ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅನ್ನಭಾಗ್ಯ, ಭೈರಪ್ಪ ನಿಲುವು, ವಸ್ತುನಿಷ್ಠ ಚರ್ಚೆ’ ಬಗ್ಗೆ ಜಿ ಎನ್ ನಾಗರಾಜ್ ಬರೀತಾರೆ

ಅನ್ನಭಾಗ್ಯ ಮತ್ತು ಅದರ ಬಗ್ಗೆ ಭೈರಪ್ಪ ಅವರ ಹೇಳಿಕೆಯ ಬಗ್ಗೆ ಸತೀಶ್ ಚಪ್ಪರಿಕೆ ತಮ್ಮ ಲೇಖನದಲ್ಲಿ ಬರೆದಿದ್ದರು.

ಲೇಖನಕ್ಕೆ ಪ್ರತಿಕ್ರಿಯೆಯಾಗಿ ಜಿ ಎನ್ ನಾಗರಾಜ್ ಲೇಖನ ಬರೆದಿದ್ದಾರೆ.

ಜಿ ಎನ್ ನಾಗರಾಜ್

ಆಹಾರ ಭದ್ರತೆ ಎಂಬುದು ರೈತ ಭದ್ರತೆ , ಆಹಾರ ಕೊಳ್ಳುವವರೆಲ್ಲರ ಭದ್ರತೆ. ಲಾಭಕೋರ ಮಾರುಕಟ್ಟೆ ಶಕ್ತಿಗಳನ್ನು ನಿಯಂತ್ರಣದಲ್ಲಿಡುವ ವ್ಯವಸ್ಥೆ.
ಇತ್ತೀಚೆಗೆ ದಿನ ದಿನವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳನ್ನು ನೋಡಿ, ಓದಿ ಇಡೀ ರಾಜ್ಯವೇ ಆತಂಕಕೊಳಗಾಗುತ್ತಿದೆ. ಸಾಮಾನ್ಯವಾಗಿ ಈ ರೈತರು ವಾಣಿಜ್ಯ ಬೆಳೆಗಳೆನ್ನುವ ಕಬ್ಬು, ಹೊಗೆಸೊಪ್ಪು, ಹತ್ತಿ ,ರೇಷ್ಮೆ ಬೆಳೆದ ರೈತರು. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಶೇಂಗಾ ( ಕಡಲೇಕಾಯಿ) , ತೊಗರಿ ಮೊದಲಾದ ಬೆಳೆಗಳ ರೈತರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭತ್ತ , ಗೋಧಿ ಬೆಳೆದ ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಅಪರೂಪ. ಅದೂ ಕೂಡ ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ. ಏಕೆಂದರೆ ಈ ಬೆಳೆಗಳನ್ನು ಸರ್ಕಾರಗಳೇ ಬೆಂಬಲ ನೀಡಿ ಕೊಳ್ಳುತ್ತವೆ. ಯಾರಿಂದ ಬೆಳೆಗಳನ್ನು ಕೊಳ್ಳಲಾಗುತ್ತದೆಯೋ ಆ ರೈತರಿಗೆ ಒಂದು ಖಾತರಿ ಬೆಲೆ ಮತ್ತು ಆದಾಯ ಸಿಗುತ್ತದೆ ಮಾತ್ರವಲ್ಲ ಭತ್ತ, ಗೋಧಿ ಮಾರುಕಟ್ಟೆಯನ್ನು ಸ್ಥಿರಗೊಳಿಸುತ್ತದೆ. ಸರ್ಕಾರ ನೀಡುವ ಬೆಂಬಲ ಬೆಲೆಗಿಂತ ೀ ಧಾನ್ಯಗಳ ಬೆಲೆ ಕಡಿಮೆಯಾಗದಂತೆ ರಕ್ಷಿಸುತ್ತದೆ. ಏಕೆಂದರೆ ಒಂದು ವರ್ಷದಲ್ಲಿ ಐದು ಕೋಟಿ ಟನ್ನಿಗಿಂತ ಹೆಚ್ಚು ಈ ಧಾನ್ಯಗಳನ್ನು ಕೊಳ್ಳಲಾಗುತ್ತಿದೆ. ಆದ್ದರಿಂದ ಖಾಸಗಿ ದಲ್ಲಾಲರುಗಳು ಬೆಲೆಗಳನ್ನು ವಿಪರೀತ ಏರಿಳಿತ ಮಾಡಿ ರೈತರನ್ನು ಹಳ್ಳಕ್ಕೆ ತಳ್ಳುವ ಅವಕಾಶ ಬಹಳ ಸೀಮಿತವಾಗುತ್ತದೆ.ಈ ಅನುಕೂಲ ಬೇರೆಲ್ಲ ಬೆಳೆಗಳಿಗೆ ಸಿಕ್ಕಿದರೆ ರೈತರ ಆದಾಯ ಸ್ಥಿರಗೊಳ್ಳುವುದಕ್ಕೆ , ಅವರು ಆತ್ಮಹತ್ಯೆಗೆ ದೂಡಲ್ಪಡುವುದು ತಪ್ಪುತ್ತದೆ.

ಇನ್ನು ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಕೊಳ್ಳುವವರಿಗೆ ಕೂಡ ಆಹಾರ ಭದ್ರತೆಯ ಅನ್ನಭಾಗ್ಯ ಅಥವಾ ಪಡಿತರ ವ್ಯವಸ್ಥೆಯಿಂದ ಬಹಳ ಪ್ರಯೋಜನವಾಗಿದೆ. 4,70,000 ಪಡಿತರ ಅಂಗಡಿಗಳಿಂದ 16 ಕೋಟಿ ಕುಟುಂಬಗಳಿಗೆ ಶೇ. 60 ಭಾಗಕ್ಕಿಂತ ಹೆಚ್ಚಿನ ಕುಟುಂಬಗಳಿಗೆ ಆಹಾರ ಧಾನ್ಯ ಕಡಿಮೆ ಬೆಲೆಗಳಿಗೆ ಸಿಗುವುದರಿಂದ ಮಾರುಕಟ್ಟೆಯ ಬೆಲೆಗಳನ್ನೂ ಹಿಡಿತದಲ್ಲಿರುತ್ತದೆ. ಅದು ಒಂದು ಮಿತಿ ಮೀರಿ ಹೆಚ್ಚಾಗಲು ಸಾಧ್ಯವಿಲ್ಲ.ಆದರೆ ಬೇಳೆ, ಕಾಳುಗಳು, ಅಡಿಗೆ ಎಣ್ಣೆ , ಮೆಣಸಿನಕಾಯಿ ಮೊದಲಾದ ಆಹಾರ ವಸ್ತುಗಳ ಬೆಲೆ ಎಷ್ಟೊಂದು ಏರುತ್ತದೆ ಗೊತ್ತಿದೆಯಲ್ಲಾ. . ಪಡಿತರದಲ್ಲಿ ಸರಬರಾಜು ಮಾಡುವ ಅಕ್ಕಿ, ಗೋಧಿ ಮಾತ್ರವಲ್ಲ ಅದಕ್ಕೆ ಪರ್ಯಾಯವಾದ ರಾಗಿ, ಜೋಳಗಳ ಬೆಲೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಏಕೆಂದರೆ ಈ ಧಾನ್ಯಗಳ ಬೆಲೆ ಬಹಳ ಏರಿದರೆ ಜನ ಅದರ ಬಳಕೆ ಕಡಿಮೆ ಮಾಡಿ ಕಡಿಮೆ ಬೆಲೆಯ ಪಡಿತರ ಅಕ್ಕಿ,ಗೋಧಿಗೆ ಬದಲಾಯಿಸುತ್ತಾರೆ.ಆ ಕಾರಣಕ್ಕಾಗಿಯೇ ಬಡಜನರ ಆಹಾರ ಪದ್ಧತಿಯನ್ನೇ ಬದಲಾಯಿಸಿ ಬಿಟ್ಟಿದೆ ಈ ಪಡಿತರ ಪದ್ಧತಿ.
ಜೊತೆಗೆ ಈ ಧಾನ್ಯಗಳ ಕೋಟಿಗಟ್ಟಲೆ ಧಾನ್ಯಗಳ ದಾಸ್ತಾನು ಸರ್ಕಾರದ ಗೋದಾಮುಗಳಲ್ಲಿದ್ದರೆ ಕಾಳಸಂತೆಕೋರರಿಗೆ ಅದು ತಲೆಯ ಮೇಲೆ ನಿರಂತರ ತೂಗುತ್ತಿರುವ ಕತ್ತಿಯಿದ್ದಂತೆ. 1966 ಕ್ಕಿಂತ ಮೊದಲು ಪಡಿತರ ವ್ಯವಸ್ಥೆ ಜಾರಿಗೆ ಬರುವ ಮೊದಲು ಮಾಡುತ್ತಿದ್ದಂತೆ ಕಾಳಸಂತೆಕೋರರು ಬಾಲ ಬಿಚ್ಚಿ ಧಾನ್ಯಗಳನ್ನು ಬಚ್ಚಿಟ್ಟು ಬೆಲೆಗಳನ್ನು ವಿಪರೀತ ಏರಿಸಿದರೆ ಆಗ ಈ ಗೋದಾಮುಗಳ ಧಾನ್ಯವನ್ನು ಸ್ವಲ್ಪ ಹೆಚ್ಚು ಹೊರತೆಗೆದರೆ ಆಯಿತು ಬೆಲೆಗಳು ಸರ್ರನೆ ಇಳಿಯುತ್ತವೆ. ಹೀಗೆ ಆಹಾರ ಭದ್ರತೆಯ ಯೋಜನೆ ಕಾಳಸಂತೆ ಕೋರರನ್ನು , ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರದ ಬಳಿ ಇರುವ ಮುಖ್ಯ ಸಾಧನ.
ಹೀಗೆ ಅನ್ನಭಾಗ್ಯವೂ ಸೇರಿ ಆಹಾರ ಭದ್ರತೆ ಎಂಬ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ನೀಡುವುದು ಇಡೀ ದೇಶದ ಸಾಮಾನ್ಯ ಜನರಿಗೆ, ರೈತರಿಗೆ ಬಹಳ ಪ್ರಯೋಜನಕಾರಿಯಾದ ಕಾರ್ಯಕ್ರಮ. ಮಾರುಕಟ್ಟೆಯ ಮಧ್ಯರ್ತಿಗಳು ರೈತರನ್ನು ಹಾಗೂ ಜನರ ಜುಟ್ಟನ್ನು ಹಿಡಿದು ಅಲುಗಾಡಿಸುತ್ತಿರುವ , ಜನಜೀವನದ ನಿಯಂತ್ರಣ ಮಾಡುತ್ತಿರುವ ಸಮಯದಲ್ಲಿ ಈ ಲಾಭಕೋರ ಮಧ್ಯವರ್ತಿ ವ್ಯಾಪಾರಗಾರರನ್ನು ಹಿಡಿತದಲ್ಲಿಡುತ್ತದೆ ಪಡಿತರ ವ್ಯವಸ್ಥೆ. ಮತ್ತೊಂದು ವಿಶೇಷವೆಂದರೆ ಈ ಯೋಜನೆಯಲ್ಲಿನ ಧಾನ್ಯಗಳ ದುರುಪಯೋಗದ ಸಮಯದಲ್ಲಿಯೂ , ಅದರ ಇತರ ಮುಖ್ಯ ಉದ್ದೇಶಗಳಿಗೆ ಲೋಪವಾಗುತ್ತಿರುವಾಗ ಕೂಡ ಬೆಲೆ ನಿಯಂತ್ರಣದ ಕಾರ್ಯಕ್ಕೆ ಖೋತಾ ಆಗುವುದಿಲ್ಲ ಎಂಬುದನ್ನು ಗಮನಿಸಬೇಕು. ಈ ಅಕ್ಕಿ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ . ಹಾಗೇ ಮಾರುಕಟ್ಟೆಯ ಅಕ್ಕಿ, ಗೋಧಿಗಳ ಬೆಲೆಯನ್ನು ಕೆಳಗೆ ಎಳೆಯುತ್ತಿರುತ್ತದೆ.
ಆದ್ದರಿಂದ ಆಹಾರ ಭದ್ರತೆಯ ಯೋಜನೆಯನ್ನು ಕೇವಲ ಅಕ್ಕಿ , ಗೋಧಿ ಕೆಲವೊಮ್ಮೆ ಸಕ್ಕರೆಗೆ ಸೀಮಿತಗೊಳಿಸುವ ಬದಲಾಗಿ ಎಲ್ಲ ರೀತಿಯ ಆಹಾರ ವಸ್ತುಗಳಿಗೆ ವಿಸ್ತರಿಸುವುದು ಅಗತ್ಯವಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಬಳಕೆದಾರರು ಕೊಳ್ಳುವ ಬೆಲೆಗಳಲ್ಲೊಂದು ಸಣ್ಣ ಭಾಗ ಮಾತ್ರ ರೈತರಿಗೆ ಸಿಕ್ಕುತ್ತಿದೆ. ರೈತರು ಮಾರುಕಟ್ಟೆಗೆ ಬೆಳಗಳನ್ನು ತರುವಾಗ ಬೆಲೆಗಳನ್ನು ವಿಪರೀತ ಕುಗ್ಗಿಸಿ ರೈತರನ್ನು ನಷ್ಟಕ್ಕೆ ದೂಡುತ್ತಾರೆ. ಅವರಿಂದ ಕೊಂಡು ದಾಸ್ತಾನು ಮಾಡಿಕೊಂಡ ಮೇಲೆ ಅದರ ಬೆಲೆಯನ್ನು ವಿಪರೀತ ಹೆಚ್ಚಿಸಿ ಬಳಕೆದಾರರಿಗೂ ನಷ್ಟವುಂಟು ಮಾಡುತ್ತಾರೆ. ಆದ್ದರಿಂದ ಈ ಕಾಳಸಂತೆಕೊರ ಸಗಟು ವ್ಯಾಪಾರಿಗಳನ್ನು ಕಿತ್ತೊಗೆಯಲು ಆಹಾರ ಭದ್ರತೆಯನ್ನು ಕಾಳುಗಳು, ಬೇಳೆ, ಎಣ್ಣೆ , ಮೆಣಸಿನಕಾಯಿ ಕೊತ್ತಂಬರಿ ಬೀಜ ಮೊದಲ್ಗೊಂಡು ಎಲ್ಲದಕ್ಕೂ ವಿಸ್ತರಿಸಬೇಕಾಗಿದೆ. ಇದರಿಂದ ಅವುಗಳನ್ನು ಬೆಳೆಯುವ ರೈತರಿಗೂ ಮತ್ತು ಬಳಕೆದಾರರಿಗೂ ಪ್ರಯೋಜನವಾಗುತ್ತದೆ.
ಆಹಾರ ವಸ್ತುಗಳು ಮಾತ್ರವಲ್ಲದೆ ಜೀವನಕ್ಕೆ ಅತ್ಯಗತ್ಯವಾದ ಇತರ ವಸ್ತುಗಳು –ಔಷಧಿಗಳು ಇದಕ್ಕೆ ಮುಖ್ಯ ಉದಾಹರಣೆ.. ಈ ಔಷಧಿಗಳ ಉತ್ಪಾದನಾ ವೆಚ್ಚಕ್ಕಿಂತ ಹತ್ತು ಪಟ್ಟು, ಕೆಲವು ಔಷಧಿಗಳನ್ನು ನೂರು ಪಟ್ಟು ಹೆಚ್ಚು ಬೆಲೆಗೆ ಮಾರಲಾಗುತ್ತದೆ. ಅದರಿಂದಾಗಿ ಎಷ್ಟೋ ಕುಟುಂಬಗಳು ದಿವಾಳಿಯಾಗುವ ಪರಿಸ್ಥಿತಿ ಅಥವಾ ನಿಷ್ಕರುಣೆಯಿಂದ ತಂದೆ,ತಾಯಿ ಮೊದಲಾದ ಹತ್ತಿರದ ವ್ಯಕ್ತಿಗಳನ್ನು ರೋಗಗಳಿಂದ ನರಳಿ ಸಾಯಲು ಬಿಡುವುದು ಉಳಿದಿರುವ ಮಾರ್ಗವಾಗಿದೆ. ಇಂತಹ ಸಂದರ್ಭದಲ್ಲಿ ಉತ್ಪಾದನಾ ವೆಚ್ಚಕ್ಕೆ ಸಮೀಪವಾದ ಬೆಲೆಯಲ್ಲಿ ಔಷದಿಗಳು ಸಿಗುವುದು ಕೇವಲ ಬಡ ಜನರಿಗೆ ಮಾತ್ರವಲ್ಲ ಎಲ್ಲರಿಗೂ ಅಗತ್ಯವಾಗಿದೆ. ಹಾಗೆಯೇ ಬಡ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಟ್ಟೆ ಮೊದಲಾದ ವಸ್ತುಗಳನ್ನು ಕೂಡ ಕಡಿಮೆ ಬೆಲೆಗೆ ಒದಗಿಸುವುದೂ ಅಗತ್ಯ.
ಆಹಾರ ಭದ್ರತೆ ಕೇವಲ ಬಡವರಿಗಲ್ಲದೆ , ಎಲ್ಲ ಜನ ಸಾಮಾನ್ಯರಿಗೂ ಬೇಕು. ಎಲ್ಲ ಜನರಿಗೂ ಕೂಡಾ ಈ ಲಾಭಕೋರ ಮಧ್ಯರ್ತಿಗಳ ಬೆಲೆ ಏರುಪೇರು ಮಾಡುವ ತಂತ್ರಗಳಿಂದ ಬಿಡುಗಡೆಯಾಗಬೇಕು. ಇಲ್ಲದಿದ್ದರೆ ಕೆಳ ಮದ್ಯಮ ವರ್ಗದವರು , ಮಧ್ಯಮ ವರ್ಗದವರು ಗಳಿಸಿದ ವೇತನವೆಲ್ಲಾ ಬೇಲೆ ಏರಿಕೆಗೆ ತೆರಬೇಕಾಗುತ್ತದೆ. ಎಲ್ಲ ಜನರಿಗೂ ಆಹಾರ., ಔಷದಿಗಳು ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ದೊರಕುವುದು , ಬಡ ಜನರಿಗೆ ಮತ್ತಷ್ಟು ಕಡಿಮೆ ಬೆಲೆಗೆ ದೊರಕುವಂತಾಗುವುದು ಕೇವಲ ಎರಡು ಅಂಶಗಳಲ್ಲಿ ಅಂಶಿಕವಾಗಿ ನಿಯಂತ್ರಿಸುವುದಕ್ಕೆ ಬದಲಾಗಿ ಮಾರುಕಟ್ಟೆಯ ಲಾಭಕೋರ ಶಕ್ತಿಗಳನ್ನು ಒಟ್ಟಾರೆ ಸಮಾಜದ ನಿಯಂತ್ರಣಕ್ಕೆ ಒಳಪಡಿಸಿದಂತಾಗುತ್ತದೆ.
ಇದಕ್ಕೆ ಸಾರ್ವತ್ರಿಕ ಪಡಿತರ ವ್ಯವಸ್ಥೆ ಎನ್ನುತ್ತಾರೆ.. ಇಂತಹ ಪಡಿತರ ನಮಗೇನೂ ಬೇಡ ಎನ್ನುವವರು ಬಳಸದೆ ಬಿಡಲಿ ತೊಂದರೆಯೇನಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿದರೆ ಆಗ ಪಡಿತರ ವ್ಯವಸ್ಥೆಯ ಕಡೆಗೆ ಅವರು ಧಾವಿಸಬಹುದು. ಈ ಭಯವೇ ಮಾರುಕಟ್ಟೆಯ ಲಾಭಕೋರ ಶಕ್ತಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಆಹಾರ ಭದ್ರತೆ ಎಂಬುದು ಕೆಲ ಬಡವರಿಗೆ ಒಂದಿಷ್ಟು ಅಕ್ಕಿ ನೀಡಿ ಅವರನ್ನು ಸೋಮಾರಿಯನ್ನಾಗಿ ಮಾಡುವುದಲ್ಲ. ಇಡೀ ಸಮಾಜದ ಎಲ್ಲರನ್ನೂ ಆವರಿಸುವ ಉಪಕಾರಿ. ಹೀಗೆ ಎಲ್ಲರಿಗೂ ಪಡಿತರದ ಮೂಲಕ ಕಡಿಮೆ ಬೆಲೆಗೆ ಎಲ್ಲ ಅಗತ್ಯವಸ್ತುಗಳನ್ನೂ ನೀಡುವ ಯೋಜನೆ ಬಂದರೆ ಸಾಹಿತಿ ಭೈರಪ್ಪನವರ ಸಿಟ್ಟು ಒಮ್ಮೆಗೇ ನೆತ್ತಿಗೇರಿಬಿಡಬಹುದು.
ಇಂತಹ ವ್ಯವಸ್ಥೆ ಕೇವಲ ಕಲ್ಪನೆಯಲ್ಲಿ ಮಾತ್ರವಿರುವುದೇನಲ್ಲ . ಕೇರಳದ ಎಡರಂಗ ಸರ್ಕಾರಗಳು ಇದನ್ನು ಒಂದು ಮಾದರಿ ವ್ಯವಸ್ಥೆಯಾಗಿ ರೂಪಿಸಿವೆ . ಓಣಂ ಹಬ್ಬದ ಸಮಯದಲ್ಲಿ ಅಲ್ಲಿ ತರಕಾರಿ, ಮತ್ತು ಪೋಕೋಲಂನ ಹೂಗಳ ಬೆಲೆಯೂ ಏರಿಬಿಡುವುದರಿಂದ ಅವುಗಳನ್ನೂ ಕೂಡ ಪಡಿತರದ ಭಾಗವಾಗಿ ದೊರಕಿಸುವ , ಾ ಮೂಲಕ ಧಿಡೀರ್ ಬೆಲೆ ಏರಿಕೆಗಳಿಂದ ಜನರನ್ನು ರಕ್ಷಿಸುವ ವ್ಯವಸ್ಥೆ ಕೂಡ ರೂಪಿಸಲಾಗಿತ್ತು.ಬಡವರೂ ಕೂಡ ಓಣಂ ಆಚರಿಸಲು ಸಾಧ್ಯವಾಗಿತ್ತು.
ಇಂದು ದೊಡ್ಡ ದೊಡ್ಡ ದೇಶೀ ಮತ್ತು ವಿದೇಶಿ ಕಾರ್ಪೋರೇಟ್ ಕಂಪನಿಗಳು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುತ್ತಿವೆ. ಅವು ದೇಶದ ಸರ್ಕಾರಗಳನ್ನೇ ಧಿಕ್ಕರಿಸುವಷ್ಟು ಶಕ್ತವಾಗಿವೆ. ಇನ್ನು ರಾಜ್ಯ ಸರ್ಕಾರಗಳನ್ನು ಕಡೆಗಣ್ಣಿಂದ ಕೂಡ ನೋಡದ ಧಿಮಾಕು ಅವುಗಳದು. ಅಂತಹ ಸಂದರ್ಭದಲ್ಲಿ ಸರಕಾರಗಳು ಅವುಗಳನ್ನು ನಿಯಂತ್ರಣದಲ್ಲಿಡಲು ಬಡವರನ್ನು ಮಾತ್ರವೇ ಅಲ್ಲದೆ ಎಲ್ಲ ಜನರನ್ನೂ ಒಳಗೊಳ್ಳುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಒಳ್ಳೆಯ ಸಾಧನ.
(ಆಹಾರ ಭದ್ರತೆಯೆಂದರೇನು?ಈಗಿನ ಕೇಂದ್ರ ಸರ್ಕಾರದ ನೀತಿಗಳಲ್ಲಿ ಅದರ ಪಾತ್ರವೇನು? ಏಕೆ? ಭೈರಪ್ಪನವರು ಈ ಸಮಯದಲ್ಲಿ ಈ ಪ್ರಶ್ನೆಗಲನ್ನೆತ್ತಲು ಕಾರಣವೇನು ಎಂಬುದು ಮುಂದಿನ ಭಾಗದಲ್ಲಿ.)
 

‍ಲೇಖಕರು G

13 July, 2015

8 Comments

  1. Anil Talikoti

    ಆಹಾರ ಭದ್ರತೆಯ ಬಗೆಗಿನ ನಿಮ್ಮ ಮಾತುಗಳು ಯೋಚನೆಗೆ ಹಚ್ಚುತ್ತವೆ

    • Gn Nagaraj

      Thanks

  2. Satish Chapparike

    GNN has rightly explained the importance of the public distribution system. Hope people who are opposing a scheme like Anna Bhagya will read it and take it in right spirit.

    • Gn Nagaraj

      It is question of economics- not just any economics but pro people economics. one has delve deeper into into it to understand its implications

  3. ಅಕ್ಕಿಮಂಗಲ ಮಂಜುನಾಥ

    ಪಡಿತರ ವ್ಯವಸ್ಥೆ ಏಕೆ ಬೇಕು ಎಂಬುದನ್ನು ವಿಶ್ಲೇಷಣೆ ಸಹಿತ ವಿವರಿಸಿದ್ದೀರಿ.ಇಂಥ ಲೇಖನಗಳನ್ನು ನೋಡಿಯಾದರೂ ಪಡಿತರ ವಿರೋಧಿಗಳು ಸುಮ್ಮನಿದ್ದರೆ ಸಮಾಜಕ್ಕೆ ಇಷ್ಟಾದರೂ ಸಹಾಯವಾಗಬಹುದೇನೋ!
    ಲೇಖನ ಚೆನ್ನಾಗಿದೆ. ಧನ್ಯವಾದಗಳು , ಸರ್.

    • Gn Nagaraj

      ಇದು ಲಾಭಕೋರರ ಅರ್ಥಶಾಸ್ತ್ರ ಹಾಗೂ ಜನಪರ ಅರ್ಥಶಾಸ್ತ್ರ ಎಂಬ ಎರಡು ಅರ್ಥಶಾಸ್ತ್ರಗಳ ನಡುವಣ ಸಂಘರ್ಷ. ನಮ್ಮ ಕೆಲ ಪ್ರಸಿದ್ಧ ಸಾಹಿತಿಗಳು ತಾವು ಸರ್ವಜ್ಞರು ಎಂದು ತಿಳಿದುಕೊಂಡು ಯಾವುದರ ಬಗ್ಗೆ ತಮಗೇನೂ ಗೊತ್ತಿಲ್ಲವೋ ಅದರ ಬಗ್ಗೆ ತಿಳಿದುಕೊಳ್ಳಲು ಕೂಡ ಹೋಗದೆ ಬಾಯಿಗೆ ಬಂದಂತೆ ಮಾತನಾಡುವುದು ತಮ್ಮ ಹಕ್ಕು. ಅವರ ಮಾತುಗಳನ್ನು ಬಾಯಿಬಿಟ್ಟು ಕೇಳುವುದು ಜನರ ಕರ್ತವ್ಯ ಎಂದು ತಿಳಿದುಕೊಂಡು ಬಿಟ್ಟಿದ್ದಾರೆ.

  4. Srikantha Shenoy

    Very good analysis providing convincing rationale for PDS. If the sting against Byrappa as a person is removed, it would be more valuable. Any citizen, be it a common man or an accomplished man, leftist or rightist or centrist or with out any ism, has equal right to express his opinion in democracy. Criticizing a person for his/her views instead of the views per se is some thing hard to respect. I see lot of criticism than informed critique. Let more such informed reasoning come to the fore than the bleeding hearts without doing any thing to resolve the crisis.

  5. Gn Nagaraj

    ಮುಂದುವರೆದ ಅನ್ನಭಾಗ್ಯ ಸಂವಾದ-3:
    ಆಹಾರ ಭದ್ರತೆಯ ಅಆಇಈ ಅರಿಯಲೆತ್ನಿಸದ ಸಾಹಿತಿ ಭೈರಪ್ಪನವರ ಭೌದ್ಧಿಕ ಸೋಮಾರಿತನ:
    ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೃಷಿ ಮತ್ತು ಆಹಾರ ಸಂಸ್ಥೆ ಗಳು ವಿವರಿಸಿದಂತೆ ಆಹಾರ ಭದ್ರತೆ ಎಂದರೆ ಎಲ್ಲ ಜನರಿಗೂ ಎಲ್ಲ ಕಾಲದಲ್ಲಿಯೂ ಕ್ರಿಯಾಶೀಲವಾದ ,ಆರೋಗ್ಯಕರವಾದ ಬದುಕನ್ನು ನಡೆಸಲು ಅವಶ್ಯವಿರುವಷ್ಟು , ಕ್ಷೇಮಕರವಾದ ,ಪೋಷಕಾಂಶಪೂರಿತ ಆಹಾರ ದೊರಕುವುದೇ ಆಹಾರ ಭದ್ರತೆ .
    ಇದರಲ್ಲಿ ಆಹಾರ ವಸ್ತುಗಳು ಲಭ್ಯವಿರುವುದು , ಅದನ್ನು ಕೊಳ್ಳುವ ಶಕ್ತಯಿರುವುದು ಎರಡೂ ಸೇರಿದೆ. ಕುಟುಂಬಗಳ ನಡುವೆ ಆಹಾರ ವಿತರಣೆ ಮಾತ್ರವಲ್ಲದೆ ಮನೆಯೊಳಗಿನ ಜನರ –ಅಂದರೆ ಗಂಡಸರು, ಹೆಂಗಸರು, ಮಕ್ಕಳು, ವೃದ್ಧರು ಇವರ ನಡುವಣ ಆಹಾರ ಹಂಚಿಕೆಯೂ ಸೇರಿದೆ.
    ಯಾರೂ ಹಸಿವಿನಿಂದ ಸಂಕಟಕ್ಕೊಗಾಗಬಾರದು, ಹಸಿವಿನ ಭಯದಿಂದ ಕೊರಗಬಾರದು, ಅದನ್ನು ತಪ್ಪಿಸಿಕೊಳ್ಳುವುದಕ್ಕೆ ತಮ್ಮ ದೇಹ ಮಾರಿಕೊಳ್ಳುವ , ಕೈಲಾಗದಿದ್ದರೂ ದುಡಿಯುವ( ವಯಸ್ಸಾಗಿದ್ದರೂ, ರೋಗದಿಂದ ನರಳುತ್ತಿದ್ದರೂ, ದುಡಿಯುವ ವಯಸ್ಸಲ್ಲದ ಬಾಲಕ/ಬಾಲಕಿಯರು ), ದುಡಿಯುವ ಅನಿವಾರ್ಯತೆ ಬರಬಾರದು.
    ಈ ಅಂಶಗಳು ಆಹಾರ ಭದ್ರತೆಯೆಂಬ ಪರಿಕಲ್ಪನೆಯಲ್ಲಿ ಒಳಕೊಂಡಿವೆ. ಅನ್ನ ಭಾಗ್ಯ ಯೋಜನೆಯನ್ನು ಹೀಗಳೆಯುತ್ತಿರುವವರಿಗೆ ಈ ಆಹಾರ ಭದ್ರತೆಯ ಈ ಸಾಮಾಜಿಕ-ಆರ್ಥಿಕ ಅಂಶಗಳ ಕನಿಷ್ಠ ತಿಳುವಳಿಕೆ ಇದೆಯೇ? ಇದು ಒಂದು ಕಡೆಯಾದರೆ ಅನ್ನಭಾಗ್ಯ ಎಂಬ ಯೋಜನೆಯಲ್ಲಿ ಈ ಸಮಗ್ರವಾಗಿ ಈ ಆಯಾಮಗಳನ್ನೆಲ್ಲಾ ಪರಿಗಣಿಸಿದ್ದಾರೆಯೇ ಎಂಬುದು ಮತ್ತೊಂದು ಕಡೆ ಕೇಳಬೇಕಾದ ಪ್ರಶ್ನೆ.
    ಈಗ ನಮ್ಮ ದೇಶದಲ್ಲಿನ ವಾಸ್ತವ ಪರಿಸ್ಥಿತಿಯಲ್ಲಿ ಆಹಾರ ಭದ್ರತೆಯ ಚಿತ್ರಣ ಏನು ಎಂಬುದನ್ನು ನೋಡೋಣ. ಈ ಬಗ್ಗೆ ಕೆಲ ಅಂಶಗಳು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಬಂದಿದ್ದರೂ ಅದನ್ನು ಸಮಗ್ರವಾಗಿ ಪರಿಶೀಲಿಸೋಣ.
    ಆಹಾರ ಭದ್ರತೆಯೆಂದರೆ ದಿನಕ್ಕೆ ಕನಿಷ್ಟ ಭಾರತದಲ್ಲಿ 2340( ವಿಶ್ವ ಮಟ್ಟದಲ್ಲಿ 2700) ಕ್ಯಾಲೊರಿಗಳಷ್ಟು ಶಕ್ತಿಯನ್ನು ಒದಗಿಸುವ , ಪ್ರೋಟೀನು, ಇತರ ಪೋಷಕಾಂಶಗಳು ಆ ಆಹಾರದ ಮೂಲಕ ಲಭ್ಯವಾಗಬೇಕು. ಅದಕ್ಕಾಗಿ ಎಷ್ಟು ಧಾನ್ಯ, ಬೇಳೆ, ಕಾಳು, ತರಕಾರಿ , ಹಾಲು, ಮಾಂಶ. ಮೊಟ್ಟೆ ಇಂತಹವೆಲ್ಲಾ ಬೇಕೆಂಬ ಲೆಕ್ಕಾಚಾರವನ್ನು ದೇಶದ ಸಂಶೋಧನಾ ಸಂಸ್ಥೆಗಳುನೀಡಿವೆ.
    ವಿವಿಧ ರೀತಿಯ ಶ್ರಮದ ಕೆಲಸ ಮತ್ತು ವಿವಿಧ ವಯೋಮಾನಗಳಿಗೆ ಬೇರೆ ಬೇರೆ ಅಗತ್ಯಗಳನ್ನು ಲೆಕ್ಕಿಸಲಾಗಿದೆ. ಆ ವಿವರಗಳಿಗೆ ಲೇಖನವನ್ನು ಬಹಳ ವಿಸ್ತರಿಸಿ ಬಿಡುವುದರಿಂದ ಅದನ್ನು ಇಲ್ಲಿ ನೀಡಲಾಗಿಲ್ಲ.
    ಆದರೆ ಇಂದು ವಿವಿಧ ಆದಾಯದ ಹಂತಗಳಲ್ಲಿರುವವರು ತಿನ್ನುವ ಆಹಾರದಿಂದ ದೊರಕುವ ಕ್ಯಾಲೊರಿಗಳೆಷ್ಟು ಎಂಬುದನ್ನು ನೋಡೋಣ:
    ಕೆಳಗಿನ ಕಾಲು ಭಾಗ——–1624
    ಎರಡನೆಯ ಕಾಲು ಭಾಗ—–1900
    ಮೂರನೆಯ ಕಾಲು ಭಾಗ—–2143
    ಅತಿ ಮೇಲಿನ ಕಾಲು ಭಾಗ—-2521
    ಈ ಸಮೀಕ್ಷೆಯಂತೆ ಅತ್ಯಂತ ಮೇಲುಭಾಗದ ಕಾಲು ಭಾಗ ಹೊರತಾಗಿ ಮುಕ್ಕಾಲು ಭಾಗದಷ್ಟು ಜನರಿಗೆ ಅವರ ದೇಹದ ಕ್ಯಾಲೋರಿ ಅಗತ್ಯಗಳು ಪೂರೈಸುತ್ತಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ಕೂಡ ದೇಶದ ಅತಿ ಬಡವರಾದ ಕೆಳಗಿನ ಶೇ ಹತ್ತರಷ್ಟು ಭಾಗದ ಜನಕ್ಕೆ ಸಿಗುವ ಕ್ಯಾಲೋರಿಗಳು ಕೇವಲ 1485 ಕ್ಯಾಲೊರಿಗಳು. ಇದರ ಅರ್ಥವೇನು? ದೈಹಿಕವಾಗಿ ಅತಿ ಹೆಚ್ಚು ದುಡಿಯುವ ಜನರಿಗೆ ಬೇಕಾದ ಶಕ್ತಿ ಲಭ್ಯವಿಲ್ಲ. ಾದರೆ ದೈಹಿಕ ಶ್ರಮವಿಲ್ಲದ ಮತ್ತು ಅದರಿಂದಾಗಿ ಕಡಿಮೆ ಕ್ಯಾಲೊರಿ ಅಗತ್ಯವಿರುವ ಮೇಲ್ವರ್ಗದ ಜನರಿಗೆ ಅತಿ ಹೆಚ್ಚು ಕ್ಯಾಲೊರಿ ಲಭ್ಯ .ಇಂತಹ ಸಂದರ್ಭದಲ್ಲಿ ಸ್ವಲ್ಪ ಅಕ್ಕಿ ಕಡಿಮೆ ಬೆಲೆಗೆ ದೊರೆತರೆ ಅವರ ದುಡಿಮೆಯ ಶಕ್ತಿ ಹೆಚ್ಚುತ್ತದೆಯೋ ಅಥವಾ ಸೋಮಾರಿತನ ಹೆಚ್ಚುತ್ತದೆಯೋ? ಈ ಕಾರಣಕ್ಕಾಗಿಯೇ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಅಲ್ಲದೆ ಎಲ್ಲರಿಗೂ ಪಡಿತರ ಚೀಟಿ ಮತ್ತು ಆಹಾರ ಧಾನ್ಯ ನೀಡುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕೇವಲ ಎಡಪಂಥೀಯರಲ್ಲದೆ ಆಹಾರದ ಹಕ್ಕಿನ ಾಂಧೋಲನದವರೂ ಒತ್ತಾಯ ಮಾಡುತ್ತಿರುವುದು.
    ಈ ರೀತಿಯ ಆಹಾರ ಕೊರತೆಯಿಂದಾಗಿ
    ನಮ್ಮ ದೇಶದಲ್ಲಿ ಶೇ. 80ರಷ್ಟು ಮಕ್ಕಳು ಮತ್ತು ಮಹಿಳೆಯರೂ ಕೂಡ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
    ಶೇ. 45.90 ರಷ್ಟು ಮಕ್ಕಳ ತೂಕ ಅವರ ವಯೋಮಾನಕ್ಕೆ ಹೋಲಿಸಿದರೆ ಕಡಿಮೆ.ಶೆ.38.4ರಷ್ಟು ಕೃಶ ದೇಹಿಗಳು, ಶೇ. 19ರಷ್ಟು ಮಕ್ಕಳು ಇನ್ನು ಮುಂದೆ ಆಹಾರ ದೊರೆತರೂ ಸುಧಾರಿಸಲಾಗದಷ್ಟು ಕೆಟ್ಟ ಸ್ಥಿತಿ.
    ಇತ್ತೀಚಿನ ವಿಶ್ವ ಸಮೀಕ್ಷೆಯ ವರದಿಗಳಂತೆ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ ಈ ಆಹಾರ ಸ್ಥಿತಿ ಕಾರಣವಾಗಿದೆ.ಅಂತಹ ಸಂದರ್ಭದಲ್ಲಿಯೂ ಕೂಡ ಕೇವಲ ಹತ್ತಿಪ್ಪತ್ತು ಕೇಜಿ ಅಕ್ಕಿ ಕಡಿಮೆ ಬೆಲೆಗೆ ನೀಡುವುದು ಅವರ ಸೋಮಾರಿತನವನ್ನು ಹೆಚ್ಚಿಸುತ್ತದೆಯೇ!
    ಹೇಗಿದೆ ಭೈರಪ್ಪನವರ ಭೌದ್ಧಿಕ ಸೋಮಾರಿತನ! ತಮ್ಮ ಬರಹಗಳನ್ನು ಬರೆಯಲು ವರ್ಷಗಟ್ಟಲೆ ಸಂಶೋಧನೆ ನಡೆಸುತ್ತೇನೆಂದು ಸಾರಿಕೊಳ್ಳುವ ಭೈರಪ್ಪನವರು ದೇಶವನ್ನು ಕಟ್ಟುವ ದೊಡ್ಡ ವಿಭಾಗದ ಜನರನ್ನು ಸೋಮಾರಿಗಳಾಗಿದ್ದಾರೆಂದು ಅವಮಾನಿಸುವಾಗ ಸಂಶೋಧನೆ ನಡೆಸಿಯೇ ತೀರ್ಮಾನಕ್ಕೆ ಬರಬೇಕು ಎಂದೆನಿಸಲಿಲ್ಲವೇ !
    ಅವರ ಮಾತಿನ ಪೊಳ್ಳುತನವನ್ನು ಬಯಲಿಗೆಳೆಯಲು ಈ ವಾಸ್ತವ ಚಿತ್ರಣ ಸಾಕಾದರೂ ಆಹಾರದ ಅಭದ್ರತೆಯ ಕಾರಣಗಳೇನು? ಅದಕ್ಕೆ ಈ ಕೆಳ ವರ್ಗದ ಜನರ ಸೋಮಾರಿತನ ಕಾರಣವೇ ಎಂಬುದನ್ನು ಪರಿಶೀಲಿಸೋಣ.
    ಆಹಾರದ ಭದ್ರತೆಗೆ ಅವಶ್ಯವಾದ ಆಹಾರವನ್ನು ಕೊಳ್ಳುವ ಶಕ್ತಿ ಬಹಳ ಮುಖ್ಯ. ಅಂತಹ ಶಕ್ತಿ ಏಕಿಲ್ಲ? ಈ ಸೋಮಾರಿ ಭೌದ್ಧಿಕತೆಯ ವಾದವೆಂದರೆ ಈ ಜನ ಕಷ್ಟಪಟ್ಟು ದುಡಿಯುವುದಿಲ್ಲ, ಸೋಮಾರಿಗಳಾಗಿ ಕಾಲ ಹರಣ ಮಾಡುತ್ತಾರೆ. ಅಥವಾ ದುಡಿದದ್ದನ್ನು ಕುಡಿದು ಕಳೆಯುತ್ತಾರೆ ಇತ್ಯಾದಿ. ಆದರೆ ವಾಸ್ತವವೇನು ಎಂಬುದನ್ನು ನೋಡೋಣ.
    ಆಹಾರವನ್ನು ಕೊಳ್ಳುವ ಶಕ್ತಿಯನ್ನು ಪಡೆಯದಿರಲು ಒಂದು ಕಡೆ ಬಡಜನರ ಆದಾಯ , ಮತ್ತೊಂದು ಕಡೆ ಆಹಾರ ವಸ್ತುಗಳ ಬೆಲೆಗಳು ಕಾರಣ. ಈ ಎರಡರಲ್ಲಿನ ಸಮಸ್ಯೆಗಳಿಗೂ ಮುಖ್ಯ ಕಾರಣ ಕೇಂದ್ರ ಸರ್ಕಾರದ ನೀತಿಗಳು.ಅದನ್ನು ಹೆಚ್ಚು ವಿಸ್ತರಿಸದೆ ಸಂಕ್ಷಿಪ್ತಗೊಳಿಸುತ್ತೇನೆ.
    • ಮಧ್ಯಮ ವರ್ಗ ಬಳಸುವ ಕಾರು, ಇತರ ವಾಹನಗಳು, ಮೊಬೈಲ್ ಫೋನ್ , ಉತ್ತಮ ಟೀವಿ ಮತ್ತಿತರ ವಸ್ತುಗಳ ಬೆಲೆಗಳು ಎಷ್ಟೋ ಬಾರಿ ಕಡಿಮೆಯಾಗುತ್ತಿದ್ದರೂ ಆಹಾರದ ಬೆಲೆಗಳು ಏರುತ್ತಲೇ ಇವೆ. ಸಾಮಾನ್ಯ ಬೆಲೆ ಸೂಚ್ಯಾಂಕಕ್ಕಿಂತ ಆಹಾರದ ಬೆಲೆ ಸೂಚ್ಯಂಕ ದುಪ್ಪಟ್ಟಿರುತ್ತದೆ.
    • ಕೃಷಿಗೆ ಬೇಕಾದ ಬೀಜ, ಗೊಬ್ಬರ , ರಸಗೊಬ್ಬರ, ಔಷಧಿಗಳು ಮೊದಲಾದ ಮೂಲ ವಸ್ತುಗಳ ಬೆಲೆ , ಮಾರುಕಟ್ಟೆಗೆ ಸಾಗಿಸುವುದರ ವೆಚ್ಚ ಇತ್ಯಾದಿಗಳು ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುವ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ವಿಪರೀತ ಹೆಚ್ಚಿದೆ. ಬ್ಯಾಂಕುಗಳಿಂದ ಕಡಿಮೆ ಬಡ್ಡಿಯ ಸಾಲವನ್ನು ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವುದರಿಂದ ದುಬಾರಿ ಬಡ್ಡಿಯ ಖಾಸಗಿ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ. ಇದರಿಂದಾಗಿಯೇ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಿ ಆಹಾರ ವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ.
    • ಅದೇ ಸಮಯದಲ್ಲಿ ಜಾಗತೀಕರಣ, ಖಾಸಗೀಕರಣ ನೀತಿಗಳಿಂದಾಗಿ ಕಟ್ಟಡ ನಿರ್ಮಾಣ, ಕೃಷಿ ಮುಂತಾವುಗಳಲ್ಲಿ ಹೆಚ್ಚು ಹೆಚ್ಚು ಯಂತ್ರಗಳ ಬಳಕೆಯಾಗುತ್ತಿದೆ. ಬಡವರಿಗೆ ಉದ್ಯೋಗ ಲಭ್ಯತೆ ಕಡಿಮೆಯಾಗಿದೆ. ರಾಷ್ಟ್ರೀಯ ಸಮೀಕ್ಷೆಗಳ ಅಂಕಿ ಅಂಶಗಳು ಇದನ್ನು ಧೃಡ ಪಡಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಲಬ್ಯತೆ ಮತ್ತಷ್ಟು ಕಡಿಮೆಯಾಗಿದೆ. ಅಯ್ಯೋ ಕೃಷಿ ಕೆಲಸಕ್ಕೆ ಕೂಲಿಕಾರರೇ ಸಿಕ್ಕುವುದಿಲ್ಲ ಎಂಬ ರೈತರ ಪೇಚಾಟದ ನಡುವೆಯೂ ಹಳ್ಳಿಗಳಲ್ಲಿ ಒಂದು ವರ್ಷದಲ್ಲಿ ಕೆಲಸ ಸಿಕ್ಕ ದಿನಗಳು ನಿರಂತರವಾಗಿ ಕಡಿಮೆಯಾಗುತ್ತಿದೆಯೆಂದು, ಈಗ ಕೇವಲ 70-100 ದಿನ ಮಾತ್ರ ಎಂದು ವಿವಿಧ ಸಾಮಾಜಿಕ ವಿಜ್ಞಾನಿಗಳ ಸಂಶೋಧನೆಗಳೂ ತಿಳಿಸುತ್ತಿವೆ.
    • ಇನ್ನು ಕೆಲಸಕ್ಕೆ ಕೂಲಿಯ ಪ್ರಶ್ನೆ. ಕೂಲಿ ಏರುತ್ತಿದ್ದರೂ ರೈತರಿಗೆ, ಸಾಮಾನ್ಯ ಜನರಿಗೆ ಅದನ್ನು ಭರಿಸುವುದು ಕಷ್ಟವೆಂಬಂತೆ ಕಾಣುತ್ತಿದ್ದರೂ ಕೂಡ ಈ ವರ್ಗದ ಕೂಲಿಕಾರರಿಗೆ ಮದ್ಯಮ ವರ್ಗದವರಿಗೆ ಇರುವಂತೆ ವೇತನ ಆಯೋಗ, ತುಟ್ಟಿ ಭತ್ಯ ಇಲ್ಲ ಬೆಲೆ ಏರಿಕೆಗೆ ಸಮನಾಗಿ ಕೂಲಿ ಹೆಚ್ಚಾಗುತ್ತಿಲ್ಲ.
    • ಸರ್ಕಾರಗಳು ಕನಿಷ್ಡ ಕೂಲಿ ಕಾನೂನಿನ ಪ್ರಕಾರ ಆಗಿಂದಾಗ್ಗೆ ಕೂಲಿ ಏರಿಕೆ ಮಾಡುವುದಾಗಲಿ, ಅಧಿಸೂಚನೆ ಹೊರಡಿಸಿದ ಕೂಲಿ ಸಿಗುವಂತೆ ಕ್ರಮ ಕೈಗೊಳ್ಳುವುದಾಗಲೀ ಮಾಡುತ್ತಿಲ್ಲ. ಅದನ್ನು ಏರಿಸಲು ಪ್ರಯತ್ನ ಮಾಡಿದಾಗೆಲ್ಲ ಮಾಲೀಕರುಗಳ ಸಂಘಗಳು ಸರ್ಕಾರದ ಮೇಲೆ ಒತ್ತಡ ತಂದು ಕಡಿಮೆ ಮಾಡಿಸುತ್ತವೆ. ಕೋರ್ಟ್ ಗಳಿಂದ ತಡೆಯಾಜ್ಞೆ ಪಡೆಯುತ್ತವೆ . ಸುಪ್ರೀಂ ಕೋರ್ಟ್ ಗೆ ಕೂಡ ಹೋಗುತ್ತವೆ.ಉದಾಹರಣೆಗೆ ಇತ್ತೀಚೆಗೆ ಬೀಡಿ ಕಾರ್ಮಿಕರಿಗೆ ಕಾನೂನು ಬದ್ದವಾಗಿ ನೀಡಬೇಕಾದ ತುಟ್ಟಿಭತ್ಯೆ ಕೊಡಬೇಕಾಗಿಲ್ಲವೆಂಬ ಆಜ್ಞೆ ಹೊರಟಿದೆ.
    ಹೀಗೆ ಇನ್ನು ಕೆಲವು ಕಾರಣಗಳಿವೆ. ಮುಖ್ಯವಾದದ್ದೆಂದರೆ ಆಹಾರ ವಸ್ತುಗಳ ಬೆಲೆ ಏರಿಕೆಯಾಗುವುದೂ ಕೇಂದ್ರ ಸರ್ಕಾರದ ನೀತಿಗಳಿಂದ. ಅದಕ್ಕೆ ತಕ್ಕಂತೆ ಆದಾಯ ಹೆಚ್ಚಾಗದಿರಲೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣ.
    ಈಗ ಹೇಳಿ ಆಹಾರದ ಅಭದ್ರತೆ ಉಂಟಾಗುವುದು ಬಡಜನರ ಸೋಮಾರಿತನದಿಂದಲೋ ಅಥವಾ ಸರ್ಕಾರಗಳಿಂದಲೋ.
    ಅನ್ನಭಾಗ್ಯ ಎಂಬುದು ಆದ್ದರಿಂದಲೇ ಸರ್ಕಾರ ಬಡವರಿಗೆ ನೀಡುವ ಭಾಗ್ಯವಲ್ಲ ಬದಲಾಗಿ ಅವುಗಳ ನೀತಿಗಳಿಂದಾಗಿ ಹಸಿವಿನ ಸಂಕಟಕ್ಕೆ ದೂಡಲ್ಪಟ್ಟಿರುವ ಬಡವರಿಗೆ ನೀಡಿದ ಅತ್ಯಲ್ಪ ಪರಿಹಾರ.ಇದನ್ನು ಜನರ ಹಣದ ಪೋಲು ಎಂದು ಬಿಂಬಿಸುತ್ತಿರುವವರು ಈ ವಿಷಯವನ್ನು ಮನದಟ್ಟು ಮಾಡಿಕೊಳ್ಳಿ. ಬಹು ರಾಷ್ಟ್ರೀಯ ಕಂಪನಿಗಳು, ದೇಶದ ದೊಡ್ಡ ಕಂಪನಿಗಳ ದುರ್ಲಾಭದಾಸೆಗೆ ಈ ಬಡವರನ್ನು ಬಲಿ ಹಾಕಲಾಗುತ್ತಿದೆ.. ಅವರ ದುರ್ಲಾಭದಾಸೆಯ ವಿರುದ್ಧ, ಅದಕ್ಕೆ ಅವಕಾಶ ನೀಡಿದ ಸರ್ಕಾರಗಳ ವಿರುದ್ಧ ನಿಮ್ಮ ಸಿಟ್ಟನ್ನು ತೋರಿಸಿ .

Trackbacks/Pingbacks

  1. ಶಿವಪ್ಪನಂಥ ಪಾತ್ರವನ್ನು ಸೃಷ್ಟಿಸಿದ ಬೈರಷ್ಪನವರಿಂದ ಇಂಥ ಮಾತುಗಳು?? « ಅವಧಿ / Avadhi - [...] ಶಿವಪ್ಪನಂಥ ಪಾತ್ರವನ್ನು ಸೃಷ್ಟಿಸಿದ ಬೈರಷ್ಪನವರಿಂದ ಇಂಥ ಮಾತುಗಳು?? July 14, 2015 ’ಅನ್ನಭಾಗ್ಯ’ ಮತ್ತು ಅದರ ವಿರುದ್ಧ ಬರುತ್ತಿರುವ ಟೀಕೆಗಳ ಬಗ್ಗೆ ನಿನ್ನೆ ಜಿ ಎನ್…
  2. ’ಆಹಾರ ಭದ್ರತೆಯ ಅರಿಯಲೆತ್ನಿಸದ ಭೈರಪ್ಪನವರ ಭೌದ್ಧಿಕ ಸೋಮಾರಿತನ’ – ಜಿ ಎನ್ ನಾಗರಾಜ್ « ಅವಧಿ / Avadhi - [...] ’ಆಹಾರ ಭದ್ರತೆಯ ಅರಿಯಲೆತ್ನಿಸದ ಭೈರಪ್ಪನವರ ಭೌದ್ಧಿಕ ಸೋಮಾರಿತನ’ – ಜಿ ಎನ್ ನಾಗರಾಜ್ July 16, 2015 ಅನ್ನಭಾಗ್ಯ, ಆಹಾರ ಭದ್ರತೆ, ಅನ್ನಭಾಗ್ಯದ ವಿರೋಧದ ಹೇಳಿಕೆಗಳ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading