ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅನಾವರಣ’ದಲ್ಲಿ ಮತ್ತೊಬ್ಬ ಮಾಯಿ

ಮತ್ತೊಬ್ಬ ಮಾಯಿ

ಸಾಹಿತ್ಯ ತತ್ವ ಮತ್ತು ಜೀವನ ತತ್ವ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್ ರೂಮಿನಲ್ಲಿ ಕುಳಿತು ಒಬ್ಬರನೊಬ್ಬರು ಕೆಣಕುತ್ತ, ಗೇಲಿ ಮಾಡಿಕೊಳ್ಳುತ್ತ, ಟೀಕಿಸುತ್ತಾರೆ ಹಾಗೂ ಪ್ರೀತಿಸುತ್ತಾ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿಕೊಡುತ್ತದೆ. ಇಂಗ್ಲಿಷ್ ಅಧ್ಯಾಪಕನೂ ಕತೆಗಾರನೂ ಆದ ಮೂರ್ತಿ ಒಬ್ಬನಾದರೆ, ಕನ್ನಡ ಅಧ್ಯಾಪಕನೂ ತಾನು ಹೇಳುತ್ತಿರುವುದು ಕತೆಯಲ್ಲ: ಜೀವನ ಎಂದು ವಾದಿಸುವವನೂ ಆದ ಪಾಂಡುರಂಗ ಡಿಗಸ್ಕರ್ ಇನ್ನೊಬ್ಬ. ಕುಣಕಾಲ ಹುಡುಗಿಯ ಜೀವಂತ ಸಂಗತಿಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ಡಿಗಸ್ಕರ್ ಭಾಷೆ ಜವಾರಿಯದ್ದಾಗಿದೆ.

ಹಿಂದುಸ್ಥಾನಿ ಭಾಷೆಯಲ್ಲಿ ದಾಸ್ತಾಂಗೋಯಿ ಎಂಬ ಕತೆ ಹೇಳುವ ಪರಂಪರೆಯೊಂದಿದೆ ಆ ಮಾದರಿಯಲ್ಲಿ ಇಲ್ಲಿನ ಎರಡು ಪಾತ್ರಗಳು ನಿರೂಪಣಾ ಸರಣಿಯನ್ನು ರಂಗದ ಮೇಲೆ ಸೃಷ್ಟಿಸುತ್ತಾರೆ. ಜೀವನದ ಸಂಗತಿಯೊಂದನ್ನು ಮನಮುಟ್ಟುವಂತೆ ಭಾಷೆಯ ಮೂಲಕ ಎದ್ಯಾಗಿನ ದುಃಖ ಮತ್ತು ಆನಂದದ ಅನುಭವಗಳನ್ನು ಕಟ್ಟಿಕೊಡುವಲ್ಲಿ ಡಿಗಸ್ಕರ್ ಪ್ರಯತ್ನಪಡುತ್ತಾರೆ.

ಲಕ್ಷ್ಮಿ ಎಂಬ ಹುಡುಗಿ ಕುಣಕಾಲ ಹುಡುಗಿಯಾಗಿ ಮಾವಿನಗಿಡ ವಶಪಡಿಸಿಕೊಳ್ಳುವ ಝಾನ್ಸಿರಾಣಿಯಾಗಿ, ಖೋಖೋ ಆಟದ ರೂವಾರಿಯಾಗಿ ಮಿಂಚಿನಂಥ ಸಂಚಾರದ ಶಕ್ತಿಯುಳ್ಳ ಹುಡುಗಿ ಕೊನೆಕೊನೆಗೆ ತೀರ ಒಬ್ಬೊಂಟಿತನವನ್ನು ಆಶ್ರಯಿಸಿ ವಾಮಾಚಾರದ ಸಂಗತಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ವಿಚಿತ್ರವಾದ ಯಾತನೆಯನ್ನು ಅನುಭವಿಸುತ್ತಾಳೆ. ಡಿಗಸ್ಕರ್ ನಡೆದ ಸಂಗತಿಯನ್ನು ಹೇಳುವಾಗ ಮೂರ್ತಿ ತನ್ನ ಯಾವತ್ತಿನ ಕಥನದ ಫಾರ್ಮುಲಾಕ್ಕೆ ಹೊಂದಿಸಿ ನೋಡುವುದು, ಡಿಗಸಕರ್ ತಮ್ಮ ಜವಾರಿ ಭಾಷೆಯಲ್ಲಿ ವಿವರಗಳನ್ನು ಕಟ್ಟಿಕೊಡುತ್ತಾ ಈ ಎರಡು ಪಾತ್ರಗಳು ಭಿನ್ನ ಎನಿಸಿದರೂ ಕಡೆ ಗಳಿಗೆಯಲ್ಲಿ ಒಂದೇಯಾಗಿ ಅಲ್ಲಿನ ಸಂಗತಿಯನ್ನು ವಿವರಿಸುವುದು ಗಾಢವಾದ ಅನುಭವ ಕಟ್ಟಿಕೊಡುತ್ತದೆ.

ಕುಣಕಾಲಿನ ಲಕ್ಷ್ಮಿ ಒಣಗಿದ ಅಂಗಾಲುಗಳನ್ನು ಮೇಲೆ ಮಾಡಿಕೊಂಡು ಟಿಟ್ಟಿಭಾಸನದ ಭಂಗಿಯಲ್ಲಿ ತಲೆಕೆಳಗಾಗುವ ಸ್ಥಿತಿ ಆರ್ದ್ರ ಸನ್ನಿವೇಶವೊಂದನ್ನು ಕಟ್ಟಿಕೊಡುತ್ತದೆ. ಈ ನಾಟಕದ ಎರಡು ಪಾತ್ರಗಳು ದಾಸ್ತಾಂಗೋಯಿ ಎಂಬ ಹಿಂದೂಸ್ತಾನಿ ಭಾಷೆಯಲ್ಲಿನ ಕತೆ ಹೇಳುವ ಕಲಾಪ್ರಕಾರದಲ್ಲಿ ಒಟ್ಟು ರಂಗಕೃತಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವ ಮಾದರಿ ಭಿನ್ನವಾಗಿದೆ. ನಮ್ಮ ಜನಪದರು ಅನೇಕ ಮಾದರಿಯಲ್ಲಿ ಕತೆ ಹೇಳುವ ಕ್ರಮಗಳನ್ನು ಹುಟ್ಟುಹಾಕಿದ್ದಾರೆ. ಅದೆಲ್ಲದಕಿಂತ ಭೀನ್ನವಾದ ಮಾದರಿ ದಸ್ತಾಂಗೋಯಿ ಯದ್ದಾಗಿದೆ. ಅಲ್ಲಿ ವಾಚಿಕಾಭಿನಯಕ್ಕೆ ವಿಶೇಷ ಒತ್ತು ಇರುವುದರಿಂದ ಮತ್ತೊಬ್ಬ ಮಾಯಿ ನಾಟಕದ ಪಾತ್ರಗಳು ಆ ಮಾದರಿಯ ಕಥನಕೌಶಲವನ್ನು ನೆನಪಿಸುತ್ತವೆ.

ನಾಟಕ –ಮತ್ತೊಬ್ಬ ಮಾಯಿ
ರಚನೆ- ರಾಘವೇಂದ್ರ ಪಾಟೀಲ
ನಿರ್ದೇಶನ-ಮಹಾದೇವ ಹಡಪದ
ರಂಗದ ಮೇಲೆ- ಜಗದೀಶ ನೆಗಳೂರು, ನೀಲಾ ಜೇವರ್ಗಿ ಮತ್ತು ಮಹಾದೇವ ಹಡಪದ

‍ಲೇಖಕರು avadhi

3 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading