ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದು ಹೊರಗಾಜು ಮುಟ್ಸಕಳಡಿ ಮಕ್ಕಳ್ರಾ..

ಗೀತಾ ಹೆಗ್ಡೆ ಕಲ್ಮನೆ 

GST 12% ತೆರಿಗೆ  ಕಾವು ಸ್ಯಾನಿಟರಿ ನ್ಯಾಪಕಿನ್ ಮೇಲೂ ಬಿದ್ದಿರುವುದು ನಿಜಕ್ಕೂ ಶೋಚನೀಯ.  ಒಂದು ಹೊತ್ತು ಅಥವಾ ಒಂದು ದಿನ ಹೊಟ್ಟೆಗೆ ಆಹಾರವಿಲ್ಲದೆ ಬದುಕಬಹುದು ; ಆದರೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಸಮಯದಲ್ಲಿ ಇದಿಲ್ಲದೆ ಇರಲು ಸಾಧ್ಯವೇ?

ಬಟ್ಟೆನೊ ಅಥವಾ ಸ್ಯಾನಾಟರಿನೊ ಒಟ್ಟಿನಲ್ಲಿ ಯಾವುದಾದರೂ ಇರಲೇ ಬೇಕು.

ಹೇಳಿಕೊಳ್ಳಲು ನಾಲ್ಕು ದಿನ.  ಆದರೆ ಕೆಲವರಿಗೆ ಪ್ರಾರಂಭದ ದಿನಗಳಲ್ಲಿ ಬಿಡುವ ದಿನಗಳಲ್ಲಿ  ಅದರ ಅವಧಿ ಎಷ್ಟು ದಿನವೊ ಯಾರಿಗಾದರೂ ನಿಖರವಾಗಿ ಗೊತ್ತಾ?  ಈ ದಿನಗಳಲ್ಲಿ ಹೆಣ್ಣು ಯಾವ ಯಾವ ರೀತಿ ಸಂಕಟ, ನೋವು, ಸಂಕೋಚ,ಹಿಂಸೆ ಅನುಭವಿಸುತ್ತಾಳೆ ಅನ್ನುವುದು ಬರೀ ಹೆಣ್ಣಿಗೆ ಮಾತ್ರ ಅರ್ಥವಾಗುವಂಥಹುದು.  ಹೆಣ್ಣನ್ನು ಬೆಂಬತ್ತಿ ಕಾಡುವ ಭೂತ!

ಇದು ಅತ್ಯಂತ ಸೂಕ್ಷ್ಮ ಹಾಗೂ ಹೊಸಿಲು ದಾಟದ ಮಾತಾಗಿತ್ತು ಹಳೆಯ ಕಾಲದಲ್ಲಿ.  ಈಗ ದಿನ ನಿತ್ಯ ಕಸ ಒಯ್ಯಲು ಬರುವ ಗಾಡಿಯ ಮೈಕಲ್ಲಿ ಕೂಡಾ ಜಗಜ್ಜಾಹೀರು.  “ಉಪಯೋಗಿಸಿದ ಸ್ಯಾನಿಟರಿ, ಮುಟ್ಟಿನ ಬಟ್ಟೆಗಳು…..”  ಎಷ್ಟು ದಿನಗಳಿಂದ ಕೇಳಿದರೂ ದಿನ ಈ ವಾಖ್ಯ ಕಿವಿಗೆ ಬಿದ್ದಾಗೆಲ್ಲ ಮೈಯ್ಯೆಲ್ಲ ಮುದುಡಿದ ಅನುಭವ, ಕಸಿವಿಸಿ. ಆಗೆಲ್ಲ “ಛೆ! ಅದೇನಂತ ಅಷ್ಟು ಜೋರಾಗಿ ಹಾಕ್ತಾನೊ, ಸ್ವಲ್ಪ ಸಣ್ಣಗೆ ಹಾಕಬಾರದಾ? ದಿನಾ ಹಾಕಬೇಕಾ ಮೈಕು.”  ಒಂದಿನ ತಡೆಯಲಾರದೆ ಗಾಡಿಯವನಿಗೆ ಬಯ್ದಿದ್ದೂ ಇದೆ.

ಇಷ್ಟು ಸೂಕ್ಷ್ಮವಾದ ವಿಚಾರ ಏನೋ ಮನಸಿಗೆ ಬಂದಿದ್ದು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಗಿಮಿಕ್ಕಾ? ಯಾಕೋ ಡೌಟು!
ಅವರಿಗೂ ಒಂದು ನಾಲ್ಕು ಜನ ಹೆಣ್ಣು ಮಕ್ಕಳು ಇದ್ದಿದ್ದರೆ ಈ ರೀತಿ ಮಾತು ಹೊರಗೆ ಬರ್ತಿತ್ತಾ? ಅಥವಾ ಅವರು ಬಟ್ಟೆ ಉಪಯೋಗಿಸಿಯೇ ಆ ದಿನಗಳನ್ನು ಕಳೆದರಾ? ತುಂಬಾ ತುಂಬಾ ಖೇದವಾಗುತ್ತಿದೆ ಮನಸ್ಸಿಗೆ.  “ಹೆಣ್ಣಿಗೆ ಹೆಣ್ಣೇ ಶತ್ರು” ಗಾದೆ ಮಾತು ನಿಜವಾಗೋಯ್ತು.

ಅದೇನೆ ಇರಲಿ ಅವಧಿಯವರು ಇದರ ಕುರಿತು ಹೆಣ್ಣಿನ ಮನಸ್ಸಿನ ಭಾವನೆಗಳನ್ನು, ಅಭಿಪ್ರಾಯಗಳನ್ನು ಹೇಳಲು ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ನಮ್ಮೆಲ್ಲರ ಸೌಭಾಗ್ಯ ಅಂತ ಹೇಳಿದರೂ ತಪ್ಪಿಲ್ಲ.   ಇಲ್ಲಿಯ ಬರಹದಲ್ಲಿಯ ಅಭಿಪ್ರಾಯಗಳು ಸರಕಾರದ ಕಿವಿ ಮುಟ್ಟಬಹುದೆಂಬ ಆಶಯ!

ಹುಟ್ಟಿದ ಪ್ರತಿಯೊಂದು ಹೆಣ್ಣು ಅನಭವಿಸುವ ಯಾತನೆ ಇದು.  ಈಗಿನ ವಿಜ್ಞಾನ ಯುಗದಲ್ಲಿ ಅದೆಷ್ಟೋ ಔಷಧಿ ಗುಳಿಗೆಗಳು ಬಂದಿರಬಹುದು.  ಆದರೆ ಈ ಅನುಭವದಿಂದ ತಪ್ಪಿಸಿಕೊಳ್ಳಲು ಯಾವ ಹೆಣ್ಣಿನಿಂದಲೂ ಸಾಧ್ಯವಿಲ್ಲ.  ಗುಟ್ಟಾಗಿ ಇಡಬೇಕಾದ ವಿಷಯ,ನಾಚಿಕೆಯಿಂದ ಮುದುಡುವ ಹೆಣ್ಣಿಗೆ ಏನೂ ತಿಳಿಯದ ವಯಸ್ಸಿನಲ್ಲಿ ಹಿರಿಯರ ಕಂದಾಚರಣೆ ಇವೆಲ್ಲ ಮನಸ್ಸಿಗೆ ಹಿಂಸೆಯುಂಟುಮಾಡುತ್ತದೆ.  ಮಡಿ ಎಂಬ ಪಟ್ಟ ಕಟ್ಟಿ ದೂರ ಇಡುವ ಪದ್ದತಿ ಇದೆಷ್ಟು ಸರಿ.

ಕಂದಾಚಾರ ಪದ್ದತಿಯಲ್ಲಿ ಹೆಣ್ಣು ಬಹಿಷ್ಟೆಯಾದಾಗ ಅನುಸರಿಸುವ ಪದ್ದತಿ.  ಇದು ತುಂಬಾ ಜನಾಂಗದಲ್ಲಿ ರೂಢಿಯಲ್ಲಿದೆ.  ಮೇಲ್ಜಾತಿ ಕೀಳು ಜಾತಿಯ ಬೇದವಿಲ್ಲಿಲ್ಲ.  ಒಟ್ಟಿನಲ್ಲಿ ಪ್ರಥಮ ಬಾರಿ ಬಹಿಷ್ಟೆಯಾದಾಗ ಇಡೀ ಊರಿಗೆ ಪ್ರಚಾರವಾಗಬೇಕು.  ಗಂಡಸರು ಹುಡುಗರು ಅವಳನ್ನು ಕಂಡಾಗ ಮುಸಿ ಮುಸಿ ನಗಬೇಕು.  ಅವಕಾಶ ಸಿಕ್ಕರೆ ಅಶ್ಲೀಲ ತಮಾಷೆ ಮಾಡಿ ನಗುವುದು.  ಅವಳಿನ್ನೂ ಹತ್ತೊ ಹನ್ನೆರಡೊ ವಯಸ್ಸು.  ಏನೂ ತಿಳಿಯದ ವಯಸ್ಸಿನಲ್ಲಿ ಇಂಥಹ ಮಾತುಗಳು ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನುವ ಯೋಚನೆ.

ಇದು ಒಂದು ಜನಾಂಗದವರದಾದರೆ ಇನ್ನೊಂದು ಜನಾಂಗದಲ್ಲಿ ಮಾಡುವ ಸಂಭ್ರಮದೊಂದಿಗೆ ಆ ನಾಲ್ಕು ದಿನ ಮೈಲಿಗೆ ಅವಳು.  ಮನೆಯ ಜಗುಲಿಯ ಮೂಲೆಯಲ್ಲಿ ಕಂಬಳಿ ಹಾಸಿಗೆ ಪಕ್ಕದಲ್ಲಿ ತಂಬಿಗೆ ಅವಳಿಗೆ ಪ್ರತ್ಯೇಕ ಊಟದ ತಟ್ಟೆ ಲೋಟ.  ಇದು ಹಳ್ಳಿಗಳಲ್ಲಿ ನಮ್ಮ ಕಾಲದಲ್ಲಿ ಅನುಭವಿಸಿದ ಯಾತನೆ.  ಎಲ್ಲೂ ಮುಟ್ಟಬಾರದು.  ಮಾಳಿಗೆ ಮೇಲೆ ಜಾಗ ಇದ್ದರೂ ಎಲ್ಲಾ ಕಡೆ ತಾಗಿರುತ್ತಲ್ಲ ಮೇಲೆ ಹೋಗಬಾರದು.  ಆ ಜಗುಲಿಗೆ ಬರುವವರು ಹಲವು ಜನ ಆ ಒಂದು ದಿನಗಳಲ್ಲಿ ಇಲ್ಲದ ನೆಪ ಹೇಳಿ ಬರುವ ಊರ ಜನರೆ ಜಾಸ್ತಿ.  ಮನಸ್ಸು, ದೇಹ ಮುದುಡಿ ಮೂಲೆ ಸೇರುವ, ನಾಚಿಕೆಯಲ್ಲಿ ಹಿಂಡಿ ಹಿಪ್ಪೆ ಮಾಡುವ ಈ ಅನಿಷ್ಟ ಕಂದಾಚಾರ ಸುಧಾರಣೆ ಹೊಂದಿದ್ದರೂ ಅನಿಷ್ಟ ಪದ್ದತಿ ಇನ್ನೂ ಹಳ್ಳಿ, ಶಹರಗಳಲ್ಲಿ ಮರೆಯಾಗಲಿಲ್ಲ.

ಮಲೆನಾಡಿನ ಒಂದು ಚಿಕ್ಕ ಹಳ್ಳಿ ನನ್ನೂರು.  ಅಲ್ಲಿ ಯಾವ ಸೌಲಭ್ಶಗಳಿರಲಿಲ್ಲ.  ಒಂದೂವರೆ ಮೈಲು ಹೈಸ್ಕೂಲಿಗೆ ಬರಿಕಾಲಲ್ಲಿ ನಡೆದು ಹೋಗುತ್ತಿದ್ದೆವು.  ಏಕೆಂದರೆ ಮಧ್ಯೆ ಹೊಳೆ, ಅದು ನಡೆಯುವ ಹಾದಿ ಕೂಡಾ ಆಗಿತ್ತು ಅರ್ಧ ಕಿ.ಮೀ.  ಹೈಸ್ಕೂಲು ಕೊನೆಯ ವರುಷ. ಈ ಭಾದೆ ತಗಲಾಕಿಕೊಂಡ ದಿನಗಳು.  ಅಬ್ಬಾ! ನೆನೆಪಿಸಿಕೊಂಡರೆ ಹಿಂಸೆ ಮನಸ್ಸಿಗೆ. ನಮಗೆ ಬಟ್ಟೆ ಬಿಟ್ಟರೆ ಬೇರೆ ಗೊತ್ತಿಲ್ಲ. ಮುಟ್ಟು  ಹಾಂಗಂದರೆ ಏನು?  ಎಷ್ಟು ಮುಗ್ಧವಾಗಿದ್ದೆವು ಅಂದರೆ ನಾವೆಲ್ಲ ಗೆಳತಿಯರು ” ಅಲ್ದೆ ಇದು ನಮ್ಮ ಹವ್ಯಕ ಹೆಣ್ಣು ಮಕ್ಕಳಿಗೆ ಮಾತ್ರ ಹಿಂಗಾಗ್ತೆ.  ಬೇರೆಯವಕೆಲ್ಲ ಇಲ್ಯೆ. ಅವರ ಜಾತಿಯಲ್ಲೆ ನಾವೂ ಹುಟ್ಟಕ್ಕಾಗಿತ್ತು ಹದಾ?”  ಎಷ್ಟೋ ವರ್ಷ ಹೀಗೆ ಇತ್ತು ನನ್ನ ನಂಬಿಕೆ.

ಹಳ್ಳಿ ಶಾಲೆಗಳಲ್ಲಿ ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ವಿನಾಯಿತಿ ಇತ್ತು.  ಆದರೆ ಪರೀಕ್ಷೆ ಸಮಯದಲ್ಲಿ ಗತ್ಯಂತರವಿಲ್ಲದೆ ಹೋಗಲೇ ಬೇಕಾಗಿತ್ತು.  ಆ ಬಟ್ಟೆಯ ಒದ್ದಾಟ, ಮನಸಿಗೆ ಆಗುವ ಕಿರಿ ಕಿರಿ, ದೇಹದ ನಿಶ್ಯಕ್ತಿ ಇತ್ಯಾದಿ ಅನುಭವಿಸುತ್ತ ಅಷ್ಟು ದೂರ ಆ ನಡಿಗೆ, ನವೆಯನ್ನು ಒಳಗೊಳಗೇ ಸಹಿಸಲೇ ಬೇಕಾದ ಪರಿಸ್ಥಿತಿ, ಮನೆಗೆ ಬಂದ ಹಾಗೆ ನಾವು ಹಾಕಿದ ಸ್ಕೂಲ್ ಬಟ್ಟೆಯಿಂದ ಹಿಡಿದು ಎಲ್ಲಾ ನಾವೇ ತೊಳೆದುಕೊಳ್ಳಬೇಕು, ವಾಸನೆ ಬೇರೆ.  ನಿಜಕ್ಕೂ ನಾ ಈ ಕಾಟಕ್ಕೆ ಭೂತ ಅಂತಲೇ ಕರಿತಾ ಇದ್ದೆ. ಇದಾದಾಗ  “ಆಯಿ ನನ್ನ ಮೈ ಮೇಲೆ ಭೂತ ಬಂತು” ಹೇಳುತ್ತಿದ್ದೆ.

ಒಂದು ಘಟನೆ ಇನ್ನೂ ನೆನಪಿದೆ.  ಇಂಗ್ಲೀಷ್ ಕ್ಲಾಸು ನಡೀತಿದೆ.  ಮಾಸ್ತರು ಬೇರೆ.  ಮಧ್ಯಾಹ್ನದ ಕೊನೆಯ ಕ್ಲಾಸು.  ನನಗೊ ಕುಳಿತುಕೊಳ್ಳಲು ಆಗುತ್ತಿಲ್ಲ.  ಸಣ್ಣದಾಗಿ ಶುರುವಾದ ಹೊಟ್ಟೆ ನೋವು ಕ್ರಮೇಣ ಜಾಸ್ತಿ ಆಗಲು ಶುರುವಾಯಿತು.  ಜೊತೆಗೆ ಬ್ಲೀಡಿಂಗೂ ಜಾಸ್ತಿ ಆಯಿತು.  ಹಾಗೆ ಹಲ್ಲು ಕಚ್ಚಿ ಕುಳಿತಿದ್ದೆ.  ಊಟದ ಬೆಲ್ಲಾಯಿತು.  ಆಗ ಹೈಸ್ಕೂಲಿನಲ್ಲಿ ಟಾಯಲೆಟ್ ಸೌಲಭ್ಯ ಇರಲಿಲ್ಲ.  ಶಾಲೆಯ ಹಿಂದಿರುವ ಬೆಟ್ಟವೇ ನಮ್ಮ ಬಯಲು ಟಾಯಲೆಟ್.  ಯಾವುದಾದರೂ ಗಿಡದ ಮರೆಯಲ್ಲಿ ಮುಗಿಸಿ ಬರಬೇಕು.  ನೀರಿಲ್ಲ.

ಈ ಪರಿಸ್ಥಿತಿಯಲ್ಲಿ ನನ್ನ ಸ್ಥಿತಿ ಹೀಗೆ.  ದೂರದ ಡೌನಲ್ಲಿ ಒಂದು ಹೊಳೆ ಹರಿಯುತ್ತದೆ.  ಅಲ್ಲಿಗೆ ಅದೇಃಗೆ ಹೋದೆ ನನಗೆ ಈಗಲೂ ಆಶ್ಚರ್ಯ.  ಮುಳ್ಳು ಕಂಟಿಯ ಹಾದಿಯಿಲ್ಲದ ದಾರಿ.  ಕಾಲೆಲ್ಲ ಸಣ್ಣದಾಗಿ ತರಚುತ್ತಿದೆ.  ಆದರೂ ಬಿಡದೇ ಹೋಗಿ ಹಾಕಿದ ಬಟ್ಟೆ ತೊಳೆದುಕೊಂಡು ಮತ್ತೆ ಅದನ್ನೇ ಹಾಕಿಕೊಂಡೆ.ಸುಮಾರು ಅರ್ಧ ಸೀರೆಯಷ್ಟಿರಬಹುದು ಬಟ್ಟೆ.  ಗತಿ ಇಲ್ಲ. ಬೆಳಗಿಂದ ಸಾಯಂಕಾಲದವರೆಗೆ ಕಳಿಬೇಕಲ್ಲ. ಸುತ್ತ ನೋಡಿದೆ.  ಯಾರೂ ಇಲ್ಲ. ಭಯ ಶುರುವಾಯಿತು. ಗೆಳತಿಯರಿಗೂ ಗೊತ್ತಿಲ್ಲ ನಾ ಇಲ್ಲಿ ಬಂದಿರೋದು.  ಅಂತೂ ವೇಗವಾಗಿ ಎದುರಿಸಿರು ತೆಗಿತಾ ಓಡೋಡಿ ಕ್ಲಾಸಿಗೆ ಬಂದರೆ ತರಗತಿ ಶುರುವಾಗಿತ್ತು.

ಕುಳಿತುಕೊಳ್ಳುತ್ತಿದ್ದುದು ಮೊದಲನೇ ಬೇಂಚ್ ಬೇರೆ.  ಆಗಲೇ ಮಾಸ್ತರರು ಗುರಾಯಿಸಿಕೊಂಡು ನೋಡಿದರು.  ನಾನು ಬೆಕ್ಕಿನ ಹೆಜ್ಜೆಯಲ್ಲಿ ಹೋಗಿ ಕುಳಿತೆ.  ಸಧ್ಯ ಏನೂ ಹೇಳಲಿಲ್ಲ.  ಹಾಕಿರೋದು ಸ್ಕರ್ಟ ಬೇರೆ.  ಕುಳಿತ ಜಾಗ ತಣ್ಣಗೆ.  ಎದ್ದೇಳಲು ಭಯ.  ಯಾರಾದರೂ ನೋಡಿದರೆ?.  2-30ರಿಂದ 5-30ರವರೆಗೆ ಅಲ್ಲಾಡಲಿಲ್ಲ.  ಊಟ ಕೂಡಾ ಮಾಡಿರಲಿಲ್ಲ. ಮನೆಯಲ್ಲಿ ಈ ವಿಷಯ ತಿಳಿದ ಅಮ್ಮ ಮತ್ತೆ ಈ ಅವಸ್ಥೆಯಲ್ಲಿ ಶಾಲೆಗೆ ಹೋಗಲು ಬಿಡುತ್ತಿರಲಿಲ್ಲ.  ಈಗಿರುವಂತೆ ಆಗ ಈ ನ್ಯಾಪ್ಕಿನ್ ವ್ಯವಸ್ಥೆ ಇದ್ದಿದ್ದರೆ ನನಗೆ ಹೀಗಾಗುತ್ತಿತ್ತಾ?

ಇಂತಹ ಹಲವಾರು ಘಟನೆಗಳಿಗೆ ಬಲಿಪಶುವಾಗಲೇ ಬೇಕಿತ್ತು ಆಗಿನ ಹೆಣ್ಣುಮಕ್ಕಳು. “ಯಂಗ ಎಲ್ಲಾ ಅನುಭವಿಸಿದ್ವಿಲ್ಯನೆ. ಹಂಗೇಯಪ.  ಒಂದು ನಾಲ್ಕು ದಿನ ತಡಕಳವು. ” ಇದು ಮನೆಯ ಹಿರಿಯರ ಮಾತು.  ಹೊಟ್ಟೆ ನೋವಿಗೆ ಮಂಚಿಕುಡಿ ಅರೆದು ಮಜ್ಜಿಗೆ ಉಪ್ಪು ಹಾಕಿ ಕುಡಿಸಿ “ಹೊಟ್ಟೆ ಕೌಚಾಕಿ ಮನಕ್ಯಳೆ, ಕಡಿಮೆ ಆಗ್ತು ತಗ” ಇದು ಆಗಿನ ಮದ್ದು.  ಇನ್ನೂ ಹೆಚ್ಚಿಗೆ ನೋವು ಅನುಭವಿಸವರಿಗೆ ಅಂತಹ ಮನೆಗಳಲ್ಲಿ ಹೇಳುವುದು “ತಮಾ ಕೂಸಿಗೆ ಒಂದು ಗಂಡು ಹುಡಕ.  ಮದುವೆ ಆದ ಮೇಲೆ ತನ್ನಷ್ಟಕ್ಕೆ ಕಡಿಮೆ ಆಗ್ತು”  ನನ್ನ ಗೆಳತಿಯರು ಹೇಳಿದ ಮಾತಿದು.  ಅದೇನು ಹುಚ್ಚು ಧೈರ್ಯವೋ ಗೊತ್ತಿಲ್ಲ. ಆದರೆ ಈ ನಂಬಿಕೆ ಈಗಲೂ ಇದೆ.  ಹಾಗೆ ಮಾತ್ರೆಗಳ ವ್ಯವಸ್ಥೆ ಕೂಡಾ ಇದೆ.

ಮೊನ್ನೆ ಒಬ್ಬಳು ದೂರವಾಣಿಯಲ್ಲಿ ಉವಾಚ ;”ಹಲೋ… ನಾನು.  ಗೀತಾವರಾ? ಮೂರು ದಿನ ಹೊರಗಿರೊ ಶಾಸ್ತ್ರ ಇದೆಯಾ?” ಅಯ್ಯೋ ದೇವರೆ! ಯಾರು,ಏನು,ಎತ್ತ ಗೊತ್ತಿಲ್ಲ.  ಡೈರೆಕ್ಟ ಈ ಪ್ರಶ್ನೆ.  ಅಂದರೆ ಮಗನಿಗೆ ಮದುವೆ ಆಗೋದು ಮುಖ್ಯ ಅಲ್ಲ, 33ವರ್ಷ ಮಗನಿಗಾದರೂ ಶಾಸ್ತ್ರ ಮುಖ್ಯ.  ಅದೂ ಇಷ್ಟು ಮುಂದುವರಿದ ಕಾಲದಲ್ಲಿ.  ಸಿಟ್ಟು ಬಂತು ಕುಕ್ಕಿದೆ ಫೋನು.  ಸಧ್ಯ ಏನೂ ಆಗಿಲ್ಲ

ಹೆಣ್ಣು ಅಂದರೆ ಕಷ್ಟ ; ಕಷ್ಟ ಅಂದರೆ ಹೆಣ್ಣು

ಇದರಲ್ಲಿ ಯಾವುದು ಸರಿ ಎಂದು ಹೇಳಲು ಸಾಧ್ಯವೇ ಇಲ್ಲ.  ಕಾರಣ ಒಂದಕ್ಕೊಂದು ಹಾಸು ಹೊಕ್ಕಾಗಿದೆ. ಪ್ರತೀ ತಿಂಗಳೂ  ಮುಟ್ಟಿನ ಅನುಭವ ಸುಮಾರು ನಲವತ್ತು ನಲವತ್ತೈದು ವರ್ಷಗಳವರೆಗೆ ಹೆಣ್ಣಾದವಳು ಅನುಭವಿಸಲೇ ಬೇಕು.  ಹಾಗೆ ತಾಯಾಗುವ ಸಮಯದಲ್ಲಿ ಹೆರಿಗೆಯ ನೋವು ಕೂಡಾ.  ಇವೆರಡನ್ನು ಯಾವ ಹೆಣ್ಣು ಎಷ್ಟೇ ಶ್ರೀಮಂತಳಾಗಿರಲಿ ಯಾರೊಂದಿಗೂ ಹಂಚಿಕೊಳ್ಳಲು ಆಗುವುದಿಲ್ಲ.  ಬಡವ ಶ್ರೀಮಂತ ಭೇದ ಭಾವವಿಲ್ಲದೆ ಆಯಾ ಕಾಲಕ್ಕೆ ಬಂದು ವಕ್ಕರಿಸುತ್ತದೆ.

ಆದುದರಿಂದ ಈ ವಿಷಯದಲ್ಲಿ ದಯವಿಟ್ಟು ಯಾರೂ ರಾಜಕೀಯ ಮಾಡದೆ ಸ್ಯಾನಿಟರಿ ನ್ಯಾಪಕಿನ್ ಸುಲಭ ಬೆಲೆಯಲ್ಲಿ ಹೆಣ್ಣಿಗೆ ಸಿಗುವಂತಾಗಬೇಕು. ಶಾಲೆಗಳಲ್ಲಿ ಉಚಿತವಾಗಿ ಹೆಣ್ಣು ಮಕ್ಕಳಿಗೆ ಹಂಚುತ್ತಿರುವುದು ನಿಜಕ್ಕೂ ಶ್ಲಾಘನೀಯ.  ಇದಕ್ಕೆ ಅಡ್ಡಿ ಪಡಿಸುವ ಪ್ರಯತ್ನ ಯಾರಿಂದಲೂ ಆಗದಿರಲಿ.

ಹಾಗೆ ನನ್ನ ಒಬ್ಬರು ಸರ್ ಹೇಳಿದರು ನನ್ನ ಮಗಳ ಹತ್ತಿರ “ಗೀತಾ ಜಿ.ಹೆಗಡೆಯವರಿಗೆ  ಕವನ ಬರೆಯೋ ಶಕ್ತಿ ಕೊಡಬೇಡಾ ಭಗವಂತಾ ಅಂತ ಬೇಡ್ಕೋತೀನಿ.”   ಏನು ಮಾಡಲಿ? ಬಿಡೋಕೇ ಆಗಲ್ವೆ? ಹಂಗೆ ಬರೆದೆ ಕವನ ಮತ್ತೆ ಈ ವಿಷಯವಾಗಿ.

ಕಾಡುವ ಭೂತ..!

ಅಯ್ಯ ಅದು ಹೊರಗಾಜು
ಮುಟ್ಸಕಳಡಿ ಮಕ್ಕಳ್ರಾ
ಕೇಳ್ತನ್ರೆ……..?

ಹಾಂಗಂದ್ರೆ ಎಂತದು?

ತಲೆ ಬುಡ ಅಥ೯ ಆಗ್ದೆ ಇದ್ರೂ
ಈ ಮೈಲ್ಗೆ ಹೇಳ ಮಡೀಗೆ
ಮನಸ್ಸೇನು ಈಡೀ
ದೇಹದ ನರನಾಡಿಗಳಲ್ಲೆಲ್ಲವಾ
ಯನ್ನ ಅಜ್ಜಿ ಶಣ್ಕಿಂದ
ಶಾಸ್ರ್ತ ಶಾಸ್ತ್ರ ಹೇಳಿ ತಲೆ ತುಂಬಿ
ಅತ್ಲಾಗೆ ಅಧುನಿಕತೆಗೆ
ಅಂಟಿಕೊಳ್ಳಲಾಗ್ತಿಲ್ಲೆ
ಇತ್ಲಾಗೆ ನೆರಳಾಂಗೆ
ಬೆನ್ನಟ್ಕಂಡ ಬರ
ಗೊಡ್ಡು ಶಾಸ್ತ್ರದ ಸಂಕೋಲಿಂದವಾ
ಬಿಡಿಸ್ಕಳಲ್ಲೂ ಆಗ್ತಿಲ್ಲೆ.

ಕೈಯಲ್ಲಿ ಆಗ್ದಿದ್ರೂ
ಮೈ ಪರಚಿಕೊಳ್ಳಷ್ಟು
ಸಿಟ್ಟ್ ಬಂದ್ರೂ
ಬೆಂಗಳೂರೆಂಬ ಬೆಂಡೋಲೆಯಲ್ಲಿ
ತಗಲಾಕ್ಕಂಡ ತಪ್ಪಿಗೆ ನೇತಾಡ್ಕಂಡರೂ
“ಸೊಂಟನೋವು ಬಂಜು ನಿಂಗೆ
ಅಮ್ಮಾ ಸಾಕು ಮಾಡೆ ದರಿದ್ರ ಶಾಸ್ತ್ರ”
ಹೇಳಿದ್ರೂ ಕೇಳದೆಯಾ
ಅಪ್ಪ ನೆಟ್ ಆಲದಮರಕ್ಕೆ ಜೋತಾಕ್ಕಳ ಬುದ್ಧಿ
ಇನ್ನೂ ಯಂಗೆ ಬಿಡಲಾಗ್ತಿಲ್ಲೆ
ಎಂತ ಮಾಡವನ!

ಪಾಪನೆ ಈಗಿನ್ ಹೆಣ್ಮಕ್ಕಳೀಗೆ
ಬರ್ತಿ ತ್ರಾಸೆಯಾ!

ಅದರಲ್ಲೂ ಮದುವೆ ಮಾಡ್ಕಂಡ
ಗಂಡನ್ಮನೀಗೆ ಹೋಜ್ವಲೆ
ಅಲ್ಲಿ ಅತ್ತೆ ಶಾಸ್ತ್ರ ಮಾಡ ಹೆಂಗಸಾದ್ರೆ
ಮುಗದೇ ಹೋತು
ಹೊಟ್ನವ್ವು ಸಹಿಸ್ಕತ್ವ,
ಕೆಲಸಕ್ಕೆ ಹೋಗ್ತ್ವ,
ಮನೆ ಕೆಲಸ ಮಾಡ್ಕತ್ವ,
ಮಕ್ಕ್ಳ ನೋಡ್ಕತ್ವ,
ಅಥವಾ ಶಾಸ್ತ್ರ ಮಾಡ್ಕತ್ವ!

ಅದೂ ಪ್ಯಾಟೆಲ್ಲಿ
ಇಷ್ಟ ಶಣ್ಣ ಮನೇಲಿ
ಮುಡೀಕ್ಯಂಡ ಮುಡೀಕ್ಯಂಡ
ಓಡಾಡವಲೆ.

ಪಾಪ! ಹೆಣ್ಣಿನ ಜೀವನ
ಎಷ್ಟಂದ್ರೂ ಗೋಳೇಯಾ
ಎಂತಾ ಮಾಡಲ್ ಬತ್ತು?

ಹೊಟ್ಟೆಲೆಲ್ಲ ರಾಶಿ ಸಂಕಟ ಆಗ್ತೆ…….
ಆದರೆ

ಇದೊಂದು ಪ್ರತಿ ಹೆಣ್ಣಿನ ಜನ್ಮಕ್ಕೆ
ಕಾಡುವ ಮನಸಿನ ಭೂತವೋ
ಅಥವಾ
ಹೆಣ್ಣಿಗೊಂದು ಶಾಪವೊ
ಭಗವಂತಾ
ನೀನೇಕೆ ದೂರ ಇಟ್ಟೆ??

‍ಲೇಖಕರು avadhi

10 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading