ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಈಗ ನೆನಪು ಮಾತ್ರ.. 

ಮಂಜುಳಾ ಸುಬ್ರಹ್ಮಣ್ಯ

 

ಹತ್ತು ವರುಷ!!! ಹೌದು ಹತ್ತು ವರುಷಗಳೇ ಕಳೆಯಿತು ಅಪ್ಪ ನಮ್ಮೊಂದಿಗಿಲ್ಲದೆ. ಒಬ್ಬರ ಇರುವಿಕೆಯ ಅಗತ್ಯತೆ ಕಾಡುವುದು ಅವರ ಅನುಪಸ್ಥಿತಿಯಲ್ಲಿ ಅಂತಾರೆ. ಅದರ ನಿಜವಾದ ಅರಿವಿನ ಜ್ಞಾನ ಈಗಾಗ್ತಿದೆ. ಸಾವು ಯಾರನ್ನೂ ಬಿಟ್ಟಿಲ್ಲ, ಬಿಡಲಾರದೂ ಕೂಡಾ. ಆದರೆ‌ ಅದನ್ನು ಜೀರ್ಣಿಸಿಕೊಳ್ಳುವುದು‌ ಸ್ವಲ್ಪ ಕಷ್ಟವೇ.

ಅಪ್ಪನ ಬಗ್ಗೆ ಹೇಳಬೇಕೆನಿಸಿದೆ. ಹಾಗಂತ ಅಪ್ಪ ಅತಿಯಾದ ಪ್ರೀತಿ ತೋರಿಸಿದ, ಅದೂ, ಇದೂ ಕತೆಗಳು ಕಣ್ಣ ಮುಂದೆ ಯಾವುದೂ ಸುಳಿದಾಡದ ಸ್ಥಿತಿ ನನ್ನದು. ಈಗಿನಂತಹ ಸ್ನೇಹಮಯಿ ಅಪ್ಪ ಆಗಿರಲಿಲ್ಲ. ಯಾವುದೇ ಹೊಡೆತ, ಬಡಿತಗಳಿಲ್ಲದ‌ ಗಂಭೀರ ಮುಖ ಮುದ್ರೆಯ ಅಪ್ಪ. ಅಪ್ಪನೆಂದರೆ‌ ಅದೇ ಭಯ, ಪ್ರೀತಿ. ಅಚ್ಚುಕಟ್ಟಾದ‌ ಜೀವನ‌ ಪದ್ಧತಿ, ಕಟ್ಟುಮಸ್ತಾದ ದೇಹ. ಅವರದ್ದೇ ಆದ ಕೆಲವು ಬೈಗುಳದ ಭಾಷೆಗಳು ಅವುಗಳ ಆಗಾಗ ಪ್ರಯೋಗ ನಮ್ಮ ಮೇಲೆ ಆಗ್ತಾ ಇದ್ದವು. ಅಪ್ಪ ಇಂತಹವನ್ನೇ ಬೈತಾರೆ ಅಂತಾ ನಾವು ಅವರಿಲ್ಲದಾಗ ತಮಾಷೆ ಮಾಡ್ತಾ ನಗ್ತಾ ಇದ್ದೆವು. ಎದುರು ಹೇಳುವ ಧೈರ್ಯ ಇರ್ಲಿಲ್ಲ ಬಿಡಿ.  ಅಂತಹ ಟಿಪ್ ಟಾಪ್ ಆದ ಅಪ್ಪ ಒಮ್ಮೆಲೆ ಪಾರ್ಶ್ವವಾಯುಗೆ ಈಡಾಗ್ತಾರೆ ಅಂತ ಯಾರೂ ಊಹಿಸಲೂ ಸಾಧ್ಯ ಇರ್ಲಿಲ್ಲ.

 

 

ನಾನಾಗ ಕನ್ನಡ, ಇಂಗ್ಲೀಷ್ ಟೈಪಿಂಗ್ ಕ್ಲಾಸ್‍ನಲ್ಲಿದ್ದೆ. ಅಪ್ಪ‌ ಬಿದ್ದು ಬಿಟ್ಟು ಆಸ್ಪತ್ರೆಗೆ ತಂದಿದ್ದೇವೆ ಅಂತಾ ಪರಿಚಯದ ಆಟೋದವರು ಬಂದು ‌ನನ್ನ ಕರ್ಕೊಂಡು ಹೋದ್ರು. ಅಪ್ಪ ಅಲ್ಲಾಡದ ಸ್ಥಿತಿಯಲ್ಲಿ ಮಲಗಿದ್ರು. ಪಾರ್ಶ್ವವಾಯು ಏನೂ ಅಂತಾನೇ ಆತನಕ ಗೊತ್ತಿಲ್ಲದ ನಾವೆಲ್ಲ ಕಂಗಾಲು. ಅಕ್ಕ ಮೆಡಿಕಲ್ ಸ್ಟೂಡೆಂಟ್ ಆಗಿದ್ದುದಕ್ಕೆ ಮತ್ತಿನ‌ ಎಲ್ಲಾ ಟ್ರೀಟ್‍ಮೆಂಟ್‍ಗಳೂ ಸರಾಗವಾಗಿ‌ ನಡೆದು‌ ಅಪ್ಪ ನಡೆಯುವ ಸ್ಥಿತಿಗೆ ಬಂದು ಹದಿಮೂರು‌ ವರ್ಷಗಳ ಕಾಲ ನಮ್ಮ‌ ಜೊತೆಗಿದ್ರು ಅನ್ನೋದೇ ನಮಗೆಲ್ಲಾ ಖುಷಿ ಕೊಟ್ಟ ವಿಚಾರ.

ಮತ್ತಿನ ದಿನಗಳಲ್ಲಿ‌ ಅವರ ದಿನಚರಿಗಳು ‌ಬದಲಾದವು. ನಾವು ಮಕ್ಕಳು ಕಾಲಕ್ಕೆ ತಕ್ಕಂತೆ ವರ್ತಿಸತೊಡಗಿದೆವು. ಒಮ್ಮೊಮ್ಮೆ ಅವರು ಕಿರಿಕಿರಿ ಅನ್ನಿಸತೊಡಗಿದರೂ ಬರಬರುತ್ತಾ ತೀರಾ ಮುಗ್ಧರಾಗಿ ಕಾಣಿಸತೊಡಗಿದರು. ಅವರ ಪ್ರೀತಿಯನ್ನು ಹೇಗೆ ತೋರ್ಪಡಿಸ್ತಾ‌ ಇದ್ರು ಅನ್ನೋದು ಆಗ ಅರ್ಥ ಆಗದೆ ಇದ್ದುದು ಈಗ ಅರಿವಾಗ್ತಿದೆ. ನಾನು ಕಾರ್ಯಕ್ರಮ ಮುಗಿಸಿ ತಡವಾಗಿ ಬಂದಾಗ “ಬಾಬೂ ಬಾಬೂ” ( ನನ್ನ ಅವರು ಬಾಬೂ ಎಂದು ಕರೀತಾ ಇದ್ರು)  ಅಂತಾ ತುಂಬಾ ಸಲ ಕರೆಯೋರು. ನಿಮಗೆ ಇನ್ನೂ ಮಲಗ್ಲಿಕ್ಕಾಗಿಲ್ವಾ, ಈಗ್ಲೂ ಎಂತಾ ಕರೆಯೋದು ಮಲಗಿ ಅಂತ ಹೇಳ್ತಾ ಇದ್ದಿದ್ದು ಈಗಲೂ ನೆನಪಿದೆ.

ಆದರೆ, ಅದು ಅವರೊಳಗಿನ ಕಾಳಜಿ, ಉತ್ಕಟವಾದ  ಪ್ರೀತಿ ಅಲ್ಲದೆ ಮತ್ತೇನು ಅಂತಾ ಈಗ ಅನ್ನಿಸ್ತಿದೆ. ಯಾವಾಗಲೂ ಹೇಳ್ತಾ ಇರ್ತಿದ್ದ ಇನ್ನೊಂದು ಮಾತು ನಾನು- ಅಪ್ಪನಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲ, ( ನಾವು ನಾಲ್ಕು ಜನ ಮಕ್ಕಳು, ನಾನು ಕೊನೆಯವಳು) ನಾನು ಕೊನೆಯವಳಲ್ವಾ.. ಬೇಕಾಗಿರ್ಲಿಲ್ಲ ಕಾಣ್ತದೆ ಅಂತಾ. ಆದ್ರೆ‌, ಅಪ್ಪನ‌ ಕೊನೆಯ ಕ್ಷಣದವರೆಗೆ ಅವರ ಜೊತೆಗೆ ನಾನಿದ್ದೇ ಅನ್ನುವುದೇ ನನಗೊಂದು ಸಂತೃಪ್ತತೆ.

ಇನ್ನೊಂದು ಅವರೊಳಗಿನ‌‌ ಸೌಂದರ್ಯ ಪ್ರಜ್ಞೆ. ನೀಟಾದ ಶರ್ಟ್ ಬಿಳಿ ಮುಂಡು ಅಥವಾ ವೇಸ್ಟಿ , ಒಂದು ಶಾಲು, ಯಾವಾಗಲೂ ಕೈಯಲ್ಲಿ ಕಟ್ಟಿರುವ ಚೈನ್ ವಾಚು. ಮನೆಯಲ್ಲಿದ್ದಾಗಲೂ ನೀಟಾಗಿ ಡ್ರೆಸ್ ಮಾಡಿ ಕೂತ್ಕೋತಾ ಇದ್ದುದು. ಅದೇ‌ ponds powder ಮುಖ‌, ಮೈತುಂಬಾ ಹಾಕೊಳ್ತಿದ್ದುದು. ಬೋಳು ತಲೆಯ ಕೊನೆಯಲ್ಲಿ ಹಿಂಬದಿ, ಕಿವಿಯ ಬಳಿ ಸ್ವಲ್ಪ ಕೂದಲು ಅದನ್ನು ಹೇಗೋ ಎತ್ತಿ‌ನಿಲ್ಲಿಸುತ್ತಿದ್ದರು. ಅವರ ಕೊನೆಯ ದಿನಗಳಲ್ಲಿ ಅವರ ಹೇರ್ ಡಿಸೈನರ್, ಮೇಕಪ್ ಆರ್ಟಿಸ್ಟ್ ನಾನೇ ಆಗಿ ತಮಾಷೆ ನೊಡ್ತಾ ಇದ್ದೆ. ಇವುಗಳೆಲ್ಲಾ‌ ನೆನಪುಗಳಾಗೆ ಕಾಡುತ್ತಿವೆ ಈಗ.

ಇನ್ನಷ್ಟು ಗೊತ್ತಿಲ್ಲದೆ ಆಗಿರಬಹುದಾದುದು ಅಂದರೆ ನಾನು ಕಲಾವಿದೆಯಾಗಿ ಬೆಳೆಯುವಲ್ಲಿ ಪರೋಕ್ಷವಾದ‌ ಅವರ ಪ್ರಭಾವ. ದಿನಾ ಬೆಳಗ್ಗೆ ಅಪ್ಪ‌ ತಪ್ಪದೆ ಇಡುತ್ತಿದ್ದ ರೇಡಿಯೋ. ಆ ಕಾರಣಕ್ಕೆ ಚಿರಿಚಿರಿ ಮಾಡ್ತಾ ಬೇಗನೆ ಏಳಬೇಕಾದ್ದು, ನಮಗರಿವಿಲ್ಲದೆ ಆಕಾಶವಾಣಿಯ ಎಲ್ಲಾ ಕಾರ್ಯಕ್ರಮಗಳು ನಮ್ಮ ಬಾಯಲ್ಲಿ ಹರಿದಾಡುತ್ತಾ ನಾವೂ ರೇಡಿಯೋ ಕೇಳುಗರಾದದ್ದು ಈಗ ನಾನು ಆಕಾಶವಾಣಿಯ ಕಲಾವಿದೆಯಾಗಿ, ಕಾರ್ಯಕ್ರಮ ‌ನಿರ್ವಾಹಕಿಯಾಗಿರುವಲ್ಲಿಗೆ ತಲುಪಿದೆ.

ಅತಿಯಾಗಿ ಯಕ್ಷಗಾನದ ಕ್ಯಾಸೆಟ್ ಕೇಳೋ ಅಪ್ಪನ ಆಸಕ್ತಿ. ದಿನ ಒಂದೊಂದು ಯಕ್ಷಗಾನವನ್ನು ಕೇಳ್ತಾ ಇದ್ರು, ಅಲ್ಲದೇ ಗಟ್ಟಿ ಧ್ವನಿಯಲ್ಲಿ ಬೇರೆ. ಹಾಗೇ ಅದನ್ನು ಕೇಳಿಸಿಕೊಳ್ಳುವುದು ಅನಿವಾರ್ಯ ನಮಗೆ. ನಾವ್ಯಾರಾದರೂ ವಾಲ್ಯೂಮ್ ಕಡಿಮೆ ಮಾಡಲು ಹೋದರೆ ಅಪ್ಪನ‌ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಇದೆಲ್ಲಾ ತಿಳಿದೋ‌ ತಿಳಿಯದೆಯೋ ನನ್ನೊಳಗಿನ‌ ಕಲಾವಿದೆಯನ್ನು ಗಟ್ಟಿಮಾಡುವಲ್ಲಿ ಖಂಡಿತಾ ಸಹಕರಿಸಿದೆ. ಯಾವುದನ್ನೂ ಮಾಡು ಅನ್ನದಿದ್ದರೂ ಬೇಡ ಎನ್ನುವ ಸಾರಾಸಗಟಾದ ಹೇಳಿಕೆ ಅಪ್ಪನಿಂದ ಬಾರದೇ ಇರುವುದು ನನ್ನ ಆತ್ಮಸ್ಥೈರ್ಯವನ್ನು ಬಲಗೊಳಿಸಿದೆ.

ಅವರ ಕೊನೆಯ ದಿನದ‌ ನೆನಪು ಮಾತ್ರ ಅತ್ಯಂತ ಅಚ್ಚರಿ ನನಗೆ.‌ ಅಪ್ಪ ಇನ್ನು ನಮ್ಮೊಡನೆ ಇರಲಾರರು ಹೆಚ್ಚು ದಿನ ಅಂತ ನಂಗೂ ಅಣ್ಣನಿಗೂ ಅನ್ನಿಸ್ತಾ ಇತ್ತು. ಆದ್ರೆ ಯಾವ ಕ್ಷಣದಲ್ಲಿ ಏನಾಗಬಹುದು ಅನ್ನೋದು ತಿಳಿದಿರ್ಲಿಲ್ಲ. ಅಪ್ಪ ಕೊನೆಯ ಉಸಿರೆಳೆದಾಗ ನಾವು ನೋಡ್ತಾ ಇದ್ದೆವು. ಎಲ್ಲರೂ ಹೇಳಿದ ಹಾಗೆ ಸತ್ತ ಬಳಿಕ ದೇಹ ತಣ್ಣಗಾಗುತ್ತಾ ಬರ್ತದೆ ಅಂತಾ ನಾವು ಆಗಾಗ ಅಪ್ಪನನ್ನು ಮುಟ್ಟಿ ಮುಟ್ಟಿ ನೋಡುದು. ಆದ್ರೆ ಅಪ್ಪನ‌ ದೇಹ ಚಿತೆಗೇರುವವರೆಗೂ ತಣ್ಣಗಾಗೇ ಇಲ್ಲ. ಅಪ್ಪ ಇನ್ನು ನಮ್ಮೊಂದಿಗೆ ಇಲ್ಲ ಅನ್ನೋದನ್ನು ನಮಗೆ ಒಪ್ಪಿಕೊಳ್ಳುವುದು ಕಷ್ಟ ಆಗ್ತಿದ್ದ ಸಂದರ್ಭ ಅದು.

ಕೊನೆಯ ದಿನಗಳಲ್ಲಿ ಅವರ ಆರೋಗ್ಯ ತೀರಾ ಹದಗೆಟ್ಟರೂ ಅದೇ ಗಾಂಭಿರ್ಯವನ್ನು, ಸೌಂದರ್ಯ ಪ್ರಜ್ಞೆಯನ್ನು ಜೀವನದುದ್ದಕ್ಕೂ ಕಾಯ್ದುಕೊಂಡ ಅಪ್ಪನ ಮನದಲ್ಲಿ ಯಾವ ನೋವಿತ್ತು, ಏನೂ ಖುಷಿಯಿತ್ತೋ , ಮಕ್ಕಳ ಬಗೆಗಿನ ಅವರ ಕನಸೇನಿತ್ತು ಅನ್ನುವುದು ಕೊನೆಯ ತನಕವೂ ಗೊತ್ತೇ ಆಗ್ಲಿಲ್ಲ. ಈಗಲೂ ಅಪ್ಪ ಮಲಗುವ ಕೋಣೆ ಅಪ್ಪನ ಕೋಣೆಯಾಗಿಯೇ ಉಳಿದಿದೆ. ಕೋಣೆಯಿಂದ ಮತ್ತೆ ಬಾಬೂ.. ಬಾಬೂ.. ಎಂಬ ಅಪ್ಪನ ಧ್ವನಿ ಕೇಳಿದಂತಾಗುತ್ತಿದೆ. ಅಪ್ಪ ಈಗ ನೆನಪು ಮಾತ್ರ..

‍ಲೇಖಕರು avadhi

19 September, 2019

2 Comments

  1. Sudha Hegde

    ಹೌದು ಮಂಜುಳಾ, ಹುಡುಗಿಯರಿಗೆ ಅಪ್ಪ ಅಂದರೆ ಬಿಡಿಸಲಾರದ ಸೆಳೆತ…

  2. T S SHRAVANA KUMARI

    ಆಪ್ತವಾದ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading