ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್

ಪ್ರಿಯ ಎಚ್ಚೆಸ್ವಿ,
ನಿಮ್ಮ ‘ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ ಕೆತ್ತೀತೆ ಪುರುಷೋತ್ತಮನ ಆ ಅಂಥ ದಿವ್ಯ ರೂಪ-ರೇಖೆ" ಎನ್ನುವ ಅಡಿಗರ ಲಾಕ್ಷಣಿಕೆ ಆದಿ ಕವಿ ವಾಲ್ಮೀಕಿಗಷ್ಟೇ ಅಲ್ಲ,ಎಲ್ಲ ಕಾಲಕ್ಕೂ ಅಭಿಜಾತ ಕವಿಗಳಿಗೆ ಸಲ್ಲುವಂಥಾದ್ದು ಎಂದು ಘಂಟಾಘೋಷವಾಗಿ ಸಾರುವಂಥ ಉಮೇದು ನನ್ನಲ್ಲಿ ತುಂಬಿ ಬಂತು.

ನಿಜಕ್ಕೂ ನೀವು ಕಡೆದಿರಿಸಿರುವ ಬುದ್ಧನಾದ ಪುರುಷೋತ್ತಮ ಸಿದ್ಧಾರ್ಥನ ರೂಪು-ರೇಖೆ ಓದುಗರನ್ನು ಬೆರಗುಗಡಲಲ್ಲಿ ಮುಳುಗಿಸಿ-ತೇಲಿಸಿ, ಅದ್ದಿ ಮುಕ್ತಿಯತ್ತ ಕೈಹಿಡಿದು ನಡೆಸುವಂಥ ಬೆಳಕಿನ ಅಲೆ. ಸಿದ್ಧಾರ್ಥನ ಸ್ಥಿತ್ಯಂತರಗಳು, ಒಳಗುದಿಗಳು, ಉಪದೇಶ-ದೀಕ್ಷೆಯ ಪ್ರಕ್ರಿಯೆಗಳು ಅನೂಚಾನವಾಗಿ, ಛಂದೋಬದ್ಧವಾಗಿ ಭಾಷೆಯನ್ನು ತನ್ನ ಲಯಕ್ಕೆ ಒಗಿಸಿಕೊಳ್ಳುತ್ತ ಬೆಳೆದಿರುವ ಪರಿ ಮತ್ತೆ ಮಹಾಕಾವ್ಯಕ್ಕೆ ಪ್ರವೇಶಿಕೆಯಾಗಿ ರಸಿಕರನ್ನು ಸಜ್ಜುಗೊಳಿಸುವ ರೀತಿಯಲ್ಲಿದೆ.

ಕಾವ್ಯಾಲಂಕಾರವೆಂಬುದು ಇಲ್ಲಿ ವರ್ಣನೆ, ಉಪಮೆ, ಪ್ರತಿಮೆ, ಪ್ರತೀಕ, ರೂಪಕಾದಿಗಳ ಮುತ್ತು ಮಾಣಿಕ್ಯಗಳಿಂದ ಶೋಭಾಯಮಾನವಾಗಿ ಬುದ್ಧಚರಣ ‘ಓದನ್ನು ಒಂದು ಆಪ್ಯಯಮಾನವಾದ ಚಾರಣವನ್ನಾಗಿಸುತ್ತದೆ. ವಸ್ತುವಿನ ಅಂತ:ಸತ್ವಕ್ಕೆ ಅನುಗುಣವಾಗಿ ಭಾಷೆಯನ್ನು ಹದಗೊಳಿಸಿರುವ ನಿಮ್ಮ ಛಂದೋಬದ್ಧ ಪ್ರಯೋಗ ಮಹಾಕಾವ್ಯದ ಪುನುರುತ್ಥಾನದ ಮುಂಬೆಳಗಿನಂತೆಯೇ ತೋರುತ್ತದೆ.

ಬುದ್ಧ ಬೋಧಿಸುವ ಮಧ್ಯಮ ಮಾರ್ಗಕ್ಕೆ ವೀಣೆಯನ್ನು ರೂಪಕವಾಗಿ ಬಳಸಿರುವುದಂತೂ ಒಂದು ಅದ್ಭುತ ಸೃಷ್ಟಿ, ಅದ್ಭುತ ಕಲ್ಪನೆ. ಬುದ್ಧಿ-ಹೃದಯಗಳೆರಡನ್ನೂ ಮೀಟುವಂಥ ರೂಪಕವಿದು. ಈ ಮಧ್ಯಮ ಮಾರ್ಗ ಇಂದಿಗೆ ತುಂಬ ಪ್ರಸ್ತುತವಾಗುವ “ಇರುಳ ಕಡಲಲಿ ತೇಲುವ ಬೆಳಕಿನ ಹಡಗು”.

“ಇರುಳೊಂದೆ!ಬೆಳಕುಗಳು ಹಲವು!ನೆಲ-ಬಾನಲ್ಲಿ!”
“ಕಪಿಲವಸ್ತುವೆ ಕರಗಿ ಆಗಿತ್ತೊಂದು ಭವ್ಯ ಪುರುಷಾಕಾರ”
“ಹರಿವ ಹೊಳೆಯಲ್ಲೊಂದು ತೇಲುದೀಪದ ಹಾಗೆ ಕಾಣುವನು ಶಾಕ್ಯಮುನಿ”
“ಬೆಳಕೆ ಬಟ್ಟೆಯನುಟ್ಟು ಬಂದ ಹಾಗಿದೆ ಜ್ಯೋತಿ”
“ದೇಹ, ಮನ, ಮಾತೇನೆ ಕರ್ಮದುತ್ಪಾದನೆಯ ಕೇಂದ್ರಗಳು”
“ನದಿ ಹರಿಯುವಾಗ ಸಾವಿರ ಬೊಗಸೆ ತುಂಬುವವವು…”
“ಕಂಬನಿಯ ಕೊಳದಲ್ಲಿ ಸ್ತಬ್ಧ ದೋಣಿಯ ಕಣ್ಣು”
-ಪುಟಪುಟದಲ್ಲೂ ಸೆಳೆಯುವ ಇಂಥ ಚೆಲುವಾದ, ಅರ್ಥಗರ್ಭಿತವಾದ, ಪ್ರತಿಮಾತ್ಮಕವಾದ ಕಾವ್ಯಾನುಭೂತಿ ನಮ್ಮನ್ನು ಹಿಡಿದು ನಿಲ್ಲಿಸಿ ಮಂತ್ರಮುಗ್ಧರನ್ನಾಗಿಸುತ್ತದೆ.

ಸಾವಧಾನದ ಓದಿನಲ್ಲಿ, ವಸ್ತುವಿನ ಗಹನತೆಯನ್ನು ತಾಕಿಸುತ್ತಲೇ, ಕಾವ್ಯಾಲಂಕಾರದ ಮುತ್ತುರತ್ನಗಳ ಶೋಭೆಯು ತರುವ ಕಾವ್ಯ ಸುಖ ಓದುಗರನ್ನು ಲೋಲುಪ್ತರಾಗಿಸುವಷ್ಟು ಸಮೃದ್ಧವಾಗಿ, ಆಪ್ಯಾಯಮಾನವಾಗಿ ಸಿಗುತ್ತದೆ. ಉತ್ತರ ಕಾಂಡ, ಪ್ರವರ್ತನ ಕಾಂಡ. ದೀಕ್ಷಾ ಕಾಂಡ, ಪರಿನಿರ್ವಾಣ ಕಾಂಡಗಳನ್ನು ತಲುಪಿದಾಗ ಈ ಕಾವ್ಯ ಸುಖವೂ ಕಣ್ತೆರುಸುವ ಬೆಳಕಾಗುತ್ತದೆ.ಬೆಳಕಾಗಿಸಿದ- `ಬುದ್ಧಚರಣ’ಕೆ ಶರಣು.

ಅಭಿನಂದನೆಗಳು ಎಚ್ಚೆಸಿ,ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್

‍ಲೇಖಕರು avadhi

November 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: