ಪಿ.ಎಸ್. ಅಮರದೀಪ್
“ಅಪ್ಪಜೀ, ಇಡ್ಲಿ ಬೇಕು” ಅಂದ ಅಭಿ. ಸಮಯ ನೋಡುತ್ತೇನೆ. ರಾತ್ರಿ ಹತ್ತು ಗಂಟೆಯಾಗಿದೆ. ಈಗ್ಯಾವ ಹೋಟಲ್ಲು, ತಳ್ಳುಗಾಡಿ ಅಂಗಡಿ ನೋಡಿ, ಹುಡುಕಿ ಇಡ್ಲಿ ತರಲಿ? ಸುಮ್ಮನೇ ಮಗನನ್ನು ನೋಡಿದೆ.
ಹತ್ತು ಸೆಕೆಂಡ್ ಸೀರಿಯಸ್ಸಾಗಿದ್ದವನಂತೆ ಗುಮ್ಮನಿದ್ದಂತೆ ನೋಡಿದೆ, ಖಿಲ್ಲನೆ ನಕ್ಕ. ನಿರಾಳವಾಗಿ ನಾನೂ “ ಲೇ ಮಗನೇ” ಎಂದಷ್ಟೇ ಗದರಿದೆ. ಆದರೆ, ಗದರಿದ ಮರುಕ್ಷಣದಿಂದ ಸುಮಾರು ಒಂದು ತಾಸು ಈ ದಿನದಲ್ಲಿ ನಾನಿದ್ದಿಲ್ಲ. ಸುಮಾರು ಹತ್ತು ವರ್ಷ ಹಾಗೆ ರಿವೈಂಡ್ ಮಾಡಿದ ಜಾಗಕ್ಕೆ, ಸಮಯಕ್ಕೆ, ಬಾಡಿಗೆ ಮನೆಯ ಪಡಸಾಲೆಗೆ, ಹೊತ್ತಲ್ಲದ ಹೊತ್ತಲ್ಲಿ ಕಿಕ್ ಹೊಡೆದು ತಳ್ಳುತ್ತಾ ಸಾಗುತ್ತಿದ್ದ ಬಜಾಜ್ ಸ್ಕೂಟರ್ ಸೌಂಡ್ ಎಲ್ಲವೂ ಆಗಿ ಹೋದೆ.
ನಾಲ್ಕು ತಿಂಗಳ ಮಗುವಾಗಿದ್ದ ಅಭಿ ಅಲ್ಲಿಯವರೆಗೆ ಎರಡೂ ಗುಳಿಬೀಳುವ ಕೆನ್ನೆ, ಕೊಕ್ಕರಿಸಿ ನಗಲು ಶುರು ಮಾಡಿದರೆ ನಾವು ಮುಖ ತಿರುಗಿಸುವವರೆಗೂ ಮುಖ ನೋಡುತ್ತಲೇ ನಗುತ್ತಿದ್ದ. ನುಣುಪು ಕುತ್ತಿಗೆಗೊಮ್ಮೆ ಮುತ್ತಿಟ್ಟರೆ ಸಾಕು ಕೇಕೆ ಹಾಕುತ್ತಿದ್ದ.
ಅದೊಮ್ಮೆ ಶುರುವಾದ epilepsy ಕಾರಣ ಅವನ ಇಡೀ ಒಂಭತ್ತು ವರ್ಷಗಳ ಆಡಾಟಗಳನ್ನು ನಿಯಂತ್ರಿಸಿಬಿಟ್ಟಿತು. ಆರು ವರ್ಷಗಳವರೆಗೆ ಮಾತು ಕಸಿಯಿತು. ನಮ್ಮದಂತೂ ಫಜೀತಿ ಇದ್ದೇ ಇತ್ತು. ವೈದ್ಯರು ಎಪಿಲೆಪ್ಸಿಗೆ ಮಾತ್ರೆ ಕೊಟ್ಟರು. ಅವನು ಮೆದುಳು ಬೆಳವಣಿಗೆಗೆ ಮಂಪರು ಹಿಡಿಯಿತು. ನಂತರ ತಜ್ಞ ವೈದ್ಯರ ಸಲಹೆ ಸಿಗದೇ ಹೋಗಿದ್ದರೆ ನಮಗದು ಆಟಿಸಂ ಅನ್ನುವುದೇ ತಿಳಿಯುತ್ತಿರಲಿಲ್ಲ. ಮನೆಯಾಧರಿತ ಚಟುವಟಿಕೆಯಿಂದಲೇ ದಿನದಿನಕ್ಕೆ ಬೆಳೆಯುತ್ತಾ ಎಪಿಲೆಪ್ಸಿಯೇನೋ ನಿಂತಿತು. ಆದರೆ, ಮಾತು? ಊಹೂಂ. ಆಟಿಸಂ ಲಕ್ಷಣಗಳನ್ನು ಒಮ್ಮೆ ಗೂಗಲ್ ನಲ್ಲಿ ಹುಡುಕಿ ನೋಡಿದರೆ ಬಹುಶ: ನಿಮಗದು ಅಂದಾಜು ಸಿಗಬಹುದು.
ಅಂಥಹುದೇ ದಿನಗಳಲ್ಲಿ ಅವನು ಒಂದು ಆಟಿಕೆಗೆ, ಡ್ರೆಸ್ ಗೆ, ಊಟಕ್ಕೆ, ತಿಂಡಿಗೆ ಗಂಟು ಬಿದ್ದನೆಂದರೆ, ಅದು ಬೇಕು. ಮತ್ತದು ಆಗಿಂದಾಗ್ಗೆ. ಒಂದು ಡ್ರೆಸ್ಸನ್ನು ಹಾಕಿದರೆ, ದಿನವಿಡೀ ಮತ್ತು ಮರುದಿನವೂ ಅದೇ ಬೇಕು. ಆಡುತ್ತಾ ಕುಳಿತರೆ ಗಿರಗಿರ ತಿರುಗುವ ಯಾವುದೇ ವಸ್ತು, ಫ್ಯಾನು, ಮಿಕ್ಸಿ, ಗ್ರೈಂಡರ್, ಗಾಲಿ ನೋಡುತ್ತಾ ಕೂಡುವುದು ಕೊನೆಗೆ ತಾನೂ ತಿರುಗುತ್ತಲೇ ಇರುವುದು, ಹೀಗೆ. ಆಗ ಅವನಿಗೆ ಮಾತು ಬರದ ದಿನಗಳವು. ನಾವಾಗೇ ಇದು ಬೇಕಾ? ಇದು ತಿಂತಿಯಾ? ಅಂದಾಗ ಗೋಣು ಅಲ್ಲಾಡಿಸುತ್ತಿದ್ದ. ಅದೊಮ್ಮೆ ಬೆಳ್ ಬೆಳಿಗ್ಗೆ ಆದ ಹೊಟ್ಟೆ ಹಸಿವಿಗೆ ಇಡ್ಲಿ ತಂದು ತಿನ್ನಿಸಿದೆ. ಆ ದಿನವೆಲ್ಲಾ ಇಡ್ಲಿ ಬೇಕು. ಮಾರನೇ ದಿನಕ್ಕೆ ಮನೆಯಲ್ಲೇ ಇಡ್ಲಿಗೆ ಉದ್ದು ನೆನೆ ಹಾಕಿದರೆ ಮನೆಯಲ್ಲೇ ಇಡ್ಲಿ. ಅದು ಮುಗೀತಾ? ಮತ್ತೆ ಇಡ್ಲಿ.. ಅಮೆರಿಕಾದಲ್ಲಿದ್ದಾಗಿನ ದಿನಗಳನ್ನು ನೆನೆದು ಶಿಕ್ಷಣ ತಜ್ಞ ಎಚ್. ನರಸಿಂಹಯ್ಯನವರು ಬರೆದುಕೊಂಡಂತೆ ಮೂರು ಹೊತ್ತು ಉಪ್ಪಿಟ್ಟು ಉಂಡಿದ್ದು ಓದಿದ ನೆನಪಾಯಿತು.

ನಂಬುತ್ತೀರೋ ಇಲ್ಲವೋ ಮೂರು ಹೊತ್ತು ಎಲ್ಲೆಲ್ಲಿ ಯಾವ ಹೋಟಲಲ್ಲಿ ಬಿಸಿ ಬಿಸಿ ಇಡ್ಲಿ ಸಿಗುತ್ತವೋ ಅಲ್ಲಿ ತಿರುಗಿ ತರುತ್ತಿದ್ದೆ. ಇಡ್ಲಿ ತರಲು ಹೊರಟೆನೆಂದರೆ ಸಾಕು, ಅವನು ಸ್ಕೂಟರ್ ಹತ್ತಿ ನಿಂತುಬಿಡುತ್ತಿದ್ದ. ಪ್ರತಿದಿನ ಕರೆದುಕೊಂಡು ಹೋಗುತ್ತಿದ್ದ ದಾರಿ, ಹೋಟಲ್ಲುಗಳು ಅಲ್ಲಿನ ಕೆಲಸಗಾರರು, ಮಾಲಿಕರು ಎಲ್ಲರೂ ಇವನನ್ನು ಮಾತನಾಡಿಸುವವರೆ… ಸ್ಕೂಟರ್ ನಿಲ್ಲಿಸುತ್ತಿದ್ದಂತೆಯೇ ಇಳಿದು ಸೀದಾ ಕಿಚನ್ ಸೆಕ್ಷನ್ ಗೆ ಹೋಗಿ ಅಲ್ಲಿ ತಿರುಗುವ ದೊಡ್ಡ ದೊಡ್ಡ ಗ್ರೈಂಡರ್ ಗಳನ್ನು ಮೇಲೆ ಕೆಳಗೆ ಸುತ್ತಲೂ ನೋಡುತ್ತಾ ಕುಳಿತುಬಿಡುತ್ತಿದ್ದ. ಅವರಿಗೋ ಎಲ್ಲಿ ಇವನು ಬೀಳುತ್ತಾನೋ, ಕೈ ಇಡುತ್ತಾನೆನ್ನುವ ಭಯ. ಹಾಗೇನು ಇಲ್ಲ ಬಿಡಿ ಎಂದು ನಾನೇ ಹೇಳುತ್ತಿದ್ದೆ. ಅದೂ ಬಿಡಿ, ಚಿಕ್ಕವನಿದ್ದಾಗ, ಟೇಬಲ್ ಫ್ಯಾನ್ ನೆಲದ ಮೇಲಿಟ್ಟು ಆನ್ ಮಾಡಿ ಮಲಗಿಸಿದರೆ, ಎದ್ದವನೇ ಫ್ಯಾನಿನ ತಂತಿಯ ಹತ್ತಿರ ಮುಖವಿಟ್ಟು ಕಣ್ಣರಳಿಸಿ ಕುಳಿತುಬಿಡುತ್ತಿದ್ದ. ಈಗಿನಂತೆ ಸ್ಮಾರ್ಟ್ ಫೋನು, ಕ್ಯಾಮೆರಾ ಏನಾದರೂ ಇದ್ದಿದ್ದರೆ ಸಣ್ಣ ಸಣ್ಣ ವೀಡಿಯೋ ಮಾಡಿಡಬಹುದಿತ್ತು…
ನಿದ್ರೆಯದಂತೂ ದೂರದ ಮಾತು. ಒಂದು ತಾಸು ಅವನನ್ನು ಮಲಗಿಸಲು ಒಂದೂವರೆ ತಾಸು ತೊಟ್ಟಿಲು ತೂಗಬೇಕಿತ್ತು. ಇಡೀ ಮೂರ್ನಾಲ್ಕು ವರ್ಷ ನಮ್ಮದಂತೂ ಎಣಸಿ ದಿನಕ್ಕೆ ಮೂರು ತಾಸಿನ ನಿದ್ದೆಯಷ್ಟೇ. ವರ್ಷ ಕಳೆದವು, ದೇವರು ದಿಂಡರು, ಶಾಸ್ತ್ರ ಪೂಜೆಗಳನ್ನಂತೂ ಜೀವಮಾನಕ್ಕಾಗುವಷ್ಟು ಮಾಡಿದ್ದಾಯಿತು. ವರ್ಷಗಳು ಕಳೆದ ನಂತರ ಮಾತಾಡಿದ. ಇಂಥವನನ್ನು ಸೇರಿಸಬೇಕೆಂದರೆ, ಯಾವ ಶಾಲೆಗೆ ಸೇರಿಸಿಕೊಂಡಾರು? ಕೆಲವು ಶಾಲೆಗಳಂತೂ ವಿಶೇಷ ಶಾಲೆಗೆ ಸೇರಿಸುವುದೇ ಸರಿ, ನಮ್ಮಲ್ಲಿ ಬೇಡವೆಂದೇ ಹೇಳಿದರು. ಒಬ್ಬ ಶಿಕ್ಷಕ ಮಾತ್ರ “ ಸರ್, ಅಭಿಯನ್ನು ನನ್ನ ಜವಾಬ್ದಾರಿಗೆ ಬಿಡಿ” ಎಂದರು. ಅವರ ಹೆಸರು ಸುರೇಶ್ ಕುಂಬಾರ್, ಕೊಪ್ಫಳದ ನಂದೀಶ್ವರ ಶಾಲೆ ಮುಖ್ಯೋಪಾಧ್ಯಾಯ. ಅಂದಷ್ಟು ಸುಲಭವಿದ್ದಿಲ್ಲ ಮೇಷ್ಟ್ರಿಗೆ. ಒಂದು ಕಡೆ ಕೂಡದ, ಮಾತು ಕೇಳದ, ಹೈಪರ್ ಆ್ಯಕ್ಟೀವ್ ಇರುವ ಮಗುವನ್ನು ಒಂದು ಕಡೆ ಕೂಡಿಸುವುದೇ ದೊಡ್ಡ ಕೆಲಸ. ಅಲ್ಲಿಂದ ಶುರು ಮಾಡಿ ಸಹಜವಾಗಿ ಮಾತಾಡುವ, ಬರೆಯುವ, ಓದುವ ಮಟ್ಟಿಗೆ ನಾಲ್ಕು ವರ್ಷ ಶಾಲೆಯಲ್ಲಿ ಸುರೇಶ್ ಕುಂಬಾರ್ ನೋಡಿಕೊಂಡಿದ್ದೇ ಅಭಿಯ ಬದಲಾವಣೆಯ ಹಂತ.

ಇಂಥಹ ಮಕ್ಕಳಿರುವ ಯಾವುದೇ ಪೋಷಕರನ್ನು ಗಮನಿಸಿ, ಒಂದೋ ಮಕ್ಕಳನ್ನು ಅತ್ಯಂತ ಕಾಳಜಿ ಮಾಡುತ್ತಲೇ ತಮ್ಮ ತಾಳ್ಮೆಯಿಂದ ಜೀವನ ಕ್ರಮ ಬದಲಾಯಿಸಿಕೊಂಡಿರುತ್ತಾರೆ. ಇಲ್ಲವೇ ತಾವೇ ಬೇಸತ್ತವರಂತೆ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಿರುತ್ತಾರೆ. ಎರಡೂ ಥರದವರನ್ನು ನಾನು ನೋಡಿದ್ದೇನೆ. ಕಲಿತದ್ದು ಮಾತ್ರ ಸಕಾರಾತ್ಮಕವಾಗಿ ಜೀವನ ರೂಢಿಸಿಕೊಂಡ ಇಂಥ ಮಕ್ಕಳನ್ನು ಪ್ರೀತಿಸುವ ಪೋಷಕರನ್ನು ನೋಡಿಯೇ. ಇತ್ತೀಚೆಗೆ ಅಭಿ ಮಾತುಗಳನ್ನು ಕೇಳುತ್ತಿದ್ದರೆ, ಇವನಾ ಬಾಯಿಬರದೇ “ ಮೂಕಣ್ಣ “ ಎಂದು ತಮಾಷೆ ಮಾಡಿದ್ದ ಅಭಿ? ಅನ್ನಿಸುತ್ತದೆ. ನಮ್ಮನ್ನೇ ಸುಮ್ಮನಿರಿಸುವಷ್ಟು ಮಾತು, ಕೇರಂ.. ಚೆಸ್ ಚೌಕಾಬಾರ ಆಡುತ್ತಾ, ಸೋಲಿಸುತ್ತಾ, ಗೇಲಿ ಮಾಡುತ್ತಾ ಕಾಡುವ ಇವನೇ ಮೊನ್ನೆ ರಾತ್ರಿ ಹತ್ತು ಗಂಟೆಗೆ ಇಡ್ಲಿ ಬೇಕು ಅಂದದ್ದು… ಗದರಿದ ಮರುಕ್ಷಣವೇ “ ಹಂಗಾ ಸುಮ್ನಾ, ಕೇಳಿದ್ರ ನೀನ್ ಹೆಂಗ್ ರಿಯಾಕ್ಟ್ ಮಾಡ್ತಿಯಂತ ನೋಡ್ದೆ” ಅನ್ನಬೇಕೇ? ಆಗಲೇ ಹಳೇ “ಮೂಕಣ್ಣ” ಬಜಾಜ್ ಸ್ಕೂಟರ್, ಇಡ್ಲಿ ತರುತ್ತಿದ್ದ ಹೋಟಲ್ಲುಗಳು, ನಿದ್ರೆಯಿರದ ದಿನಗಳು ನೆನಪಾಗಿದ್ದು……..
ಅದಾಗಿ ಮಾರನೇ ಸಂಜೆ ಆಫೀಸಿಂದ ಮನೆಗೆ ಹೋಗಿ ಗಾಡಿ ನಿಲ್ಲಿಸುತ್ತಿದ್ದಂತೆ ತುಂಬಾ ಸೀರಿಯಸ್ಸಾಗಿ ಹೊರಗೆ ಬಂದು “ಅಪ್ಜೀ….ಇವತ್ತು ಎಲ್ಡ್ರಾಗೊಂದು ಡಿಸೈಡಾಗ್ಬೇಕ್…. ಅಣ್ಣ ನನ್ನ ಭಾಳ ಕಾಡುಸ್ತಾನ, ಒಂದೋ ಅಣ್ಣ ಮನ್ಯಾಗಿರಬೇಕ್, ಇಲ್ಲಾ ನಾನಿರಬೇಕ್” ಅಂದುಬಿಟ್ಟ. ಅಂಥವೇ ಟೈಮಿನಲ್ಲಿ ಮಕ್ಕಳು ನಮ್ಮನ್ನು “ಯಾರ ಕಡೆ ಎಷ್ಟು ಒಲವಿದೆ” ಎನ್ನುವುದನ್ನು ಗಮನಿಸುತ್ತಿರುತ್ತಾರೆ. “ ಲೇ ಗುಂಡಾ, ಅಣ್ಣ ಈ ವರ್ಸ ಎಸೆಲ್ಸಿ, ಇನ್ನೊಂದಾರು ತಿಂಗ್ಳು ಸುಮ್ಕಿರು, ಮುಂದ್ಲು ವರ್ಸಕ್ಕ ಅವ್ನನ್ನ ಹಾಸ್ಟಲ್ ಗೆ ಹಾಕ್ತೀನಿ, ಆಯ್ತಾ” ಅಂದೆ. ಅವನ ಅಣ್ಣನ ಮುಖ ನೋಡಿ, “ಮುಂದೈತಿ ನಿನಗ ಮಾರಿಹಬ್ಬ” ಅನ್ನುವಂತೆ ಕಿಸಕ್ಕೆಂದು ನಕ್ಕ. ಇರೋದೊಂದು ಸ್ವಂತ ಮನೆ, ಇನ್ನೊಂದು ಸೈಟ್ ಮಾಡಿ ಇಡಬೇಕು ಇಲ್ಲದಿದ್ದರೆ ಇಬ್ಬರನ್ನು ಹೊರಹಾಕಿ ಮುಪ್ಪಿನಲ್ಲಿ ನಾವಿಬ್ಬರೇ ಗಂಡ ಹೆಂಡತಿ ಇರಬೇಕಾ? ವಿಚಾರ ಮಾಡಬೇಕು…






ಲವ್ಲಿ ಬರಹ
ವಾಹ್,
ಅಮರ್ ದೀಪ್ ಸರ್,
ತುಂಬಾ ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು.
ಧನ್ಯವಾದಗಳು ‘ಅವಧಿ’.
ತುಂಬ ಸೊಗಸಾದ. ಬರವಣಿಗೆ ಅಮರ್.
ಆರೋಗ್ಯವಂತ ಮಕ್ಕಳೇ ಪಾಲಕರನ್ನು ಪರೀಕ್ಷಿಸುತ್ತಾ, ವಾದ ಮಾಡುತ್ತಾ ಬೆಳೆದು, ನಮ್ಮನ್ನೂ ಬೆಳೆಸುವ ಕಾಲ ಇದು. ಮಕ್ಕಳೊಂದಿಗೆ ಇದೆಲ್ಲಾ ಅನುಬವಿಸುವುದೂ ಒಂದು ಸಂಭ್ರಮ ಅಲ್ವೇ..?
Very sensible write up.
ಧನ್ಯವಾದಗಳು…..