ಆದುದಾದುದು, ದೇವಿ,
ಆದುದಕೆ ನೂರ್ಮಡಿಯ ಘೋರಮಂ ಇನ್ನು ಆಗಲುರ್ಕುಮ್.
ಅದನ್, ನೀನಿಚ್ಛಿಸಲ್, ನಿಲಿಸಲ್ ಅಸದಳಮಲ್ತು.
ಕೇಳ್, ತಾಯಿ, ಮುನ್ನಡೆದುದು ಪೇಳ್ವೆನ್ ಅರಮನೆಯ ಕಥನಮಂ.
ತಮ್ಮನ ಕಳೇಬರಕೆ ಕೊನೆಯ ಸಂಸ್ಕಾರಮಂ
ಕಡಲ ತೀರದೊಳೆಸಗಿ, ಭಸ್ಮಾವಶೇಷಮಂ
ರತ್ನಪಾತ್ರೆಯೊಳಿಟ್ಟು ತಂದು ಗೋಳಿಡುತಿರ್ದ
ದೊಡ್ಡಯ್ಯನಂ ಕಂಡು ನನ್ನಣ್ಣನ್ ಇಂದ್ರಜಿತು, ಮೇಘನಾದಂ,
ಮಹಾ ರುದ್ರ ರೋಷವನಾಂತು ಸಂತಯ್ಸಿದನು ತನ್ನ ತಂದೆಯಂ;
ಪೂಣ್ದನ್ ಭಯಂಕರ ಪ್ರತಿಜ್ಞೆಯಂ:?
ತ್ಯಜಿಸು ಸಂತಾಪಮಂ, ದೈತ್ಯಕುಲ ಚಕ್ರೇಶ;
ಚಿಕ್ಕಯ್ಯನಸುವಿಂಗೆ ನೂರ್ಮಡಿ ಉಸಿರ್ಗಳಂ
ಬಲಿಗೊಳ್ವೆನ್ ಎನ್ನೀ ಪ್ರತಾಪ ಭೂತಕ್ಕೆ.
ರಿಪುಬಲವನ್ ಅಂತಕನೂರ್ಗೆ ಬಿರ್ದ್ದೆಸಗುವೆನ್; ತಪ್ಪೆನ್
ಎನ್ನಾಣೆ, ನಿನ್ನಾಣೆ, ತೀರ್ದಯ್ಯನಾಣೆ,
ಪೆತ್ತಬ್ಬೆ ಮೇಣ್ ಕುಲದೈವ ಆ ಶಿವನಾಣೆ!
ಕೈಕೊಳ್ವೆನೀಗಳೆ ನಿಕುಂಭಿಲಾ ಯಾಗಮಂ,
ಮೃತ್ಯುಗರ್ಭಂ ತರತರನೆ ನಡುಗೆ
ಮಾರಣ ಮಹಾಶಕ್ತಿಗಳನೊಡನೆ ಸೃಜಿಸುವೆನ್.
ನರ ವಾನರರ ಸೇನೆ ನಿರ್ನಾಮಮಪ್ಪಂತೆ ಗೆಯ್ದು
ಅವರ ನೆತ್ತರಿಂ ತಣಿಯೆರೆವೆನ್
ಆ ಪೂಜ್ಯ ಕುಂಭಕರ್ಣ ಪ್ರೇತಂ
ಎಮ್ಮ ಪಿತೃಲೋಕದೊಳ್ ಸಂಪ್ರೀತಮಪ್ಪವೋಲ್!
ಇಂತತಿ ಕಠೋರಮಂ ಸೂರುಳಂ ತೊಟ್ಟು,
ನಡೆದನ್ ನಿಕುಂಭಿಲೆವೆಸರ ನ್ಯಗ್ರೋಧಮೂಲದಾ
ಯಾಗಶಾಲೆಯ ಮಹಾ ಮಂತ್ರಕರ್ಮದ ತಂತ್ರಮಂಟಪಕೆ.
ಆ ನನ್ನ ಅಣ್ಣನ್ ಅತಿ ಶಕ್ತನ್;
ಇಂದ್ರನ ಗೆಲ್ದು, ಬ್ರಹ್ಮನಿಂ ನಾನಾ ವರಂಗಳು ಪಡೆದು,
ಮಾಯಾಬಲದಿ ದೇವದಾನವ ಭಯಂಕರನಾಗಿಹನು, ದೇವಿ.
ನಿರ್ವಿಘ್ನಮ್ ಆ ಯಾಗಮಂ ಮುಗಿಸಿದಾತನಂ
ಸೋಲಿಸುವರೊಳರೆ ಭುವನತ್ರಯದ ವೀರರಲಿ?
ವಿಘ್ನಮಿಲ್ಲದೆ ಯಾಗಮದು ಸಿದ್ಧಿಯಾಗಲ್,
ಅಜೇಯನಾತನ್; ಅವಾರ್ಯವೀರ್ಯನ್;
ಸುರಾಸುರರ್ ನೆರೆಯಲ್, ತೃಣೀಕರಿಸುವನ್!
ಕಪಿಧ್ವಜರೊಂದು ಪಾಡೆ?
ಆ ಬಳಿಕಲಾಂ ನೆನೆಯಲಮ್ಮೆನ್, ತಾಯಿ,
ಇರ್ಕೆಲದೊಳಪ್ಪ ಹರಣದ ಹತ್ಯೆಯಂ?
ಪೆಣ್ ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು,
ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು ಪಣೆಪೆಣೆದು ನಿಲ್ಲಲ್?
ಮಹೀಯಸೀ, ನೀನೊಪ್ಪೆ ನೆರಮಪ್ಪೆನಾಂ ನಿನಗೆ.
ನೆರಮಪ್ಪಳಾಂ ಬಲ್ಲೆನ್, ದೊಡ್ಡಮ್ಮನಾ ಮಂಡೋದರೀ ದೇವಿ,
ತಾರಾಕ್ಷಿ, ಮೇಘನಾದನ ಪತ್ನಿ, ನನ್ನತ್ತಿಗೆಯುಮಂತೆ ನೆರಮಪ್ಪಳೆಮಗೆ.
ಕೇಳ್, ನಿನ್ನನಿಲ್ಲಿಗೆ ತರಲ್ ಸಂಚು ಹೂಡಿದ
ಚಂದ್ರನಖಿಯುಮೀಗಳ್ ಬೇರೆ ಬಗೆಯಾಗಿಹಳ್.
ಮೇಣ್, ದಶಗ್ರೀವನಾತ್ಮಮುಂ, ತನ್ನ ಕಸುಗಾಯ್ತನದೊಗರ್ ಕಳೆದು,
ಪಣ್ತನಕೆ ತಿರುಗುತಿರ್ಪನೊಂದು ಸೂಚನೆ ತೋರುತಿಹುದೆನಗೆ.
ಅದೊಡೆ ಮಹಾಸತ್ತ್ವನ್ ಆತನ್ ಅತ್ಯಭಿಮಾನಿ; ಪಿಂಜರಿವನಲ್ತು.
ತಾನೆಯೆ ಮುಂಬರಿವನಲ್ತು ತಡೆಯಲೀ ಕಾಳೆಗದ ಕೊಲೆಯಂ.
ಅಮರ್ಷಿ ತಾಂ ಕ್ಷಾತ್ರತೇಜಕೆ ಭಂಗ ಬರ್ಪಂದದಿಂದೆಂದುಂ ನಡೆವನಲ್ತು.
ಅನಲೆಯ ಈ ದೀರ್ಘ ಮಾತುಗಳಲ್ಲಿ, ತನ್ನವರ ಇತಿಮಿತಿಗಳನ್ನು ವಿವರಿಸಿದ್ದಾಳೆ. ತಮಗೆ ನೆರವಾಗುವವರ ಬಗ್ಗೆ ಮಾತನಾಡಿದ್ದಾಳೆ. ಕೊಲೆಗೆ ಹೇಸಿದ್ದಾಳೆ. ಅವಳು ‘ಪೆಣ್ ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು, ಕ್ರೋಧಮೂರ್ಛಿ, ಸರ್ವನಾಶಕೆ ಮಲೆತು ಪಣೆಪೆಣೆದು ನಿಲ್ಲಲ್?’ಎಂದು, ಹೆಣ್ಣು ಅಸಹಾಕಯಕಳಾಗಿ, ಯುದ್ಧೋನ್ಮತ್ತರಾದ ಗಂಡಸರು ನಡೆಸುವ ಕೊಲೆಗೆ ತಟಸ್ಥ ಸಾಕ್ಷಿಮಾತ್ರವಾಗಿರಬೇಕಾಗಿಲ್ಲ ಎಂದು ವೀರೋಚಿತ ಮಾತುಗಳನ್ನು ಆಡುತ್ತಾಳೆ. ರಾವಣನ ಮನಃಪರಿವರ್ತನದ ಸುಳಿವನ್ನು ಅವಳು ಅರಿತಿದ್ದಾಳೆ. ಅವಳದು ಬಾಲಭಾಷೆಯಲ್ಲ; ಏಕೆಂದರೆ, ಇಲ್ಲಿ ಆಕೆ, ಕವಿಯಕರ್ಮವನ್ನಾಂತಿದ್ದಾಳೆ. ಅವಳ ಮಾತು, ದೃಢನಿಲುವು ಓದುಗನನ್ನು ಮಾತ್ರವಲ್ಲ, ಅದಕ್ಕೆ ಸಾಕ್ಷಿಯಾಗಿರುವ ಸೀತೆಯನ್ನೂ ಅಚ್ಚರಿಯ ಕಡಲೊಳಗೆ ತಳ್ಳಿಬಿಟ್ಟಿವೆ ಎಂಬುದು ಮುಂದೆ ಸೀತೆಯಾಡುವ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

“ಪುಟ್ಟ ಹೃದಯದೊಳೆಂತು, ಇಂತಪ್ಪ ದಿಟ್ಟತನವಿರಿಸಿರ್ಪ?
ಪೇಳನಲೆ.
ಪದಿನಾರ್ ಬಸಂತಗಳ ಮುದ್ರೆಯಂ ತಳೆದಿರ್ಪ
ನಿನ್ನ ಮೆಯ್ ಪಿರಿಯುಸಿರ್ ಬೀಡು,
ಪೆರ್ಬಗೆಯ ಪೆರ್ಮಗೆ ತವರ್ ನಾಡು!…..
ನಾನಸ್ವತಂತ್ರಳ್, ಕುವರಿ,
ನಿನ್ನವರ್ ಮೇಣ್ ನೀನ್ ಸ್ವತಂತ್ರರ್,
ತಪೋದ್ಯೋಗಮೊಂದುಳಿಯೆ
ಮತ್ತಾವುದುಜ್ಜುಗಂ ತಗದೆನಗೆ…..
ಪರಸುವೆನ್ ನಿನ್ನನ್;
ಅದೆ ನಿನ್ನುದ್ಯಮಕೆ ನಾನೀವ ನೆರಂ.
ನಿನ್ನಾಸೆ ನಲ್ಲದು. ವಿಭೀಷಣ ಕುಮಾರಿ, ಅದು ಸಲ್ಗೆ!
ಅನಲೆಯ ಮಾತಿಗೆ ಅಚ್ಚರಿಪಟ್ಟ ಸೀತೆ, ತನ್ನ ಮಿತಿಯನ್ನೂ ಆಕೆಗೆ ಹೇಳುತ್ತಾಳೆ. ‘ಹರಕೆಯೊಂದೇ ನಾನು ನೀಡಬಹುದಾದುದು ನಿನ್ನ ಉದ್ಯಮಕ ಎಂದು ಮನದುಂಬಿ ಆಶಿರ್ವದಿಸುತ್ತಾಳೆ. ಸೀತೆಯ ಮಾತಿನಲ್ಲಿ ಇಣುಕುತ್ತಿದ್ದ ನಿರಾಶೆಯನ್ನು ಅನಲೆ ಗುರುತಿಸಿ ಹೀಗೆ ಹೇಳುತ್ತಾಳೆ:
“ತೊರೆ ನಿರಾಶೆಯಂ, ದೇವಿ.
ವಾರ್ತೆಯನ್ ಎನ್ನ ತಂದೆಗೆ
ಹಿರಣ್ಯಕೇಶಿಯ ಕೈಲಿ ಕಳುಹಿದೆನ್,
ಇಂದ್ರಜಿತು ಕೈಕೊಳ್ವ ಕ್ರತು ಮುಗಿವ ಮುನ್ನಮೆಯೆ,
ವಿಘ್ನಮಂ ತಂದೊಡ್ಡುವರ್ ದಿಟಂ,
ವಾನರ ಮಹಾ ಪ್ರಾಜ್ಞ ಸೇನಾನಿಗಳ್.
(ಆಗ ಸೀತೆ ಮುಗುಳ್ನಗುತ್ತಾ ಆ ಧೈರ್ಯಮ್ ಎನಗಿರ್ಕುಮ್ ಎನ್ನುತ್ತಾಳೆ.)
“ನೀನ್, ದೊಡ್ಡಯ್ಯನ್ ಇಂದು ಇಲ್ಲಿಗೈತರಲ್,
ನಮ್ಮಿದಿರ್ ತಾಯಾಗಿ ತೋರ್ಪವೊಲ್ ತೋರಿ,
ಕಂದಂಗೆಂತೊ ಅಂತೆ, ಹಿತವನೊರೆ ಸದ್ಬುದ್ಧಿಯಂ.
ನಿಚ್ಚಮುಂ ನಿನ್ನನೆಯೆ ನೆನೆದಾತನಾತ್ಮಕ್ಕೆ ನಿನ್ನೊಂದು ಪೊಳೆಯತೊಡಗಿದೆ ಮಹಿಮೆ.
ಮರುಗುವಂದದಿ ಮನಂ ಕರಗುವಂದದಿ ಹೃದಯ ಅವನಂತರಾತ್ಮಮಂ ಮಿಡಿದು ನುಡಿ,
ದೇವಿ, ಬೀರದ ಪೆರ್ಮ ಕನಿಕರಕೆ ಶರಣಪ್ಪವೋಲ್!
ಬಲ್ಲೆನ್ ಎನ್ನ ದೊಡ್ಡಯ್ಯನಂ ನಾನ್,
ದರ್ಪಕಾರಣಕೆ ಕೂರ್ಪನೆ ತೋರ್ಪನಪ್ಪೊಡಂ
ಕೂರ್ಮೆಗೆ ಮಣಿವ ಮೃದಲತೆ ಇರ್ಪು ದವನೆರ್ದೆಯ ಕರ್ಬುನಕೆ.
ಇನ್ನೆಗಂ ನಿನ್ನರೊಲ್ ಪೇರುಸಿರ ಪೆಣ್ಗಳಂ ಸಂಧಿಸಿದನ್ ಇಲ್ಲ
ಅದುವೆ ಕಾರಣವಾಯ್ತು ಲಂಕೇಶ್ವರನ ದುರ್ಗತಿಗೆ.
ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ! ”
ಅದ್ಭುತವಾದ ತಂತ್ರಗಾರಿಕೆಯನ್ನು ಅನಲೆ ಇಲ್ಲಿ ಮೆರೆದಿದ್ದಾಳೆ. ಅತ್ತ ಇಂದ್ರಜಿತುವಿನ ಯಾಗ ಅಪೂರ್ಣವಾಗುವಂತೆ ನೋಡಿಕೊಳ್ಳುವುದು, ಇತ್ತ ರಾವಣನು ಸೀತೆಯನ್ನು ನೋಡಲು ಬಂದಾಗ ಸೀತೆಯಿಂದ ಆತನ ಮನಃಪರಿವರ್ತನೆಗೆ ಯತ್ನಿಸುವುದು! ನಮ್ಮನ್ನು ತಾಯಿಯಾಗಿ ಪೊರೆದಂತೆ, ರಾವಣನನ್ನೂ ತಾಯಿಯಾಗಿ ಪೊರೆಯಬೇಕು, ಸೀತೆ. (ಮುಂದೆ ರಾವಣ ಕಂಡ ಕನಸ್ಸಿನಲ್ಲಿ, ಮಕ್ಕಳಾಗಿ ರೂಪಾಂತರಗೊಂಡ ರಾವಣ ಕುಂಭಕರ್ಣರಿಗೆ, ಸೀತೆ ತಾಯಾಗಿ ಬಂದು ಸಂತೈಸಿ ಹಾಲುಣಿಸುವ ಚಿತ್ರ ಬರುತ್ತದೆ. ಅನಲೆಯ ಅಭೀಪ್ಸೆ ಬೇರೊಂದು ರೀತಿಯಲ್ಲಿ ಕೈಗೂಡುತ್ತದೆ) ಅವನ ಅಂತರಾತ್ಮವನ್ನೇ ಮಿಡಿದು ನುಡಿಯಬೇಕಿದೆ ಸೀತೆ. ಇದು ಅನಲೆಯ ಆಸೆ; ಆದರೆ ದುರಾಸೆಯಲ್ಲ. ರಾವಣನ ಗುಣ ಆಕೆಗೆ ಗೊತ್ತು. ದರ್ಪದ ಕಾರಣದಿಂದ ಕಾಠಿಣ್ಯವನ್ನೇ ಹೊತ್ತವನಂತೆ ಕಾಣುವ ಆತನ ಹೃದಯವೂ ಮೃದಲತೆಯಂತೆ ಇದೆ. ಇದುವರೆಗೂ ಸೀತೆಯಂತಹ ಮಹಿಮಳನ್ನು ಆತ ಸಂಧಿಸದಿದ್ದುದೇ ಆತನ ಅವನತಿಗೆ ಕಾರಣವಾಗಿತ್ತು; ಆದರೆ ಇಂದು ಸೀತೆ ಹತ್ತಿರವೇ ಇದ್ದಾಳೆ. ಅದಕ್ಕೇ ಆತನಿಗೆ ಸುಗತಿ ದೂರವಿಲ್ಲ! ಇತ್ತ ಸೀತೆಗೆ ಹೇಗಾಗಿರಬೇಡ? ಆದರೆ ಸೀತೆ ಈಗ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲ ತಪವನ್ನೇ ಹೊತ್ತವಳಾಗಿದ್ದಾಳೆ ಎಂಬುದಕ್ಕೆ ಮುಂದಿನ ಅವಳ ಮಾತೇ ಸಾಕ್ಷಿ. ಅದಕ್ಕಿಂತ ಹೆಚ್ಚಾಗಿ, ಅನಲೆಯ ವಿಷಯದಲ್ಲಿ ಸೀತೆ ಕಠಿಣಳಾಗಲಾರಳು ಎಂಬುದೂ ಸತ್ಯ.
ಉಕುತಿಯ ದನಿಯ ನನ್ನಿಯ ದುರಂತಮಂ ಬಗೆಯದೆ ಆಡಿದ
ಮುಗುದೆಯನಲೆಯ ಮುಡಿಯ ನೇವರಿಸಿ,
ಪೆಗಲಿಂ ಜಗಳುತ ಇರ್ಕ್ಕೆಲದಿ
ಷೋಡಶ ವಸಂತ ವಕ್ಷವ ಸಿಂಗರಿಸಿ
ನೀಳ್ದ ನುಣ್ಪಿನ ಕರ್ಜಡೆಗಳಂ ಕರಾಗ್ರದಿಂದೆಳವಿ,
ರಾವಣಂ ಬಂದಾಗಳ್ ಎಂತು ತನ್ನಾತ್ಮಂ ಪ್ರಚೋದಿಪುದೊ
ಅಂತೆ ನಡೆವಂತೆ ಭಾಷೆಯನಿತ್ತು ಸಂತಯ್ಸಿದಳು ದೇವಿ.
ದೈತ್ಯಕುಲ ಕನ್ಯೆಯಂ ಪೆತ್ತಳೋಲೋವಿ.
ರಾಮ-ರಾವಣರ ಯುದ್ಧ ಅವರಿಬ್ಬರ ನಡುವೆ ಮಾತ್ರವೆ ನಡೆಯಿತು ಎಂಬುದು ಎಷ್ಟು ಸುಳ್ಳು! ಸೀತೆ, ಅನಲೆ, ತ್ರಿಜಟೆ, ಚಂದ್ರನಖಿ, ವಿಭೀಷಣ, ಮಂಡೋದರಿ, ತಾರಾಕ್ಷಿ – ಅವರೆಲ್ಲರ ಎದೆಯಲ್ಲಿ ನಡೆದದ್ದು ಯುದ್ಧವಲ್ಲದೆ ಮತ್ತೇನು?
(ಮುಂದುವರಿಯುವುದು)
’ಅವಧಿ’ ಅಂಗಳದಲ್ಲಿ ಅನಲೆ : ರಾಮ-ರಾವಣರ ಯುದ್ಧ ಅವರಿಬ್ಬರ ನಡುವೆ ಮಾತ್ರವೆ ನಡೆಯಲಿಲ್ಲ
ನಿಮಗೆ ಇವೂ ಇಷ್ಟವಾಗಬಹುದು…





0 Comments