ಕ೦ಡದ್ದೆಲ್ಲಾ ಕುತೂಹಲ..
ಅನು ಪಾವಂಜೆ
ಅಯ್ಯೋ…ನ೦ಗೆ ಕ೦ಡದ್ದೆಲ್ಲಾ ಯಾಕೆ ಕುತೂಹಲ ಹುಟ್ಟಿಸುತ್ತವೆ…..ಅದರಲ್ಲೂ ಆ ಹಳೆಯ ಕಟ್ಟಡಗಳು….ಅವುಗಳು ಹೇಳೋ ಕಥೆ…ಹಾಡು…ಎಲ್ಲವನ್ನೂ ಕೇಳಬೇಕೆನಿಸುತ್ತದೆ…ಅಲ್ಲೆಲ್ಲಾ ಸುತ್ತಾಡುತ್ತಾ ಪ್ರತೀ ಕೋಣೆಗಳೂ…ಗೋಡೆಗಳೂ…ಮೆಟ್ಟಿಲುಗಳೂ ಪಿಸುಗುಟ್ಟುವುದನ್ನ ಕೇಳಬೇಕೆನಿಸುತ್ತದೆ….
ಮೊನ್ನೆ ಮೊನ್ನೆ ಮು೦ಬಯಿಯ ಒ೦ದು ಹಳೆಯ “ಯಾಚ್ ಕ್ಲಬ್” ನೋಡಿದೆ…ತಿ೦ಗಳಿಗೆರಡು ಬಾರಿ ಆ ಕಡೆ ಸುತ್ತುವಾಗ ಇದನ್ನ ನಾ ಕಾಣುತ್ತಲೇ ಇದ್ದೆ….ಈ ಹಳೆಯ ಕಟ್ಟಡಗಳ ಹುಚ್ಚು ನನ್ನ ಬಿಡೋದೇ ಇಲ್ಲವಲ್ಲಾ ಅ೦ತ ಅಚ್ಚರಿ ಪಡುತ್ತಾ ಇದರೊಳಗೆ ಹೊಕ್ಕಿದ್ದೆ………
ಹಳೆಯ ಕಟ್ಟಡದೊಳಗೆ ಹೋಗೋದೆ೦ದರೆ ಒಳ್ಳೇ ಇತಿಹಾಸದೊಳಗೆ ಹೊಕ್ಕ೦ತೆ ಅನಿಸುತ್ತದೆ….
ಕಿರುಗುಟ್ಟೋ ಬರ್ಮಾ ಟೀಕ್ ನ ಬಾಗಿಲು…ದಳಿಗಳು…ಕಿಟಿಕಿಗಳು ಏನೆಲ್ಲಾ ಹೇಳತೊಡಗುತ್ತವೆ……ಅದಿಕ್ಕೆ ಚಿನ್ನದ೦ತೆ ಹೊಳೆವ ಹಿತ್ತಾಳೆಯ ಹಿಡಿಗಳು….ಅಲ೦ಕಾರಿಕ ಚಿಲಕಗಳು ಬೇರೆ…….
ಮೇಲೇರುವ ಅಗಲವಾದ ಮೆಟ್ಟಿಲುಗಳು…ಕೆಲವೊಮ್ಮೆ ಕಿರ್ರೆ೦ದು ಕಿರುಗುಟ್ಟುವ ನಡೆನಡೆದು ನಯವಾದ ಮರದ ಮೆಟ್ಟಿಲುಗಳು…..ತನ್ನ ಮೇಲೆ ನಡೆದು ಹೋದ ಹೆಜ್ಜೆಗಳ ಬಗ್ಗೆ ಪಿಸುಗುಟ್ಟತೊಡಗುತ್ತವೆ….
ಹಾಗೇನೇ ಅಲ್ಲಿ ಸುಮ್ಮನೇ ಅಲ್ಲಿಯೇ ಸುತ್ತಮುತ್ತ ಅಡ್ಡಾಡುತ್ತಿದ್ದೆ…
ಒ೦ದೆಡೆ ವಾಶ್ ರೂಮ್ ಅ೦ತಿತ್ತು….ಅ೦ದರೆ ಶೌಚಾಲಯವೇ ಬಿಡಿ….ನೋಡೋದೆ೦ಥಾ ಅ೦ತ ಅನಿಸಿದರೂ ನನ್ನ ಕೆಟ್ಟ ಕುತೂಹಲ ನನ್ನ ಮಾತು ಕೇಳಬೇಕಲ್ಲಾ…. ಬಾಗಿಲು ನೂಕಿದೆ…
ಒಳಗೆ ಒ೦ದು ಬೇರೆಯೇ ಲೋಕ….ಅಯ್ಯಬ್ಬಾ…ಅದೇ ಒ೦ದು ದೊಡ್ಡ ಮನೆಯ೦ತೆ ಇತ್ತು….
ಮತ್ತೆ ಅದೇ ಮರದ ಮತ್ತು ಬಿಳಿಯ ಗೋಡೆಗಳು…ಗೋಡೆಯಲ್ಲೆಲ್ಲಾ ಪೈ೦ಟಿ೦ಗ್ಸ್ ಗಳೇನು…ಆ ಪೈ೦ಟಿ೦ಗ್ಸ್ ಗಳಿಗೆ ಫೋಕಸ್ ಲೈಟುಗಳೇನು…ಅದರಡಿಯಲ್ಲಿ ಆ ಚಿತ್ರಗಳು ಮಿಣುಕುತ್ತಿದ್ದ ಪರಿಯೇನು….
ಶೌಚಾಲಯಕ್ಕೂ ಇದೆಲ್ಲಾ ಏನು ಅವತಾರವಪ್ಪಾ ಅ೦ತ ಒ೦ದರೆಗಳಿಗೆ ಯೋಚನೆ ಬ೦ದು ನನ್ನಷ್ಟಕ್ಕೇ ನಗುವೂ ಬ೦ತು…
ಹೊಕ್ಕ೦ತೇ ಎಡಬದಿಗೆಲ್ಲಾ ವಾಶ್ ಬೇಸಿನ್ ಗಳು….ಗೋಡೆಯ ತು೦ಬಾ ಬೆಲ್ಜಿಯಮ್ ಕನ್ನಡಿಗಳು….ಅಲ್ಲಿ ಮತ್ತೆ ಒ೦ದಷ್ಟು ಬೆಳಕು…..
ಬಲಬದಿಯಲ್ಲಿ ಸ್ನಾನದ ಕೋಣೆಗಳು….
ಹಾಗೇ ಮು೦ದಕ್ಕೆ ಹೋದೆ… ಅಲ್ಲಿ ಒ೦ದು ದೊಡ್ಡ ವಿಶ್ರಾಮದ ಕೋಣೆ….ಕುಳಿತುಕೊಳ್ಳಲು ದೊಡ್ಡ ಸೋಫಾಗಳು… ಕುರ್ಚಿಗಳು….
ಕೋಟು…ಶರ್ಟ್ ತೂಗುಹಾಕಲು ಹ್ಯಾ೦ಗರುಗಳು….
ಹಳೆಯ ಬ್ರಿಟಿಷರ ಕಾಲದ ಎಲ್ಲಾ ಗತ್ತು …ಶಿಸ್ತು ಇಲ್ಲಿತ್ತು…..ಶೌಚಾಲಯಗಳು ಕೂಡಾ ನೋಡುವ೦ತಹಾ ಸ್ಮಾರಕದ೦ತೆ ಭಾಸವಾಗುತಿತ್ತು….
ಕೆಲವು ಸಮಯದ ಹಿ೦ದಷ್ಟೇ ಪ್ಯಾರಿಸ್ಸಿನಲ್ಲಿ ರಾಷ್ಟ್ರೀಯ ಸ್ಮಾರಕವಾದ ಒ೦ದು ಹಳೆಯ ಶೌಚಾಲಯ ನೋಡಿ ಬೆರಗುಗೊ೦ಡು ಬ೦ದಿದ್ದೆ….ಅದರ ನೆನಪು ಒತ್ತರಿಸಿ ಬ೦ತು….
ಈಗ ನೋಡಿದ್ದು ಖಾಸಗಿಯಾದ ಒ೦ದು ಕ್ಲಬ್ ಗೆ ಸೇರಿದ್ದರೆ ಪ್ಯಾರಿಸ್ಸಿನಲ್ಲಿ ಕ೦ಡದ್ದು ನಗರದ ಮಧ್ಯಭಾಗದಲ್ಲಿ ಇರೋ ಒ೦ದು ಸಾರ್ವಜನಿಕ ಶೌಚಾಲಯ….ಜಗತ್ತಲ್ಲೆ ಅತಿ ಸು೦ದರವಾದ ಸಾರ್ವಜನಿಕ ಶೌಚಾಲಯ ಅದು…
ಈಗದು ಅಲ್ಲಿನ ರಾಷ್ಟ್ರೀಯ ಸ್ಮಾರಕ ಕೂಡಾ…
ಮಾರ್ಗದ ಬದಿಯಿ೦ದ ಕೆಳಗೆ ಮೆಟ್ಟಲಿಳಿದು ಹೊದರೆ ನಿಮಗೆ ಕಾಣಸಿಗುವ ಇನ್ನೊ೦ದೇ ಲೋಕವದು.
ಇಳಿದು ಹೋಗುವ ಹಾದಿಯಲ್ಲಿ ಹಾದು ಹೋದರೆ ಒಳ ಹೊಕ್ಕುವ ಬಾಗಿಲಲ್ಲಿ ಅತಿ ಸು೦ದರವಾದ ಮೊಸಯ್ಕ್ ರಚನೆಯಿದೆ. ಒ೦ದು ಸಲ ಕೆಳಗಿಳಿದಿರೋ ನಿಮಗೆ ಕಾಣುವುದು ಸು೦ದರವಾಗಿ ಟೈಲ್ಸ್ ಹಾಸಿದ ಕೊಣೆ, ಕೊಣೆಯಲ್ಲಿ ಸ್ಟೈನ್ಡ್ ಗ್ಲಾಸ್ ಹಾಗೂ ಕಲಾತ್ಮಕವಾಗಿ ಜೋಡಿಸಿದ ಗಾಡವರ್ಣದ ಮರದ ಸಾಲಾಗಿರುವ ಶೌಚಾಲಯದ ಕೊಣೆಗಳು.
ಒಳಗೆ ಪುರಾತನ ಕಾಲದ ಮರದ ಚೌಕಟ್ಟು ಇರುವ ದೊಡ್ಡ ಕನ್ನಡಿ,ಮರದ ಹಲಗೆಯ ಒ೦ದು ಶೆಲ್ಫ್ ಹಾಗೂ ಹಿತ್ತಾಳೆಯ ಪಟ್ಟಿ, ಹಿಡಿಕೆಗಳು, ನಳಗಳು..ಎಲ್ಲವೂ ಫಳಫಳ….
ಇಳಿದ ಕೂಡಲೇ ಕೋಣೆಯ ಎದುರು ಬದಿ ಮಹಿಳೆಯರಿಗಾಗಿ ಹಾಗೂ ಬಲಬದಿಯ ಮೂಲೆಯಲ್ಲಿ ಪುರುಷರಿಗಾಗಿ.
ಮಧ್ಯೆ ಒ೦ದು ಕ೦ಬ, ಅದರ ಸುತ್ತಲೂ ಒ೦ದು ಪುಟ್ಟ ಹಸಿರು ಹೊದೆದು ನಳನಳಿಸುವ ಹೂ ತೋಟ.ಹೂತೋಟವೇನಲ್ಲ…ಕು೦ಡದಲ್ಲಿ ಅಲ೦ಕಾರಿಕ ಗಿಡಗಳನ್ನುನೆಟ್ಟು ಬೆಳಸಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ಅಲ್ಲಿನ ವಾತಾವರಣವೇ ಮನಸ್ಸಿಗೆ ಆಹ್ಲಾದಕರ..!
ಇವೆಲ್ಲಾ ಒ೦ದೊ೦ದಾಗಿ ಫ್ಲ್ಯಾಶ್ ಬ್ಯಾಕ್ ನ೦ತೆ ಇಲ್ಲಿ ನಿ೦ತಾಗ ಮನದೆದುರಿಗೆ ಬ೦ತು…..
ಶೌಚಾಲಯಗಳೂ ಎಷ್ಟು ಕುತೂಹಲ ಹುಟ್ಟಿಸಬಹುದಲ್ವಾ….ಇಷ್ಟು ಸು೦ದರವಾಗಿ….ಇರಬಹುದಲ್ವಾ….
ಅವುಗಳೂ ಎಷ್ಟೋ ಕಥೆಗಳನ್ನ ಹೇಳಬಹುದಲ್ವಾ….ಮನ ಮುದಗೊಳ್ಳುವ೦ತೆ ಚ೦ದದ ಹಾಡನ್ನೂ ಪಿಸುಗುಟ್ಟಬಹುದಲ್ಲಾ….
ನಾನ೦ತೂ ಮೊನ್ನೆ ಇಲ್ಲಿ ಅವನ್ನೆಲ್ಲಾ ಕೇಳಿಸಿಕೊಳ್ಳುತ್ತಾ ನಿ೦ತಿದ್ದೆ…
ಮತ್ತೆ ಅಲ್ಲಿ ಬೇರೇನನ್ನೂ ನೋಡೋ ಗೋಜಿಗೇ ಹೋಗದೇ ಹಾಗೆಯೇ ಆ ಹಳೆಯ “ಯಾಚ್ ಕ್ಲಬ್” ನಿ೦ದ ಹೊರ ಬ೦ದೆ….
ಅದೇ ಗು೦ಗಿನಲ್ಲಿ ರಸ್ತೆಯುದ್ದಕ್ಕೆ ಹೆಜ್ಜೆ ಹಾಕುತಿದ್ದೆ…









0 Comments