್ ಆನರ್, ಕೇಸ್ ದಾಖಲಿಸಿರುವ ವೃದ್ಧೆಯ ಹೆಸರು ನೀಲಮ್ಮ, ಆಕೆಗೆ ಮೂವರು ಮಕ್ಕಳು. ಎರಡು ಹೆಣ್ಣು ಒಂದು ಗಂಡು. ಈತನೇ ಮೊದಲ ಮಗ. ಮಕ್ಕಳು ಸಣ್ಣವರಿದ್ದಾಗಲೇ ನೀಲಮ್ಮ ವೈಧವ್ಯಕೆ ಕಾಲಿಟ್ಟು ಹಲವರ ಮನೆ ಮುಸುರೆ ತಿಕ್ಕಿ ಮಕ್ಕಳನ್ನು ಸಾಕಿ ಬೆಳೆಸಿದರು. ಇಬ್ಬರು ಹೆಣ್ಣು ಮಕ್ಕಳಿಗೂ ಒಳ್ಳೆಯ ಕಡೆ ಮದುವೆಯೂ ಮಾಡಿದರು. ಮಗನನ್ನು ಸಹ ದೊಡ್ಡ ಸರ್ಕಾರಿ ವಕೀಲನನ್ನಾಗಿ ಮಾಡಿದರು. ಇಷ್ಟು ದಿನ ವೃದ್ಧೆ ಸ್ವಾವಲಂಬಿಯಾಗಿ ಬದುಕಿದ್ದಾರೆ. ತನಗಾಗಿ ಏನನ್ನೂ ಮಾಡಿಕೊಂಡಿದ್ದಿಲ್ಲ. ಈಗ ತನ್ನದಾದ ತನ್ನ ಹಕ್ಕನ್ನು ತನ್ನ ಬದುಕಿಗೆ ಬೇಕಾದ ಅಮೂಲ್ಯ ವಸ್ತುವನ್ನು ಹಿಂಪಡೆಯುವ ಸಲುವಾಗಿ ಕೇಸ್ ದಾಖಲಿಸಿದ್ದಾರೆ. ದಯವಿಟ್ಟು ನೀವು ಎಲ್ಲ ಕಡೆಯಿಂದ ಪರಿಶೀಲಿಸಿ ನೀಲಮ್ಮರವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ತಾಳ್ಮೆಯಿಂದ ಕೇಳಿಕೊಳ್ಳುತ್ತೇನೆ” ಎಂದರು.
ಇವರ ವಾದವನ್ನು ಕೇಳಿದ ನ್ಯಾಯಧೀಶರು “ಸೋಮೇಶ್ ನಿಮ್ಮ ಪರ ಯಾರು ವಾದಿಸಲಿದ್ದಾರೆ” ಎಂದರು.
“ಯುವರ್ ಆನರ್, ನನ್ನ ಪರ ನಾನೇ ವಾದ ಮಾಡಲು ಇಚ್ಛಿಸುತ್ತಿದ್ದೇನೆ. ತಾವು ಅನುಮತಿ ನೀಡಬೇಕು” ಎಂದು ಕೋರಿ ಸೋಮೇಶ್ ತನ್ನ ವಾದವನ್ನು ಶುರುವಿಟ್ಟರು.
“ಯುವರ್ ಆನರ್ ನನ್ನ ತಾಯಿಯು ಏನನ್ನು ಬಯಸಿ ಕೇಸ್ ದಾಖಲಿಸಿದ್ದಾರೋ ನನಗೆ ತಿಳಿದಿಲ್ಲ. ಆದರೆ ಅವರ ಯಾವ ಆಸ್ತಿಯನ್ನು ನಾನು ಬರೆಸಿಕೊಂಡಿಲ್ಲ. ಅವರು ಈಗ ಈ ರೀತಿ ಕೇಳಿ ಕೇಸ್ ದಾಖಲಿಸಿದ್ದು ನನಗೆ ತುಂಬಾ ಬೇಸರ ತಂದಿದೆ. ಅವಮಾನದಂತೆ ಭಾಸವಾಗುತ್ತಿದೆ ಯುವರ್ ಆನರ್. ಹೆತ್ತ ತಾಯಿಯೇ ಈ ರೀತಿ ಮಾಡಿದರೆ ಹೇಗೆ” ಎಂದು ಎದೆ ಹಿಡಿದುಕೊಂಡು ಬಿದ್ದರು. ಒಮ್ಮೆಲೆ ಗದ್ದಲ ಎದ್ದಿತು. ಕೋರ್ಟಿನಲ್ಲಿ “ಮಗು ಸೋಮು” ಎಂಬ ಕೂಗು ಎಲ್ಲರನ್ನೂ ಒಮ್ಮೆ ಅಲ್ಲಾಡಿಸಿತು.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ತಾಯಿ ಒಂದೆಡೆ ಅಳುತ್ತಾ ನಿಂತಿದರು. ಸೋಮೇಶ್ ಮಡದಿಯೂ ತನ್ನ ಪತಿಗೆ ಏನಾಯ್ತೋ ಎಂಬ ಆತಂಕದಿ ಐಸಿಯು ಮುಂದೆ ಅತ್ತಿಂದಿತ್ತ ಹೆಜ್ಜೆ ಹಾಕುತ್ತಿದ್ದಳು.
“ಮಗಾ ಏನಾಗಿದೆ ನನ್ನ ಸೋಮುಗೆ, ಡಾಕ್ಟರ್ ಏನಂದ್ರು?” ಎಂದು ಅಳುತ್ತಾ ಕೇಳಿದಾಗ,
“ಏನು? ಮಾಡೋದೆಲ್ಲ ಮಾಡಿ ಈಗ ನಟನೆ ಮಾಡ್ತಿದೀರ ನನ್ನ ಗಂಡ ಇವತ್ತು ಸಾಯೋ ಸ್ಥಿತಿಯಲ್ಲಿ ಬಿದ್ದಿರೋಕೆ ಕಾರಣ ನೀವೇ, ಅವರು ದುಡಿದ ಆಸ್ತಿಯ ಮೇಲೆ ನಿಮಗೆ ಕಣ್ಣು. ಆ ಆಸೆಯಿಂದಲೇ ಕೇಸ್ ದಾಖಲಿಸಿ, ಅವರಿಗೆ ಅವಮಾನ ಆಗೋ ರೀತಿ ಮಾಡಿ ಈಗ ಪ್ರಶ್ನೆ ಮಾಡ್ತಿದೀರ ಇಲ್ಲಿಂದ ಹೊರಟೋಗಿ ನಿಮ್ಮ ಮುಖ ನೋಡೋಕು ಅಸಹ್ಯ ಅನ್ನಿಸುತ್ತೆ” ಎಂದು ಬೈದು ದಬ್ಬಿದಳು. ಮಗನಿಗೆ ಏನಾಗಿದೆಯೋ ಅರಿಯಲಾಗದ ವೃದ್ಧ ಜೀವ, ಎದೆ ಹಿಡಿದುಕೊಂಡೇ ಅಳುತ್ತಲೇ ಡಾಕ್ಟರ್ ಕೊಠಡಿಗೆ ಹೋಗಿ ಅವರ ಕಾಲಿಗೆ ಬಿದ್ದು, “ಡಾಕ್ಟ್ರೆ ನನ್ನ ಮಗಿಗೆ ಏನಾಗಿದೆ ಹೇಳಿ, ನನ್ನ ಸೊಸೆ ಕೇಳಿದ್ರೆ ಹೇಳ್ತಿಲ್ಲ. ದಯವಿಟ್ಟು ಹೇಳಿ” ಎಂದು ಅತ್ತುಕೊಂಡರು.
ಆಗ ವೈದ್ಯರು, “ನಿಮ್ಮ ಮಗನ ಹೃದಯ ತುಂಬಾ ದುರ್ಬಲಗೊಂಡಿದೆ ಅಮ್ಮ ಅವರಿಗೆ ಮತ್ತೊಂದು ಹೃದಯದ ಅವಶ್ಯಕತೆ” ಇದೆ ಅಂದ್ರು.
“ಡಾಕ್ಟರ್ ಯಾರ ಹೃದಯ ಆದರೂ ಕೊಡಬಹುದೇ ಹಾಗಿದ್ರೆ ನನ್ನ ಹೃದಯ ನನ್ನ ಮಗನಿಗಿಟ್ಟು ದಯವಿಟ್ಟು ನನ್ನ ಮಗನನ್ನು ಕಾಪಾಡಿ ಇಲ್ಲ ಅನ್ನಬೇಡಿ” ಎಂದು ಬೇಡಿಕೊಂಡಿತು.
“ಹಾಗೆಲ್ಲ ಆಗೊಲ್ಲ ತಾಯಿ ಒಬ್ಬ ವ್ಯಕ್ತಿ ಸಾಯುವ ಹತ್ತು ನಿಮಿಷದ ಮುಂಚೆಯಷ್ಟೆ ಹೃದಯ ಹೊರ ತೆಗೆಯಲು ಸಾಧ್ಯ. ಕ್ಷಮಿಸಿ” ಎಂದರು ವೈದ್ಯರು.
“ಡಾಕ್ಟರ್ ನನಗೆ ವಾರದಿಂದ ಉಳೀತೀನಿ ಅನ್ನೋ ಯಾವ ಸೂಚನೆ ಸಿಗ್ತಿಲ್ಲ, ಮನಸ್ಸು ಈ ಲೋಕ ಬಿಟ್ಟು ಹೋಗ್ತೀಯ ಹೋಗ್ತೀಯ ನಿನ್ನ ಅವಧಿ ಮುಗೀತು ಅಂತಲೇ ಹೇಳಿದಂತಿತ್ತು. ನಾನು ಇನ್ನೇನು ಸಾಯ್ತಿದೀನಿ ದಯವಿಟ್ಟು ನನ್ನ ಹೃದಯ ನನ್ನ ಮಗನಗಿಟ್ಟು ಅವನ ಜೀವ ಉಳಿಸಿ ಡಾಕ್ಟ್ರೇ” ಎಂದಿತು.
“ಹಾಗೆಲ್ಲ ಆಗೋಲ್ಲ ಮಾ, ನೀವು ಒಂದು ಪತ್ರದಲ್ಲಿ ಬರೆದು ಕೊಡಬೇಕಾಗುತ್ತದೆ ಪರವಾಗಿಲ್ವೇ” ಎಂದರು. ಅಜ್ಜಿ ಪತ್ರದಲ್ಲಿ ಏನನ್ನೋ ಗೀಚಿ ವೈದ್ಯರ ಕೈಗಿಟ್ಟು ತನ್ನೆರೆಡು ಕೈ ಎತ್ತಿ ಮುಗಿಯುತ್ತಾ ವೃದ್ಧೆ ಕೆಳಗೆ ಬಿದ್ದರು.
ಅಜ್ಜಿಯ ಆಸೆಯಂತೆ ಅವರ ಹೃದಯವನ್ನು ಮಗನಿಗಿಟ್ಟು ಆಪರೇಷನ್ ಮಾಡಿ ಆತನ ಜೀವ ಉಳಿಸಿದರು. ಹೀಗೆ ವಾರ ಕಳೆಯಿತು. ರೋಗಿಯೂ ಚೇತರಿಸಿಕೊಂಡು ತನ್ನ ಮಡದಿಯ ಬಳಿ, “ಅಮ್ಮ ಏನಾದರೂ ಬಂದಿದ್ರೇನೆ? ನನಗೆ ಯಾಕೋ ನೋಡಬೇಕು ಅನ್ನಿಸ್ತಿದೆ” ಎಂದನು.

“ಇಷ್ಟಾದರೂ ಆ ಮುದುಕಿಯಿಂದ ಜೀವ ಹೋಗೊ ಪರಿಸ್ಥಿತಿ ಬಂದ್ರೂ ನಿಮ್ಮ ಹಾಳಾದ್ ಗುಣ ಬದಲಾಗಲ್ಲ ಅಲ್ವ. ಆಕೆನ ಆವತ್ತೇ ಬೈದು ಕಳಿಸಿದಿನಿ ನೀವು ಸುಮ್ಮನೆ ರೆಸ್ಟ್ ಮಾಡಿ” ಎಂದಳು. ಇತ್ತ ಆತ ಪೂರ್ತಿ ಚೇತರಿಸಿಕೊಂಡನು. ತನಗೆ ಹೃದಯ ಕೊಟ್ಟವರಾರೆಂಬ ಮಾಹಿತಿಯನ್ನು ಸಹ ಆತ ಕೋರ್ಟಿನ ಕೇಸ್ ನೆನಪಾಗಿ ಕೇಳಲು ಹೋಗಲಿಲ್ಲ. ಹೀಗೆ ಮತ್ತೆ ಕೇಸ್ ಹಿಯರಿಂಗ್ ಬಂತು.
ಆಗ ನೀಲಮ್ಮ ಪರ ವಕೀಲರು ತಮ್ಮ ವಾದವನ್ನು ಮತ್ತೆ ಶುರು ಮಾಡಿದರು. “ಯುವರ್ ಆನರ್ ನನ್ನ ಕಕ್ಷಿದಾರರಾದ ನೀಲಮ್ಮ ಅವರು ಮಕ್ಕಳನ್ನೇ ತನ್ನ ಭವಿಷ್ಯವೆಂದು ಕೊಂಡಿದ್ದರು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ನೀಲಮ್ಮ ಸಹ ತನ್ನ ಹೆಣ್ಣುಮಕ್ಕಳ ಆಶ್ರಯವನ್ನು ಎಂದೂ ಸಹ ಬಯಸಿ ಹೋಗಲಿಲ್ಲ. ಮಗನ ಮೇಲೆ ಬೆಟ್ಟದಷ್ಟು ಕನಸು ಹೊತ್ತು ಬದುಕುತ್ತಿದ್ದರು. ಆ ಮಗ ಪ್ರೀತಿಯಲ್ಲಿ ಬಿದ್ದು ಮನೆ ಅಳಿಯನಾಗಿ ಮಾವನ ಮನೆ ಸೇರಿದನು. ತಾಯಿಯನ್ನು ಒಂಟಿ ಮಾಡಿದನು.
ತನ್ನನ್ನು ತೊರೆದು ಹೋದ ಮಗ ಎಲ್ಲಿದ್ದರೂ ಕ್ಷೇಮವಾಗೇ ಇರಲಿ ಎಂದು ಬಯಸಿ ವೃದ್ಧಾಪ್ಯದಲ್ಲೂ ಹಣ್ಣು ಮಾರಿ ಜೀವನ ಸಾಗಿಸುತ್ತಿತ್ತು. ಪಾಪ ಈ ಹದಿನೈದು ಇಪ್ಪತ್ತು ದಿನಗಳ ಕೆಳಗೆ ಅದೇನಾಯ್ತೋ? ಒಂದು ದಿನವೂ ಕುಶಲೋಪರಿ ವಿಚಾರಿಸದ ತನ್ನ ಮಗನನ್ನು ಕಾಣ ಬಯಸಿ ಆತನಿದ್ದ ಊರಿಗೆ ಬಸ್ ಹಿಡಿದು ಹೊರಟಿದೆ.
ಕೈಯಲ್ಲಿ ಬಸ್ ಚಾರ್ಜ್ ಬಿಟ್ಟರೆ ಬೇರೆ ಹಣವೂ ಆ ಕ್ಷಣಕ್ಕೆ ಅಜ್ಜಿಯ ಬಳಿ ಇರಲಿಲ್ಲ. ಹೀಗೆ ಮಗನನ್ನು ಕಾಣುವ ಹಂಬಲದಿ ಯಾರ ಯಾರ ಬಳಿಯೋ ಬೇಡಿ ಮಗನ ಮನೆ ತಲುಪಿದೆ. ತಾಯಿಯನ್ನು ಕಂಡ ಈ ವ್ಯಕ್ತಿ ಅವರನ್ನು ಒಳಗೂ ಕರೆಯದೆ,
“ಅಮ್ಮ ನೀನ? ಇಲ್ಯಾಕೆ ಬರೋಕೋದೆ? ನನ್ನ ಮಾನ ತಗೀಲಿಕ್ಕೇನು? ಬಾ ಒಳಗೆ, ಏನ್ ಬಂದ ವಿಷಯ, ನನಗೆ ಕೋರ್ಟಿಗೆ ಲೇಟ್ ಆಗ್ತಿದೆ. ಇಲ್ಲೇ ಇರು ಸಂಜೆ ಮಾತಾಡ್ತೀನಿ” ಎಂದು ಹೊರಟಿದ್ದಾರೆ. ಇನ್ನು ಸೊಸೆ, “ಓಹ್ ನೀವ? ನನಗೆ ಕೆಲಸ ಇದೆ, ಕೆಲಸದವಳು ಇದಾಳೆ ಏನು ಬೇಕೊ ಕೇಳಿ ತಿನ್ನಿ” ಎಂದಷ್ಟೇ ಹೇಳಿ ಹೊರಟಿದ್ದಾರೆ. ಕೆಲಸದವಳೋ ತನ್ನ ಮಗಳಿಗೆ ಪ್ರಸವ ವೇದನೆ ಎಂಬ ಸುದ್ದಿ ಕೇಳಿ ವೃದ್ಧೆಗೆ ಏನೂ ಹೇಳದೆ ಹೊರಟು ಬಿಟ್ಟಿದ್ದಾರೆ. ಹೊಸ ಜಾಗ, ಹೊಸ ವಸ್ತುಗಳು. ಅಜ್ಜಿಗೆ ನೀರು ಹೇಗೆ ಕುಡಿಯುವುದು ಎಂಬುದು ಸಹ ಗೊತ್ತಾಗದೆ ಸಿಂಕ್ ನಲ್ಲಿಯಲ್ಲಿ ನೀರು ಕುಡಿದು ದಾಹವ ತಣಿಸಿಕೊಂಡಿದೆ.
ಮೊದಲೇ ಪ್ರಯಾಣದಿ ದಣಿದಿದ್ದ ಜೀವಕೆ ತುಂಬಾ ಹಸಿವಾಯ್ತು. ಅದುವೋ ಫ್ಲಾಟ್ ಒಬ್ಬರ ಮನೆಗೆ ಒಬ್ಬರು ಹೋಗಲಾಗದು. ಅಜ್ಜಿಗೆ ಲಿಫ್ಟ್ ಬಳಸಿ ಹೋಗಲು ಬರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಪಾಪ ಅಲ್ಲೇ ಆಡುತ್ತಿದ್ದ ಮಕ್ಕಳನ್ನು ಕರೆಯುತ್ತೆ ಯಾರೂ ಸಹ ತಿರುಗಿ ನೋಡುವುದಿಲ್ಲ. ಆಗ ಅಜ್ಜಿ ಒಂದು ಲೋಟವನ್ನು ಕೆಳಗಿನ ಮಹಡಿಗೆ ಹಾಕಿದ್ದಾರೆ. ಅದನ್ನು ಕೆಲಸದವಳೊಬ್ಬಳು ಎತ್ತಿಕೊಂಡು ಮೇಲೆ ಬಂದಾಗ, “ತಾಯಿ, ಇಲ್ಲಿ ಅಡುಗೆ ಮಾಡೋದು ಹೇಗೆ ಅಂತ ಸ್ವಲ್ಪ ಹೇಳಿ ಕೊಡ್ತೀಯ ಅಮ್ಮ ನನಗೆ ಏನೂ ಗೊತ್ತಾಗ್ತಿಲ್ಲ.
ಮಗ ಸೊಸೆ ಮನೆಯಲ್ಲಿ ಇಲ್ಲ. ಮೊಮ್ಮಕ್ಕಳು ಯಾಕೋ ಹತ್ತಿರವೂ ಬರ್ತಿಲ್ಲ. ತುಂಬಾ ಹಸಿವಾಗ್ತಿದೆ. ಅಥವಾ ತಿನ್ನೋಕೆ ಏನಾದರೂ ತಂದುಕೊಡ್ತೀಯ?” ಎಂದು ಕೇಳಿದೆ.
ಅಜ್ಜಿಯ ಹಸಿವರಿತ ಕೆಲಸದವಳು, “ಅಮ್ಮ ಕ್ಷಮಿಸಿ ಇಲ್ಲಿ ಹಾಗೆ ಒಬ್ಬರ ಮನೆಗೆ ಒಬ್ಬರು ಅನುಮತಿ ಇಲ್ಲದೆ ನುಗ್ಗುವ ಹಾಗಿಲ್ಲ. ನೀವು ತಪ್ಪು ತಿಳಿಯದೆ ಹೋದರೆ ನನಗೆ ತಿನ್ನಲು ಕೆಲಸದ ಮನೆಯಲ್ಲಿ ಕೊಟ್ಟಂತಹ ಅನ್ನ ಇದೆ ಅದನ್ನು ಬೇಕಾದರೆ ನಿಮಗೆ ಕೊಡಬಲ್ಲೆ” ಎಂದಳು. ಹೀಗೆ ಕೆಲಸದವಳು ಕೊಟ್ಟ ಅನ್ನವನ್ನು ಅಜ್ಜಿ ತಿನ್ನುತ್ತಿರುವಾಗಲೇ ಈ ಸೋಮೇಶ್ ಅಲ್ಲಿ ಬಂದಿದ್ದಾರೆ. ಅವರು ಬಂದೊಡನೆ ಕೆಲಸದವಳು ಹೊರಟು ಹೋದರು.

“ಏನಮ್ಮ ಬಂದಿನ್ನು ದಿನ ಆಗಿಲ್ಲ. ಅಷ್ಟುಬೇಗ ಎಲ್ಲರನ್ನೂ ಸೇರಿಸಿಕೊಂಡು ನನ್ನ ಮಗ ಸರಿಯಿಲ್ಲ, ನನ್ನ ಬಿಟ್ಟು ಬಂದ, ತುತ್ತು ಹಾಕಲ್ಲ ಅದು ಇದು ಅಂತ ಗುಲ್ಲೆಬ್ಬಿಸಿ ಅವಮಾನ ಮಾಡಬೇಕು ಅಂತ ಇದ್ದಿಯಾ” ಎಂದಿದ್ದಾರೆ. ಮನನೊಂದು ನೀಲಮ್ಮ “ಇಲ್ಲ ಮಗ ಜಾಗವೂ ಹೊಸದು ಮನೆಯೂ ಹೊಸದು, ನನಗೆ ತುಂಬಾ ಹಸಿವಾಗ್ತಿತ್ತು ಕಣಪ್ಪ ಅದಕ್ಕೆ” ಎಂದು ಹೇಳುತ್ತಿದ್ದಂತೆಯೇ ಛೀ ಸಾಕು ಸುಮ್ಮನಿರಮ್ಮ ಎಂದು ಬೈದಿದ್ದಾರೆ. ಆಗಲೇ ಅಜ್ಜಿ ಮಗನಿಗೂ ಹೇಳದೆ ಅಲ್ಲಿಂದ ಹೊರ ಬಂದಿದ್ದಾರೆ. ಇಷ್ಟೇ ಅಲ್ಲದೇ ಎಲ್ಲಿ ಮೊಮ್ಮಕ್ಕಳನ್ನು ಹತ್ತಿರ ಬಿಟ್ಟರೆ ಅಜ್ಜಿ ಅವರ ಮನೆಯಲ್ಲೇ ಇರಬೇಕಾದ ಪ್ರಸಂಗ ಬಂದುಬಿಡುವುದೋ ಎಂದು ಅಂಜಿ ಮೊಮ್ಮಕ್ಕಳ ಬಳಿ ಅಜ್ಜಿಯನ್ನು ದೂರದ ಸಂಬಂಧಿಕರು ಅವರ ಬಳಿ ಜಾಸ್ತಿ ಮಾತುಕತೆ ಬೇಡ ಎಂಬ ಎಚ್ಚರಿಕೆಯ ನುಡಿಯನ್ನು ಹೇಳಿದ್ದಾರೆ.
ಹೀಗೆ ಅಜ್ಜಿ ಒಮ್ಮೆ ನಮ್ಮ ಮನೆ ಮುಂದೆ ಬಂದು ನಿಂತಿತು. ಕೇಸ್ ಹಾಕಬೇಕು ಎಂದಿತು. ಯಾರ ಮೇಲೆ ಎಂದು ಕೇಳಿದಾಗ, “ಸ್ವಾಮಿ ನಾನು ಇನ್ನೇನು ಸಾಯ್ತಿನೇನೋ ಅನ್ನಿಸುತ್ತಿದೆ. ಸಾಯುವ ಒಳಗೆ ಒಮ್ಮೆಯಾದರೂ ನನ್ನ ಮಗನ ಪ್ರೀತಿಯ ಮಾತನ್ನು ಕೇಳಬೇಕು, ಅವನ ಅಪ್ಪುಗೆಯನ್ನು ಕಾಣಬೇಕು ಅಂತ ಆಸೆ ಆಗ್ತಿದೆ. ನೀವೇನೋ ಇಲ್ಲಿವರೆಗೂ ಯಾವುದೇ ವಿಚಾರದಲ್ಲೂ ಸೋತಿಲ್ಲ ಅಂತ ಕೇಳ್ಪಟ್ಟೆ. ದಯವಿಟ್ಟು ವಾದ ಮಾಡಿಯಾದರೂ ಒಂದು ದಿನ ಮಾತ್ರಕ್ಕೆ ನನ್ನ ಮಗನ ಪ್ರೀತಿ ಕೊಡಿಸ್ತೀರ” ಎಂದು ತನ್ನೆರೆಡು ಕೈ ಮುಗಿದು ಬೇಡಿಕೊಂಡಿತು. ಕ್ಷಣ ನನ್ನ ಹೃದಯವೇ ಚೂರಾದಂತಾಯ್ತು ಯುವರ್ ಆನರ್ ಹಿರಿ ಜೀವದ ವ್ಯಥೆ ತುಂಬಿದ ಬೇಡಿಕೆ ಕೇಳಿ.
ಹಾಗಾಗಿಯೆ ಅವರ ಮಗನಿಗೆ ಆ ತಾಯಿಯ ಪ್ರೀತಿ ಅರ್ಥ ಮಾಡಿಸಲೆಂದೇ ನಾನು ಆಕೆ ಏನನ್ನು ಕೇಳಿದಳು, ಯಾವ ವಿಚಾರದ ಕುರಿತು ಕೇಸ್ ಹಾಕಿದರು ಎಂಬುದನ್ನು ಮರೆಮಾಚಿ ಮಿಸ್ಟರ್ ಸೋಮೇಶ್ ಅವರನ್ನು ಇಲ್ಲಿವರೆಗೂ ಕರೆತಂದೆ. ನವಮಾಸ ಹೆತ್ತು ಹೊತ್ತು ಸಾಕಿ ಸಲುಸಿದ ತಾಯಿಯ ಬಳಿ ಎರಡು ಘಳಿಗೆ ಪ್ರೀತಿಯ ಮಾತನಾಡಲೂ ಹಿಂದುಮುಂದು ನೋಡುವ ಮಗನಿಗೆ ಏನು ಹೇಳುವುದು ಯುವರ್ ಆನರ್. ಇಂದು ಆಕೆಗೆ ಬಂದ ಗತಿ ಇವರಿಗೂ ಬಂದರೆ! ಎಂಬುದನ್ನು ಆಲೋಚಿಸದೆ ಹೋದರು ಏಕೆ? ಅಷ್ಟೆ ಅಲ್ಲ ಯುವರ್ ಆನರ್ ಈಗ ಆಕೆಯ ಮಗ ಪ್ರೀತಿ ಕೊಡಲು ಒಪ್ಪಿದರೂ ಪ್ರೀತಿ ಪಡೆಯಲು ಆ ಜೀವ ಇಲ್ಲಿಲ್ಲ. ಹೃದಯ ವೈಫಲ್ಯತೆಯಿಂದ ಬಳಲುತ್ತಿದ್ದ ಮಗನಿಗೆ ಹೃದಯಕೊಟ್ಟು ಎರಡನೇ ಬಾರಿ ಜೀವ ಕೊಟ್ಟು ಈ ಲೋಕವನ್ನೆ ತ್ಯಜಿಸಿ ಹೋಗಾಯ್ತು ಯುವರ್ ಆನರ್ ಹೋಗಾಯ್ತು” ಎಂದು ಜೋರಾಗಿ ಹೇಳಿ ಕನ್ನಡಕದೊಳಗೆ ಹರಿದು ಬಂದ ಕಣ್ಣೀರ ಒರೆಸಿಕೊಂಡರು.
ಕೋರ್ಟಿನ ಆವರಣ ಪೂರ್ತಿ ಮೌನದ ಗೂಡಾಗಿತ್ತು. ನ್ಯಾಯಾಧೀಶರೇ ಇಂತಹ ವಿಚಿತ್ರ ಕೇಸ್ ದಾಖಲಾತಿ ಬಗ್ಗೆ ಆಶ್ಚರ್ಯಗೊಂಡರೂ ಮಗನ ಪ್ರೀತಿಗೆ ಹಂಬಲಿಸಿ ಕೋರ್ಟಿನ ಮೆಟ್ಟಿಲು ಹತ್ತಿದ ಆ ತಾಯಿಯ ಬಗ್ಗೆ ಮರುಕ ವ್ಯಕ್ತ ಪಡಿಸಿತ್ತು. ಸೋಮೇಶ್ ನಂತಹ ಮಗನ ಮೇಲೆ ಅಸಹ್ಯ ಹುಟ್ಟಿತ್ತು. ಅಜ್ಜಿಯೇ ಇಲ್ಲದ ಮೇಲೆ ಈ ಕೇಸ್ ಹೇಗೆ ಉಳಿದೀತು. ವಕೀಲರು ಕ್ಷಮೆ ಕೇಳಿ ಹೊರಟು ನಿಂತರು. ಹೋಗುವಾಗ, “ಮಿಸ್ಟರ್ ಸೋಮೇಶ್ ತಗೊಳಿ ನಿಮ್ಮ ತಾಯಿ ಕೊನೆಯುಸಿರು ಎಳೆಯುವಾಗ ನರ್ಸ್ ಬಳಿ ಹೇಳಿ ಬರೆಸಿದ ಪತ್ರ” ಎಂದು ಅವನ ಕೈಗೆ ಒಂದು ಪತ್ರವನ್ನು ಸಿಕ್ಕಿಸಿ ಹೊರಟು ಬಿಟ್ಟರು.

ಅವನು ತನ್ನ ತಪ್ಪು ಅರಿವಾಗಿ ಅದೇ ವ್ಯಥೆಯಿಂದಲೇ ಪತ್ರ ತೆರೆದು ನೋಡಿದನು. “ಮಗ ನೀನೇನು ದುಃಖ ಪಡಬೇಡ ನಾನು ನಿನ್ನಾಸರೆ ಬಯಸಿ ಬಂದಿಲ್ಲ. ನಿನ್ನ ಮನೆಯಲ್ಲಿ ಉಳ್ಕೊಳೋದು ಇಲ್ಲ. ನಿನ್ನ ಮುಖ ನೋಡಬೇಕು ಅಂತ ಅಷ್ಟೆ ಬಂದೆ ಮಗ. ನೀನು ಚೆನ್ನಾಗಿರಬೇಕು. ಸದಾ ನಗ್ತಾ ಇರು ನನ್ನಾಶೀರ್ವಾದ ಸದಾ ಇರಲಿ. ನಿನಗೆ ಜನುಮ ಕೊಟ್ಟುವಳು ನಾನೇ ಈಗ ಮತ್ತೆ ನಿನ್ನ ಜೀವಕ್ಕೆ ಕಂಟಕ ಬಂದಿದೆಯಂತೆ, ಅದಕ್ಕೆ ಈ ಹೃದಯವನ್ನೆ ನಿನಗೆ ಕೊಟ್ಟು ಆ ಜೀವ ಉಳಿಸ್ತಿದೀನಿ ಹುಷಾರು ಮಗನೇ, ಈ ಮುದುಕಿ ಶವವನ್ನು ಸುಡೋ ಶ್ರಮವೂ ನಿನಗೆ ಕೊಡಲ್ಲ ಮಗನೇ ನಾನು ಅನಾಥೆ ನನ್ನ ಶವ ಕಾರ್ಪೋರೇಷನ್ ಅವರಿಗೆ ಕೊಟ್ಟುಬಿಡಿ ಅಂತಲೂ ಹೇಳಿದೀನಿ. ನೀನು ಚೆನ್ನಾಗಿರು ಕಣ್ಣೀರಾಕಬೇಡ ಮಗನೇ” ಎಂದು ಬರೆದಿತ್ತು. ಅದನ್ನು ಓದಿ ಆತ ಅಮ್ಮಾ ಎಂದು ಬಿಕ್ಕಿ ಬಿಕ್ಕಿ ಅಳಲು ಶುರುವಿಟ್ಟನು. ಆತನೊಳಗಿದ್ದ ತಾಯಿ ಹೃದಯ ಮಗನ ಅಳುವಿಗೆ ಜೋರಾಗಿ ಬಡಿದುಕೊಳ್ಳಲಾರಂಭಿಸಿತು.
ಇದುವೇ ಮಗನ ಪ್ರೀತಿಯನ್ನು ಅರಸಿಹೊರಟ ನೀಲಮ್ಮ ಕಥೆ..






0 Comments