
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.
ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.
ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.
‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.
23
2017 ಕಳೆದು 2018 ಬಂದಿತ್ತು. ಜನವರಿ 11ನೇ ತಾರೀಖು ಅಥರ್ವನ ಎರಡನೇ ವರ್ಷದ ಹುಟ್ಟಿದ ಹಬ್ಬ ನಮ್ಮ ಶಾಲೆಯಲ್ಲಿಯೇ ನಡೆದಿತ್ತು. ಬಿಳಿಯ ಬಣ್ಣದ ಹೊಸ ಫಾರ್ಮಲ್ಶರ್ಟ್, ಖಾಕಿ ಬಣ್ಣದ ಪ್ಯಾಂಟ್ ಹಾಕಿ ಬೆಲ್ಟ್ಹಾಕಿದ್ದ ಅಥರ್ವನನ್ನು ಸೀನಿಯರ್ ಅಮ್ಮ ಒಬ್ಬರು ಎಲ್ಲ ಮಕ್ಕಳ ಎದುರು ನಿಲ್ಲಿಸಿಕೊಂಡು, ಅವನ ಕುರಿತು ಪಾಠಮಾಡಿ ‘ಹುಟ್ಟಿದ ಹಬ್ಬದ ಘಟನೆ’ ಮಾಡಿದ್ದರು. ಅದೇನು ಅರ್ಥ ಮಾಡಿಕೊಂಡಿದ್ದನೋ ಗೊತ್ತಿಲ್ಲ, ಭಾರಿ ಖಷಿಯಲ್ಲಿ ಎಲ್ಲರೆದುರು ನಿಂತಿದ್ದ. ಹುಟ್ಟಿದ ಹಬ್ಬದ ಘಟನೆ ಮುಗಿದಿದ್ದೇ, ‘ಇವತ್ತು ನಿನ್ನ ಹುಟ್ಟಿದ ಹಬ್ಬ. ಎಲ್ಲರಿಗೂ ಚಾಕಲೇಟು ಕೊಡೋಣ’ ಎಂದು ಅಥರ್ವನ ಮುಖವನ್ನ ನನ್ನ ಮುಖದತ್ತ ತಿರುಗಿಸಿಕೊಂಡು ಚಾಕಲೇಟು ಪ್ಯಾಕೇಟ್ ತೋರಿಸುತ್ತಾ ಹೇಳಿದೆ. ಚಾಲೇಟು ಪ್ಯಾಕೇಟ್ನನ್ನ ಕೈಲಿದ್ದಿದ್ದು ನೋಡಿ ಕುಣಿದಾಡಿಬಿಟ್ಟ. ಚಾಕಲೇಟಿನ ಆಸೆಗೆ ನಾನು ಹೇಳಿದ್ದೆಲ್ಲ ಮಾಡಿದ. ‘ಅಥರ್ವ ಆಂಟಿಗೆ ಚಾಕಲೇಟು ಕೊಟ್ಟನು. ಅಥರ್ವ ಪುಷ್ಕರ್ಗೆ ಚಾಕಲೇಟು ಕೊಟ್ಟನು. ಅಥರ್ವ ಮಹೇಶ್ಗೆ ಚಾಕಲೇಟು ಕೊಟ್ಟನು’. ಎಲ್ಲ ಮಕ್ಕಳ ಹೆಸರುಗಳನ್ನೂ ಹೇಳುತ್ತಾ ಅವನ ಕೈಯಲ್ಲಿಯೇ ಚಾಕಲೇಟು ಹಂಚಿಸಿದ್ದೆ.
ಜನವರಿ ತಿಂಗಳು ಕೂಡ ಕಳೆದು ಫೆಬ್ರವರಿ ತಿಂಗಳು ಕಾಲಿಟ್ಟಿತ್ತು. ಕಾಕ್ಲಿಯರ್ ಇಂಪ್ಲಾಂಟ್ ಆಪರೇಶನ್ ಮಾಡಿಸುವುದಕ್ಕಾಗಿ ನಾವು ಸಲ್ಲಿಸಿದ ಸಹಾಯಧನದ ಅರ್ಜಿಗಳಿಗೆ ಉತ್ತರವಿನ್ನೂ ಬಂದಿರಲಿಲ್ಲ. ಯಾಕೋ ಒಂದೊಂದು ದಿನ ಕಳೆದಾಗಲೂ ಭಯವಾಗುತ್ತಿತ್ತು. ‘ಪಿ.ಎಮ್ಫಂಡ್ ಅಥವಾ ಸಿ.ಎಮ್ಫಂಡ್, ಈ ಎರಡು ಫಂಡ್ಗಳಲ್ಲಿ ಒಂದಾದರೂ ಸಿಕ್ಕರೆ ಅನುಕೂಲವಿತ್ತು. ಒಂದೂ ಸಿಗದಿದ್ದರೆ ಏನು ಗತಿ..?’ ಪ್ರತಿ ಕ್ಷಣದ ತಳಮಳ ಅದು. ಅತ್ತ ವಿನಯ್, ಯಾವ್ಯಾವುದೋ ಎನ್.ಜಿ.ಒ ಗಳನ್ನ, ಹಲವು ಸಂಘ ಸಂಸ್ಥೆಗಳನ್ನ ಎಡತಾಕಿ, ಸಹಾಯದ ನಿರೀಕ್ಷೆಯಲ್ಲಿದ್ದ. ನನ್ನ ಅಪ್ಪ, ಮಾವ ಎಲ್ಲರೂ ಅವರಿಗೆ ಗೊತ್ತಿರುವ ಸಂಘಸಂಸ್ಥೆಗಳನ್ನೆಲ್ಲ ಸಂಪರ್ಕಿಸುತ್ತಿದ್ದರು. ಸೋದರ ಮಾವ ಪುಟ್ಟು ಕುಲಕರ್ಣಿ ದಾನಿಗಳ ಹುಡುಕಾಟದಲ್ಲಿದ್ದರು.
ಹೇಗಾದರೂ ಹಣ ಜೋಡಿಸಿಕೊಟ್ಟರೆ, ವಿನಯ್ಮಾಡಲಿರುವ ಸಾಲದಲ್ಲಿ ಸ್ವಲ್ಪ ಕಡಿಮೆಯಾಗುತ್ತೆ ಎಂಬ ಕಾಳಜಿ ಅವರದ್ದು.
‘ಎಲ್ಲಿಂದಲೂ ಸಹಾಯ ಸಿಕ್ಕಲೇ ಇಲ್ಲ ಎಂದಾದಲ್ಲಿ ನಾನು ಸಾಲ ಮಾಡಿ ಹಣ ಹೊಂದಿಸ್ತೀನಿ ಅಮೃತಾ, ಆಪರೇಶನ್ ಅಂತೂ ತಡಮಾಡಲ್ಲ. ನೀನು ತಲೆಕೆಡಿಸಿಕೊಳ್ಳಬೇಡ’ ಎಂಬ ಸಮಾಧಾನದ ಮಾತುಗಳನ್ನ ವಿನಯ್ ಸದಾ ನನಗೆ ಹೇಳುತ್ತಲೇ ಇದ್ದ. ಇದ್ದ ಬಿದ್ದ ಒಡವೆಗಳನ್ನು ಅಡವಿಟ್ಟಾದರೂ ಸ್ವಲ್ಪ ಹಣ ಹೊಂದಿಸಿದರಾಯಿತು ಎಂಬ ಲೆಕ್ಕಾಚಾರದಲ್ಲಿ ನಾನಿದ್ದೆ. ನಮಗೆ ಸಹಾಯ ಮಾಡುವಂಥ ಸಂಘ ಸಂಸ್ಥೆಗಳೇನಾದರೂ ಇದ್ದಲ್ಲಿ ದಯವಿಟ್ಟು ತಿಳಿಸಿ ಎಂದು ನನ್ನ ಹಲವು ಸ್ನೇಹಿತರಿಗೆ ನಾನೂ ದಿನವೂ ಕರೆ ಮಾಡತೊಡಗಿದೆ. ಇಡೀ ದಿನ ಅದೇ ಯೋಚನೆ. ಹಣ ಹೊಂದಿಸುವ ದಾರಿಯ ನಿರೀಕ್ಷೆಯಲ್ಲಿಯೇ ಫೆಬ್ರವರಿ ತಿಂಗಳ ಕೊನೆಯ ದಿನವೂ ಕೂಡ ಮುಗಿದಿತ್ತು.
ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಫಂಡ್ ಇನ್ನೂ ಬಂದಿಲ್ಲ ಎಂಬ ಬೇಸರದ ವಿಚಾರವನ್ನ ಗೆಳತಿ ಪ್ರತಿಮಾ ಭಟ್ ಹತ್ತಿರ ನಾನು ಹೇಳುತ್ತಿದ್ದಂತೆ, ಅವಳೊಂದು ಸಲಹೆ ಕೊಟ್ಟಳು. ‘ನಮ್ಮ ಸುವರ್ಣ ನ್ಯೂಸ್ನ ದೆಹಲಿ ರಿಪೋರ್ಟರ್ ಪ್ರಶಾಂತ್ ನಾತು ಸರ್ ಹತ್ತಿರ ನಾನು ಮಾತನಾಡಿ, ನಿನಗೆ ಅವರ ನಂಬರ್ ಕೊಡುತ್ತೇನೆ. ಅವರ ಬಳಿ ಸಹಾಯ ಕೇಳು. ತುಂಬಾ ಹೆಲ್ಪಿಂಗ್ ನೇಚರ್ ಇರುವ ಮನುಷ್ಯ ಅವರು. ಅವರಿಂದ ಏನಾದರೂ ಸಹಾಯವಾದರೂ ಆಗಬಹುದು’ ಎಂದಿದ್ದೇ, ತನ್ನ ಕೆಲಸ ತಾನು ಮಾಡಿಬಿಟ್ಟಳು. ಸ್ವಲ್ಪ ಹೊತ್ತಿಗೆ ಮತ್ತೆ ನನಗೆ ಫೋನ್ ಮಾಡಿ, ಅವರ ನಂಬರ್ನ್ನ ನನಗೆ ಕೊಟ್ಟು. ‘ಆಲ್ ದ ಬೆಸ್ಟ್ ಅಮೃತಾ’ ಶುಭಹಾರೈಸಿದಳು. ನಾನು ಸುವರ್ಣ ನ್ಯೂಸ್ ನಲ್ಲಿದ್ದಾಗ ಪ್ರೋಗ್ರಾಮ್ ವಿಚಾರವಾಗಿ ಅವರ ಬಳಿ ಕೆಲವು ಸಲ ಮಾತನಾಡಿದ್ದೆ. ಆಗಿಂದಾಗ್ಗೇ ನಾನೂ ಅವರಿಗೆ ಮೆಸೆಜ್ ಮಾಡಿ, ನನ್ನ ಪರಿಚಯ ಹೇಳಿ, ದಯವಿಟ್ಟು ನಿಮ್ಮ ಬಿಡುವಿನ ಸಮಯ ತಿಳಿಸಿ, ನಿಮ್ಮಿಂದ ನನಗೆ ಸಹಾಯವಾಗಬೇಕಿದೆ ಎಂದು ಟೈಪಿಸಿದ್ದೆ.

ಸಾಯಂಕಾಲದ ಹೊತ್ತಲ್ಲಿ ಪ್ರಶಾಂತ್ ನಾತು ಸರ್, ಸ್ವತಃ ತಾವೇ ನನಗೆ ಕರೆ ಮಾಡಿದ್ದರು. ಫಂಡ್ನ ವಿವರಗಳನ್ನು ಕೇಳಿ. ಅರ್ಜಿ ಹಾಕಿದಾಗ ಎಂ.ಪಿ ಕಚೇರಿಯಲ್ಲಿ ನಮಗೆ ಕೊಟ್ಟಿರುವ ಅಕ್ನಾಲಾಜ್ಮೆಂಟ್ನ ಫೋಟೋ ತೆಗೆದು ಕಳಿಸಲು ಹೇಳಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಅವರೇ ನನಗೆ ಕರೆ ಮಾಡಿ, ‘ಅಮೃತಾ, ನಿಮ್ಮ ಅರ್ಜಿ ಪ್ರೊಸೆಸ್ ಆಗ್ತಾ ಇದೆ. ಸಧ್ಯದಲ್ಲಿಯೇ ಪ್ರಧಾನ ಮಂತ್ರಿ ಕಚೇರಿಯಿಂದ ನಿಮಗೆ ಲೆಟರ್ ಬರುತ್ತದೆ. ಅಲ್ಲಿಯ ನಿಮ್ಮ ಎಂಪಿ ಕಚೇರಿಯಲ್ಲಿ ಕೆಲಸ ಮಾಡುವ ಓರ್ವ ಉದ್ಯೋಗಿಯ ಫೋನ್ನಂಬರ್ ಕೊಡುತ್ತೇನೆ. ಅವರ ಬಳಿ ಡಿಟೇಲ್ ಪಡೆದುಕೊಳ್ಳಿ ‘ಧೈರ್ಯಕೊಟ್ಟರು ಪ್ರಶಾಂತ್ ನಾತು ಸರ್.’ ಅವರ ಈ ಸಹಾಯಕ್ಕೆ ಕಣ್ತುಂಬಿ ಬಂದಿತ್ತು ನನಗೆ. ದೆಹಲಿಯ ಆ ಆಫೀಸರ್ ಹತ್ತಿರವೂ ಮಾತನಾಡಿದಾಗ ತಿಳಿಯಿತು, ಲೆಟರ್ ಸಧ್ಯದಲ್ಲಿಯೇ ನಮಗೆ ಪೋಸ್ಟ್ ಆಗಲಿದೆ ಎಂದು. (ಇಂಥ ಸಹಾಯ ನಿಧಿಗಳು ನೇರವಾಗಿ ಫಲಾನುಭವಿಗಳ ಕೈಗೆ ಸಿಗುವುದಿಲ್ಲ. ಸರ್ಕಾರದಿಂದ ನಿಧಿ ಬಿಡುಗಡೆಯಾಗಿರುವ ಬಗ್ಗೆ ಪತ್ರ ಬರುತ್ತದೆ ಅಷ್ಟೆ. ಆ ಪತ್ರವನ್ನು ಆಸ್ಪತ್ರೆಗೆ ನೀಡಿದರೆ, ಸಹಾಯಧನ ಆಸ್ಪತ್ರೆಯ ಅಕೌಂಟ್ಗೆ ನೇರವಾಗಿ ಜಮೆಯಾಗುತ್ತದೆ.)
ಮಾರ್ಚ ತಿಂಗಳ ಮೊದಲವಾರದ ಒಂದು ಶುಭದಿನದ ಮಧ್ಯಾಹ್ನವದು. ಶಾಲೆ ಮುಗಿಸಿ ವಾಪಾಸ್ ಮನೆಗೆ ಬಂದು, ಫೋನ್ ಆನ್ ಮಾಡುತ್ತಿದ್ದಂತೆ. ವಿನಯ್ನಿಂದ ಮೂರು ಮತ್ತು ನನ್ನ ಮಾವನವರ ನಂಬರ್ನಿಂದ ಐದು ಮಿಸ್ ಕಾಲ್ಗಳು ಇದ್ದಿದ್ದು ಕಾಣಿಸಿತ್ತು. ಅಯ್ಯೋ.. ಯಾರಿಗೆ ಏನಾಯಿತೋ ಏನೋ.. ಎಂಬ ಭಯದಲ್ಲಿಯೇ ವಿನಯ್ಗೆ ನಾನು ಕಾಲ್ ಮಾಡಿದರೆ ಅತ್ತಕಡೆಯಿಂದ ಹರ್ಷೋದ್ಘಾರ..! ‘ಕಂಗ್ರಾಟ್ಸ್ ಡಿಯರ್. ನಮಗೆ 3 ಲಕ್ಷ ಪಿ.ಎಮ್ ಫಂಡ್ ಸಿಕ್ಕಿದೆ. ಇವತ್ತು ಬೆಳಗ್ಗೆ ನಮ್ಮ ಊರಿನ ಅಡ್ರೆಸ್ಗೆ ಲೆಟರ್ ಬಂದಿದೆಯಂತೆ. ಅಪ್ಪ ಹೇಳಿದರು. ಅದನ್ನ ಹೇಳೋಕೆ ಅಂತ ನಾವೆಲ್ಲ ನಿನಗೆ ಕಾಲ್ ಮಾಡಿದ್ವಿ. ನಿನಗೆ ಹೇಳೋತನಕ ನನಗೆ ಸಮಾಧಾನವಿರಲಿಲ್ಲ. ನೀನು ಸ್ಕೂಲ್ಗೆ ಫೋನ್ತೆಗೆದುಕೊಂಡು ಹೋಗೋಲ್ಲ ಅನ್ನೋದನ್ನ ಕೂಡ ಆ ಕ್ಷಣ ನಾನು ಮರೆತುಬಿಟ್ಟಿದ್ದೆ ನೋಡು’ ಒಂದೇ ಉಸಿರಿನಲ್ಲೇ ಎಲ್ಲವನ್ನೂ ಹೇಳಿಬಿಟ್ಟ ವಿನಯ್. ಕಟ್ಟಿಕೊಂಡ ಉಸಿರುಬಿಟ್ಟರೆ ನಿರುಮ್ಮಳವಾಗುತ್ತದಲ್ಲ.. ಅಂತಹದೇ ಸಮಾಧಾನವಾಯಿತು ನನಗೆ.
ನಂತರದ ಒಂದು ವಾರದಲ್ಲಿ, ಮತ್ತೆ ಪ್ರವೀಣ್ಸರ್ನ್ನ ಭೇಟಿಯಾಗಿ, ಸರ್ಜರಿಯ ದಿನಾಂಕ ಪಡೆದುಕೊಂಡೆವು. ಮಾರ್ಚ್ ೧೯ ರಂದು ಆಪರೇಶನ್ ಡೇಟ್ ಫಿಕ್ಸ್ ಆಗಿತ್ತು. ಪ್ರಧಾನ ಮಂತ್ರಿ ಫಂಡ್ 3 ಲಕ್ಷ ಸಿಕ್ಕಿತ್ತಲ್ಲ, ಇನ್ನೂ ಅಜಮಾಸು 5 ಲಕ್ಷ ಹಣ ಹೊಂದಿಸಬೇಕಿತ್ತು ನಾವು. ಲೋನ್ ಪಡೆಯುವುದಕ್ಕಾಗಿ ಎಲ್ಲವೂ ಸಿದ್ಧವಿದೆ ಅಮೃತಾ, ಎಲ್ಲವೂ ವ್ಯವಸ್ಥೆಯಾಗುತ್ತೆ ಎಂದು ಹೇಳಿ ಹೋಗಿದ್ದ ವಿನಯ್ಗೆ, ಅವರ ಸಹೋದರ ವಿಜಯ್ ತನ್ನ ಸಂಬಂಧಿ ವಿಭಾ ನೀಡಿರುವ ಸಲಹೆಯ ಬಗ್ಗೆ ತಿಳಿಸಿದ್ದ. ‘ಮಿಲಾಪ್ಎಂಬ ಒಂದು ಕ್ರೌಡ್ ಫಂಡಿಂಗ್ ವೆಬ್ ಸೈಟ್ ಒಂದಿದೆಯಂತೆ, ಅದರಲ್ಲೊಮ್ಮೆ ಪ್ರಯತ್ನಿಸಿದರೆ ಹೇಗೆ..?’ ಎಂಬ ವಿಷಯವನ್ನ ತಾವಿಬ್ಬರೂ ಚರ್ಚಿಸಿ, ಈ ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದ ವಿನಯ್.
ಏನಿದು ಮಿಲಾಪ್.? ಕೇಳಿದೆ ನಾನು. ಆಗ ಆ ವೆಬ್ಸೈಟ್ ಬಗ್ಗೆ ತಿಳಿದಿರಲಿಲ್ಲ ನನಗೆ. ‘ಇದು ಕ್ರೌಡ್ ಫಂಡಿಂಗ್ ವೆಬ್ಸೈಟ್. ಇದರಲ್ಲಿ ನಮ್ಮದೊಂದು ಅಕೌಂಟ್ ಕ್ರಿಯೇಟ್ ಮಾಡಿ, ಅದರಲ್ಲಿ ಸರ್ಜರಿಯ ವಿವರಗಳನ್ನೆಲ್ಲ ಬರೆದು, ಮಗುವಿನ ಸಮಸ್ಯೆಯ ಬಗ್ಗೆ ಹೇಳಿ, ಕೊಟೇಶನ್ ಅಪ್ಲೋಡ್ ಮಾಡಬೇಕು. ಇದರಲ್ಲಿ ಜನರೇ ಡೋನರ್ಸ್. ಜನರ ಬಳಿ ಹಣ ಕೇಳಲು ಒಂದು ಅವಕಾಶ ಕಲ್ಪಿಸಿಕೊಡುವ ವೆಬ್ಸೈಟ್ ಇದು. ಇಂತಿಷ್ಟೇ ದಾನ ಮಾಡಿ ಎಂಬ ಯಾವ ಒತ್ತಾಯವೂ ಅಲ್ಲಿರೋದಿಲ್ಲ. ಯಾರಿಗೆ ಎಷ್ಟು ಕೊಡಲು ಸಾಧ್ಯವೋ ಅಷ್ಟು ಕೊಡಬಹುದು. ಕನಿಷ್ಠ 1 ರೂಪಾಯಿಯಿಂದ ಹಿಡಿದು ಗರಿಷ್ಠ ಎಷ್ಟು ಬೇಕಾದರೂ ದಾನ ಮಾಡಬಹುದು ಆ ವೆಬ್ಸೈಟ್ನಲ್ಲಿ’ ವಿನಯ್ ನನಗೆ ವಿವರಿಸುತ್ತಿದ್ದಂತೆ, ನಮ್ಮೂರ ಬಸ್ಗಳಲ್ಲೆಲ್ಲ ಚೀಟಿ, ಪಾಂಪ್ಲೆಟ್ ಹಿಡಿದುಕೊಂಡು ಸಹಾಯ ಮಾಡಿ ಎನ್ನುತ್ತಾ ಹಣ ಬೇಡುತ್ತಾರಲ್ಲ, ಆ ದೃಶ್ಯ ಕಣ್ಣಮುಂದೆ ಸುಳಿಯಿತು. ‘ಛೇ..ಇದೆಂಥ ವೆಬ್ಸೈಟ್ ವಿನಯ್.? ಇದೊಂಥರ ಹೈಟೆಕ್ ಭಿಕ್ಷಾಟನೆ ಕಣೋ. ಅವಮಾನವಾಗುತ್ತೆ ಬೇಡ’ ಅಂದುಬಿಟ್ಟೆ ನಾನು. ಅಲ್ಲಿಯ ತನಕ, ಸಾಮಾಜಿಕ ಕೆಲಸಗಳಿಗೋಸ್ಕರ ಮಾತ್ರ ಕ್ರೌಡ್ ಫಂಡಿಂಗ್ ನಡೆಯುತ್ತದೆ ಅಂತಷ್ಟೇ ತಿಳಿದುಕೊಂಡಿದ್ದ ನನಗೆ, ನಮ್ಮ ವೈಯಕ್ತಿಕ ಸಮಸ್ಯೆಗೆ ಹೇಗೆ ಕ್ರೌಡ್ ಫಂಡ್ ಒಟ್ಹಾಕೋದು..? ಅದು ಎಷ್ಟರ ಮಟ್ಟಿಗೆ ಸರಿ..? ಎಂಬ ಆಲೋಚನೆ ಒತ್ತಿಕೊಂಡು ಬಂತು. ‘ಊಹೂಂ. ನನಗೆ ಈ ಕ್ರೌಡ್ ಫಂಡಿಂಗ್ ಇಷ್ಟವೇ ಇಲ್ಲ. ಬೇಡವೇ ಬೇಡ’ ಅಂದುಬಿಟ್ಟೆ.
ಆದರೆ, ವಿನಯ್ ಸಹೋದರ ವಿಜಯ್ ಪ್ರಯತ್ನ ಬಿಡಲೇ ಇಲ್ಲ. ‘ನೋಡೋಣ. ಇದರಿಂದ ಪ್ರಯೋಜನವಾಗಿಲ್ಲ ಎಂದಾದಲ್ಲಿ ಲೋನ್ ಪಡೆಯೋದಂತೂ ಇದ್ದಿದ್ದೇ. ಪ್ರಯತ್ನ ಮಾಡೋದ್ರಲ್ಲಿ ತಪ್ಪಿಲ್ಲ’ ಎನ್ನುತ್ತಲೇ ಮಿಲಾಪ್ ಅಕೌಂಟ್ ಕ್ರಿಯೇಟ್ ಮಾಡಿಯೇಬಿಟ್ಟಿದ್ದ. 5 ಲಕ್ಷದ ಗುರಿಯಿಟ್ಟು, ಸರ್ಜರಿ ಕೊಟೇಶನ್ನ್ನು ಕೂಡ ಅಪ್ಲೋಡ್ ಮಾಡಿ ಕ್ರೌಡ್ ಫಂಡಿಂಗ್ ಅಭಿಯಾನ ಶುರುವಾಗಿಯೇಹೋಯ್ತು.

ಕ್ರೌಡ್ ಫಂಡಿಂಗ್ ಶುರುವಾದ ಮೊದಲ ದಿನ, ನಾನು ಲಿಂಕ್ನ್ನ ಯಾರಿಗೂ ಶೇರ್ ಮಾಡಿರಲಿಲ್ಲ. ಯಾವುದೋ ಹಿಂಜರಿತ. ನಾಚಿಕೆ. ಹಣ ಕೇಳುತ್ತಿದ್ದೇನೆ ಎಂಬ ಅಳುಕು. ಆದರೆ ನನ್ನ ಮೈದುನ ವಿಜಯ್ ಪ್ರಯತ್ನ ಬಿಡಲಿಲ್ಲ. ತಮ್ಮ ಸ್ನೇಹಿತರಾದ ರವೀಶ್ಮತ್ತು ಗಣೇಶ್ರ ಸಹಾಯ ಪಡೆದು, ಸಮರೋಪಾದಿಯಲ್ಲಿ ಮಿಲಾಪ್ ಲಿಂಕ್ನ್ನ ಶೇರ್ ಮಾಡತೊಡಗಿದ್ದರು. ನಿಧಾನವಾಗಿ ಮಿಲಾಪ್ ಅಕೌಂಟ್ಗೆ ಹಣ ಸಂದಾಯವಾಗತೊಡಗಿತ್ತು. ಮೊದಲ ದಿನವೇ 40 ಸಾವಿರ ದಾಟಿತ್ತು. ಲಿಂಕ್ ಎಲ್ಲಿಂದೆಲ್ಲಿಗೆ ಶೇರ್ಆಗಿತ್ತೋ ತಿಳಿಯೆ, , ಆಷ್ಟ್ರೇಲಿಯಾ, ಯೂ.ಕೆ, ದುಬೈ, ಯೂ.ಎಸ್ನಿಂದಲೂ ಹಣ ಹಾಕತೊಡಗಿದ್ದರು. ಎರಡನೇ ದಿನಕ್ಕೆ ನನಗೂ ಸ್ವಲ್ಪ ಧೈರ್ಯ ಬಂದಿತ್ತು. ನಾನೂ ಲಿಂಕ್ ಶೇರ್ ಮಾಡತೊಡಗಿದ್ದೆ. ನನ್ನ ಅಪ್ಪ, ಕೆಲವು ಸಂಬಂಧಿಕರೂ ನಮ್ಮೊಂದಿಗೆ ಕೈಜೋಡಿಸಿದ್ದರು. ಮಿಲಾಪ್ ಅಕೌಂಟ್ ವೈರಲ್ ಆಗಿತ್ತು..! ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು, ಗೊತ್ತಿರುವವರು, ಗೊತ್ತಿಲ್ಲದವರು ಯಾರ್ಯಾರೋ ಅಥರ್ವನಿಗಾಗಿ ಹಣ ಹಾಕತೊಡಗಿದ್ದರು. 5 ರೂಪಾಯಿಗಳಿಂದ ಹಿಡಿದು 30 ಸಾವಿರದ ವರೆಗೂ ದಾನ ಮಾಡಿದ್ದರು. ಮಿರಾಕಲ್ ಅಂತಾರಲ್ಲ ಅಂತಹದ್ದೊಂದು ನಮ್ಮ ಜೀವನದಲ್ಲಿಯೂ ಘಟಿಸಿಹೋಯ್ತು. ಅಕೌಂಟ್ ಪ್ರತಿ ಕ್ಷಣ ತುಂಬಿಕೊಳ್ಳತೊಡಗಿತ್ತು.
ನನ್ನ ತವರಿನ ಊರಿನವರಾದ ಪ್ರಶಾಂತ ಹೆಗಡೆ ತಮಗೆ ಗೊತ್ತಿದ್ದ ದಾನಿಯೊಬ್ಬರಿಂದ ಒಂದು ಲಕ್ಷ ಹಣ ಕೊಡಿಸಿದ್ದರು. ಅವರ ತಂಗಿ ಪ್ರತಿಭಾ ಹೆಗಡೆ ಯೂ.ಎಸ್ನಲ್ಲಿ ಇದ್ದುಕೊಂಡೇ ಹಣ ಒಟ್ಹಾಕಿದ್ದರು. ಬಾವ ಮಂಜುನಾಥ ಹೆಗಡೆ ಕೈ ಎತ್ತಿ ಹಣ ನೀಡಿದ್ದರು. ನನ್ನ ಅಣ್ಣ ರಾಘವೇಂದ್ರ ಹೆಗಡೆ, ಯಾವುದೇ ಕ್ಷಣದಲ್ಲಿ, ಎಷ್ಟೇ ಹಣ ಬೇಕಿದ್ದರೂ ಹೇಳು ಅಮೃತಾ, ನಿನ್ನ ಅಕೌಂಟ್ಗೆ ಕ್ರೆಡಿಟ್ ಮಾಡ್ತೀನಿ ಎಂಬ ಧೈರ್ಯಕೊಟ್ಟು ಆಧಾರವಾಗಿ ನಿಂತಿದ್ದ. ಇಲ್ಲಿ ಯಾರ್ಯಾರ ಹೆಸರು ಅಂತ ಹೇಳಲಿ..? ಅದೆಷ್ಟೋ ಜನ ತಮ್ಮ ಹೆಸರು ಕೂಡ ಬರೆಯದೇ ದಾನ ಮಾಡಿದ್ದರು. ಜನಶಕ್ತಿಯ ದಿಗ್ದರ್ಶನವಾಗಿತ್ತು ನಮಗೆ. ಸಹಸ್ರ ಸಂಖ್ಯೆಯ ಆ ಎಲ್ಲ ಹಿತೈಶಿಗಳೂ ಸೇರಿ ನನ್ನ ಮಗನಿಗೆ ಭವಿಷ್ಯ ಕೊಟ್ಟರು ಅನ್ನುವುದಕ್ಕೆ ಯಾವ ಅಭ್ಯಂತರವೂ ಇಲ್ಲ. ಆ ಪರಿಸ್ಥಿತಿಯಲ್ಲಿ ಅಷ್ಟು ದೊಡ್ಡ ಜನಬೆಂಬಲ ಸಿಕ್ಕಿದ್ದು ನಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಯಾವುದೋ ದೈವಶಕ್ತಿ ಸ್ವತಃ ಬಂದು ಪೊರೆದಂತೆ ಭಾಸವಾಗಿತ್ತು. ಆ ಸಂದರ್ಭವನ್ನು ನೆನಸಿಕೊಂಡು ಬರೆಯುವಾಗಲೂ ಗದ್ಗದಿತಳಾಗುತ್ತಿದ್ದೇನೆ. ಅಂಥ ಅದ್ಭುತ ಜನ ಸ್ಪಂದನೆ ಅದು. ಅಷ್ಟರ ಮಟ್ಟಿಗಿನ ಜನರ ಆಶೀರ್ವಾದ ಅಥರ್ವನಿಗೆ ಸಿಕ್ಕಿತ್ತು. ಮಿಲಾಪ್ ಅಭಿಯಾನ ಆರಂಭವಾಗಿ ಮೂರೇ ಮೂರು ದಿನಗಳಲ್ಲಿ ಟಾರ್ಗೆಟ್ ರೀಚ್ ಆಗಿತ್ತು. ಬೆಟ್ಟದಂತೆ ಬಂದಿದ್ದ ಹಣದ ಇಕ್ಕಟ್ಟು, ಬೆಣ್ಣೆಯಂತೆ ಕರಗಿತ್ತು.
ಆಪರೇಶನ್ ನಡೆಯಬೇಕಿರುವುದು ಬೆಂಗಳೂರಿನ ನಾರಾಯಣ ಹೃದಾಯಲಯದಲ್ಲಿ. ದಿನಾಂಕ ಹತ್ತಿರ ಬರುತ್ತಿದ್ದಂತೆ, ಶಾಲೆಯಲ್ಲಿ ಅನುಮತಿ ಪಡೆದು, ವಾರಕ್ಕೂ ಮುಂಚೆಯೇ ಬೆಂಗಳೂರಿಗೆ ತೆರಳಿದೆ. ಅದೇನಾಯ್ತೋ ಗೊತ್ತಿಲ್ಲ. ಹೋದ ದಿನವೇ ಅಥರ್ವನಿಗೆ ತೀವ್ರ ಜ್ವರ! ಎಷ್ಟು ಔಷಧ ಮಾಡಿದರೂ, ಐದು ದಿನ ಬಿಟ್ಟೂ ಬಿಡದೇ ಕಾಡಿದ ಜ್ವರದಿಂದ ಮಗು ನಿತ್ರಾಣನಾದ. ಕಟ್ಟಿಕೊಂಡ ಕಫ, ಕೆಮ್ಮಿನಿಂದಾಗಿ ಬಳಲಿದ್ದ ಅಥರ್ವನನ್ನ ಪರೀಕ್ಷಿಸಿದ್ದೇ, ಡಾಕ್ಟರ್ ದತ್ತಾತ್ರಿ, ಈಗ ಆಪರೇಶನ್ ಮಾಡಲು ಸಾಧ್ಯವಿಲ್ಲ. ಅವನ ಆರೋಗ್ಯ ಸುಧಾರಿಸಿದ ಮೇಲೆಯೇ ಆಪರೇಶನ್ ಮಾಡೋಣ ಎನ್ನುತ್ತಾ, ಕಫ ಕೆಮ್ಮಿಗೆ ಔಷಧ ಕೊಟ್ಟು ಕಳುಹಿಸಿದ್ದರು. ಮಾರ್ಚ್19ಕ್ಕೆ ಆಗಬೇಕಿದ್ದ ಆಪರೇಶನ್ ಪೋಸ್ಟ್ ಪೋನ್ ಆಗಿತ್ತು. ಅಂತೂ ಒಂದು ವಾರದ ನಂತರ ಅಥರ್ವ ಚೇತರಿಸಿಕೊಂಡ ಮೇಲೆ ಅವನನ್ನ ಮತ್ತೊಮ್ಮೆ ಪರೀಕ್ಷಿಸಿ, ಎಲ್ಲವೂ ಸರಿಯಿದೆ ಎಂದು ಖಾತರಿಪಡಿಸಿಕೊಂಡ ಡಾಕ್ಟರ್ ಏಪ್ರಿಲ್ 5ನೇ ತಾರೀಖು ಸರ್ಜರಿ ಮಾಡುವುದಾಗಿ ದಿನಾಂಕ ನಿಗದಿಗೊಳಿಸಿದ್ದರು.
ಶಸ್ತ್ರಚಿಕಿತ್ಸೆಯ ದಿನ ಹತ್ತಿರಬರುತ್ತಿದ್ದಂತೆ, ಮಿಶ್ರಭಾವ ಕಾಡತೊಡಗಿತ್ತು. ಸರ್ಜರಿಯ ಅವಶ್ಯಕತೆ ತಿಳಿದಿದ್ದ ಕಾರಣ ಅಂತೂ ಸರ್ಜರಿಯಾಗುತ್ತಿದೆಯಲ್ಲ ಎಂಬ ನೆಮ್ಮದಿ ಒಂದುಕಡೆಯಾದರೆ, ಸರ್ಜರಿ ಎಲ್ಲವೂ ಅಂದುಕೊಂಡಂತಾದರೆ ಸಾಕಪ್ಪ ಎಂಬ ತಳಮಳ ಇನ್ನೊಂದುಕಡೆ. ಸರ್ಜರಿಯಿಂದ ಮತ್ಯಾವ ರಿಯಾಕ್ಷನ್ಗಳೂ ಆಗದಿದ್ದರೆ ಸಾಕು ಎಂಬ ಸಣ್ಣ ಆತಂಕ ರಾತ್ರಿ ನಿದ್ದೆಗೆಡಿಸುತ್ತಿತ್ತು. ಶಸ್ತ್ರಚಿಕಿತ್ಸೆಗೆ ಎರಡು ದಿನಗಳಿರುವಾಗಲೇ ನನ್ನ ಅಮ್ಮ ಅತ್ತೆ ಊರಿಂದ ಓಡೋಡಿ ಬಂದಿದ್ದರು. ಈ ಬಾರಿ ಕೊಟ್ಟ ದಿನಾಂಕಕ್ಕೆ ಸರಿಯಾಗಿ, ಸರ್ಜರಿ ನಡೆಯುವದರಲ್ಲಿ ಯಾವ ಅನುಮಾನವೂ ಇರಲಿಲ್ಲ ಎಲ್ಲವೂ ಸರಿಯಾಗಿತ್ತು.

ಅಂತೂ ಏಪ್ರಿಲ್ 4ನೇ ತಾರೀಖು ಬೆಂಗಳೂರಿನ ನಾರಾಯಣ ಹೃದಾಯಲಕ್ಕೆ ಹೋಗಿ ನಾವು ಅಡ್ಮಿಟ್ ಆದೆವು. ಹಿಂದಿನ ದಿನ ನಡೆಯಬೇಕಿದ್ದ ಎಲ್ಲ ಪ್ರೊಸೀಜರ್ಗಳೂ ನಡೆಯುತ್ತಿದ್ದವು. ರಾತ್ರಿ 8 ಗಂಟೆಗೆ ಮಗುವಿಗೆ ಊಟ ಕೊಟ್ಟಮೇಲೆ, ಮತ್ತೇನೂ ಆಹಾರ ಕೊಡುವಂತಿಲ್ಲ ಎಂದು ಸ್ಟ್ರಿಕ್ಟ್ ಆಗಿ ಹೇಳಿದ್ದರು. ಆದರೆ, ಅಥರ್ವ ಬೆಳಗ್ಗೆ ಎದ್ದು ಹಸಿವಾಗ್ತಿದೆ, ಎಂದರೆ ಏನುಮಾಡೋದು..? ಎಂಬ ಅನುಮಾನವಿತ್ತು ನನಗೆ. ಆದರೆ ಹಾಗೇನೂ ಆಗಲೇ ಇಲ್ಲ. ಬೆಳಗ್ಗೆ 8 ಗಂಟೆಗೇ ಅವನಿಗೆ ಸ್ನಾನ ಮಾಡಿಸಿ ಆಸ್ಪತ್ರೆಯವರು ಕೊಟ್ಟ ಅಂಗಿ ಹಾಕಿ ಕೂರಿಸಿದ್ದೆ. ಅಪ್ಪ ಮಗ ಆಟಿಕೆ ಇಟ್ಟುಕೊಂಡು ಆಡುತ್ತಲೇ ಇದ್ದರು. ಹಸಿವಿನ ನೆನಪಾಗಬಾರದು ಎಂಬ ಕಾರಣಕ್ಕೆ ವಿನಯ್ ಅವನೊಂದಿಗೆ ಕ್ಷಣ ಬಿಡದೇ ಆಡುತ್ತಿದ್ದ. ನಾನಂತೂ ಮಾತುಕೂಡ ಆಡಲಾಗದಂಥ ಆತಂಕದಲ್ಲಿದ್ದೆ. ಎಷ್ಟರಮಟ್ಟಿಗೆ ಅಂದರೆ, ವಿನಯ್ ನನ್ನ ಏನು ಮಾತನಾಡಿಸಿದರೂ ನಾನು ತೊದಲುತ್ತಿದ್ನಂತೆ..!
ಬೆಳಗ್ಗೆ 9.30 ಆಗುತ್ತಿದ್ದಂತೆ ನರ್ಸ್ ಬಂದು ಮಗುವನ್ನು ಕೊಡಿ, ಆಪರೇಶನ್ ಥಿಯೇಟರ್ಗೆ ಒಯ್ಯುತ್ತೇವೆ ಎಂದಾಗ, ನನ್ನ ಹೃದಯಬಡಿತ ನನಗೇ ಕೇಳಿಸುತ್ತಿತ್ತು. ಬೆಳಗ್ಗೆ 10 ಗಂಟೆಗೆ ಶುರುವಾಗಲಿರುವ ಶಸ್ತ್ರಚಿಕಿತ್ಸೆ, ಮೂರರಿಂದ ನಾಲ್ಕು ತಾಸುಗಳ ಕಾಲ ನಡೆಯಲಿತ್ತು.
ಅಥರ್ವ ನಗುತ್ತಲೇ ನರ್ಸ ಜತೆ ಹೊರಟಿದ್ದ. ಅವರು ಗಾಲಿ ಖುರ್ಚಿಯ ಮೇಲೆ ಅಥರ್ವನನ್ನು ಕೂರಿಸಿಕೊಂಡು ತಳ್ಳಿಕೊಂಡು ಹೋಗುತ್ತಿದ್ದರೆ, ಇದ್ಯಾವುದೋ ಹೊಸ ಆಟಿಕೆ ಎಂದುಕೊಂಡು ಅಥರ್ವ ಖುಷಿಯಿಂದ ನಗುತ್ತಿದ್ದ. ನಾವಿಬ್ಬರೂ ಅವರ ಜತೆಯೇ ಆಪರೇಶನ್ ಥಿಯೇಟರ್ ತನಕವೂ ಹೋದೆವು. ಅಥರ್ವ ನರ್ಸ್ನೊಂದಿಗೆ ಆಪರೇಶನ್ ಥಿಯೇಟರ್ನ ಒಳಹೋದ. ನಾವು ಅಲ್ಲೇ ಬಾಗಿಲಿನಲ್ಲೇ ನಿಂತೆವು. ನಾವು ಅವನಿಂದ ಕಣ್ಮರೆಯಾಗುತ್ತಿದ್ದಂತೆ, ಅವನು ಜೋರಾಗಿ ಅಳುತ್ತಿರುವುದು ಕೇಳಿಸಿತು. ನಮ್ಮ ಕಂದನನ್ನ ವೈದ್ಯರ ಕೈಗೊಪ್ಪಿಸಿ ಇಬ್ಬರೂ ಕಣ್ಣೊರೆಸಿಕೊಳ್ಳುತ್ತಾ ಅಲ್ಲಿಂದೀಚೆ ಬಂದೆವು.
| ಇನ್ನು ಮುಂದಿನ ವಾರಕ್ಕೆ |






0 Comments