ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನೂ ಆಗಿದ್ದ ನನ್ನ ಪಪ್ಪ…

ಶೀಲಾ ಪೈ 

ನನ್ನ ಅಮ್ಮನನ್ನು ಕಂಡ ನೆನಪಿಲ್ಲ ನನಗೆ. ಮಮ್ಮಿ ಎಂದು ಅವಳನ್ನು ಕರೆಯುತ್ತಿದ್ದೆ ಎಂದು ಎಲ್ಲರೂ ಹೇಳಿದ್ದು ಗೊತ್ತು ಅಷ್ಟೇ. ನಾನು, ಅಣ್ಣ ಹುಟ್ಟುವಾಗ ಅವರಿಬ್ಬರೂ ಬೊಂಬಾಯಿಯಲ್ಲಿ ಇದ್ದುದರಿಂದ ಪಪ್ಪ, ಮಮ್ಮಿ ಅಂತ ಕರೆಯಲು ಹೇಳಿಕೊಟ್ಟಿದ್ದು ಅಂತ ಕಾಣುತ್ತದೆ. ೧೯೭೨ರಲ್ಲಿ ಅಮ್ಮ ಸತ್ತಾಗ ನನಗೆ ಎರಡು ವರ್ಷ, ಅಣ್ಣನಿಗೆ ನಾಲ್ಕು. ಪಪ್ಪನ ಅಮ್ಮನನ್ನು ನಾವು ಬಪ್ಪಮ್ಮ ಅಂತ ಕರೆಯುತ್ತಿದ್ದುದು. ಅಮ್ಮ ಸತ್ತ ಮೇಲೆ ನಮ್ಮನ್ನು ನೋಡಿಕೊಳ್ಳಲೆಂದು ಬಪ್ಪಮ್ಮ ಬೊಂಬಾಯಿಗೆ (ಈಗಿನ ಮುಂಬಯಿ, ಆಗೆಲ್ಲ ಬೊಂಬಾಯಿ ಎಂದೇ ಕರೆಯಲ್ಪಡುತ್ತಿತ್ತು) ಬಂದರು. ಕೊಂಕಣಿ ಬಿಟ್ಟು ಬೇರೆ ಭಾಷೆ ಬಾರದ, ಶಾಲೆಗೆ ಹೋಗದ ಬಪ್ಪಮ್ಮ ಎರಡು ಮಕ್ಕಳನ್ನು ಬೊಂಬಾಯಿಯಂತಹ ಊರಿನಲ್ಲಿ ಸಂಭಾಳಿಸಬಲ್ಲಳೇ ಎನ್ನುವ ಸಂಶಯ ಹುಟ್ಟಿ ನಮ್ಮಿಬ್ಬರನ್ನೂ ಉಡುಪಿಗೆ ಅಜ್ಜಿಯ ಜೊತೆಗೆ ರವಾನೆ ಮಾಡಲಾಯಿತು. ಅಣ್ಣ ದೊಡ್ಡಪ್ಪನ ಮನೆಯಲ್ಲಿ, ನಾನು ಸೋದರತ್ತೆಯ ಮನೆಯಲ್ಲಿ ಒಂದು ವರ್ಷವಿದ್ದೆವು. ಪಪ್ಪನ ಲಾಂಡ್ರಿ ಅಂಗಡಿ, ಟ್ರಾನ್ಸ್‌ಪೋರ್ಟ್‌ ವ್ಯವಹಾರ ಬೊಂಬಾಯಿಯಲ್ಲಿ ಇದ್ದುದರಿಂದ ಅಲ್ಲಿ, ಇಲ್ಲಿ ಎರಡೂ ಕಡೆ ಓಡಾಡಿಕೊಂಡಿದ್ದರು.

ಒಂದು ವರ್ಷದ ನಂತರ ಉಡುಪಿಯಲ್ಲಿ ನಮ್ಮ ಮನೆ ಕಟ್ಟಿಸಿ ಅಲ್ಲಿಗೆ ವಾಸಕ್ಕೆ ಬಂದೆವು. ನಮ್ಮೊಡನೆ ಬಪ್ಪಮ್ಮನೂ. ಪಪ್ಪನ ನೆನಪು ನಂಗೆ ಇಲ್ಲಿಂದಲೇ ಶುರು. ಒಳ್ಳೆಯ ಎತ್ತರ, ದೊಡ್ಡ ಹೊಟ್ಟೆ, ಬೋಳು ತಲೆ ಎದುರಿಗೆ ನಾಲ್ಕಾರು ಕೂದಲು, ಹಿಂದೆ ಒಂದು ಸ್ವಲ್ಪ, ಎಲ್ಲವೂ ಬಿಳಿ. ದೊಡ್ಡ ಮೂಗು, ಚಂದದ ಕಣ್ಣು, ತುಟಿಗಳು, ಜೋರಾಗಿ ನಕ್ಕರೆ ಕಣ್ಣು ಕಿರಿದಾಗಿ ಕಣ್ಣ ಕೊನೆಯಿಂದ ಹರಿಯುತ್ತಿದ್ದ ನೀರನ್ನು ಹೆಗಲ ಮೇಲೆ ಸದಾ ಇಟ್ಟುಕೊಂಡಿರುತ್ತಿದ್ದ ಸಣ್ಣ ಬೈರಾಸಿನಿಂದ ಒರೆಸಿಕೊಳ್ಳುತ್ತಿದ್ದ ಚಿತ್ರ ಚಿತ್ತದಲ್ಲಿ ಕೆತ್ತಿದಂತಿದೆ. ಕೆಲವು ತಿಂಗಳು ಉಡುಪಿಯಲ್ಲಿ, ಕೆಲವು ತಿಂಗಳು ಬೊಂಬಾಯಿಯಲ್ಲಿ ಇರುತ್ತಿದ್ದ ಪಪ್ಪ ಊರಿಗೆ ಯಾವಾಗ ಬರುತ್ತಾರೋ ಎಂದು ನಾನು ಯಾವಾಗಲೂ ಕಾಯುತ್ತಿರುತ್ತಿದ್ದೆ. ಮನೆಯಲ್ಲಿ ಅಜ್ಜಿಗೆ ಬೇಕಾದ ಎಲ್ಲ ಸೌಕರ್ಯಗಳೂ ಇದ್ದವು. ಶಾಲೆಯಿಂದ ಬರುವ ವೇಳೆಗೆ ಅಡಿಗೆ ಮನೆಯಲ್ಲಿ ಊಟದ ಬಟ್ಟಲು, ಕುಡಿಯಲು ನೀರು, ಬಿಸಿ ಬಿಸಿ ಅಡಿಗೆ ತಯಾರಿಸಿಟ್ಟು ಕಿಟಕಿಯ ಬಳಿ ನಮ್ಮನ್ನು ಕಾಯುತ್ತ ಕುಳಿತಿರುತ್ತಿದ್ದರು. ಅಗ ಬಪ್ಪಮ್ಮನಿಗೆ ಅರವತ್ತೈದರ ಮೇಲೆ ವಯಸ್ಸು ಆಗಿತ್ತು.

ಪ್ರತಿಸಲ ಪಪ್ಪ ಊರಿಗೆ ಬಂದಾಗಲೂ ನನಗಿನ್ನು ಈ ಮಕ್ಕಳ ಜಗಳ ಸುಧಾರಿಸಲು ಸಾಧ್ಯವಿಲ್ಲ. ನೀನಿನ್ನು ಇಲ್ಲಿಯೇ ಇರು ಎನ್ನುತ್ತಿದ್ದರು. ಪಪ್ಪಾ ಹ್ಞೂ, ಹ್ಞೂ ಅನ್ನುತ್ತಲೇ ಮತ್ತೆ ಬೊಂಬಾಯಿಗೆ ಹೋಗುತ್ತಿದ್ದರು. ವಾಪಸು ಬರುವ ದಿನ ಯಾವಾಗಲೂ ನಕ್ಕಿ ಇರುತ್ತಿರಲಿಲ್ಲ. ಬಸ್ಸಲ್ಲೋ, ತನ್ನದೇ ಟ್ರಕ್‌ನಲ್ಲೋ ಹತ್ತಿ ಬಂದುಬಿಡುತ್ತಿದ್ದರು. ಬರಬಹುದೆನ್ನುವ ನಿರೀಕ್ಷೆಯಿರುವಾಗ ಇಡಿ ದಿನ ರಿಕ್ಷಾದ ಸದ್ದು ಕೇಳುತ್ತದೋ ಎಂದು ಕಿವಿ ಸೂಕ್ಷ್ಮ ಮಾಡಿಕೊಂಡೇ ಇರುತ್ತಿದ್ದೆ. ನಮ್ಮ ಓಣಿಯ ತಿರುವಿನಲ್ಲಿ ರಿಕ್ಷಾದ ಸದ್ದೇನಾದರೂ ಕೇಳಿಸಿ ಅದು ನಮ್ಮ ಮನೆಯ ಮುಂದೆ ನಿಲ್ಲದೆ ಮುಂದೆ ಹೋದರೆ ಆಗುತ್ತಿದ್ದ ನಿರಾಸೆ ಅಷ್ಟಿಷ್ಟಲ್ಲ. ಒಂದೊಂದು ಸಲ ಎರಡು, ಮೂರು ದಿನ ಕಾದ ಮೇಲೆಯೇ ಪಪ್ಪ ಬರುತ್ತಿದ್ದುದು. ಅವತ್ತೆಲ್ಲ ಹಬ್ಬದ ಸಂಭ್ರಮ ನನಗೆ. ನನಗೋಸ್ಕರ ಚಪ್ಪಲಿಗಳು, ಬಟ್ಟೆಬರೆಗಳು ಮಾತ್ರವಲ್ಲದೆ ಹೊಳೆಯುವ ಬಿಂದಿಗಳು, ನೇಲ್ ಪಾಲಿಶ್ ಮುಂತಾದವುಗಳನ್ನೂ ತರುತ್ತಿದ್ದರೆಂದರೆ ಎಷ್ಟೆಲ್ಲಾ ಯೋಚನೆ ಮಾಡುತ್ತಿದ್ದರೆಂದು ಊಹಿಸಬಲ್ಲಿರಿ.

ಊರಲ್ಲಿದ್ದಾಗಲೂ ಅಷ್ಟೇ. ಮನೆಯ ಹಿಂದೆ ಬೆಂಡೆಕಾಯಿ, ಅಲಸಂದೆ ಮುಂತಾದ ತರಕಾರಿ ಬೆಳೆಸುವುದು. ತೆಂಗಿನ ತೋಟ ನೋಡಿಕೊಳ್ಳುವುದು ಮಾಡುತ್ತಿದ್ದರು. ಅಜ್ಜಿಗೆ ಅಡುಗೆಮನೆಯಲ್ಲಿ ತರಕಾರಿ ಹೆಚ್ಚಿಕೊಡುವುದು, ಕಾಯಿ ತುರಿದು ಕೊಡುವುದು ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ನಿಂಬೆ ಹಣ್ಣು, ಚಿಕ್ಕು, ಪಪ್ಪಾಯ, ಹಲಸು, ತೆಂಗು ಮುಂತಾದವೆಲ್ಲ ಯಥೇಚ್ಛವಾಗಿ ಬೆಳೆಯುತ್ತಿದ್ದರೆ ಅದಕ್ಕೆ ಪಪ್ಪನ ಉಮೇದಿಯೇ ಕಾರಣ. ಮನೆವಾರ್ತೆಯಲ್ಲಿ ಎಷ್ಟು ಶ್ರದ್ಧೆಯೆಂದರೆ ನಾವು ಟಿಫಿನ್ ಮಾಡಲು ಬಂದರೆ ಸ್ವತಃ ನಿಂತು ದೋಸೆ ಹೊಯ್ದು ಕೊಡುವುದು, ಚೆನ್ನಾಗಿ ಬೆಣ್ಣೆ ಹಚ್ಚಿ ಬ್ರೆಡ್‌ಟೋಸ್ಟ್ ಮಾಡಿಕೊಡುವುದು ಇವೆಲ್ಲ ಬಹಳ ಇಷ್ಟಪಟ್ಟುಕೊಂಡು ಮಾಡುತ್ತಿದ್ದರು. ಮನೆಗೆ ನೆಂಟರಿಷ್ಟರು, ನನ್ನ ಸ್ನೇಹಿತೆಯರು ಬಂದರೆ ತಿನ್ನಲು ದೋಸೆಯೋ ಹಣ್ಣೋ ಕೊಡದೆ ಕಳುಹಿಸಿಕೊಟ್ಟದ್ದೇ ಇಲ್ಲ. ಅಂತಹ ಅಂತಃಕರಣ ನಮ್ಮ ಪಪ್ಪನದ್ದು. ಬಹಳ ಸಣ್ಣವಳಿದ್ದಾಗ ಒಮ್ಮೆ ಸಿಕ್ಕಾಪಟ್ಟೆ ಹಟ ಹಿಡಿದು ಅಳುತ್ತಿದ್ದ ನನ್ನನ್ನು ಅಡಿಕೋಲಿನಿಂದ ಹೊಡೆದು ಆಮೇಲೆ ತಾವೇ ಸುಸ್ತಾಗಿ ಕೂತುಬಿಟ್ಟಿದ್ದ ನೆನಪೊಂದು ಕಾಡುತ್ತದೆ.

ನನ್ನ ಪಪ್ಪ ಹುಟ್ಟಿದ್ದು ೧೯೩೫ ಆಗಸ್ಟ್ ೧೧ರಂದು. ಎಂಟು ಗಂಡು, ಮೂರು ಹೆಣ್ಣುಮಕ್ಕಳ ತುಂಬು ಕುಟುಂಬ. ಅಜ್ಜನಿಗಿದ್ದ ಒಂದು ಹೋಟೆಲ್‌ನಲ್ಲಿ ದೊಡ್ಡ ಸಂಸಾರದ ನಿರ್ವಹಣೆಯಾಗಬೇಕು. ಎರಡು ಜೊತೆ ಬಟ್ಟೆ ಮಾತ್ರ ಪ್ರತಿಯೊಬ್ಬರಿಗೂ. ರಾತ್ರಿಯ ಹೊತ್ತು ಮಕ್ಕಳು ಸಾಲಾಗಿ ಊಟಕ್ಕೆ ಕುಳಿತರೆ ಕುಚ್ಚಲಕ್ಕಿಯ ಗಂಜಿ ಒಬ್ಬೊಬ್ಬರಿಗೆ ಒಂದೊಂದೇ ಸೌಟು, ನಿತ್ಯ ಒಬ್ಬೊಬ್ಬರಿಗೆ ಒಂದು ಸೌಟು ಹೆಚ್ಚು ಹೀಗಿತ್ತಂತೆ. ಬೆಳೆಯುವ ಮಕ್ಕಳಿಗೆ ಹಸಿವು, ಮನೆಯಲ್ಲಿ ಹಂಚಿ ತಿನ್ನುವ ಪರಿಸ್ಥಿತಿ, ಇದು ಗಂಡು ಮಕ್ಕಳ ಕತೆ. ಇನ್ನು ಹೆಂಗಸರ ಪಾಡು ಏನೋ ದೇವರೇ ಬಲ್ಲ. ಹತ್ತನೆಯ ತರಗತಿಯಲ್ಲಿ ಒಂದು ವಿಷಯದಲ್ಲಿ (ಇಂಗ್ಲಿಷ್ ಎಂದು ಹೇಳಿದ ನೆನಪು) ಫೇಲಾದ ಪಪ್ಪ ಮರುವರ್ಷ ಮನೆಯಲ್ಲಿ ಹೇಳದೆ ಮಂಗಳೂರಿಗೆ ಓಡಿಹೋದರು. ಹೊಟ್ಟೆ ಕಾಯುತ್ತಿತ್ತು ತನ್ನಿಂದ ಹಸಿವು ತಡೆಯಲಾಗಲಿಲ್ಲ ಎಂದು ತನ್ನ ದಾರಿ ತಾನು ನೋಡಿಕೊಳ್ಳುವ ನಿರ್ಧಾರ ಮಾಡಿದ್ದೆ ಎಂದು ಹೇಳಿದ ನೆನಪು. ಆ ಕಾಲದಲ್ಲಿ ಮನೆಯಿಂದ ಬರಿಗೈಯಲ್ಲಿ ಓಡಿಹೋದ ಮಕ್ಕಳು ಸೇರುವುದು ಹೋಟೆಲುಗಳನ್ನು. ಪಪ್ಪನೂ ಯಾವುದೋ ಹೋಟೆಲಿನಲ್ಲಿ ಕೆಲಸಕ್ಕೆ ನಿಂತರು. ಒಂದೋ, ಎರಡೋ ವರ್ಷ ಕೆಲಸ ಮಾಡಿದವರು ಕೆಲವು ರೂಪಾಯಿಗಳನ್ನು ಕೂಡಿಸಿ ಮನೆಯಲ್ಲಿ ಹೇಳದೇ ಬೊಂಬಾಯಿಗೆ ಹೋದರು. ತನ್ನಲ್ಲಿ ಸಂಗ್ರಹವಾದ ಹಣವನ್ನು ಆಪತ್ಕಾಲಕ್ಕೆ ಇರಲಿ ಎಂದು ಸಂಬಂಧದಲ್ಲಿ ಅಣ್ಣನಾಗಬೇಕಾದ ಒಬ್ಬರಲ್ಲಿ ಇರಿಸಿ ದುಡಿಯಲು ನಿಂತರು. ಹೊಟ್ಟೆ ಹೊರೆಯಲು ಹಲವಾರು ಕೆಲಸಗಳನ್ನು ಮಾಡಿದರು. ಪೋಸ್ಟಾಫೀಸಿನ ಎದುರು ನಿಂತು, ಅನಕ್ಷರಸ್ಥರಿಗೆ ಅರ್ಜಿಗಳನ್ನು ತುಂಬಿಸಿಕೊಟ್ಟು ಕೆಲವು ಆಣೆಗಳನ್ನು ಸಂಪಾದಿಸುತ್ತಿದ್ದರು. ಸಾಯಂಕಾಲದ ಹೊತ್ತು ಯಾವುದೋ ಹೋಟೆಲಿನಲ್ಲಿ ಚಪಾತಿ ಲಟ್ಟಿಸಿ ಕೊಡುತ್ತಿದ್ದರು. ಫುಟ್‌ಪಾತ್‌ನಲ್ಲಿ ಮಲಗಿದ ದಿನಗಳಿದ್ದವು. ಕಷ್ಟಪಟ್ಟು ಬೇರೆ ಬೇರೆ ವ್ಯಾಪಾರಗಳನ್ನು ನಿಯತ್ತಿನಿಂದ ಮಾಡಿ ಮೇಲೆ ಬಂದರು. ಸೋಮವಾರ ಮಾತ್ರ ದುಡಿಯುತ್ತಿರಲಿಲ್ಲ.

ಪ್ರತಿ ಸೋಮವಾರದಂದು ಹಿಂದಿ ಸಿನಿಮಾ ನೋಡುವ ಅಭ್ಯಾಸವಿತ್ತು. ಬಾಡಿಗೆಗೆ ಸೂಟು ಪಡೆದುಕೊಂಡು ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡ ಒಂದು ಇಡೀ ಆಲ್ಬಮ್ ಇದೆ ನಮ್ಮನೆಯಲ್ಲಿ. ಯಾರೋ ನೀನು ರಾಜೇಶ್ ಖನ್ನಾ ತರಹ ಇದ್ದಿ ಅಂದಿದ್ದರ ಸೈಡ್ಎಫೆಕ್ಟ್ ಇರಬೇಕು! ಊರಿಗೆ ಬಂದಾಗಲೆಲ್ಲ ರಾತ್ರಿ ನಾವು ಮಲಗುವಾಗ ಹಳೆಕಾಲದ ಚಂದದ ಹಾಡುಗಳನ್ನು ಟೇಪ್‌ರೆಕಾರ್ಡರ್‌ನಲ್ಲಿ ಮೆಲುವಾಗಿ ಹಾಕಿಡುತ್ತಿದ್ದರು. ಹಾಡು ಕೇಳುತ್ತಲೇ ಮಲಗಿಬಿಡುತ್ತಿದ್ದೆವು. ಒಳ್ಳೆಯ ಸಂಗೀತವನ್ನು ಕೇಳುವ ಅಭಿರುಚಿ ನನ್ನಲ್ಲಿ ಬೆಳೆದದ್ದು ಹೀಗೆ. ಭೀಮಸೇನ ಜೋಶಿಯವರ ಭಜನೆ, ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್, ಬಿಸ್ಮಿಲ್ಲಾ ಖಾನ್ ಅವರ ಶೆಹನಾಯಿ ಎಂದೆಲ್ಲ ಮನೆಗೆ ಕ್ಯಾಸೆಟ್ಟುಗಳನ್ನು ತರುತ್ತಿದ್ದರು. ಕೆಲವು ವರ್ಷಗಳು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ದುಡ್ಡು ಕೂಡಿಟ್ಟವರು ಸಯನ್‌ನಲ್ಲಿ ಲಾಂಡ್ರಿ ಒಂದನ್ನು ತೆರೆದರು. ಒಬ್ಬರೇ ನಿಭಾಯಿಸುತ್ತಿದ್ದರು. ಇಸ್ತ್ರಿ ಮಾಡುವುದು, ಊಟ, ತಿಂಡಿ ಮಲಗುವುದು ಎಲ್ಲವೂ ಅಲ್ಲೇ. ದೂರದ ನೆಂಟರೊಬ್ಬರು ಲಾರಿ ಒಂದನ್ನು ಕೊಂಡು ಯಾವುದೋ ಅಪಶಕುನವಾಯಿತೆಂದು ಮಾರಾಟ ಮಾಡುವೆ ಎಂದಾಗ ಕಡಿಮೆ ದರದಲ್ಲಿ ಲಾರಿ ಕೊಂಡರು. ಮಂಗಳೂರು, ಕೇರಳ, ಬೊಂಬಾಯಿ ಹೀಗೆ ವಿವಿಧ ರಾಜ್ಯಗಳಿಗೆ ಸಕ್ಕರೆ, ಅಕ್ಕಿ ಇತ್ಯಾದಿಗಳನ್ನು ಸರಬರಾಜು ಮಾಡುವ ಟ್ರಾನ್ಸ್‌ಪೋರ್ಟ್ ಆಫೀಸುಗಳಲ್ಲಿ ಗಾಡಿ ಲೋಡ್, ಅನ್ಲೋಡ್ ಆಗುತ್ತಿತ್ತು. ಘಾಟ್‌ಕೊಪರ್‌ನಲ್ಲಿ ಒಂದು ರೂಮಿನ ಫ್ಲ್ಯಾಟ್ ಕೊಂಡರು. ಅಮ್ಮನನ್ನು ಮದುವೆಯಾಗಿ ಕರಕೊಂಡು ಬಂದದ್ದು ಇಲ್ಲಿಗೇ. ನವವಧು ನಲ್ಲಿ ತಿರುಗಿಸಿದಾಗ ನೀರು ಬರುವುದನ್ನು ನೋಡಿ ಸಂತೋಷದಿಂದ ಕುಣಿದಾಡಿದ್ದನ್ನು ಅಮ್ಮನ ಬಗ್ಗೆ ಯಾವತ್ತೂ ಮಾತನಾಡದ ಪಪ್ಪ ಒಂದೆರಡು ಬಾರಿ ನನ್ನಲ್ಲಿ ಹೇಳಿದ್ದರು.

ಅಮ್ಮನ ಕತೆಯೇ ಬೇರೆ. ಅಮ್ಮನ ಅಮ್ಮ ತೀರಿಕೊಂಡ ಮೇಲೆ ಅವರ ಅಪ್ಪ ಮತ್ತೆ ಮದುವೆಯಾಗಿದ್ದರು. ಮೊದಲ ಹೆಂಡತಿಯ ಮಕ್ಕಳು ದಿಕ್ಕಾಪಾಲಾಗಿದ್ದರು. ಅಮ್ಮ ತನ್ನ ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಆಗಿನ ಕಾಲ, ಚಿಕ್ಕಪ್ಪ ಚೆನ್ನಾಗಿ ಮದುವೆ ಮಾಡಿಕೊಟ್ಟರು. ನಮ್ಮ ತಂದೆಯ ಮನೆ ಇದ್ದ ರಸ್ತೆಯ ಎದುರು ಬದಿಯಲ್ಲಿದ್ದ ಅಜ್ಜನ ಮನೆಯಿಂದ ದಿಬ್ಬಣ ಬಂದಿತ್ತು. ಗೋಧೂಳಿ ಲಗ್ನ, ಅಷ್ಟುಹೊತ್ತಿಗೆ ನಮ್ಮ ತಂದೆ ತನ್ನ ಕಾಲುಗಳ ಮೇಲೆ ನಿಂತಿದ್ದರು. ಅಮ್ಮನಿಗೆ ಒಡವೆಗಳನ್ನೂ ತಂದಿದ್ದರಂತೆ. ಅಮ್ಮ, ಪಪ್ಪ ಸಂಸಾರ ಮಾಡಿದ್ದು ಏಳು ವರ್ಷಗಳು ಮಾತ್ರ. ೧೯೭೦ರಲ್ಲಿ ನಾನು ಹುಟ್ಟಿದೆ. ಆಮೇಲೆ ಅಮ್ಮನ ಅರೋಗ್ಯ ಹಾಳಾಗುತ್ತಲೇ ಹೋಯಿತು. ಇವತ್ತಿಗೂ ಅಮ್ಮನಿಗೆ ಏನಾಗಿತ್ತು ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಸ್ಪ್ಲೀನ್ ಎನ್‌ಲಾರ್ಜ್ ಆಗಿತ್ತು, ಹನ್ನೆರಡು ಬಾಟಲಿ ರಕ್ತ ಕೊಡಬೇಕಾಯಿತು, ಒಂದು ತಿಂಗಳು ಆಸ್ಪತ್ರೆಯಲ್ಲಿದ್ದಳು ಎಂದೆಲ್ಲ ಆಮೇಲೆ ಯಾರು ಯಾರೋ ಹೇಳಿದ್ದನ್ನು ಕೇಳಿದ್ದೇನೆ. ಕ್ಯಾನ್ಸರ್ ಇರಬಹುದು ಎಂದು ನನ್ನ ಅಂದಾಜು. ಐವತ್ತೊಂದು ವರ್ಷಗಳ ಹಿಂದಿನ ಮಾತು, ಇವತ್ತಿನಂತೆ ಡಯಗ್ನೋಸಿಸ್ ಇರಲಿಲ್ಲವಷ್ಟೆ. ಆಮೇಲೆ ಉಡುಪಿಗೆ ಬಂದೆವು. ಪಪ್ಪ ಎಂದೂ ಆಗಿಹೋದುದರ ಬಗ್ಗೆ ಮಾತಾಡುತ್ತಿರಲಿಲ್ಲ. ಮರುಮದುವೆಯ ಯೋಚನೆ ಮಾಡಲಿಲ್ಲ. ನನ್ನನ್ನು ಮತ್ತು ಅಣ್ಣನನ್ನು ಇನ್ನಿಲ್ಲದಷ್ಟು ಪ್ರೀತಿಯಿಂದ ಬೆಳೆಸಿದರು. ಒಂದು ದಿನವಾದರೂ ಜೋರಾಗಿ ಮಾತಾಡಿದ್ದಾಗಲಿ, ತಾಳ್ಮೆ ಕಳಕೊಂಡದ್ದಾಗಲಿ ನೆನಪಿಲ್ಲ. ಯಾರಾದರೂ ಸ್ನೇಹಿತೆಯರ ಅಮ್ಮಂದಿರು ನಂಗೆ ಅಮ್ಮನಿಲ್ಲವೆಂದು “ಪಾಪ” ಅಂದರೆ ನಿಜಕ್ಕೂ ನಂಗೆ ಆಶ್ಚರ್ಯವಾಗುತ್ತಿತ್ತು. ಯಾಕೆ ಪಾಪ ಅನ್ನುತ್ತಾರೆ ಎಂದು!? ಅಮ್ಮನಿಲ್ಲದ ಝಳ ನನಗೆ ತಗುಲಿದ್ದು ಮದುವೆಯಾದ ಮೇಲೆ! ಮದುವೆಯಾದ ಮೇಲೆ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸ ಅಮ್ಮಂದಿರು ಮಾಡಿದಷ್ಟು ಜಾಣ್ಮೆಯಿಂದ ಅಪ್ಪಂದಿರು ಮಾಡಲಾರರು.

ನನಗಿಲ್ಲಿ ಒಂದು ಮಾತು ಹೇಳಬೇಕು. ಕವನಗಳಲ್ಲಿ, ಗದ್ಯಬರಹಗಳಲ್ಲಿ ಅಮ್ಮನ ಬಗ್ಗೆ ಬಹಳ ಬರಹಗಳಿವೆ. ಪಿ. ಲಂಕೇಶರ “ಅವ್ವ” ಕವನ ವೈಯಕ್ತಿಕವಾಗಿ ನನಗೆ ಬಹಳ ಇಷ್ಟ. ಆದರೆ ಅಮ್ಮ ಮಾತ್ರ ಆ ರೀತಿಯಿರುವುದು ಎಂದು ಒಪ್ಪಲು ನಾನು ತಯಾರಿಲ್ಲ. ಅಮ್ಮನ ಪ್ರೀತಿ ಕೊಡಬಲ್ಲ ಯಾರಾದರೂ ಆ ಸ್ಥಾನವನ್ನು ತುಂಬಲು ಸಾಧ್ಯ. ಸಾಮಾನ್ಯವಾಗಿ ಎಲ್ಲರಿಗೂ ಅಮ್ಮನೇ ಆ ಸ್ಥಾನದಲ್ಲಿರುವುದರಿಂದ ಅಮ್ಮನ ಮಾತೇ ಬರಹಗಳಲ್ಲಿ ಬರುತ್ತದೆ ಎಂದು ನನಗನಿಸುತ್ತದೆ. ಚಿಕ್ಕವಳಿರುವಾಗ ನಾನು ಓಡಿ ಅಥವಾ ಅಡಿ ಕೆಳಗೆ ಬಿದ್ದರೆ ನಾನು “ಪಪ್ಪಾ” ಎಂದೇ ಕೂಗುತ್ತಿದ್ದೆ. ಅಮ್ಮ ಎಂದು ನನ್ನ ಬಾಯಲ್ಲಿ ಯಾವತ್ತೂ ಬಂದಿಲ್ಲ. ಮೊದಲ ಹೆರಿಗೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ನೋವಿನಿಂದ ಕಿರಿಚುವಾಗ “ಪಪ್ಪಾ“ ಎಂದೇ ಕರೆದಿದ್ದು ಕೇಳಿ ನರ್ಸುಗಳು, “ಇವರೊಂದು ವಿಚಿತ್ರ, ಎಲ್ಲರೂ ಅಮ್ಮ ಅಂದರೆ ಇವರು ಪಪ್ಪಾ ಅನ್ನುತ್ತಾರೆ” ಅಂದದ್ದು ನೋವಿನಲ್ಲೂ ಕಿವಿಗೆ ಬಿದ್ದಿತ್ತು. ನನ್ನ ಪಾಲಿಗೆ ಅದು ಸಹಜ, ವಿಚಿತ್ರ ಅಲ್ಲ. ಅಪ್ಪನ ಭುಜಕ್ಕೆ ಭುಜ ಕೊಟ್ಟು ನಮ್ಮನ್ನು ಬೆಳೆಸಿದ ಅಜ್ಜಿಯ ಜೊತೆಗೂ ನನಗೆ ಹೀಗೆಯೇ ಸಲಿಗೆಯಿತ್ತು. ಇಡೀ ಕುಟುಂಬಕ್ಕೆ ಹಿರಿಯರಾಗಿದ್ದ ಅಜ್ಜಿಯನ್ನು ನಾನು ಏಕವಚನದಿಂದಲೇ ಕೊಂಕಣಿಯ “ಗೊ” ಸೇರಿಸಿಯೇ ಕರೆಯುತ್ತಿದ್ದೆ, ನನ್ನ ಪಾಲಿಗೆ ಅವರು ಅಮ್ಮನಂತೆಯೇ ಇದ್ದರು. ಇಂಥಹದಕ್ಕೆಲ್ಲ ಹೀಗೆಯೇ ಎಂದು ರೂಲ್ಸ್ ಇದೆಯೇ? ನಮ್ಮ ನಮ್ಮ ಅನುಭವಗಳು, ಭಾವಗಳು…

ಹಣಕಾಸಿನ ಅನುಕೂಲತೆ ಬಹಳ ಮಂದಿಗಿರುತ್ತದೆ. ಆದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ ದುಡ್ಡಿನ ಸಹಾಯ ಮಾಡುವವರು ವಿರಳ. ಪಪ್ಪನಿಗೆ ಇಂತಹ ದೊಡ್ಡ ಮನಸ್ಸು ಇದ್ದಿತು. ಅವರಿರುವವರೆಗೆ ನಮ್ಮ ಮನೆಗೆ ಕಷ್ಟಸುಖ ಹೇಳಿಕೊಳ್ಳಲು, ಸಲಹೆ ತೆಗೆದುಕೊಳ್ಳಲು, ಕುಳಿತು ಎರಡು ಮಾತನಾಡಲು ನೆಂಟರಿಷ್ಟರು ಬರುತ್ತಿದ್ದರು. ಆ ಕಾಲವೂ ಹಾಗೇ ಇದ್ದಿತು. ಒಮ್ಮೆ ಒಬ್ಬರು ಮಗಳ ಮದುವೆಗೆ ಎರಡು ದಿನವಿದ್ದಾಗ ಹಣದ ಅಡಚಣೆಯಾಗಿ ಮದುವೆ ಕ್ಯಾನ್ಸಲ್ ಮಾಡುವೆ ಎಂದಾಗ ಅವರನ್ನು ತಡೆದು ಕುಟುಂಬದ ಹಿರಿಯರನ್ನು ಒಗ್ಗೂಡಿಸಿ ಹಣ ಸಂಗ್ರಹಿಸಿ ಮದುವೆ ನಡೆಸಿದ್ದ ನೆನಪಿದೆ. ಆಡಂಬರದ ಜೀವನ ಯಾವತ್ತೂ ಇಷ್ಟಪಡುತ್ತಿರಲಿಲ್ಲ. ನಾಲ್ಕು ಜನರ ಹಾಗೆಯೇ ನಾವೂ ಇರಬೇಕು ಎಂದು ಯಾವಾಗಲೂ ಹೇಳುತ್ತಿದ್ದರು. ಅವರೇ ತಂದ ಚಂದದ ಡ್ರೆಸ್ಸುಗಳನ್ನು ಶಾಲೆಗೆ ಹಾಕಲು ಬಿಡುತ್ತಿರಲಿಲ್ಲ. ತಿಳಿಬಣ್ಣದ ಸರಳವಾದ ಉಡುಪುಗಳನ್ನೇ ನನಗಾಗಿ ಆರಿಸುತ್ತಿದ್ದರು. ತಾವು ತೊಡುತ್ತಿದ್ದುದು ಬಿಳಿ ಬಣ್ಣ ಮಾತ್ರವಾದರೂ ನನಗಾಗಿ ಚಂದದ ದಿರಿಸುಗಳನ್ನು ಆಸಕ್ತಿಯಿಂದ ಆರಿಸಿ ಬೊಂಬಾಯಿಯಿಂದ ತರುತ್ತಿದ್ದರು. ನನಗೆ ಬೇಕಾದ ಹಾಗೆ ಪುಸ್ತಕಗಳನ್ನು ಕೊಡಿಸುತ್ತಿದ್ದರು. ಸ್ವತಃ ಹೆಚ್ಚು ಓದದಿದ್ದರೂ ವಿದ್ಯಾವಂತರ ಮೇಲೆ, ಕಲಾವಿದರ ಮೇಲೆ ಬಹಳ ಗೌರವವನ್ನಿರಿಸಿಕೊಂಡಿದ್ದರು. ಚೆಸ್ ಆಡಲು ಕಲಿಸಿದ್ದು ಮಾತ್ರವಲ್ಲ, ಯಾವಾಗ ಕರೆದರೂ ನನ್ನ ಜತೆ ಆಡುತ್ತಿದ್ದರು. ನಾನು ಮದುವೆಯಾಗಿ ಹೊರರಾಜ್ಯಗಳಿಗೆ ವಾಸಕ್ಕೆ ಬಂದ ಮೇಲೆಯೇ ನನಗೆ ಗೊತ್ತಾಗಿದ್ದು ಬಹಳ ಕಡಿಮೆ ಜನಕ್ಕೆ ಚೆಸ್ ಆಡಲು ಬರುವುದು ಎಂದು. ಇವತ್ತು ನಾನು ಬೇಕಾದಾಗ ಆನ್ಲೈನ್ ಚೆಸ್ ಆಡುತ್ತೇನೆ, ನನ್ನ ಮಗನಿಗೆ ಹೇಳಿಕೊಟ್ಟಿದ್ದೇನೆ, ಅವನು ಬೇರೆಯೇ ಲೆವೆಲ್‌ನಲ್ಲಿದ್ದಾನೆ ಎಂದರೆ ಇದೆಲ್ಲದರ ಶ್ರೇಯ ಪಪ್ಪನಿಗೆ ಸಲ್ಲಬೇಕು.

ಫೆಮಿನಿಸ್ಟ್ ಪದವೇ ಗೊತ್ತಿಲ್ಲದ ಪಪ್ಪ ನನ್ನನ್ನು ಅಣ್ಣನಿಗೆ ಸರಿಸಮಾನವಾಗಿಯೇ ಬೆಳೆಸಿದ್ದರು. ಮತ್ತು ಎಲ್ಲ ರೀತಿಯಲ್ಲಿಯೂ ಹಾಗೆಯೆ ನಡೆಸಿಕೊಂಡಿದ್ದರು. ಮೂವತ್ತು ವರ್ಷಗಳ ಕಾಲ ಅವರು ಬೊಂಬಾಯಿಯಲ್ಲಿ ವ್ಯಾಪಾರ ಮಾಡುತ್ತ ಹೊರಗಿನ ಲೋಕವನ್ನು ನೋಡಿದ್ದರ ಪರಿಣಾಮವಿದು ಅಂದುಕೊಳ್ಳುತ್ತೇನೆ. ಪೂಜೆ ಇತ್ಯಾದಿಗಳ ವಿಪರೀತ ಗೌಜಿ ಇರಲಿಲ್ಲ ನಮ್ಮನೆಯಲ್ಲಿ. ನಂದಾದೀಪವನ್ನು ಬೆಳಿಗ್ಗೆ ಹಚ್ಚಿದರೆ ಮುಗಿಯಿತು. ಸಂಜೆ ನಾನು ಅಣ್ಣ ಭಜನೆ ಮಾಡುತ್ತಿದ್ದರೂ ಬಹುಬೇಗ ಅದು ಜಗಳದಲ್ಲಿ ಮುಕ್ತಾಯವಾಗುತಿತ್ತು. ಆಮೇಲೆ ನಿಂತುಹೋಯಿತು. ನಮ್ಮಿಬ್ಬರನ್ನು ಯಾವುದಕ್ಕೂ ಒತ್ತಾಯಿಸುತ್ತಿರಲಿಲ್ಲ. ಜಾತಿಯ ಬಗೆಗೂ ತಲೆಕೆಡಿಸಿಕೊಂಡವರಲ್ಲ. ನನಗೆ ಗೆಳತಿಯರು ಬಹಳ. ಎಲ್ಲರನ್ನೂ ಮನೆಗೆ ಕರೆತರುತ್ತಿದ್ದೆ, ಎಲ್ಲರನ್ನೂ ಸಮಾನವಾಗಿ ಸತ್ಕರಿಸುತ್ತಿದ್ದರು ಪಪ್ಪ. ಇದು ನನಗೆ ಮುಂದೆ ಸರಕಾರಿ ಕ್ವಾರ್ಟರ್ಸ್‌ಗಳಲ್ಲಿ ವಾಸವಾಗುವಾಗ ಎಲ್ಲರೊಡನೆ ಬೆರೆಯುವಲ್ಲಿ ಬಹಳ ಉಪಯುಕ್ತವಾಯಿತು. ನಾನು ಹೈಸ್ಕೂಲಿಗೆ ಬರುವಷ್ಟರಲ್ಲಿ ಉಡುಪಿಗೆ ಪೂರ್ತಿಯಾಗಿ ಶಿಫ್ಟ್ ಆಗಿದ್ದರು. ಯಾವ ವೃತ್ತಿಯನ್ನು ಮಾಡುವುದರಲ್ಲಿಯೂ ಅವಮಾನವಿಲ್ಲ ಎನ್ನುತ್ತಿದ್ದವರು ಬೇರೆ ಬೇರೆ ವ್ಯಾಪಾರಗಳನ್ನು ಹುಟ್ಟುಹಾಕಿ ಯಶಸ್ವಿಯಾಗಿದ್ದರು. ಬಾಯಿಯಲ್ಲಿಯೇ ಎಲ್ಲ ಲೆಕ್ಕಗಳಿರುತ್ತಿದ್ದರೂ ಪ್ರತಿದಿನ ಸಂಜೆ ದಿನದ ಲೆಕ್ಕಾಚಾರಗಳನ್ನು ಕರಾರುವಕ್ಕಾಗಿ ಬರೆದಿಡುತ್ತಿದ್ದರು. ನನ್ನ ಜೀವನದ ಅನುಭವಗಳನ್ನು ನಿನ್ನಲ್ಲಿ ಹೇಳಲು ರೆಡಿ ಇದ್ದೇನೆ, ಆದರೆ ಕೇಳಿಸಿಕೊಳ್ಳಲು ನಿನಗೀಗ ಸಮಯವಿಲ್ಲ ಅಂದಿದ್ದರು. ಆಗ ನನ್ನ ಮಕ್ಕಳಿನ್ನೂ ಚಿಕ್ಕವರು. ಮುಂದೆಂದಾದರೂ…ಅಂದುಕೊಂಡಿದ್ದೆ. ಆ ದಿನ ಬರಲೇ ಇಲ್ಲ. ಕ್ಯಾನ್ಸರ್ ಎಂದು ಡಯಾಗ್ನೋಸಿಸ್ ಆಗಿ ಎರಡು ತಿಂಗಳಿನಲ್ಲೇ ಹೋಗಿಬಿಟ್ಟರು. ನನಗಾಗ ಮೂವತ್ತೆಂಟು ವರ್ಷ.

ಕಾಲೇಜಿಂದ ಬರುವ ಹೊತ್ತಿಗೆ ಮೋಸಂಬಿ ಜ್ಯೂಸ್ ತಯಾರಿಸಿಡುವ ಪಪ್ಪ, ನೀರುದೋಸೆ ತೆಗೆದುಕೊಡುತ್ತ ನಮಗಿಷ್ಟದ ಪೇಪರ್‌ನಂತಹ ಭಾಗ ಬರುವಂತೆ ದೋಸೆ ಹೊಯ್ದು, ಇನ್ನೊಂದು, ಇನ್ನೊಂದು ಎಂದು ಒತ್ತಾಯ ಮಾಡಿ ತಿನ್ನಿಸುವ ಪಪ್ಪ, ಗೆಳತಿಯರು ಬಂದಾಗ ಮಾವಿನಹಣ್ಣು, ಪಪ್ಪಾಯಹಣ್ಣು, ಯಾವುದೂ ಇಲ್ಲದಾಗ ದೋಸೆ ಹಾಕಿಕೊಟ್ಟು ಸತ್ಕರಿಸುವ ಪಪ್ಪ, ಬೇಸಿಗೆಯ ರಜೆಯಲ್ಲಿ ಮಧ್ಯಾಹ್ನ ಕೇರಂ, ಇಸ್ಪೀಟು (ಇದರ ಬಗ್ಗೆ ಗಿಲ್ಟ್ ಇತ್ತು, ಬೇಡದ್ದೇನೋ ಹೇಳಿಕೊಡುತ್ತಿದ್ದೇನೆ ಮಕ್ಕಳಿಗೆ ಎಂದು), ಚೆಸ್, ಸಂಜೆ ಬ್ಯಾಡ್ಮಿಂಟನ್ ಅಂತ ಆಡಿ ಇಡೀ ದಿನ ನಮ್ಮೊಂದಿಗೆ ಕಳೆಯುತ್ತಿದ್ದ ಪಪ್ಪ, ವಾರಕ್ಕೊಮ್ಮೆ ಕೈಯ್ಯಲ್ಲಿ ಪೊರಕೆ ಹಿಡಿದು ಸುತ್ತು ಅಂಗಳ ಗುಡಿಸಿ ಒಣಎಲೆ ರಾಶಿ ಮಾಡಿ ಬೆಂಕಿ ಕೊಟ್ಟು ಮನೆಯ ಅಂಗಳದ ಸ್ವಚ್ಛತೆ ನೋಡಿಕೊಳ್ಳುವ ಪಪ್ಪ, ಸಂಜೆ ಕಾಲೇಜಿಂದ ಬರುವಾಗ ತಡವಾಗುತ್ತದೆ ಎಂದು ಹೇಳಿದ್ದರೂ ಆರೂವರೆಯ ಮೇಲಾದೊಡನೆ ಗೇಟಿನ ಬಳಿ ನಿಂತು ಶತಪಥ ತಿರುಗುತ್ತ ನನ್ನ ಹಾದಿ ಕಾಯುತ್ತಿದ್ದ ಪಪ್ಪ, ಯಾವಾಗಲೂ ಬೆಳ್ಳಗಿನ ಶುಭ್ರ ವೇಷ್ಟಿ, ಬಿಳಿ ಷರ್ಟ್‌, ವೇಷ್ಟಿಯ ಒಂದು ಚುಂಗನ್ನು ನಾಜೂಕಾಗಿ ಕೈಯಲ್ಲಿ ಎತ್ತಿ ಹಿಡಿದು ಘನ ಗಾಂಭೀರ್ಯದಿಂದ ತಲೆಯೆತ್ತಿ ನಡೆಯುತ್ತಾ ನೋಡುಗರಲ್ಲಿ ಗೌರವ ಮೂಡಿಸುವಂತಹ ವ್ಯಕ್ತಿತ್ವವಿದ್ದ ನನ್ನ ಪಪ್ಪ ನನಗೆ ಅಪ್ಪನೂ ಅಮ್ಮನೂ ಆಗಿದ್ದರು.

‍ಲೇಖಕರು avadhi

5 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading