
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.
ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.
ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.
‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.
6
‘ಐ ಆಮ್ ಲಕ್ಕಿ’ ಎಂದು ಮೊದಲ ಬಾರಿ ಅನ್ನಿಸಿತ್ತು ನನಗೆ..!
ಧುಃತ್ತೆಂದು ಎದುರು ಬಂದು ನಿಂತಿದ್ದ ಈ ಹೊಸ ಸಮಸ್ಯೆಗೆ ನಾವು ಮಾನಸಿಕವಾಗಿ ಸಿದ್ಧರಾಗಬೇಕಿತ್ತು. ಸತ್ಯ ಅರಗಿಸಿಕೊಳ್ಳಲಾಗದ ಮಾನಸಿಕ ನರಳಾಟವದು. ಮುಂದೆ ದಾರಿಯೇ ಕಾಣದ ಗೋಜಲು, ಗೋಜಲು ಸ್ಥಿತಿ. ಈ ದುಃಖವನ್ನ ಯಾರ ಬಳಿ, ಎಷ್ಟು ಬಾರಿ ಹೇಳಿಕೊಂಡರೂ ಸಮಾಧಾನವಾಗುತ್ತಿರಲಿಲ್ಲ. ಹೇಳಿದ್ದನ್ನೇ ಹೇಳಿ ಹೇಳಿ, ಅದೇ ಅದೇ ಸಮಾಧಾನದ ನುಡಿಗಳನ್ನ ಕೇಳಿ ಕೇಳಿ, ಕಣ್ಣೀರು ಬತ್ತಿತ್ತು.
ನನ್ನ ಮಗ ‘ಕಿವುಡ’ ಎಂಬ ಸತ್ಯ ಗೊತ್ತಾಗಿ ಆಗಷ್ಟೇ ನಾಲ್ಕು ದಿನಗಳು ಕಳೆದಿದ್ದವು ಅಷ್ಟೆ. ‘ಎಂ.ಆರ್ಐ, ಸಿ.ಟಿ ಸ್ಕ್ಯಾನ್ಮಾಡಿಸುವುದೆಂತಕ್ಕೆ..? ಕಿವಿ ಕೇಳದ ಮಕ್ಕಳಿಗೆ ಎಂ.ಆರ್ಐ, ಸಿ.ಟಿ ಸ್ಕ್ಯಾನ್ ಮಾಡಿಸೋಕೆ ಹೇಳ್ತಾರಾ..? ಛೇ, ಛೇ.. ಬೇಡ ಬೇಡ. ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳೋದೆ ಉತ್ತಮ’ ಅನ್ನೋ ಸಲಹೆಗಳು ಅದಾಗಲೇ ಹಲವರಿಂದ ಬಂದಿದ್ದವು. ಸೆಕೆಂಡ್ ಒಪಿನಿಯನ್ಪಡೆಯುವ ತನಕ ಎಂ.ಆರ್ಐ, ಸಿ.ಟಿ ಸ್ಕ್ಯಾನ್ಮಾಡಿಸುವುದು ಬೇಡವೇ ಬೇಡ ಅಂದುಕೊಂಡೆವು.
ಪುನಃ ಚಿಕ್ಕಮ್ಮನನ್ನೇ ಕೇಳಬೇಕಾಯಿತು. ಅವರು, ಸೆಕೆಂಡ್ ಒಪಿನಿಯನ್ಗಾಗಿ ನೀವು ಮೈಸೂರಿನಲ್ಲಿರುವ ‘ಆಲ್ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್’ಗೆ ಹೋಗುವುದೇ ಒಳ್ಳೆಯದು ಎಂದರು. ಹಾಗೆಯೇ, ನನ್ನ ತಂದೆಯವರಿಗೆ ಆಪ್ತರಾಗಿರುವ ಶಿರಸಿಯ ಪ್ರಸಿದ್ಧ ಇ.ಎನ್ಟಿ ಸ್ಪೆಷಲಿಸ್ಟ್ ಡಾ.ರಮೇಶ್ ಹೆಗಡೆ ಅವರಿಗೂ ಫೋನ್ಮಾಡಿ ಈ ಬಗ್ಗೆ ಚರ್ಚಿಸಿದೆವು.
ಈ ಸಮಸ್ಯೆಯ ಬಗ್ಗೆ ತಿಳಿಸಿ ಹೇಳುತ್ತಾ, ನೀವು ಎಷ್ಟೇ ಪರೀಕ್ಷೆ ಮಾಡಿಸಿದರೂ ಮಗುವಿಗಿರುವ ಶ್ರವಣದೋಣದ ರಿಪೋರ್ಟ್ನಲ್ಲಿ ಅಂತಹ ವ್ಯತ್ಯಾಸವೇನೂ ಬರಲಾರದು. ಆದಷ್ಟು ಬೇಗ, ಮಗುವಿನ ಕಿವಿಗೊಂದು ಶ್ರವಣ ಸಾಧನ ಹಾಕುವುದೇ ಒಳ್ಳೆಯದು. ನಿಮಗೆ ಸೆಕೆಂಡ್ ಒಪಿನಿಯನ್ ಬೇಕೇ ಬೇಕು ಅಂತಾದರೆ, ನೀವು ಮೈಸೂರಿನಲ್ಲಿರುವ ‘ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್’ ನಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿ. ಎಂಬ ಸಲಹೆ ಕೊಟ್ಟರು.

ಎರಡೆರಡು ಕಡೆಯಿಂದ ಮೈಸೂರಿಗೆ ಹೋಗುವುದೇ ಒಳ್ಳೆಯದು ಎಂಬ ಸಲಹೆಗಳು ಬಂದಿರುವ ಕಾರಣ, ನಾವು ತಡ ಮಾಡಲಿಲ್ಲ. ವಿನಯ್ ಆಫೀಸ್ಗೆ ರಜಾ ಹಾಕಿದ. ಅದಾಗಲೇ, ಮೈಸೂರಿನಲ್ಲಿರುವ ನಮ್ಮ ಸಂಬಂಧಿಕರ ಸಹಾಯದಿಂದ, ಮೈಸೂರಿನ ‘ಆಲ್ಇಂಡಿಯಾ ಇನ್ಸ್ಟಿಟ್ಯೂಟ್ಆಫ್ ಸ್ಪೀಚ್ಅಂಡ್ಹಿಯರಿಂಗ್’ನಲ್ಲಿ ಮಾಸ್ಟರ್ಸ್ ಓದುತ್ತಿದ್ದ ಸ್ಪೂರ್ತಿ ಮತ್ತು ದಿವ್ಯಶ್ರೀ ಎಂಬ ಇಬ್ಬರು ವಿದ್ಯಾರ್ಥಿನಿಯರ ಫೋನ್ನಂಬರ್ನನಗೆ ಸಿಕ್ಕಿತ್ತು. ಅವರಿಗೆ ಫೋನ್ಮಾಡಿ ನನ್ನ ಪರಿಚಯ ಮಾಡಿಕೊಂಡು, ಇನ್ಸ್ಟಿಟ್ಯೂಟ್ಬಗ್ಗೆ ಮಾಹಿತಿ ಸಂಗ್ರಹಿಸಿದ್ದೆ. ಆಗಲೇ ಗೊತ್ತಾಗಿದ್ದು, ಆ ಇನ್ಸ್ಟಿಟ್ಯೂಟ್ನ್ನ ‘ಆಯಿಶ್’ (ಎ.ಐ.ಐ.ಎಸ್ಹೆಚ್) ಎಂಬ ಹೆಸರಿನಿಂದ ಕರೆಯುತ್ತಾರೆ ಎಂದು.
ಆಯಿಶ್, ಬೆಳಗ್ಗೆ 9ಕ್ಕೇ ತೆರೆಯುತ್ತದೆ, ಎಷ್ಟು ಬೇಗ ನಾವಲ್ಲಿಗೆ ಹೋಗುತ್ತೇವೋ ಅಷ್ಟು ಒಳ್ಳೆಯದು ಎಂಬ ವಿಚಾರ ತಿಳಿದ ಮೇಲೆ. ಬೆಳಗ್ಗೆ ಬೇಗ ಹೊರಡುವ ಸಲುವಾಗಿ ತಿಂಡಿ, ತೀರ್ಥದ ಎಲ್ಲ ತಯಾರಿಗಳೂ ನಡೆದವು. 2017 ರ ಸಪ್ಟೆಂಬರ್5 ನೇ ತಾರೀಖು ಮುಂಜಾನೆ 5 ಗಂಟೆಗೇ ಮನೆಬಿಟ್ಟೆವು. ನಿದ್ದೆಯಲ್ಲಿಯೇ ಇದ್ದ ಕಂದ ಅಥರ್ವನನ್ನ ಎದೆಗವಚಿಕೊಂಡಿದ್ದೇ, ನಮ್ಮ ಸವಾರಿ ಶುರುವಾಯ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಆರ್ಚ್ಬಳಿ, ಮೈಸೂರಿನ ಬಸ್ಸು ಏರಿ ಕುಳಿತಾಗ, ಬೆಳಗ್ಗೆ 5.30 ಆಗಿತ್ತು.
ಬಸ್ಸು ಬಹುಬೇಗ ಎರಡೂವರೆ ಗಂಟೆಯೊಳಗೆ ನಮ್ಮನ್ನು ಮೈಸೂರಿಗೆ ಕರೆತಂದಿತ್ತು. ಬಸ್ನಲ್ಲಿದ್ದಾಗಲೇ ಮನೆಯಿಂದ ತಂದಿದ್ದ ತಿಂಡಿ ತಿಂದಾಗಿತ್ತು ನಮಗೆ. ಹೀಗಾಗಿ ಬಸ್ಸು ಇಳಿದ ತಕ್ಷಣ, ಆಟೋ ಏರಿದ್ದೆವು. ಸಮಯಕ್ಕೆ ಸರಿಯಾಗಿಯೇ ತಲುಪಿದೆವು. ಮುಖ್ಯ ದ್ವಾರದಲ್ಲಿದ್ದ ಇಲೆಕ್ಟ್ರಾನಿಕ್ಡಿಸ್ಪ್ಲೇ ‘All India Institute Of Speech and Hearing’ ಎಂದು ಕೆಂಪಕ್ಷರದಲ್ಲಿ ಪ್ರಕಟಿಸುತ್ತಿತ್ತು.. ಬಹುದೊಡ್ಡ ಕಾಂಪೌಂಡ್ ಅದು. ಮೇನ್ಗೇಟ್ಒಳಗೆ ಕಣ್ಣು ಹಾಯಿಸಿದರೆ, ಸುತ್ತಮುತ್ತ ಹಸಿರು, ಹೂಗಿಡಗಳು..! ನಾವು ಯಾವುದೋ ಪಾರ್ಕ್ಗೆ ಬಂದಿದ್ದೇವೇನೋ ಅನ್ನುವಷ್ಟು ಅಪ್ಯಾಯಮಾನವಾದ ಪರಿಸರ! ಕಾಂಪೌಂಡ್ ಒಳಗೆ ಕಾಲಿಡುತ್ತಿದ್ದಂತೆ, ಕವಲೊಡೆದಿರುವ ಮೂರು ರಸ್ತೆಗಳು.!
ಮಧ್ಯದ ಪ್ರಧಾನ ರಸ್ತೆಯಲ್ಲಿ ಎರಡು ನಿಮಿಷ ಸಾಗುತ್ತಿದ್ದಂತೆ, ಕಾಣಿಸಿತು ಇನ್ಸ್ಟಿಟ್ಯೂಟ್ನ ಮುಖ್ಯ ಕಟ್ಟಡ. ಆ ಕಟ್ಟಡದ ಹತ್ತಿರ ಹೋಗುತ್ತಿದ್ದಂತೆ ನಾವಿಬ್ಬರೂ ಒಮ್ಮೆ ದಂಗಾದೆವು. ಇನ್ನೂ ತೆರೆಯದ ಮಹಾದ್ವಾರದ ಗುಂಟ ನಿಂತಿದ್ದ ಇಪ್ಪತ್ತರಿಂದ ಇಪ್ಪತ್ತೈದು ಜನರ ಉದ್ದದ ಸರದಿ ಸಾಲು ಕಂಡಿತು. ನಾವು ಬೆಳಗ್ಗೆ 9 ಗಂಟೆಯೊಳಗೇ ಅಲ್ಲಿಗೆ ತಲುಪಿದ್ದರೂ ಕೂಡ ಏನೂ ಪ್ರಯೋಜನವಾಗಲಿಲ್ಲವಲ್ಲ ಅಂದುಕೊಳ್ಳುತ್ತಿದ್ದಂತೆ, ದ್ವಾರ ತೆರೆಯಿತು. ಬಾಗಿಲು ತೆರೆದದ್ದೇ ಸಾಲಿನಲ್ಲಿದ್ದ ಜನರೆಲ್ಲ ಆ ಮಹಾ ಕಟ್ಟಡದೊಳಗೆಲ್ಲ ಚದುರಿಹೋದರು. ನಮ್ಮಂಥ ನಾಲ್ಕೈದು ಮಂದಿ ಮಾತ್ರ ರಿಸೆಪ್ಶನ್ಗೆ ಬಂದರು ಅಷ್ಟೆ.
ರಿಸೆಪ್ಶನ್ನಲ್ಲಿ ಅಥರ್ವನ ಹೆಸರು ನೊಂದಾಯಿಸಿಕೊಂಡು, ಅವರು ಕೊಟ್ಟ ಕಾರ್ಡ್ಪಡೆದುಕೊಂಡು, ಅವರು ಕಳಿಸಿದ ಒಂದು ಕೋಣೆಗೆ ಹೋದೆವು. ಅಲ್ಲಿರುವ ಯುವಕ, ಯುವತಿ ನಮ್ಮ ಬಳಿ ಮಾಹಿತಿ ಕೇಳಲು ಆರಂಭಿಸಿದ್ದರು. ಈ ಮಾಹಿತಿ ಕಲೆಹಾಕುವ ಪ್ರಕ್ರಿಯೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬೇರೆ ಬೇರೆ ಯುವತಿ, ಯುವಕರೊಂದಿಗೆ ವಿವಿಧ ರೂಂಗಳಲ್ಲಿ ನಡೆಯಿತು. ಮಗು ಹುಟ್ಟಿದ್ದು, ಬೆಳೆದಿದ್ದು, ಮಗುವಿನ ಬೆಳವಣಿಗೆಯ ಹಂತಗಳು, ನಾವು ಗಂಡಹೆಂಡಿರು ರಕ್ತಸಂಬಂಧಿಗಳಾ, ನಮ್ಮಿಬ್ಬರ ಕುಟುಂಬದ ಇತಿಹಾಸ, ಹೀಗೆ ಅಂತಹದೇ ನೂರಾರು ಪ್ರಶ್ನೆಗಳಿಗೆ ಉತ್ತರಗಳನ್ನು, ಮೂರು ವಿವಿಧ ಕೋಣೆಗಳಲ್ಲಿ ವಿವಿಧ ವಿದ್ಯಾರ್ಥಿಗಳ ಬಳಿ ಹೇಳಿದ್ದೆವು.
ಒಂದು ವರ್ಷ 8 ತಿಂಗಳ ಮಗು ಅಥರ್ವ, ಕೂತಲ್ಲಿ ಕೂತಿರುತ್ತಾನೆಯೇ..? ಅವನನ್ನ ನಾನೊಮ್ಮೆ, ವಿನಯ್ಒಮ್ಮೆ ಹೊರಗಡೆ ಸುತ್ತಾಡಿಸಿದೆವು. ಇನ್ಸ್ಟಿಟ್ಯೂಟ್ನ ಒಳಗೆ ಮಕ್ಕಳಿಗಾಗಿ ಸುಸಜ್ಜಿತ ಪ್ಲೇ ಏರಿಯಾ ಕೂಡ ಇರುವ ಕಾರಣ, ಅಥರ್ವನಿಗೆನೋ ಸಮಯ ಕಳೆಯುತ್ತಿತ್ತು. ಅವನಿಗೆ ಆಗಾಗ ಮನೆಯಿಂದ ತಂದಿದ್ದ ಹಾಲು, ಪುಳಿಯೋಗರೆ, ಬಿಸ್ಕತ್ತು ಹೊಟ್ಟೆಗೆ ಹೋಗುತ್ತಿದ್ದರಿಂದ ಆತ ಸಂತೃಪ್ತನಾಗಿದ್ದ.
ಮಗನನ್ನ ಆಟ ಆಡಿಸುತ್ತಾ, ಬೆಂಚ್ನ ಒಂದು ಮೂಲೆಯಲ್ಲಿ ಕುಳಿತು ನಮ್ಮ ಸರದಿಗಾಗಿ ಕಾಯುತ್ತಿದ್ದೆ. ಚಿಕ್ಕ ವಯಸ್ಸಿನವಳಂತೆ ಕಾಣುವ ಓರ್ವ ತಾಯಿಯೊಬ್ಬಳು 10 ವರ್ಷದ ತನ್ನ ಮಗಳು ಕುಳಿತಿರುವ ಗಾಲಿ ಕುರ್ಚಿಯನ್ನ ತಳ್ಳಿಕೊಂಡು ಬಂದು ನನ್ನ ಪಕ್ಕವೇ ಕುಳಿತಳು. ಗಾಲಿ ಕುರ್ಚಿಯಲ್ಲಿ ಕೂತ್ತಿದ್ದ ಆ ಹುಡುಗಿಯ ಮುಖ ಗುಂಡಗೆ, ಬೆಳ್ಳಗಿತ್ತು. ಅವಳ ದೃಷ್ಟಿ ಅದರಮ್ಮನ ಮೇಲೆಯೇ ಇತ್ತು, ಬಾಯಿ ಏನೋ ಕನವರಿಸುತ್ತಿತ್ತು. ನೋಡಲು ಸಹಜವಾಗಿಯೇ ಇದ್ದ ತನ್ನ ಕೈಕಾಲು ಆಡಿಸುತ್ತಾ, ಕುರ್ಚಿಯಿಂದ ಇಳಿಯಲು ಆಕೆ ಪ್ರಯತ್ನಿಸುತ್ತಿದ್ದಳು. ಎದ್ದು ಓಡಲಾರಳು. ಮಾತನಾಡಲಾರಳು ಅವಳು.

ಹುಡುಗಿಯ ಬಾಯಿಯಿಂದ ಸದಾ ಸುರಿಯುತ್ತಿದ್ದ ಜೊಲ್ಲನ್ನು ಅವಳ ಅಮ್ಮ ಆಗಾಗ ಕರ್ಚೀಫಿನಿಂದ ಒರೆಸುತ್ತಾ, ಅವಳನ್ನ ಸಂತೈಸಿ ಸಮಾಧಾನಿಸಲು ಹರಸಾಹಸ ಪಡುತ್ತಿದ್ದರು. ಅದೆಲ್ಲವನ್ನೂ ಆಶ್ಚರ್ಯದಿಂದ ನೋಡುತ್ತಾ ನಿಂತಿದ್ದ ಅಥರ್ವ ತನ್ನ ಆಟವನ್ನೇ ಮರೆತಿದ್ದ. ಆ ಹುಡುಗಿಯೂ ಅವಳ ಪಕ್ಕದಲ್ಲಿ ನಿಂತಿದ್ದ ಅಥರ್ವನನ್ನ ನೋಡಿದ್ದೇ ಹಠ ಮಾಡುವುದನ್ನ ಮರೆತಿದ್ದಳು. ಅಥರ್ವನನ್ನೇ ನೋಡುತ್ತ ನಕ್ಕಳು. ಅಂತೂ ಮಗಳು ಸಮಾಧಾನಗೊಂಡಿದ್ದಕ್ಕೆ ಅವಳಮ್ಮ ಇಟ್ಟ ನಿಟ್ಟುಸಿರು ನನ್ನ ಕಿವಿಗಳಿಗೆ ಬಡಿದಿದ್ದವು. ಅಲ್ಲಿಯೇ ನಮ್ಮದೊಂದು ನಗುವಿನ ವಿನಿಯಮವಾಯ್ತು.
ಮುಕ್ಕಾಲು ಗಂಟೆಗಳಿಗೂ ಹೆಚ್ಚುಹೊತ್ತು ಆ ಮಹಾತಾಯಿ ‘ಆಟಿಸಮ್’ ತೊಂದರೆಯಿಂದ ಬಳಲುತ್ತಿರುವ ತನ್ನ ಮಗಳ ಕಷ್ಟವನ್ನೆಲ್ಲ ನನ್ನ ಬಳಿ ಹೇಳಿಕೊಂಡಳು. ಅಥರ್ವನನ್ನ ಎತ್ತಿ ಮುದ್ದಾಡಿ. ‘ಯೂ ಆರ್ಲಕ್ಕಿ ಮ್ಯಾಡಮ್’ ಅಂದಳು. ಆ ಕ್ಷಣದ ವರೆಗೂ ಕಿವುಡು ಮಗುವಿಗೆ ಜನ್ಮಕೊಟ್ಟ ನಾನೊಬ್ಬ ದುರಾದೃಷ್ಟವಂತೆ ಅಂದುಕೊಂಡಿದ್ದ ನನಗೆ ಆ ಸಮಯದಲ್ಲಿ ‘ಐ ಆಮ್ಲಕ್ಕಿ’ ಎಂದು ಮೊದಲಬಾರಿ ಅನ್ನಿಸಿತ್ತು.
ಮೈಸೂರಿನಲ್ಲಿರುವ ಈ ‘ಆಯಿಶ್’ (All India Institute Of Speech and Hearing) ಎಂಬುದು ಮಹಾ ಸಮುದ್ರ. ಅಲ್ಲಿ ಶ್ರವಣ ದೋಶವಿರುವ ಮಕ್ಕಳಿಗೊಂದೇ ಅಲ್ಲ ಬೆಳವಣಿಗೆಯ ಸಮಸ್ಯೆ (Developmental disorder ), ವರ್ತನೆ ಅಥವಾ ಭಾವನೆಗಳಿಗೆ ಸಂಬಂಧಿಸಿದ ಸಮಸ್ಯೆ (Behavioral/Emotional disorder), ಸಂವೇದನೆಗಳ ದುರ್ಬಲತೆ (Sensory Impaired ) ಇಂಥ ಅನೇಕ ಸಮಸ್ಯೆಗಳಿರುವ ಮಕ್ಕಳಿಗೂ ಇಲ್ಲಿ ಪರೀಕ್ಷೆ ನಡೆಸಿ, ತರಬೇತಿ ನೀಡಲಾಗುತ್ತದೆ. ಎಂಬ ಒಂದೊಂದೇ ಮಾಹಿತಿಗಳು ನಮಗೆ ಅಲ್ಲಿಗೆ ಹೋದಮೇಲೆ ತಿಳಿದವು.
ಒಂದಲ್ಲ ಎರಡಲ್ಲ ಮೂರು ಬಾರಿ ‘ಆಯಿಶ್’ಗೆ ಬಂದು ಅಲ್ಲಿಯ ಪರಿಸರದಲ್ಲಿ ಒಡನಾಡಿದ ನಮಗೆ, ಕೊನೆಯ ಫಲಿತಾಂಶ ಬರುವ ಸಮಯದಲ್ಲಿ ಮನಸ್ಸು ಗಟ್ಟಿಯಾಗತೊಡಗಿತ್ತು. ‘ಆಯಿಶ್’ನಲ್ಲಿ ನಾವು ಕಣ್ಣಾರೆ ಕಂಡ ಮಕ್ಕಳ ಅನೇಕ ಸಮಸ್ಯೆಗಳು ಮತ್ತುಅದನ್ನ ಸಮರ್ಥವಾಗಿ ನಿಭಾಯಿಸುತ್ತಿರುವ ತಂದೆ, ತಾಯಿಯರ ಛಲ, ನಮ್ಮಲ್ಲಿ ಯೂ ಅವ್ಯಕ್ತ ಧೈರ್ಯ ತುಂಬುತ್ತಿದ್ದವು.
ದೇಹ ಬೆಳೆದರೂ ನಡೆಯಲೂ ಸಾಧ್ಯವಾಗದ ವಿಶೇಷ ಮಕ್ಕಳನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿಕೊಂಡು ತಳ್ಳಿಕೊಂಡು ಬರುವ ತಾಯಿ ತಂದೆಯರ ಕಷ್ಟ, ಡೌನ್ಸಿಂಡ್ರೋಮ್, ಆಟಿಸಮ್, ಡಿಸ್ಲೆಕ್ಸಿಯಾದಂಥ ಸಮಸ್ಯೆ ಹೊಂದಿ ಹುಟ್ಟಿದ್ದ ಆ ಮುದ್ದು ಮಕ್ಕಳ ಅಪ್ಪ ಅಮ್ಮರ ದೈನ್ಯತೆ, ಶ್ರವಣ ದೋಷವಿರುವ ಮಗುವಿಗೆ ಆರೆಂಟು ವರ್ಷ ವಯಸ್ಸಾಗಿದ್ದರೂ ಶ್ರವಣಸಾಧನ ಒದಗಿಸಲಾರದ ಕಡು ಬಡತನ, ಹೀಗೆ ಅದೆಷ್ಟೋ ನೊಂದ ತಂದೆ, ತಾಯಿಯರ ನಾನಾ ಕಷ್ಟಗಳನ್ನ ಕೇಳಿದ್ದೆವು. ಅವೆಲ್ಲವನ್ನೂ ಅತೀ ಹತ್ತಿರದಿಂದ ಕಂಡ ನಮಗೆ ನಮ್ಮ ಕಷ್ಟ ಏನೇನೂ ಅಲ್ಲ ಅನ್ನಿಸತೊಡಗಿತ್ತು.
ಬೆಂಗಳೂರಿನ ಚಂದ್ರಶೇಖರ ಇನ್ಸ್ಟಿಟ್ಯೂಟ್ನಲ್ಲಿ ನಡೆದ ಎಲ್ಲ ಟೆಸ್ಟ್ಗಳೂ ಇಲ್ಲೂ ನಡೆದವು. ಒಂದೇ ದಿನದಲ್ಲಿಯೇ ಎಲ್ಲ ಟೆಸ್ಟ್ಗಳೂ ಸಾಧ್ಯವಾಗದಿರುವುದರಿಂದ ಹದಿನೈದು ದಿನಗಳಲ್ಲಿ ಎರಡು ಮೂರು ಬಾರಿ ನಾವು ಬೆಂಗಳೂರಿನಿಂದ ಮೈಸೂರಿಗೆ ಓಡಾಡಬೇಕಾಯ್ತು. ಅಂತೂ ಕೊನೆಯಲ್ಲಿ ಬೆರಾ ಟೆಸ್ಟ್ಮುಗಿಸಿ ಫಲಿತಾಂಶ ನೀಡಿದ ಇವರೂ ಕೂಡ, ಮಗುವಿಗೆ ‘ಸೀವಿಯರ್ಟು ಪ್ರಫೌಂಡ್ಹಿಯರಿಂಗ್ಲಾಸ್’ (ತೀವ್ರ ಶ್ರವಣ ದೋಷ) ಇದೆ ಅಂದಿದ್ದಾಯ್ತು.
ಅಂತೂ 2017ರ ಸಪ್ಟೆಂಬರ್27ರಂದು ‘ಆಯಿಶ್’ನಲ್ಲಿ ಅಥರ್ವನ ಎಲ್ಲ ಪರೀಕ್ಷೆಗಳೂ ಮುಗಿದದ್ದವು. ಅವನ ಎರಡೂ ಕಿವಿಗಳೂ 75 ಪ್ರತಿಶತ ಶ್ರವಣದೋಷ ಹೊಂದಿವೆ ಎಂಬ ರಿಪೋರ್ಟ್ನಲ್ಲಿ ಬರೆದಿದ್ದರು. ಆವತ್ತೇ, ಈಗಾಗಲೇ ಕೂಡಿಟ್ಟುಕೊಂಡಿದ್ದ 48 ಸಾವಿರ ರೂಪಾಯಿಗಳನ್ನು ಮುಂಗಡವಾಡಿ ಕೊಟ್ಟು ಅವರೇ ಸೂಚಿಸಿದಂತೆ ಮಗುವಿನ ಎರಡೂ ಕಿವಿಗಳಿಗೆ ಹಾಕಲು ಹಿಯರಿಂಗ್ಏಡ್ (ಶ್ರವಣ ಸಾಧನ) ಗಳನ್ನು ಬುಕ್ಮಾಡಿದೆವು.
ಇನ್ನು ಹದಿನೈದು ದಿನಗಳೊಳಗೆ ಶ್ರವಣ ಸಾಧನಗಳು ಬರಹುದು, ಅವುಗಳು ಲಭ್ಯವಾದಾಗ ಫೋನ್ ಮಾಡುತ್ತೇವೆ. ಹಿಯರಿಂಗ್ಏಡ್ಹಾಕಲು ಕಿವಿಯಚ್ಚು ಮಾಡಿಸಬೇಕಾಗುತ್ತದೆ. ಅದನ್ನ ಇಲ್ಲಿಯೇ ಮಾಡಿಸಬೇಕೆಂಬ ನಿರ್ಬಂಧವಿಲ್ಲ. ನೀವು ಎಲ್ಲಿಯಾದರೂ ಮಾಡಿಸಬಹುದು ಎಂದು ಅವರಂದಾಗ, ಸಂಜೆ ಇನ್ಸ್ಟಿಟ್ಯೂಟ್ಮುಚ್ಚುವ ಸಮಯ ಹತ್ತಿರದಲ್ಲಿತ್ತು. ಹೀಗಾಗಿ ಅದನ್ನ ಬೆಂಗಳೂರಿನಲ್ಲಿಯೇ ಮಾಡಿಸಿ, ಮತ್ತೆ ಹಿಯರಿಂಗ್ಏಡ್ಪಡೆಯಲು ಬರುವಾಗ ನಮ್ಮೊಂದಿಗೆ ಆ ಕಿವಿಯಚ್ಚುಗಳನ್ನ ತಂದರಾಯಿತು ಎಂದು ನಮ್ಮೊಳಗೆ ಮಾತನಾಡಿಕೊಂಡರೂ, ‘ಕಿವಿಯಚ್ಚು’ (Ear molds) ಎಂಬುದು ಏನು ಎಂಬ ಬಗ್ಗೆ ಸರಿಯಾದ ಕಲ್ಪನೆಯಿರಲಿಲ್ಲ ನಮಗೆ.
“ಶ್ರವಣ ಸಾಧನಗಳು ಬಂದಾದ ಮೇಲೆ ಹದಿನೈದು ದಿನಗಳ ಲಿಸನಿಂಗ್ಮತ್ತು ಸ್ಪೀಚ್ಥೆರಪಿಗಳ ಪ್ರತ್ಯೇಕ ತರಗತಿಗಳಿರುತ್ತವೆ, ಅಲ್ಲಿ ಮಗುವಿಗೆ ಕೇಳಿಸಿಕೊಳ್ಳಲು ಮತ್ತು ಮಾತನಾಡಲು ಕಲಿಸುವುದು ಹೇಗೆ ಎಂಬ ಬಗ್ಗೆ ನಿಮಗೆ ತರಬೇತಿ ಸಿಗುತ್ತದೆ ಅಂದರು. ನಾನಾಗ ಅವರ ಬಳಿ ಕೇಳಿದ್ದೆ. ‘ಹೌದೂ… ಹಿಯರಿಂಗ್ಏಡ್ಕಿವಿಗಳಿಗೆ ಹಾಕಿದ ಮೇಲೆ ಮಗೂಗೆ ಕೇಳಿಸಲೇಬೇಕಲ್ಲವೇ..? ಅವರಿಗೆ ಕೇಳಿಸಿಕೊಳ್ಳುವುದನ್ನ ಹೇಳಿಕೊಡಬೇಕಾ..? ಕೇಳಿಸಿಕೊಳ್ಳುವುದನ್ನ ಹೇಳಿಕೊಡುವುದು ಅಂದರೇನು?’ ಎಂದು. ಅವರಿಗೆ ಇವೆಲ್ಲ ಹೊಸ ಪ್ರಶ್ನೆಗಳಲ್ಲ.

ನಮ್ಮಂಥ ಹೊಸಬರ ಇಂಥ ಅನುಮಾನಗಳಿಗೆಲ್ಲ ಅವರ ಬಳಿ ಸಿದ್ಧ ಉತ್ತರಗಳಿದ್ದವು.’ ‘ಖಂಡಿತವಾಗಿಯೂ ಹೌದು. ಕಣ್ಣಿನ ಸಮಸ್ಯೆಯಿರುವವರಿಗೆ ಕನ್ನಡಕ ಹಾಕಿದರೆ ಕಾಣಿಸುತ್ತದೆ. ಅವರಿಗೆ ನೋಡುವುದನ್ನು ಪ್ರತ್ಯೇಕವಾಗಿ ಕಲಿಸಬೇಕಿಲ್ಲ. ಆದರೆ, ತೀವ್ರ ಶ್ರವಣದೋಷವಿರುವ ಮಕ್ಕಳಿಗೆ ಶ್ರವಣ ಸಾಧನ ಹಾಕಿಬಿಟ್ಟರೆ ಕೆಲಸ ಮುಗಿಯೋದಿಲ್ಲ. ಶ್ರವಣ ಸಾಧನ ಹಾಕಿದ ಮೇಲೆಯೂ ಕೇಳಿಸಿಕೊಳ್ಳುವುದನ್ನು ಅವರಿಗೆ ಕಲಿಸಬೇಕು. ಅದನ್ನು ನಾವು ‘ಲಿಸನಿಂಗ್ಟ್ರೈನಿಂಗ್’ ಅಂತ ಕರೀತಿವಿ.
ಮಗುವಿಗೆ ಲಿಸನಿಂಗ್ಬಂದ ಹೊರತೂ ಮಾತನಾಡಲಾರದು. ಹೀಗಾಗಿ ಲಿಸನಿಂಗ್ಮತ್ತು ಸ್ಪೀಚ್ಟ್ರೈನಿಂಗ್ಎರಡೂ ತರಗತಿಗಳನ್ನೂ ಪ್ರತ್ಯೇಕವಾಗಿ ನೀವು ತೆಗೆದುಕೊಳ್ಳಲೇ ಬೇಕು. ಶ್ರವಣ ದೋಷವಿರುವ ಮಗುವಿಗೆ ಅದರಲ್ಲೂ ಪ್ರೊಫೌಂಡ್ಹಿಯರಿಂಗ್ಲಾಸ್ಇರುವ ಮಕ್ಕಳಿಗೆ ತರಬೇತಿಯಿಲ್ಲದಿದ್ದರೆ, ಹಿಯರಿಂಗ್ಏಡ್ನಿಂದ ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ನೀವು ತರಗತಿಗೆ ಹಾಜಾರಾದಾಗ ಈ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ’ ಅಂದರು.
‘ಊಹೂಂ. ‘ಕೇಳಿಸಿಕೊಳ್ಳೋದನ್ನ ಮಗುವಿಗೆ ಕಲಿಸುವುದು’ ಎಂಬ ವಿಷಯದ ಅಗಾಧತೆ ಆಗ ನಮಗೆ ಅರ್ಥವಾಗಲೇ ಇರಲಿಲ್ಲ. ಇರಲಿ. ತರಬೇತಿ ತರಗತಿಗೆ ಸೇರಿದ ಮೇಲೆ ತಿಳಿಯಬಹುದು’ ನಮ್ಮಷ್ಟಕ್ಕೆ ನಾವೇ ಸಮಾಧಾನ ಮಾಡಿಕೊಂಡು ಅಲ್ಲಿಂದ ವಾಪಾಸ್ಬೆಂಗಳೂರಿಗೆ ಹೊರಟೆವು.
| ಇನ್ನೂ ಮುಂದಿನ ವಾರಕ್ಕೆ |






0 Comments