ಅರವಿಂದ ಮಾಲಗತ್ತಿ
ಎನ್.ಕೆ. ಹನುಮಂತಯ್ಯನವರ ಕವಿತೆಗಳು ಒಂದು ಓದಿಗೆ ಸಮಗ್ರವಾಗಿ ದಕ್ಕುವ ಕವಿತೆಗಳಲ್ಲ. ಹೀಗೆಂದು ಎಲ್ಲ ಕವಿತೆಗಳೂ ಹೀಗೆಯೇ ಇವೆಯೆಂದಿಲ್ಲ. ಕವಿತೆಯ ಪರಿಪೂರ್ಣ ಅರ್ಥಗ್ರಹಿಕೆಗೆ ಓದುಗನ ಅನುಭವ ಮತ್ತು ಸಾಮರ್ಥ್ಯವೂ ಕಾರಣವಾಗುತ್ತವೆ. ನಾನು ಇವರ ಕವಿತೆಗಳನ್ನು ಹಲವು ಬಾರಿ ಓದಿದ್ದೇನೆ.
ಓದಿಗೊಮ್ಮೆ ಭಿನ್ನ ಅರ್ಥಗಳನ್ನು ಬಿಟ್ಟುಕೊಡುವ ಸಾಮರ್ಥ್ಯವನ್ನು ಹೊಂದಿದ ಕವಿತೆಗಳವು. ‘ದಲಿತ ಸಾಹಿತ್ಯ ಚರಿತ್ರೆಗೆ ರೂಪ ಕೊಡುವ ಸಂದರ್ಭದಲ್ಲಿ ಇವರ ಕೃತಿಗಳಿಗಾಗಿ ತಡಕಾಡಿದ್ದೆ. ‘ಚಿತ್ರದ ಬೆನ್ನು‘ (೨೦೦೬) ಮಾತ್ರ ಸಿಕ್ಕಿತ್ತು ‘ಹಿಮದ ಹೆಜ್ಜೆ‘ (೧೯೯೮) ಸಿಕ್ಕದೆ ಹೋದಾಗ ಪೂರ್ಣ ಅಧ್ಯಯನ ಮಾಡದೆ ಬರೆಯುವುದು ಸರಿಯಲ್ಲ ಎನಿಸಿ ಅದು ಅಲ್ಲಿಗೆ ನಿಂತು ಹೋಗಿತ್ತು.
ಶ್ರೀಯುತ ಎನ್ ಕೆ ಹನುಮಂತ್ಯನವರ ಪುತ್ರಿ ಸಂಘಮಿತ್ರ ಅವರು ‘ಹನುಮಂತಯ್ಯನವರ ಕಾವ್ಯದ ಕುರಿತು ಮಾತನಾಡಿ – ಒಂದು ವಿಡಿಯೋ ಕಳುಹಿಸಿ‘ ಎಂದು ಕೇಳಿಕೊಂಡರು ಲಡಾಯಿ ಪ್ರಕಾಶನದಿಂದ ಮೊದಲು ಪ್ರಕಟವಾದ ‘ಮಾಂಸದಂಗಡಿಯ ನವಿಲು‘ (೨೦೧೬) ಸಂಕಲನದ ‘ಸಾಫ್ಟ್ ಕಾಪಿ‘ ಕೂಡ ಕಳುಹಿಸಿಕೊಟ್ಟರು. ನಾನು ಅದು ಅಪ್ರಕಟಿತ ಕವನಗಳ ಸಂಕಲನವೆಂದು ಗ್ರಹಿಸಿದ್ದೆ ಆದರೆ ಅದು ಸಂಯುಕ್ತ ಸಂಕಲನಗಳ ಸಂಗ್ರಹ. ಹನುಮಂತಯ್ಯನವರು ನಮ್ಮನಗಲಿ ಒಂದು ದಶಕವೇ ಕಳೆದಿದೆ. ದೃಶ್ಯ ಮಾಧ್ಯಮದಲ್ಲಿ ಕಾವ್ಯ ಚರ್ಚೆಯ ಮೂಲಕ ಅವರನ್ನು ಸ್ಮರಿಸುವ ಪರಿಕ್ರಮ ಶ್ಲಾಘನೀಯ. ಈ ಸಂದರ್ಭದಲ್ಲಿ ನನಗೆ ಮಾತನಾಡಲು ಕೇಳಿಕೊಂಡದ್ದು; ಅರ್ಧಕ್ಕೆ ನಿಲ್ಲಿಸಿದ್ದ ಹನುಮಂತಯ್ಯನವರ ಕಾವ್ಯದ ಮರು ಓದಿಗೆ ಪೂರಕವಾಯಿತು. ಹೀಗಾಗಿ ಸಂಘಮಿತ್ರ ಅವರನ್ನು ಸ್ಮರಿಸುವೆ.

ಎನ್ ಕೆ ಹನುಮಂತಯ್ಯನವರ ಕಾವ್ಯವನ್ನು ಓದಿ ಮುಗಿಸಿದಾಗ; ನನಗೆ ಎಷ್ಟೋ ವರ್ಷಗಳ ಅಂತರದಲ್ಲಿ ಕಲಾವಿದ ವಿನ್‌ಸೆಂಟ್ ವ್ಯಾನಗೊ ನೆನಪಾದರು. ತನ್ನ ೩೭ನೇ ವಯಸ್ಸಿನಲ್ಲಿಯೇ ಅಸಹಜ ಸಾವಿಗಿಡಾದ. ಈ ಕಲಾವಿದನ ಚಿತ್ರಗಳು ಆತ ಬದುಕಿದ್ದಾಗ ಚರ್ಚೆಯಾಗದಿದ್ದರೂ, ಅನಂತರದಲ್ಲಿ ಅವುಗಳ ಭಿನ್ನತೆಯ ಗುಣ ಸ್ವರೂಪ ಹಾಗೂ ಸಮಾಜಮುಖಿ ಗುಣದಿಂದ ಜಗವನ್ನೆ ಸೆಳೆದವು. ಈತನ ಬಗ್ಗೆ ನಾನು ಸಂಶೋಧನ ವಿದ್ಯಾರ್ಥಿಯಾಗಿದ್ದಾಗಲೇ ಓದಿದ್ದೆ.
ಎನ್ ಕೆ ಹನುಮಂತಯ್ಯನವರ ಕಾವ್ಯದ ಓದಿನ ಸಂದರ್ಭದ ಈ ಮರುಕಳಿಕೆ ಆಕಸ್ಮಿಕವೇನಲ್ಲ. ಪರಸ್ಪರ ಕೆಲ ಸಾಮ್ಯತೆಗಳು ಅದಕ್ಕೆ ಕಾರಣವಾಗಿವೆ. ಜೊತೆಗೆ ಇವರ ಕಾವ್ಯದ ವಸ್ತುವನ್ನ ಅವಲೋಕನ ಮಾಡುತ್ತ ಹೋದಂತೆ ಇದರಲ್ಲಿ ಕೆಲವು ಕವನಗಳು ಕಾವ್ಯಕ್ಕಿಂತ ‘ಆತ್ಮಕತೆ’ಯನ್ನಾಗಿಸಿದ್ದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು ಎನಿಸಿತು. ‘ಗದ್ಯದಲ್ಲಿ ಹೇಳಲಾಗದ್ದು ಪದ್ಯವಾಗುತ್ತದೆ‘ ಬಹುಶಃ ಅವರ ಕಾವ್ಯ ವಸ್ತು ಮತ್ತು ಪರಿಭಾಷೆಯಯೇ ಅವರ ಕಾವ್ಯವನ್ನು ಹೆಚ್ಚು ಬಲಿಷ್ಠಗೊಳಿಸಿದೆ.
ಎನ್ ಕೆ ಹನುಮಂತಯ್ಯನವರ ಕಾವ್ಯದ ಬಗ್ಗೆ ನನ್ನನ್ನೂ ಒಳಗೊಂಡಂತೆ ವಿಮರ್ಶಕರು ಮಾತನಾಡಿದ್ದು ಕಡಿಮೆ. ಇರುವ ಹನುಮಂತಯ್ಯನವರು ಮತ್ತು ಇಲ್ಲದಿರುವ ಹನುಮಂತಯ್ಯನವರ ಕುರಿತು ಅವರ ಕಾವ್ಯ ಇಂದು ಮಾತನಾಡುವಂತೆ ಮಾಡುತ್ತಿದೆ. ವ್ಯಾನಗೋನ ಚಿತ್ರಗಳ ಸ್ಥಿತಿಯೂ ಇಂಥದೇ ಸ್ವರೂಪದಾಗಿತ್ತು. ಆತನ ಕುರಿತು ಇದ್ದಾಗ ನಡೆದ ಚರ್ಚೆಗಳಿಕ್ಕಿಂತ ಇಲ್ಲದಿರುವಾಗಲೇ ಹೆಚ್ಚು ಚರ್ಚೆಯಾಗಿದ್ದು. ಸಾವು ಮತ್ತು ಹುಟ್ಟಿನ ಕುರಿತು ಎನ್ ಕೆ ಅವರ ಕವಿತೆಗಳಲ್ಲಿ ಬರುವುದಿದೆ.
ನಮ್ಮ ಸುತ್ತ ಸತ್ತವರೇ ಸುತ್ತುತ್ತಾರೆ,
ಸತ್ತವರು ಬದುಕಿದವರನ್ನು ಪ್ರೀತಿಸಲು
ಒಂದು ಸಣ್ಣ ಕಾರಣ ಸಾಕು… (ಸಾವಿನ ಕಾರಣಗಳಿಂದ ದೂರವಾಗಬೇಕು)
ಇಲ್ಲಿಯ ಕಾವ್ಯ ನಡೆ ಸಹಜವಲ್ಲ, ಸತ್ತವರನ್ನು ಸ್ಮರಿಸುತ್ತ ಬದುಕಿದವರು ಪ್ರೀತಿಯನ್ನು ಪ್ರಕಟಿಸುವುದು ಸರ್ವೆ ಸಾಮಾನ್ಯ. ‘ಸತ್ತವರೇ‘ ಬದುಕಿದವರನ್ನ ಪ್ರೀತಿಸುವುದು ‘ಇದ್ದವರು‘ ಇಲ್ಲದಂತಾಗಿ ಚಲಿಸುವ ನಡೆ ಇಲ್ಲಿಯದು; ಇವರ ಕಾವ್ಯದಲ್ಲಿ ಇದೊಂದು ಲಕ್ಷಣವೆಂಬಂತೆ ನಮ್ಮನ್ನು ನಡೆಸಿಕೊಂಡು ಹೋಗುತ್ತದೆ. ಈ ಪಲ್ಲಟ ನಡೆಯ ಪರಿಕ್ರಮ ಕಾವ್ಯಕ್ಕೆ ಮೆರಗು ತಂದು ಕೊಟ್ಟಿದೆ.

ತಂದೆಯ ಅಸಹಜ ಸಾವಿನ ಬಗ್ಗೆ ಹಲವೆಡೆ (ಕಥೆಯೊಳಗೆ, ಅಪ್ಪ) ಪ್ರಸ್ತಾಪವಿದ್ದರೂ ಸಾಮಾನ್ಯ ನೆಲೆಯಲ್ಲಿಯೂ ಪ್ರತಿಮಾ ಪರಿಭಾಷೆಯಲ್ಲಿ (ಮೌನವೇಕೆ) ಸುಳಿದು ಹೋಗುತ್ತವೆ. ಇದರೊಂದಿಗೆ ಮರು ಹುಟ್ಟಿನ ಬಗ್ಗೆಯೂ (ಇದ್ದಿಲಾಗುವ ಆಲಿ, ಹಸು ಬರುತ್ತಿದೆ) ಬಂದರೂ ಸಾವು ಹೆಚ್ಚು ಸತಾಯಿಸುತ್ತದೆ. ಮರು ಹುಟ್ಟಿನ ಸನ್ನಿವೇಶಗಳನ್ನು ಗಮನಿಸಿದರೆ, ಅವು ವ್ಯವಸ್ಥೆಯ ಭೀಕರತೆ ಹಾಗೂ ಅಸಹಜ ಸಾವಿನ ವಿರುದ್ಧ ಸಿಡಿದೇಳುವ ಹಾಗೂ ಶ್ರಮಜೀವಿಯ ಧ್ವನಿಯಾಗುತ್ತವೆ. ಇದು ಸಮಾಜದ ಮರುಹುಟ್ಟಿನ ನಿರೀಕ್ಷೆಯಾಗಿದೆ. ಇಂಥ ಸಾಲುಗಳನ್ನು ಓದಿದಾಗ ಎನ್ ಕೆ ಅವರೇ ಕಾವ್ಯದಲ್ಲಿ ಮರುಹುಟ್ಟು ಪಡೆದಂತೆ ಭಾಸವಾಗುತ್ತದೆ.
‘ಮಳೆಯೇ ಹೆರಲಾರೆಯಾ
ನನ್ನೊಡಲ ಮೇಲೊಂದು
ಇದ್ದಿಲಾಗದ ಹಿಮಾಲಯವ
ಅದರಡಿಗೆ ತಣ್ಣಗೆ ಕಣ್ಮುಚ್ಚಬೇಕು
ಮತ್ತೆ ಎಚ್ಚತ್ತು
ನೀರಾಗಿ ಹರಿಯಬೇಕು’ (ಇದ್ದಿಲಾಗಬೇಕು ಅಲ್ಲಿ)
ಇಂಥವೇ ಸಾಲುಗಳು ‘ಎರೆಹುಳು ಬಾಯೊಳಗೆ ಕರಗುವ ಆಮೆಗಳು‘ ಹಾಗೂ ಬೇರೆಡೆ ಬರುವುದಿದೆ.
ಎನ್ ಕೆ ಅವರ ಎರಡೂ ಸಂಕಲನಗಳನ್ನು ಅಧ್ಯಯನ ಮಾಡಿದರೆ ‘ಹಿಮದ ಹೆಜ್ಜೆ‘ಯ ಕೆಲ ಕವನಗಳು ‘ಚಿತ್ರದ ಬೆನ್ನು‘ ಸಂಕಲನದಲ್ಲಿ ಮುಂದುವರಿಕೆಯ ಭಾಗದಂತೆ ಕಾಣುತ್ತವೆ. ಇಲ್ಲಿಯ ಕವನಗಳನ್ನು ‘ಸಂರಚನೆಯ ದೃಷ್ಟಿ‘ಯಿಂದ ದೀರ್ಘ ಕವನಗಳು, ಪುಟ್ಟ ಕವನಗಳು, ಮಧ್ಯಂತರ ಕವನಗಳು ಎಂದು ಗುರುತಿಸಬಹುದಾದರೂ; ದೂರಾನ್ವಯ ಅರ್ಥ ದೃಷ್ಟಿಯ ಕವನಗಳು. ಅರ್ಥ ಸಾಮೀಪ್ಯವನ್ನು ಒಡಲಲ್ಲೇ ತಂದ ಕವನಗಳು, ಅರ್ಥಕ್ಕೆ ದಕ್ಕದೆ ಹೋಗುವ ಹಾಗೂ ಅನನ್ಯ ಅರ್ಥಗಳಿಗೆ ತೆರೆದುಕೊಳ್ಳುವ ಕವನಗಳೆಂದು ವರ್ಗೀಕರಿಸಬಹುದು.
ಪುಟ್ಟ ಕವನಗಳು ಹೆಚ್ಚಿನವು ಪ್ರಸಂಗಾವಧಾನದಿಂದ ಕೂಡಿದವು; ಸುಣ್ಣದ ಗೊಡೆಯ ಮೇಲೆ ಹರಳಿಟ್ಟಂತೆ ಕೆಲವು ಮೂಡಿ ಮಾಸದೆ ನಿಂತುಬಿಡುತ್ತವೆ. (ಉದಾ: ಕಾಯುತ್ತಾನಲ್ಲೂ, ಮೋಡದಹಕ್ಕಿ ಮುಂ) ದೀರ್ಘಕವನಗಳು ಕೆಲವು ಹಾಗೆ ಬೆಳೆದಿವೆ ಎನಿಸಿದರೂ ‘ರಕ್ತಗಮಲು‘, ಆ ಒಂದು ಮಳೆ ಹನಿ‘ ಯಂತಹ ಕವನಗಳು ವಸ್ತುವಿನ ದೃಷ್ಟಿಯಿಂದ ನಿರೂಪಣೆ ಹಾಗೂ ಭಾಷಾ ಪ್ರೌಢಿಮೆಯಿಂದ ನಮ್ಮನ್ನು ಸಳೆದು ಕಟ್ಟಿ ಹಾಕುತ್ತವೆ.

ಸಮಗ್ರವಾಗಿ ಹಿಡಿತಕ್ಕೆ ಸಿಕ್ಕದೆ ಸಂಕೀರ್ಣ ಸ್ಥಾನದಲ್ಲಿ ನಿಲ್ಲುತ್ತವೆ. ಇಂತಹ ಕವಿತೆಗಳು ಸಮಗ್ರ ಹೊಸಗನ್ನಡ ಕಾವ್ಯದ ಸಂದರ್ಭದಲ್ಲಿ ಮೇರು ಸ್ಥಾನವನ್ನು ಪಡೆದುಕೊಳ್ಳುತ್ತವೆ. ಮಧ್ಯಂತರದ ಕವನಗಳು ಓದುಗರಿಗೆ ಬೆರಗು ಹುಟ್ಟಿಸುವ ಮತ್ತು ಅರ್ಥ ಸಂದಿಗ್ಧತೆಗೆ ಒಡ್ಡುವ ಕವನಗಳೇ ಅಧಿಕ ಹಾಗೂ ಹೆಚ್ಚು ಚರ್ಚೆಗೆ ಒಳಗಾಗಿವೆ. ಈ ಪರಿಭಾಷೆ ಅವರ ಕಾವ್ಯದ ಶಕ್ತಿಯೂ ಆಗಿದೆ. ಹಿಮದ ಹೆಜ್ಜೆ, ಮೀನುಗಾರ, ಗೋವು ತಿಂದು ಗೋವಿನಂತಾದವನು ಮುಂತಾದ ಕವನಗಳನ್ನು ಸ್ಮರಿಸಬಹುದು.
ಹನುಮಂತಯ್ಯನವರ ಹೆಚ್ಚಿನ ಕವನಗಳು ಸ್ವಕೀಯ ಪರಿಭಾಷೆಯಿಂದ ಆರಂಭವಾಗಿ ಸ್ವಕೀಯತೆಯಲ್ಲಿಯೇ ಅಂತರ್ಧಾನವಾಗುತ್ತವೆ ಉದಾ:- ಯೋಗಿಯ ಕಣ್ಣಲ್ಲಿ ಚಿಗುರುವ ಏಣಿ, ನಿಂತರಾತ್ರಿ. ಮುಂತಾದವು. ಸ್ವಕೀಯ ಪರಿಭಾಷೆಯಿಂದ ಆರಂಭವಾಗಿ ಚಳವಳಿಮುಖಿಯಾಗಿ ಸಾಮಾನ್ಯೀಕರಣಗೊಳ್ಳುವ ನಡೆ, ಕೆಲವು ಕವನಗಳಿಗೆ ಪ್ರಾಪ್ತವಾಗಿದೆ. ಉದಾ:- ಶಬ್ದದ ಶಿರ ಹಿಡಿದು, ಗಡಿಯಾರವಾಗುವವನು ಮುಂತಾದವು.
ಸ್ವಕೀಯತೆಯಿಂದ ಸ್ವವಿಮರ್ಶೆಗೆ ಒಡ್ಡಿಕೊಳ್ಳುವ ಕವನಗಳು ಹಲವಾರಿವೆ. ಉದಾ:- ತಳ, ಗಡಿಯಾರವಾಗುವವನು ಮುಂತಾದವು. ಇವೆಲ್ಲವನ್ನೂ ಮೀರಿದ ಮತ್ತು ‘ನಿಸ್ವಾರ್ಥ ಜೀವ ಕವಿತೆಗಳು‘ ತುಂಬ ವಿಶೇಷವಾಗಿವೆ. ಉದಾ:- ಮೀನುಗಾರ, ನೆರೆಗೂದಲು ಉಯ್ಯಾಲೆ, ಏಡಿ, ಮೋಡದ ಹಕ್ಕಿ, ಮಿಂಚು ಹುಳ ಮತ್ತು ನಾನು ಇಂಥವು ಅರ್ಥದ ಹಿಡಿತಕ್ಕೆ ನಿಲುಕದೆ ಬಯಲಿಗೆ ತಂದು ನಿಲ್ಲಿಸಿ ಬಿಡುತ್ತವೆ. ಇಂಥವುಗಳಲ್ಲಿ ಅಮೂರ್ಥ ಸ್ವರೂಪವೆ ಇಲ್ಲಿ ಪ್ರಧಾನವಾಗಿದೆ.
ಎನ್ ಕೆ ಅವರ ಕಾವ್ಯದಲ್ಲಿ ಪ್ರತಿಮೆಗಳು ಇಡಿಕಿರಿದಾಗಿ ಬರುತ್ತವೆ. ಎರಡೂ ಸಂಕಲನಗಳು ಪ್ರತಿಮಾ ಸಂಪತ್ತಿನಿಂದ ಕೊಬ್ಬಿ ನಿಂತಿವೆ. ಹೀಗಾಗಿ ಓದುಗನಲ್ಲಿ ಕಾವ್ಯದ ಬಗ್ಗೆ, ಕವಿಯ ಬಗ್ಗೆ, ಎಲ್ಲಿಲ್ಲದ ಬೆರಗು ವೈಭವವನ್ನು ಹುಟ್ಟುಹಾಕುತ್ತ ನಮ್ಮ ಮನದಲ್ಲಿ ಎದ್ದು ನಿಲ್ಲುತ್ತವೆ. ಆದರೆ ಪ್ರತಿಮಾ ಸರಮಾಲೆಯ ಓದಿನಲ್ಲಿ ಕವನದ ಕೇಂದ್ರ ವಸ್ತುವಿನ ಚಿಂತನೆ ಹಾಗೂ ಹರಿವು, ಮೂಲ ಆಶಯನ್ನು ಮರೆಸಿ ಬಿಡುವ ಸಾಧ್ಯತೆಗಳಿವೆ.
ನವ್ಯಕಾವ್ಯ ಆಧುನಿಕತೆಯ ಸ್ಪರ್ಷದಿಂದ ಒಂಟಿತನ, ನೋವು, ಸಂಕಟ, ಹಳಹಳಿಕೆ ಅನುಭವಿಸಿದಂತೆ; ದಲಿತ ಕಾವ್ಯದಲ್ಲಿಯೂ ಮೊದಲ ತಲೆಮಾರಿನ ಅಕ್ಷರಸ್ಥರ ಸಂಕಟ ನೋವುಗಳು ಈ ದೇಶಿ ನೆಲೆಯ ಸಮಸ್ಯೆಗಳಿಂದ ಬಂದವುಗಳಾಗಿವೆ. ಅವುಗಳ ಮೂಲನೆಲೆ ಜಾತಿ, ಹುಟ್ಟು, ಅನ್ನ ಬೇಧ ನೀತಿ, ಅಸ್ಪೃಶ್ಯತೆ, ಲೈಂಗಿಕ ದಬ್ಬಾಳಿಕೆಗಳಾಗಿವೆ. ಈ ಕಾವ್ಯ ಮೊದಲ ತಲೆಮಾರಿನ ದಲಿತ ಹೋರಾಟ ಕಾವ್ಯಕ್ಕಿಂತ ಸೂಕ್ಷ್ಮವಾದದ್ದು ಮತ್ತು ಗಂಭೀರವಾದುದಾಗಿದೆ.
ದಲಿತ ಕಾವ್ಯದಲ್ಲಿ ಒಂಟಿತನ ನೋವು ಸಂಕಟಗಳು ಧಾರೆಯಾಗಿ ಬಂದರೂ ಅವು ಸಮಷ್ಠೀಮುಖಿಯಾಗಿಯೇ ಹರಿಯುತ್ತವೆ. ಆದರೆ ನವ್ಯ ಕಾವ್ಯದಂತೆ ಜನಕಾವ್ಯವಾಗದೆ ವಿಮರ್ಶಕರ ಕಾವ್ಯವಾಗಿ ನಿಲ್ಲುವ ಸಾಧ್ಯತೆ ಅಧಿಕವೇನೋ ಎನ್ನುವ ಇಣುಕು ಕಾಡದಿರದು. ಈ ಹಿನ್ನೆಲೆಯಲ್ಲಿ ಎನ್ ಕೆ ಅವರ ಕಾವ್ಯವಾಗಲಿ ಅಥವಾ ಎರಡನೇ ತಲೆಮಾರಿನ ದಲಿತ ಕಾವ್ಯವಾಗಲಿ, ನೋವಿನಿಂದ ಒಡೆದು ಚಲ್ಲಾಪಿಲ್ಲಿಯಾದ ಇರುವಿಕೆ ಶಿಥಿಲ ಕಾವ್ಯದಂತೆ ಗೋಚರಿಸಿದರೂ ಒಗ್ಗೂಡಿಸಿ ಪುಟಿದೇಳಿಸುವ ಆಶಯ ಕಾವ್ಯವಾಗಿದೆ.

ಇಲ್ಲಿಯ ಕವಿತೆಗಳಿಗೆ ಅಧಿಕೃತವಾಗಿ ಕೌಟುಂಬಿಕ ನೆಲೆಯೇ ಜೀವಧಾತುವಾಗಿದೆ. ಇದೇ ಮುಂದೆ ಸಮಾಜಮುಖಿಯಾಗಿ, ಸಂಸ್ಕೃತಿ ಮುಖಿಯಾಗಿ ಭಿನ್ನ ಆಯಾಮಗಳ ವಸ್ತು ವಿಚಾರವಾಗಿ ಬೆಳೆಯುತ್ತ ಹೋಗುತ್ತವೆ. ಭಿನ್ನ ಸಂರಚನೆಯಲ್ಲಿ ಕವಿತೆಗಳು ರೂಪವನ್ನು ಧಾರಣ ಮಾಡಿದರೂ ನಿರೂಪಣ ವಿಧಾನಕ್ಕಿಂತಲೂ ಕಾವ್ಯದ ಪರಿಭಾಷೆ ಹಾಗೂ ಅನುಭವ ಅಭಿವ್ಯಕ್ತಿಯ ವಿಧಾನದಿಂದಲೇ ಲೋಹ ಚುಂಬಕದಂತೆ ಸೆಳೆಯುತ್ತವೆ. ‘ಬೀಜವನ್ನು ಬಿತ್ತಲು ಫಲವತ್ತಾದ ನೆಲವನ್ನು ಹುಡುಕುವ ಆಶಯ ಎರಡೂ ಸಂಕಲನಗಳಲ್ಲಿ ವ್ಯಕ್ತವಾಗಿದ್ದರೂ ಅದು ನಿರಂತರವಾದುದೆಂದು ಸೂಚಿಸುತ್ತ ಬುದ್ಧನೂರಿನ ಸಿದ್ಧ ಹಾದಿಗೆ (ಒಳಗುದಿ) ಬಂದು ತಲುಪುತ್ತದೆ.
ಎನ್ ಕೆ ಅವರು ಮೂಲತಃ ಭಾವುಕ ಕವಿ. ಹೀಗಾಗಿಯೇ ಕವಿತೆಗಳು ದಟ್ಟ ಪ್ರತಿಮಾ ಸರಣಿಯಿಂದ ಚಲಿಸುತ್ತವೆ. ಸ್ವಕೀಯತೆಯ ನಿರೂಪಣೆ ಇದ್ದರೂ ಆತ್ಮಪ್ರತಿಷ್ಟೆಯೇ ಪ್ರಧಾನವಾಗಿದೆ. ಇದರೊಂದಿಗೆ ಒಂಟಿತನ, ಹತಾಶೆ, ವಿಷಾದ, ಕಾಮ, ಪ್ರೇಮ, ಕೌಟುಂಬಿಕ ಕೊರತೆ ಕೊರಗುಗಳು ಇಂಥವಲ್ಲದೆ, ಪರಂಪರೆ, ಸೃಷ್ಟಿ ರಹಸ್ಯ- ಕಾವ್ಯದ ಕೇಂದ್ರವಾಗಿದ್ದು, ದುರ್ಬಲ ಜೀವಿಗಳಿಗೆ ಸಬಲಶಕ್ತಿ ತುಂಬುವುದೇ ಕವಿತೆಗಳ ಆಶಯವಾಗಿದೆ.
ಸಾಮಾನ್ಯವಾದುದ್ದನ್ನು ಅಸಾಮಾನ್ಯವಾಗಿಯೂ ಅಸಾಮಾನ್ಯವಾದುದ್ದನ್ನು ಸಾಮಾನ್ಯವಾಗಿಯೂ, ಅಂತೆಯೇ ಅಸಾಧ್ಯವಾದುದ್ದನ್ನು ಸಾಧ್ಯವೆಂಬಂತೆಯೂ, ಸಾಧ್ಯವಾದುದನ್ನು ಅಸಾಧ್ಯವೆಂಬಂತೆ ನಿರೂಪಿಸುವ ವಿಧಾನ ಇವರ ಕಾವ್ಯದಲ್ಲಿ ಸ್ಥಾಯಿಭಾವ ಎಂಬಂತೆ ರೂಪಿಸಲಾಗಿದೆ. ಇದು ಕಾವ್ಯದ ಮತ್ತೊಂದು ಪ್ರಧಾನ ಲಕ್ಷಣವಾಗಿದೆ. ಇಲ್ಲಿಯದು ಬೆಡಗಿನ ಭಾಷೆಯಾದರೂ, ಪಲ್ಲಟಗೊಳಿಸಿ ನಿರೂಪಿಸುವ ಕ್ರಮ ಓದುಗರ ಹೆಗಲೇರಿ, ಕವಿಯ ಸಾಮರ್ಥ್ಯದ ಬಗ್ಗೆ ಕಾವ್ಯಶಕ್ತಿಯ ಬಗ್ಗೆ ಹೆಗ್ಗಳಿಕೆಯನ್ನು ತುಂಬುತ್ತದೆ. ಎರೆಹುಳದ ಬಾಯೊಳಗೆ ಕರಗುವ ಆನೆಗಳು, ಸೂರ್ಯಭೂಮಿಯ ದಾರಿ, ಚಿತ್ರದ ಬೆನ್ನು, ಗುರುವಿನ ಹೆಣ ಇಂಥ ಕವನಗಳಲ್ಲಿ ವ್ಯಕ್ತವಾಗುವ ಸಂಗತಿಗಳು ಸಾಕ್ಷಿಯಾಗುತ್ತವೆ. ಇರುವೆ ಬಾಯೊಳಗಿನ ಕವನದ ಸಾಲುಗಳನ್ನು ಗಮನಿಸಿ-
ಇಲ್ಲಿ ಕಣ್ಣಿನ ಕಿಡಿಗೆ
ಗುಡಿಸಲುಗಳುದುರಿ
ಕುಕ್ಕೆಯಲಿ ಕೂತ ಮರಿಕೋಳಿ
ಕೂಗುತ್ತವೆ
ದೇವರೆ ನಮಗೆ
ಆಕಾಶಕೆ ಹಾರುವುದ ಕಲಿಸು. . . .
ಆಸ್ತಿಕ ಪರಂಪರೆಯ ಇಲ್ಲಿಯ ಬೇಡಿಕೆ ಅಸಾಮಾನ್ಯವಾದುದು ಹಾಗೂ ಅಸಾಧ್ಯವಾದದು ಅದನ್ನು ಸಾಧ್ಯವಾಗಿಸುವುದು ಕಾವ್ಯ ಕನಸು. ಇಂಥವು ಭ್ರಮಾತ್ಮಕವೆನಿಸಿದರೂ ಅದೇ ಕಾವ್ಯದ ಆಶಯ ಮತ್ತು ಚಲನಶೀಲತೆಯ ಹಾಗೂ ದುರ್ಬಲರ ಜೀವಶಕ್ತಿಯಾಗಿದೆ.
ವ್ಯಕ್ತಿನಿಷ್ಠವಾದ ಕವನಗಳಲ್ಲಿ; ಸಾಲುಮರದ ತಿಮ್ಮಕ್ಕ, ನೆಲದ ಕವಿತೆಗಳಂಥವು ಉಪಮಾನ ಉಪಮೇಯಗಳ ನಡೆಯಲ್ಲಿಯೇ ಚಲಿಸಿದರೆ, ನೇರ ಸಮಾಜ ಮುಖಿಯಾದ ಕವನಗಳು ಉದಾ: ಕೂಲಿಯವರು, ಎದೆಯೊಳಗೆ ಉರಿವ ಗೊಂಬೆ, ಯಜಮಾನನಿಗೊಂದು ಪತ್ರ, ಗೋವು ತಿಂದು ಗೋವಿನಂತಾದವನು, ಕವನಗಳು ಅನುಭವ ಕೇಂದ್ರೀತವಾಗಿ ತರ್ಕಬದ್ಧತೆಯಿಂದ ಮುಖಗನ್ನಡಿಯಾಗುತ್ತ ನೀರಾಗಿ ಹರಿಯುವುದರಿಂದ ಎಲ್ಲ ಬಗೆಯ ಓದುಗ ವರ್ಗವನ್ನು ಆಕರ್ಷಿಸುತ್ತದೆ.
ನೀವು ಕರುಣಾಳುಗಳು
ಈ ಸಂತೆಯೊಳಗೊಂದು
ಕೆಲಸ ಕೊಟ್ಟಿದ್ದೀರಿ
ನಿಮಗೆ ಚಿರಋಣಿ… (ಯಜಮಾನನಿಗೊಂದು ಪತ್ರ)
ಇವರ ಕಾವ್ಯದ ಜೀವಂತಿಕೆಗೆ ಹೊಸ ಹೊಸ ಪ್ರತಿಮೆಗಳ ಅನಾವರಣವೂ ಕಾರಣವಾಗಿದೆ. ಇವುಗಳ ಉತ್ಪತ್ತಿಯ ಕ್ಷೇತ್ರ ದಲಿತತ್ವ ಅನುಭವ ಕೇಂದ್ರಿತ ಸಮಾಜೋ ಸಂಸ್ಕೃತಿಮುಖಿ ಚಲನೆ ವಿಧಾನ ಕಾರಣವಾಗಿವೆ. ಮೊದಲ ಸಂಕಲನದ ಅಮೂರ್ತರೂಪದ ಪ್ರತಿಮೆಗಳು (ಬಂದೂಕು, ಬಸುರಿನ ಬ್ಯಾಟರಿ, ಇದ್ದಿಲು, ಇರುವೆ, ಹುಲ್ಲು ತುಂಬಿದ ಜಿಂಕೆ, ತೂತಿನಕಾಸು) ಎರಡನೆಯ ಸಂಕಲನದಲ್ಲಿ ಕೆಲವು ಪ್ರತೀಕಗಳಾಗಿ ಬೆಳೆದು ನಿಂತಿವೆ. ಮೊದಲ ತಲೆಮಾರಿನ ನಖದ ಪರಿಭಾಷೆಯನ್ನು ಮೀರಿ ಹೃದಯವನ್ನು ಸ್ಪರ್ಷಿಸುತ್ತವೆ.
ಕುಟುಂಬದ ಪಾತ್ರಗಳು ಬೆನ್ನ ನೆರಳಾಗಿ ಕಾಡುವ ಸ್ಥಿತಿಯ ಇದ್ದೂ, ಇದು ಕುಟುಂಬದ ಶಿಥಿಲತೆಯ ಹಾಗೂ ಸಂಬಂಧ ಕಾರಣಗಳನ್ನು ಹುಡುಕುತ್ತ ಹೋಗುತ್ತದೆ. ವ್ಯಕ್ತಿನಿಷ್ಟತೆ ಅಥವಾ ಸ್ವಕೀಯತೆಯ ಭಿನ್ನ ನೆಲೆಗಳಿಂದ ಚಲಿಸುತ್ತ ಹುಟ್ಟು ಸಾವಿನೊಳಗಿನ ರಕ್ತ ಗಮಲಿನಲ್ಲಿಯೇ ಆತ್ಯಂತಿಕ ಸ್ಥಿತಿಯನ್ನು ಜೀವಾಳ ಮಾಡಿಕೊಂಡು, ಕೌಟುಂಬಿಕ ಪರಿಧಿಯೊಳಗಿನ ಶಕ್ತಿ ಶೋಧದಿಂದ ಬಲಗೊಂಡು ಸಮಾಜಮುಖಿಯಾಗಿ ಬುದ್ಧನ ಸಿದ್ಧನೂರಿನೆಡೆಗೆ (ಒಳಗುದಿ) ಮುಖಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಭಿನ್ನ ಕವನಗಳ ಸಾಲುಗಳನ್ನು ಪರಿಶೀಲಿಸಬಹುದು –
ತೊಳೆದು ಊರೊಳಗ್ಯಾರೊ ಕೊಟ್ಟ
ಮೈಲಿಗೆ ಸೀರೆಯನು ಹೊಚ್ಚಿದ್ದಳು (ಅವ್ವ ಮತ್ತು ಸೀರೆ)
ಹೊಡೆದರವ್ವ ನನಗೆ ಒಡೆದರವ್ವ
ಹರಿದ ಚಡ್ಡಿಯೊಳಿಣುಕಿ
ಇಂಡಿಯಾ ಇಂಡಿಯಾ ಎಂದರವ್ವ – (ಹೊಸ ಸುದ್ದಿ ತಂದಿರುವೆ)
ಎಂಥ ನಾತವೆ ತಾಯಿ ನಿನ್ನ ರಕುತ
ಓಡಿ ಹೋದವು ನಾಯಿ ಮೈಯ ನೆಕ್ಕುತ
ದಿನ ಮಾಳಿಗೆಯೊಳಗೆ ಉಂಡ ಊರಿನ ಉಸಿರು
ಆಚೆಗಟ್ಟಿತು ನನ್ನ ಕೇಳಿ ಹೆಸರು
ಸವೆದ ಜೋಳಿಗೆಗೆ ಮೈಯ ಚರ್ಮದ ತೇಪೆ
ಕೂಗಿದೆವು ಕಾಳಿಗೆ
ಕಣಜಗಳ ಕಣಿವೆಯಲಿ ಒಂಟಿಯಾಗಿ (ಹೊಸ ಸುದ್ಧಿ ತಂದಿರುವೆ)
ಹೂವು ಹೆತ್ತಿತ್ತು ಹೂವ – ಕೆಂಡದೊಳಗೆ
ಹೆತ್ತ ರಕ್ತದ ಮೇಲೆ
ಸತ್ತು ಹೋದಳು ತಾಯಿ
ಇರುಳ ಸುರುಳಿಯ ನಡುವೆ ಕರುಳ ಬಿಟ್ಟು
ಅಳುತಲಿದೆ ಮಗು;
ಬಸಿರಿಗೆ ಬಾಟರಿ ಬಿಡುವ ಬೇಟೆಗಾರ…
ನಿನಗೆಂದು ಸಾವೋ – (ರಕ್ತ ಗಮಲೆ)
ಯಜಮಾನರ ಗದ್ದೆಯೊಳಗೆ
ಗೊಬ್ಬರವಾದವನು
ಎಕ್ಕಡದೊಳಗೆ ಬುದ್ಧನ ಹಾಗೆ ಕೂತು
ಅವರಿವರಿತ್ತ ತುತ್ತ ತಿಂದವನು
ಅವ್ವನ ಸೆರಗಲಿ ಮೀಸೆಗಳ ಹುಡುಕಿ
ಬನಕ್ಕೆ ಹಿಟ್ಟಿನ ಕೋಲಿನಲೇ
ಹೊಡೆದೊಡೆದು ಅತ್ತನು
ಇರುಳ ಉರುಳಿಗೆ ಶಿರವನಿಟ್ಟು ಸತ್ತವನು –(ಅಪ್ಪ)
ಹೇಳಲಾಗದ ಕಥೆಯ ಮರೆಯಲಾಗದ ವ್ಯಥೆಯ ನಿರೂಪಿಸುವ ಇಂಥ ಕವನಗಳು ಕಾಡುತ್ತ ಇದ್ದಿಲಾಗದೆ ಹಿಮವಾಗುವ, ನೀರಾಗಿ ಹರಿವ ಪ್ರಕ್ರಿಯೆ ಮುನ್ನೋಟದಲ್ಲಿದೆ, ಬಾಲ್ಯದಿಂದ – ತಂದೆಯಾಗುವರೆಗಿನ ಕವಿಯ ಅನುಭವದ ಹಾಗೂ ಕುಟುಂಬ ಮತ್ತು ಸಮಾಜದ ಪರಿಧಿಯಲ್ಲಿ ಸುರುಳಿ ಸುತ್ತಿದ್ದನ್ನು ಬಿಚ್ಚುತ್ತ ಮೇಲೇಳುತ್ತ ಹೋಗುತ್ತದೆ. ಅದೆಲ್ಲಕೂ ರಕ್ತಗಮಲೇ ಆರೋಪಿತವಾಗಿ ಅದೇ ಪ್ರತಿಮೆ ಪ್ರತೀಕವಾಗಿ ಭೂತಾಕಾರವಾಗಿ ಕಾವ್ಯದಲ್ಲಿ ಬೆಳೆದು ಕಾಡುತ್ತದೆ. ಸಾಮಾಜಿಕ ಅರ್ಥಿಕ ಎಲ್ಲ ತೊಡಕಿರುವುದು ಇಲ್ಲೇ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದು ಕೆಂಡದುಂಡೆಯಾಗಿ ಸುಡುತ್ತದೆ.
ಕುಟುಂಬದ ಕತೆಯನ್ನು ಹೆಪ್ಪುಗಟ್ಟುವಂತೆ ಚಿತ್ರಿಸುವ ಕವಿ, ಅದು ಒಂದು ಮನೆಯ ಕಥೆಯಲ್ಲ ಕೇರಿ ಕೇರಿಗಳ ಕಥೆಯೆಂದು ಸಾಮಾನ್ಯಿಕರಣಗೊಳಿಸುತ್ತಾರೆ. ‘ಎಷ್ಟೊಂದು ಕಥೆಗಳಿವು‘ ಎಂದು ನೋವಿನ ಪದರುಗಳನೆಣೆಸುತ್ತ ಸಮಷ್ಟಿಯೆಡೆಗೆ ಹೊರಳುತ್ತಾರೆ. (ಈ ಕಥೆಯೊಳಗೆ, ನನ್ನ ಗೂಡಲಿ ಮುಂ)
ಕಂಡ ಮನೆ ಮನೆಯಲ್ಲ ಕಾದಂಬರಿಗಳಾಗಿರಲು
ಕಾರಂತ ಬೈರಪ್ಪರೆಂದು ನಾನೇಕೆ ಕೊರಗಲಿ (ನನ್ನ ಗೂಡಲಿ)
ಎಂದು ‘ರಾಮಾಯಣ ಮಹಾಭಾರತಗಳೆಲ್ಲ ನನ್ನ ಕೇರಿಗಳಲ್ಲಿ ನಡಯುತ್ತಿರುವಾಗ ಅವುಗಳನ್ನು ನಾನೇಕೆ ಓದಬೇಕೆನ್ನುತ ತಣ್ಣಗೆ ನಿರಾಕರಿಸುವ ಬಗೆ ಇಲ್ಲಿದೆ. ಹಾಗೆಯೇ ನ್ಯಾಯ ಸಂಸ್ಕೃತಿಯನ್ನು ಕಟ್ಟಿಕೊಳ್ಳುವಿಕೆಯ ಮಾರ್ಗದೆಡೆಗೆ ಮುಖ ಮಾಡುತ್ತದೆ. ಇದರ ಮುಂದಿನ ಕವಲು-ಆಯಾಮಗಳನ್ನು ಬೇರೆ ನೆಲೆಯಲ್ಲಿ ಗುರುತಿಸಲು ಅವಕಾಶಗಳಿವೆ. ಭಾವನೆ ಹಾಗೂ ರೂಪಕಗಳು ಕೆಲವೆಡೆ ದುಂದುವೆಚ್ಚದಲ್ಲಿ ತೇಲಿದರೂ ಕಾವ್ಯದ ಒಟ್ಟು ಪರಿಧಿಯಲ್ಲಿ ನಿಂತು; ಪ್ರಧಾನ ಚಿಂತನ ಧಾರೆಯನ್ನು ಅಮೂರ್ತವಾಗಿಯೇ ಚಿತ್ರಿಸುತ್ತಲೇ ಗೆಲ್ಲುತ್ತದೆ.
೧೯ ಶತಮಾನದ ಅಂತ್ಯ ಹಾಗೂ ೨೦ನೇ ಶತಮಾನದ ಆರಂಭದ ಅವಧಿ, ದಲಿತ ಚಳವಳಿಯಲ್ಲಿ ಮಹತ್ವದ ಬದಲಾವಣೆಗಳಾದವು. ಡಿ ಎಸ್ ಎಸ್ ಒಡೆದದ್ದು, ಸಮತಾ ಸೈನಿಕ ದಳ – ಬಿ ವಿ ಎಸ್ ಆದದ್ದು, ಕಾರ್ಲ್ ಮಾರ್ಕ್ಸ್, ಲೋಹಿಯಾ, ಗಾಂಧಿ ಚಿಂತನೆ ಹಿಂದಕ್ಕೆ ಸರಿಸಿದ್ದು, ಅಂಬೇಡ್ಕರ್ ಚಿಂತನೆ ಮುನ್ನೆಲೆಗೆ ತಂದದ್ದು, ರಾಜಕೀಯ ಅಧಿಕಾರ ಹಿಡಿಯುವುದೇ ಹೊರಾಟದ ಗುರಿಯೆಂದು ಘೋಷಿಸಿದ್ದು, ಸಾಮಾಜಿಕ ಹೋರಾಟ ಸಂಸ್ಕೃತಿ ಎಡೆಗೆ ಮುಖ ಮಾಡಿದ್ದು, ಇಂಥ ಬದಲಾವಣೆಗಳು ಸಾಹಿತ್ಯಕ ಹಾಗೂ ಸಾಮಾಜಿಕ ಚಳವಳಿಯಲ್ಲೂ ಬದಲಾವಣೆ ತಂದವು.
ಹೋರಾಟದೊಂದಿಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿದ ಎರಡೂ ಬಗೆಯ ಸಂವೇದನಾಕಾರರಲ್ಲಿಯೂ ಬದಲಾವಣೆ ತಂದವು. ಮೊದಲ ತಲೆಮಾರಿನ ಸಿದ್ಧಲಿಂಗಯ್ಯ ಹಾಗೂ ಕೆ ರಾಮಯ್ಯ ಇಂಥವರು ಸಮಾಜ ಕೇಂದ್ರಿತ ಹೋರಾಟದ ಹಾಡುಗಳನ್ನು ಬರೆದರೆ; ಹನಸೋಗೆ ಸೋಮಶೇಖರ್ ಹಾಗೂ ಗಂಗಾಧರ ಸೋಸಲೆ ಅಂಥವರು ಅಂಬೇಡ್ಕರ್ ಹಾಗೂ ಬುದ್ಧನ ವಿಚಾರಗಳನ್ನು ಸಾರುವ ಹೋರಾಟದ ಹಾಡುಗಳನ್ನು ಬೀದಿಗೆ ತಂದರು.
ಹೋರಾಟದ ಹಾಡುಗಳಿಗಿಂತ ಹೆಚ್ಚಾಗಿ ಗಂಭೀರ ಕಾವ್ಯದೆಡೆಗೆ ಮುಖಮಾಡಿದ ಕವಿಗಳು ಹಾಗೂ ಎರಡೂ ಮಾರ್ಗದ ಸ್ವರೂಪವನ್ನು ಸಮೀಕರಿಸಿಕೊಂಡ ಕವಿಗಳೂ ಇದ್ದರು. ಕೆ ಬಿ ಸಿದ್ದಯ್ಯ, ಮುಳ್ಳೂರು ನಾಗರಾಜ, ಅರವಿಂದ ಮಾಲಗತ್ತಿ, ಎಲ್ ಹನುಮಂತಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ ಇಂಥವರು ಒಂದು ಘಟ್ಟವಾದರೆ; ಎನ್ ಕೆ ಹನುಮಂತಯ್ಯ ಅವರು ಕೆ ಬಿ ಸಿದ್ದಯ್ಯ ಹಾಗೂ ಮುಳ್ಳೂರರ ಕಾವ್ಯದಿಂದ ಪ್ರಭಾವಿತರಾದಂತೆ ಕಂಡರೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದರು.

ಸಿದ್ದಯ್ಯನವರು ಬೆಡಗಿನ ವಚನಗಳ ಶೈಲಿಯನ್ನು ಅನುಸರಿಸಿಲು ಪ್ರಯತ್ನಿಸಿದರೆ ಎನ್ ಕೆ ಹನುಮಂತಯ್ಯ ಅವರು ಬೆಡಗಿ ವಚನ ಶೈಲಿಯೊಂದಿಗೆ ಖಲೀಲ ಗಿಬ್ರಾನ್, ಉಮರ್ ಖಯಾಮ್ ಅವರಿಂದ ಪ್ರಭಾವಿತರಾದಂತಿದೆ. ಏಕೆಂದರೆ ಇವರು ಬಳಸುವ ಪ್ರತಿಮೆಯ ಮಾದರಿ – ವಿಧಾನ ನೋಡಿದಾಗ ಇದು ಅರಿವಿಗೆ ಬರುತ್ತದೆ. ಮುಂದೆ ಎ ಕೆ ಹಂಪಣ್ಣ, ಸುಬ್ಬು ಹೊಲೆಯಾರ್, ಮಂಜುನಾಥ್, ಲಕ್ಕೂರು ಆನಂದ , ವೀರಣ್ಣ ಮಡಿವಾಳರ ಮುಂತಾದವರು, ಇವರ ಕಾವ್ಯದಿಂದ ಪ್ರಭಾವಿತರಾಗಿ ದಲಿತ ಕಾವ್ಯದ ದಿಕ್ಕನ್ನು ಬದಲಿಸಲು ಕಾರಣರಾದರೆಂದು ಹೇಳಬಹುದು.
ಒಬ್ಬ ಪ್ರತಿಭಾವಂತ ಕವಿ ಹೊಸ ಪ್ರತಿಮೆಗಳನ್ನು ರೂಪಿಸುತ್ತಾನೆ. ಮೊದಲ ತಲೆಮಾರಿನ ದಲಿತ ಕವಿಗಳು ತಮ್ಮದೇ ಆದ ನೆಲೆಯಲ್ಲಿ ಹೊಸ ಹೊಸ ಪ್ರತಿಮೆಗಳನ್ನು ಬಳಕೆಗೆ ತಂದರು. ಆದರೆ ಅವುಗಳಿಗಿಂತಲೂ ಭಿನ್ನವಾದ ಮತ್ತು ಹೊಸ ಪ್ರತಿಮೆಗಳನ್ನು ಎನ್ ಕೆ ಹನುಮಂತಯ್ಯನವರು ಬಳಸಿದರು. ಉದಾ: ಬ್ಯಾಟರಿ, ಬಂದೂಕು, ತೂತುಕಾಸು, ರಕ್ತ ಗಮಲು. ಇಂಥ ಪ್ರತಿಮೆಗಳನ್ನು ಪ್ರತೀಕಗಳಾಗಿಸಲು ಯತ್ನಿಸಿದ ಶ್ರೇಯಸ್ಸು ಇವರದ್ದು. ಕೆಲ ಪ್ರತಿಮೆಗಳು ಹಿಂದೆ ಬಳಕೆಯಲ್ಲಿದ್ದರೂ ಅವುಗಳನ್ನು ತಮ್ಮದೇ ಮಾದರಿ ಎನ್ನುವಂತೆ ಭಿನ್ನ ಅರ್ಥದಲ್ಲಿ ಬಳಕೆಗೆ ತಂದರು. ಈ ಕುರಿತು ಹೆಚ್ಚಿನ ಅಧ್ಯಯನ ಬೇಕಿದೆ. ನಖದ ಪರಿಭಾಷೆಯ ದಲಿತ ಕಾವ್ಯವನ್ನು ಹಸ್ತಸ್ಪರ್ಷದ ಪರಿಭಾಷೆಗೆ ತಿರುಗಿಸಿದ ಶ್ರೇಯಸ್ಸು ಎರಡನೆಯ ತಲೆಮಾರಿನ ದಲಿತ ಕವಿಗಳಿಗೆ ಸಲ್ಲುತ್ತದೆ.
ಈ ಪ್ರತಿಮೆಗಳ ಪರಿಭಾಷೆ ವಾಸ್ತವವನ್ನು ಅವಾಸ್ತವಗೊಳಿಸುವ ಸ್ವರೂಪದ್ದು. ಕಾವ್ಯದ ದೃಷ್ಠಿಯಿಂದ ಇದು ಮೇಲು ಸ್ತರದ್ದಾದರೂ ಭ್ರಮಾ ಜಗದಲ್ಲಿ ತೇಲುವಂತೆ ಮಾಡುವ ಸಾಧ್ಯತೆಯೇ ಅಧಿಕ. ಬಿಚ್ಚಿ ಮಾತನಾಡಲಾಗದ ವಸ್ತು ಒಗಟಿನ ಪರಿಭಾಷೆಯ ಪಲ್ಲಕ್ಕಿಯೇರುವುದೇ ಹೆಚ್ಚು. ಇದು ಚಿತ್ರಕಾವ್ಯದಂತೆ ಕಣ್ಣಕಟ್ಟುತ್ತದೆ. ಇದು ಎನ್ ಕೆ ಹನುಮಂತಯ್ಯನವರ ಕಾವ್ಯದ ಶಕ್ತಿಯೂ ಹೌದು ಮತ್ತು ಅವರ ಕಾವ್ಯದ ದೌರ್ಬಲ್ಯವೂ ಇದೇ ಆಗಿದೆ. ಇವರ ಕಾವ್ಯದ ವಿಮರ್ಶೆ ಎಷ್ಟೋ ಬರಬಹುದು ಮತ್ತು ಹೊಸ ಹೊಳವು ಗುರುತಿಸಬಹುದು. ಓದುಗರೆದೆಯಲಿ ಮರು ಹುಟ್ಟು ಪಡೆಯುವ ಸಾಮರ್ಥ್ಯ ಇವರ ಕಾವ್ಯಕ್ಕಿದೆ.






0 Comments