ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪು ಎಂದಿಗೂ ಜೀವಂತ…

ಶಾಪಗ್ರಸ್ತ ಗಂಧರ್ವ!

ಆಕಾಂಕ್ಷಾ ಶೇಖರ್

‘ಹೆಸರು ಮಾಡು  ಹಸಿರಾಗೋ ಹಾಗೆ, ಉಸಿರು ಹೋದರೂ ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನೇ ಮುನ್ನುಡಿ ನೂರು ಸಾರಿ ಕೂಗು…’

ಎಂಬ ಸಾಲುಗಳಿರುವ ‘ಯುವರತ್ನ’ ಸಿನಿಮಾದ ‘ಪವರ್ ಆಫ್ ಯೂಥ್’ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದ ಅಪ್ಪು‌ ತಮ್ಮ ಜೀವನದ ನಡಿಗೆಯನ್ನು ನಿಲ್ಲಿಸಿದ್ದರೂ ಸಹ ಮೇಲಿನ ಹಾಡಿನ ಸಾಲುಗಳಂತೆ ಹೆಸರು ಮಾಡಿ ಹೋಗಿದ್ದಾರೆ ಹಸಿರಾಗೋ  ಹಾಗೆ.. ಎಂದಿಗೂ  ನಮ್ಮೊಂದಿಗೆ‌ ಇರುತ್ತಾರೆ ಉಸಿರು ಹೋಗಿದ್ದರೂ ಅವರ ಹೆಸರಿರುವಂತೆ. ಕಾಕತಾಳೀಯಯೆಂಬಂತೆ ಇದೀಗ ಅಪ್ಪು ಅವರ ಬಹುತೇಕ ಸಿನಿಮಾಗಳಲ್ಲಿ ಅವರ ಪಾತ್ರವನ್ನು ಕೇಂದ್ರೀಕರಿಸಿ ಬರೆಯಲಾಗಿರುವ ಹಾಡುಗಳನ್ನು ಕೇಳಿದರೆ, ಆ ಎಲ್ಲಾ ಹಾಡುಗಳಲ್ಲಿ‌ನ ಎಷ್ಟೋ ಸಾಲುಗಳಿಗೆ ಅನುಗುಣವಾಗಿ  ಅಪ್ಪು ಅವರು ಬದುಕಿ ಹೋಗಿದ್ದಾರೆ ಅನಿಸುತ್ತದೆ. ತೆರೆಯ ಮೇಲಿನ ಹೀರೋ ಒಬ್ಬ, ತೆರೆಯ ಆಚೆಗೂ ನಿಜವಾದ  ಹೀರೋ ಎಂದೆನಿಸಿ, ಅಣ್ಣಾವ್ರ ಮಗನಾದರೂ ಎನಗಿಂತ ಕಿರಿಯರಿಲ್ಲ ಎಂಬುದನ್ನು ಅನುಸರಿಸಿ, ಮುಗ್ಧ ವ್ಯಕ್ತಿತ್ವದಿಂದಲೇ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿ, ಜನರ ಮನಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿ, ಮನೆಗೊಬ್ಬ ಅಪ್ಪುವಿನಂಥ ಮಗನಿರಬೇಕು ಎನಿಸುವಷ್ಟರ ಮಟ್ಟಿಗೆ  ಜೀವಿಸಿ ಹೋಗಿದ್ದು ‘ಅಪ್ಪು’ಅವರ ಸಾರ್ಥಕ ಬದುಕಿನ ಬಹುದೊಡ್ಡ ದಾಖಲೆ! 

‘ಹೀ ಇಸ್ ಮಿಸ್ಟರ್ ಪರ್ಫೆಕ್ಟ್,    ರಾಜರ ರಾಜ ರೆಸ್ಪೆಕ್ಟ್….’

ಕನ್ನಡದ ಕಣ್ಮಣಿಗಳಾದ ಅಣ್ಣಾವ್ರ ಮತ್ತು ಪಾರ್ವತಮ್ಮನವರ ಪ್ರೇಮದ ಕಾಣಿಕೆಯಾಗಿ ಜನಿಸಿ, ತಮ್ಮ ಅಖಂಡ ನಟನಾ ಪ್ರತಿಭೆಯನ್ನು ಬಾಲ್ಯದಲ್ಲೇ ಪ್ರದರ್ಶಿಸಿ ಅದಕ್ಕೆ ಸಾಕ್ಷಿಯೆಂಬಂತೆ ರಾಷ್ಟ್ರ‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ‘ಪುನೀತ್ ರಾಜ್ ಕುಮಾರ್’ ಅವರಂಥ ಅದ್ಭುತ ವ್ಯಕ್ತಿತ್ವದ ಉತ್ತಮ ನಟರನ್ನು ಪಡೆದ ಕನ್ನಡಿಗರು ಭಾಗ್ಯವಂತರೇ ಸರಿ. ವಸಂತಗೀತದ ಮುಗ್ಧ ಶ್ಯಾಮನನ್ನ, ಭಾಗ್ಯವಂತದ  ಕೃಷ್ಣನನ್ನ,, ಭಕ್ತ ಪ್ರಹ್ಲಾದನನ್ನ,, ಎರಡು ನಕ್ಷತ್ರಗಳ ರಾಜನನ್ನ, ಬೆಟ್ಟದ‌ ಹೂವಿನ ರಾಮುವನ್ನ, ಹೊಸ ಪ್ರತಿಭೆಗಳಿಗಾಗಿ ‘ಪಿ.ಆರ್.‌ಕೆ’ ನಿರ್ಮಾಣ ಸಂಸ್ಥೆಯನ್ನು  ಸ್ಥಾಪಿಸಿದ ವೀರಕನ್ನಡಿಗನನ್ನ, ಮೌರ್ಯನಂತೆ ಬಾಳಿದ ಅರಸುನನ್ನ, ಈ ಗಂಧದ ಗುಡಿ ಮರೆಯುವುದಾದರೂ ಹೇಗೆ? ಕರುನಾಡೇ ಮೆಚ್ಚುವ ರಾಜವಂಶದಲಿ ಅರಸನಂತೆ ಹುಟ್ಟಿ, ಕಲೆಯಿಂದಲೇ ಎಲ್ಲರ ಮನೆಯ ಮಾತಾಗಿ,‌ ಹಿಟ್ ಸಿನಿಮಾಗಳ‌ನ್ನು ಕೊಟ್ಟು ಸೂಪರ್ ಸ್ಟಾರ್‌ ಎನಿಸಿದರು ಸದಾ ಸಿಂಪ್ಲಿಸಿಟಿಯ ರಾಯಭಾರಿಯಂತೆ ಬದುಕಿ, ಕೊನೆಗೆ ‘ಕರ್ನಾಟಕ ರತ್ನ‌’ ವಾದ  ನಮ್ಮ  ಅಪ್ಪು ಅವರ ಕುರಿತಾಗಿ ಇಂದು ಇಡೀ ಕರ್ನಾಟಕವೇ ಹೇಳುತಿದೆ.‌.

 ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ ಸ್ಟಾರ್ 
  ವಿ ಆರ್ ಲವ್ಯು ಪವರ್ ಸ್ಟಾರ್’

‘ಅಪ್ಪು’ ಸಿನಿಮಾದ ಶತಮಾನೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್  ಅವರಿಂದ ‘ಸಿಂಹದ ಮರಿಯ ಅಂತರಂಗ ನಟನೆ…’ ಎಂಬ ಪವರ್ ಫುಲ್ ಹೊಗಳಿಕೆ ಪಡೆದುಕೊಂಡು ಅಂದಿನಿಂದ ಇಂದಿನ ‘ಜೇಮ್ಸ್’ ಸಿನಿಮಾದ ತನಕವೂ ಸದಭಿರುಚಿಯ ಸಿನಿಮಾಗಳಲ್ಲಿ ನಟಿಸಿ, ಸಾಲು-ಸಾಲು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತ ‘ಸ್ಮೈಲ್ ಗುನು,ಲುಕ್ಕಿ ಗುನು, ಹೆಜ್ಜೆ ಗುನು ಜೋಶ್ ಗುನು ,ಕ್ರೇಜ್ ಗುನು’ ,ಟ್ರೇಡ್ ಮಾರ್ಕಿನಂತಿದ್ದ ನಮ್ಮ-ನಿಮ್ಮೆಲ್ಲರ ಮೆಚ್ಚಿನ ಪ್ರೀತಿಯ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ರವರ‌ ‘ಜನ್ಮದಿನ’ವಿಂದು. ಅಸಲಿಗೆ ಸರಳತೆಯ, ಸಹೃದಯತೆಯ,ಮುಗ್ಧತೆಯ ಹಬ್ಬವಿದು!  

ಕಳೆದ ವರ್ಷದ ಕೊನೆಯಲ್ಲಿ ಬರಸಿಡಿಲಿನಂತೆ ಬಂದೆರಗಿದ ಅಪ್ಪು ಅವರ ಅಗಲಿಕೆಯ ಸುದ್ದಿ ಕೇಳಿ ಎಷ್ಟು ಜ‌ನ ಈ ಸುದ್ದಿ ಸುಳ್ಳಾಗಬಾರದಿತ್ತೆ ಎಂದು ಬಿಕ್ಕಳಿಸಿ ಅಳುತ್ತಾ, ದೇವರನ್ನು ಶಪಿಸುತ್ತ, ವಾರಗಟ್ಟಲೇ ಊಟ ತ್ಯಜಿಸಿದರೋ ಲೆಕ್ಕವಿಲ್ಲ. ಕೊಂಚ ಸಮಯ ಕೊಟ್ಟರೂ ಸಾಕು ಒಕ್ಕೊರಲಿನ ಪ್ರಾರ್ಥನೆಯ ಮೂಲಕ  ಅಪ್ಪು ಅವರನ್ನು ಕನ್ನಡಿಗರು ಉಳಿಸಿಕೊಂಡು ಬಿಡುತ್ತಾರೆ ಎಂಬುದನ್ನು ತಿಳಿದಿದ್ದ ದೇವರು ಸಹ ನಿಷ್ಕರುಣಿಯಾಗಿ ಕನಿಷ್ಠ ಸಮಯವನ್ನೂ ಕೊಡದೆ ವಿಷಾದ ತುಂಬಿದ ‘ಕ್ಲೈಮಾಕ್ಸ್’ನ್ನು ಚಿತ್ರದ ಮಧ್ಯಂತರದಲ್ಲೇ ತಂದುಬಿಟ್ಟಿದ್ದು ಮಾತ್ರ ಖೇದಕರ. ಆದರೆ ಒ‌ಬ್ಬ ನಟ ದೈಹಿಕವಾಗಿ ತಮ್ಮಿಂದ ದೂರವಾದ ನಂತರವೂ ಆತ ಮಾಡಿದ್ದ ಜನಪರ ಕೆಲಸಗಳಿಂದ ಸ್ಪೂರ್ತಿ ಹೊಂದಿ, ತಾವೂ ತಮ್ಮ ಕೈಲಾದಷ್ಟು ಈ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ನಿರ್ಧರಿಸಿ ನೇತ್ರದಾನದ ನೋಂದಣಿಯನ್ನು ,ರಕ್ತದಾನ ಶಿಬಿರಗಳನ್ನು, ಅನ್ನದಾನವನ್ನು ಹೀಗೆ ಹತ್ತು-ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಜನರು ಹಮ್ಮಿಕೊಳ್ಳುವುದರೊಂದಿಗೆ ಅಪ್ಪುರವರ ಜೀವನಾದರ್ಶಗಳ ಮೂಲಕ  ಸದಾ ಅವರನ್ನು  ‘ಜೀವಂತವಾಗಿರಿಸುವ’ ಸಕಲ ಪ್ರಯತ್ನಗಳನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಿರುವುದು  ಒಂದು ಮಟ್ಟಿಗಿನ ರೆವಲ್ಯೂಷನ್ನೇ ಸರೀ. 

ಹುಟ್ಟು ಸಾರ್ಥಕತೆ ಏನಿಸಿದ ದಿನ ನಿಜವಾದ ಹುಟ್ಟಿದ ಹಬ್ಬ ಎನ್ನುತ್ತಾರೆ. ಇಂದೂ ಕೂಡ, ಅಪ್ಪು ಅವರು ತಮ್ಮ ಹುಟ್ಟನ್ನು ಸಾರ್ಥಕ‌ ಮಾಡಿಕೊಂಡಿದ್ದಾರೆ ಆದ್ದರಿಂದಲೇ ಇಡೀ ಕರ್ನಾಟಕವೇ ಅವರ ಅಭಿಮಾನಿ ಸಂಘದಂತೆ ಅವರ ಈ  ದಿನವನ್ನು ಹಬ್ಬದಂತೆ ಆಚರಿಸಲು ಸಿದ್ದವಾಗುತ್ತಿದೆ.‌ ಕೃತಕತೆಯಿಲ್ಲದೆ ನಗುವನ್ನು ಬೀರುತ್ತ, ಬಂದವರನ್ನೆಲ್ಲ ಬಂಧುಗಳೆನ್ನುತ, ತಾನೂ‌ ಬೆಳೆಯುತ್ತ ತನ್ನವರಲ್ಲದವರನ್ನು‌ ಬೆಳೆಸುತ್ತ, 45 ಶಾಲೆಗಳನ್ನು, 26 ಅನಾಥ ಆಶ್ರಮಗಳನ್ನು, 19 ಗೋಶಾಲೆಗಳನ್ನು, 18 ವೃದ್ಧಾಶ್ರಮಗಳನ್ನು, ಬರೋಬ್ಬರಿ 1800 ವಿದ್ಯಾರ್ಥಿಗಳ ಶಿಕ್ಷಣದ ಖರ್ಚನ್ನು ನಿಭಾಯಿಸುತ್ತಿದ್ದ ಅಪ್ಪು ಅವರು ಹಾಡಿನಿಂದ ಬಂದ ಸಂಭಾವನೆಯನ್ನು ಸಹ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು, ಸರ್ಕಾರದ ಜಾಹೀರಾತುಗಳಿಗೆ ಸಂಭಾವನೆಯನ್ನೇ ಬಯಸದೆ ನಟಿಸುತ್ತಿದ್ದರು. ಕೋವಿಡ್ ಸಮಯದಲ್ಲಿಯೂ ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರು. ಹೀಗೆ ಲೆಕ್ಕಕ್ಕೆ ಸಿಗದಷ್ಟು ಕೆಲಸಗಳನ್ನು ಮಾಡುತ್ತ ಕೊನೆಗೆ ಹೋಗುವಾಗಲೂ ತಮ್ಮ ಕಣ್ಣುಗಳನ್ನು ದಾನ ಮಾಡಿ, ನಾಲ್ಕು ಅಂಧರ ಬಾಳಿಕೆ ಬೆಳಕಾದರು. ಒಂದು ಸಂಘ ಅಥವಾ ಸಂಸ್ಥೆ ಮಾಡುವ ಸಾಮಾಜಿಕ ಕೆಲಸಗಳನ್ನು ಅಪ್ಪು ಅವರೊಬ್ಬರೇ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ ಮಾಡಿ, ಇಡೀ ಜನಾಂಗಕ್ಕೆ ಸ್ಪೂರ್ತಿಯಾಗುವ ಮಾಲಕ ಇಂದು ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿನ ಭಾವಚಿತ್ರದಿಂದಿಡಿದು, ಪ್ರತಿಷ್ಠಿತ ರಸ್ತೆಗಳಲ್ಲಿ ದೊಡ್ಡ ಕಟೌಟಾಗಿ, ದೇವರ ಫೋಟೋಗಳ ಸಾಲಿನಲ್ಲಿ ದೇವತಾ ಮನುಷ್ಯನಂತೆ ರಾರಾಜಿಸುತ್ತಿದ್ದಾರೆ.

ಒಂದು ನಿಮಿಷ ಯೋಚಿಸಿ ನೋಡಿ….!

ಬರೋಬ್ಬರಿ 25 ಲಕ್ಷಕ್ಕಿಂತ ಹೆಚ್ಚಿನ ಜನ ಅಪ್ಪು ಅವರ ಅಂತಿಮ ಸಂಸ್ಕಾರಕ್ಕೆ ಬರುತ್ತಾರೆ, ಯಾರೋ ತಾಯಿ ಅಪ್ಪು ಬದಲು ನನ್ನ ಮಗ ಹೋಗಬಾರದಿತ್ತೇ ಎಂದು ಕಣ್ಣೀರಾಕುತ್ತಾರೆ, ಇನ್ಯಾರೋ ಸೈಕಲ್ಲಿನಲ್ಲಿ, ಕಾಲ್ನಡಿಗೆಯಲ್ಲಿ ದೂರ-ದೂರದ ಊರುಗಳಿಂದ‌ ಅಪ್ಪು ಅವರ ಸಮಾಧಿ ದರ್ಶನಕ್ಕಾಗಿ ಓಡಿ ಬರುತ್ತಾರೆ, ಗಾಡಿಗಳ ಮೇಲೆ ಅಪ್ಪು ಭಾವಚಿತ್ರ ಹಾಕಿಸಿಕೊಳ್ಳುತ್ತಾರೆ, ಮತ್ತೊಬ್ಬರು ಅಪ್ಪು ಅವರ ಪಟವನ್ನು ಅಯ್ಯಪ್ಪ‌ನ ದರ್ಶನಕ್ಕೆಂದು ಕರೆದೊಯ್ಯುತ್ತಾರೆ, ಲೆಕ್ಕವಿರದಷ್ಟು ಜನ ಅಪ್ಪು ಅವರ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ, ಭಾಷೆ ಗೊತ್ತಿಲ್ಲದ, ಬೇರೆ ದೇಶದ ಜನರು ಸಹ ದುಃಖತಪ್ತರಾಗುತ್ತಾರೆ, ಕ್ರಿಕೆಟ್ ಸ್ಟೇಡಿಯಂನಲ್ಲಿ ಒಕ್ಕೊರಲಿನಿಂದ ಅಪ್ಪು ಅವರ ಹಾಡನ್ನು ಹಾಡುತ್ತಾರೆ…

ಹೀಗೆ ಒಂದೇ ಎರಡೇ! ಇಷ್ಟು ಜನರ ತುಂಬು ಪ್ರೀತಿಯನ್ನು ಕೇವಲ 46 ವರ್ಷಗಳ ಜೀವಿತಾವಧಿಯಲ್ಲಿ ಸಂಪಾದಿಸಿದ  ವ್ಯಕ್ತಿ ಮನುಷ್ಯ ಮಾತ್ರನೇ? ಅಥವಾ ದೈವಾಂಶ ಸಂಭೂತನೇ? ಹರಿದು ಬರುತ್ತಿರುವ ಜನಸಾಗರ ನೋಡಿದರೆ ಈ ರೀತಿಯ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಸಾಮಾನ್ಯವಾಗಿ ನಮ್ಮ ಸಮಾಜ ವ್ಯಕ್ತಿ ಪೂಜೆಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತದೆ ಹಾಗೂ ವಿಶೇಷವಾಗಿ ತೆರೆಯ ಮೇಲೆ ವಿಜೃಂಭಿಸುವ ಹೀರೋಗಳನ್ನು ‘ದೇವರಂತೆ’ ಹುಚ್ಚು ಅಭಿಮಾನದಿಂದ ಆರಾಧಿಸುತ್ತದೆ. ಆದರೆ ಅಪ್ಪು ಅವರಂತಹ ಬೆರಳೆಣಿಕೆಯಷ್ಟು  ಹೀರೋಗಳು ಮಾತ್ರ ತಮ್ಮ ನಡೆ, ನುಡಿ ಮತ್ತು ಕೆಲಸಗಳಲ್ಲಿ ಅವರಿಗೆ ಸಮಾಜ ಕಲ್ಪಿಸಿಕೊಟ್ಟ ಅರಾಧನೆಗೆ  ಪ್ರತಿಯಾಗಿ ತಮ್ಮ ಬದುಕನ್ನೇ ಸಂದೇಶವನ್ನಾಗಿಸುವುದರ ಮುಖಾಂತರ ತೆರೆಯ ಆಚೆಗೂ ಮಾದರಿಯಾಗಿ ನಿಲ್ಲುತ್ತಾರೆ.

ಏನೂ ಇಲ್ಲದವರು ಎಲ್ಲಾ ಸಿಕ್ಕ ಮೇಲೆ‌ ಕೊಡಲು ಮನಸು ಮಾಡುವುದು ಅವರು ಬೆಳೆದು ಬಂದ ದಾರಿ‌ ಅವರಿಗೆ ಕಲಿಸಿದ ಪಾಠವಾಗಿರಬಹುದು. ಆದರೆ ಯಾವುದೇ ‌ಫಲಾಪೇಕ್ಷೆಯಿಲ್ಲದೇ ಜನರಿಗೆ ಸಹಾಯಹಸ್ತ ಚಾಚಬೇಕೆಂಬ ತುಡಿತ  ಹುಟ್ಟಿನಿಂದ  ಎಲ್ಲವನ್ನೂ ಪಡೆದುಕೊಂಡು, ಸುಖದ ಸುಪತ್ತಿಗೆಯಲ್ಲಿ ಬೆಳೆದವರಿಗೆ ಇಷ್ಟು ಸಹಜವಾಗಿ ಬರುತ್ತದೆಯೇ? ಉಪಯೋಗವಿಲ್ಲದಿದ್ದರೆ ಬೇರೆಯವರನ್ನೇ ಮಾತನಾಡಿಸುವ ಗೋಜಿಗೆ ಹೋಗದ ಜನರಿರುವ ಈ ಕಾಲದಲ್ಲಿ ಒಬ್ಬ ಸೂಪರ್‌ ಸ್ಟಾರ್ ಆಗಿ ಎಲ್ಲರನ್ನೂ ಸಮಾನವಾಗಿ‌ ನೋಡಲಾಗುವುದೇ? ಹೆಸರು-ಹಣ-ಕೀರ್ತಿಯನ್ನು ಅತ್ಯಂತ ಚಿಕ್ಕವಯಸ್ಸಿನಲ್ಲೇ ಪಡೆದರು ಎಲ್ಲರೊಂದಿಗೆ ಅಷ್ಟು ವಿನಯವಂತಿಕೆಯಿಂದ ನಡೆದುಕೊಳ್ಳುತ್ತ, ಸಮಕಾಲೀನ ನಟರೊಂದಿಗೆ ಸ್ಪರ್ಧೆಗಿಳಿಯದೇ, ಸಾತ್ವಿಕ ಬದುಕು ನಡೆಸಿ ಎಲ್ಲರ ಪ್ರೀತಿಗೆ ಪಾತ್ರರಾಗುವುದು ಸಾಧ್ಯವೇ? ಹೌದು! ಅಪ್ಪು ಅವರು ನಮ್ಮ-ನಿಮ್ಮಂಥೇ  ಮನುಷ್ಯ ಸಹಜ‌ ರಾಗದ್ವೇಷಗಳನ್ನೂ,‌ ಆಸೆ-ಆಕಾಂಕ್ಷೆಗಳನ್ನು ಹೊಂದಿದ್ದರು‌ ಅವರು ಎಂದೂ ಯಾವುದನ್ನು ದುರೂಪಯೋಗ ಮಾಡಿಕೊಳ್ಳಲಿಲ್ಲ, ಯಾರನ್ನೂ ತುಚ್ಛವಾಗಿ ಕಾಣಲಿಲ್ಲ, ಅನವಶ್ಯಕ ವಿಚಾರಗಳಿಗೆ ತಲೆಹಾಕಲಿಲ್ಲ ,‌ ಕೀರ್ತಿಯನ್ನು ತೆಲೆಗೇರಿಸಿಕೊಳ್ಳಲಿಲ್ಲ, ತಂದೆ-ತಾಯಿ ಹಾಕಿಕೊಟ್ಟ ದಾರಿಯಿಂದ ದೂರ ಸರಿಯಲಿಲ್ಲ, ಹೀಗೆ ಇನ್ನೂ ಅನೇಕ‌ ಕಾರಣಗಳಿಂದ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಅಪ್ಪು ಅವರನ್ನು ಅಗಾಧವಾಗಿ ಪ್ರೀತಿಸುತ್ತಿರುವ ಅಭಿಮಾನಿಗಳು ಅವರಲ್ಲಿ ದೇವರನ್ನು ಕಾಣುತ್ತಿದ್ದಾರೆ.

‘ಯೋಗವು ಒಮ್ಮೆ ಬರುವುದು ನಮಗೆ,
ಯೋಗ್ಯತೆಯೊಂದೇ ಉಳಿಯುವುದು ಕೊನೆಗೆ..’

ಇವೆಲ್ಲವುಗಳನ್ನು ಗಮನಿಸಿದಾಗ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು, ಮಹತ್ತರ ಕೆಲಸಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿದ ಮನುಷ್ಯ  ಕೆಲವೇ ವರ್ಷ ಬದುಕಿದರೂ ಸರಿ, ಸತ್ತ ನಂತರವೂ ಹೇಗೆ ಜೀವಂತವಾಗಿರಬಹುದು ಎಂಬುದನ್ನು ಜಗತ್ತಿನ ಮುಂದಿಡಲು ಭಗವಂತ ಆಯ್ಕೆ ಮಾಡಿಕೊಂಡಿದ್ದು ತನ್ನದೇ ಗಣದಲ್ಲಿದ್ದ ಅಪ್ಪು ಎಂಬ ನಗುಮೊಗದ  ಗಂಧರ್ವನನ್ನು ಎಂದು ಅನಿಸಿ ಬಿಡುತ್ತದೆ.

ನೋವಿನ ಸಂಗತಿ ಎಂದರೆ, ದೇವರಂಥ ತಂದೆ ತಾಯಿಯ ಮಗನಾಗಿ ಹುಟ್ಟಿಸಿ, ಇಡೀ ಕರ್ನಾಟಕ ಮೆಚ್ಚುವ ಸಂಸ್ಕಾರವಂಥ ಕುಟುಂಬವನ್ನು, ನಿಗರ್ವಿ ಅಣ್ಣಂದಿರನ್ನು, ಉತ್ತಮ ಮಡದಿ ಮಕ್ಕಳನ್ನು, ಅಪಾರವಾಗಿ ಪ್ರೀತಿಸುವ ಅಭಿಮಾನಿ ಬಳಗವನ್ನು, ಅಖಂಡ ಪ್ರತಿಭೆಯನ್ನು, ಸಾಕಷ್ಟು ಹಣವನ್ನು, ಸಹಾಯಹಸ್ತ ಚಾಚುವ ಹೃದಯವನ್ನು, ಅನುಕರಿಸುವಂಥ ವ್ಯಕ್ತಿತ್ವವನ್ನು, ಎಲ್ಲವನ್ನೂ ಕೊಟ್ಟ ಭಗವಂತ, ಅಪ್ಪು ಅವರಿಗೆ ‘ಆಯಸ್ಸನ್ನು’ ಮಾತ್ರ ಕೊಡಲಿಲ್ಲ…..!

ದೇವರು ಕೆಲವೊಮ್ಮೆ ತನ್ನ ಗಂಧರ್ವರನ್ನು ಯಾವುದೋ ಮಹತ್ತರ ಕಾರ್ಯದ ನಿಮಿತ್ತ ಭೂಮಿಗೆ ಮನುಷ್ಯರನ್ನಾಗಿ ಕಳುಹಿಸಿ ನೇಮಿಸಿದ್ದ ಕೆಲಸ ಪೂರ್ಣವಾಗಿದೆ ಎಂದು‌ ಆತನಿಗೆ ಅನಿಸಿದಾಗ ಅವರನ್ನು ತನ್ನತ್ತ ತತಕ್ಷಣವೇ ಕರೆದು ಬಿಡುತ್ತಾನೆ ಎಂಬ ನಂಬಿಕೆ ನಮ್ಮ ಪುರಾಣಗಳಲ್ಲಿದೆ. ಅದರಂತೆ  ಯೋಚಿಸಿ ನೋಡಿದಾಗ, ಅಪ್ಪು ಅವರು ಹೆಚ್ಚು ವರಗಳನ್ನೇ ಪಡೆದು ಬಂದಿದ್ದ  ಕಡಿ‌ಮೆ ಆಯಸ್ಸನ್ನು ಮಾತ್ರ ಶಾಪದಂತೆ ಹೊತ್ತು ತಂದಿದ್ದ ‘ಶಾಪಗ್ರಸ್ತ ಗಂಧರ್ವ’ ಎನಿಸುತ್ತಾರೆ.

ಹೆಚ್ಚು ಸಾಧನೆ ಮಾಡಿ ಬೇಗನೇ ಹೊರಟು ಹೋದ ಗಣಿತಜ್ಞ ಶ್ರೀನಿವಾಸ ರಾಮಾನುಜನ್, ನಟ ಶಂಕರ್ ನಾಗ್ ಇತ್ಯಾದಿ ಸಾಧಕರು ಇಂದಿಗೂ ನಮ್ಮೊಂದಿಗೆ ಇರುವಂತೆ ಅಪ್ಪು ಅವರು ಸಹ ತಮ್ಮ ಸಾಧನೆಗಳ ಮೂಲಕ ‘ಎಂದಿಗಿಂತ ಜೀವಂತವಾಗಿರುತ್ತಾರೆ’. ಒಟ್ಟಾರೆ ಇಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗೆ ಸಾವೆಂಬುದೇ ಇಲ್ಲ! ಅವರಿಂದ ಸ್ಫೂರ್ತಿ ಪಡೆದು ಯಾರೇ ಆದರೂ ಸರಿಯೇ ಒಂದೇ ಒಂದು ಸಣ್ಣ ಒಳ್ಳೆಯ ಕೆಲಸ ಮಾಡಲು ಮುಂದಾದರೂ ಸರಿಯೇ, ಅಲ್ಲಿ ಅಪ್ಪು ಅವರು ಮರುಹುಟ್ಟು ಪಡೆಯುತ್ತಾರೆ, ಆ ಒಳ್ಳೆಯ ಕೆಲಸದಲ್ಲಿ ಅಪ್ಪು ಅವರು ಸದಾ ಉಸಿರಾಡುತ್ತಿರುತ್ತಾರೆ! 

‘ಸೂರ್ಯನೊಬ್ಬ ಚಂದ್ರನೊಬ್ಬ
ಈ ರಾಜನೂ ಇದ್ದ….’ 

‍ಲೇಖಕರು Admin

17 March, 2022

1 Comment

  1. T S SHRAVANA KUMARI

    ಮನೆಮನೆಯ ಹುಡುಗನಿವನು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading