ಅಪ್ಪ ಎಂಬ ಡೊರೆಮೊನ್

 ಡಾ ಅನಿಲ್ ಎಮ್ ಚಟ್ನಳ್ಳಿ

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ಡೊರೆಮೊನ್ ಎಂಬ ಕಾರ್ಟೂನ್ ಸರಣಿಯ ಬಗ್ಗೆ ಪಕ್ಕಾ ಗೊತ್ತಿರುತ್ತದೆ. ಚಿಕ್ಕವರಂತೆ ದೊಡ್ಡವರನ್ನೂ ಹಿಡಿದು ಕೂರಿಸಬಲ್ಲಂತಹ ಸುಂದರ ಕಾರ್ಟೂನ್ ಧಾರವಾಹಿ ಅದು‌.

ಅದರಲ್ಲಿ ಕೆಲವೆ ಕೆಲವು ಕಾಯಂ ಪಾತ್ರಗಳಿವೆ‌. ಒಂದು ಚೊಕ್ಕದಾದ ಮನೆಯಲ್ಲಿ ಅಪ್ಪ , ಅಮ್ಮ ಮತ್ತು ಶಾಲೆಗೆ ಹೋಗುವ ವಯಸ್ಸಿನ ನೊಬಿತಾ ಎಂಬ ಹುಡುಗ, ಜೊತೆಗೆ ಅವನ ವಾರಗೆಯ ಒಂದಿಬ್ಬರು ಹುಡುಗರು. ಇವರ ಜೊತೆಗೆ ಡೊರೆಮಾನ್ ಎಂಬ ವಿಶಿಷ್ಟ ಪಾತ್ರವಿದೆ. ನೋಡಲು ಒಂದು ಮುದ್ದಾದ ಬೆಕ್ಕನ್ನು ಮನುಷ್ಯನ ಆಕಾರಕ್ಕೆ ಹೊಂದಿಸಿದಂತೆ ಕಾಣುತ್ತದೆ ಡೊರೆಮಾನ್. ಅದರ ಅಂಗಿಯ ಮುಂಭಾಗದಲ್ಲಿ ಜೋಳಿಗೆಯಂತಹ ಒಂದು ದೊಡ್ಡ ಜೇಬಿದೆ‌.

ಈ ಡೊರೆಮಾನ್ ಗೊಂದು ಮಾಯಾವಿ ಶಕ್ತಿ ಇದೆ. ಅದು ತನಗೆ ಬೇಕಾದಂತಹ ಎಂತಹುದೆ ವಸ್ತುಗಳನ್ನು ಈ ಜೇಬಿನಿಂದ ಹೊರತೆಗೆಯಬಲ್ಲುದು.

ಅದು ಬೇರೆಂದು ಲೋಕಕ್ಕೆ ಕರೆದೊಯ್ಯುವ ಬಾಗಿಲೆ ಆಗಿರಲಿ, ಏನೂ ಓದದೆಯೆ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತಂದು ಕೊಡಬಲ್ಲ ಪೆನ್ನೆ ಆಗಿರಲಿ ಆ ಜೋಳಿಗೆಯಲ್ಲಿ ಎಲ್ಲವೂ ಸಿಗುತ್ತದೆ.

ಈ ಡೊರೆಮಾನ್ ನೊಬಿತಾನ ಮನೆಯಲ್ಲಿಯೆ ಸಹೋದರನ ರೀತಿ ಅವನ ಜೊತೆಗಿರುತ್ತದೆ.

ನೊಬಿತಾಗೆ ಎಲ್ಲ ಹುಡುಗರಂತೆ ಶಾಲೆಯಲ್ಲಿ ಮೇಷ್ಟ್ರುಗಳಿಂದ ಶಹಬ್ಬಾಸ್ ಎನಿಸಿಕೊಳ್ಳುವ ಅಥವಾ ಗೆಳೆಯರೊಂದಿಗೆ ಆಡುವಾಗ ನಾನು ಯಾರಿಗಿಂತಲೂ ಕಮ್ಮಿ ಇಲ್ಲ ಎಂದು ತೋರಿಸಿಕೊಳ್ಳುವ ಇತ್ಯಾದಿ ವಯೋಸಹಜ ಆಸೆಗಳಿರುತ್ತವೆ.

ನೊಬಿತಾನ ಈ ಎಲ್ಲ‌ ಆಸೆ ಆಕಾಂಕ್ಷೆಗಳಿಗೆ ಸದಾ ಅವನ ಬೆನ್ನಿಗೆ ನಿಲ್ಲುತ್ತದೆ ಡೊರೆಮೊನ್.

ನೊಬಿತಾಗೆ ತಾನು ಪಕ್ಷಿಯಂತೆ ಹಾರಬೇಕು ಎನಿಸಿದಾಗ ತಲೆಗೆ ಅಂಟಿಸಿಕೊಂಡು ಹಾರಬಹುದಾಂತಹ ಫ್ಯಾನೊಂದನ್ನು ಅಥವಾ ತಾನು ಕೆಟ್ಟದಾಗಿ ಬಿಡಿಸಿದ ಚಿತ್ರಕ್ಕೂ ಜನರು ಹೊಗಳಬೇಕು ಅನಿಸಿದಾಗ, ಜನರನ್ನು ಮಂತ್ರ ಮುಗ್ಧಗೊಳಿಸಿ

ಅವರು ಸುಖಾ ಸುಮ್ಮನೆ ನೊಬಿತಾನನ್ನು ಹೊಗಳುವಂತೆ ಮಾಡುವ ಮ್ಯಾಜಿಕ್ ಗ್ಯಾಜೆಟ್ ಒಂದನ್ನು ಹೀಗೆ ಹತ್ತು ಹಲವು ವಸ್ತುಗಳನ್ನು ಡೊರೆಮಾನ್ ತನ್ನ ಜೇಬಿನಿಂದ ತೆಗೆದು ಕೊಡುತ್ತದೆ.

ನೊಬಿತಾ ಈ ಜಾದೂ ಮಾಡಬಲ್ಲ ಆಟಿಕೆಗಳನ್ನು ತನ್ನ ಮನಸ್ಸಿಗೆ ಬಂದಂತೆ ಬಳಸಿಕೊಂಡು ಸ್ವಯಂಕೃತ ಸಂಕಷ್ಟಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ನೊಬಿತಾಗೆ ಇಂತಹ ಆಟಿಕೆಗಳನ್ನು ಕೊಟ್ಟದ್ದು ತನ್ನದೆ ತಪ್ಪು ಎಂಬಂತೆ ತಲೆ‌ ಚಚ್ಚಿಕೊಂಡು ನೊಬಿತಾಗೊಂದಿಷ್ಟು ಬೈದು ಈ ಅವಾಂತರಗಳಿಂದ ನೊಬಿತಾನನ್ನು ಮತ್ತೆ ಪಾರು ಮಾಡುವುದು ಅದೇ ಡೊರೆಮಾನ್.

ಈ ಕಾರ್ಟೂನ್ ನೋಡುವ ಪ್ರತಿ ಮಗುವಿಗೂ ನನಗೂ ಡೊರೆಮೊನ್ ನಂತಹ ಸಂಗಾತಿ ಸಿಗಬಾರದೆ ಎನಿಸದಿರದು. ಆದರೆ ಪ್ರತಿ ಮನೆಯಲ್ಲಿಯೂ ಮಕ್ಕಳು ಗುರುತಿಸಲಾಗದ ಡೊರೆಮಾನ್ ಇರುತ್ತಾನೆ , ಅವನೇ ಅಪ್ಪ. ಮಕ್ಕಳ ಎಲ್ಲ ಆಸೆ ಆಕಾಂಕ್ಷೆಗಳಿಗೆ ಇಷ್ಟಾನಿಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲುವ ಅಪ್ಪ ನನಗೆ ಥೇಟ್ ಡೊರೆಮೊನ್ ನಂತೆಯೆ ಕಾಣುತ್ತಾನೆ.‌

ಮಕ್ಕಳಿಗೆ ಸ್ಕೂಲ್ ಬ್ಯಾಗು ಕೊಡಿಸುವುದಿರಿಂದ ಹಿಡಿದು ಅವರು ಸ್ವಂತ ಕಾಲ ಮೇಲೆ ನಿಲ್ಲುವವರೆಗೂ ಮಕ್ಕಳ ಎಲ್ಲಾ ಅಗತ್ಯಗಳನ್ನು ಅಪ್ಪ ಹೇಗೆ ಪೂರೈಸುತ್ತಾನೆ ?. ಮಗಳಿಗೆ ಅವಳ ಇಷ್ಟದ ಕಾಲೇಜಿಗೆ ಸೇರಿಸುವುದರಲಿ, ಮಗನಿಗೆ ಹೊಸ ಬೈಕು ಕೊಡಿಸುವುದಿರಲಿ ಅಥವಾ ಮಗನ ಹೊಸ ವ್ಯಾಪಾರಕ್ಕೆ ಬಂಡವಾಳ ಹೊಂದಿಸುವುದಿರಲಿ ಅಪ್ಪ ಮಕ್ಕಳ ಆಸೆಗಳನ್ನು ಈಡೇರಿಸಲು ಸದಾ ಕಾರ್ಯಮಗ್ನನಾಗಿರುತ್ತಾನೆ‌. ಮಗಳು ಫೇಲಾದರೂ, ಮಗ ವ್ಯಾಪಾರದಲ್ಲಿ ದುಡ್ಡು ಕಳೆದುಕೊಂಡರೂ ಮತ್ತೆ ಅಪ್ಪನೆ ಕೈ ಹಿಡಿಯುತ್ತಾನೆ. ಅಪ್ಪ ಮಕ್ಕಳಿಗೆ ಇಲ್ಲ ಎನ್ನುವುದು ತೀರಾ ಅಪರೂಪ.

 

ಮಕ್ಕಳ ಕನಸುಗಳು ತನ್ನವೂ ಎಂಬಂತೆ, ಕಷ್ಟಗಳು ಮಾತ್ರ ಬರಿ ನನ್ನವು ಎಂಬಂತೆ ಎಲ್ಲವನ್ನೂ ಮಕ್ಕಳಿಗೆ ಧಾರೆ ಎರೆದು ಬದುಕುವ ಅಪ್ಪ ಒಬ್ಬ ಜಾದೂಗಾರನಂತೆ ಕಾಣುತ್ತಾನೆ ಮತ್ತು ಅವನ ಅಂಗಿಯ ಜೇಬು, ಶೂನ್ಯದಿಂದಲೆ ಮಕ್ಕಳಿಗೆ ಬೇಕಾದ್ದೆಲ್ಲವನ್ನು ಸೃಷ್ಟಿಸಿ ಕೊಡುವ ಮಾಯಾವಿ ಜೋಳಿಗೆಯಂತೆ ಕಾಣುತ್ತದೆ.

 

‍ಲೇಖಕರು avadhi

June 20, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: