ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮಾನ್ ತಲುಪುವ ವೇಳೆಗೆ ನಾನು ಅಮ್ಮಾ..ತಾಯಿ..

2

ಮುಂದುವರಿದಿದೆ..

 

ಪಯಣವೆಂದರೆ ಬರೀ ಗಮ್ಯ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ.

ಹಾಗೆ ಗಮ್ಯದತ್ತ ಮಾತ್ರ ಮನಸ್ಸು ನೆಟ್ಟಿದ್ದಲ್ಲಿ ಇಲ್ಲಿಂದ ಹೊರಟು, ಅಲ್ಲಿಗೆ ಮುಟ್ಟುವವರೆಗಿನ ಸಮಯವೆಲ್ಲವೂ ವ್ಯರ್ಥ ಅನ್ನಿಸಿಬಿಡುವ ಸಾಧ್ಯತೆಯೂ ಇದೆಯಲ್ಲವೇ?

ಗೆಳೆಯನೊಬ್ಬ ಹೇಳುತ್ತಿದ್ದ ಘಟನೆ ನೆನಪಾಗುತ್ತದೆ – ಆತನ ಗೆಳೆಯನೊಬ್ಬ ಪ್ರವಾಸಕ್ಕೆಂದು ಹೊರಟನಂತೆ. ನದಿ ದಡದಲ್ಲಿನ ಪ್ರವಾಸಕ್ಕೆ ಬೇಕಾಗುವ ಎಲ್ಲ ವಸ್ತುಗಳನ್ನೂ ಜೋಡಿಸಿಕೊಂಡು ಹೊರಟರಂತೆ. ಅಲ್ಲಿ ತಲುಪಿ, ಗಾಳಿ ತುಂಬುವ ಬೋಟನ್ನು ನೀರಿಗಿಳಿಸಲು ಹೊರಟಾಗಲೇ ಅವರಿಗೆ ಅದು ತೂತಾಗಿದ್ದು ಅರಿವಿಗೆ ಬಂದಿತಂತೆ.

ಉತ್ಸಾಹದಿಂದ ಬಂದವರೂ ಕೂಡಾ ಬ್ಲೋ ಕಳೆದುಕೊಂಡ ಹಾಗೆ ಆದರಂತೆ. ಆ ನಂತರ 20 ಕಿಲೋಮೀಟರ್ ದೂರದ ಪಂಕ್ಚರ್ ಶಾಪಿಗೆಲ್ಲೋ ಹೋಗಿ ಅದಕ್ಕೆ ತೇಪೆ ಹಾಕಿಸಿ ಬಂದ ನಂತರ ಇವರು ಸಿಟ್ಟಲ್ಲಿ ‘ಥು ಎಷ್ಟು ಸಮಯ ಹಾಳಾಯಿತು’ ಎಂದರಂತೆ. ಆಗ ಜೊತೆಗಿದ್ದ ಅವರ ತಂದೆ ‘ಇದನ್ನು ಸಮಯ ಹಾಳು ಅಂದುಕೊಂಡರೇನೇ ಎಲ್ಲ ಸಮಸ್ಯೆಗಳೂ ಉದ್ಭವವಾಗುವುದು. ಅದರ ಬದಲಿಗೆ ಈ ಸಮಯವನ್ನು cost of going ಅಂದುಕೊಂಡರೆ ಆಗದೇ? ಪ್ರಯಾಣವೊಂದರ ಖರ್ಚೆಂದರೆ ಹಣ ಮಾತ್ರವಲ್ಲ … ಅದಕ್ಕೆ ಒಂದಿಷ್ಟು ಸಮಯ, ತಾಳ್ಮೆ, ತ್ಯಾಗ,  ಹೊಂದಾಣಿಕೆ ಎಲ್ಲವನ್ನೂ ಮಾಡಿರುತ್ತೇವಲ್ಲ, ಅವೆಲ್ಲವೂ ಸೇರಿಯೇ ಒಂದು ಪ್ರವಾಸದ cost ಎಷ್ಟು ಎನ್ನುವುದನ್ನು ನಾವು ಲೆಕ್ಕ ಹಾಕಬೇಕು’ ಎಂದು.

ಎಷ್ಟು ಸತ್ಯವಲ್ಲವಾ?

ಒಂದು ಪ್ರವಾಸವೆಂದರೆ ಚಲನೆ, ಗಮ್ಯ, ಹಾದಿ, ಅನುಭವಗಳು. ಎಲ್ಲವೂ …! ಹಾಗಾಗಿ ನನ್ನ ಕಥನವೂ ಬೆಂಗಳೂರಿನಿಂದ ಶುರುವಾಗಿ ಪೆಟ್ರಾ ತಲುಪುವವರೆಗಿನ ಒಂದಿಷ್ಟು ನಗು, ವೈಚಿತ್ರ್ಯಗಳು, ಮನುಷ್ಯ ಸಂಬಂಧಗಳು, ಹತಾಶೆ, ನೋವು, ಹೊಸತರ ಬೆರಗು, ಜೊತೆಗೇ ಅಂಟಿಬರುವ ಕೆಲವು ಕಿರಿಕಿರಿ, ನಾವು ಹೊಂದಿಕೊಂಡ ಬದುಕಿನಿಂದಾಚೆ ಕಾಲಿಟ್ಟಾಗಿನ ಗಲಿಬಿಲಿ ಎಲ್ಲವನ್ನೂ ಒಳಗೊಳ್ಳುತ್ತಾ ಹೋಗುತ್ತದೆ. ನನ್ನ ಪಯಣ ಬೆಂಗಳೂರಿನಿಂದ ಗೋವೆ, ಅಲ್ಲಿಂದ ಮಸ್ಕತ್ ದಾರಿಯಾಗಿ ಅಮ್ಮಾನ್ ತಲುಪುವವರೆಗೂ ಜಾರಿಯಲ್ಲಿರುತ್ತದೆ … ನೀವೂ ಈ ಪಯಣದಲ್ಲಿ ನನ್ನ ಜೊತೆಗಿದ್ದರೆ ಅದರ ಖುಷಿಯೇ ಬೇರೆ!

 

 

 

 

ಹೋಲಿಲ್ಯಾಂಡ್ ಟೂರ್ ಗೋವೆಯಿಂದ ಶುರುವಾಗುತ್ತಿತ್ತು ಮತ್ತು ಗೋವೆಯಲ್ಲಿಯೇ ಮುಗಿಯುತ್ತಿತ್ತು. ಬೆಂಗಳೂರಿನಿಂದ ಗೋವೆಗೆ ಹೋಗುವ ಜವಾಬ್ದಾರಿ ನಮ್ಮದೇ. ಹಾಗಾಗಿ ‘to err on safer side’ ಅನ್ನುವ ಮೂಲಮಂತ್ರದ ನಾವು, ಟ್ಯಾಕ್ಸಿ ಕೆಟ್ಟು ವಿಮಾನ ಮಿಸ್ ಆದರೆ, ಫ್ಲೈಟ್ ಹೊರಡುವುದು ತಡವಾದರೆ, ಲ್ಯಾಂಡಿಂಗ್ ತಡವಾದರೆ, ಮಂಜು ಮುಸುಕಿದ್ದರೆ, ಗಾಳಿ ಬೀಸಿದರೆ ಎನ್ನುವ ನೂರಾರು ಕಾಲ್ಪನಿಕ ಅಡೆತಡೆಗಳ ಗಾಬರಿಗೆ ಮಧ್ಯಾಹ್ನ 3.20ರ ವಿಮಾನ ಹಿಡಿಯಲು ಬೆಳಗಿನ ಆರಕ್ಕೇ ಬೆಂಗಳೂರು ಬಿಟ್ಟು ಹೊರಟಿದ್ದೆವು!

ಅಮ್ಮಾನ್ ತಲುಪುವ ವೇಳೆಗೆ ನಾನು ಅಮ್ಮಾ..ತಾಯಿ.. ಅನ್ನುವಂತಾಗಿ ಹೋಗಿದ್ದೆ

ಆರಕ್ಕೆ ವಿಮಾನ ಎಂದರೆ ಐದಕ್ಕೆ ವಿಮಾನ ನಿಲ್ದಾಣದಲ್ಲಿರಬೇಕು, ಹಾಗಾಗಿ ನಾಲ್ಕಕ್ಕೆ ಮನೆ ಬಿಟ್ಟು ಹೊರಡಬೇಕು, ಹಾಗಾಗಿ ಮೂರಕ್ಕೆ ಏಳಬೇಕು. ಜಗವೆಲ್ಲ ಮಲಗಿರಲು ಎದ್ದ ನಾವು ಅಂತೂ ಯಾವ ಅಡೆತಡೆಯೂ ಬಾರದೇ ಬೆಳಗಿನ ಏಳೂವರೆಗೇ ಗೋವೆ ತಲುಪಿದೆವು.

ಅಲ್ಲಿ ಭರ್ತಿ 7 ಘಂಟೆಗಳ ಕಾಯುವಿಕೆ ಮುಗಿದ ಮೇಲೆ, ಮಧ್ಯಾಹ್ನ 3.20ಕ್ಕೆ ಮಸ್ಕತ್‌ಗೆ ಹೊರಟೆವು. ಅಲ್ಲಿಂದ ಮೂರೂವರೆ ಘಂಟೆ ಪ್ರಯಾಣಿಸಿ ಮಸ್ಕತ್ ತಲುಪಿ, ಅಲ್ಲಿ ಮತ್ತೆರಡು ಘಂಟೆ ಕಾದು 8.30ಕ್ಕೆ ಹೊರಟು ಜೋರ್ಡಾನ್‌ನ ರಾಜಧಾನಿಯಾದ ಅಮ್ಮಾನ್‌ ತಲುಪಿದಾಗ ರಾತ್ರಿ 11 ಘಂಟೆ. ಆಗ ನಮ್ಮ ದೇಶದಲ್ಲಿ ನಡುರಾತ್ರಿಯ ಎರಡೂವರೆ ಘಂಟೆ.

ಪ್ರಯಾಣ ಬರಿಯ ಎಂಟು ಘಂಟೆಗಳದ್ದಾದರೂ, ಮಧ್ಯೆ ಮಧ್ಯೆ ವಿಮಾನಗಳನ್ನು ಬದಲಿಸುವಲ್ಲಿ ಕಾದ ಸಮಯ, ಕಾಲಮಾನದ ವ್ಯತ್ಯಾಸ ಎಲ್ಲವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮನೆ ಬಿಟ್ಟಾಗಿನಿಂದ ಈವರೆಗೆ ಇಪ್ಪತ್ತು ಘಂಟೆಗಳು ಕಳೆದಿದ್ದವು. ಪ್ರಯಾಣಕ್ಕಿಂತ ಕಾಯುವಿಕೆಯೇ ಸುಸ್ತು ಹೊಡೆಸಿತ್ತು. ನಿದ್ರೆ ಸರಿಯಿಲ್ಲದ ಕಾರಣ ಮನಸ್ಸು ಅಸಹನೆಗೊಂಡಿತ್ತು. ಇನ್ನು ವೀಸಾ ಆಗುವುದು ಯಾವಾಗ, ಲಗೇಜ್ ಸಿಕ್ಕುವುದು ಯಾವಾಗ, ಆಮೇಲೆ ಏರ್‌ಪೋರ್ಟ್‌ನಿಂದ ರೂಮಿಗೆ ಹೋಗುವುದು ಯಾವಾಗ ಎಂದುಕೊಳ್ಳುತ್ತ ಮತ್ತಿಷ್ಟು ಕಿರಿಕಿರಿಗೊಳ್ಳಹತ್ತಿದ್ದೆ.

ಅಮ್ಮಾನ್ ಆ ಕತ್ತಲಲ್ಲಿ ಕಂಡ ಚಮಕ್ ಚಮಕ್ ಹಾದಿಗಳು

ಜೋರ್ಡಾನ್‌ಗೆ ಹೋಗಲು ಭಾರತೀಯರಿಗೆ ವೀಸಾ ಆನ್ ಅರೈವಲ್ ವ್ಯವಸ್ಥೆಯಿದೆ. ಗ್ರೂಪ್ ಟೂರ್‌ನಲ್ಲಿ ಹೋದರೆ ವೀಸಾಗೆ ಹಣವೇನೂ ಕಟ್ಟಬೇಕಿಲ್ಲ. ನಮ್ಮ ಟೂರ್ ಆಪರೇಟರ್ ವರ್ಷಕ್ಕೆ ಹನ್ನೆರಡು ಬಾರಿ ಅಲ್ಲಿಗೆ ಟ್ರಿಪ್ ಹೋಗುತ್ತಾನಾದ್ದರಿಂದ ಅವನಿಗೆ ಇದೆಲ್ಲ ಅತೀ ಸುಲಭದ ಕೆಲಸವಾಗಿತ್ತು. ಸ್ವಲ್ಪ ಹೊತ್ತು ಕಾಯುವುದರಲ್ಲೇ ನಾವಿದ್ದ ಕಡೆಗೇ ವೀಸಾ ಸ್ಟಿಕರ್ ಬಂದು, ಎಲ್ಲವೂ ಹೂವೆತ್ತಿದಂತೆ ನಡೆದುಹೋಗಿ, ಕ್ಷಣಮಾತ್ರದಲ್ಲಿ ಪಾಸ್‌ಪೋರ್ಟ್‌ನಲ್ಲಿ ವೀಸಾ ಮುದ್ರೆ ಬಿದ್ದಿತು.

ಹೊರಬಂದು ನಮ್ಮ ಲಗೇಜಿಗಾಗಿ ಕಾಯುತ್ತ ನಿಂತೆವು. ನಿದ್ರೆಯಿಲ್ಲದ ದೇಹ ವಿಶ್ರಾಂತಿ ಬೇಕೆಂದು ಅರಚಿಕೊಳ್ಳುತ್ತಿತ್ತು. ನಮ್ಮ ಜೋರ್ಡಾನಿಯನ್ ಗೈಡ್ ಅತ್ತಿಂದಿತ್ತ ಓಡಾಡಿ ಉಳಿದ ಎಲ್ಲ ಫಾರ್ಮಾಲಿಟೀಸ್ ಮಾಡುತ್ತಿದ್ದ.

ಆಗಲೇ ಆ ಘಟನೆ ನಡೆದದ್ದು!

ಪಕ್ಕದಲ್ಲಿ ಯಾವುದೋ ದೇಶದ ಇಬ್ಬರು ಹೆಂಗಸರು ಏನೇನೋ ಸಲಕರಣೆಗಳನ್ನು ಇಟ್ಟುಕೊಂಡು ಒಂದಕ್ಕೊಂದು ಜೋಡಿಸುತ್ತಿದ್ದರು. ಸುಮ್ಮನೆ ನಿಂತಿದ್ದರಿಂದ ಸಮಯ ಕಳೆಯಲು ಕುತೂಹಲದಿಂದ ಅದನ್ನೇ ನೋಡುತ್ತಾ ನಿಂತೆ. ಒಂದೆರಡು ಮೂರು ಉದ್ದದ ಪಟ್ಟಿಗಳನ್ನು ತೆಗೆದರು, ಅದಕ್ಕೆ ಮತ್ತೇನೋ ಜೋಡಿಸಿದರು, ಏನೋ ಕಟ್ಟಿದರು …. ಎಲ್ಲವೂ ವಿಚಿತ್ರವಾಗಿ ಕಾಣಿಸುತ್ತಿತ್ತು.

ಇದು ಏನಿರಬಹುದು ಅಂದುಕೊಳ್ಳುವುದರಲ್ಲಿ ಆಕೆ ಅಲ್ಲಿಗೆ ಬಂದಿದ್ದು! ಮೂರು-ಮೂರೂವರೆ ಅಡಿಯಷ್ಟಿದ್ದ ಸುಮಾರು ಅರವತ್ತು, ಅರವತ್ತೈದು ವರ್ಷದ ಹೆಂಗಸೊಬ್ಬರು ಕೂತಿದ್ದ ವೀಲ್ ಛೇರನ್ನು ಏರ್‌ಪೋರ್ಟ್ ಸಹಾಯಕ ತಳ್ಳಿಕೊಂಡು ಬಂದ. ಆಕೆಗೆ ಕುತ್ತಿಗೆಯಿಂದ ಹಿಡಿದು, ಕಾಲಿನವರೆಗೂ ಯಾವ ಭಾಗವೂ ಸ್ವಾಧೀನದಲ್ಲಿ ಇದ್ದಂತೆ ಕಾಣಲಿಲ್ಲ. ಹಾಗಾಗಿ ಕುತ್ತಿಗೆಯನ್ನು ಹಿಂದಕ್ಕೆ ವಾಲಿಸಿ ಚಲನೆಯಿಲ್ಲದಂತೆ ಮಲಗಿದ್ದರು. ಜೊತೆಗಿದ್ದ ಮೂವತ್ತರ ಆಸುಪಾಸಿನ ಈ ಇಬ್ಬರು ಹೆಂಗಸರು ಕೊನೆಗೆ ಜೋಡಿಸುತ್ತಿದ್ದುದು ಸಿದ್ಧವಾಯಿತು ಎಂದರು.

ಆಗ ಆ ಜೋಡಿಸಿದ ಕ್ರೇನ್‌ನ ಕೊಂಡಿಯಂಥ ಭಾಗವೊಂದು ಬಂದು ವೀಲ್ ಛೇರ್‌ನಲ್ಲಿ ಕುಳಿತಿದ್ದಾಕೆಯ ತಲೆಯ ಭಾಗದಲ್ಲಿದ್ದ ರಬ್ಬರ್ ಬೆಲ್ಟನ್ನು ತನ್ನ ಕುಣಿಕೆಗೆ ಸಿಕ್ಕಿಸಿಕೊಂಡು, ಪುಟ್ಟ ಮಕ್ಕಳಿಗೆ ಜೋಲಿ ಕಟ್ಟುತ್ತಿದ್ದ ರೀತಿ ಮಾಡಿಕೊಂಡು, ಹಗುರವಾಗಿ ಏರ್‌ಪೋರ್ಟಿನ ವೀಲ್ ಛೇರ್‌ನಿಂದ ಅವರ ವೀಲ್ ಛೇರ್‌ಗೆ ವರ್ಗಾಯಿಸಿತು. ಆಕೆಗೆ ದೈಹಿಕ ಶ್ರಮವೇನೂ ಆಗದೇ ಎಲ್ಲವನ್ನೂ ಯಂತ್ರವೇ ಮಾಡಿದ್ದರೂ ಅಷ್ಟು ಆಗುವುದರಲ್ಲೇ ಆ ಹೆಂಗಸು ಸುಸ್ತಾಗಿ ಹೋಗಿದ್ದರು.

ಜೊತೆಯಲ್ಲಿದ್ದವರು ‘ಇನ್ನೇನು ಆಗೇಹೋಯಿತು’ ಎಂದು ಮಕ್ಕಳನ್ನು ಹುರಿದುಂಬಿಸುವ ರೀತಿಯಲ್ಲಿ ಸಾಂತ್ವನ ಹೇಳುತ್ತಿದ್ದರು. ವರ್ಗಾವಣೆಯಾದ ನಂತರ ವೀಲ್ ಛೇರ್‌ನಲ್ಲಿ ಕುಳಿತ ಹೆಂಗಸಿಗೆ ಕುತ್ತಿಗೆಯಿಡುವ ಜಾಗದಲ್ಲಿ ಸ್ವಲ್ಪ ಆಧಾರ ಕೊಡಲು ಮರೆತದ್ದಕ್ಕೋ ಏನೋ, ಆಕೆಯ ಕುತ್ತಿಗೆ ಪೂರ್ತಿ ಸ್ವಾಧೀನ ತಪ್ಪಿದಂತೆ ಅತ್ತಿತ್ತ ಓಲಾಡಲು ಶುರುವಾಯ್ತು. ಪಕ್ಕದಲ್ಲೇ ನಿಂತಿದ್ದ ನಾನು ಆಕೆ ಎಲ್ಲಿ ಮುಂದಕ್ಕೆ ಬಿದ್ದು ಹೋಗುತ್ತಾರೋ ಎಂದು ಗಾಬರಿಗೊಂಡೆ. ಆ ಹೆಂಗಸರು ಮಿಂಚಿನ ವೇಗದಲ್ಲಿ ಎಲ್ಲವನ್ನೂ ಅತ್ತಿತ್ತ ಸರಿಸಿ ಆ ಹೆಂಗಸಿನ ಕುತ್ತಿಗೆಗೆ ಆಧಾರ ಮಾಡಿಕೊಟ್ಟು, ಸ್ವಾಧೀನ ತಪ್ಪದಂತೆ ಬೆಲ್ಟ್ ಬಿಗಿದರು.

ಸುಧಾರಿಸಿಕೊಂಡ ವೀಲ್ ಛೇರಿನ ಹೆಂಗಸು ನಗುತ್ತಾ ಆ ಗಾಬರಿಯಲ್ಲೂ ‘ನಾನು ಆರಾಮಿದ್ದೇನೆ. ಐ ಆಮ್ ಓಕೆ’ ಅಂತ ಪದೇಪದೇ ಉಳಿದವರಿಗೆ ಧೈರ್ಯ ಹೇಳಿದಾಗ ಉಳಿದವರ ಮುಖದಲ್ಲಿ ನಗು. ಅಂಥ ಸ್ಥಿತಿಯಲ್ಲೂ ಪ್ರಯಾಣ ಮಾಡುವ ಅವರ ವಿಲ್ ಪವರಿಗೂ, ಇಷ್ಟು ಕಷ್ಟಪಟ್ಟು ಅವರನ್ನು ಕರೆದೊಯ್ಯುವ ಆ ಹೆಂಗಸರ ತಾಳ್ಮೆಗೂ ಒಂದು ಸಲಾಮ್ ಹಾಕಿದೆ. ಬರಿದೇ ಒಂದು ಕುರ್ಚಿಯಿಂದ ಮತ್ತೊಂದಕ್ಕೆ ದೇಹವನ್ನು ವರ್ಗಾಯಿಸಲು ಅವರು ಪಟ್ಟ ಪಾಡಿನೆದುರು ಜಗತ್ತಿನ ಎಲ್ಲ ಕಷ್ಟವೂ ಕ್ಷುಲ್ಲಕ ಅನ್ನಿಸಲಾರಂಭಿಸಿತು. ಅಷ್ಟರಲ್ಲಿ ನಮ್ಮ ಲಗೇಜ್ ಬಂದಿತು, ಜೊತೆಗೆ ಮತ್ತಿತರ ಕೆಲಸಗಳೂ ಮುಗಿದು ಏರ್‌ಪೋರ್ಟ್‌ನಿಂದ ಬಿಡುಗಡೆಯಾಗಿ ಹೋಟೆಲ್ ತಲುಪುವವರೆಗೂ ತುಂಬ ಆಯಾಸ ಅನ್ನಿಸಲಿಲ್ಲ ….

ಆಹಾ.. ಅಮ್ಮಾನ್

ಹೋಟೆಲ್ ತಲುಪಿದಾಗ ಬಾಗಿಲಲ್ಲಿ ಬೆಲ್ ಬಾಯ್‌ಗಳು ಲಗೇಜ್ ನಮ್ಮ ರೂಮಿಗೆ ತರುತ್ತಾರೆ ಅಂತ ಹೇಳಿದರು. ಏರ್‌ಪೋರ್ಟಿನಲ್ಲಿ ಇರುವಂತೆ ನಮ್ಮ ಹ್ಯಾಂಡ್ ಬ್ಯಾಗ್ ಮತ್ತಿತರ ವಸ್ತುಗಳನ್ನು ಸ್ಕ್ರೀನಿಂಗ್‌ಗೆ ಹಾಕಿದ ನಂತರವೇ ಒಳಗೆ ಬಿಟ್ಟರು. ಆ ರಾತ್ರಿಯಲ್ಲೂ ವೆಲ್ಕಮ್ ಡ್ರಿಂಕ್ ಸಿದ್ಧವಾಗಿತ್ತು. ಕುಡಿದು ದಣಿವಾರುವುದರಲ್ಲಿ ರೂಮ್ ಕೀ ಕೈ ಸೇರಿತು. ಪಡೆದು ಹೊರಡುವುದರಲ್ಲಿ ಒಂದು ಮೂಲೆಯಲ್ಲಿದ್ದ ಡಿನ್ನರ್  ಬಾಕ್ಸ್‌ಗಳನ್ನು ಜೋಡಿಸಿಟ್ಟಿದ್ದನ್ನು ಎಲ್ಲರ ಕೈಗೂ ಕೊಡುತ್ತಾ ಬಂದ ಹೋಟೆಲ್ಲಿನವ.

ಹಸಿವಿಲ್ಲವಾದ್ದರಿಂದ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಬಿದ್ದರೆ ಸಾಕು ಎನ್ನುವಂತೆ ಲಿಫ್ಟ್‌ನತ್ತ ನುಗ್ಗಿದ ನಮ್ಮನ್ನು ನೋಡುತ್ತಾ ನಮ್ಮ ಗೈಡ್ ‘ನಾಳೆ ಬೆಳಿಗ್ಗೆ ಆರಕ್ಕೆ ತಿಂಡಿ ಮುಗಿಸಿ ಸಿದ್ಧವಾಗಿರಿ. ಏಳಕ್ಕೆ ಪೆಟ್ರಾಗೆ ಕರೆದೊಯ್ಯುವ ವ್ಯಾನ್ ಬರುತ್ತದೆ…’ ಅಂತ ಕೂಗು ಹಾಕಿದ.

ಇಂದೂ ಕೂಡಾ ನಮ್ಮ ಲಗೇಜ್ ಸಿಕ್ಕು, ಬಟ್ಟೆ ಬದಲಿಸಿ ನಿದ್ರೆ ಮಾಡಲು ಒಂದು ಘಂಟೆಯಾದರೂ ಬೇಕು … ಅಂದರೆ ನಡುರಾತ್ರಿ ಒಂದೂವರೆಗೆ ಮಲಗಿ ಬೆಳಗಿನ ನಾಲ್ಕೂ ಮುಕ್ಕಾಲಿಗೆ ಏಳಬೇಕು! ಎರಡು ದಿನಗಳಲ್ಲಿ ಆಗೀಗ ಅದುವರೆಗೆ ಸಿಕ್ಕ ಪುಡಿನಿದ್ರೆ ಹೆಚ್ಚೆಂದರೆ ನಾಲ್ಕು ಘಂಟೆ. ಇನ್ನು ಇವತ್ತಿನದ್ದು ಮೂರೂ ಚಿಲ್ಲರೆ ಘಂಟೆ ನಿದ್ರೆ ಸಿಕ್ಕುತ್ತದೆ ಎಂದಿಟ್ಟುಕೊಂಡರೂ ಒಟ್ಟಾರೆ ಎರಡು ದಿನಕ್ಕೆ ಸೇರಿ ಎಂಟು ಘಂಟೆ ಮೀರುವುದಿಲ್ಲ ಅಂತಾಯಿತು! ಈ ಲೆಕ್ಕಾಚಾರ ಮನಸ್ಸಿಗೆ ಬಂದ ಕೂಡಲೇ ಮತ್ತಿಷ್ಟು ನಿದ್ರೆ ಆವರಿಸಿದ ಹಾಗನ್ನಿಸಿತು. ಹಾಸಿಗೆಗೆ ಬಿದ್ದಿದ್ದೇ ತಡ ಗಾಢನಿದ್ರೆ…

।ಇನ್ನು ನಾಳೆಗೆ ।

‍ಲೇಖಕರು avadhi

16 August, 2017

2 Comments

  1. Renuka

    ಸೂಪರ್

    • ಭಾರತಿ ಬಿ ವಿ

      Thank you Renuka 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading