ಪರೇಶ್ ಷರಾಫ್
“ನಿನ್ನ ಬಟ್ಟೆ ಅಲ್ಲೇ ಒಗ್ಕೊಂಡು ಬಾ.. ಇಲ್ಲಿ ಮಳೆ ಶುರುವಾದರೆ ನಿಲ್ಲೋದೇ ಇಲ್ಲ. ಬಟ್ಟೆ ಒಣಗಲಿಕ್ಕೆ ಕಮ್ಮಿ ಅಂದರೆ ಮೂರ್ನಾಲ್ಕು ದಿನ ಆಗ್ತದೆ.” ಮಳೆಗಾಲದಲ್ಲಿ ಊರಿಗೆ ಹೋಗುವಾಗ ಅಮ್ಮ ಫೋನಲ್ಲಿ ಹೇಳೋ ಮಾತುಗಳು ಇವು. “ಅಡ್ಡಿಲ್ಲ ಅಮ್ಮ” ಅಂತ ಹೇಳಿ ಆಮೇಲೆ ಕೊನೇ ಕ್ಷಣದಲ್ಲಿ ಯಾವ ಬಟ್ಟೆಯನ್ನೂ ಒಗೆಯದೇ ದೊಡ್ಡ ಮೂಟೆ ಕಟ್ಟಿಕೊಂಡು ಮನೆ ಒಳಗೆ ಹೋದ ಕೂಡ್ಲೇ ಅಮ್ಮನ ಹತ್ರ ಬೈಸಿಕೊಳ್ಳೋದು ರೂಢಿಯಾಗಿಬಿಟ್ಟಿತ್ತು. ಅಮ್ಮ ಎಲ್ಲ ಬಟ್ಟೆ ಒಗೆದು ಸ್ವಲ್ಪ ಮಳೆ ನಿಂತು ಸೂರ್ಯ ಕಂಡರೆ ಸಾಕು ಹೊರಗೆ ಹೋಗಿ ಒಣಗಿಸೋದು. ಮಳೆ ಶುರು ಆದ್ರೆ ಮತ್ತೆ ಓಡಿ ಹೋಗಿ ವಾಪಸ್ ತರೋದು, ಹೀಗೆ ಮಾಡ್ತಾ ಅರ್ಧ ತೂಕ ಕಡಿಮೆಯಾಗಿರೋದು. ಕೊನೆಗೆ ಮಧ್ಯಾಹ್ನ ಊಟ ಮಾಡಿ ನಿದ್ದೆ ತಾಗ್ತಾ ಇದೆ ಅನ್ನೋ ಹೊತ್ತಿಗೆ ಸುರ್ರಂತ ಮಳೆ ಬಂದು. “ಬಟ್ಟೆ ಒದ್ದೆಯಾಗಿ ಸಾಯಲಿ, ನಾನು ಮತ್ತೆ ಹೋಗುದಿಲ್ಲ” ಅಂತ ಅಮ್ಮ ಹೇಳಿ, ನಾನು ಓಡಿ ಹೋಗಿ ಬಟ್ಟೆ ತರೋ ಅಷ್ಟು ಹೊತ್ತಿಗೆ ನಾನು, ಬಟ್ಟೆ ಎರಡೂ ಒದ್ದೆ.
ಇಂಥ ಅಭ್ಯಾಸದಲ್ಲೇ ಬೆಳೆದ ನನಗೆ, ಅಮೇರಿಕಾದಲ್ಲಿ ನಾನು ತಂಗಿರುವ ಹೋಟೆಲ್ಲಿನ ಲಾಂಡ್ರಿಯಲ್ಲಿ ಮೊದಲ ಬಾರಿ ಕಾಲಿಟ್ಟಾಗ ಭಾರೀ ಕುತೂಹಲ, ಖುಶಿ, ಆಶ್ಚರ್ಯ ಆಗಿತ್ತು. ಮೇಲೆ ಬೋರ್ಡ್ ಅಲ್ಲಿ ೨ ಡಾಲರ್ ಹಾಕಿ ಉಪಯೋಗ ಮಾಡಿಕೊಳ್ಳಬಹುದು ಅಂತ ಬರೆದಿತ್ತು. ಮತ್ತೆ ಪಕ್ಕದಲ್ಲಿ “ವಾಷರ್ ಸೈಕಲ್ ೨೦ ನಿಮಿಷ. dryer ಸೈಕಲ್ ೪೫ ನಿಮಿಷ” ಅಂತ. “ಅಯ್ಯೋ ದೇವರೇ, ಒಗೆದು, ಒಣಗಿ ಬರ್ತದಲ್ಲ. ಅಮ್ಮನಿಗೆ ಆದಷ್ಟು ಬೇಗ ಫೋನ್ ಮಾಡಿ ಹೇಳಬೇಕು. ಅಮ್ಮನ ಆಶ್ಚರ್ಯವನ್ನು ಸಹ ನೋಡಬೇಕು” ಅಂತ ಮನಸಲ್ಲೇ ಅಂದುಕೊಳ್ಳುತ್ತ ಜೇಬಿನಿಂದ ೨ ಡಾಲರ್ ತೆಗೆದೆ. ಈಗ ಶುರುವಾಗಿದ್ದು ನೋಡಿ ರಗಳೆ. ಆ ದುಡ್ಡನ್ನು ಹೇಗೆ ಮಶೀನ್ ಒಳಗೆ ಹಾಕೋದು. ಎಲ್ಲಾದ್ರೂ ಹಾಕಿದ್ದು ಹೆಚ್ಚು ಕಡಿಮೆ ಆದ್ರೆ ಎರಡು ಡಾಲರ್ ಗೋವಿಂದ. ಎರಡು ಡಾಲರ್! ನೂರಾ ಇಪ್ಪತ್ತು ರೂಪಾಯಿ! ಅಲ್ಲಿ ಹೋಗಿ ಹೋಟೆಲಿನವರ ಬಳಿ ಕೇಳೋಣವೇ ಅಂದರೆ “ಅಯ್ಯೋ ಬೇಡ. ಹಳ್ಳಿ ಗುಗ್ಗು ಅಂದ್ಕೊಳ್ತಾರೆ” ಅಂತ ಮನಸು ಹೇಳ್ತಾ ಇತ್ತು. ಸ್ವಲ್ಪ ಹೊತ್ತು ಅಲ್ಲೇ ಕಾದು, ಮತ್ಯಾರೋ ಬಂದು ಉಪಯೋಗ ಮಾಡುತ್ತಿರುವಾಗ, ಅವರಿಗೆ ತಿಳಿಯದಂತೆ ಓರೆಗಣ್ಣಿನಿಂದ ನೋಡಿ ಕೊನೆಗೂ ಆ ಮಷಿನ್ ಹೇಗೆ ಉಪಯೋಗಿಸೋದು ಅಂತ ತಿಳ್ಕೊಂಡೆ. “ಊರಲ್ಲಿ ರಂಗ, ಪರ ಊರಲ್ಲಿ ಮಂಗ” ಎಂಬ ಗಾದೆ ಮಾತಿಗೆ ಹೇಳಿ ಮಾಡಿಸಿದ ಉದಾಹರಣೆಯಾಗಿ ಬಿಟ್ಟಿದ್ದೆ.

“ಅಬ್ಬ” ಅನ್ನುತ್ತ ಒಂದು ಮೂಟೆ ಬಟ್ಟೆ ಮತ್ತು ನಾಲ್ಕು ಚಮಚ ಡಿಟರ್ಜೆಂಟ್ ಪೌಡರ್ ಅದ್ರಲ್ಲಿ ಹಾಕಿ, ಇನ್ನೂ ಇಪ್ಪತ್ತು + ನಲವತ್ತೈದು ನಿಮಿಷ, ಅಂದರೆ ಸುಮಾರು ಒಂದೂ ಕಾಲು ತಾಸು ಆಗ್ತದಲ್ಲ, ರೂಮಿಗೆ ಹೋಗಿ ಆಮೇಲೆ ವಾಪಸ್ ಬರೋಣ ಅಂತ ವಿಚಾರ ಮಾಡಿದೆ. ಹೋಗಿ ವಾಪಸ್ ಬಂದು ಮಶಿನ್ನಿನ ಬಾಗಿಲು ತೆಗೆದು ನೋಡ್ತೇನೆ- ಗರಿ ಗರಿ ಬಿಸಿ ಬಿಸಿ ಬಟ್ಟೆಗಳು. ಎಲ್ಲ ಬಟ್ಟೆಗಳನ್ನು ತಗೊಂಡು ರೂಮಿಗೆ ಓಡಿದೆ. ಭಾರತದಲ್ಲಿ ಯಾವಾಗ ಬೆಳಗಾಗ್ತದೆ. ಯಾವಾಗ ಮನೆಗೆ ಫೋನ್ ಮಾಡಿ ಅಮ್ಮನಿಗೆ ಇದನ್ನು ಹೇಳೋದು ಅನ್ನೋದಷ್ಟೇ ಮನಸಲ್ಲಿ. ಬೆಳ ಬೆಳಿಗ್ಗೆ ಅಮ್ಮ ಏಳೋದಕ್ಕೂ ಮೊದಲೇ ಫೋನ್ ಮಾಡಿ ಎಬ್ಬಿಸಿ ಕಥೆ ಶುರು ಮಾಡಿದೆ. “ಅಮ್ಮ… ಏನು ಆರಾಮಮ್ಮ ಇಲ್ಲಿ. ಹೋಗಿ ಬಟ್ಟೆ ಮಷಿನಲ್ಲಿ ಹಾಕೋದು. ಒಂದೂ ವರೆ ಗಂಟೆ ಬಿಟ್ಟು ನೋಡಿದರೆ ಗರಿ ಗರಿಯಾಗಿ ಒಣಗಿ ಬಂದಿರ್ತದೆ”. ಊರಲ್ಲಿ ಮಳೆಗಾಲದ ನಡುವೆ ಅರೆ ಬರೆ ಒಣಗಿದ ಬಟ್ಟೆಗಳ ನಡುವೆ ಇದ್ದ ಅಮ್ಮ ಇದನ್ನು ಕೇಳಿ- “ಮೊದಲು ಇಂಥ ಮಷೀನ್ ಇದ್ರೆ ತಗೊಂಡು ಬನ್ನಿ, ನಂಗೆ ಆಗಲ್ಲ ಈ ಬಟ್ಟೆ ಒಣಗಿಸ್ಲಿಕ್ಕೆ” ಅಂತ ಅಪ್ಪನ ಬಳಿ ಅಪ್ಲಿಕೇಶನ್ ಹಾಕಿದರು. ನನಗೆ ಮನಸಲ್ಲೇ ನಾನೇನೋ ಸಾಧನೆ ಮಾಡಿದೆ ಅನ್ನುವೋಪಾದಿಯಲ್ಲಿ ಖುಶಿ.
ಒಂದು ವಾರ ಕಳೀತು. ಈಗ ಮತ್ತೆ ಬಟ್ಟೆ ಒಗೀಬೇಕು. ಈಗ ಹೇಗೆ ಮಷೀನ್ ಉಪಯೋಗ ಮಾಡೋದು ಏನು ಅಂತೆಲ್ಲ ಗೊತ್ತಿದೆ ಅನ್ನೋ ಗತ್ತಿನಲ್ಲಿ, ಬಹಳ ಆತ್ಮ ವಿಶ್ವಾಸದಿಂದ ಬಟ್ಟೆ ಮೂಟೆ ಹಿಡ್ಕೊಂಡು ಲಾಂಡ್ರಿ ಕಡೆ ಹೆಜ್ಜೆ ಹಾಕಿದೆ. ಒಳಗೆ ಹೋಗಿ ಬಟ್ಟೆ ಎಲ್ಲ ತೆಗೆದು ಖಾಲಿ ಇದ್ದ ಒಂದು ಮಷೀನ್ ನಲ್ಲಿ ಹಾಕಿ ಹಿಂದಿನ ಸಲದಂತೆ ಒಂದೂ ಕಾಲು ಗಂಟೆ ವಾಪಸ್ ಬಂದು ನೋಡಿದ್ರೆ ಆಶ್ಚರ್ಯ ಕಾದಿತ್ತು. ಬಟ್ಟೆ ಒಣಗೇ ಇಲ್ಲ. ಇನ್ನೂ ಒದ್ದೇನೆ ಇದೆ. ಮಷೀನ್ ಸರಿ ಇಲ್ಲ ಇರಬೇಕು ಅಂತ ಯೋಚನೆ ಮಾಡುತ್ತಿರುವಷ್ಟರಲ್ಲಿ ಅಲ್ಲಿ ಒಬ್ಬ ಒಂದು ಮಷೀನ್ ನಿಂದ ಬಟ್ಟೆಗಳನ್ನೆಲ್ಲ ತೆಗೆದು ಮತ್ತೊಂದು ಮಷೀನ್ ಗೆ ಹಾಕುತ್ತಿದ್ದ. ಆಗಲೇ ನಾನು ಮಷೀನ್ ಗಳ ಮೇಲಿರುವ ಹೆಸರು ಓದಿದ್ದು. ಒಂದು “ವಾಷರ್” ಮತ್ತೊಂದು dryer. dryer ನಲ್ಲಿ ಡಿಟರ್ಜೆಂಟ್ ಹಾಕಿ ಬಟ್ಟೆ ಒಗೆದು ಒಣಗಿ ಬಂತೆಂದು ಹಿರಿ ಹಿಗ್ಗಿ ಬಂದ ನನ್ನ ಅಸಾಮಾನ್ಯ ಸಾಧನೆಯನ್ನು ನೆನೆಸಿಕೊಳ್ಳುತ್ತ, ನನ್ನ ಮೇಲೆ ನಾನೇ ನಗುತ್ತ ಬಟ್ಟೆ ಒಣಗಿಸುವ ಮಷೀನಿ ನತ್ತ ಹೆಜ್ಜೆ ಹಾಕಿದೆ. ಆ ಸಮಯದಲ್ಲಿ ಅದೂ ನನ್ನನ್ನು ನೋಡಿ ನಗುತ್ತಿದೆ ಅನಿಸಿತ್ತು.






it happens good one paresh
Nice one.
I still get confused about using them if I see a new or a model not familiar to me and I would just avoid doing laundry!!
Very nice article..ನಕ್ಕಿದ್ದಾಯ್ತು