ಅನ್ನ-ಅಭಿಮಾನದ ನಡುವೆ ಸೊರಗಿದ ಕನ್ನಡ

ಗೊರೂರು ಶಿವೇಶ್

ಸುಪ್ರೀಂ ಕೋಟ್ರ್ ನ ತೀರ್ಪು ಹೊರಬಿದ್ದಿದೆ. ಪೋಷಕರ ಆಯ್ಕೆಯ ಮಾಧ್ಯಮದ ಕಲಿಕೆಗೆ ಅವಕಾಶ ನೀಡಿದೆ. ಈ ಕುರಿತು ಎಲ್ಲೆಡೆ ಪರ-ವಿರೋಧ ಚರ್ಚೆ ಪ್ರಾರಂಭವಾಗಿದೆ. ತೀರ್ಪಿನ ಮರುಪರಿಶೀಲನೆಗಾಗಿ ಮನವಿ ಸಲ್ಲಿಸುವಂತೆ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಸೇರಿಸಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣ ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ, ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕನ್ನಡ ಆ ಮೂಲಕ ಮಾತೃಭಾಷ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಉಳಿಸಿಕೊಳ್ಳಲು ಅನೇಕ ಕನ್ನಡಪರ ಮನಸ್ಸುಗಳು ಸಲಹೆ ನೀಡಿವೆ.
ಇನ್ನೂ ಕೆಲವರು ಇದು ಖಾಸಗಿ, ಅನುದಾನರಹಿತ ಶಾಲೆಗೆ ಮಾತ್ರ ಅನ್ವಯಿಸಲಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಶೇ. 84ರಷ್ಟಿದ್ದು ಖಾಸಗಿ ಶಾಲೆಗಳು ಶೇ. 16ರಷ್ಟಿರುವುದರಿಂದ ಅರವತ್ತುಸಾವಿರ ದಷ್ಟು ಇರುವ ಸರ್ಕಾರಿ ಶಾಲೆಗಳಲ್ಲಿ ಎಪ್ಪತ್ಮೂರುಲಕ್ಷ ಹಾಗು ಸುಮಾರು ಹದಿನೇಳು ಸಾವಿರದಷ್ಟು ಇರುವ ಖಾಸಗಿ ಶಾಲೆಗಳಲ್ಲಿ ಮೂವತ್ಮೂರು ಲಕ್ಷ ವಿದ್ಯಾರ್ಥಿಗಳಿದ್ದು ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದು ಮಾತೃಭಾಷಾ ಶಿಕ್ಷಣಕ್ಕೆ ತೊಂದರೆಯಿಲ್ಲ ಎಂಬುದು ಇನ್ನೊಂದು ವಾದ. ಆದರೆ ಇಂದು ಒಂದು ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇಪ್ಪತ್ತರಿಂದ ಇಪ್ಪತ್ತೈದು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮನಾಗಿರುವುದು ಅವರ ಗಮನಕ್ಕೆ ಬಾರದಿರುವುದು ವಿಷಾದನೀಯ. ಶಿಕ್ಷಣಹಕ್ಕು ಮಸೂದೆ (ಆರ್.ಟಿ.ಇ.) ಯಿಂದಾಗಿ ಶೇ.25ರಷ್ಟು ಮಕ್ಕಳನ್ನು ಕಳೆದುಕೊಂಡಿರುವ ಸರ್ಕಾರಿ ಶಾಲೆಗಳು ಇನ್ನೂ ಎಲ್ಲೆಡೆ ಯಾವುದೇ ತಡೆಯಿಲ್ಲದೆ ಪ್ರಾರಂಭವಾಗುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಬಿಟ್ಟುಕೊಡಲು ತಯಾರಾಗಬೇಕಿದೆ.
ಭಾಷಾಮಾಧ್ಯಮವನ್ನು ಉಳಿಸಿಕೊಳ್ಳುವ ಮೂಲಕ ಮಾತೃಭಾಷೆಯನ್ನು ಉಳಿಸಿಕೊಳ್ಳುವ ವಿವಿಧ ರೀತಿಯ ಹೋರಾಟದಲ್ಲಿ ನಿರತವಾಗಿರುವ ಸಂಘ ಸಂಸ್ಥೆಗಳ ಕುರಿತು ಜನಜಾಗೃತಿಗೊಳಿಸುವಲ್ಲಿ ವಿಫಲರಾದದ್ದು ವಿಪರ್ಯಾಸವೇ ಸರಿ. ಇಂದು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಕೈತುಂಬಾ ಸಂಬಳ ತರುವ ಉದ್ಯೋಗ ಹಿಡಿಯುವ ಕನಸನ್ನು ಹೊತ್ತು ಶಾಲೆಗೆ ಸೇರಿಸುವ ಪರಿಪಾಠವಿದೆ. ತಮ್ಮ ಸಂಬಂಧಿಕರ ಮಕ್ಕಳು ವಿದೇಶದಲ್ಲಿ ಉದ್ಯೋಗ ಹಿಡಿದಿರುವುದನ್ನು ಕಂಡ ಅವರಿಗೆ ಸಹಜವಾಗಿ ಮೊದಲು ಕಾಣುವುದು ಇಂಗ್ಲಿಷ್ ಮಾರ್ಗ. ಇನ್ನೂ ಬಹುತೇಕ ಐ.ಟಿ.-ಬಿ.ಟಿ. ಕಂಪನಿಗಳು ಸ್ಥಾಪಿತವಾಗಿರುವುದು ಬೆಂಗಳೂರು ಬಿಟ್ಟರೆ ಹೈದ್ರಾಬಾದ್, ಚೆನ್ನೈ, ಕೊಚ್ಚಿನ್, ಕೊಲ್ಕತ್ತಾಗಳಲ್ಲಿ. ಅಲ್ಲಿ ಸಿಗಬಹುದಾದ ಅವಕಾಶಗಳಿಗಾಗಿ ಮುಂದಾಲೋಚನೆ ಮಾಡಿ ಇಂಗ್ಲಿಷ್ ಮಾಧ್ಯಮ ಮತ್ತು ಹಿಂದಿ ಭಾಷೆಯನ್ನು ಕಲಿಸಲು ಉತ್ಸುಕರಾಗಿದ್ದಾರೆ. ಇದರಿಂದಾಗಿ ಕನ್ನಡವನ್ನು ಮಾಧ್ಯಮವಾಗಿರಲಿ, ಭಾಷೆಯನ್ನಾಗಿಯೂ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಇಂಗ್ಲಿಷ್, ಸಂಸ್ಕೃತ ಮತ್ತು ಹಿಂದಿ ಅವರ ಮೂರು ಭಾಷಾ ಆಯ್ಕೆಗಳಾಗುತ್ತಿವೆ.
ಈ ರೀತಿ ಅನ್ನದ ಭಾಷೆಯನ್ನು ಆದರಿಸುವ ಮನೋಭಾವ ಕೇವಲ ನಮಗೆ ಮಾತ್ರ ಸೀಮಿತವಾದದ್ದಲ್ಲ. ಸ್ವತಃ ಇಂದು ನಮ್ಮ ಮೇಲೆ ಹೇರಲ್ಪಟ್ಟಿರುವ ಇಂಗ್ಲಿಷ್ನ ಸರ್ವಶ್ರೇಷ್ಠ ಬರಹಗಾರರ ಷೇಕ್ಸ್ಪಿಯರ್ ಅಭ್ಯಾಸ ಮಾಡಿದ್ದು ಲ್ಯಾಟಿನ್ ಭಾಷೆಯಲ್ಲಿ. ಆತ ತನ್ನ ಮಾತೃಭಾಷೆಯನ್ನು ಶಾಲೆಗಿಂತ ಹೆಚ್ಚಾಗಿ ವೈಯಕ್ತಿಕವಾಗಿಯೆ ಕಲಿತದ್ದು ಹೆಚ್ಚು. ಅದು ಅವನ ಕಾಲದ ಒತ್ತಡ. ಇಂದು ಇಂಗ್ಲೆಂಡ್, ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ಇಂಗ್ಲಿಷ್ ಭಾಷಿಕ ರಾಷ್ಟ್ರಗಳಲ್ಲಿ ಹೆಚ್ಚಿರುವ ಉದ್ಯೋಗಾವಕಾಶಗಳಿಂದಾಗಿ ಇಂಗ್ಲಿಷ್ ಮಾಧ್ಯಮಕ್ಕೆ ಮುಗಿಬಿದ್ದಿರುವ ಮಂದಿ ಮುಂದೆ ಆ ಸ್ಥಾನವನ್ನು ಚೀನಾ, ಜಪಾನ್ ಆಕ್ರಮಿಸಿಕೊಂಡರೆ ಮುಂದೆ ಆ ಭಾಷೆಯನ್ನು ಇಲ್ಲವೆ ಮಾಧ್ಯಮವನ್ನು ಕಲಿಯುವುದಕ್ಕೆ ಮುಂದಾಗುವುದರಲ್ಲಿ ಸಂದೇಹವಿಲ್ಲ.
ಇದರಿಂದಾಗಿ ಭಾಷಾ ಮಾಧ್ಯಮಕ್ಕಿಂತ ಹೆಚ್ಚಾಗಿ ಶಾಲೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ, ಇಲ್ಲವೆ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸುವ ಯೋಜನೆಗೆ ಸರ್ಕಾರ ಮುಂದಾಗಬೇಕಿದೆ. ವಿಪರ್ಯಾಸವೆಂದರೆ ಇಂದು ಬಹುತೇಕ ಖಾಸಗಿ ಶಾಲೆಗಳಲ್ಲಿ ಕನ್ನಡದಲ್ಲಿ ಮಾತಾಡುವುದು ಅಪರಾಧವಾಗಿ ಮಾರ್ಪಾಡಾಗುವ ವ್ಯವಸ್ಥೆ ಏರ್ಪಟ್ಟಿದೆ. ಇಂಗ್ಲಿಷ್ನಲ್ಲಿ ಮಾತಾಡದೆ ಕನ್ನಡದಲ್ಲಿ ಮಾತಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಶಾಲೆಗಳಿವೆ. ಇನ್ನೂ ಕೆಲವು ಶಾಲೆಗಳಲ್ಲಿ ತರಗತಿಗಳಲ್ಲಿರಲಿ, ಶೌಚಾಲಯಗಳಲ್ಲಿ, ತನ್ನ ಮನೆಗೆ ತೆರಳುವಾಗ, ಶಾಲಾ ವಾಹನಗಳಲ್ಲಿ ಕನ್ನಡ ಮಾತಾಡುವವರನ್ನು ಪತ್ತೆ ಹಚ್ಚಲು ಮಕ್ಕಳಲ್ಲಿಯೇ ಗುಪ್ತಚಾರರನ್ನು ನೇಮಿಸಿ, ಕನ್ನಡ ಮಾತಾಡುವ ಮಕ್ಕಳನ್ನು ಗುರುತಿಸಿ, ಅವರಿಗೆ ವಿವಿಧ ರೂಪದ ಶಿಕ್ಷೆಗಳು ಎಂದರೆ, ಇಂಗ್ಲಿಷ್ ಕಾಪಿ ಬರೆಯುವ, ಹಾಡು ಹಾಡುವ, ಮುಂತಾಗಿ ಅನೇಕ ಮೃದು ಹಾಗೂ ತರಗತಿಯಿಂದ ಹೊರನಿಲ್ಲಿಸುವ, ಇಲ್ಲವೆ ಛಡಿಯೇಟು ನೀಡುವ ಕಠಿಣ ಶಿಕ್ಷೆಗಳನ್ನು ಜಾರಿಗೊಳಿಸುವುದರ ಮೂಲಕ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳಿಂದ ದೂರವಾಗಿಸುವ ಕ್ರಿಯೆಗಳು ಸಾಗಿದೆ.

ತ್ರಿಭಾಷಾ ಸೂತ್ರದಡಿ ಕನ್ನಡ, ಇಂಗ್ಲಿಷ್, ಹಿಂದಿಯನ್ನು ಕಲಿಯುತ್ತಿರುವವರಿಗೆ ಉಳಿದೆರಡು ಭಾಷೆಗಳಿಗಿಂತ ಕನ್ನಡವೇ ಹೆಚ್ಚು ಕಠಿಣವಾಗುತ್ತಿದೆ. ಒತ್ತಕ್ಷರಗಳ ಒದ್ದಾಟ, ಇಳಿ, ದೀರ್ಘಗಳ ಬಳಕೆಯನ್ನು ಪ್ರಾರಂಭದಿಂದಲೂ ಸರಳ ಹಾಗೂ ಸುಲಭವಾಗಿ ಕಲಿಸುವ ವಿಧಾನ ಬಹುತೇಕ ಶಿಕ್ಷಕರಲ್ಲಿ ಇಲ್ಲದೆ ಇರುವ ಕಾರಣ ಇಂದು ಕನ್ನಡ ಕಲಿಕೆ ಕಠಿಣವಾಗುತ್ತಿದೆ. ಪೋಷಕರ ಸಭೆಗಳಲ್ಲಿ ತಮ್ಮ ಮಗು ಇಂಗ್ಲಿಷ್ನ್ನು ಸರಿಯಾಗಿ ಮಾತಾಡದೆ ಇರುವ ಬಗ್ಗೆ ಶಿಕ್ಷಕರನ್ನು ದೂರುವ ಪೋಷಕರು, ಕನ್ನಡದಲ್ಲಿ ಸರಿಯಾಗಿ ಓದು ಬರೆಯದೆ ಇರುವ ಬಗ್ಗೆ ಹೊರಗಡೆ ಸ್ನೇಹಿತರಲ್ಲಿ ಸಹೋದ್ಯೋಗಿಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಗಮನಿಸಿದ್ದೇನೆ. ಇನ್ನೂ ಪ್ರೌಢಶಾಲೆಯ ಮಟ್ಟದವರೆಗೆ ಹೃಸ್ವ, ದೀರ್ಘ, ಸಂಧಿ, ಸಮಾಸ, ಛಂದಸ್ಸು ಮುಂತಾಗಿ ಚಿಟ್ಟಿಡಿಸುವ ಕನ್ನಡವು ಪಿ.ಯು.ಸಿ. ಹಂತಕ್ಕೆ ಬಂದರೆ ಪ್ರಾಥಮಿಕ ಹಂತದ ಕನ್ನಡಭಾಷಾ ಸಾಮಥ್ರ್ಯ ಮಟ್ಟಕ್ಕೆ ಸೀಮಿತವಾಗಿದೆ. ಇದರಿಂದಾಗಿ ಪರೀಕ್ಷೆಯ ಹಿಂದಿನ ಒಂದು ದಿನದಲ್ಲಿ ಇಡೀ ವಿಷಯ ಓದಿ ತೇರ್ಗಡೆ ಹೊಂದುವ ಮಟ್ಟಕ್ಕೆ ವಿದ್ಯಾರ್ಥಿಗಳು ಬಂದು ತಲುಪಿದ್ದಾರೆ. ಅಷ್ಟೇ ಏಕೆ? ಬಹಳಷ್ಟು ಮಕ್ಕಳು ಭಾಷೆಯಲ್ಲಿ ಕನಿಷ್ಠ ಅಂಕಗಳನ್ನು ಪಡೆದು ರ್ಯಾಂಕನ್ನು ಕಳೆದುಕೊಂಡಿರುವುದು ಇದೆ. ಆದರೂ ಈ ಬಾರಿ ಪಿಯೂಸಿ ಪರೀಕ್ಷೆಯಲ್ಲಿ ಇಂಗ್ಲೀಷಿಗಿಂತ ಹೆಚ್ಚಾಗಿ ಕನ್ನಡದಲ್ಲೇ ಅನುತ್ತೀರ್ಣರಾದವರ ಸಂಖ್ಯೆ ಹೆಚ್ಚು.
ಇಂದು ಕನ್ನಡಭಾಷಾ ಶಿಕ್ಷಕರ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಿದೆ. ಅಕರ್ಷಕವಾಗಿ, ಕುತೂಹಲ ಮೂಡುವಂತೆ, ಕನ್ನಡ ಭಾಷೆಯ ಬೋಧನೆ ಇಂದಿನ ಅವಶ್ಯಕತೆಯಾಗಿದೆ. ಕನ್ನಡ ಭಾಷೆಯ ಸೊಗಡನ್ನು, ಉಳಿದೆಲ್ಲಾ ಭಾಷೆಗಳಿಗಿಂತ ಭಿನ್ನವಾಗಿ, ಅನನ್ಯವಾಗಿರುವ ಕನ್ನಡ ಭಾಷಾ ಹಿರಿಮೆಯನ್ನು ಮಕ್ಕಳಲ್ಲಿ ಪಡಿಮೂಡಿಸಲು ಹಳಗನ್ನಡ, ನಡುಗನ್ನಡ, ಹೊಸಗನ್ನಡದ ಶ್ರೇಷ್ಠ ಸಾಹಿತಿಗಳನ್ನು ಅಭ್ಯಾಸ ಮಾಡಿ ಮಕ್ಕಳಲ್ಲಿ ಪ್ರಚುರಪಡಿಸುವುದರಿಂದ ಮಕ್ಕಳಲ್ಲಿ ಭಾಷಾಭಿಮಾನ ಸಹಜವಾಗಿ ಒಡಮೂಡುತ್ತದೆ. ಮಕ್ಕಳನ್ನು ಕನ್ನಡ ಕವಿಗಳ ಪುಸ್ತಕಗಳೆಡೆಗೆ ಸೆಳೆದರೆ ಅವರ ಅರ್ಧ ಜವಾಬ್ದಾರಿ ಮುಗಿದಂತೆ.
ಡಬ್ಬಿಂಗ್ ಕುರಿತಂತೆ ದೊಡ್ಡಮಟ್ಟದ ಹೋರಾಟ ನಡೆಸುವ ಕುರಿತಂತೆ ಮಾತಾಡಿದ ಕಲಾವಿದರು, ಭಾಷಾ ಹೋರಾಟಕ್ಕೆ ಸಂಬಂಧಿಸಿದಂತೆ ಚಕಾರವೆತ್ತುತ್ತಿಲ್ಲ. ಇಂದು ಪ್ರೌಢಶಾಲಾ ಹಂತದವರೆಗೆ ಕನ್ನಡ ಸಿನಿಮಾ ನಟರ ಬಗ್ಗೆ ಅಭಿಮಾನ ಹೊಂದುವ ಯುವ ಸಮೂಹ ಕಾಲೇಜು ಹಂತಕ್ಕೆ ತಲುಪಿದೊಡನೆ ತೆಲುಗು, ಹಿಂದಿ, ತಮಿಳಿನ ಕಡೆಗೆ ವಾಲುತ್ತಿರುವುದು ನಮ್ಮ ಸಿನಿಮಾಗಳಲ್ಲಿ ಸೊರಗುತ್ತಿರುವ ಸೃಜನಶೀಲತೆಯಿಂದಾಗಿ. ಅವರು ಪರಭಾಷಾ ಸಿನಿಮಾಗಳ ಹಕ್ಕುಗಳನ್ನು ತಂದು ಅದಕ್ಕೆ ಕನ್ನಡದ ಒಗ್ಗರಣೆ ಹಾಕಿದ ಮಾತ್ರಕ್ಕೆ ರುಚಿಸುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಇಂದು ಪರಭಾಷಾ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಿರುವ ವೀಕ್ಷಕರಲ್ಲಿ ಆಯಾಭಾಷಾ ವೀಕ್ಷಕರಿಗಿಂತ ಕನ್ನಡಿಗರ ಸಂಖ್ಯೆಯೂ ಹೆಚ್ಚಿರುವುದು, ತನ್ಮೂಲಕ ಆ ಪರಭಾಷಾ ಚಿತ್ರಗಳೆಡೆಗೆ ಆಕರ್ಷಿತರಾಗುವುದರಲ್ಲಿ ನಟ, ನಿರ್ದೇಶಕರ ಸೃಜನಶೀಲತೆಯ ಕೊರತೆಯ ಕೊಡುಗೆಯೇ ಹೆಚ್ಚು.
ಹಾಗಾದರೆ ಇವುಗಳಿಗೆ ಪರಿಹಾರ ಇಲ್ಲವೆ? ಇದೆ. ಮೊದಲಿಗೆ ಕನ್ನಡವೂ ಅನ್ನದ ಭಾಷೆಯಾಗುವ ಅಗತ್ಯವಿದೆ. ಕನರ್ಾಟದಲ್ಲಿ ಎಲ್ಲಾ ವ್ಯವಹಾರಗಳೂ ಕನ್ನಡದಲ್ಲಿ ನಡೆಯಬೇಕೆಂಬುದನ್ನು ಖಾಸಗೀಕ್ಷೇತ್ರಕ್ಕೆ ವಿಸ್ತರಿಸಬಹುದಾಗಿದೆ ಎಂದರೆ ಆ ಸಂಸ್ಥೆಗಳು ಸರ್ಕಾರದ ವಿವಿಧ ಹಂತಗಳಲ್ಲಿ ವ್ಯವಹರಿಸುವಾಗ ಕನ್ನಡದ ಕಡ್ಡಾಯ ಬಳಕೆಯಾಗಬೇಕು. ಈಗ ಗ್ರಾಮಾಂತರ ವಿದ್ಯಾರ್ಥಿಗಳಿಗೆ ವಿಶೇಷ ಕೋಟಾ ನೀಡಿರುವ ರೀತಿ ಕನ್ನಡ ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಆಧ್ಯತೆಯ ಕೋಟಾ, ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್ಶಿಪ್ಗಳು, ಪ್ರತಿ ಜಿಲ್ಲೆಗೆ ಐದನೂರರಂತೆ ರಾಜ್ಯದಲ್ಲಿ ಕನಿಷ್ಠ ಹದಿನೈದು ಸಾವಿರ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಸೌಲಭ್ಯ. ಇನ್ನೂ ಪದವಿ ಹಂತದಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್, ಕೃಷಿ ಹೀಗೆ ತಾಂತ್ರಿಕ ವಿಷಯಗಳ ಅಭ್ಯಾಸದ ಸಂದರ್ಭದಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸುವುದು. ಹೀಗೆ ಅನಿವಾರ್ಯ ಮತ್ತು ಅಗತ್ಯವಾಗಿ ಕನ್ನಡ ಕಲಿಕೆಯನ್ನು ಕಡ್ಡಾಯ ಗೊಳಿಸುವುದರ ಜೊತೆಗೆ ಹೊರ ರಾಜ್ಯದಿಂದ ಇಲ್ಲಿಗೆ ಬಂದವರಿಗೂ ಕನಿಷ್ಠ ಪ್ರಾಥಮಿಕ ಹಂತದ ಕನ್ನಡವನ್ನಾದರೂ ಕಲಿಯುವುದನ್ನು ಕಡ್ಡಾಯಗೊಳಿಸುವುದರ ಮೂಲಕ, ಇಂದು ಹೊರರಾಜ್ಯದಿಂದ ಬಂದು ನೆಲಸಿ ಹತ್ತು, ಹನ್ನೆರಡು ವರುಷ ಕಲಿತರು ಕನ್ನಡ ಕಲಿಯದವರಿಗೆ ಈ ರೀತಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿ ಭಾಷೆಯನ್ನು ಉಳಿಸಿಕೊಳ್ಳಬೇಕಾಗಿದೆ. ಇಂದು ರ್ಯಾಂಕ್ ವಿಜೇತ ವಿದ್ಯಾಥರ್ಿಗಳ ಸಂದರ್ಶನವನ್ನು ಗಮನಿಸಿದಾಗ ಅವರು ಕನ್ನಡ ಬಳಸುವಲ್ಲಿ ಎಡವುತ್ತಿದ್ದನ್ನು ಗಮನಿಸಿದಾಗ ಇದು ಅವಶ್ಯವಾಗಿ ಆಗಬೇಕಾದ ಕ್ರಿಯೆ ಎನಿಸುತ್ತದೆ.
ಬದಲಾಗುತ್ತಿರುವ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕಿದೆ. ಇಂದಿಗೂ ಎಸ್.ಎಂ.ಎಸ್. ಮೆಸೇಜ್ಗಳು, ಅವು ಕನ್ನಡದ್ದೇ ಆದರೂ ಇಂಗ್ಲಿಷ್ನಲ್ಲಿ ರವಾನೆಯಾಗುತ್ತಿವೆ. ಇದಕ್ಕೆ ಕನ್ನಡದಲ್ಲಿ ಟೈಪಿಸುವಲ್ಲಿ ಆಗುತ್ತಿರುವ ಕ್ಲಿಷ್ಟತೆಯೂ ಕಾರಣ. ಅನೇಕ ಮೊಬೈಲ್ ಗಳಲ್ಲಿ ಕನ್ನಡ ಸಾಫ್ಟ್ವೇರ್ ಇರುತ್ತದೆಯಾದರೂ ಬಳಕೆಯ ಕ್ಲಿಷ್ಟತೆ ಹಾಗೂ ಗೊಂದಲಗಳನ್ನು ನಿವಾರಿಸಿ ಕನ್ನಡದ ವ್ಯಾಪಕ ಬಳಕೆಯಾಗುವಂತೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಿವೆ.
ಕನ್ನಡ ಸಿನಿಮಾಗಳಿಗೆ ಈಗ ನೀಡುತ್ತಿರುವ ಎಲ್ಲಾ ಸಿನಿಮಾಗಳಿಗೂ ಸಬ್ಸಿಡಿ ತೆಗೆದು, ಕನ್ನಡದ ಕಾದಂಬರಿ ಆಧಾರಿತ, ಸಂಸ್ಕೃತಿ, ಪ್ರಾದೇಶಿಕತೆಯನ್ನು ಹಿಡಿದಿಟ್ಟ ತಲಾ ಹತ್ತು ಚಿತ್ರಗಳಿಗೆ ಐವತ್ತು ಲಕ್ಷದಂತೆ ಸಹಾಯಧನವನ್ನು ನೀಡುವುದರಿಂದ ಅಂಥ ಚಿತ್ರಗಳ ತಯಾರಿಕೆಗೆ ನಿಮರ್ಾಪಕರು ಮುಂದೆ ಬಂದಾರು. ವಿಪರ್ಯಾಸವೆಂದರೆ ಇಂದಿಗೂ ಕನ್ನಡದ ಅತ್ಯುತ್ತಮ ಚಿತ್ರಗಳು ಹಾಗೂ ಗಳಿಕೆಯ ಚಿತ್ರಗಳನ್ನು ಪಟ್ಟಿ ಮಾಡಿದರೆ ಅರ್ಧಕ್ಕಿಂತಲೂ ಹೆಚ್ಚು ಚಿತ್ರಗಳು ಕಾದಂಬರಿಯಾಧಾರಿತ ಚಿತ್ರಗಳೇ ಆಗಿರುತ್ತವೆ. ಜೊತೆಗೆ ಇಂದಿಗೂ ವಿದೇಶದಲ್ಲಿ ‘ತಯಾರಾಗುತ್ತಿರುವ ಇಲ್ಲ ಬಿಡುಗಡೆಯಾಗುತ್ತಿರುವ ಬಹುತೇಕ ಆಂಗ್ಲಭಾಷಾ ಚಿತ್ರಗಳು ಕಾದಂಬರಿಯಾಧಾರಿತವೇ ಆಗಿವೆ. ಅಷ್ಟೇ ಏಕೆ, ಭಾರತೀಯ ಇಂಗ್ಲಿಷ್ ಕಾದಂಬರಿಕಾರ ಚೇತನ್ ಭಗತ್ರವರ ಅಷ್ಟು ಕಾದಂಬರಿಗಳು (ತ್ರೀ ಈಡಿಯಟ್ಸ್ ನಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಟೂ ಸ್ಟೇಟ್ಸ್ನವರೆಗೆ) ಗಲ್ಲಾಪೆಟ್ಟಿಗೆಯ ದೂಳೆಬ್ಬಿಸಿವೆ. ಅಷ್ಟೇ ಏಕೆ? ಆಸ್ಕರ್ ಪ್ರಶಸ್ತಿಗಳ ಕೊಳ್ಳೆ ಹೊಡೆದ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರವೂ ಕಾದಂಬರಿಯಾಧಾರಿತವೆ. ಎಲ್ಲೆಡೆ ಇದು ಸಾಧ್ಯವಾಗಿರುವಾಗ ಅದೂ ಕನ್ನಡದಲ್ಲಿ ಸಾಧ್ಯವಿದೆ.
ಹೀಗೆ ಶಿಕ್ಷಣ, ಆಡಳಿತ, ವ್ಯಾಪಾರ, ವ್ಯವಹಾರ, ವಾಣಿಜೋದ್ಯಮ ಮುಂತಾದ ಪ್ರತಿಹಂತದಲ್ಲೂ ಕನ್ನಡ ಜಾರಿಗೆ ಪ್ರಯತ್ನಪಟ್ಟಾಗ, ಸಂದರ್ಭಕ್ಕನುಸಾರವಾಗಿ ಅಭಿಮಾನದಿಂದ, ಪ್ರೋತ್ಸಾಹರೂಪಕವಾಗಿ ಇನ್ನೂ ಕೆಲವೆಡೆ ಅನಿವಾರ್ಯಗೊಳಿಸಿದಾಗ ಮಾತ್ರ ಕನ್ನಡದ ಉದ್ಧಾರ ಸಾಧ್ಯ.

‍ಲೇಖಕರು G

June 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Maluru Venkataswamy

    ಇದೆಲ್ಲದರ ಜೊತೆಗೆ ಕನ್ನಡ ಶಾಲೆಗಳ ನವೀಕರಣ, ಮೂಲಭೂತ ಸೌಲಭ್ಯಗಳ ಪೂರೈಕೆ ಆಗಬೇಕಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: