ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಮೂರು ಗಂಟೆ ಆಯ್ತಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ನಾನಾಗ ಒಂದನೇ ಕ್ಲಾಸ್‌ನಲ್ಲಿದ್ದಿರಬೇಕು (೧೯೭೦-೭೧). ನನ್ನ ಇಬ್ಬರು ಅಕ್ಕಂದಿರು ಬೆಂಗಳೂರಿನ ಗಾಯತ್ರಿ ನಗರದಲ್ಲಿದ್ದ ರಾಘವೇಂದ್ರ ವಿದ್ಯಾಮಂದಿರಲ್ಲಿ ಮೇಲಿನ ತರಗತಿಗಳಲ್ಲಿ ಇದ್ದರು.  ನನ್ನ ಮೊದಲನೇ ಅಕ್ಕ ಸೀತಾದೇವಿ ಆ ಶಾಲೆಯಲ್ಲಿ ನಾಲ್ಕನೇ ತರಗತಿ ಮುಗಿಸಿ ಐದನೇ ತರಗತಿಗೆ ರಾಜಾಜಿನಗರದಲ್ಲಿ ಬೇರೊಂದು ಶಾಲೆಗೆ ಸೇರಿದ್ದಳು. 

ನಾವು ನಾಲ್ಕೂ ಜನ ಬಹುಶಃ ಒಂದೋ ಎರಡೋ ವರ್ಷ ಜೊತೆಯಲ್ಲಿ ಶಾಲೆಗೆ ಹೋಗುತ್ತಿದ್ದೆವು ಎಂದು ಕೇಳಿ ಬಲ್ಲೆ. ಮೂವರೂ ಅಕ್ಕಂದಿರು ಶಾಲೆಗೆ  ಹೊರಟು, ಅದೂ ನನ್ನೊಬ್ಬನನ್ನೇ ಮನೆಯಲ್ಲಿ ಅಮ್ಮನೊಟ್ಟಿಗೆ ಬಿಟ್ಟು ಹೋದರೆ ನನಗೆ  ಇರಲಾಗುತ್ತಿರಲಿಲ್ಲವೆಂದೂ ನಾನೂ ಅವರ ಹಿಂದೆ ಓಡುತ್ತಿದ್ದೆನೆಂದೂ ಹೇಳುತ್ತಾರೆ. ಪಾಪ ಶಾಲೆಯವರ ಅನುಕಂಪವೋ, ಅನಿವಾರ್ಯವೋ, ಪ್ರೀತಿಯೋ ಅಂತೂ ನಾನು ನರ್ಸರಿ ತರಗತಿಗಳಿಗೂ ಮುಂಚಿನಿಂದಲೇ ಸ್ಲೇಟು, ಬಳಪ ಇದ್ದ ನನ್ನುದ್ದದ ಬ್ಯಾಗ್‌ ಹಾಕಿಕೊಂಡು ಹೋದಾಗ ಟೀಚರ್‌ಗಳು ಒಪ್ಪಿಕೊಂಡಿದ್ದರಂತೆ.

ಅಮ್ಮ ಕೊಡುತ್ತಿದ್ದ ಮಧ್ಯಾಹ್ನದ ಊಟದ ಡಬ್ಬಿಯಲ್ಲಿ ನನ್ನ ಪಾಲನ್ನು ಇಟ್ಟು  ಅದನ್ನು ನನಗೆ ಚೆಲ್ಲದೆ ತಿನ್ನಿಸುವ ಜವಾಬ್ದಾರಿಯೂ ಮೊದಲ ಅಕ್ಕನಿಗೋ ಎರಡನೇ ಅಕ್ಕನಿಗೋ ಇರುತ್ತಿತ್ತು. ಮೊದಲನೇ ಅಕ್ಕ ಬೇರೆ ಶಾಲೆಗೆ ಹೋದ ಮೇಲೆ ಅಧಿಕೃತವಾಗಿ ಒಂದನೇ ತರಗತಿಗೆ ಸೇರಿದ್ದ ನಾನು ವಿಜಯಲಕ್ಷ್ಮೀ ಮತ್ತು ನಾಗಲತಾ ಅಕ್ಕಂದಿರೊಡನೆ ಶಾಲೆಗೆ ಹೆಜ್ಜೆ ಹಾಕುತ್ತಿದ್ದೆ. 

ಆ ಪುಟ್ಟ ಶಾಲೆಯಲ್ಲಿ ಹೆಚ್ಚೇನೂ ಮಕ್ಕಳಿರಲಿಲ್ಲ. ಮೂರ್ನಾಲ್ಕು ಶಿಕ್ಷಕಿಯರಿದ್ದ, ಎರಡು ಮೂರು ಕೋಣೆಯ ಆ ಶಾಲೆಯ ಪಕ್ಕದಲ್ಲೊಂದು ಪುಟ್ಟ ಮೈದಾನ. ಅಲ್ಲೇ ನಮ್ಮ ಬೆಳಗಿನ ಪ್ರಾರ್ಥನೆ, ಕವಾಯತು, ಆಟ, ಶಾಲಾ ದಿನಾಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲ ನಡೆಯುತ್ತಿತ್ತು. ಜೊತೆಗೆ ವರ್ಷಕ್ಕೊಂದು ಸರ್ತಿ ʼಪ್ರವಾಸವೂʼ ಇತ್ತು. 

ಅಂತಹ ನನ್ನ ಮೊದಲ ಶಾಲಾ ಪ್ರವಾಸ ‘ನಂದಿ ಬೆಟ್ಟಕ್ಕೆ’. 

ಬಸ್‌ ಪ್ರಯಾಣ ಮತ್ತು ಇತರ ಖರ್ಚುಗಳು ಎಲ್ಲ ಸೇರಿ ಪ್ರವಾಸಕ್ಕೆ ಶುಲ್ಕ ಪ್ರತಿ ವಿದ್ಯಾರ್ಥಿಗೆ ರೂ. ೫/- ಇತ್ತಂತೆ (ಮೊದಲನೇ ಅಕ್ಕ ಇತ್ತೀಚೆಗೆ ಹೇಳಿದ್ದು). ನಾವು ನಾಲ್ಕೂ ಜನರೆಂದರೆ ಒಟ್ಟು ರೂ. ೨೦/- ಅಪ್ಪನಿಗೆ ಖಂಡಿತಾ ಆ ದಿನಗಳಲ್ಲಿ ಅದು ದೊಡ್ಡ ಮೊತ್ತವಾಗಿರಲೇಬೇಕು. ಅದು ಹೇಗೆ ಆ ತಿಂಗಳು ಹಣವನ್ನು ಹೊಂದಿಸಿದರೋ, ಮುಂದಿನ ತಿಂಗಳು ಏನು ತೂಗಿಸಿದರೋ ಗೊತ್ತಿಲ್ಲ. ಆದರೆ ನಾವು ನಾಲ್ಕೂ ಜನ ಪ್ರವಾಸ ಹೋಗಿ ಬಂದದ್ದಂತೂ ನಿಜ. 

ನಾಲ್ಕು ಜನ? ನಮ್ಮ ಮನೆಯಿಂದ ಆ ಶಾಲೆಯಲ್ಲಿದ್ದದ್ದು ಮೂರೇ ಮಕ್ಕಳಲ್ಲವೆ. ಆ ಶಾಲೆಯ ಶಿಕ್ಷಕಿಯರು ನನ್ನ ಮೊದಲನೆ ಅಕ್ಕನನ್ನು ಕೂಡಾ ಪ್ರೀತಿಯ ಹಳೆಯ ವಿದ್ಯಾರ್ಥಿಯೆಂದು ನಮ್ಮೊಡನೆ ಪ್ರವಾಸಕ್ಕೆ ಒಯ್ಯಲು ಒಪ್ಪಿದ್ದರು. ಆದರೆ ನನ್ನ ಎರಡನೇ ಮತ್ತು ಮೂರನೇ ಅಕ್ಕಂದರಿಗೆ ಅದು ಸರಿ ಕಂಡಿರಲಿಲ್ಲವಂತೆ. ಬೇರೆ ಶಾಲೆಯವಳು ಇಲ್ಲಿ ಯಾಕೆ ಬರಬೇಕು! 

ಪ್ರವಾಸದ ಹಿಂದಿನ ದಿನ ಶಾಲೆಯಲ್ಲಿ ಅದೇನೇನು ಹೇಳಿದ್ರೋ ಹೆಚ್ಚಿನದು ನೆನಪಿಲ್ಲ. ಆದರೆ ಒಂದು ಗಟ್ಟಿಯಾಗಿ ನೆನಪಿನಲ್ಲಿತ್ತು. ಬೆಳಗ್ಗೆ ೫ ಗಂಟೆಯೊಳಗೆ ಶಾಲೆಯ ಹತ್ತಿರ ಸಿದ್ಧವಾಗಿ ಇರಬೇಕು. ಅಲ್ಲಿಂದ ಮೆಜಸ್ಟಿಕ್‌ ಬಸ್‌ಸ್ಟಾಂಡ್‌ಗೆ, ಅಲ್ಲಿಂದ ನಂದಿ ಬೆಟ್ಟಕ್ಕೆ. 

ಮನೆಗೆ ಬಂದು ಇದನ್ನು ಹೇಳಿದಾಗ ಅಮ್ಮ ಅಪ್ಪ ಹೇಳಿದ್ದು, ಅಂದ್ರೆ ಮೂರು ಗಂಟೆಗೆ ಏಳಬೇಕು. ಮಕ್ಕಳಿಗೆ ತಿಂಡಿ ತಯಾರಾಗಬೇಕು, ಮಕ್ಕಳು ಸ್ನಾನ ಮಾಡಿ ಸಿದ್ಧವಾಗಿ ಹೋಗಬೇಕು. 

ಮೂರು ಗಂಟೆಗೆ ಏಳಬೇಕು!

ರಾಜಾಜಿನಗರದಲ್ಲಿನ ನಮ್ಮ ಆ ಪುಟ್ಟ ಮನೆಯ ಪುಟ್ಟ ಹಾಲ್‌ನಲ್ಲಿ ನಾವು ನಾಲ್ಕು ಜನ, ಪಕ್ಕದ ಪುಟ್ಟ ಕೋಣೆಯಲ್ಲಿ ಅಮ್ಮ ಅಪ್ಪ ಮಲಗುವುದು. ಹೊರ ಬಾಗಿಲು ಹಾಕಿದ ಮೇಲೆ ಅಪ್ಪನ ಬೈಸಿಕಲ್‌ ಅಡ್ಡ ಇಡಬೇಕು. ಅಷ್ಟೆ ಜಾಗ. ಅಮ್ಮ ಸಂಜೆ, ಮತ್ತು ರಾತ್ರಿ  ಬಹಳ ಹೊತ್ತಿನ ತನಕ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಲೇ ಇದ್ದಳು. ಅಪ್ಪ ಮತ್ತು ದೊಡ್ಡ ಅಕ್ಕಂದಿರು ಕೂಡಾ ಇದ್ದರು. ನನಗೋ ರಾತ್ರಿ ೯.೩೦ರ ಹೊತ್ತಿಗೆ ಎಂದಿನಂತೆ ರೇಡಿಯೋದಲ್ಲಿ ನಾಟಕವನ್ನೋ ಸಂಗೀತವನ್ನೋ ಕೇಳುತ್ತಾ ಮಲಗುವ ರೂಢಿ.

ಇವತ್ತು  ಹಾಗೆ ಮಲಗಿದರೆ ನಿದ್ದೆಯೇ ಬಾರದು. ಎಷ್ಟೋ ಹೊತ್ತಿನ ಮೆಲೆ ಅಮ್ಮನೂ ದೀಪವಾರಿಸಿ ಮಲಗಿದ ಮೇಲೆ ಕೆಲಹೊತ್ತು ಜೋಂಪು ಬಂದಿತೆಂದು ಕಾಣುತ್ತದೆ.  ಏನೋ ಕನಸು… ಅರೆ ಎಲ್ಲ ಹೊರಟು ಹೋಗಿರುವಂತೆ. ನಾನೊಬ್ಬನೇ ಇನ್ನೂ ಮಲಗಿರುವಂತೆ…  ಇದ್ದಕ್ಕಿದ್ದ ಹಾಗೆ ನನಗೆ ಎಚ್ಚರವಾಯಿತು.  ಇನ್ನೂ ಕತ್ತಲು ಕತ್ತಲು. ನೋಡಿದರೆ ಎಲ್ಲರೂ ಅಕ್ಕ ಪಕ್ಕ ಮಲಗಿದ್ದಾರೆ!

‘ಅಪ್ಪ ಮೂರು ಗಂಟೆ ಆಯ್ತಾ…?ʼ

‘ಇಲ್ಲಾ. ಮಲಕ್ಕೊಳೋ…ʼ

ಮತ್ತೆ ಅತ್ತ ಇತ್ತ ಸ್ವಲ್ಪ ಹೊರಳಿದಾಗ ನಿದ್ದೆ ಬಂದಿತ್ತೇನೋ… ಮತ್ತೆ ತಟಕ್‌ ಎಚ್ಚರಿಕೆ…

‘ಅಪ್ಪ ಮೂರು ಗಂಟೆ ಆಯ್ತಾ…?ʼ

‘ಓಯ್!‌ ಸುಮ್ನೆ ಮಲಕ್ಕೊಳೋ. ಮೂರು ಗಂಟೆಗೆ ಎಬ್ಬಿಸ್ತೀನಿʼ

ಮತ್ತೆ ಮಲಗಲು ಯತ್ನಿಸಿದೆ…

… ನಿದ್ದೆ ಬಂದಿತ್ತೇನೋ. ಕನಸಿನಲ್ಲಿ ಯಾರೋ ಎಬ್ಬಿಸಿದಂತೆ, ನೀರು ಚುಮುಕಿಸಿದಂತೆ, ಮೈ ಒರೆಸಿದಂತೆ… ನನಗೆ ವಾಸ್ತವವಾಗಿ ಎಚ್ಚರಿಕೆಯಾಗುತ್ತಿದ್ದಾಗ ಅಪ್ಪ ನಿಜವಾಗಿಯೂ ಬಟ್ಟೆ ತೊಡಿಸುತ್ತಿದ್ದರು. ‘ಇವನಿಗೇನೂ ಸ್ನಾನ ಬೇಡ. ಬಂದ ಮೇಲೆ ಮಾಡಿಸೋಣ… ಆಗಲೇ ನಾಲ್ಕೂವರೆ ಆಗ್ತಾ ಇದೆ.. ಎಲ್ಲ ಹಾಲು ಕುಡಿದು, ನಡೀರಿ ನಡೀರಿ…ʼ ನಾನು ನಿದ್ದೆಗಣ್ಣಿನಲ್ಲೇ ಹಾಲು ಕುಡಿದು, ಅಪ್ಪನ ಸೈಕಲ್‌ ಹತ್ತಿ ಮುಂದಿನ ಚಿಕ್ಕ ಸೀಟಿನಲ್ಲಿ ಕುಳಿತದ್ದು, ನನ್ನ ಚಿಕ್ಕ ಅಕ್ಕ ಲತಾ ಕೂಡಾ ಸೈಕಲ್‌ ಕ್ಯಾರಿಯರ್‌ ಮೇಲಿದ್ದಿದು ಅಪ್ಪ ಸೈಕಲ್‌ ತಳ್ಳಿಕೊಂಡು ನಡೆದಿದ್ದರು. ವಿಜಯ ಮತ್ತು ಸೀತ ಅಕ್ಕ ಕೈಯಲ್ಲಿ ನಮ್ಮ ಬುತ್ತಿಚೀಲ ಹಿಡಿದು ನಡೆದರು. ಇನ್ನೂ ಕತ್ತಲಿತ್ತು. ಚಳಿ ಬೇರೆ.

ಮನೆಗೆ ಹತ್ತಿರದಲ್ಲೇ ಇದ್ದ ಶಾಲೆಯ ಬಳಿ ಬರುವ ಹೊತ್ತಿಗೆ ನನಗೆ ಪೂರ್ತಿ ಎಚ್ಚರಿಕೆಯಾಗಿತ್ತು. ಅರೆ! ನನ್ನನ್ಯಾಕೆ ಮೂರು ಗಂಟೆಗೆ ಎಬ್ಬಿಸಲಿಲ್ಲ ಎಂದು ಕಸಿವಿಸಿಯಾಗಿತ್ತು. ಆದರೆ ಅಷ್ಟು ಹೊತ್ತಿಗೆ ಶಾಲೆಯ ಹತ್ತಿರ ಮಕ್ಕಳು, ಪೋಷಕರು, ಟೀಚರ್‌ಗಳು ಇದ್ದದ್ದು, ಯಾರನ್ನ ಏನು ಕೇಳಬೇಕು ಮರತೇ ಹೋಗಿತ್ತು. 

ಸ್ಕೂಲ್‌ನಿಂದ ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ಗೆ ಹೋಗಲು ಚಿಕ್ಕ ವಾಹನಗಳು ಸಿದ್ಧವಾಗಿದ್ದವು. ನಾವೆಲ್ಲಾ ಸಂಭ್ರಮದಿಂದ ಹೊರಟೆವು. ಮೆಜಸ್ಟಿಕ್‌ನಿಂದ ದೊಡ್ಡ ಕೆಂಪು ಬಸ್‌ನಲ್ಲಿ ಶಾಲೆಯ ಮಕ್ಕಳು ಟೀಚರ್‌ಗಳು ನಂದಿ ಬೆಟ್ಟಕ್ಕೆ.  (೪೫ ಮಕ್ಕಳು ಇದ್ದರು ಅಂತ ಸೀತ ಅಕ್ಕ ಇತ್ತೀಚೆಗೆ ನೆನಪಿಸಿಕೊಂಡು ಹೇಳುತ್ತಿದ್ದಳು). 

ನಂದಿಬೆಟ್ಟದಲ್ಲಿ ಆಗ ಏನೇನು ನೋಡಿದೆವೊ ನನಗೆ ನಿಜವಾಗಿಯೂ ನೆನಪಿಲ್ಲ. ಆದರೆ ಎರಡು ಚಿತ್ರಗಳು ಅದೇಕೋ ಏನೋ ನೆನಪಿದೆ. ಒಂದು, ಮ‍ಧ್ಯಾಹ್ನದ ಹೊತ್ತಿಗೆ ಎಲ್ಲರೂ ಊಟ ಮಾಡಿದ್ದು. ಅಮ್ಮ ಕಟ್ಟಿ ಕೊಟ್ಟಿದ್ದ ಇಡ್ಲಿ ಚಟ್ನಿ, ಚಿತ್ರಾನ್ನವೋ, ಪುಳಿಯೊಗರೆಯನ್ನೋ ದೊಡ್ಡಕ್ಕ ನಮಗೆಲ್ಲಾ ಕೊಟ್ಟಿದ್ದು, ಇಷ್ಟರ ಮೇಲೆ ಶಾಲೆಯವರು ಮಾಡಿಸಿಕೊಂಡು ಬಂದಿದ್ದ ಬಿಸಿಬೇಳೆ ಭಾತ್‌, ಮೊಸರನ್ನ  (ಮೊಸರನ್ನ ನಾನು ಆಗ ತಿನ್ನುತ್ತಿರಲಿಲ್ಲ. ಅದೊಂದು ಕತೆ!) ಸುಶೀಲಾ ಟೀಚರ್‌ ಎಲ್ಲರಿಗೂ ಹಂಚಿದ್ದು. ಎರಡನೆಯ ಚಿತ್ರ,  ಬೆಟ್ಟದ ಮೇಲಿನ ಬಾವಿಯಿಂದ ಗಾಯತ್ರಿ ಮತ್ತು ಶಾಂತಾ ಟೀಚರ್‌ ನೀರು ಸೇದಿ ಎಲ್ಲರಿಗೂ ಕುಡಿಯಲು ಮತ್ತು ಕೈತೊಳೆಯಲು ಕೊಟ್ಟಿದ್ದು. ಅವರಿಬ್ಬರೂ ನೀರು ಸೇದುತ್ತಿದ್ದ ಚಿತ್ರ ನನಗಿನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ! 

ಸಂಜೆ ಬೆಂಗಳೂರಿಗೆ  ಹಿಂದಿರುಗಿ ನಾವೆಲ್ಲ  ಶಾಲೆಯ ಹತ್ತಿರ ಬರುವ ಹೊತ್ತಿಗೆ ರಾತ್ರಿ ಏಳು ಗಂಟೆಯಾಗಿತ್ತಂತೆ. ನನಗೆ ನಿದ್ರೆಯೋ ನಿದ್ರೆ. ಯಾರ ತೊಡೆಯಲ್ಲಿ ಒರಗಿದ್ದೆನೋ ಗೊತ್ತಿಲ್ಲ. ನಮ್ಮನ್ನು ಎಬ್ಬಿಸಲು ಬಸ್‌ ಡ್ರೈವರ್‌ ʼನೋಡಿ ನೋಡಿ ಆನೆಗೆ ಚಡ್ಡಿ ಹಾಕಿದ್ದಾರೆʼ ಅಂತ ಕೂಗಿದ್ದು ಮಸುಕು ಮಸುಕಾಗಿ ನೆನಪಿದೆ. ಈಗ ಬೆಂಗಳೂರು ನಗರ ಸಾರಿಗೆ ಬಸ್‌ ಸ್ಟಾಂಡ್‌ ಇರುವಲ್ಲಿ ಯಾವುದೋ ಸರ್ಕಸ್‌ ಕಂಪನಿಯವರ ಬಿಡಾರವಿತ್ತು ಎಂದು ಕೇಳಿದ್ದೆ. ಶಾಲೆಯ ಹತ್ತಿರ ಮತ್ತೆ ಎಲ್ಲರಿಗೂ ಇನ್ನೂ ಉಳಿದಿದ್ದ  ಬಿಸಿಬೇಳೆಭಾತ್‌ ತುತ್ತು ಹಾಕಿ ತಿನ್ನಿಸಿ ಆಮೇಲೆ ನಾವು ನಾಲ್ಕು ಜನರನ್ನ ಶಾಲೆಯ ಹೆಡ್‌ ಮೇಡಂ ಶ್ರೀಮತಿ ಅವರ ಗಂಡ ರಾತ್ರಿ ಎಂಟರೊಳಗೆ ನಮ್ಮ ಮನೆಗೆ ಬಿಟ್ಟರಂತೆ. ಬಹುಶಃ ಆಗಿನ ಕಾಲಕ್ಕೆ ಅದು ಬಹಳ ತಡವೇ ಹೌದು. 

***

ಪ್ರವಾಸ, ಅದರಲ್ಲೂ ಶಾಲೆಯ ಮಕ್ಕಳೊಟ್ಟಿಗೆ ಪ್ರವಾಸ ನಮ್ಮೆಲ್ಲರ ಮನಸ್ಸಿಗೆ ಮುದ ಕೊಟ್ಟ ವಿಚಾರ. ʼಕೋಶ ಓದಿ ಕಲಿ, ದೇಶ ಸುತ್ತಿ ತಿಳಿʼ ಎನ್ನುವ ನಾಣ್ಣುಡಿ ನಿಜವಾಗಿಯೂ ವಾಸ್ತವ. ಬೆಳೆದಂತೆ ನನ್ನ ಶಾಲಾ ದಿನಗಳಲ್ಲಿ ಸಹ ವಿದ್ಯಾರ್ಥಿಗಳೊಡನೆ ಹಲವು ಬಾರಿ ನಾನೂ ಪ್ರವಾಸ ಹೋಗಿದ್ದೇನೆ. ಕೆಲವು ಬಾರಿ ಆಗಲಿಲ್ಲ. ಹಣ ಇರಲಿಲ್ಲವೋ, ನನ್ನ ಆರೋಗ್ಯ ಸರಿಯಿರಲಿಲ್ಲವೋ, ಮನೆಯಲ್ಲಿ ಏನಾದರೂ ಕಾರ್ಯಕ್ರಮವೋ, ಏನೋ ಒಂದು ಕಾರಣ . ಆಗೆಲ್ಲಾ ಪ್ರವಾಸ ಹೋಗಿ ಬಂದವರ ಬಗ್ಗೆ ಹೊಟ್ಟೆಕಿಚ್ಚಿನೊಡನೆಯೇ ಏನೆಲ್ಲಾ ನೋಡಿ ಬಂದರು ಎಂದು ಕೇಳುವುದೂ ಒಂದು ಮಜ !

ಶಾಲಾ ಪ್ರವಾಸಗಳಲ್ಲದೆ, ಕುಟುಂಬದವರೊಡನೆಕಮ ಸುತ್ತಿರುವುದೇನೂ ಕಡಿಮೆಯಿಲ್ಲ. ಅದು ಕುಟುಂಬದವರ, ಸಂಬಂಧಿಗಳ, ಸ್ನೇಹಿತ ವರ್ಗದವರ ಮನೆಗಳಲ್ಲಿನ ಯಾವುದಾದರೂ ಕಾರ್ಯಕ್ರಮದ ನೆಪದಲ್ಲಿ ಅಥವಾ ಧಾರ್ಮಿಕ ಸ್ಥಳಗಳು, ಸ್ಮಾರಕಗಳು, ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗಿದ್ದಿರಬಹುದು. ಬೆಂಗಳೂರಿನ ಡಬಲ್‌ ರೋಡ್  ಅಜ್ಜಿ ಮನೆಗೆ (ಕೆಂಗಲ್‌ ಹನುಮಂತಯ್ಯ ಡಬಲ್‌ ರೋಡ್‌ನಲ್ಲಿ ಅವರ ಮನೆಯಿತ್ತು) ಹೋದಾಗಲೆಲ್ಲಾ ಕಾಲೇಜು ಕಲಿಯುತ್ತಿದ್ದ ಚಿಕ್ಕಪ್ಪಂದಿರು ಮತ್ತು ಅತ್ತೆಯರಿಗೆ ಸಮಯವಿದ್ದರೆ ಲಾಲ್‌ಬಾಗ್‌ ಭೇಟಿಯಂತೂ ತಪ್ಪದೆ ನಡೆಯುತ್ತಿತ್ತು (ಲಾಲ್ ಬಾಗ್ ಒಳಗೆ ಹೋಗಲು ಆಗ ಶುಲ್ಕವಿರಲಿಲ್ಲ!). ಅಲ್ಲಿ ಆಗ ಜಿಂಕೆಗಳು, ಮೊಲಗಳು, ಮೀನು, ಇತ್ಯಾದಿಗಳಿದ್ದವು. ಲಾಲ್‌ಬಾಗ್‌ ಎಲ್ಲಾ ಸುತ್ತಿ ಕೊನೆಗೆ ಕೆಂಪೇಗೌಡರ ಕಾಲದ ಕಾವಲು ಗೋಪುರವಿರುವ ಕಲ್ಲಿನ ಗುಡ್ಡದ ಮೇಲೆ ಕುಳಿತು ಕಡ್ಲೇಕಾಯಿ ತಿನ್ನುವ ಮೂಲಕ ಆ ದಿನದ ಪ್ರವಾಸ ಮುಗಿಯುತ್ತಿತ್ತು. 

ಮಾ‍ಧ್ಯಮಿಕ ಶಾಲೆಗೆ ಬಂದಾಗ ತರಗತಿಯ ಗೆಳೆಯರೊಡನೆ ಸುತ್ತಾಡುವುದು ಬಹಳ ಸಾಮಾನ್ಯವಾಗಿತ್ತು. ಬದರಿ, ವಿಎಸ್‌. ನಾಗೇಂದ್ರ, ಬಿ.ಎಸ್‌. ನಾಗೇಂದ್ರ, ಶಿವರಾಮ, ಅರುಣ, ಅಶೋಕ, ಮಧುಸೂಧನ, ಇತ್ಯಾದಿ ಗುಂಪು ಮಲ್ಲೇಶ್ವರದಿಂದ ಕಾಲ್ನಡಿಗೆಯಲ್ಲಿ ಹೊರಟು ಗಂಧದ ಕೋಟಿ ಕೆರೆ ಸುತ್ತಿಕೊಂಡು ಅರಮನೆ ಮೈದಾನದ ಮುಂದಿನಿಂದ ಈಗಿನಂತೆ ಕಾಂಪೌಂಡ್‌ ಇಲ್ಲದ ವಿಧಾನಸೌಧ ಸುತ್ತು ಹಾಕಿ ಕಬ್ಬನ್‌ ಪಾರ್ಕ್‌ ಸುತ್ತಿ ಮತ್ತೆ ರೇಸ್‌ಕೋರ್ಸ್‌ ಮುಂದಿನಿಂದ ಮಲ್ಲೇಶ್ವರ ತಲುಪುತ್ತಿದ್ದೆವು. ದಾರಿಯುದ್ದಕ್ಕೂ ಅದೇನು ಮಾತು ಮಾತು, ಸಿಕ್ಕ ಹೊಟೆಲ್‌ಗಳಲ್ಲಿ ನೀರು ಕುಡಿಯುವುದು, ನಮ್ಮ ಹತ್ತಿರವಿದ್ದ ಪುಡಿ ಕಾಸಿನಲ್ಲಿ ಕಡ್ಲೇಪುರಿ, ಕಡ್ಲೇಕಾಯಿ, ಸೌತೇಕಾಯಿ ತಿಂದು ಬರುತ್ತಿದ್ದೆವು.

ಒಮ್ಮೊಮ್ಮೆ ಮನೆಯಿಂದ ಯಾರಾದರೂ ಕಟ್ಟಿಸಿಕೊಂಡು ಬರುತ್ತಿದ್ದ ತಿಂಡಿ ತಿನಿಸುಗಳು ಇರುತ್ತಿದ್ದವು. ಇಂತಹ ಕಾಲ್ನಡಿಗೆಯ ಪ್ರವಾಸ ಹಲವಾರು ಬಾರಿ ಮಾಡಿದ್ದೆವು. ಮೈಸೂರಿನಲ್ಲಿ  ಹೈಸ್ಕೂಲ್‌ ಮತ್ತು ಕಾಲೇಜು ವಿದ್ಯಾಭ್ಯಾಸ ಮಾಡುವಾಗ ಪ್ರಸಾದ್‌ ಎಸ್‌.ಎನ್‌., ಶಾಂತಪ್ರಿಯ, ಶ್ರೀಧರ ಎಸ್. ಎಸ್‌ ಮತ್ತು ರಾಮಗೋಪಾಲರೊಡನೆ ಚಾಮುಂಡಿ ಬೆಟ್ಟ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಸುತ್ತುವುದು ಸಾಮಾನ್ಯವಾಗಿತ್ತು. ಶಿವರಾತ್ರಿಗಳಲ್ಲಿ ಇನ್ನಷ್ಟು ಗೆಳೆಯರ ದಂಡು ರಾತ್ರಿ ಚಾಮುಂಡಿ ಬೆಟ್ಟ ಹತ್ತಿಳಿಯುತ್ತಿದ್ದುದು ಅಮೋಘ ನೆನಪು. ಖಂಡಿತಾ ಇವೆಲ್ಲಾ ಪ್ರವಾಸಗಳೇ! ಆ ದಿನಗಳಲ್ಲಿ ಹೀಗೆಲ್ಲಾ ಸುತ್ತಲು ಸಾಕಷ್ಟು ಸಮಯವಿತ್ತು ಮತ್ತು ಸ್ವಾತಂತ್ರ್ಯವೂ ಇತ್ತು. 

ಅಪ್ಪನಿಗೆ ವರ್ಗವಾಗಿ ನಾವು ಮೈಸೂರಿಗೆ ಹೋದ ಹೊಸತರಲ್ಲಿ (೧೯೮೦) ನಮ್ಮಲ್ಲಿಗೆ ಬರುತ್ತಿದ್ದ ಬಂಧು ಬಳಗದವರೊಡನೆ ಅದೆಷ್ಟು ಬಾರಿ ಮೈಸೂರು ಅರಮನೆಗಳು, ಮೃಗಾಲಯ, ಚಾಮುಂಡಿ ಬೆಟ್ಟ, ಕೆ.ಆರ್‌.ಎಸ್‌., ನಂಜನಗೂಡು, ಶ್ರೀರಂಗಪಟ್ಟಣ ಸುತ್ತಿದ್ದೇನೋ ಲೆಕ್ಕವಿಲ್ಲ. ಮೊದಮೊದಲು ಕುತೂಹಲದಿಂದ ಹೋದವನು ಆಮೇಲಾಮೇಲೆ ನಾನೇ ಎಲ್ಲರಿಗೂ ಗೈಡ್‌ ಆಗಿಬಿಟ್ಟಿದ್ದೆ.   

ನನ್ನ ಬಾಲ್ಯದಲ್ಲಿನ ಪ್ರವಾಸಗಳ ನೆನಪಿನಲ್ಲಿ ನನ್ನ ಸೋದರ ಮಾವ ನಂಜುಂಡ ಶಾಸ್ತ್ರಿಗಳೊಡನೆ ಶಿವಗಂಗೆ, ಮಧುಗಿರಿ ಮತ್ತು ರತ್ನಗಿರಿ ಬೆಟ್ಟಗಳನ್ನು  ಹತ್ತಿದ ಅನುಭವ ವಿಶಿಷ್ಟವಾದುದು. ಒಮ್ಮೊಮ್ಮೆ ದೇಹದಲ್ಲಿ ಕಸುವಿಲ್ಲ ಎಂದು ಹಿಂದೇಟು ಹಾಕಿದರೆ  ʼಎಷ್ಟಾಗುತ್ತೋ ಅಷ್ಟು ಸುತ್ತಿ ನೋಡಬೇಕು. ಆಗಲ್ಲ ಅಂತ ಕೂತ್ಕೊಂಡ್ರೆ ಇನ್ನೊಂದ್ಸರ್ತಿ ಅವಕಾಶ ಸಿಗತ್ತೋ ಇಲ್ಲವೋ…. ಈಗ  ನಡೆಯಿರಿ’ ಎಂದು ಅವರು ಗದರಿಸಿಯೋ, ಪುಸಲಾಯಿಸಿಯೋ ಚಿಕ್ಕವರನ್ನು ಹೊರಡಿಸಿ, ಅನುಭವಗಳಿಗೆ ತೆರೆದುಕೊಳ್ಳುವುದನ್ನು ಮಾವ ಕಲಿಸಿದ್ದರು.

ಇಂಥದೇ ಉಮೇದಿನಲ್ಲಿ, ಅಯ್ಯೋ ಅಪ್ಪಾ ಎಂದರೂ ಬಿಡದೆ ಎಳೆಯರಾದ ನಮ್ಮ ಸೊಂಟಕ್ಕೆ ಮರದ ಬೆಂಡು ಕಟ್ಟಿಯೋ, ಹಗ್ಗ ಹಿಡಿದೋ ನೀರಿಗೆ ಎತ್ತಿ ಹಾಕಿ ಕೈಕಾಲು ಬಡಿಯಲು ಹುರಿದುಂಬಿಸಿ, ಈಜು ಕಲಿಯಬೇಕು ಎಂದು ಒತ್ತಾಯಿಸಿ ಆ ಜೀವನ ಕೌಶಲ್ಯವನ್ನು ಕಲಿಸಿದವರು ನನ್ನ ಸೋದರಮಾವ.  ಅವರು ಆಗೆಲ್ಲ ಆಡುತ್ತಿದ್ದ ಮಾತುಗಳು ಆಳವಾಗಿ ಊರಿಕೊಂಡಿವೆ. ಈಗಂತೂ  ನನ್ನ ವೃತ್ತಿ ಜೀವನದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು  ಊರೂರು ಸುತ್ತುವುದು ಇದ್ದೇ ಇದೆ. ಹಾಗೆ ಹೋದಲ್ಲೆಲ್ಲ ಅಲ್ಲಿನ ಚಾರಿತ್ರಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಬರಲು ಸಮಯ ಮಾಡಿಕೊಳ್ಳುವುದು ರಕ್ತಗತವಾಗಿಬಿಟ್ಟಿದೆ. 

***

ಈ ಹಿಂದೆ ಚರ್ಚೆ ಮಾಡಿದ್ದಂತೆ ಮಕ್ಕಳಿಗಾಗಿ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯಗಳನ್ನು ನಿರ್ಮಿಸುವ ಮತ್ತು ಅವುಗಳನ್ನು ಆದಷ್ಟೂ ಮಕ್ಕಳ ಸ್ನೇಹಿ ಮಾಡುವ ಆವ‍ಶ್ಯಕತೆ ಇರುವಂತೆಯೇ ಮಕ್ಕಳಿಗಾಗಿ ಪ್ರವಾಸದ ಅವಕಾಶಗಳನ್ನು ಮಾಡಿಕೊಡುವುದು ಆಗಬೇಕಿದೆ. ನಾನು ಕಂಡಿರುವಂತೆ ಅದೆಷ್ಟೋ ಮಕ್ಕಳು ತಮ್ಮ ಬಡಾವಣೆಯಿಂದಾಚೆ ಹೋಗಿರುವುದಿಲ್ಲ. ಅಥವಾ ತಮ್ಮ ಹಳ್ಳಿ, ತಾಲೂಕಿನಿಂದ ಹೊರಗೆ ಹೋಗಿ ನೋಡಿಬರಲು ಸಾಧ್ಯವೇ ಆಗಿರುವುದಿಲ್ಲ. (ಖಂಡಿತಾ ಇದು ಉತ್ಪ್ರೇಕ್ಷೆಯಲ್ಲ). ಕಾರಣಗಳು ಹಲವು.

ಹಣಕಾಸಿನ ಮುಗ್ಗಟ್ಟು ಪ್ರಮುಖವಾದುದು,ಅಥವಾ ಹಾಗೆ ಯಾಕೆ ಹೋಗಬೇಕು ಎನ್ನಲು ಒಂದು ಕಾರಣವೇ ಇಲ್ಲದಿರಬಹುದು. ತಮ್ಮ ಊರಿನ ಹತ್ತಿರದ ಜಾತ್ರೆ, ತೇರು, ರಥೋತ್ಸವ ಇಷ್ಟು ಬಿಟ್ಟರೆ ದೂರಕ್ಕೆ ಹೋಗುವ ಸಂದರ್ಭವೇ ಬಂದಿಲ್ಲದಿರಬಹುದು. 

ಶಿಕ್ಷಣ ಸಂವಿಧಾನದತ್ತ ಹಕ್ಕು ಆಗಿರುವಾಗ (ಪರಿಚ್ಛೇದ ೨೧.ಎ) ಬರಿಯ ಪುಸ್ತಕಗಳಿಂದ ಮಾಹಿತಿ ಪಡೆಯುವುದರಲ್ಲೇ ಯಾರೂ ತೃಪ್ತಿ ಪಡಲಾಗದು. ಈಗ ವರ್ಚುಯಲ್‌ ಟೂರ್‌ಗಳನ್ನು ಮೊಬೈಲ್‌ನಲ್ಲೇ ಮಾಡಿದರೂ, ನೈಜ ಅನುಭವಗಳನ್ನು ಪಡೆಯಲು ವಿವಿಧ ಸ್ಥಳಗಳಿಗೆ ಹೋಗಲೇಬೇಕು. ಅಂತಾರಾಷ್ಟ್ರಿಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮೇಲಿಂದ ಮೇಲೆ ‘ಸೂಕ್ತ ಮಾಹಿತಿ ಇದ್ದಲ್ಲಿ, ಸಮರ್ಪಕವಾದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಸಾಧ್ಯ’ ಎಂದು ಹೇಳಲಾಗಿದೆ (ಪರಿಚ್ಛೇದ ೧೭ ಮತ್ತು ೨೯). ಇದರಲ್ಲಿ ಪ್ರವಾಸವನ್ನೂ ನಾನು ಕಾಣುತ್ತೇನೆ. 

ಪ್ರವಾಸದಲ್ಲಿ ಸಾಕಷ್ಟು ಪ್ರಯಾಸವೂ ಇದೆ. ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಸಾಕಷ್ಟು ಕಷ್ಟಪಟ್ಟವರ ಅನುಭವಗಳು ನಮ್ಮ ಕಣ್ಣ ಮುಂದಿವೆ. ಪ್ರವಾಸಕ್ಕೆಂದೇ ಮೀಸಲಿಟ್ಟ ಅಥವಾ ಸಂಗ್ರಹಿಸಿದ ಹಣ ಸಾಲದಾಗುವುದು, ಊಟ, ವಸತಿಗೆ ನಿರೀಕ್ಷೆ ಮೀರಿ ಹೆಚ್ಚು ಖರ್ಚಾಗುವುದು, ಸಮಯದಲ್ಲಿ ಏರುಪೇರು, ಪ್ರವಾಸ ಕಾಲದಲ್ಲಿ ಮಕ್ಕಳು ಅನಾರೋಗ್ಯಕ್ಕೀಡಾಗುವುದು, ಮಕ್ಕಳಿಗೆ ಪೆಟ್ಟಾಗುವುದು, ಯಾವುದೋ ಕಾರಣಕ್ಕೆ ಜೊತೆಯಲ್ಲಿ ಬಂದಿದ್ದ ಶಿಕ್ಷಕರ ನಡುವೆ ಮನಸ್ತಾಪ ತಲೆದೋರುವುದು , ವಾಹನ ಕೆಟ್ಟು ಹೋಗುವುದು, ಬಸ್‌ ಅಥವಾ ರೈಲು ತಪ್ಪಿಹೋಗುವುದು, ಅಪಘಾತ, ಒಂದೇ ಎರಡೇ. ಇಂತಹವುಗಳ ನಡುವೆಯೂ ಪ್ರವಾಸ ಹೊರಡುವ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗುವುದೇ ಇಲ್ಲ. 

ಶಾಲಾ ಪ್ರವಾಸಕ್ಕಾಗಿ ಶಿಕ್ಷಣ ಇಲಾಖೆ ಅನೇಕ ಕಲ್ಪನೆಗಳು, ಯೋಜನೆಗಳನ್ನು ಮಾಡುತ್ತಲೇ ಇರುತ್ತದೆ. ಪ್ರತಿ ಶಾಲೆಯಲ್ಲಿ ಪ್ರವಾಸದ ಏರ್ಪಾಡು ನಡೆಯುತ್ತಲೇ ಇರುತ್ತದೆ. ಆದರೆ ಇವೆಲ್ಲವೂ ಸಾಮಾನ್ಯವಾಗಿ ಹಣ/ಶುಲ್ಕ ಕೊಡಬಲ್ಲ ಮಕ್ಕಳಿಗೆ ಮಾತ್ರ  ದಕ್ಕುತ್ತವೆ. ಸರ್ಕಾರೀ ಶಾಲೆಗಳ ಮಕ್ಕಳಿಗೆ ಪ್ರವಾಸ ಹೋಗಿ ಬರಲು ಸಾಮಾನ್ಯವಾಗಿ ಸರ್ಕಾರದ ಹಣಕಾಸಿನ ನೆರವು ಇರುತ್ತದೆ. ಆದರೆ ಆ ನೆರವು  ಸೀಮಿತವಾದದ್ದು.

ಮೊದಮೊದಲು ಪ್ರವಾಸವೆಂದರೆ ಶಾಲಾ ಶಿಕ್ಷಕ ಶಿಕ್ಷಕಿಯರಿಗೆ ಯಾವುದು ಇಷ್ಟವೋ, ಅವರು ಯಾವ ಸ್ಥಳ ನೋಡಿಲ್ಲವೋ ಅಲ್ಲಿಗಷ್ಟೆ ಮಕ್ಕಳ ಪ್ರವಾಸ ಆಗಿರುತ್ತಿತ್ತು. ಇನ್ನೊಂದಷ್ಟು ಶಿಕ್ಷಕರು ತಮ್ಮಿಷ್ಟದ ಧಾರ್ಮಿಕ ಕ್ಷೇತ್ರಗಳು ಮತ್ತು ಎಲ್ಲಿ ಉಚಿತವಾಗಿ ಊಟ ದೊರೆಯುತ್ತದೋ ಅಲ್ಲಿಗೇ ಶಾಲಾ ಮಕ್ಕಳ ಪ್ರವಾಸ ಏರ್ಪಾಟು ಮಾಡುವುದೂ ಉಂಟು! 

ಎಷ್ಟೋ ಬಾರಿ ಶಿಕ್ಷಕರು ಸರಿಯಾಗಿ ಯೋಜಿಸದೆ, ವಿಚಾರಿಸದೆ ತಾವು ಕಂಡು ಕೇಳರಿಯದ ಜಾಗಕ್ಕೆ ಮಕ್ಕಳನ್ನು ಕರೆದೊಯ್ದು ಅಲ್ಲಿ ಏನಾದರೂ ಅವ್ಯವಸ್ಥೆಯಾದರೆ, ಹೋದದ್ದು ಪ್ರಯೋಜನಕ್ಕೆ ಬಾರದೆ ಹೋದರೆ ಎಲ್ಲವೂ ವ್ಯರ್ಥವಾಗುತ್ತಿತ್ತು ಮತ್ತು ಕೆಲವೊಮ್ಮೆ ದುರಂತವೂ ಸಂಭವಿಸುತ್ತಿತ್ತು. ಮಕ್ಕಳನ್ನೆಲ್ಲಾ ದೂರದೂರಿನಿಂದ ಬಸ್‌ನಲ್ಲಿ ಮೈಸೂರು ಮೃಗಾಲಯದೆದುರು ಇಳಿಸಿದ ಮೇಲೆ ಅವತ್ತು ಮೃಗಾಲಯಕ್ಕೆ ʼರಜʼ ಎಂದು ಗೊತ್ತಾದರೆ, ಯಾವುದೋ ಸ್ಮಾರಕ ದುರಸ್ಥಿಯಲ್ಲಿದೆ ಮೂರು ತಿಂಗಳು ಪ್ರವೇಶವಿಲ್ಲ ಎಂದು ಹೇಳಿದರೆ… ಎಂಥ ನಿರಾಸೆ…  

ದೋಣಿ ಮಗುಚಿ ಪ್ರವಾಸದಲ್ಲಿದ್ದ ಮಕ್ಕಳ ಸಾವು, ವಾಹನ ಅಪಘಾತ, ಮೃಗಾಲಯದಲ್ಲಿ ಪ್ರಾಣಿಯಿಂದ ಹಲ್ಲೆ, ಆಹಾರದಲ್ಲಿ ವಿಷ,  ಪ್ರವಾಸದಲ್ಲಿ ಮಗು ಕಣ್ಮರೆ… ಅಷ್ಟೇ ಅಲ್ಲ ಪ್ರವಾಸದಲ್ಲಿ ಮಕ್ಕಳ ಮೇಲೆ ಶಿಕ್ಷಕ ವರ್ಗದಿಂದ ದೌರ್ಜನ್ಯ, ಹಲ್ಲೆ, ಲೈಂಗಿಕ ಶೋಷಣೆ, ವಿದ್ಯಾರ್ಥಿಗಳ ನಡುವೆ ಹೊಡೆದಾಟ ಇವೇ ಮೊದಲಾದ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಇಂತಹ ಅನುಭವಕ್ಕೆ ಪಕ್ಕಾದ  ಮಕ್ಕಳು, ಅಂತವರ ಶಾಲೆ ಮತ್ತು ಅಲ್ಲಿಯ  ಶಿಕ್ಷಕ ವರ್ಗ ಇನ್ನೊಮ್ಮೆ ಶಾಲಾ ಪ್ರವಾಸದ ಸುದ್ದಿಯನ್ನೇ ಎತ್ತುವುದಿಲ್ಲವೇನೋ. ಹೀಗಾಗಿ ಸುರಕ್ಷತೆ ಮತ್ತು ಅಪಾಯಗಳ ಭಯದಿಂದಾಗಿ ಹಲವಾರು ಶಿಕ್ಷಕರು ಶಾಲಾ ಮಕ್ಕಳ ಪ್ರವಾಸದ ಸುದ್ದಿಗೇ ಹೋಗುವುದಿಲ್ಲ.

ಯಾವ ಸ್ಥಳಕ್ಕೆ ಹೋಗೋಣ ಎಂಬ ಬಗ್ಗೆ ಶಾಲೆ ಮತ್ತು ಶಿಕ್ಷಕರು ಮಕ್ಕಳ ಅಭಿಪ್ರಾಯ ಕೇಳುವ (ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೧೨ರಂತೆ) ಸಾಧ್ಯತೆಗಳನ್ನು ಪರಿಶೀಲಿಸಲೇಬೇಕು ಮತ್ತು ಪ್ರಯತ್ನಿಸಬೇಕು. ಅಂತಹ ಸ್ಥಳಕ್ಕೆ ಹೋಗುವ ಮೊದಲು ಮಕ್ಕಳು ಪ್ರಾಜೆಕ್ಟ್‌ ರೀತಿಯಲ್ಲಿ ಒಂದಷ್ಟು ಸಂಶೋಧನೆ ನಡೆಸಿ ತಿಳಿದುಕೊಂಡಿರಬೇಕು. ನಂತರ ಅಲ್ಲಿಗೆ ನಿಜವಾಗಿಯೂ ಹೋಗಿ ನೋಡಿ ಮತ್ತಷ್ಟು ತಿಳಿಯುವಂತೆ ಆಗಬೇಕು.  

ಮುಖ್ಯವಾಗಿ  ನಮ್ಮಲ್ಲಿನ್ನೂ ಶಾಲಾ ಪ್ರವಾಸವನ್ನು ಯೋಜಿತ ರೀತಿಯಲ್ಲಿ ನಡೆಸುವ ಕುರಿತು ಸ್ಪಷ್ಟ ಅರಿವು ಇಲ್ಲವೆಂದೇ ಹೇಳಬೇಕು. ಕೆಲವು ವರ್ಷಗಳ ಹಿಂದೆ ಶಿಕ್ಷಕರ ತರಬೇತಿ ಶಿಬಿರವೊಂದರಲ್ಲಿ ಈ ವಿಚಾರ ಪ್ರಸ್ತಾಪಿಸಿ ಒಂದು ಮಾತು ಹೇಳಿದ್ದೆ; ಶಾಲಾ ಪ್ರವಾಸ, ಶಾಲಾ ವಾರ್ಷಿಕೋತ್ಸವ, ಶಾಲಾ ಕ್ರೀಡೋತ್ಸವ, ಶಾಲಾ ಸಾಂಸ್ಕೃತಿಕ ಉತ್ಸವ ಇವೇ ಮೊದಲಾದವುಗಳನ್ನು ಯೋಜಿಸುವ ಕುರಿತು ಶಿಕ್ಷಕರ ತರಬೇತಿಯಲ್ಲಿ ಪಠ್ಯದಲ್ಲಿ ಸೇರಿಸಬೇಕು ಎಂದು.  ಸರ್ಕಾರೇತರ ಶಾಲೆಗಳೂ ಇದರಿಂದ ಹೊರತೇನೂ ಅಲ್ಲ. ಕೆಲವು  ಸರ್ಕಾರೇತರ ಶಾಲೆಗಳು ಪ್ರಾಥಮಿಕ ಮಟ್ಟದ ಮಕ್ಕಳನ್ನೇ ವಿಮಾನ ಪ್ರಯಾಣದ ವೈಭವಲ್ಲಿ ಕರೆದೊಯ್ದು  ದೆಹಲಿ, ಆಗ್ರಾ,  ದೂರದ ಸಿಂಗಪೂರ ತೋರಿಸಿ ಬರುವುದು ಪ್ರತಿಷ್ಠೆ ಎನಿಸಿಕೊಂಡಿದೆ. ಈಗೀಗ ಶಾಲಾ ಮಕ್ಕಳು ಮತ್ತು ಕಾಲೇಜು ಮಕ್ಕಳಿಗಾಗಿ ಪ್ರವಾಸಗಳನ್ನು (ಭಾರತಲ್ಲಿ ಮತ್ತು ವಿದೇಶಗಳಲ್ಲಿ) ಏರ್ಪಾಡು ಮಾಡುವ ಅನೇಕ ಸಂಸ್ಥೆಗಳು ಆರಂಭವಾಗಿವೆ. ವಯಸ್ಸಿಗೆ ತಕ್ಕುದಾದ ಮತ್ತು ಗ್ರಹಿಕೆಗೆ ಸೂಕ್ತವಾದ ಸ್ಥಳಗಳಿಗೆ ಮಕ್ಕಳನ್ನು ಪ್ರವಾಸದ ಅನುಭವ ಕೊಡಿಸಲು ಯೋಜಿಸುವುದು ಅತ್ಯಾವ‍ಶ್ಯಕ. 

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಿರುವುದು ಈ ಪ್ರವಾಸಗಳನ್ನು ನಡೆಸುವಾಗ ವಹಿಸಲೇಬೇಕಾದ ಎಚ್ಚರಿಕೆಗಳನ್ನು ಕುರಿತು ಚಿಂತನೆಗಳು ದೊಡ್ಡ ಮಟ್ಟದಲ್ಲಿ ಆಗಲೇಬೇಕಾಗಿರುವುದನ್ನು. ಒಂದು ರೀತಿಯಲ್ಲಿ ಏನನ್ನು ಮಾಡಬೇಕು, ಏನು ಮಾಡಬಾರದು, ಯಾವುದು ಸೂಕ್ತ, ಯಾವುದು ಅಲ್ಲ ಎಂಬ ಪಟ್ಟಿಯನ್ನು ಪರಿಪೂರ್ಣವಾಗಿ ಬೆಳೆಸಬೇಕು. ಮುಖ್ಯವಾಗಿ ʼಪ್ರವಾಸದಲ್ಲಿ ಮಕ್ಕಳ ಸುರಕ್ಷಣಾ ನೀತಿʼ ಇದ್ದು ಅದರಲ್ಲಿ ಪ್ರವಾಸದ ಸಮಯದಲ್ಲಿನ ವಿಶೇಷ ಜೀವವಿಮೆ, ಆರೋಗ್ಯ ರಕ್ಷಣೆ, ಮಕ್ಕಳ ಮೇಲೆ ಎಂತಹದೇ ದೌರ್ಜನ್ಯಗಳು ಆಗದಂತೆ ವಹಿಸಬೇಕಾದ ಎಚ್ಚರಿಕೆಗಳು, ಬಳಸುವ ವಾಹನಗಳ ಸಾಮರ್ಥ್ಯ, ತನಿಖಾಧಿಕಾರಿಗಳಿಗೆ ತೋರಿಸಲು ಇರಲೇಬೇಕಾದ ರಹದಾರಿಗಳು, ಒಪ್ಪಂದಗಳು ಇವೇ ಮೊದಲಾದವು  ಕಡ್ಡಾಯವಾಗಿ ಬೇಕು.

ವಿದೇಶಗಳಲ್ಲಿನ ಬಹುತೇಕ ಶಾಲೆಗಳಲ್ಲಿ ʼಶಾಲಾ ಮಕ್ಕಳ ಪ್ರವಾಸ ನೀತಿʼ ಜಾರಿಯಲ್ಲಿದ್ದು ಅವುಗಳನ್ನು ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗ, ಪೋಷಕರು ತಿಳಿದಿರಲೇಬೇಕು. ಅಷ್ಟೇ ಅಲ್ಲ ಎಲ್ಲ ಮಕ್ಕಳಿಗೆ ಅರ್ಥವಾಗುವಂತೆ ಅವುಗಳನ್ನು ಮಕ್ಕಳ ಭಾಷೆ ಮತ್ತು ಚಿತ್ರಗಳ ಮೂಲಕ ಅವರಿಗೆ ತಿಳಿಸಿರಲೇಬೇಕು ಎನ್ನುವುದು ಕಡ್ಡಾಯ. ಆದರೆ ನಮಗೆ ತಿಳಿದಿರುವಂತೆ ಮತ್ತು ದೂರುಗಳು ಕೇಳಿಬರುವಂತೆ, ಇಂತಹ ಯಾವುದೇ ಸ್ಪಷ್ಟತೆ ಯೋಜನೆ ಇಲ್ಲದಿದ್ದರೂ ನಮ್ಮಲ್ಲಿನ ಕೆಲವು ಶಾಲೆಗಳಲ್ಲಿ ಆಡಳಿತ ವರ್ಗ ಪ್ರವಾಸ / ಪಿಕ್ನಿಕ್‌ ಹೆಸರಿನಲ್ಲಿ ದುಬಾರಿ ಶುಲ್ಕ ಹೇರಿ ಹಣ ಮಾಡುತ್ತವೆ!

ಮೃಗಾಲಯ, ವಸ್ತು ಸಂಗ್ರಹಾಲಯವೇ ಮೊದಲಾದ ಸ್ಥಳಗಳಿಗೆ ಭೇಟಿ ಕೊಡುವಾಗ ಶುಲ್ಕ ಪಾವತಿ ಸಾಮಾನ್ಯ (ಕೆಲವು ಕಡೆ ನಿರ್ದಿಷ್ಟ ವಯೋಮಾನದ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ). ಇಂತಹ ಪಾವತಿಯಲ್ಲಿ ಒಂದು ಸಣ್ಣ ಮೊತ್ತವನ್ನು ʼವಿಮೆʼಯ ಸ್ವರೂಪದಲ್ಲಿ ಸಂಗ್ರಹಿಸಿದರೆ ಅದು ಭೇಟಿ ಕೊಡುವವರಿಗೆ ಮತ್ತು ಸಂಘಟಕರಿಗೆ ಭದ್ರತೆ/ನೆರವು ಕೊಡಬಹುದಲ್ಲವೆ ಎಂದು ನಾನು ಚಿಂತಿಸುತ್ತಿರುತ್ತೇನೆ. [ಚೆನ್ನೈನಲ್ಲಿ ಒಂದು ವಸ್ತು ಸಂಗ್ರಹಾಲಯಕ್ಕೆ ನಾವೊಂದಷ್ಟು ಜನ ಭೇಟಿ ಕೊಟ್ಟಿದ್ದಾಗ ನಮ್ಮ ಗುಂಪಿನವರು ಯಾರೋ ಒಬ್ಬರು ಅಲ್ಲಿದ್ದ ಯಾವುದೋ ವಸ್ತು (ಮುಟ್ಟಬಾರದಿತ್ತು) ಅಕಸ್ಮಾತ್  ಮುಟ್ಟಿ ಅದು ಕೆಳಕ್ಕೆ ಬಿದ್ದು ಮುಕ್ಕಾಗಿ ರಾದ್ಧಾಂತವಾಗಿತ್ತು.]

ಇತ್ತೀಚಿನ ವರ್ಷಗಳಲ್ಲಿ ಕೆಲವು ರಾಜ್ಯ ಸರ್ಕಾರಗಳು ತಮ್ಮ ಪ್ರವಾಸ ನೀತಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಚಾರಿತ್ರಿಕ ಸ್ಥಳಗಳು, ಸ್ಮಾರಕಗಳು, ಪ್ರೇಕ್ಷಣೀಯ ಮತ್ತು ಪರಿಸರ ತಾಣಗಳನ್ನು ಪರಿಚಯಿಸುವುದು ಅತ್ಯಾವಶ್ಯಕ ಎಂದು ಹೇಳಿಕೊಂಡಿವೆ.  ಸರ್ಕಾರದ ವಾಹನಗಳನ್ನೇ ಪ್ರವಾಸಕ್ಕೆ ಬಳಸಬೇಕು ಹಾಗೂ ಮಕ್ಕಳಿಗೆ ಪ್ರವಾಸದ ಶುಲ್ಕದ ಹೊರೆ ಹಾಕಬಾರದು, ಒಂದು ದಿನಕ್ಕಿಂತಾ ಹೆಚ್ಚು ಕಾಲ ಪ್ರವಾಸ ಹೋಗಬಾರದು ಇತ್ಯಾದಿ ಸೂಚನೆಗಳೂ ಇವೆ. ಆದರೆ ಇವುಗಳನ್ನು ಮೀರುವುದಂತೂ ಸರ್ವೇಸಾಮಾನ್ಯ. ಮೀರಿದವರು ಏನಾದರೂ ದುರಂತ ಕಂಡಲ್ಲಿ, ತೊಂದರೆಯಾದರೆ ಮಾತ್ರ ಅವು ಬೆಳಕಿಗೆ ಬರುತ್ತವೆ, ಎಚ್ಚರಿಕೆ, ವಿಚಾರಣೆ, ಶಿಕ್ಷೆ ಆಗುತ್ತವೆ. 

ರಾಷ್ಟ್ರೀಯ ಶಿಕ್ಷಣ ನೀತಿ (ರಾ.ಶಿ.ನೀ) ೨೦೨೦ರಲ್ಲಿ ಒಂದಷ್ಟು ಕಡೆ ‘ಟೂರ್‌ʼ ಎಂಬ ಪದ ಬಳಸಿರುವುದು ಕಾಣುತ್ತದೆ. ಅಂಗನವಾಡಿ ಮಟ್ಟದಿಂದಲೇ ಮಕ್ಕಳಿಗೆ ಚಟುವಟಿಕೆ ಆಧಾರಿತ ಟೂರ್‌ ಅನುಭವಗಳನ್ನು ಕೊಡಬೇಕೆಂದು ಹೇಳುತ್ತದೆ (ರಾ.ಶಿ.ನೀ. ಪ್ಯಾರಾ ೧.೫). ಶಾಲಾ ಮಕ್ಕಳಿಗೆ ಆಗಾಗ್ಗೆ ಶಾಲೆಯ ಹೊರಗೆ ಕಲಿಕೆಯ ವಾತಾವರಣ ಸೃಷ್ಟಿಸಲು ಸ್ಮಾರಕಗಳು, ಪ್ರವಾಸಿ ತಾಣಗಳು, ಚಾರಿತ್ರಿಕ ವಿಶೇಷ ತಾಣಗಳು, ಸಾಂಸ್ಕೃತಿಕವಾಗಿ ಪ್ರಾಮುಖ್ಯತೆಯಿರುವ ಪ್ರದೇಶಗಳು, ವ್ಯಕ್ತಿಗಳು, ಕೌಶಲ್ಯಗಳನ್ನು ಪರಿಚಯಿಸಲು ತಮ್ಮ ಸುತ್ತಮುತ್ತಲಿನ ಹಳ್ಳಿಗಳು, ತಾಲೂಕು, ಜಿಲ್ಲೆ ಮತ್ತು ರಾಜ್ಯದಲ್ಲಿ ಪ್ರವಾಸಗಳನ್ನು ಏರ್ಪಡಿಸಲು ನಿರ್ದೇಶನ ನೀಡಲಾಗಿದೆ (ರಾ.ಶಿ.ನೀ. ಪ್ಯಾರಾ ೪.೨೬).

ಇದೇ ದನಿಯಲ್ಲಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ವಸ್ತು ಸಂಗ್ರಹಾಲಯಗಳನ್ನು ನಿರ್ವಹಿಸುವುದೇ ಮೊದಲಾದವುಗಳನ್ನು ಕುರಿತು ಶಿಕ್ಷಣ ಮತ್ತು ತರಬೇತಿಯನ್ನು ನೀಡಲಾಗುತ್ತದೆ (ರಾ.ಶಿ.ನೀ. ಪ್ಯಾರಾ ೨೨.೧೧) ಮತ್ತು ಭಾರತದ ವೈವಿಧ್ಯತೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಲು ಪ್ರವಾಸ ಅವಕಾಶಗಳನ್ನು ಮಾಡಿಕೊಡಲಾಗುತ್ತದೆ. ಅದಕ್ಕಾಗಿ  ಪ್ರವಾಸ ಮಾಡಲೇಬೇಕಾದಂತಹ ಸುಮಾರು ೧೦೦ ಪ್ರವಾಸ ತಾಣಗಳನ್ನು ಗುರುತಿಸಿ ಬೆಳಸಲಾಗುತ್ತದೆ (ರಾ.ಶಿ.ನೀ. ಪ್ಯಾರಾ ೨೨.೧೨) ಎಂದು ಹೇಳಲಾಗಿದೆ. 

ಶಿಕ್ಷಣ ನೀತಿಯಲ್ಲಿರುವ ಇವು ಖಂಡಿತಾ ಸ್ವಾಗತಾರ್ಹ. ಈಗ ಆಗಬೇಕಿರುವುದು ಎಲ್ಲ ರಾಜ್ಯ ಸರ್ಕಾರಗಳು ಶಾಲಾ ಮಕ್ಕಳ ಪ್ರವಾಸ ಕುರಿತು ಸುತ್ತೋಲೆಗಳಿಗೆ ಸೀಮಿತವಾಗದೆ, ಸ್ಪಷ್ಟವಾದ ನೀತಿಯನ್ನು ಹೊರಡಿಸಿ ಅದರಲ್ಲಿ ಪ್ರವಾಸದ ಪ್ರಾಮುಖ್ಯತೆ, ಯೋಜನೆ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲೇಬೇಕಿದೆ.

‍ಲೇಖಕರು Admin

1 July, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading