ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಯ್ಯೋ ಆಯಿ!! ನಂಗ್ ಬ್ಲಡ್ ಕಾನ್ಸರ್ ಆಗೋಜು..

ಋತುಚಕ್ರ ನಮ್ಮದು ಆಯ್ಕೆಯನ್ನೂ ನಮಗೆ ಬಿಡಿ…

ಶುಭಶ್ರೀ ಭಟ್ಟ

ಬಹುಶಃ ಇವತ್ತಿಗೂ ಋತುಚಕ್ರದ ಬಗ್ಗೆ,ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಎಲ್ಲರೆದುರು ಚರ್ಚಿಸಬಲ್ಲಷ್ಟು ಆಧುನಿಕವಾಗಿಲ್ಲ ನಮ್ಮ ಮನಸ್ಸು..ಆದರೂ ಬರೆಯಬೇಕೆಂಬ ಕೆಲ ಗೆಳತಿಯರ ಸಲುವಾಗಿ,ನನ್ನದೇ ಅಭಿಪ್ರಾಯವುಳ್ಳ ಹೆಣ್ಮನದ ಪರವಾಗಿ ಬರೆಯುತ್ತೆನೆ..ಯಾರ ಹೇಳಿಕೆಯ ಪರ/ವಿರೋಧ ಚರ್ಚೆಗೋಸ್ಕರ ಬರೆದಿದ್ದಂತೂ ಖಂಡಿತಾ ಅಲ್ಲ.

ನಾವಿನ್ನೂ ಆಡುವ ಪುಟಾಣಿಗಳು.ತಿಂಗಳಿಗೊಮ್ಮೆ ‘ಕಾಗೆ ಮುಟ್ಟಿಸಿಕೊಂಡು’ ಬರುವ ನಮ್ಮ ಅಮ್ಮನ ಕಂಡ್ರೆ ಅದೇನೋ ಅಸಹಾಯಕತೆ. ಗೋಣಿಯ ತಾಟೋ, ಹರಕು ಚಾಪೆಯ ಮೇಲೋ ದಿನವಿಡೀ ಕುಳಿತಿರುವ ಅಮ್ಮನ ಬಳಿ ನಮಗೆ ಪ್ರವೇಶವಿರಲಿಲ್ಲ. ಅದೇ ಸಮಯದಲ್ಲಿ ಅಮ್ಮನ ತೊಡೆಯ ಮೇಲೆ ಮಲಗಿಕೊಳ್ಳಬೇಕೆಂಬ ಆಸೆ ಜಾಸ್ತಿಯಾಗುತ್ತಿದ್ದ ಕಾರಣ,ಉಟ್ಟ ಬಟ್ಟೆಯೆಲ್ಲಾ ದಿನಕ್ಕೆರಡ್ಮೂರು ಸಲ ತೊಳೆಯಲ್ಪಡುತ್ತಿತ್ತು.. ಆದರೂ ಅಮ್ಮ ಅದೇಲ್ಲಿ ಹೋಗಿ ಕಾಗೆ ಮುಟ್ಟಿಸಿಕೊಂಡು ಬರ್ತಾಳೋ ಅಥವಾ ಕಾಗೆ ಯಾಕೆ ಅಮ್ಮನನ್ನೇ ಹುಡುಕಿಕೊಂಡು ಬರುತ್ತೋ ಎಂಬ ಪ್ರಶ್ನೆಗೆ ಅಜ್ಜಿಯ ಹುಸಿಬೈಗುಳವೇ ಉತ್ತರವಾಗಿತ್ತು.

ಸಿಕ್ಕಾಪಟ್ಟೆ ಪುಸ್ತಕ ಓದುತ್ತಿದ್ದ ನನಗೆ ತಲೆಯ ತುಂಬಾ ಸದಾ ಕಥೆ-ಕಾದಂಬರಿಯಲ್ಲಿ ಬರುವ ಪಾತ್ರಗಳ ನರ್ತನ.ಜೊತೆಗೆ ವಾರಕ್ಕೊಮ್ಮೆ ಚಂದನದಲ್ಲಿ ಬರುವ ಕನ್ನಡ ಸಿನೆಮಾದ ಹುಚ್ಚು ಬೇರೆ.ಒಮ್ಮೆ ‘ಗೀತಾ’ ಸಿನೆಮಾ ನೋಡಿ,ಅದರಲ್ಲೆ ಮುಳುಗೆದ್ದು ಲೀಟರುಗಟ್ಟಲೇ ಕಣ್ಣಿರು ಸುರಿಸಿ ದಿನವಿಡೀ ಗೀತಳದೇ ಯೋಚನೆ ಮಾಡಿ ಅಮ್ಮನ ಬಳಿ ಸಮಾ ಬೈಸಿಕೊಂಡಿದ್ದೆ. ಅದಾಗಿ ವಾರದೊಳಗೆ ನನಗೆ ಮೊದಲ ಋತುಸ್ರಾವವಾಗಿತ್ತು.ಸ್ನಾನಕ್ಕೆಂದು ಹೋದವಳು ಅದನ್ನು ಕಂಡು ಬಚ್ಚಲಲ್ಲೇ ಬಿಕ್ಕಿ-ಬಿಕ್ಕಿ ಅಳುತ್ತಾ ಕುಸಿದಿದ್ದೆ.

ಗಾಬರಿ ಬಿದ್ದ ಅಮ್ಮನಿಗೆ ಬಾಗಿಲನ್ನೂ ತೆರೆಯದೇ ಸತಾಯಿಸಿ ಕೊನೆಗೆ ಮುದ್ದು ಮಾಡಿ ಕೇಳಿದಾಗ ‘ಅಯ್ಯೋ ಆಯಿ!! ನಂಗ್ ಬ್ಲಡ್ ಕಾನ್ಸರ್ ಆಗೋಜು, ಗೀತಾನ್ ಹಾಂಗೇಯಾ.’ ಎಂದು ಬೊಬ್ಬಿರಿಯತೊಡಗಿದ್ದೆ.

ಅದನ್ನು ತಕ್ಷಣಕ್ಕೆ ಗ್ರಹಿಸಿದ ಅಮ್ಮ ಬಿದ್ದು ಬಿದ್ದು ನಕ್ಕಳು..ಆ ಮೂರುದಿನ ಮಾತ್ರ ನರಕದಂತೆ ಕಳೆದಿದ್ದೆ. ಏನೋ ಹೇಳಲಾಗದ ಭಾವ,ಕಿತ್ತುಬರುವ ಹೇಸಿಗೆ,ಈ ಪ್ರಕ್ರಿಯೆಗೆ ಒಗ್ಗಿಕೊಳ್ಳದ ಮನಸ್ಸು ಒಂದೇ ಸಮನೆ ಹಟಮಾಡುತ್ತಿತ್ತು. ಕೊನೆಗೆ ಋತುಚಕ್ರ, ಋತುಸ್ರಾವದ ಬಗ್ಗೆ ನನಗೆ ತಿಳಿಯುವುಷ್ಟು ತಿಳಿಸಿ ಹೇಳಿದಳು, ಅದರಿಂದಲೇ ಹೆಣ್ಣಿನ  ಜೀವನ ಪರಿಪೂರ್ಣವೆಂದಳು,ತನ್ನ ಹಳೆಯ ಹತ್ತಿಯಂತೇ ಮೆದುವಿದ್ದ ಸೀರೆತುಂಡನ್ನು ಕೊಟ್ಟು ಆ ಸ್ರಾವದಿಂದ ರಕ್ಷಿಸಿಕೊಳ್ಳಲು ತಿಳಿ ಹೇಳಿದಳು. .ಆದರೂ ನನ್ನ ಕಣ್ಣೀರು ನಿಂತಿರಲೇ ಇಲ್ಲ..  ನಂತರದ ತಿಂಗಳೊಳಗೇ ಸ್ಯಾನಿಟರಿ ಪ್ಯಾಡ್ ಬಂದಿದ್ದು,ಸ್ವಲ್ಪ ಪರವಾಗಿಲ್ಲ ಎಂದುಕೊಂಡಿದ್ದು ಬೇರೆ ವಿಚಾರ..

‘ಬಟ್ಟೆ ದಿನ’ಗಳಿಂದ ದೂರವಾಗಿ ದಶಕವೇ ಕಳೆದುಹೋಯ್ತು…ಆದರೂ ಸ್ಯಾನಿಟರಿ ಪ್ಯಾಡ್ ಗೆ ಬೆಲೆತೆರಲೂ ಹಣವಿಲ್ಲದೇ ಅದೇಷ್ಟೋ ಬಡ ಹೆಣ್ಣು ಮಕ್ಕಳು ಬಟ್ಟೆಯನ್ನೆ ಅವಲಂಬಿಸಿದ್ದಾರೆ.ಅದೇಷ್ಟು ಹೆಣ್ಮಕ್ಕಳು ಆ ದಿನಗಳಲ್ಲಿ ಶಾಲೆಗೆ ಗೈರಾಗಿ ಮನೆಯ ಮೂಲೆಯಲ್ಲಿ ಅಡಗಿ ಕುಳಿತಿರುತ್ವೋ? ಇನ್ನು ಕೆಲವರು ಉಪಯೋಗಿಸಿದ ಕಮಟುನಾತದ ಬಟ್ಟೆಯನ್ನೇ ಪ್ರತೀ ಋತುವಿನಲ್ಲೂ ಬಳಸಿ ಅನುಭವಿಸುತ್ತಿರುವ ಮುಜುಗರ ಇದೆಯಲ್ಲಾ! ದೇವರೆ ಮುಂದಿನ ಜನ್ಮದಲ್ಲಿ ಬಡವರನ್ನೆಲ್ಲಾ ಗಂಡಾಗಿ ಹುಟ್ಟಿಸಿಬಿಡು ಎನಿಸುವಷ್ಟು ಬೇಸರ ತರಿಸುತ್ತದೆ.

ಇನ್ನು ಕೆಲ ಹೆಣ್ಮಕ್ಕಳು,ತಾಯಂದಿರು ಹೇಗೋ ತಿಂಗಳಿಗೊಂದು ಪುಟ್ಟ ಪ್ಯಾಡ್ ಪ್ಯಾಕೆಟ್ ಅನ್ನು ತೆಗೆದುಕೊಳ್ಳುವಷ್ಟು ದುಡ್ಡು ಸಂಗ್ರಹಿಸಿಟ್ಟಿರುತ್ತಾರೆ.ಈಗ ತೆರಿಗೆಯೆಂಬ ಗುಮ್ಮನ ಕಣ್ಣು ಇದರ ಮೇಲು ಬಿದ್ದರೆ?? ಇಷ್ಟು ದಿನ ‘ಸ್ಯಾನಿಟರಿ ಪ್ಯಾಡ್’ ಬಳಸುವುದು ಒಳ್ಳೆಯದಲ್ಲಾ, ಅದರಲ್ಲಿ ವಿಷಕಾರಿ ಪದಾರ್ಥಗಳುಂಟು ಅಂತಾ ಇಷ್ಟು ದಿನ ಯಾರಿಗೂ ಹೊಳೆಯಲೇ ಇಲ್ಲವಾ ? ಹೋಗಲಿ ಇನ್ನೂ ಕೆಲವರು  ‘ನಾವೇನೂ ಮಹಿಳೆಯರ ಮೇಲೆ ತೆರಿಗೆ ವಿಧಿಸಿಲ್ಲಾ ಎನ್ನುವವರೂ ಇದ್ದಾರಂತಲ್ಲಾ’,  ಆದರೆ ಮಹಿಳೆಗೆ ಮಾತ್ರ ಋತುಚಕ್ರವಾಗಲಿಕ್ಕೆ ಸಾಧ್ಯವೆಂಬ ಸತ್ಯದ ಅರಿವಿಲ್ಲವಾ ಅವರಿಗೆ? ಆಯ್ತು ಎಲ್ಲವನ್ನೂ ಅವರವರ ಭಾವವೆಂದು ಬಿಟ್ಟು ಬಿಡೋಣ..

ಸ್ಯಾನಿಟರಿ ಪ್ಯಾಡ್ ಉಪಯೋಗಿಸುವುದು ಅಪಾಯಕಾರಿಯೇ? ಒಪ್ಪೋಣ. ಅದಕ್ಕೆ ಅಪಾಯಕಾರಿಯಲ್ಲದ ವಸ್ತುವಿಂದ ತಯಾರಿಸಲ್ಪಟ್ಟ ಸ್ಯಾನಿಟರಿ ಪ್ಯಾಡ್ ತಯಾರಿಸಿ ಮೊದಲು..  ಬಡ ಹೆಣ್ಮಕ್ಕಳಿಗೆ ಉಚಿತವಾಗಿ ಪ್ಯಾಡ್ ಕೊಡುವ ವ್ಯವಸ್ಥೆ ಮಾಡಿ   ತೆರಿಗೆ ಕಟ್ಟಬೇಕಾ ಅದನ್ನೂ ಕಟ್ಟಿಬಿಡೋಣ. ಆದರೆ ಹಳ್ಳಿ ಹಳ್ಳಿಗೆ ತೆರಳಿ ಬಡ ಹೆಣ್ಮಕ್ಕಳಿಗೆ ಉಚಿತವಾಗಿ ಕೊಡುವ ಮನಸ್ಸು ಮಾಡಿ, ನಂತರ ತೆರಿಗೆ ಕಟ್ಟಬೇಕಾ/ಬೇಡವಾ,ಬಟ್ಟೆಯಾ/ನಾಪ್ಕಿನ್ ನಾ ನಾವು ನಿರ್ಧರಿಸುತ್ತೆವೆ. ಋತುಚಕ್ರ ನಮ್ಮದು,ಸ್ರವಿಸುವುದು ನಾವು,ನಿರ್ಧಾರವನ್ನೂ ನಮಗೇ ಬಿಡಿ..

‍ಲೇಖಕರು avadhi

11 July, 2017

2 Comments

  1. Anonymous

    ತುಂಬಾ ಚೆನ್ನಾಗಿದೆ ನಿಮ್ಮ ಲೇಖನ ಗೆಳತಿ ಹೆಣ್ಣು ಮಕ್ಕಳ ಮನದಾಳದ ಮಾತುಗಳನ್ನು ವಾಸ್ತವಿಕವಾಗಿ ತಿಳಿಸಿದ್ದಿರಿ ಗೆಳತಿ

  2. ಭಾರತಿ ಬಿ ವಿ

    ಒಳ್ಳೆಯ ಬರಹ ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading