ಅಭಯ ಸಿಂಹ ‘ಪಡ್ಡಾಯಿ’ ಕಟ್ಟಿದ ಕಥೆ ಹೇಳುತ್ತಾರೆ..

ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.

ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.

ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.

ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-

ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

ನಮ್ಮ ತುಳು ಸಿನೆಮಾ, ‘ಪಡ್ಡಾಯಿ’ ಸಿನೆಮಾ ಪ್ರೇಕ್ಷಕರಿಂದ, ಸಿನಿಮೋತ್ಸವಗಳಿಂದ ಸಾಕಷ್ಟು ಪ್ರೀತಿ ಸಂಪಾದಿಸಿತು. ಈ ಸಿನಿಮಾ ಮಾಡುವ ಪ್ರಕ್ರಿಯೆ, ನನಗೂ, ಇಡೀ ತಂಡಕ್ಕೂ ಸಾಕಷ್ಟು ಒಳ್ಳೆಯ ನೆನಪುಗಳನ್ನು ಕೊಟ್ಟಿತು.

ಈ ಪ್ರಯಾಣದಲ್ಲಿ ಜೊತೆಯಾದವರು, ಒಳ್ಳೆಯ ಮನಸ್ಸಿನಿಂದ ತೊಡಗಿಸಿಕೊಂಡವರು ಬಹಳಷ್ಟು ಜನ. ಈ ಎಲ್ಲಾ ನೆನಪುಗಳನ್ನು ಸಂಪಾದಿಸಿಡಬೇಕು, ಎಂದು ಅನಿಸಿತ್ತು. ಜೊತೆಗೆ, ಕನ್ನಡದಲ್ಲಿ, ಚಿತ್ರಕಥೆಗಳನ್ನು ಪ್ರಕಟಿಸುವ ಪ್ರಯತ್ನಗಳಲ್ಲಿ ನಮ್ಮದೂ ಒಂದು ಕೊಡುಗೆ ಇರಬೇಕು ಎಂದು ಅಂದುಕೊಂಡೆವು. ಈ ಯೋಚನೆ ಆರಂಭವಾದಾಗ, ದೊಡ್ಡ ಬೆಂಬಲವಾಗಿ ನಿಂತವರು, ಸಿನಿಮಾದ ನಿರ್ಮಾಪಕರಾದ, ಎಸ್. ನಿತ್ಯಾನಂದ ಪೈಯವರು.

ಈ ಸಿನಿಮಾದ ಸೃಷ್ಟಿಯಲ್ಲಿ ಒಂದು ವಿಶೇಷ ಪಾತ್ರ ವಹಿಸಿದವರು, ಗೋಪಾಲಕೃಷ್ಣ ಪೈ. ಹಾಗೇ, ಅಕ್ಷರ ಪ್ರಕಾಶನದ ಕೆ.ವಿ. ಅಕ್ಷರ ಅವರು, ಈ ಪುಸ್ತಕವನ್ನು ಪ್ರಕಟಿಸಲು ಒಪ್ಪಿ, ಪ್ರೋತ್ಸಾಹ ನೀಡಿದ್ದಾರೆ. ಗೆಳೆಯ ಶಿಶಿರ ಪುಟವಿನ್ಯಾಸ ಮಾಡಿಕೊಟ್ಟಿದ್ದಾರೆ. ಇವರೆಲ್ಲರಿಗೂ ನಾನು ಆಭಾರಿ.

ಚಲನಚಿತ್ರ ಜಗತ್ತಿಗೆ ಬರುವಾಗ ಆದರ್ಶವಾಗಿ ನನ್ನೆದುರಿಗೆ ಇದ್ದವರು, ಗಿರೀಶ್ ಕಾಸರವಳ್ಳಿಯವರು. ಸಿನಿಮಾ ಕುರಿತಾಗಿ ನಾನು ಬರವಣಿಗೆ ಮಾಡಿದಾಗ, ಅದಕ್ಕೆ ಮುನ್ನುಡಿ ಬರೆಯಬೇಕು ಎಂದು ಕೇಳಿಕೊಂಡಾಗ ಅವರು ಪ್ರೀತಿಯಿಟ್ಟು ಬರೆದುಕೊಟ್ಟಿದ್ದಾರೆ. ಅವರಿಗೆ ನನ್ನ ಗೌರವಪೂರ್ವಕ ಕೃತಜ್ಞತೆಗಳು. ಹಿರಿಯ ಸಾಹಿತಿಯೂ, ಚಿತ್ರಕಥೆ ಬರಹಗಾರರೂ, ನನ್ನ ಹಿತೈಶಿಗಳೂ ಆಗಿರುವ ಗೋಪಾಲಕೃಷ್ಣ ಪೈ, ಪ್ರೀತಿಯಿಟ್ಟು, ಈ ಪುಸ್ತಕಕ್ಕೆ ಹಿನ್ನುಡಿಯನ್ನು ಬರೆಯಲು ಒಪ್ಪಿಕೊಂಡಿದ್ದಾರೆ. ಅವರಿಗೂ ನನ್ನ ಗೌರವ ಪೂರ್ವಕ ಕೃತಜ್ಞತೆಗಳು.

ಸಿನಿಮಾದ ಸಿದ್ಧತೆಯ ಸಮಯದಲ್ಲಿ ನಿರಂತರವಾಗಿ ನನ್ನೊಂದಿಗೆ ಸಲಹೆ ನೀಡುತ್ತಾ, ಓಡಾಡಿದವರು ನನ್ನ ತಂದೆ ಅಶೋಕವರ್ಧನ. ಈ ಪುಸ್ತಕದ ಕರಡು ತಿದ್ದಿದವರೂ ನನ್ನ ತಂದೆಯೇ. ಮಂಗಳೂರಿನ ನಮ್ಮ ಮನೆಯಲ್ಲಿ, ನನ್ನೆಲ್ಲಾ ಸಮಯದ ಅಶಿಸ್ತುಗಳನ್ನು ತಾಳ್ಮೆಯಲ್ಲಿ ತೂಗಿಸಿಕೊಂಡು ಹೋದದ್ದು ಅಮ್ಮ, ದೇವಕಿ. ಇನ್ನು ನಮ್ಮ ಮಗಳು ಆಭಾಳಿಗೆ ಆಗಿನ್ನೂ ಒಂದು ವರ್ಷವೂ ತುಂಬಿರಲಿಲ್ಲ. ಪತ್ನಿ ರಶ್ಮಿ, ಆಭಾಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ನನ್ನನ್ನು ಸಿನಿಮಾ ಮಾಡುವುದಕ್ಕೆ ಬೆಂಬಲವನ್ನೂ, ಪ್ರೋತ್ಸಾಹವನ್ನೂ ನೀಡಿದ್ದಳು.

ಈ ಪುಸ್ತಕ ಸಂಪಾದಿಸುವಾಗ, ಸಂಭಾಷಣೆಗಳನ್ನು ತುಳುವಿನಿಂದ ಕನ್ನಡಕ್ಕೆ ಭಾಷಾಂತರಿಸಿದವಳೂ ರಶ್ಮಿಯೇ. ನನ್ನ ಈವರೆಗಿನ ಚಿತ್ರ ಪ್ರಯಾಣದ ಉದ್ದಕ್ಕೂ, ಮಾರ್ಗದರ್ಶಕರಾಗಿ ನಿಂತು, ಗೆಳೆಯನಂತೆ ತಿದ್ದಿ, ಪ್ರೋತ್ಸಾಹಿಸಿದ ಎನ್.ಎ.ಎಮ್ ಇಸ್ಮಾಯಿಲ್ ಅವರನ್ನೂ ಈ ಸಂದರ್ಭದಲ್ಲಿ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.

ಇನ್ನು ಚಿತ್ರ ನಿರ್ಮಾಣದಲ್ಲಿ ಭಾಗಿಯಾದ, ನಟರು ಹಾಗೂ ತಂತ್ರಜ್ಞರ ಒಂದು ಅದ್ಭುತ ತಂಡ. ಇವರೆಲ್ಲರಿಗೆ ಕೃತಜ್ಞತೆ ಎಂದರೆ, ಅದು ಸಣ್ಣದಾಗುತ್ತದೆ. ಆದರೆ, ಇದಲ್ಲದಿದ್ದರೆ, ಪಡ್ಡಾಯಿ ಅಸಾಧ್ಯವಾಗಿತ್ತು. ಅವರೆಲ್ಲರ ಪ್ರೀತಿಯನ್ನು ನೆನೆಯುತ್ತಲೇ, ಈ ಪುಸ್ತಕ ನಿಮ್ಮೆದುರು ಇಡುತ್ತಿದ್ದೇನೆ.

1

ಪೂರ್ವರಂಗ
ನನ್ನ ಮೊದಲ ಸಿನಿಮಾ ‘ಗುಬ್ಬಚ್ಚಿಗಳು’ (೨೦೦೮). ಅಲ್ಲಿಂದ ಆರಂಭವಾದ ನನ್ನ ಸಿನಿಮಾ ಯಾನ ಇಂದು ‘ಪಡ್ಡಾಯಿ’ (೨೦೧೭) ತೀರಕ್ಕೆ ಬಂದು ತಲುಪಿದೆ. ಈ ಪ್ರಯಾಣದಲ್ಲಿ ಕಲಿತದ್ದು ಬಹಳ ವಿಷಯ. ಹಿಂದೆಂದಿಗಿಂತಲೂ ಒಂದು ವಿಭಿನ್ನ ಅನುಭವ ಈ ಸಿನಿಮಾ ನನಗೆ ಕೊಟ್ಟಿದೆ.

ಚಿತ್ರ ನಿರ್ದೇಶಕನಿಗೆ ಪ್ರತಿಯೊಂದು ಸಿನಿಮಾವೂ ಹೊಸ ಪ್ರಯಾಣವೇ. ಹೊಸ ತೀರಗಳನ್ನು ಕಾಣುತ್ತಾ, ಆಗ ಈಗ ಏಳುವ ನೀರಿನ ಅಲೆಗಳಲ್ಲಿ ತನ್ನ ದೋಣಿಯನ್ನು ತೇಲಿಸುತ್ತಾ, ಸಮತೋಲನ ಕಾಯ್ದುಕೊಳ್ಳುವ ಸಾಹಸ. ಇದು ನೀರಾಳದಲ್ಲಿ ಕಾಣುವ ಮೀನುಗಳಾಟ ನೋಡುತ್ತಾ ಸಾಗುವ ಪ್ರಯಾಣ. ಕೊನೆಗೊಮ್ಮೆ ತಲುಪುವ ದಡಕ್ಕಿಂತ, ಸಾಗಿ ಬಂದ ಹಾದಿಯೇ ಮುಖ್ಯವಾಗುವ ಸುಂದರ ಕಡಲ ಯಾನ ಇದು.

ನಮ್ಮ ಪಡ್ಡಾಯಿ ಸಿನೆಮಾದ ಇಂಥದ್ದೇ ಒಂದು ಸುಂದರ ಪ್ರಯಾಣ. ಈ ಪಯಣದ ದಾರಿಯನ್ನು ನಮ್ಮ ನೆನಪಿನಲ್ಲಿ ಶಾಶ್ವತವಾಗಿರಿಸಲು ಈ ಬರಹ. ಜೊತೆಗೆ ಆಸಕ್ತರಿಗಾಗಿ, ಕುತೂಹಲಿಗಳಿಗಾಗಿ, ಸಿನಿಮಾದ ಚಿತ್ರಕಥೆಯನ್ನೂ ಹಂಚಿಕೊಳ್ಳುತ್ತಿದ್ದೇವೆ. ಚಿತ್ರಕಥೆಯನ್ನು ಕಟ್ಟಿದ ವಿಧಾನವನ್ನೂ ಹಂಚಿಕೊಂಡಿದ್ದೇವೆ.

ಮಂಗಳೂರಿನ, ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಓದುತ್ತಿರಬೇಕಾದರೆ, (೨೦೦೦-೨೦೦೩) ಶೇಕ್ಸ್‍ಪಿಯರ್ ಮಹಾಕವಿಯ ಮ್ಯಾಕ್ಬೆತ್ ನನಗೆ ಪಠ್ಯವಾಗಿತ್ತು. ಆಗ ಅದನ್ನು ಓದಿದ್ದರೂ, ಅದರ ಆಳ, ವಿಸ್ತಾರ ಸಂಪೂರ್ಣವಾಗಿ ನನಗೆ ದಕ್ಕಿರಲಿಲ್ಲ.

ಆದರೆ, ಕಾಲಕ್ರಮೇಣ ಅದು ನನ್ನೊಳಗೆ ವಿಭಿನ್ನ ರೂಪಗಳನ್ನು ಪಡೆಯುತ್ತಾ ಸಾಗಿತ್ತು. ಮುಂದೆ ಪೂನಾದಲ್ಲಿನ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಎಫ್‍.ಟಿ.ಐ.ಐಯಲ್ಲಿ ಸಿನಿಮಾವನ್ನು ಅಧ್ಯಯನ ಮಾಡಲು ಆರಂಭಿಸಿದಾಗ, ಜಗತ್ತಿನ ವಿಭಿನ್ನ ನಿರ್ದೇಶಕರು ಮ್ಯಾಕ್ಬೆತ್ ಕಥೆಯನ್ನು ಅಳವಡಿಸಿಕೊಂಡಿದ್ದನ್ನು ನೋಡಿದ್ದೆ. ಅಂಥಾ ಸಮಯದಲ್ಲೆಲ್ಲಾ, ನನ್ನೊಳಗಿದ್ದ ಮ್ಯಾಕ್ಬೆತ್ ಹೊಸ ರೂಪಗಳನ್ನು ಪಡೆಯುತ್ತಲೇ ಸಾಗಿತ್ತು. ಸುಮಾರು ೨೦೧೨ರ ಸಮಯಕ್ಕೆ, ನನ್ನದೇ ಒಂದು ಮ್ಯಾಕ್ಬೆತ್ ಅಳವಡಿಕೆ ಬರೆಯಲೂ ಆರಂಭಿಸಿದ್ದೆ. ಆದರೆ, ಕಾರಣಾಂತರಗಳಿಂದ ಅದು ಸಿನಿಮಾ ಮಾಡುವ ಹಂತಕ್ಕೆ ಹೋಗಲಿಲ್ಲ.

೨೦೧೬ನೇ ಇಸವಿಯಲ್ಲಿ ಶೇಕ್ಸ್‍ಪಿಯರ್ ತೀರಿಕೊಂಡು ನಾಲ್ಕುನೂರು ವರ್ಷ ತುಂಬಿತ್ತು. ಇದನ್ನು ನಾಟಕಕಾರನ ನೆನಪಿನೊಂದಿಗೆ ಆಚರಿಸಲು, ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ಆಗ, ನಾನು ಬರೆದಿದ್ದ ಚಿತ್ರಕಥೆ ಮತ್ತೆ ಹೊರತೆಗೆದೆ. ಆದರೆ, ಅದರಲ್ಲಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿತ್ತು. ಅದು ಇನ್ನೂ ಸಿನಿಮಾ ಯೋಗ್ಯವಾಗಿರಲಿಲ್ಲ. ಹೀಗಾಗಿ ಸ್ಪರ್ಧೆಗೆ ಕಳಿಸಲಿಲ್ಲ.

ಆದರೆ, ಮತ್ತೆ ಬರವಣಿಗೆ ಮುಂದುವರೆಯಿತು. ಕೆಲವು ದಿನಗಳ ಬರವಣಿಗೆಯ ನಂತರ ಬರವಣಿಗೆ ಹರಳುಗಟ್ಟುತ್ತಿಲ್ಲ ಎನ್ನುವುದು ಅರಿವಾಗಲಾರಂಭಿಸಿತು. ಹಾಗಾಗಿ ಆ ಚಿತ್ರಕಥೆಯನ್ನು ಅಲ್ಲೇ ಬಿಟ್ಟು ಕೆಲಸ ಮುಂದುವರೆಸಿದ್ದೆ. ಹೀಗೆ ಕುಂಟುತ್ತಾ ಸಾಗಿದ್ದ ಚಿತ್ರಕಥೆಗೆ ಒತ್ತಡ ಸೃಷ್ಟಿಯಾದದ್ದು, ತೀರಾ ಇತ್ತೀಚೆಗೆ. ದೇಶದಲ್ಲಿ ನಡೆಯುತ್ತಿದ್ದ ಅನೇಕ ವಿದ್ಯಮಾನಗಳು, ಮಂಗಳೂರಿನ ಪರಿಸರದ ತಲ್ಲಣಗಳು ಸದಾ ನನ್ನನ್ನು ಕಾಡುತ್ತಲೇ ಇದ್ದವು. ಮ್ಯಾಕ್ಬೆತ್ ನಾಟಕದ ಮಹತ್ವಾಕಾಂಕ್ಷೆ, ದುರಾಸೆ, ಯುದ್ಧ ಇತ್ಯಾದಿ ವಿಚಾರಗಳು ತಲೆಯೊಳಗೆ ಚಿತ್ರಕಥೆಗೆ ಬೇಕಾದ ಸರಕನ್ನು ಕೊಡುತ್ತಾ ಸಾಗಿತ್ತು.

ಆಗೊಮ್ಮೆ, ಈಗೊಮ್ಮೆ ಚಿತ್ರಕಥೆಯಲ್ಲಿ ಬೆಳವಣಿಗೆಯೂ ಸಾಗಿತ್ತು. ನನಗೆ ಪ್ರಕಟಿತ ಕಥೆಯ ಅಳವಡಿಕೆಯಲ್ಲಿ ಇದು ಮೊದಲ ಅನುಭವ. ಅನೇಕ ಚಿತ್ರ ನಿರ್ದೇಶಕರು ಇದನ್ನು ಯಶಸ್ವಿಯಾಗಿ ಮಾಡಿದ್ದನ್ನು, ಸವಾಲುಗಳು ಹುಟ್ಟಿದ್ದನ್ನು ಕಂಡಿದ್ದೆ. ಹೀಗಾಗಿ ಅಳವಡಿಕೆಯಲ್ಲಿ ನನ್ನದೊಂದು ಹದ, ಕ್ರಮ ಕಂಡುಕೊಳ್ಳುವುದು ಅಗತ್ಯವಾಗಿತ್ತು.

ಪಡ್ಡಾಯಿ ಸಿನಿಮಾವನ್ನು ಮಾಡಲು ಮೂಲ ಪ್ರೇರಣೆ, ಮನುಷ್ಯ ಇಂದು ಆಧುನಿಕತೆಯ ಸೋಗಿನಲ್ಲಿ ಕಳೆದುಕೊಳ್ಳುತ್ತಿರುವ ಸಾಮಾಜಿಕ ಜೀವನವನ್ನು, ಸಾಮಾಜಿಕ ಕಳಕಳಿಯನ್ನು ಗಮನಿಸುವುದಾಗಿತ್ತು.

ಇದಕ್ಕೆ, ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಇರುವ ಮೊಗವೀರರ ನೆನಪಾಯಿತು. ಇವರು ಇಂದಿಗೂ ಸಾಮಾಜಿಕವಾಗಿ ಪರಸ್ಪರ ತೀರಾ ಹತ್ತಿರ ಇದ್ದುಕೊಂಡೇ ವಾಸಿಸುತ್ತಿದ್ದಾರೆ. ಹೆಚ್ಚಿನ ಮೊಗವೀರರ ಊರುಗಳಲ್ಲಿ, ಮನೆಯಿಂದ ಮನೆಗೆ ಕಾಂಪೌಂಡು ಗೋಡೆಗಳೇ ಇಲ್ಲ. ಇದು ನನ್ನ ಆಸ್ತಿ, ಅದು ನಿನ್ನದು ಎನ್ನುವ ಬಹಳ ಸ್ಪಷ್ಟ ವಿಂಗಡಣೆಗಳಿಲ್ಲ. (ಕಾನೂನಿನ ಪ್ರಕಾರ ಅವೆಲ್ಲವೂ ಇವೆ.)

ಊರುಗಳಲ್ಲಿ ಎಲ್ಲರೂ ಪರಿಚಿತರೇ, ಎಲ್ಲರೂ ಪರಸ್ಪರ ಕಷ್ಟಕ್ಕೆ ಆಗಿಬರುವವರೇ. ಈ ಸ್ಥಿತಿ ಇಂದು ಬದಲಾಗುತ್ತಿದೆ. ಇದಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಅನೇಕ ಕಾರಣಗಳು. ಇದು ನನ್ನ ಕಥೆಯ ಧಾತುವೇ ಆಗಿದ್ದರಿಂದ ಮೊಗವೀರರನ್ನು ಹಿನ್ನೆಲೆಯಲ್ಲಿ ಇಟ್ಟುಕೊಳ್ಳುವುದು ಎಂದು ನಿರ್ಧಾರವಾಯಿತು. ಚಿತ್ರಕಥೆಯ ಮುಂದಿನ ಎಲ್ಲಾ ಬೆಳವಣಿಗೆಗಳು, ಈ ನಿರ್ಧಾರದ ಮೇಲೆಯೇ, ಆ ಚೌಕಟ್ಟಿನ ಒಳಗೇ ನಡೆಯಲಾರಂಭಿಸಿತು.

ಮುಂದಿನ ದಿನಗಳಲ್ಲಿ, ಚಿತ್ರಕಥೆಗಾಗಿ, ಮೊಗವೀರರ ನಿತ್ಯ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದಂತೆಯೇ, ಎಷ್ಟೋ ವರ್ಷಗಳಿಂದ ಮಂಗಳೂರಲ್ಲಿ ಇದ್ದರೂ, ನಮ್ಮೊಂದಿಗೇ ಇರುವ ಈ ಸಮುದಾಯದ ಬಗ್ಗೆ ನಮ್ಮ ಅರಿವು ಎಷ್ಟು ಕಡಿಮೆ ಎನ್ನುವುದು ತಿಳಿಯಿತು. ಆದರೆ, ಇವೆಲ್ಲವನ್ನೂ ತಿಳಿದುಕೊಳ್ಳುವ ಅವಕಾಶ ನನಗೆ ಈ ಸಿನಿಮಾದಿಂದ ಲಭಿಸಿತು.

ಅಳವಡಿಕೆಯ ಚಡಪಡಿಕೆಗಳು
ಅಳವಡಿಕೆ ಎಂದಾಗ, ಮೂಲ ಕೃತಿಗೆ ಎಷ್ಟು ಬದ್ಧವಾಗಿರಬೇಕು? ಅದರಿಂದ ಎಷ್ಟು ದೂರ ಸಾಗಬಹುದು ಎನ್ನುವುದಕ್ಕೆ ಹಲವು ರೀತಿಯ ಮಾದರಿಗಳು ಇಂದು ನಮಗೆ ಸಿಗುತ್ತವೆ. ಕನ್ನಡದಲ್ಲೇ ‘ಸಂಸ್ಕಾರ’ದಂಥಾ ಕೃತಿಯನ್ನು ನೋಡಿದರೆ, ಆ ಸಿನಿಮಾ, ಮೂಲ ಕೃತಿಗೆ ಸಾಕಷ್ಟು ನಿಷ್ಟವಾಗಿ ಸಾಗುತ್ತದೆ.

‘ಗುಲಾಬಿ ಟಾಕೀಸ್’ ಅಥವಾ ‘ದ್ವೀಪ’ದಂಥಾ ಕೃತಿ ನೋಡಿದರೆ, ಇದು ಸಾಕಷ್ಟು ಸ್ವಾತಂತ್ರ್ಯ ತೆಗೆದುಕೊಂಡ ಕೃತಿಗಳು. ನನಗೆ ಸಿನಿಮಾ ಸ್ವತಂತ್ರ ಕೃತಿಯಾಗಿ ನಿಲ್ಲಬೇಕು. ಆದರೆ, ಅಳವಡಿಕೆ ಎಂದಾಗ ಮೂಲ ಕೃತಿಯನ್ನು ನೆನಪಿಸುವಂತೆಯೂ ಇರಬೇಕು ಅಂದುಕೊಂಡೆ. ಸಿನೆಮಾಕ್ಕೆ ಅದರದ್ದೇ ಆದ ಒಂದು ವ್ಯಾಕರಣ ಇದೆ. ಈ ವ್ಯಾಕರಣದ ಒಳಗಿದ್ದುಕೊಂಡೇ ಹೊಸ ರೂಪಕಗಳನ್ನು ಕಂಡುಕೊಳ್ಳಬೇಕು.

‘ಮ್ಯಾಕ್ಬೆತ್’ನಂಥಾ ರೂಪಕಾತ್ಮಕವಾಗಿ ಸಾಕಷ್ಟು ಪ್ರಭಾವಿ ಕೃತಿಯನ್ನು ಸಿನಿಮಾಗೆ ದಕ್ಕಿಸಿಕೊಳ್ಳಬೇಕಿದ್ದರೆ, ನಾನು ಆಯ್ಕೆ ಮಾಡಿಕೊಂಡ ಪರಿಸರದೊಳಗೇ, ಸಿನಿಮಾ ಮಾಧ್ಯಮದ ಚೌಕಟ್ಟಿನೊಳಗೇ ಹುಟ್ಟಿಕೊಂಡ ರೂಪಕಗಳು ಸೃಷ್ಟಿಯಾಗಬೇಕಿತ್ತು. ಹಾಗೆಯೇ, ಒಂದು ಚಾರಿತ್ರಿಕ ಸಮಯದಲ್ಲಿ ನಡೆಯುವ ಮೂಲ ಕಥೆಯನ್ನು, ಇಂದಿನ ಸಮಯಕ್ಕೆ, ಅದರ ವಾಸ್ತವತೆಗೆ ಅಳವಡಿಸುವ ಕೆಲಸವೂ ಆಗಬೇಕಿತ್ತು.

ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.

Link to audience in UK:
https://amzn.to/2MtHFw5

Link to audience in USA:
https://amzn.to/2MtHukp

Link to audience in India:
https://bit.ly/2KLzUzB

 

| ಇನ್ನು ಉಳಿದದ್ದು ನಾಳೆಗೆ ।

‍ಲೇಖಕರು avadhi

September 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: