ಅಮರ ಚೇತನದ ನಿರ್ಗಮನ, ಆಗಲಿ ವಿಕೃತ ಚೇತನದ ಸಹಗಮನ

ನಾ ದಿವಾಕರ್

ಯು ಆರ್ ಅನಂತಮೂರ್ತಿ ಕನ್ನಡ ಸಾರಸ್ವತ ಲೋಕ ಕಂಡ ಒಬ್ಬ ವಿಶಿಷ್ಟ ಸಾಹಿತಿ, ಹೋರಾಟಗಾರ ಮತ್ತು ಸಾಮಾಜಿಕ ವಿಮರ್ಶಕ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಮ್ಮ ಸಾಹಿತ್ಯವನ್ನು ಕನ್ನಡಿಗರ ಮುಂದಿರಿಸಿದ್ದ ಅನಂತಮೂರ್ತಿ ಯಾವುದೇ ವಿವಾದಕ್ಕೊಳಗಾಗಲು ಬಯಸದೆಯೇ ವಿವಾದಗಳ ಸುಳಿಯಲ್ಲಿ ಸಿಲುಕಿದ ವಿಶಿಷ್ಟ ಚೇತನ. ಸಾಹಿತ್ಯ ಕೇವಲ ಸಾರಸ್ವತ ವಿದ್ವತ್ತಿನ ಒಂದು ಆಯಾಮ, ಸಮಾಜ ಸುಧಾರಣೆಗೂ ಸಾಹಿತ್ಯಕ್ಕೂ ಯಾವುದೇ ಸಂಬಂಧವಿಲ್ಲ, ತತ್ವ, ಸಿದ್ಧಾಂತಗಳ ಕಟ್ಟುಪಾಡುಗಳಿಗೆ ಸಾಹಿತ್ಯವನ್ನು ಮುಡಿಪಾಗಿಡುವ ಅವಶ್ಯಕತೆಯೇ ಇಲ್ಲ ಎಂಬ ವಾದಕ್ಕೆ ಪುಷ್ಠಿ ನೀಡುತ್ತಿರುವ ಒಂದು ವರ್ಗದ ನಡುವೆಯೇ ಈ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ಸಮಾಜದೊಳಗಿನ ಹುಳುಕುಗಳನ್ನು ಎಳೆ ಎಳೆಯಾಗಿ ಹೊರತೆಗೆಯುತ್ತಾ ಸ್ಥಾಪಿತ ಸಾಂಪ್ರದಾಯಿಕ ವ್ಯವಸ್ಥೆಯ ವಿರುದ್ಧ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ ಹಿರಿಮೆ ಅನಂತಮೂರ್ತಿಯದು. ಬ್ರಾಹ್ಮಣ್ಯವಿರಲಿ, ದಲಿತ ವಿರೋಧಿ ಧೋರಣೆ ಇರಲಿ, ಗೋಹತ್ಯೆ ಇರಲಿ, ಗೋಮಾಂಸ ಸೇವನೆ ಇರಲಿ, ಮೂರ್ತಿ ಭಂಜಕ ಕ್ರಿಯೆ ಇರಲಿ, ಮೂಢ ನಂಬಿಕೆ ಇರಲಿ ಯುಆರ್ಎ ತಮ್ಮ ಪ್ರತಿರೋಧವನ್ನು ವಿಭಿನ್ನ ಆಯಾಮಗಳಲ್ಲಿ ವ್ಯಕ್ತಪಡಿಸಲು ಹಿಂಜರಿಯಲಿಲ್ಲ.

ಕರ್ನಾಟಕದ ಸಾಂಸ್ಕೃತಿಕ ರಾಜಕೀಯ ವಲಯದಲ್ಲಿ ಕಳೆದ ಮೂರು ನಾಲ್ಕು ದಶಕಗಳಲ್ಲಿ ಸಂಭವಿಸಿರುವ ಮನ್ವಂತರ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯುಆರ್ಎ ಒಂದು ಸಾಹಿತ್ಯಕ ಅಭಿವ್ಯಕ್ತಿಯಾಗಿ, ಪ್ರತಿರೋಧಕ ರೂಪಕವಾಗಿ, ಸುಪ್ತ ಜಾಗೃತಿಯ ಸಂಕೇತವಾಗಿ ನಿಲ್ಲುತ್ತಾರೆ. ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಅನಂತಮೂರ್ತಿಯವರೊಡನೆ ಭಿನ್ನಾಭಿಪ್ರಾಯ ಇರುವುದು ಸಹಜ ಮತ್ತು ಸ್ವೀಕೃತವೂ ಹೌದು. ಒಪ್ಪಲೇಬೇಕೆಂದಿಲ್ಲ.. ಸಂಸ್ಕಾರ, ಭಾರತೀಪುರ, ಅವಸ್ಥೆಯಂತಹ ಕಾದಂಬರಿಗಳು, ಪೂರ್ವಾಪರ, ಪ್ರಜ್ಞೆ ಮತ್ತು ಪರಿಸರ ಮುಂತಾದ ವಿಮರ್ಶೆಗಳು, ಘಟಶ್ರಾದ್ಧ, ಮೌನಿ ಮುಂತಾದ ಕಥನಗಳು ಇವೆಲ್ಲವೂ ಸಮಾಜವನ್ನು ಹಾಗೂ ಮನುಕುಲದ ಅಭ್ಯುದಯವನ್ನು ಒಂದು ವಿಭಿನ್ನ ದೃಷ್ಟಿಯಿಂದ ನೋಡುವ ಪ್ರಯತ್ನವಷ್ಟೇ ಅಲ್ಲ, ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುವ ಸಮಾಜವನ್ನು ಒಳಗಿನಿಂದಲೇ ಬದಲಾಯಿಸುವ ಅಭಿವ್ಯಕ್ತಿಗಳೂ ಹೌದು. ಹಾಗಾಗಿಯೇ ಅದು ವಿವಾದಾಸ್ಪದವಾಗುತ್ತದೆ. ಮಾರಾಟವಾದ ಕೃತಿಗಳ ಸಂಖ್ಯೆಯೇ ಸಾಹಿತ್ಯದ ಶ್ರೇಷ್ಠತೆಯ ಮಾನದಂಡವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಕೃತಿಗಳು ಸಮಾಜದ ಒಂದು ವರ್ಗಕ್ಕೆ ನಗಣ್ಯ ಎನಿಸಬಹುದು. ಆದರೆ ಸಮಾಜದ ಆಂತರ್ಯವನ್ನು ಭೇಧಿಸಿ, ಒಳಹೊಕ್ಕು ಒಳಿತು ಕೆಡಕುಗಳನ್ನು ಗ್ರಹಿಸಿ ಕಿಂಚಿತ್ತಾದರೂ ಬದಲಾವಣೆಯ ಹವಾ ಮೂಡಿಸುವ ನಿಟ್ಟಿನಲ್ಲಿ ಈ ಕೃತಿಗಳು ಖಂಡಿತವಾಗಿಯೂ ಹೆಚ್ಚು ಮೌಲಿಕವಾದದ್ದು. ಇದು ಅನಂತಮೂತರ್ಿಯ ಜ್ಞಾನದ ಹಿರಿಮೆ, ಅವರು ಸಾಹಿತ್ಯ ಪ್ರೇಮಿಗಳಲ್ಲಿ ಗಳಿಸಿದ ಪೀಠದ ಗರಿಮೆ.
ಹಾಗಾಗಿ ಜ್ಞಾನಪೀಠ ಪ್ರಶಸ್ತಿ ಮತ್ತು ಅದರ ಹಿಂದಿನ ವಾದವಿವಾದಗಳು ಇಲ್ಲಿ ಗೌಣ. ಜ್ಞಾನಪೀಠ ದೊರೆಯದಿದ್ದರೂ ಅನಂತಮೂರ್ತಿಯವರ ಸಾಹಿತ್ಯದ ಮೆರುಗು ಕ್ಷೀಣಿಸುತ್ತಿರಲಿಲ್ಲ ಅಲ್ಲವೇ ? ಜ್ಞಾನಪೀಠ ಪ್ರಶಸ್ತಿ ವಿಜೇತ ಎಂಬ ಉಪಾಧಿಸೂಚಕ ಸಾಹಿತಿಯ ಸಾಮಾಜಿಕ ಸ್ಥಾನಮಾನಗಳನ್ನು ನಿರ್ಧರಿಸುತ್ತದೆಯೇ ಹೊರತು, ಸಾಹಿತ್ಯದ ಅಂತಃಸತ್ವವನ್ನಲ್ಲ. ಅನಂತಮೂರ್ತಿ ಹಲವೆಡೆ ಮುಗ್ಗರಿಸಿರಬಹುದು ಆದರೆ ದಿಟ್ಟ ಹೆಜ್ಜೆಗಳನ್ನಿಟ್ಟು ಮುನ್ನಡೆದಿದ್ದಾರೆ. ಮಡೆ ಸ್ನಾನದ ವಿವಾದ ಎದುರಾದಾಗ, ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಂಡಿ ಕಳಚುತ್ತಿದ್ದಾಗ, ಶೋಷಿತ ಸಮುದಾಯಗಳ ದಮನ ತೀವ್ರವಾದಾಗ, ಮಾನವ ಜೀವಗಳು ತರಗೆಲೆಗಳಂತೆ ವಿಕೃತ ಮನಸ್ಸುಗಳಿಗೆ ಬಲಿಯಾಗುತ್ತಿದ್ದಾಗ, ಮಹಿಳೆಯರು ಅಪಮಾನಕ್ಕೀಡಾಗುತ್ತಿದ್ದಾಗ ಸಾರ್ವಜನಿಕವಾಗಿ ಧುತ್ತೆಂದು ಎದುರಾಗುತ್ತಿದ್ದ ಒಂದು ದನಿ ಅನಂತಮೂರ್ತಿಯದು. ಒಬ್ಬ ಸಾಹಿತಿಯಾಗಿ, ಅಧ್ಯಾಪಕರಾಗಿ, ಹೋರಾಟಗಾರರಾಗಿ, ಜವಾಬ್ದಾರಿಯುತ ಪ್ರಜೆಯಾಗಿ ಯುಆರ್ಎ ಎಂದೂ ಹಿಮ್ಮೆಟ್ಟಿದವರಲ್ಲ, ದಮನಿತರೊಡನೆ ಹೆಗಲು ಕೊಟ್ಟು ನಿಂತವರು. ಅವರು ಅನುಮೋದಿಸಿದ, ಅನುಸರಿಸಿದ ಹೋರಾಟದ ಮಾರ್ಗ ಭಿನ್ನವಾಗಿದ್ದಿರಬಹುದು ಆದರೆ ಧ್ಯೇಯ ಛಿದ್ರವಾಗಲಿಲ್ಲ. ಹಾಗಾಗಿಯೇ ಅನಂತಮೂರ್ತಿಯ ಮೊನಚು ಮಾತುಗಳು ಕೆಲವರಿಗೆ ಕೊಳ್ಳಿ ಇಟ್ಟಂತಾಗುತ್ತಿದ್ದು. ಸಹಜವಲ್ಲವೇ ?
ಅನಂತಮೂರ್ತಿಯವರ ಕೃತಿಗಳನ್ನು ಅಧ್ಯಯನ ಮಾಡಿದಾಗ, ಅವರ ವಿಮರ್ಶಾ ಕೃತಿಗಳನ್ನು ಕೂಲಂಕುಷವಾಗಿ ಓದಿದಾಗ, ಅವರ ಹೋರಾಟದ ಮಾರ್ಗಗಳನ್ನು ಮತ್ತು ಸೈದ್ಧಾಂತಿಕ ನೆಲೆಗಳನ್ನು ಅವಲೋಕಿಸಿದಾಗ ದ್ವಂದ್ವಗಳು ಎದುರಾಗುತ್ತವೆ. ಇದನ್ನು ತಿರಸ್ಕರಿಸುವುದಾಗಲಿ ನಿರಾಕರಿಸುವುದಾಗಲೀ ಸರಿಯಲ್ಲ. ಕನಿಷ್ಠ ಕಳೆದ ಮೂರು ದಶಕಗಳಲ್ಲಿ, ಅಯೋಧ್ಯಾ ಕಾಂಡದ ಅವಧಿಯಿಂದ ನಿರ್ಭಯ ಘಟನೆಯವರೆಗೆ, ತುರ್ತುಪರಿಸ್ಥಿತಿಯಿಂದ ಮೋದಿ ಯುಗದವರೆಗೆ ಅನಂತಮೂರ್ತಿ ತಮ್ಮ ಸಾಮಾಜಿಕ ನೆಲೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭುತ್ವವನ್ನು, ಸ್ಥಾಪಿತ ವ್ಯವಸ್ಥೆಯನ್ನು ಮತ್ತು ಸಂಸ್ಥಾಪಿತ ಸಂಪ್ರದಾಯಗಳನ್ನು ಧಿಕ್ಕರಿಸುವ ಮೂಲಕ ಪ್ರಜ್ಞಾವಂತ ಜನತೆಯಲ್ಲಿ ಒಂದು ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಇದನ್ನು ವಿಮರ್ಶಾತ್ಮಕವಾಗಿ ನೋಡಬಹುದೇ ಹೊರತು ಅಲ್ಲಗಳೆಯಲಾಗುವುದಿಲ್ಲ. ಅವರ ನಿರ್ಗಮನದ ನಂತರ ಅವರ ಸೈದ್ಧಾಂತಿಕ ದ್ವಂದ್ವಗಳು ನಮ್ಮನ್ನು ಕಾಡಬೇಕಿಲ್ಲ. ಬದಲಾಗಿ ದ್ವಂದ್ವಗಳ ನಡುವೆಯೇ ಯುಆರ್ಎ ಪ್ರತಿಪಾದಿಸಿದ ನಿರ್ದಿಷ್ಟ ನೆಲೆಗಳನ್ನು ಪುಷ್ಟೀಕರಿಸಿದರೆ ಸಾಕು.
ಮೋದಿ ಪ್ರಧಾನಿಯಾದರೆ ದೇಶ ತೊರೆಯುವೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ ಅನಂತಮೂತರ್ಿ ಒಂದು ರೀತಿಯಲ್ಲಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.. ಪ್ರಪಂಚವನ್ನೇ ತೊರೆದಿದ್ದಾರೆ. ಅವರ ಈ ವಿವಾದಾಸ್ಪದ ಹೇಳಿಕೆಯನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಎಲ್ಲೋ ಒಂದು ಕಡೆ ಆ ಹೇಳಿಕೆಯಲ್ಲಿ ದೂರದರ್ಶಿತ್ವ ಕಾಣುತ್ತದೆ. ಮೂಡಿಗೆರೆ, ಚಿಕ್ಕಮಗಳೂರು ಮತ್ತು ಇತರೆಡೆ ಕೆಲವು ವಿಕೃತ ಮನಸ್ಸುಗಳು ಅನಂತಮೂರ್ತಿಯವರ ಸಾವನ್ನು ಸಂಭ್ರಮಿಸಿರುವುದನ್ನು ನೋಡಿದಾಗ ಅವರ ಹೇಳಿಕೆಯ ಹಿಂದಿನ ಮಾರ್ಮಿಕ ಸತ್ಯಾಸತ್ಯತೆಗಳು ಅರಿವಾಗುತ್ತದೆ. ಸೋಮನಾಥ ರಥಯಾತ್ರೆ, 1993ರ ಮುಂಬೈ ಗಲಭೆಗಳು, 1984ರ ಸಿಖ್ ಗಲಭೆಗಳು, ಅಯೋಧ್ಯಾ ಕಾಂಡದ ಗಲಭೆಗಳು, 2002ರ ಗೋದ್ರಾ ಮತ್ತು ಗೋದ್ರೋತ್ತರ ಹತ್ಯಾಕಾಂಡ ಈ ಎಲ್ಲ ಸಂದರ್ಭಗಳಲ್ಲಿ ಆಂತರ್ಯದಲ್ಲಿ ಸಂಭ್ರಮಿಸಿದ ಸಾವಿನ ದಲ್ಲಾಳಿಗಳೇ ಇಂದು ಅನಂತಮೂರ್ತಿಯವರ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಇದು ವ್ಯಕ್ತಿಗತ ಪ್ರವೃತ್ತಿಯಲ್ಲ, ಮಂದಗತಿಯಲ್ಲಿ ಫ್ಯಾಸಿಸಂನೆಡೆಗೆ ಸಾಗುತ್ತಿರುವ ಸಾಮಾಜಿಕ ವಿದ್ಯಮಾನ ಎಂಬುದನ್ನು ಈ ಸಂದರ್ಭದಲ್ಲಿ ಗ್ರಹಿಸುವುದು ಅತ್ಯಗತ್ಯ.
ಅನಂತಮೂರ್ತಿಯ ನಿರ್ಗಮನ ಸೃಷ್ಟಿಸಿರುವ ಶೂನ್ಯ ನಮಗೆ ಅರಿವಾಗುವುದು ಇಲ್ಲಿಯೇ. ಅನಂತಮೂರ್ತಿಗಳೇ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ, ಸ್ವಸ್ಥ ಮನಸ್ಸುಗಳಿಗೆ ನೀವು ಇನ್ನೂ ಜೀವಂತವಾಗಿದ್ದೀರಿ, ನಿಮ್ಮ ಹೆಜ್ಜೆಗಳು ದೃಢವಾಗಿ ಮೂಡಿವೆ, ನಿಮ್ಮ ಚೇತನ ಜೀವಂತವಾಗಿದೆ. ನೀವು ಸದಾ ನಮ್ಮೊಳಗೆ ಜಾಗೃತಿಯ ರೂಪಕವಾಗಿ ಇದ್ದೇ ಇರುತ್ತೀರಿ. ಈ ಸಂದರ್ಭದಲ್ಲಿ ಮೃತ್ಯು ಆವರಿಸಿರುವುದು ವಿಕೃತ ಮನಸ್ಸುಗಳಿಗೆ. ನಿಮ್ಮ ನಿರ್ಗಮನದ ನಂತರ ಈ ವಿಕೃತ ಮನಸುಗಳ ಸಹಗಮನವಾದಲ್ಲಿ ಮಾತ್ರ ನಿಮಗೆ ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ. ಹೋಗಿಬನ್ನಿ ಯುಆರ್‌ಎ.
YOU ARE A GENIUS THEY KNOW NOT WHAT YOU STAND FOR FORGIVE THEM AND REST IN PEACE.
 
 

‍ಲೇಖಕರು G

August 24, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Palahalli Vishwanath

    “ಇದು ವ್ಯಕ್ತಿಗತ ಪ್ರವೃತ್ತಿಯಲ್ಲ, ಮಂದಗತಿಯಲ್ಲಿ ಫ್ಯಾಸಿಸಂನೆಡೆಗೆ ಸಾಗುತ್ತಿರುವ ಸಾಮಾಜಿಕ ವಿದ್ಯಮಾನ ಎಂಬುದನ್ನು ಈ ಸಂದರ್ಭದಲ್ಲಿ ಗ್ರಹಿಸುವುದು ಅತ್ಯಗತ್ಯ.”

    ಪ್ರತಿಕ್ರಿಯೆ
  2. Anonymous

    ಅನಂತಮೂರ್ತಿಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದೀರಿ ಸರ್…ಅವರಿಗೆ ಸಾಟಿಯಿಲ್ಲವೆಂದು ಒಪ್ಪದಿರಲು ಸಾಧ್ಯವಿಲ್ಲ…ಖಂಡಿತ ಶೂನ್ಯವೊಂದು ಆವರಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: