ಪತ್ರಕರ್ತ ತುರುವನೂರು ಮಂಜುನಾಥ ಅವರ ನಾಲ್ಕನೆಯ ಕೃತಿ ‘ಮನಮಿಡಿತ’ ಪ್ರಕಟವಾಗಿದೆ.
ಮಂಜುನಾಥ್ ಅವರು ಬರೆದ ಲೇಖನಗಳ ಸಂಕಲನಕ್ಕೆ ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರು ಬರೆದ ಮುನ್ನುಡಿ ಇಲ್ಲಿದೆ-
ಮಿಡಿತ ಮುಖ್ಯವಾದರೆ ಮಿತಿಗಳು ಗೌಣ!

ಅನಂತ ಚಿನಿವಾರ
ಕೆಲವರ ಶಕ್ತಿ ಮಾತು.
ಇನ್ನು ಕೆಲವರದು ಬರವಣಿಗೆ.
ಕೆಲವರು ಮಾತಿಗೂ ಸೈ ಬರವಣಿಗೆಯಲ್ಲೂ ಜೈಜೈ!
ಆದರೆ ಕೆಲವರು ಮಾತ್ರ ಕೇವಲ ತಮ್ಮ ಯೋಚನೆಯಿಂದಲೇ ಶಕ್ತಿ ಸಂಚಯ ಮಾಡಿಕೊಂಡು ಯೋಚನೆಯಿಂದಲೇ ಹೋರಾಟ ರೂಪಿಸಿಕೊಂಡು, ಯೋಚನೆಯನ್ನೇ ಬದುಕು ಮಾಡಿಕೊಂಡು ಗೆದ್ದುಬಿಡುತ್ತಾರೆ.
ಈ ಕೊನೆಯ ಗುಂಪಿಗೆ ಸೇರಿದವರು, ಗೆಳೆಯ ತುರುವನೂರು ಮಂಜುನಾಥ್. ಅವರ ಮಾತು ಮೆದು (ಸಿಟ್ಟಿನಿಂದ ಭೋರ್ಗರೆಯುತ್ತಾ ಜಗಳವಾಡುವ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ!), ಬರವಣಿಗೆ ಅವರ ವೃತ್ತಿಬದುಕಿನ ಅನಿವಾರ್ಯ ಕರ್ಮ!
ಸಹಜವಾಗೇ, ಅವರ ಯೋಚನೆಯ ವಿಸ್ತಾರಕ್ಕೆ ತಕ್ಕ ಹಾಗೆ ಹರಡಿಕೊಳ್ಳಲು ಅವರ ಅಕ್ಷರಗಳು ಪಡಿಪಾಟಲು ಪಡುತ್ತವೆ. ಅದು ಅವರ ಬರವಣಿಗೆಗಳಲ್ಲಿ ಕಾಣುತ್ತದೆ! ಬಹುಶಃ, ಪ್ರತಿವಾರವೂ ಹೊಸಹೊಸದನ್ನು ಹುಡುಕುತ್ತಾ ನಿರ್ದಿಷ್ಟ ಕಾಲಮಿತಿಯೊಳಗೆ ಹೊಸಹೊಸದನ್ನು ಬರೆಯಹೊರಡುವ ಅವಸರ – ಮತ್ತು ಹಾಗೆ ಬರೆದು ಮುದ್ರಿಸಿದ್ದನ್ನು ಖುದ್ದು ತಾವೇ ಮಾರುಕಟ್ಟೆಗೆ ತಲುಪಿಸುವ ಒತ್ತಡವೇ – ಇದಕ್ಕೆ ಕಾರಣವಿರಬಹುದು.
ಪತ್ರಿಕೆ ನಡೆಸುವುದು ಸುಲಭವಲ್ಲ.
ಅದೂ, ಚುಟುಕು ಓದಿಗಷ್ಟೇ ಸೀಮಿತವಾಗಿರುವ ಜನರೇಶನ್ನಿನ ಈ ದಿನಮಾನದಲ್ಲಿ, ಹಾಗೂ ಜನರ ಯೋಚನೆಗೆ-ವಿವೇಚನೆಗೆ-ನಾಳೆಯ ಓದಿಗೆ ಏನನ್ನೂ ಬಿಡದಂತೆ ಎಲ್ಲವನ್ನೂ ಆಯಾ ಕ್ಷಣದಲ್ಲೇ ಹಸಿಹಸಿಯಾಗಿ ಬಿಸಿಬಿಸಿಯಾಗಿ ಕಟ್ಟಿಕೊಡುವ ನ್ಯೂಸ್ ಚಾನಲ್ಲುಗಳ ಕಾಲದಲ್ಲಿ.
ಮಂಜು ಆ ಸಾಹಸ ಮಾಡುತ್ತಿದ್ದಾರೆ. ಒಂದು ಅಚ್ಚುಕಟ್ಟಾದ ಹಾಗೂ ತಾವು ನಂಬಿದ ರಾಜಕೀಯ ಸಿದ್ಧಾಂತಕ್ಕೆ ಬದ್ಧವಾದ ಪತ್ರಿಕೆ ತರುತ್ತಿದ್ದಾರೆ. ಒಂದು ವಾರವೂ ತಪ್ಪದಂತೆ ಕೈಗಿಡುತ್ತಿದ್ದಾರೆ. ಇಂಥದ್ದೊಂದು ಸಾಹಸ ಹಾಗೂ ವ್ರತಕ್ಕೆ ಬಿದ್ದಾಗ, ಸಹಜವಾಗೇ ಸ್ವಂತ ಕೃಷಿ ಸ್ವಲ್ಪ ಕೃಷವಾಗುತ್ತದೆ.

ಮಂಜು ಅವರ ಬರಹಗಳನ್ನು ನಾವು ನೋಡಬೇಕಿರುವುದು ಈ ಹಿನ್ನೆಲೆಯಲ್ಲಿಯೇ.
ಆದರೆ ಮಂಜು ಆರಿಸಿಕೊಳ್ಳುವ ವಿಷಯ ವೈವಿಧ್ಯ ಹಾಗೂ ಅವುಗಳ ಪೈಕಿ ತಮಗೆ ಹತ್ತಿರವೆನಿಸಿದ ವಿಷಯಗಳ ಬಗ್ಗೆ ಅವರು ಮಾಡುವ ಅಧ್ಯಯನವಿದೆಯಲ್ಲಾ, ಅದು ಪ್ರತಿಯೊಬ್ಬ ಪತ್ರಕರ್ತನಿಗೂ ಮಾದರಿಯಾಗಬಹುದಾದಂಥದ್ದು. ಸಾಮಾನ್ಯವಾಗಿ ಎಲ್ಲ ಪತ್ರಕರ್ತರಿಗೂ ಕಡ್ಡಾಯವಾಗಿ ಇರಲೇಬೇಕಾದ ಮೂರು ಮುಖ್ಯ ಕ್ವಾಲಿಟಿಗಳೆಂದರೆ, clarity, conviction, ಮತ್ತು perspective; ತಾವು ಬರೆಯಲು ಆರಿಸಿಕೊಳ್ಳುವ ವಿಷಯದ ಬಗ್ಗೆ ಸ್ಪಷ್ಟತೆ, ಆ ವಿಷಯದ ಬಗ್ಗೆ ತಮಗಿರುವ ಅನಿಸಿಕೆಗಳ ಬಗ್ಗೆ ಒಂದು ಅಚಲ ವಿಶ್ವಾಸ, ಹಾಗೂ ಅದನ್ನು ನೋಡುವಲ್ಲಿ ಬೇರೆಯವರಿಗೆ ಕಾಣದ್ದನ್ನು ಕಂಡುಕೊಳ್ಳುವ ಒಂದು ವಿಶಿಷ್ಟ ದೃಷ್ಟಿಕೋನ.
ಈ ಮೂರರ ಜೊತೆ ವೈವಿಧ್ಯಮಯ ಆಸಕ್ತಿಗಳೂ ಸೇರಿದರೆ ಸಿಗುವುದು ʼಮನ-ಮಿಡಿತʼ!
ತಮಗನ್ನಿಸಿದ್ದನ್ನು ಅನ್ನಿಸಿದ ಹಾಗೆ ಯಾವುದೇ ಹಿಂಜರಿಕೆಗಳಿಲ್ಲದೆ ಹೇಳುವುದು ಅಪರೂಪದ ಗುಣ; ಇವತ್ತಿನ ಪೋಲರೈಸ್ಡ್ ಸೋಷಿಯೋಪೊಲಿಟಿಕಲ್ ಜಗತ್ತಿನಲ್ಲಿ ಅಪಾಯಕ್ಕೆ ಆಹ್ವಾನ ಕೊಡುವ ಗುಣವೂ ಹೌದು. ಈ ಅಪರೂಪದ ಅಪಾಯಕಾರಿ (ಅಪಾಯ ಅವರಿಂದಲ್ಲ; ಅವರಿಗೇ!) ಗುಣ ಮಂಜು ಅವರ ಮನಮಿಡಿತದಲ್ಲಿ ಎದ್ದುಕಾಣುತ್ತದೆ. ಧರ್ಮ ರಾಜಕಾರಣದ ಬಗ್ಗೆ, ರಾಜಧರ್ಮದ ಬಗ್ಗೆ, ಮಾಧ್ಯಮಗಳ ಹೊಣೆಗಾರಿಕೆಯ ಬಗ್ಗೆ, ಸರ್ಕಾರಗಳ ದಬ್ಬಾಳಿಕೆಗಳ ಬಗ್ಗೆ, ಜಾತಿವಾದದ ಬಗ್ಗೆಯೆಲ್ಲಾ ಬರೆಯುವಾಗ ಅವರ ಲೇಖನಿಗೊಂದು ವಿಶೇಷ ಮೊನಚು ಬರುತ್ತದೆಯೆನೋ ಅನ್ನಿಸುವುದೇ ಅವರ ಈ ಗುಣದಿಂದ.
“ರಾಜಕಾರಣಿಗಳು ಹಾದಿಬೀದಿಯಲ್ಲಿ ಪ್ರಧಾನಿಯಿಂದ ಹಿಡಿದು ಪಂಚಾಯ್ತಿ ಅಧ್ಯಕ್ಷನವರೆಗೂ ಹಿಗ್ಗಾಮುಗ್ಗಾ ಬೈದಾಡಿಕೊಳ್ಳುತ್ತಾರೆ” ಅಂತ ಹೇಳುತ್ತಲೇ, ಹಿರಿಯ ಸಾಹಿತಿ-ಸಂಶೋಧಕ ಹಂ ಪಾ ನಾಗರಾಜಯ್ಯನವರು ಪ್ರಧಾನಿಯವರನ್ನು ʼದುರ್ಯೋಧನʼ ಅಂತ ಕರೆದಮಾತ್ರಕ್ಕೇ ಅವರನ್ನು ಪೊಲೀಸರು ಸ್ಟೇಷನ್ನಿಗೆ ಕರೆಸಿ ವಿಚಾರಣೆಸಿದ್ಯಾಕೆ ಅಂತ ಕೇಳುವ ಮಂಜು ಅವರಲ್ಲಿ ಅವರ ಸ್ಪಷ್ಟತೆ ಮತ್ತು ದಿಟ್ಟತನ ಕಾಣುತ್ತದೆ. ಆದರೆ ಅದನ್ನು ಅಷ್ಟಕ್ಕೇ ಬಿಡದೆ, “(ಇದನ್ನು) ಇತ್ತೀಚಿನ ವರ್ಷಗಳಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ಸಾಹಿತಿಗಳು ವಿಚಾರವಾದಿಗಳ ಮೇಲೆ ನಡೆದ ಹಲ್ಲೆಗಳ ಭಾಗವಾಗಿ ನೋಡಬೇಕು. ಸಾರ್ವಜನಿಕ ಗ್ರಂಥಾಲಯಗಳ ಖರೀದಿಗೆ ಆಯ್ಕೆಯಾಗಿದ್ದ ಪುಸ್ತಕವೊಂದನ್ನು (ಅದು) ಚರ್ಚಾಸ್ಪದ ವಿಷಯವನ್ನು ಒಳಗೊಂಡಿದೆ ಎನ್ನುವ ಕಾರಣಕ್ಕಾಗಿ ಹಿಂಪಡೆದ ಇತ್ತೀಚಿನ ಘಟನೆಯನ್ನೂ ಅಸಹನೆ ರಾಜಕಾರಣದ ಭಾಗವಾಗಿಯೇ ನೋಡಬೇಕು” ಅಂತ ಹೇಳುವ ಮೂಲಕ, ಒಂದು ಬಿಡಿಯಾದ ಪ್ರಸ್ತುತ ಘಟನೆಗೆ ಒಂದು ವಿಸ್ತೃತ ಆಯಾಮ ಕೊಡುವ ಪ್ರಯತ್ನವನ್ನೂ ಮಾಡುತ್ತಾರೆ.
ಇಂಥ ಪ್ರಯತ್ನ ಅವರ ಇನ್ನೂ ಅನೇಕ ಲೇಖನಗಳಲ್ಲೂ ಕಾಣುತ್ತದೆ. ಧಾರ್ಮಿಕ ಕಟ್ಟಡಗಳ ಸಂರಕ್ಷಣೆಯ ಬಗ್ಗೆ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರ ತಂದ ಮಸೂದೆಯ ಬಗ್ಗೆ ಚರ್ಚಿಸುವಾಗ, “ನಮ್ಮನ್ನು ರಕ್ಷಿಸಿಕೊಳ್ಳಲು, ನಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ದೇವಾಲಯಗಳನ್ನು ಕಟ್ಟಿ ಧಾರ್ಮಿಕತೆಯನ್ನು ಮೆರೆಯುತ್ತೇವೆ; ಆದರೆ ಪೂಜಿಸುತ್ತಿಲ್ಲ” ಅಂತ ಬರೆಯುವ ಮೂಲಕ ಇಡೀ ವಿಷಯಕ್ಕೆ ಕಾನೂನನ್ನೂ ಮೀರಿದ ಒಂದು ಹೊಸತೇ ಹೊಳಹನ್ನು ಕೊಟ್ಟು ನಮ್ಮ ಢಾಂಬಿಕತೆಯನ್ನು ಚರ್ಚೆಗಿಟ್ಟುಬಿಡುತ್ತಾರೆ.
ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳ ಪರವಾಗಿ ಬೀದಿಗಿಳಿದ ಸ್ವಾಮೀಜಿಗಳ ಧೋರಣೆಯ ಬಗ್ಗೆ ಬರೆಯುತ್ತಾ, “ಮಠಾಧೀಶರು ಮಾರ್ಗದರ್ಶಕರು, ಭಕ್ತರು ಅವರ ಅನುಯಾಯಿಗಳು. ಮಾರ್ಗದರ್ಶನದಲ್ಲಿ ನಡೆಯುವ ಭಕ್ತನಿಗೆ ಮಾರ್ಗದರ್ಶಕರ ನಡೆ-ನುಡಿ ಮೆಚ್ಚಿ ಅಹುದಹುದೆನುವಂತಿರಬೇಕು” ಅನ್ನುವ ಮೂಲಕ ಖುದ್ದು ಮಠಾಧೀಶರುಗಳಿಗೇ ಸಮಾಜದಲ್ಲಿ ಅವರು ವಹಿಸಬೇಕಾದ ಪಾತ್ರದ ನೆನಪು ಮಾಡಿಕೊಡುತ್ತಾರೆ. ಅದನ್ನೂ ಮೀರಿದ ಹೊಳಹು ಸಿಗುವುದು, ಸ್ವಾಮೀಜಿಗಳು ಯಾಕೆ ರಾಜಕಾರಣದ ಪಡಸಾಲೆಗಳಲ್ಲಿ ಹೂಂಕರಿಸುತ್ತಿದ್ದಾರೆ ಅನ್ನುವುದಕ್ಕೆ ಮಂಜು ಕೊಡುವ ಕಾರಣ: “ಸ್ವಾಮೀಜಿಗಳು ಮತಬ್ಯಾಂಕಾಗಿ ಗುರುತಿಸಿಕೊಂಡರೆ ಮಾತ್ರ ರಾಜಕೀಯ ಯಾತ್ರೆ-ದಂಡಯಾತ್ರೆಗಳು ಮಠದತ್ತ ಮುಖಮಾಡಿಕೊಂಡಿರುತ್ತವೆ; ಇಲ್ಲವಾದರೆ ಗ್ರಾಮ ಪಂಚಾಯ್ತಿಯ ಒಬ್ಬ ಸರ್ವಸಾಮಾನ್ಯ ಸದಸ್ಯ ಕೂಡ ಮಠದತ್ತ ನೋಡುವುದಿಲ್ಲ”! ಮಂಜು ಅವರ ಯೋಚನೆ ಇಷ್ಟವಾಗುವುದೇ ಇಂಥ ಕೆಲವು ಕಟುವಾಸ್ತವಕ್ಕೆ ಕನ್ನಡಿ ಹಿಡಿಯುವಂಥ ಸಾಲುಗಳಿಂದ. ರೈತರ ಹೋರಾಟದ ಬಗ್ಗೆ ಮಾತಾಡುವಾಗ, ಯಾಕೆ ಇಡೀ ದೇಶಕ್ಕೆ ಒಂದೇ ತೆರನಾದ ನೀತಿಗಳು ಹೊಂದುವುದಿಲ್ಲ ಅನ್ನುವುದನ್ನು ಮನವರಿಕೆ ಮಾಡಿಕೊಡುವುದಕ್ಕೆ ಅವರು ಬರೆದಿರುವ “ಭಿನ್ನ ಬೆಳೆಗಳ ಬೇಗುದಿಗಳು ಭಿನ್ನವಾಗಿರುತ್ತವೆ” ಅನ್ನುವ ಸಾಲೂ ಅಂಥದ್ದೇ ಒಂದು ವಿಶೇಷ ಆಕರ್ಷಣೆಯದ್ದು.
ಮಂಜು ಅವರ ನೇರವಂತಿಕೆ ಹಾಗೂ ಸೈದ್ಧಾಂತಿಕ ಬದ್ಧತೆಗಳಷ್ಟೇ ಮುಖ್ಯವಾದದ್ದು ಅವರ ಬರಹಗಳಲ್ಲಿ ಕಾಣುವ ಅವರ ಅಧ್ಯಯನದ ಹೊಳಹು. ಉದಾಹರಣೆಗೆ ಹಿಂದಿ ಹೇರಿಕೆಯ ವಿವಾದ ಹಾಗೂ ಆಂಜನೇಯನ ಜನ್ಮಸ್ಥಳದ ಕುರಿತ ಜಿಜ್ಞಾಸೆಗಳು.
ನಮ್ಮ ಹಂಪೆಯಲ್ಲಿರುವ ಅಂಜನಾದ್ರಿ ಬೆಟ್ಟವೇ ರಾಮಬಂಟ ಆಂಜನೇಯ ಹುಟ್ಟಿಬೆಳೆದ ಸ್ಥಳ ಅನ್ನುವ ನಂಬಿಕೆಯಲ್ಲಿ ನಮ್ಮ ಕನ್ನಡನಾಡಿನ ಹನುಮಭಕ್ತರೆಲ್ಲಾ ಇದ್ದಾಗಲೇ, ಅವರ ನಂಬಿಕೆಗೊಂದು ಶಾಕ್ ಕೊಟ್ಟಿದ್ದು ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್. ತಿರುಪತಿಯೇ ಆಂಜನೇಯ ಅವತಾರವೆತ್ತಿದ ಸ್ಥಳ ಅನ್ನುವುದಕ್ಕೆ ಯಾವುಯಾವುದೋ ದಾಖಲೆಗಳನ್ನಿಟ್ಟುಕೊಂಡು ಅವರು ತಗಾದೆ ತೆಗೆದ ತಕ್ಷಣ ಕನ್ನಡ ಭಕ್ತರು ಸೈರಣೆ ತಪ್ಪದಿರುವುದು ಸಾಧ್ಯವೇ ಇರಲಿಲ್ಲ.
ಇತಿಹಾಸ-ಪುರಾಣಗಳೆಲ್ಲವೂ ಕಲಸುಮೇಲೋಗರವಾಗಿ ಕಿತ್ತಾಟ ಶುರುವಾಯಿತು. ಸಹಜವಾಗೇ ಮಂಜು ಅವರೂ ಕೂಡ ಹಂಪಿಯ ವಕಾಲತ್ತು ವಹಿಸಿಕೊಂಡು ಮಾತಾಡಿಬಿಡಬಹುದಿತ್ತು; ಎಷ್ಟಾದರೂ ಅವರ ಓದುಗರು ಕನ್ನಡದವರೇ ತಾನೆ? ಆದರೆ ಮಂಜು ಹಾಗೆ ಮಾಡಿಲ್ಲ; ತಿರುಪತಿ ಹಾಗೂ ಹಂಪೆಗಳೆರಡೇ ಹನುಮ ದಾವೆಯ ಜಾಗಗಳೇನಲ್ಲ; ನಮ್ಮ ದೇಶದ ಇನ್ನೂ ಅನೇಕ ಕಡೆಗಳಲ್ಲಿಯೂ ಹನುಮ ಜನ್ಮದ ಕಥೆಗಳು ಹಾಗೂ ಆಯಾ ಪ್ರದೇಶದ ಜನರ ನಂಬಿಕೆಗಳು ಇವೆ ಅನ್ನುವುದನ್ನು ಅವರು ಹುಡುಕಿ ಬಿಡಿಸಿಟ್ಟಿದ್ದಾರೆ. ಜೊತೆಗೆ, ಅಂಜಾನಾದ್ರಿ ಬೆಟ್ಟವನ್ನು ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಗೆ ಸಮೀಕರಿಸಿ, ಹಂಪೆಯಲ್ಲಿ ಹನುಮ ಐತಿಹ್ಯವನ್ನು ಪ್ರತಿಷ್ಠಾಪಿಸಲು ಹೊರಟಿರುವುದರ ಹಿಂದಿನ ರಾಜಕೀಯ ಸಾಧ್ಯತೆಯ ಬಗ್ಗೆಯೂ ಒಂದು ಸಂಶಯದೃಷ್ಟಿ ಬೀರಿದ್ದಾರೆ.
ಇನ್ನು ಹಿಂದಿ ಹೇರಿಕೆಯ ವಿಷಯಕ್ಕೆ ಬಂದರೆ, ಹೇಗೆ ಭಾರತದ ಶೈಶವಾವಸ್ಥೆಯಿಂದಲೂ ಎಲ್ಲ ಸರ್ಕಾರಗಳು ಹಿಂದಿಯನ್ನು ದೇಶದ ಮೇಲೆ ಹೇರಲು ಹವಣಿಸಿವೆ ಅನ್ನುವುದನ್ನು ಮಂಜು ಒಂದು ಇತಿಹಾಸದ ಪಾಠದ ರೀತಿಯಲ್ಲಿ ಸಾವಧಾನವಾಗಿ ಅನಾವರಣ ಮಾಡಿದ್ದಾರೆ. ಜೊತೆಗೆ, ಸಂವಿಧಾನ ನಮಗೆಲ್ಲರಿಗೂ ನೀಡಿರುವ ಸಮಾನತೆಯ ಹಕ್ಕಿನ ಹಿನ್ನೆಲೆಯಲ್ಲಿ ಹೇಗೆ ಹಿಂದಿಯ ಪ್ರತ್ಯಕ್ಷ-ಪರೋಕ್ಷ ಹೇರಿಕೆಗಳು ಅಸಾಂವಿಧಾನಿಕ ಅನ್ನುವ ವಾದವನ್ನೂ ಮುಂದಿಟ್ಟು ಬೆರಗುಗೊಳಿಸಿದ್ದಾರೆ.

ಬೆರಗು ಬರೀ ಅವರ ಆಯ್ದ ಸಾಲುಗಳ ಅಥವಾ ಆಯ್ದ ಆಲೋಚನಾ ಲಹರಿಗಳ ಬಗ್ಗೆಯಷ್ಟೇ ಅಲ್ಲ. ಅವರ ವಿಷಯ ವ್ಯಾಪ್ತಿಯೂ ಅಚ್ಚರಿಯ ವಿಷಯವೇ. ಸಂಪಾದಕರೊಬ್ಬರು ಧರ್ಮದ ಬಗ್ಗೆ, ರಾಜಕಾರಣದ ಬಗ್ಗೆ, ಭಾಷೆಯ ಬಗ್ಗೆ ಬರೆಯುವುದು ಸಹಜವೇ ಆದರೂ, ಮಂಜು ಅವರು ಅವೆಲ್ಲವನ್ನೂ ಚರ್ಚೆಗಿಡುತ್ತಲೇ ನಡುನಡುವೆ ಇದ್ದಕ್ಕಿದ್ದಂತೆ ಮನುಷ್ಯ ಭಾವನೆಗಳ ಮಂಥನಕ್ಕಿಳಿದೋ ಅಥವಾ ಭಯ ಹಾಗೂ ಧೈರ್ಯಗಳ ವಿಶ್ಲೇಷಣೆಗಿಳಿದೋ ಮನಮುಟ್ಟಲೆತ್ನಿಸುತ್ತಾರೆ; ನಮ್ಮ ಚಿತ್ರರಂಗದ ಥಳುಕಿನ ಲೋಕದ ಕತ್ತಲಲ್ಲಿ ಪೋಷಕ ನಟರು ಹೇಗೆ ನರಳುತ್ತಿದ್ದಾರೆ ಅನ್ನುವತ್ತ ದೃಷ್ಟಿ ಹಾಯಿಸಿ ಆರ್ದ್ರವಾಗುತ್ತಾರೆ; ಸೆಲಬ್ರಿಟಿಗಳ ನಡವಳಿಕೆಗಳ ಬಗ್ಗೆ ಕೆಂಡವಾಗುತ್ತಾರೆ (again, ಅಪಾಯಕ್ಕೆ ಆಹ್ವಾನ ಕೊಡುವ ರೀತಿಯಲ್ಲಿ ಕನ್ನಡ ಇಂಡಸ್ಟ್ರಿಯ ಸೂಪರ್ʼಬಾಸ್ʼಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ನೇರಾನೇರ ಬರೆಯುತ್ತಾರೆ!); ಖಾಸಗೀಕರಣದ ಚರ್ಚೆ ಕೈಗೆತ್ತಿಕೊಂಡು ಅದರ ಸಾಮಾಜಿಕ ಪರಿಣಾಮಗಳನ್ನು ಅರ್ಥಮಾಡಿಸುವ ಯತ್ನ ಮಾಡುತ್ತಾರೆ; ಅನಂತನಾಗ್ ಥರದ ಕಲಾವಿದನನ್ನು ಅಧಿಕಾರಸ್ಥರು ಹೇಗೆ ನಡೆಸಿಕೊಳ್ಳಬೇಕು ಅಂತ ಮಾತನಾಡುತ್ತಾ ಒಬ್ಬ ಸಿನಿಮಾ ಅಭಿಮಾನಿಯಾಗುತ್ತಾರೆ; ತಮ್ಮೂರಿನ ಚಳವಳಿಗಳ ಇತಿಹಾಸ ಬರೆಯುತ್ತಾ ಇತಿಹಾಸ ಕುರಿತ ತಮ್ಮ ಆಸಕ್ತಿಯನ್ನು ತೆರೆದಿಡುತ್ತಾರೆ; ʼಅನುಭವ ಮಂಟಪʼದೊಳಗೆ ಅಡ್ಡಾಡುತ್ತಾರೆ, ರೈತ ಚಳವಳಿಗಳ ಆಂತರ್ಯ ಹೊಕ್ಕುತ್ತಾರೆ, ಪವಾಡಗಳಿಗೆ ಮುಗ್ಧವಾಗಿ ತೆರೆದುಕೊಳ್ಳುತ್ತಾರೆ..!
ನಾವೇ ನಡೆಸುವ ಪತ್ರಿಕೆಗೆ ನಾವೇ ಅಂಕಣ ಬರೆಯುವಾಗ ದೊರಕುವ ಸ್ವಾತಂತ್ರ್ಯ ಹಾಗೂ ಹೊಣೆಗಾರಿಕೆಯ ಫಲವೇ ಈ ವೈವಿಧ್ಯ! ಆಫ್‌ಕೋರ್ಸ್, ಈ ಸ್ವಾತಂತ್ರ್ಯದ ಬಳಕೆಗೆ ಆಸಕ್ತಿಯೂ ಬೇಕು; ಅದನ್ನು ಮಂಜು ಬೆಳೆಸಿಕೊಂಡಿದ್ದಾರೆ.
ಇಷ್ಟೆಲ್ಲಾ ಇದ್ದರೂ, ಆಗಾಗ ಸ್ವಲ್ಪ ತೊಡರುವುದು, ಮೊದಲೇ ಹೇಳಿದ ಹಾಗೆ ಅವರ ಬರವಣಿಗೆಯ rough terrain. ಜೊತೆಗೆ, ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಇಣುಕುವ ಕೆಲವು ಚರ್ವಿತಚರ್ವಣ ಧೋರಣೆಗಳು. ಬರವಣಿಗೆಯ ಕ್ವಾಲಿಟಿ ಹಾಗೂ ಜನಪ್ರಿಯತೆ ಎರಡಕ್ಕೂ ಒಂದಕ್ಕೊಂದು ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಅವರು ಮಾಡುವ ವಾದ, ದೃಶ್ಯ ಮಾಧ್ಯಮಗಳನ್ನು ಸಾರಾಸಗಟಾಗಿ ಖಳನಾಯಕರುಗಳ ಹಾಗೆ ಕಟಕಟೆಯಲ್ಲಿ ನಿಲ್ಲಿಸುವ ಅವರ ಹಪಾಹಪಿ, ರಾಜಕೀಯ ಹಾಗೂ ಸಾಮಾಜಿಕ ಆಗುಹೋಗುಗಳೆಲ್ಲವನ್ನೂ ತಮ್ಮ ರಾಜಕೀಯ ಒಲವುಗಳ ಮೂಗಿನ ನೇರಕ್ಕೇ ನೋಡುವ ಅವರ ಹಟ, ಇಂಥವೆಲ್ಲಾ ಓದುಗರಲ್ಲಿ ಒಂದಷ್ಟು ಕಿರಿಕಿರಿ ಉಂಟು ಮಾಡಿದರೆ ಆಶ್ಚರ್ಯವೇನಿಲ್ಲ. ಹಾಗೆ ಕಿರಿಕಿರಿ ಮಾಡುವ ಮೂಲಕವೇ ಮಂಜು ಅವರ ರಾಜಕೀಯ ಒಲವು-ನಿಲುವುಗಳು ಬಯಲಾಗುವುದೂ ಸುಳ್ಳಲ್ಲ. ಯಾವುದೇ ಪತ್ರಕರ್ತನಿಗೆ ತೊಡಕಾಗಬಹುದಾದ ವಿಷಯ ಇದು; ಯಾಕೆಂದರೆ, ಒಬ್ಬ ಪತ್ರಕರ್ತ ಒಂದೊಮ್ಮೆ ಹೀಗೆ ಒಂದು ನಿರ್ದಿಷ್ಟ ʼಬ್ರ್ಯಾಂಡ್ʼನ ಚೌಕಟ್ಟಿಗೆ ಸಿಲುಕಿಕೊಂಡರೆ ಅದೇ ಅವನ ಮಿತಿಯೂ ಆಗಿಬಿಡಬಹುದು.
ಮಂಜು ಅವರ ಬರಹಗಳಲ್ಲಿ ಬಹುಶಃ ಆ ಮಿತಿ ಕಾಣುತ್ತದೆ.
ಆದರೆ, ಆ ಮಿತಿಯ ಆಚೆಯೂ, ಸೈದ್ಧಾಂತಿಕ ಸಂಕೋಲೆಗಳಾಚೆಯೂ, ಮಂಜು ಓದಿಸಿಕೊಳ್ಳುತ್ತಾರೆಂದರೆ ಅದಕ್ಕೆ ಕಾರಣ, ಅವರ ʼಮನದ ಮಿಡಿತʼ ಅವರ ವ್ಯಕ್ತಿತ್ವಕ್ಕಿಂತ ಭಿನ್ನವಾಗಿಲ್ಲ ಅನ್ನುವುದು!






ಉತ್ತಮ ಮುನ್ನುಡಿ ಲೇಖನ