ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಇನ್ನಿಲ್ಲ..

ಗಂಗೂರ್ ಮುಕುಂದ್ 

ಗರಬಡಿದಂತೆ ನಿಂತೆ ಅಪ್ಪಳಿಸಿದ ಸುದ್ದಿಗೆ. ಎಲ್ಲವೂ ಗೊತ್ತಿದ್ದರೂ ಒಪ್ಪದ ಮನಸು ಒಡೆಯದ ಕಣ್ಣೀರು. ಇದಕ್ಕೆ ಶೂನ್ಯದ ಅನುಭವ ಎನ್ನಬೇಕೇ ? ಹದಿನೈದು ದಿವಸದ ಹಿಂದೆ ಕಂಡಾಗ ಗಂಭೀರತೆ ಗೊತ್ತಾದರೂ, ಅವರೊಳಗಿನ ಉತ್ಸಾಹ ಇನ್ನೊಂದಿಷ್ಟು ದಿನ ತಳ್ಳಬಹುದೆಂದು ಕೊಂಡಿದ್ದೆ. ಅದೇ ಕಡೆ ಭೇಟಿ ಯಾಗುತ್ತದೆಂದು ಅನಿಸಿರಲಿಲ್ಲ .

ಎಲ್ಲದರಲ್ಲೂ ಶಿಸ್ತು , ಶುಭ್ರ , ಖಡಕ್ ಅಪ್ಪಗೆ ಅಮ್ಮ ಹೆಸರಿಟ್ಟದ್ದು ಬೆಂಕಿ ನವಾಬ. ನಾನು ಅವರು ಕರೆಂಟ್ ಕಂಬ – ಮುಟ್ಟಿದ್ರೆ ಶಾಕ್ ಖಂಡಿತ ಅನ್ನುತಿದ್ದೆ ಅಮ್ಮನ ಜೊತೆ ಮಾತನಾಡುವಾಗ. ತಪ್ಪು, ಅನ್ಯಾಯ ಗಳನ್ನೂ ಎಳ್ಳಷ್ಟೂ ಸಹಿಸದ , ಸಹನೆ ಇಲ್ಲದ , ಮುಲಾಜಿಲ್ಲದೆ ದಂಡಿಸಲು ಏಳುತ್ತಿದ್ದ ಕೈ ಬಾಯಿ. ಮನೆ ಇರಲಿ ಖಚೇರಿ ಇರಲಿ ಅವರಿದ್ದದ್ದೇ ಹಾಗೆ.

ಹಾಗಾದಾಗ ಸಂಬಾಳಿಸೋದು ಕಷ್ಟವೇ ..ಪಾಪ ಅಮ್ಮ ಒದ್ದಾಡುತಿದ್ದಳು ಸಿಟ್ಟು ತಮ್ಮಣಿಸಿ ಸಂಬಂಧಗಳನ್ನು ಕಾಪಾಡಿಕೊಳ್ಳಲು. ಇದು ಅವರಿಗೂ ಗೊತ್ತಿತ್ತು , ಎಷ್ಟೋ ಸಾರಿ ತಾವೇ ಹೇಳುತ್ತಿದ್ದರು ಕೂಡ . ತಮ್ಮ ನಡೆಗೆ ತಾವೇ ನೊಂದುಕೊಳ್ಳುತ್ತಿದ್ದರು. ಅಮ್ಮ ಹೋದಮೇಲೆ ಈ ಎರಡು ವರ್ಷಗಳಲ್ಲಂತೂ ಕಣ್ಣೀರಿಡುತ್ತಿದ್ದರು. ಕಠೋರ ಕವಚದೊಳಗಿನ ಕೋಮಲ ಮನಸು !

ಎಲ್ಲರಿಗೂ ಚಿಕ್ಕವನಾದ ನಾನು ಅವರದೇ ಒಂದಷ್ಟು ಭಂಡ ಸ್ವಭಾವ ನನ್ನದಾಗಿಸಿಕೊಂಡಿದ್ದೆ. ಒಮ್ಮೆ ಹೊಡೆಯಲು ಬಂದರೆ, ಅಂಜದೆ ಭಂಡ ನಾಗಿ ನೇತುಹಾಕಿದ್ದ ಅವರ ಪ್ಯಾಂಟ್ ನ ಬೆಲ್ಟ್ ತಂದುಕೊಟ್ಟು ಅದೆಷ್ಟು ಹೊಡಿತಿರೋ ಹೊಡಿರಿ ಅಂತ ಕೈಕಟ್ಟಿ ನಿಂತಿದ್ದೆ. ಅಪ್ಪಗೆ ಏನುಮಾಡಬೇಕೋ ತಿಳಿದೇ ಹೊರ ಹೊರಟು ಹೋದರು ಪಾಪ. ಅದಾದ ಮೇಲೆ ಎಂದೂ ನನ್ನ ಮೇಲೆ ಕೈ ಎತ್ತಲಿಲ್ಲ. ಅವರ ಆಫೀಸಿಗೆ ಅಂಜದೆ ಹೋಗುತ್ತಿದ್ದೆ ಆಗಾಗ.. ತಪ್ಪದೆ ಒಂದು ಫೈವ್ ಸ್ಟಾರ್ ಕ್ಯಾಡಬರ್ರೀಸ್ ಚಾಕಲೋಟ್ ಕೊಡಿಸಿ ಮನೆಗೆ ಹೋಗೆನ್ನುತ್ತಿದರು. ಅಂದಿನಗಳಲ್ಲಿ ಅದು ದುಬಾರಿ ಚಾಕೊಲೇಟ್. ಕಟ್ಟುನಿಟ್ಟು ಬಜೆಟ್ ಜೀವನ ನಡೆಸುತ್ತಿದ್ದ ಅಪ್ಪ ನನಗೋಸ್ಕರ ಧಾರಾಳ !

ಅಪ್ಪನ ಜೊತೆ ಸೈಕಲ್ ಸವಾರಿ ಮೋಜೇ ಬೇರೆ. ಸೈಕಲ್ ಮೇಲೇ ಹಳ್ಳಿ ಹಳ್ಳಿ ಶಾಲೆ ಇನ್ಸ್ಪೆಕ್ಷನ್ ಗೆ ಹೋಗುತ್ತಿದ್ದ ಅಪ್ಪ ಅದನ್ನು ಚೆನ್ನಾಗಿ ಮೆಂಟೇನ್ ಮಾಡುತ್ತಿದ್ದರು. ಸಂಡೆ ಅವರ ಜೊತೆ ಸೈಕಲ್ ನಲ್ಲಿ ಸಂತೆಗೆ ಹೋಗಿ ಪಲ್ಯಕಾಯಿ ತರೋದು , ಬಜಾರಿಗೆ ಹೋಗೋದು ಎಲ್ಲಾ ಖುಷಿನೇ . ಒಮ್ಮೆ ಹಿಂದಿನ ಗಾಲಿಯಲ್ಲಿ ನನ್ನ ಬಲಗಾಲು ಸಿಕ್ಕು ಕೂಗಿದ್ದೆ. ಕಷ್ಟಪಟ್ಟು ಕಾಲನ್ನು ಹೊರತೆಗೆದು ರಕ್ತ ಚಿಮ್ಮಿದೊಡೆ ಗಾಬರಿಗೊಂಡು ಕಕ್ಕಪ್ಪನ ಹತ್ತಿರ ಕರೆದೊಯ್ದು ಬ್ಯಾಂಡೇಜ್ ಕಟ್ಟಿಸಿದರು. ಅಂತಾ ಗಟ್ಟಿ ಅಪ್ಪ ನನ್ನ ರಕ್ತಕ್ಕೆ ಹೆದರಿದ್ದರು-ಅವರೊಳಗಿನ ವಾತ್ಸಲ್ಯ ಇಣುಕಿತ್ತು !

ವರ್ಷದ ಹಿಂದೆ ನನ್ನವಳು ಹೋದಾಗ , ಧೈರ್ಯದಿಂದ ಎದುರಿಸಲು ಹೇಳಿಕೊಟ್ಟರು. ನನ್ನಿಬ್ಬರು ಮಕ್ಕಳನ್ನು ತಬ್ಬಿ ಹಿಡಿದಿದ್ದರು ನಾನು ಕಾರ್ಯಗಳನ್ನೆಲ್ಲ ಮುಗಿಸುವ ತನಕ. ಅವರೊಳಗಿನ ಅದಮ್ಯ ಅಂತಃಕರಣ ಮಿಂಚಿತ್ತು !

ಅದೃಷ್ಟ ವೆಂದರೆ ನನಗೆ ಬರಿ ಅಪ್ಪನಾಗಿರಲಿಲ್ಲ. ಮನೆಯಲ್ಲಿ ಅಪ್ಪ, ಶಾಲೆಯಲ್ಲಿ ಪಾಠ ಮಾಡಿದ ಮೇಸ್ಟ್ರು, ಓದುತಿದ್ದ ಶಾಲೆಗೆ ಬಂದು ಪರೀಕ್ಷಿಸಿದ ಇನ್ಸ್ಪೆಕ್ಟರ್ ಆಫ್ ಸ್ಕೂಲ್ಸ್, ಸ್ಟ್ರಿಕ್ಟ್ ಹೆಡ್ ಮಾಸ್ಟರ್, ದೊಡ್ಡವನಾಗುತ್ತಾ ಪ್ರತಿ ಹೆಜ್ಜೆಗೆ ಮಾರ್ಗ ದರ್ಶನ ಮಾಡಿದವರು, ಅನೇಕ ಧಾರ್ಮಿಕ, ಅಧ್ಯಾತ್ಮ ಸೂಕ್ಷ್ಮ ತಿಳಿಸುತ್ತಿದ್ದವರು. ಸಾಹಿತ್ಯ ವಿಷಯಗಳನ್ನು ಚರ್ಚಿಸುತ್ತಿದವರು, ಎಂದೆಂದಿಗೂ ನಾನಿದ್ದೇನೆ ಹಿಂದೆ ಎಂದು ಧೈರ್ಯ ತುಂಬುತ್ತಿದವರು, ನನ್ನ ಹೀರೊ !

ಎತ್ತಿ ಮುದ್ದಾಡಿ ಹೊತ್ತು ತಿರುಗಿ , ತೀಡಿ ತಿದ್ದಿ , ಕೈಹಿಡಿದು ಬೆಳೆಸಿದ ನನ್ನ ಹೀರೊ ಇನ್ನಿಲ್ಲ..ಪಂಚ ಭೂತಗಳಲ್ಲಿ ಲೀನವಾಗಿದ್ದಾರೆ. ಇಂಗದ ಸವಿ ನೆನಪುಗಳ , ಅಖಂಡ ಆಶೀರ್ವಾದವ ಕೊಟ್ಟು ಹೋಗಿದ್ದಾರೆ ಮುನ್ನಡೆಯಲು ..

‍ಲೇಖಕರು avadhi

2 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading