ಅನುಭಾವಿ ಬಂಡುಕೋರರ ಸಾಹಚರ್ಯದಲ್ಲಿ…

ವಿ ಎಚ್ ಎಸ್ ಶಿವಪ್ರಕಾಶ್ ಅವರು ೧೯೯೦ರಲ್ಲಿ ಪ್ರಕಟವಾದ ತಮ್ಮ “ಅಣುಕ್ಷಣ ಚರಿತೆ” ಕವನ ಸಂಕಲನಕ್ಕೆ ಪ್ರಾಸ್ತಾವಿಕವಾಗಿ ಬರೆದ “ಬರೆಯಲಾಗದ ಸ್ವಕೀಯ ಚರಿತ್ರೆ ಒಂದು ಚೂರು” ಅನೇಕ ಕಾರಣಗಳಿಗಾಗಿ ಗಮನೀಯ. ಅದರ ಕೆಲವು ಸಾಲುಗಳು.

*

shivaprakash.jpg

ಪನಂಬಿಕೆಯನ್ನೇ ಸ್ವಯಂಪೂರ್ಣವಾದ ಗುರಿಯಾಗಿಸಿಕೊಂಡ “ನವ್ಯ” ಪ್ರವೃತ್ತಿ ಭೀಕರವಾದುದು. ಇಂಥ ಮನೋಧರ್ಮ ಯಾವುದೇ ರೀತಿಯ ತಾದಾತ್ಮ್ಯಕ್ಕೆ ವ್ಯತಿರಿಕ್ತವಾದುದು. ಆದರೆ ಆಗ ಅದೇ ಅಂದಿನ ಕನ್ನಡ ಕವಿತೆಯಲ್ಲಿ ಸ್ಥಾಯಿಯಾಗಿತ್ತು. ಆಗಿನ ಬಹುತೇಕ ಕವಿತೆಗಳಲ್ಲಿ ಪ್ರೇಮವಿರಲಿಲ್ಲ; ಬರೀ ಕಾಮವಿತ್ತು. ಜವಾಬ್ದಾರಿಯುತವಾದ ವಿಮರ್ಶೆ ಇರಲಿಲ್ಲ; ಬರೀ ಅಣಕವಿತ್ತು. ಅಲ್ಲಿಯ ತಲೆಕೆಳಗಾದ ಮೌಲ್ಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಎಂದರೆ ತನ್ನಲ್ಲಿ ಮತ್ತು ಬೇರೆಯವರಲ್ಲಿ ಹೊಲಸು ಮತ್ತು ಇಬ್ಬಂದಿತನವನ್ನು ಹುಡುಕುವುದಾಗಿತ್ತು.

ಇದನ್ನೆಲ್ಲ ನೋಡಿದ ಮೇಲೆ ಮನುಕುಲವನ್ನು ಶತಮಾನಗಳ ಕಾಲ ಕಾಡಿದ್ದ ಸಾಮೂಹಿಕ ನಂಬಿಕೆಗಳನ್ನು ಧರ್ಮಗಳನ್ನು ಅನ್ವೇಷಿಸಬೇಕೆಂಬ ಬಯಕೆ ನನ್ನಲ್ಲಿ ಹುಟ್ಟಿಕೊಂಡಿತು. ಚಿಕ್ಕಂದಿನಿಂದ ನನಗೆ ಧಾರ್ಮಿಕ ವ್ಯಕ್ತಿಗಳು, ವಾತಾವರಣ ಎಂದರೆ ಮುಜುಗರವಾಗುತ್ತಿತ್ತು. ಆದರೆ ಧರ್ಮವಿರೋಧಿಗಳು ಅನೇಕ ಸಲ ಧಾರ್ಮಿಕ ವ್ಯಕ್ತಿಗಳಷ್ಟೇ ಅಪ್ರಾಮಾಣಿಕರೂ ಢಾಂಭಿಕರೂ ಆಗಬಲ್ಲರೆಂದು ಗೊತ್ತಿತ್ತು. ನನಗನ್ನಿಸುತ್ತಿತ್ತು, ಈ ಧರ್ಮಗಳ ಮೂಲ ಸೆಲೆಯಲ್ಲಿ ನಿರ್ಮಲ ಜಲವಿರಬಹುದೆಂದು.

ಆಗಲೇ ನಾನು ಹೆಚ್ಚು ಕಡಿಮೆ ಬೌದ್ಧ ಧರ್ಮಕ್ಕೆ ಪರಿವರ್ತನೆಯಾದದ್ದು. ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಅದು ನನ್ನನ್ನು ಬೇರೆ ಬೇರೆ ಪ್ರಮಾಣದಲ್ಲಿ ಕಾಡಿತ್ತು. ಸವಣರಿಗೆ ಮಾತ್ರ ಯೋಗ್ಯವಾದ ಹೀನಾಯಾನದ ಬಗ್ಗೆ ಕುತೂಹಲ ಬಹಳ ದಿವಸ ಉಳಿಯಲಿಲ್ಲ. ವಜ್ರಾಯನ ಮತ್ತು ಝೆನ್ ಪಂಥಗಳ ಬೆನ್ನು ಹತ್ತಿದೆ. ಇಂಥ ತಡಕಾಟಗಳ ಮಧ್ಯೆ ನನ್ನ ಮೊದಲ ಮಹತ್ವಾಕಾಂಕ್ಷೆಯ ಕವನ “ಮಿಲರೇಪ” ರಚನೆಯಾಯಿತು.

ಹೆಚ್ಚು ಕಡಿಮೆ ಇದೇ ಕಾಲಘಟ್ಟದಲ್ಲಿ ಮಾರ್ಕ್ಸ್ ವಾದದ ಕಡೆಗೆ ಮನಸ್ಸು ವಾಲಿತು. ಧರ್ಮದ ಅನುಭವಗಳನ್ನು ಮಾರ್ಕ್ಸ್ ವಾದದ ನೆಲೆಯಲ್ಲಿ ಪರೀಕ್ಷಿಸುವ ಮತ್ತು ಮಾರ್ಕ್ಸ್ ನ ವಾದದಲ್ಲಿ ಅಂತರ್ಗತವಾಗಿರುವ ಪವಿತ್ರತೆಯ ಅಂಶಗಳನ್ನು ಅನ್ವೇಷಿಸುವ ವಿಚಿತ್ರ ಪ್ರವೃತ್ತಿಯೊಂದು ಶುರುವಾಯಿತು. ಈ ಥರದ ಮುಖಾಬಿಲೆಯಿಂದಲೇ ಸಿಂಗಿರಾಜ, ಮರುಳಶಂಕರ ಮತ್ತು ನಾಗಲಿಂಗನನ್ನು ಕೇಂದ್ರವಾಗಿಟ್ಟುಕೊಂಡ ಕವಿತೆಗಳನ್ನು ಬರೆದೆ.

ಬರಬರುತ್ತಾ ನನ್ನ ಮತ್ತು ಆಗಿನ ಪ್ರಚಲಿತ ಕವಿಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಯಿತು. ಆ ನನ್ನ ಪೂರ್ವಜರು ಎಲ್ಲಾ ಥರದ ಪವಿತ್ರತೆಯನ್ನೂ ತಿರಸ್ಕರಿಸಿದ್ದರು. ನಾನು ಹೊಸ ಪವಿತ್ರತೆಯ ಹುಡುಕಾಟದಲ್ಲಿದ್ದೆ.

ಕನ್ನಡ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದ ಅನುಭಾವವನ್ನು ನನ್ನ ಕಾವ್ಯದೊಳಕ್ಕೆ ತುಂಬಿಕೊಳ್ಳಲು ಯತ್ನಿಸುತ್ತಿರುವಾಗಲೇ ಕನ್ನಡೇತರ ಭಾರತೀಯ ಸಂಸ್ಕೃತಿಯಲ್ಲಿ ಬೆರೆತಿದ್ದ ಅನುಭಾವಿ ಪಂಥಗಳು ನನ್ನನ್ನು ಕೆಣಕತೊಡಗಿದವು. ಮುಖ್ಯವಾಗಿ ನಾಥಸಿದ್ಧ ಪಂಥದ ಬಗ್ಗೆ ಹೆಚ್ಚಿನ ಕುತೂಹಲ ಉಂಟಾಯಿತು. ಒಟ್ಟಿನಲ್ಲಿ ನನ್ನ ಒಲವು ಇದ್ದದ್ದು ಭಾರತದ ವೈದಿಕೇತರ ಪರಂಪರೆಗಳ ಕಡೆ. ಆಮೇಲೆ ಇದೇ ತೆರನ ಪ್ರವೃತ್ತಿಗಳು ಬೇರೆ ನಾಡು ನುಡಿ ನಡೆಗಳಲ್ಲಿ ಹೇಗಿವೆ ನೋಡಬೇಕೆಂದು ಸೂಫಿ ಪಂಥದ ಬಗ್ಗೆ ಆಸಕ್ತಿ ತಾಳಿದೆ.

ಈ ನಡುವೆ ನಾಟಕ ರಚನೆ ನನಗೆ ಅನಿವಾರ್ಯವಾಗಿತ್ತು. ನಾನು ಈಗಾಗಲೇ ಭಾರತದ ಹಾಗೂ ಜಗತ್ತಿನ ಅನುಭಾವಿ ಬಂಡುಕೋರರ ಜೊತೆಗೆ ನನ್ನನ್ನು ಗುರುತಿಸಿಕೊಳ್ಳುವ ಧೈರ್ಯ ಮಾಡಿದ್ದೆ. ಅವರೆಲ್ಲರೂ ಪುಸ್ತಕ ಜ್ಞಾನವನ್ನು ತಿರಸ್ಕರಿಸಿದ್ದರು. ತಮ್ಮ ಹಿಂದಿನ ಪವಿತ್ರ ಗ್ರಂಥಗಳ ಜೊತೆಗಿನ ಅವರ ಸಂಬಂಧ ಮತ್ತು ನನ್ನ ಕಾಲದ “ಅಪವಿತ್ರ” ಕಾವ್ಯದ ಜೊತೆಗಿನ ನನ್ನ ಸಂಬಂಧ ಒಂದೇ ಥರದ್ದು ಅನ್ನಿಸಿತು. ಕಾವ್ಯವನ್ನು ಬರೆಯುವುದಕ್ಕಿಂತ ಆಡುವುದು ಮುಖ್ಯವಾಗಿ ಕಂಡಿತು.   

ವಿರೋಧಾಭಾಸದ ಗೊಂದಲಗಳ ಈ ಶತಮಾನದ ತುತ್ತ ತುದಿಯಲ್ಲಿ ಯಾಂತ್ರಿಕ ಮಾದರಿಗಳೆಲ್ಲ ಕುಸಿಯುತ್ತಿವೆ. ಜಡವಾದ ದೃಷ್ಟಿಕೋನಗಳು ಕಿಲುಬುಗಟ್ಟುತ್ತಿವೆ. ವಿಜ್ಞಾನ ರಾಜಕೀಯಗಳ ಈಚಿನ ಕೆಲವು ಬೆಳವಣಿಗೆಗಳು ನಾನು ಅರಸುತ್ತಿರುವ ಮೌಲ್ಯಗಳ ಬಗೆಗಿನ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತಿವೆ.

ಅಲ್ಲಮನೆಂದಂತೆ “ಆಯುಷ್ಯವು ಹಿರಿದು, ಭಾಷೆ ಕಿರಿದು”.

‍ಲೇಖಕರು avadhi

October 14, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: