ಅಭಯ ಸಿಂಹ:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?

ಬಿ ಸುರೇಶ್ ಲೇಖನಕ್ಕೆ  ಪ್ರತಿಕ್ರಿಯೆ-

– ಅಭಯ ಸಿಂಹ

ಈ ಲಾಭಕ್ಕಾಗಿ ಶಾಲೆಯನ್ನು ನಡೆಸುವುದು ಎನ್ನುವ ಸರಕಾರದ ಧೋರಣೆ ಭಾರೀ ತಮಾಷೆಯಾಗಿದೆ. ಸರಕಾರ ಎನ್ನುವುದು ಒಂದು ಕಾರ್ಪರೇಟ್ ಬಾಡಿಯ ಥರಾ ವರ್ತಿಸುವುದು ಭಾರೀ ವಿಚಿತ್ರ ಸಂದರ್ಭ. ಆದರೆ ಇದು ದುರಾದೃಷ್ಟವಶಾತ್ ಕರ್ನಾಟಕ ಮಾತ್ರವಲ್ಲ, ಭಾರತದಾದ್ಯಂತ ನಡೀತಿದೆ. ಇರಲಿ ಅದರ ಕುರಿತು ಇಲ್ಲಿ ಮಾತಾಡುವುದಿಲ್ಲ. ನಮ್ಮ ಕನ್ನಡದ್ದೇ ಸಂದರ್ಭಕ್ಕೆ ಬರೋಣ…

ನನ್ನ ಮಾವ ದಕ್ಷಿಣ ಕನ್ನಡದ ಒಂದು ಸಣ್ಣ ಹಳ್ಳಿಯಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು (!) ಕಳೆದ ಸುಮಾರು ಮೂವತ್ತು ವರ್ಷದಿಂದ ಅಲ್ಲಿನ ಪರಿಸ್ಥಿತಿ ಹೀಗೆಯೇ ಇದೆಯಂತೆ. ಅಲ್ಲಿ ಒಂದರಿಂದ ಏಳನೆಯ ತರಗತಿಯವರೆಗಿನ ವಿದ್ಯಾರ್ಥಿಗಳಿದ್ದರೂ, ಉಪಾಧ್ಯಾಯರು ಇವರೊಬ್ಬರೇ. ಉಪಾಧ್ಯಾಯ ಮಾತ್ರವಲ್ಲ, ಶಾಲೆಯಲ್ಲಿನ ಗುಮಾಸ್ತ, ಹಮಾಲಿ ಎಲ್ಲವೂ ಇವರೇ! ಸರಕಾರದ ಕಡೆಯಿಂದ ಶಾಲೆಯನ್ನು ನಡೆಸಲು ಬರುವ ಇತರ ಖರ್ಚುಗಳನ್ನೂ ಸಮರ್ಥವಾಗಿ ಒದಗಿಸುತ್ತಿಲ್ಲವಂತೆ. ಮಕ್ಕಳ ಕಷ್ಟ ಸಹಿಸಲಾಗದೇ, ಇವರೇ ತಮಗೆ ಬರುವ ಅಲ್ಪ ಸಂಬಳದಲ್ಲಿ ಇನ್ನಿಬ್ಬರು ಉಪಾಧ್ಯಾರರುಗಳನ್ನು ನೇಮಿಸಿಕೊಂಡು ಶಾಲೆಯನ್ನು ನಿಭಾಯಿಸುತ್ತಿದ್ದಾರೆ. ಮತ್ತೆ ಶಾಲೆಯ ಮಕ್ಕಳಿಗೆ ಕುಡಿಯಲು ನೀರಿನ ವ್ಯವಸ್ಥೆಗೆಂದು ಐವತ್ತು ಸಾವಿರದಷ್ಟು ಖರ್ಚುಮಾಡಿ ಟ್ಯಾಂಕಿನವ್ಯವಸ್ಥೆ ಮಾಡಿದರು. ಹಣ, ಮತ್ತೆ ಮುಖ್ಯೋಪಾಧ್ಯಾಯರ ಕಿಸೆಯಿಂದ.

ಇನ್ನು ಶಾಲೆಯಲ್ಲಿ ಬಿಸಿಯೂಟ ಆರಂಭಿಸಿಯಾದ ಮೇಲೆ ಇವರುಗಳಿಗೆ ಇನ್ನೊಂದು ತೊಂದರೆ! ಸರಕಾರದಿಂದ ನೇಮಕಗೊಂಡ ಅಡಿಗೆಯವರು ಬರದಿದ್ದರೆ, ಅಂದಿನ ಅಡಿಗೆಯ ವ್ಯವಸ್ಥೆಯೂ ಈ ಉಪಾಧ್ಯಾಯರುಗಳದ್ದೇ! ಅಂದು ಊಟ ಹಾಕದಿದ್ದರೆ ಎಷ್ಟೋ ಮಕ್ಕಳಿಗೆ ದಿನದ ಏಕೈಕ ಊಟವೂ ಸಿಗುವುದಿಲ್ಲ ಮಾತ್ರವಲ್ಲ, ಸರಕಾರದ ಕಡೆಯಿಂದ ಉಪಾಧ್ಯಾಯರುಗಳ ಮೇಲೆ ವಿಚಾರಣೆ ನಡೆಯುತ್ತಂತೆ! ಮತ್ತೆ ಉಪಾಧ್ಯಾಯರು ತಮ್ಮ ಸಂಬಳದ ಕುರಿತಾಗಿಯೋ, ಇನ್ಯಾವುದೋ ಶಾಲೆಗೆ ಸಂಬಂಧಿಸಿದ ವ್ಯವಹಾರವೋ ಬಂದರೆ, ತಿಂಗಳಿಗೆ ಕನಿಷ್ಟ ಎರಡು-ಮೂರು ಬಾರಿ ಸುಮಾರು ೩೦ ಕಿ.ಮಿ ದೂರದ ಬಿ.ಸಿ.ರೋಡಿಗೋ ಇನ್ನೂ ದೂರದ ಮಂಗಳೂರಿಗೋ ಹೋಗಲೇ ಬೇಕು. ಅಂದು ಶಾಲೆಯ ಗತಿ?!

ಆದರೆ ಸರಕಾರದ ಕಡೆಯಿಂದ ನಿಷ್ಟೆಯಿಂದ ವಿಚಾರಣಾ ಅಧಿಕಾರಿ ಹಾಜರಾಗುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಶಾಲೆಗಳ ವಿಂಗಡಣೆ ಮಾಡುವುದರಿಂದಾಗಿ ವಿಚಾರಣೆಗೆ ಅಧಿಕಾರಿ ಬರುವ ದಿನದಂದು ಈ ಮುಖ್ಯೋಪಾಧ್ಯಾಯರು ಬೇರೆ ಶಾಲೆಯಿಂದ ವಿದ್ಯಾರ್ಥಿಗಳನ್ನು ತಂದು ಸಂಖ್ಯೆ ತೋರಿದ್ದೂ ಉಂಟಂತೆ!

ಮತ್ತೆ ಜನಗಣನೆ, ಸರಕಾರೀ ಯೋಜನೆಗಳ ಬಿತ್ತರಣೆ ಇತ್ಯಾದಿಗಳಿಗೆ ಈ ಉಪಾಧ್ಯಾಯರುಗಳು ಸದಾ ಸರಕಾರದ ಕಾಲಾಳುಗಳು ಎಂಬ ಭಾವನೆ. ಸಿಗುವ ಎಲ್ಲಾ ಸಾರ್ವಜನಿಕ ರಜೆಗಳಲ್ಲೂ ಇವರು ಸರಕಾರದ ಕೆಲಸಕ್ಕೇ ಮುಡಿಪು. ನನ್ನ ಅತ್ತೆ ಕೇರಳಾದ ಹಳ್ಳಿಯೊಂದರಲ್ಲಿ ಶಿಕ್ಷಕಿ. ಆದರೂ ಮಾವ ವಾರದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಅವರೊಂದಿಗಿದ್ದು ಮತ್ತೆ ಬೆಳಗ್ಗೆ ನಲವತ್ತು ಕಿ.ಮಿ ಬೈಕಲ್ಲಿ ತಮ್ಮ ಶಾಲೆಗೆ ಹಾಜರಾಗುತ್ತಾರೆ. ಇದನ್ನೆಲ್ಲಾ ನನ್ನೊಂದಿಗೆ ಹಂಚಿಕೊಂಡಾಗ, ಇಷ್ಟೆಲ್ಲಾ ಆದಮೇಲೆ ನಿಮಗೆ ಸಂಬಳ ಏನಾದರೂ ಕೈಯಲ್ಲಿ ಉಳಿಯುತ್ತಾ ಎಂದು ಕೇಳಿದೆ. ಇಲ್ಲ ಹೆಚ್ಚಿನ ಬಾರಿ ಸಂಬಳ ಮಾತ್ರವಲ್ಲ, ಸ್ವಂತ ದುಡ್ಡೂ ಕೈಬಿಡುತ್ತೆ. ಮತ್ತೆ ಅನೇಕ ಬಾರಿ ತೀರಾ ದೊಡ್ಡ ಖರ್ಚು ಎದುರಾದರೆ, ಊರಿನ ಜನ ಒಂದಷ್ಟನ್ನು ತುಂಬು ಹೃದಯದಿಂದ ಕೊಡುತ್ತಾರೆ ಎಂದರು. ಮಾವನಿಗೆ ಸ್ವಂತ ತೋಟ ಇರುವುದರಿಂದ ಮನೆ ನಡೆಸುವುದು ಕಷ್ಟವಾಗುವುದಿಲ್ಲ. ತೋಟವನ್ನು ನೋಡಿಕೊಳ್ಳಲು ಸಮಯ ಸಾಲುವುದಿಲ್ಲ ಎನ್ನುವ ಕೊರಗು ಇದೆ.

ಯಾಕೆ ಈ ಶಾಲೆಯ ಸಹವಾಸ ನಿಮಗೆ, ವಿ.ಆರ್.ಎಸ್ ತೆಗೆದುಕೊಳ್ಳಬಹುದಲ್ಲಾ ಎಂದು ನಾನು ಕೇಳಿದರೆ, ಇಲ್ಲ ನಲವತ್ತರ ಹತ್ತಿರ ಮಕ್ಕಳಿದ್ದಾರೆ ನಮ್ಮ ಶಾಲೆಯಲ್ಲಿ (ಒಂದರಿಂದ ಏಳರವರೆಗೆ ಸೇರಿಸಿ) ನಾನು ಬಿಟ್ಟರೆ, ಮತ್ತೆ ಈ ಶಾಲೆಗೆ ನೇಮಕಾತಿ ಆಗುವುದಿಲ್ಲ. ಮತ್ತೆ ಈ ಮಕ್ಕಳ ಶಿಕ್ಷಣದ ಗತಿ ಏನು? ಅವರ ಮುಖ ನೋಡಿದಾಗ, ಊರವರ ವಿಶ್ವಾಸ ನೋಡಿದಾಗ ಎಲ್ಲ ಕಷ್ಟ ಮರೆಯುತ್ತದೆ ಎನ್ನುತ್ತಾರೆ. ಇವರು ನನ್ನ ಮಾವ ಎಂದು ನಾನು ಎತ್ತಿ ಆಡುತ್ತಿಲ್ಲ. ಬುದ್ಧಿವಂತರ ನಾಡು ಎಂದು ಬೀಗುವ ದಕ್ಷಿಣ ಕನ್ನಡದಲ್ಲೇ ಮಕ್ಕಳ ಶಿಕ್ಷಣದ ಗತಿ ಇಷ್ಟು ಅಧ್ಬುತವಾಗಿದ್ದರೆ, ಇನ್ನು ಕರ್ನಾಟಕದ ಇತರ ಕಡೆಗಳಲ್ಲಿ ಏನು ಕಥೆ?! ಇವರ ಕೂಗು ಕಾರ್ಪರೇಟ್ ಸರಕಾರದ ಕಿವಿಗೆ ಬಿದ್ದೀತೇ?

 

‍ಲೇಖಕರು avadhi

November 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ದಿವಾಕರ

    ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಎಂದರೆ ಕನ್ನಡ ಶಾಲೆಗಳನ್ನು, ಗ್ರಾಮೀಣ ಮತ್ತು ಪಟ್ಟಣಗಳ ಬಡ ಮಕ್ಕಳ ಶಾಲೆಗಳನ್ನು ಮುಚ್ಚುವುದು ಎಂದೇ ಗ್ರಹಿಸಬೇಕು. ಇದು ಮಧ್ಯಮವರ್ಗಗಳನ್ನು, ವಿಶೇಷವಾಗಿ ಮೇಲ್ ಮಧ್ಯಮ ವರ್ಗಗಳನ್ನು ತಟ್ಟುವ ವಿಷಯವಲ್ಲ. ಪರಿಣಾಮ ನೋಡಿ, ಸರ್ಕಾರದ ಈ ನೀತಿಯ ವಿರುದ್ಧ ಯಾವುದೇ ಹೋರಾಟ ರೂಪುಗೊಂಡಿಲ್ಲ. ಎಲ್ಲೋ ಗಡಿಯಾಚೆ ನಡೆದ ಒಂದು ಘಟನೆಗೆ, ಯಾವುದೇ ತಲೆ ಕೆಟ್ಟ ರಾಜಕಾರಣಿ ನೀಡಿದ ಹೇಳಿಕೆಗೆ ಉಗ್ರವಾಗಿ ಸ್ಪಂದಿಸುವ ಕನ್ನಟ ಪರ ಸಂಘಟನೆಗಳು ಈ ವಿಚಾರದಲ್ಲಿ ಏಕೋ ದಿವ್ಯ ಮೌನ ವಹಿಸಿವೆ. ಪ್ರತಿಯೊಂದು ಹಳ್ಳಿಯಲ್ಲೂ ಒಂದೊಂದು ವೀರ ಕನ್ನಡ ಯೋಧರ ಸಂಘಗಳಿವೆ. ಸೇನೆಗಳಿವೆ. ರಕ್ಷಣಾ ವೇದಿಕೆಗಳಿವೆ. ತಮ್ಮೂರಿನಲ್ಲಿ ಮುಚ್ಚಲಾಗುತ್ತಿರುವ ಶಾಲೆಗಳನ್ನು ಪುನರಾರಂಭಿಸಲು ಅಥವಾ ಮುಚ್ಚುವ/ವಿಲೀನಗೊಳಿಸುವ ಪ್ರಯತ್ನವನ್ನು ತಡೆಗಟ್ಟಲು ಕನ್ನಡ ಧೀರರು ಕೊಂಚಮಟ್ಟಿಗಾದರೂ ಶ್ರಮ ವಹಿಸಿದರೆ, ತಾವು ಹೇಳಿದಂತೆ ಒಂದು ಸ್ಪಷ್ಟ ಆಯಾಮ ದೊರೆಯಬಹುದು. ಭಾರತೀಯ ಸಮಾಜದ ವಿಪರ್ಯಾಸವೆಂದರೆ ಹೋರಾಟಗಳು ರೂಪುಗೊಳ್ಳುವುದೇ ಮಧ್ಯಮ ವರ್ಗಗಳಿಗೆ ಬಿಸಿ ತಟ್ಟಿದಾಗ. ಸರ್ಕಾರ ಇಂಗ್ಲಿಷ್ ಶಾಲೆಗಳನ್ನು ಮುಚ್ಚಲಿ ,ಆಗ ನೋಡಿ ಎಂತಹ ಉಗ್ರ ಪ್ರತಿಭಟನೆ ನಡೆಯುತ್ತದೆ. ಇದು ವಿಡಂಬನೆ ಮಾತ್ರವಲ್ಲ ವಾಸ್ತವವೂ ಹೌದು. ನಿಜವಾದ ಕನ್ನಡ ಕಾಳಜಿ ಉಳ್ಳ ಕನ್ನಡ ಕ್ರಿಯಾ ಸಮಿತಿ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಮುಂದಿಟ್ಟು ಕೆಲವು ಮುಚ್ಚಲ್ಲಟ್ಟ ಶಾಲೆಗಳಿಗೆ ಭೇಟಿ ನೀಡಿ ಜನರಲ್ಲಿ ಪ್ರಜ್ಞೆ ಮೂಡಿಸುತ್ತಿದೆ. ಇದು ರಾಜ್ಯವ್ಯಾಪಿ ಹೋರಾಟವಾಗಬೇಕಾದರೆ, ಕನ್ನಡ ರಕ್ಷಣಾ ವೇದಿಕೆಗಳು ಭಾಷಾಭಿಮಾನದ ಚೌಕಟ್ಟಿನಿಂದ ಹೊರಬಂದು ವಾಸ್ತವ ಸಾಮಾಜಿಕ ಸನ್ನಿವೇಶಕ್ಕೆ ಪೂರಕವಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಅತ್ಯಗತ್ಯ. ಬೆಳಗಾವಿ,ಠಾಕರೆ ಇವೆಲ್ಲಕ್ಕಿಂತಲೂ ದೊಡ್ಡ ಸಮಸ್ಯೆ ಶಾಲೆಗಳನ್ನು ಮುಚ್ಚುವುದು. ಠಾಕ್ರೆ ಕನ್ನಡದ ಕವಿಯೊಬ್ಬರನ್ನು ಮಾತ್ರ ಅವಹೇಳನ ಮಾಡಿದ್ದಾರೆ ಆದರೆ ಕಾಗೇರಿ ಮತ್ತು ಅವರ ಸರ್ಕಾರ ಕನ್ನಡದ ಅಸ್ತಿತ್ವವನ್ನೇ ಅವಹೇಳನ ಮಾಡುತ್ತಿದ್ದಾರಲ್ಲವೇ ? ಅವರ ಪ್ರತಿಕೃತಿಯ ದಹನ ಏಕಾಗುತ್ತಿಲ್ಲ ? ಯೋಚಿಸಿ ನೋಡಿ.ಹೋರಾಟಗಳಿಗೂ ನಿರ್ದಿಷ್ಟ ಉದ್ದೇಶಗಳಿಲ್ಲದಿದ್ದರೆ, ಸಮಗ್ರ ದೃಷ್ಟಿಕೋನ ಇಲ್ಲದಿದ್ದರೆ ಈ ರೀತಿ ಆಗುತ್ತದೆ. ಕನ್ನಡ ಉಳಿಯಬೇಕಾದರೆ ಕನ್ನಡಿಗರೂ ಉಳಿಯಬೇಕು, ಕನ್ನಡಿಗರು ಉಳಿಯಬೇಕಾದರೆ ಕನ್ನಡ ಪರ ಶಿಕ್ಷಣವೂ ಉಳಿಯಬೇಕು. ಇಲ್ಲವಾದಲ್ಲಿ ಕೇವಲ ಬಾವುಟಗಳು ,ಬ್ಯಾನರ್ ಗಳು ಉಳಿಯುತ್ತವೆ ಅಷ್ಟೆ. ಯಾರಿಗಾಗಿ ?

    ನಾ ದಿವಾಕರ

    ಪ್ರತಿಕ್ರಿಯೆ
  2. ಪಂಡಿತಾರಾಧ್ಯ

    ಪ್ರೀತಿಯ ಅಭಯ
    ನಿನ್ನ ಲೇಖನ ಜಾಣರ ಮುಂದೆ ಕಿನ್ನರಿ ಬಾರಿಸಿದಂತೆ ಇದೆ.
    ಕೇಳಿಸಿಕೊಳ್ಲಲು ಬಯಸದವರಿಂದ ಏನನ್ನು ನಿರೀಕ್ಷಿಸಬಹುದು?

    ಪ್ರತಿಕ್ರಿಯೆ
  3. prasad raxidi

    ಕನ್ನಡದ ಬಾವುಟ ಹಿಡಿದು ಹೋರಾಟಮಾಡುವವರಲ್ಲಿ ಶೇ.ತೊಂಭತ್ತು ಮಂದಿ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳುಹಿಸುತ್ತಿರುವುದು ಮಾತ್ರವಲ್ಲ ನಿಧಾನವಾಗಿ ಗ್ರಾಮಾಂತರದಲ್ಲಿಯೂ ಸಾಲಮಾಡಿಯಾದರೂ (ಕೂಲಿಕಾರ್ಮಿಕರೂ ಕೂಡಾ) ಇಂಗ್ಲಿಷ್ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದಾಗಿ ಕೆಟ್ಟ (ಕೆಟ್ಟದಾಗಿ ಪಾಠಮಾಡುವ)ಇಂಗ್ಲಿಷ್ ಶಾಲೆಗಳೂ ಹುಟ್ಟಿಕೊಂಡಿವೆ. ನಮ್ಮ ತಾಲ್ಲೂಕಿನಲ್ಲಿ ಕನ್ನಡ ಮಾದ್ಯಮಕ್ಕೆ ಪರವಾನಗಿ ಪಡೆದ ಖಾಸಗಿ ಶಾಲೆಯೊಂದು ಮಕ್ಕಳು ಬರುತ್ತಿಲ್ಲವೆಂದು (ಅನಧಿಕೃತವಾಗಿ) ಇಂಗ್ಲಿಷ್ ಮಾದ್ಯಮದಲ್ಲಿ ಪಾಠಮಾಡುತ್ತಿದೆ. ಒಂದು ಕಾಲದಲ್ಲಿ ಸಕಲೇಶಪುರ ನಗರದಲ್ಲಿ ಅತ್ಯುತ್ತಮ ಶಾಲೆಯೆಂದು ಹೆಸರುಗಳಿಸಿದ್ದ ಒಂದು ಶತಮಾನ ಇತಿಹಾಸವಿರುವ ಎರಡು ಸರ್ಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಕೊರತೆ ಉಂಟಾಗಿದೆ (ಊರಿನಲ್ಲಿ ಹದಿನಾಲ್ಕು ಖಾಸಗಿ ಶಾಲೆಗಳಿವೆ)….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: