ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಂತಮೂರ್ತಿಯವರನ್ನು ಕಳೆದುಕೊಳ್ಳಬಾರದು..

ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿರಲಾರೆ ಎಂದು ಯು ಆರ್ ಅನಂತಮೂರ್ತಿ ಅವರು ನೀಡಿದ ಹೇಳಿಕೆಗೆ ಒಂದು ಪ್ರತಿಕ್ರಿಯೆ ಇಲ್ಲಿದೆ.

ನೀವೇನಂತೀರಿ?

‘ಜುಗಾರಿ ಕ್ರಾಸ್’ ನಿಮಗಾಗಿ ಇದೆ

ಬನ್ನಿ ಭಾಗವಹಿಸಿ

 

ವಿ ಆರ್ ಕಾರ್ಪೆಂಟರ್

ಮೊದಲಿಗೆ ನಾವು ತಿಳಿಯಬೇಕಾದ್ದು ಏನೆಂದರೆ ನಮ್ಮ ಜೇಬಿನಿಂದ ಹಣ ಕದ್ದವನನ್ನು ಶಿಕ್ಷಿಸುವುದಕ್ಕಿಂತಲೂ, ನಮ್ಮ ಕತ್ತು ಹಿಸುಕಲು ತನ್ನ ಕೈಗಳನ್ನು ಉದ್ದ ಮಾಡುತ್ತಿರುವವನನ್ನು ಶಿಕ್ಷಿಸಬೇಕಿದೆ.
ಇಂದು ಅನಂತಮೂರ್ತಿಯೆಂಬ ಅದ್ಭುತ ಚಿಂತಕ ದೇಶ ಬಿಡುವ ಮಾತಾಡುತ್ತಿದ್ದಾರೆಂದರೆ ನಾವೆಲ್ಲರೂ ಯೋಚಿಸಬೇಕಾಗುತ್ತದೆ.
ಯುಪಿಎ ಇಂದು ಪಿಕ್ ಪಾಕೇಟರ್ ಆಗಿ ಪಾತ್ರ ನಿರ್ವಹಿಸುತ್ತಿರಬಹುದು. ಆದರೆ ನಾವು ಈ ಪಿಕ್ ಪಾಕೇಟರ್ ನನ್ನು ಇಳಿಸಲು ಹೋಗಿ, ನಮ್ಮ ಕತ್ತು ಹಿಸುಕುವ ಕೈಗಳಿಗೆ ಅಧಿಕಾರ ಕೊಟ್ಟು ಅನಂತಮೂರ್ತಿಯವರಂಥರ ಅನೇಕ ಚಿಂತಕರನ್ನು ಕಳೆದುಕೊಳ್ಳಲು ತಯಾರಾಗಬಾರದು. ಒಂದು ಜನಾಂಗವನ್ನು ಪ್ರತಿನಿಧಿಸಿದ ಅನಂತಮೂರ್ತಿಯಂಥವರಿಗೇ ಈ ಕತ್ತು ಹಿಸುಕುವ ಕೈಗಳ ಬಗ್ಗೆ ಆತಂಕ ಉಂಟಾಗಿದ್ದರೆ, ಸಾಮಾನ್ಯನ ಸ್ಥಿತಿ ಏನು? ಒಂದು ಅಂಕಿ-ಅಂಶದ ಪ್ರಕಾರ ತೃತೀಯ ರಂಗದ ಅಧಿಕಾರ ರಚನೆಯ ಸಾಧ್ಯತೆಗಳು ಅಷ್ಟಾಗಿ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಇರುವ ಏಕೈಕ ಆಯ್ಕೆ ಕಾಂಗ್ರೆಸ್ ನೇತೃತ್ವದ ಪಿಕ್ ಪಾಕೇಟರ್ ಯೂಪಿಎ ಮಾತ್ರ. ಎಂ.ಎಫ್ ಹುಸೇನ್ ರಂಥಹ ಅದ್ಭುತ ಕಲಾವಿದರನ್ನು ಕಳೆದುಕೊಂಡ ಭಾರತ ಇನ್ನಾದರೂ ಅನಂತಮೂರ್ತಿಯಂಥವರನ್ನು ಉಳಿಸಿಕೊಳ್ಳಲಿ. ಒಬ್ಬ ಉತ್ತಮ ಸಾಹಿತಿ, ಸಜ್ಜನ ಪತ್ರಕರ್ತ ದೇಶದ, ಸತ್ವಪೂರ್ಣ ಕವಿಗಳು ಈ ದೇಶದ ಸಂಪತ್ತು ಎಂದು ಯಾವತ್ತಿಗೂ ಮರೆಯಕೂಡದು….
ಆದ್ದರಿಂದ ನಮಗೆ ಕೊಲೆಗಾರನಿಗಿಂತಲೂ, ದರೋಡೆಕೋರ ಅಥವಾ ಪಿಕ್ ಪಾಕೇಟರ್ ಲೇಸು ಅಲ್ಲವೆ… ಹಣವಿಲ್ಲದಿದ್ದರೂ ಕನಿಷ್ಟ ಜೀವವಾದರೂ ಉಳಿಯುತ್ತದೆ….

 

‍ಲೇಖಕರು G

16 September, 2013

35 Comments

  1. ಜಗದೀಶ್ ಕೊಪ್ಪ.

    ಪ್ರಿಯ ಕಾರ್ಪೆಂಟರ್. ಇದು ಅನಂತಮೂರ್ತಿಯವರ ಅತಿರೇಕದ ಹೇಳಿಕೆ. ಇವರ ಹೇಳಿಕೆಗೂ ಮತ್ತು ಹಿಂದೆ ಸೋನಿಯಾ ಪ್ರಧಾನಿಯಾಗಲು ಹೊರಟಾಗ, ನಾನು ತಲೆ ಬೋಳಿಸಿಕೊಂಡು, ಬಿಳಿ ಸೀರೆ ಉಡುತ್ತೀನಿ ಎಂದು ಹೇಳಿಕೆ ನೀಡಿದ್ದ ಬಿ.ಜೆ.ಪಿ.ಯ ಸುಷ್ಮಾಸ್ವರಾಜ್ ಹೇಳಿಕೆಗೂ ಅಂತಹ ವೆತ್ಯಾಸ ಕಾಣುತ್ತಿಲ್ಲ. ನಿಮ್ಮಂತಹ ಯುವ ತಲೆಮಾರಿಗೆ ಇರುವ ಆದರ್ಶ, ಆವೇಶ ಒಮ್ಮೊಮ್ಮೆ ಎಲ್ಲವನ್ನೂ, ಎಲ್ಲರನ್ನೂ ಆರಾಧಿಸುವ ಹಂತಕ್ಕೆ ಕರೆದೊಯ್ಯುತ್ತಿದೆ.ಇನ್ನೊಬ್ಬ ಪ್ರಗತಿಪರರು ಆತ್ಮಹತ್ಯೆ ಮಾಡಿಕೊಳ್ಳತ್ತೀನಿ ಎಂಬ ಮಾತನಾಡಿದರು ಎಂಬ ಸಹ ಮಾತನ್ನೂ ಕೇಳಿದ್ದೀನಿ. ಇವೆರೆಲ್ಲಾ ದೇಶಬಿಡುವುದರಂದ, ತಲೆಬೋಳಿಸಿಕೊಳ್ಳುವುದರಿಂದ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಯಾವ ಅನಾಹುತವೂ ಸಂಭವಿಸುವುದಿಲ್ಲ. ಸಧ್ಯದ ಸ್ಥಿತಿಯಲ್ಲಿ ಈ ದೇಶವನ್ನು ಯಾವ ಹಲಾಲುಕೋರ ಆಳಿದರೂ ಚಿಂತೆ ಮಾಡಲಾರದ ಅಸಹಾಯಕತೆಗೆ ಬಡವರು, ದೀನ ದಲಿತರು ದೂಡಲ್ಪಟ್ಟಿದ್ದಾರೆ. ಅವರ ಜೊತೆ ನಾನೂ ಇದ್ದೀನಿ ಎಂಬ ಭಾವನೆ ನನ್ನೊಳಗೆ ದಟ್ಟವಾಗುತ್ತಿದೆ.
    ಪ್ರಿಯ ಕಾರ್ಪೆಂಟರ್, ನಾನು ನಿಮ್ಮ ಹಾಗೆ ಯೋಚಿಸುತ್ತೀನಿ. ಆದರೆ, ಕೊಂಚ ಭಿನ್ನ ಅಷ್ಟೇ.ನರೇಂದ್ರ ಮೋದಿಯ ಬಗ್ಗೆ ನಾವು ಇಷ್ಟೇಲ್ಲಾ ಮಾತನಾಡಿದೆವು. ಯಾವೊತ್ತಾದರೂ , ಯಾರಾದ್ರೂ ಅವನ ಶುದ್ಧ ಹಸ್ತದ ( ಭ್ರಷ್ಟಾಚಾರ ಮುಕ್ತ)ಬಗ್ಗೆ ಮಾತನಾಡಿದೆವಾ? ಈ ದೇಶದಲ್ಲಿ ಒಬ್ಬ ನರೇಂದ್ರಮೋದಿ.ಒಬ್ಬ ನೀತಿಶ್ ಕುಮಾರ್, ಒಬ್ಬ ಮಣಿಸರ್ಕಾರ್ ಎಂಬ ಮೂವರು ಮುಖ್ಯಮಂತ್ರಿಗಳು ವಿಭಿನ್ನ ನೆಲೆ ಮತ್ತು ತಾತ್ವಿಕ ನೆಲೆಯಿಂದ ಬಂದವರು ( ಬಿ.ಜೆ.ಪಿ. ಜೆ.ಡಿ.ಯು. ಮತ್ತು ಸಿ.ಪಿ.ಐ.(ಎಂ))ಅವರ ಕುಟುಂಬಗಳು ಯಾವುದೇ ವೈಯಕ್ತಿಕ ಹಗರಣಗಳಲ್ಲಿ ಭಾಗಿಯಾಗಲಿಲ್ಲ. ಇವೊತ್ತು ನಮ್ಮ ಕಣ್ಣೆದುರುಗಿನ ಭ್ರಷ್ಟಾಚಾರ ಕೋಮುವಾದಕ್ಕಿಂತ ಅತ್ಯಂತ ಅಪಾಯಕಾರಿ ಅಂತ ಏಕೆ ಅನಿಸುತ್ತಿಲ್ಲ? ಕಳೆದು ಐದು ವರ್ಷ ಕರ್ನಾಟಕದಲ್ಲಿ ಬಿ.ಜೆ.ಪಿ. ನಡೆಸಿದ ಆಡಳಿತ ಒಂದು ದುಸ್ವಪ್ನ ಎಂದು ಅನಿಸುತ್ತಿಲ್ಲವೆ? ನಾವು ಒಬ್ಬ ವ್ಯಕ್ತಿಯ ವಿಮರ್ಶೆ, ಟೀಕೆಗೆ ಒಳಪಡಿಸುವಾಗ ಆತನ ಗುಣ ಮತ್ತು ಅವಗುಣಗಳನ್ನು ಗುರುತಿಸುವ ಹೃದಯವಂತಿಕೆಯನ್ನು ಒಳಗೊಂಡಿರಬೇಕು.
    ಕಾಂಗ್ರೇಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದ ಬುದ್ಧಿಜೀವಿಗಳ ನಡುವಳಿಕೆ ಮತ್ತು ಬಿ.ಜೆ.ಪಿ. ಪರ ನಿಲ್ಲುವ ಸಂಘಪರಿವಾರದ ಬುದ್ಧಿಜೀವಿಗಳ ನಡುವಳಿಕೆ ನಡುವೆ ನನಗೇನು ವೆತ್ಯಾಸ ಕಾಣುತ್ತಿಲ್ಲ.ನಾವೆಲ್ಲಾ ನರೇಂದ್ರ ಮೋದಿಯ ಬಗ್ಗೆ ಇಷ್ಟೆಲ್ಲಾ ಟೀಕೆ ಮಾಡಿಕೊಂಡಿ ಬಂದೆವು. ಪ್ರಧಾನಿ ಮಂತ್ರಿ ಸ್ಥಾನಕ್ಕೆ ವಿರೋಧಿಸುತ್ತಾ ಬಂದೆವು. ಆದರೆ, ಆ ಸ್ಥಾನಕ್ಕೆ ಪರ್ಯಾಯವಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕೆ ಸೋತಿದ್ದೇವೆ.( ರಾಹುಲಗಾಂಧಿ ಯನ್ನು ಕಾಂಗ್ರೇಸಿಗರು ಮಾತ್ರ ಸೂಚಿಸಿದ್ದಾರೆ.)

    • ವಿ.ಆರ್.ಕಾರ್ಪೆಂಟರ್

      ಡಿಯರ್ ಜಗದೀಶ್ ಸರ್, ನಾನೊಬ್ಬ ಬರಹಗಾರನಾಗಿ ಅನಂತಮೂರ್ತಿಯವರ ನೋವಿನ ಮಾತನ್ನು ಗ್ರಹಿಸಿ ಮಾತನಾಡಿದೆ. ಅಷ್ಟೆ. ಸುಷ್ಮಾ ಸ್ವರಾಜ್ ಹೇಳಿಕೆಗೂ, ಅನಂತಮೂರ್ತಿಯವರ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. ಆಕೆಗೆ ಸೋನಿಯಾ ವಿದೇಶಿ ಮೂಲ ಎನ್ನುವ ಕಾರಣ ಬಿಟ್ಟರೆ ಬೇರೇನೂ ಕಾರಣವಿರಲಿಲ್ಲ. ತಲೆ ಬೋಳಿಸಿಕೊಳ್ಳುತ್ತೇನೆ, ಸೀರೆ ಉಡುತ್ತೇನೆ ಅನ್ನುವುದು ಹಾಸ್ಯಾಸ್ಪದ ಮಾತು ಮತ್ತು ಸುಳ್ಳು ಎಂಬುದನ್ನು ಯಾರಾದರೂ ಸುಲಭವಾಗಿ ಗ್ರಹಿಸಬಹುದು. ಧರ್ಮದ ಚೌಕಟ್ಟಿನ ಒಳಗೇ ನಿಂತ ಕಂದಾಚಾರಿ ಹೆಣ್ಣಿನ ಮಾತುಗಳಂತೆಯೇ ಅದು ಕೇಳಿಸುತ್ತದಷ್ಟೆ. ಹಿಂದೆ ಒಂದು ಸಲ ಆಕೆಯೇ, ‘ಭಾರತೀಯ ಸಂಸ್ಕೃತಿ ನಾಶವಾಗಲು FTV ಯಂಥಹ ಮಾಧ್ಯಮಗಳೇ ಕಾರಣ’ ಎಂದು ಹೇಳಿಕೆ ಕೊಟ್ಟು ಹಾಸ್ಯಾಸ್ಪದವಾಗಿದ್ದು ನೀವು ಮರೆತಿಲ್ಲ ಅಂದುಕೊಳ್ಳುವೆ. ಆದರೆ ಈ ಮಾಗಿದ ವಯಸ್ಸಿನಲ್ಲಿ, ಅಷ್ಟೆಲ್ಲಾ ಚಿಂತನೆಗಳನ್ನು ಧಾರೆ ಎರೆದ, ಅರ್ಥಪೂರ್ಣ ಕತೆಗಳನ್ನು, ಕಾದಂಬರಿಗಳನ್ನು ನೀಡಿದ ಅನಂತಮೂರ್ತಿಯವರು ಯಾವ ಕಾಂಟೆಕ್ಷ್ಟ್ ನಲ್ಲಿ ಈ ಮಾತುಗಳನ್ನು ಹೇಳಿದ್ದಾರೆ ಎಂಬುದನ್ನು ಗ್ರಹಿಸಬೇಕಿದೆ. ಕೊಲೆಗಡುಕನ ಪೂಜೆಗೆ ಸ್ವಲ್ಪವಾದರೂ ಭಂಗ ಉಂಟುಮಾಡುವ ಕ್ರಿಯೆಯ ಮಾತಿದು.
      ಇನ್ನು ನೀವೇ ಹೇಳಿದಂತೆ ನಮೋ ಭ್ರಷ್ಟಾಚಾರಿಯಲ್ಲ. ಸರಿ. ಹಾಗೆಂದ ಮಾತ್ರಕ್ಕೆ ಶುದ್ಧರು ಎಂಬ ತೀರ್ಮಾನಕ್ಕೆ ನೀವೇಗೆ ಬಂದಿರೋ ಅರ್ಥವಾಗುತ್ತಿಲ್ಲ. ಇರಲಿ, ಭ್ರಷ್ಟಾಚಾರ ಮುಕ್ತ, ರಕ್ತಸಿಕ್ತ ಭಾರತವನ್ನು ಕಾಣುವ ಆಸೆಯಂತೂ ನನಗಿಲ್ಲ. ಹಾಗೆಂದು ಬಿಜೆಪಿ ನಿತೀಶ್ ಕುಮಾರ್ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಸರಿಯಿತ್ತಲ್ಲವೆ. ಈಗ ಅದಕ್ಕೆ ಬೇಕಾಗಿರುವುದು ಅಧಿಕಾರ ಮಾತ್ರ. ಯುದ್ಧೋತ್ಸಾಹದಲ್ಲಿರುವ ಅದು ತನ್ನ ಮನಸ್ಥಿತಿಗೆ ಸರಿಯಾದ ದಂಡನಾಯಕನನ್ನೇ ಆರಿಸಿಕೊಂಡಿದೆ. ಈ ಸಮಯದಲ್ಲಿ ನಾವು ನಮ್ಮ-ನಮ್ಮಲ್ಲೇ ಭಿನ್ನಾಭಿಪ್ರಾಯಗಳನ್ನು ಹೇರಿಕೊಂಡು ಕೂತರೆ ಹೇಗೆ?

      • Anonymous

        ಕಾಪೆ೯ಂಟರ್ ರವರೆ,
        ಕಥೆ ಕಾದಂಬರಿಗೂ ಮೀರಿದ್ದು ಜೀವನ. ಅವ್ರು ಚೆನ್ನಾಗಿ ಕಥೆ ಬರೆದ್ರೆ ಈ ವಿಷಯದ ಬಗ್ಗೇನು ಕಥೆ ಬರೀಲಿ.ನೀವು ಓದಿ ಖುಷಿಯಾಗಿ. ಹುಳಿಮಾವಿನ ಮರ ಕೊಂಡು ಆಗಿದ್ದ ಖುಷಿ ಸುರಗಿ ಯನ್ನು ಕೊಂಡು ಸುರುಟಿ ಹೋಯ್ತು.ಮಾತಾಡಿ ಸೋಪ್ಜ್ನನತೆ ಮೆರೆಯಲು ಲಂಕೇಶರಂತೆ ಒಳನೋಟ ಮತ್ಥು ಮೊಂಡು ದೈಯ೯ ಬೇಕು. ಅನಂತಕುಮಾರ್ ನಂತೆ ಅನಂತಮೂತಿ೯ನು ಅನ್ನೋ ಅನುಮಾನ ಬರೊಲ್ಲವ.ಎಲ್ಲಾದುನ್ನು ನಿಖರವಾಗಿ,ಗಟ್ಟಿಯಾಗಿ ಹೇಳುವ ಲಂಕೇಶ್ ನಾನು ಎಂದು
        ಆರೋಪಿಸಿಕೋಡು ಮಾತಾಡಿದ್ರೆ ಬ್ಲೂಜಾಕಲ್ ಸ್ಥಿತಿಯಾಗಭಹುದು ಎನ್ನುವ ಭಯ ನನಗೂ ಇದೆ.
        ಡಿ.ವಿ.ಶ್ರೀಧರ.

  2. nagraj.harapanahalli

    ಹೌದು. ಕೊಲೆಗಡುಕರು, ರಣೋತ್ಸಾಹಿಗಳಿಗಿಂತ , ಪಿಕ್ ಪಾಕೇಟರ್ ನನ್ನು ಆಯ್ಕೆ ಮಾಡಿಕೊಳ್ಳುವುದು ಜನರ ಮುಂದಿರುವ ಆಯ್ಕೆ.

    • ವಿ.ಆರ್.ಕಾರ್ಪೆಂಟರ್

      ಹೌದು ಸರ್, ತುಂಬಾ ವಿಷಾದದಿಂದಲೇ ಪಿಕ್ ಪಾಕೇಟರ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ತೃತೀಯರಂಗ ಗಟ್ಟಿಯಾಗುವ ಯಾವಲಕ್ಷಣವೂ ನನಗೆ ಕಾಣುತ್ತಿಲ್ಲ. ಎಡರಂಗ ನೇತೃತ್ವದಲ್ಲಿ ತುಂಬಾ ಹಿಂದೆಯೇ ಒಂದಾಗಬೇಕಿತ್ತು. ಆದರೆ ಅದು ಆಗಿಲ್ಲ… ಈಗ ಒಂದಾದರೂ ಪ್ರಯೋಜನವಿಲ್ಲ. ಮತ ವಿಭಜನೆಯಾಗಿ ಅತಂತ್ರವಾಗಬಹುದಷ್ಟೆ…

  3. ಅರುಣ್‌ ಕಾಸರಗುಪ್ಪೆ

    ಜಗದೀಶ್‌ ಕೊಪ್ಪ ಅವರ ಮಾತನ್ನು ನಾನು ಒಪ್ಪುತ್ತೇನೆ. ಅನಂತಮೂರ್ತಿ, ಲಂಕೇಶರನ್ನು ಓದಿಕೊಂಡು ಬೆಳೆದ ನಮ್ಮಂತ ಎಳೆಯರಿಗೆ ನರೇಂದ್ರ ಮೋದಿ ಪ್ರಣೀತ ರಾಜಕೀಯ ತತ್ವವನ್ನು ಒಪ್ಪಿಕೊಳ್ಳಲು ನಿಜಕ್ಕೂ ಕಷ್ಟವಾಗುತ್ತದೆ. ಅವರಿಗೆ ದೊರೆಯುತ್ತಿರುವ ಸೋಷಿಯಲ್‌ ಮೀಡಿಯಾದ ಮನ್ನಣೆ ನೋಡಿ ಅಸಹಾಯಕತೆ ಆವರಿಸುತ್ತದೆ. ಆದರೆ, ನಮಗಿರುವುದು ಅತ್ಯಲ್ಪ ಆಯ್ಕೆ. ನರೇಂದ್ರ ಮೋದಿ, ಬಿಜೆಪಿಯ ಬಗ್ಗೆ ಎಷ್ಟೇ ಆಕ್ರೋಶವಿದ್ದರೂ ಅದು ಮನಮೋಹನ್‌ ಸಿಂಗ್‌ ಅವರ ಅದಕ್ಷತೆ, ಇಷ್ಟವಿಲ್ಲದಿದ್ದರೂ ಒತ್ತಾಯದಿಂದ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಯಂತಾಡುವ ರಾಹುಲ್‌ ಗಾಂಧಿಯವರ ಎಳಸುತನ, ಯುಪಿಎ ಸರ್ಕಾರದ “Taken for granted” ಮನೋಭಾವಕ್ಕೆ ನಾವು ತೋರಿಸುವ ರಿಯಾಯ್ತಿಯಾದರೆ ಪ್ರಜಾಪ್ರಭುತ್ವದ ಚಾಲಕ ಶಕ್ತಿಯಾದ ಸಮಷ್ಠಿ ವಿವೇಚನೆಗೆ ಗರಬಡಿದಿದೆ ಎಂದೇ ಅರ್ಥ. ನಮಗಿರುವ ಸೀಮಿತ ಆಯ್ಕೆಯಲ್ಲಿ ಈಗ ನಮ್ಮ ಮುಂದಿರುವ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿಯವರಿಗೂ ಒಂದು ಅವಕಾಶ ಕೊಟ್ಟು ನೋಡೋಣ. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಅವಕಾಶ ಕೊಟ್ಟು, ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಅದನ್ನು , ಅದರ ಬೇರು ಸಮೇತ ಕಿತ್ತೆಸೆದ ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ. ಅಷ್ಟಕ್ಕೂ, ಕಾಂಗ್ರೆಸ್‌ ಪಕ್ಷ ಮುಸ್ಲಿಂ ಸಮುದಾಯಕ್ಕೆ ನೀಡಿದ ಕೊಡುಗೆ ಅಷ್ಟರಲ್ಲಿಯೇ ಇದೆ. ಬಿಜೆಪಿಯನ್ನು, ನರೇಂದ್ರ ಮೋದಿಯವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ನ ಬಾಯಿ ಬಡುಕ ದಿಗ್ವಿಜಯ್‌ ಸಿಂಗ್‌ರಂಥ ಪ್ರಭೃತಿಗಳಿಗೆ ನೈತಿಕ ಬೆಂಬಲ ನೀಡಿ, ಇತರರ ಕಣ್ಣಲ್ಲಿ ನಮ್ಮ ಬುದ್ಧಿಜೀವಿಗಳು ತಾತ್ಸಾರಕ್ಕೊಳ್ಳಗಾಗುತ್ತಿದ್ದಾರೆ ಎಂಬ ನೋವು ನನ್ನದು.

  4. ಮಹದೇವ ಹಡಪದ

    ಪ್ರಿಯ ಜಗದೀಶ ಕೊಪ್ಪ ಅವರೆ
    ಅನಂತಮೂರ್ತಿಯವರನ್ನು ಆದರ್ಶಿಕೃತ ಮೂರ್ತಿಯನ್ನಾಗಿಯೋ ಅಥವಾ ಭಿನ್ನಗೊಂಡ ಮೂರ್ತಿಯನ್ನಾಗಿಯೋ ನೋಡುವುದು ನನ್ನಿಂದ ಸಾಧ್ಯವಿಲ್ಲ. ಈ ನೆಲದ ಕುರಿತಾಗಿ, ಭಾಷೆಯ ಕುರಿತಾಗಿ, ದೇಶೀಜ್ಞಾನದ ಕುರಿತಾಗಿ ಅಷ್ಟೆಲ್ಲ ಮಾತಾಡಿರುವ ಬರೆದಿರುವ ಅನಂತಮೂರ್ತಿಯವರ ಆತಂಕ ರಾಜಕೀಯ ಪ್ರೇರಿತ ಹೇಳಿಕೆ ಎಂಬ ರೀತಿಯಲ್ಲಿ ನೀವು ಪ್ರತಿಕ್ರಿಯಿಸಿರುವುದು ಮೋಜಾಗಿದೆ. ಸುಷ್ಮಾ ಹೇಳಿಕೆ ಕೊಟ್ಟಿದ್ದರು ಅನಂತಮೂರ್ತಿ ಅಂತರಂಗದ ಆತಂಕ ಹಂಚಿಕೊಂಡಿದ್ದಾರೆ. ಇವತ್ತಿನ ಮಾಧ್ಯಮದ ಮಂದಿಗೆ ಹೇಳಿಕೆಗಳು ಯಾವವು ಮಾತುಗಳು ಯಾವವು ಆತಂಕಗಳು ಯಾವವು ಎಂಬುದು ಅರ್ಥವಾಗದಿರುವುದೇ ಇವತ್ತಿನ ವ್ಯಕ್ತಿ ವಿಜೃಂಬಣೆ, ದೇಶ-ಸಂಸ್ಕೃತಿಯ ಏಕಮುಖಿ ಚಿಂತನೆ ಇಷ್ಟೊಂದು ಊರ್ಧ್ವಕ್ಕೆ ಬೆಳೆದು ನಿಲ್ಲಲು ಕಾರಣವಾಗಿದೆ. ಒಂದು ಮನಸ್ಸಿನ ಸಂವೇದನೆಯನ್ನು ಷ್ಟು ಸರಳವಾಗಿ ಗ್ರಹಿಸುವವರಿಗೆ ಎಷ್ಟು ವರ್ಷದ ಅನುಭವ ಇದ್ದರು ಏನು ಪ್ರಯೋಜನ. ಆ ಅನುಭವದ ಅಹಂಕಾರವನ್ನು ಸುಟ್ಟು ಮಾತಾಡಿದರೆ ಗ್ರಹಿಸುವ ಇಂದ್ರಿಯಗಳು ಹೊಸಭಾರತದ ಇವತ್ತಿನ ಆತಂಕವನ್ನು ಸರಿಯಾಗಿ ಗ್ರಹಿಸಬಲ್ಲವು ಅಂದುಕೊಳ್ಳುತ್ತೇನೆ.
    ಒಂದೂರಿನಲ್ಲಿ ಗೌಡ ಆ ಊರಿನ ಅನೇಕ ಬಡವರಿಗೆ ಮದುವೆ-ಮುಂಜಿ ಹೊತ್ತಿನಲ್ಲಿ ಸಾಕಷ್ಟು ಸಹಾಯ ಮಾಡಿದ್ದಾನೆ. ಊರಿಗೆ ರಸ್ತೆ, ದವಾಖಾನೆ, ಶಾಲೆ-ಕಾಲೇಜುಗಳು ಆಗುವಲ್ಲಿ ಬಹಳಷ್ಟು ಶ್ರಮವಹಿಸಿದ್ದಾನೆ. ಅದೇ ಬಡವರ ಅಸಂಖ್ಯ ಹೆಂಗಸರ ಸೆರಗು ಹರಿದಿದ್ದಾನೆ. ದಲಿತರೆಂಬ ಕಾರಣಕ್ಕಾಗಿ ಅವರು ತಲೆಯೆತ್ತಿ, ಎದೆಸೆಟೆಸಿ ನಡೆದಾಡುವುದನ್ನು ಸಹಿಸಲಾರದ ಆ ಗೌಡ ಪಂಚಾಯ್ತಿಯ ಅಧ್ಯಕ್ಷ ಸ್ಥಾನ (ಮೀಸಲಾತಿಯಿಂದಾಗಿ) ಕೈತಪ್ಪಿ ಹೋದುದರಿಂದಾಗಿ ದಲಿತರ ಮೇಲೆ ಉರಿದು ಹೋಗುತ್ತಾನೆ. ಕಾರಣವಿಲ್ಲದ ಕಾರಣ ನೀಡಿ ಆ ದಲಿತರಿಗೆ ಬಹಿಷ್ಕಾರವನ್ನು ಹಾಕುತ್ತಾನೆ. ಈಗ ಹೇಳಿ ನಾನು ಗೌಡನ ಊರಿಗೆ ಉಪಕಾರಿಯಾದ ಕೆಲಸಗಳನ್ನು ಯಾವ ಮುಖದಿಂದ ಗೌರವಿಸಲಿ. ಗೌರವಿಸುವ ಗುಣಗಾಣ ಮಾಡುವ ಮನುಷ್ಯನ ಚರಿತ್ರೆ ಬಹಳ ಮುಖ್ಯವಾಗಬೇಕಲ್ಲವೇ… ಸಾರ್

  5. Gopinatha Rao

    ನಾನು ಇಲ್ಲಿಯೇ ಇದ್ದು ಹೋರಾಡುತ್ತೇನೆ ಎನ್ನುವವರು ನಮಗೆ ಆದರ್ಶಪ್ರಾಯರು. ನಾಡು ಬಿಟ್ಟು ಹೋಗುತ್ತೇನೆ ಎನ್ನುವುದು ಪಲಾಯನವಾದ.

  6. vasanth

    ಭ್ರಷ್ಟಚಾರಕ್ಕಿಂತ ಕೋಮುವಾದ ಅಪಾಯಕಾರಿ ಜಗದೀಶ್ ಕೊಪ್ಪ ಸರ್. ಇದು ಕೋಮುವಾದಿಗಳ ಮತ್ತು ಬಂಡವಾಳಶಾಹಿಗಳ ಅಪಾಯಕಾರಿ ಸಮ್ಮಿಲನ. ಭ್ರಷ್ಟಾಚಾರಿಗಳಿಗ ಬುದ್ದಿ ಕಲಿಸಬಹುದು ಅದರೆ ಕೋಮುವಾದಿಗಳ ಮನಸ್ಥಿತಿ ಬೇರೆ. ಅವರು ಶವದ ಮನೆಯಲ್ಲಿ ಗಳ ಹಿಡಿಯುವರು. ನೋಡಿ ಯುಪಿಎ ಸಕಾ೵ರದ ವಿರುದ್ಧ ಧ್ವನಿಯೆತ್ತುವ ಬದಲು ತಮ್ಮದೇ ರಾಜಕೀಯ ಲೆಕ್ಕಚಾರಗಳಲ್ಲಿ ತಲ್ಲೀನವಾಗಿದೆ. ಸರಿಯಾದ ವಿರೋಧ ಪಕ್ಷವಾಗಿ ಕಾಯ೵ನಿವ೵ಹಿಸಲಾಗದೆ, ಹಿಂದೂತ್ವವಾದಿಗಳ ಒತ್ತಡಕ್ಕೆ ಒಳಗಾಗಿ, ಹಿಂದೂತ್ವವಾದದ ಉಗ್ರ ಪ್ರತಿಪಾದಕ ಭೀಕರ ಕೋಮುಗಲಭೆಗೆ ಕಾರಣವಾಗಿರುವಂತಹ ಮೋದಿಯನ್ನು ಈ ದೇಶದ ಪ್ರಧಾನ ಮಂತ್ರಿಯಾಗಿ ಬಿಂಬಿಸುತ್ತಿರುವ ಅಜೆಂಡಾವನ್ನು ನಾವು ಅಥ೵ಮಾಡಿಕೊಳ್ಳಬೇಕಾಗಿದೆ.

  7. ಸತ್ಯನಾರಾಯಣ

    ಕೊಲೆಗಡುಕರು ಮತ್ತು ದರೋಡೆಕೋರರು ಅಥವಾ ಪಿಕ್ ಪಾಕೆಟರ್ (ಒಂದೊಂದು ಹಗರಣದ ಹಣ ಲಕ್ಷ ಕೋಟಿಗಳಲ್ಲಿದೆ. ದೇಶದ ಒಂದೊಂದು ವರ್ಷದ ಬಡ್ಜೆಟ್! ಆದರೂ ಅದು ನಿಮ್ಮ ಕಣ್ಣಿಗೆ ಪಿಕ್ ಪಾಕೆಟ್ ರೀತಿ ಕಾಣುತ್ತಿದೆ!) ನಡುವಿನ ಆಯ್ಕೆಯಲ್ಲಿ ಇಂದು ಪಿಕ್ ಪಾಕೆಟರುಗಳನ್ನೇ ಆಯ್ಕೆ ಮಾಡಿಕೊಳ್ಳೋಣ. ನಾಳೆ ಕೊಲೆಗಡಕರು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಇವರೆಲ್ಲಾ ಸೇರುತ್ತಾರೆ. ಆಗ ಯಾರನ್ನು ಆಯ್ಕೆ ಮಾಡಿಕೊಳ್ಳೋಣ?
    ಹರುಷದ ಕೂಳಿಗೆ ವರುಷದ ಕೂಳು ಕಳೆದುಕೊಂಡಂತಾಗಬಾರದು. ಕೇವಲ 2014 ರ ಚುನಾವಣೆ ಮತ್ತು ನಂತರದ ಐದುವರ್ಷಗಳ ಬಗ್ಗೆಯೇ ಏಕೆ ಯೋಚಿಸಬೇಕು. ಅಷ್ಟಕ್ಕೇ ಯುಗಾಂತವಾಗಿಬಿಡುತ್ತದೆಯೇ? ಐದು ವರ್ಷದ ಹಿಂದೆಯೂ ಹೀಗೆ ಬೊಬ್ಬೆ ಹಾಕಲಾಗುತ್ತಿತ್ತು. ಬಿಜೆಪಿ ಬಂದರೆ ಹಾಗೆ ಆಗುತ್ತದೆ ಹೀಗೆ ಆಗುತ್ತದೆ ಎಂದು. ಆದರೆ ಕೊನೆಗೆ ಏನಾಯಿತು? ಕರ್ನಾಟಕದ ಬಿಜೆಪಿ ಕೋಮುವಾದಕ್ಕಿಂತ ಭ್ರಷ್ಟಾಚಾರದಲ್ಲಿ ಸೃಷ್ಟಿಸಿದ ಅವಾಂತರಗಳು ಎಷ್ಟು? ಮೋದಿಯೂ, ಇನ್ನೊಬ್ಬನೂ ಅಷ್ಟೆ. ಯೋಗ್ಯತೆಯಿದ್ದರೆ ಉಳಿಯುತ್ತಾರೆ, ಇಲ್ಲ ತೊಲಗುತ್ತಾರೆ. ಆಯ್ಕೆಯನ್ನು ಜನರಿಗೆ ಬಿಡೋಣ.
    ಕೆಟ್ಟದ್ದು ಚಿಕ್ಕದಾದರೂ ಸರಿಯೆ, ದೊಡ್ಡದಾದರೂ ಸರಿಯೆ ಸಹಿಸಿಕೊಳ್ಳುವುದು ಅಪರಾಧವಲ್ಲವೆ? ಹೀಗೆ ಸಹಿಸಿಕೊಳ್ಳುತ್ತಾ ಬಂದಿದ್ದರಿಂದಲೇ ಇಂದು ಭಾರತದ ರಾಜಕೀಯ ಗಬ್ಬೆದ್ದು ಹೋಗಿರುವುದು. ಆದ್ದರಿಂದ, ನಿಧಾನವಾದರೂ ಸರಿಯೆ, ಅತ್ಯುತ್ತಮವಾದ ಪರ್ಯಾಯವೊಂದನ್ನು ಏಕೆ ಬಯಸಬಾರದು?

  8. pravara kottur

    ಒಬ್ಬ ನಾಯಕ, ಆಡಳಿತ ಚುಕ್ಕಣಿ ಹಿಡಿಯುವುದಕ್ಕಿಂತ ಮುಂಚೆ ಆತ ಧರ್ಮಾತೀತವಾಗಿದ್ದಾನೋ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲಿ, ಕಾಂಗ್ರೇಸ್ಸು ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಸಿಖ್ಖರ ನರಮೇಧ, ಮತ್ತು ಮೋದಿಯ ಆಡಳಿತಾವಧಿಯಲ್ಲಿ ಗುಜರಾತ್ ನಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಭಿನ್ನವಾಗೇನು ಇಲ್ಲ ಆದರೆ… ಆದರೆ ಈ ದುರಂತಗಳ ಹಿಂದಿನ ಕೆಟ್ಟ ಮನಸ್ಥಿತಿಗಳನ್ನ ಮನುಷ್ಯ ಅರ್ಥ ಮಾಡಿಕೊಳ್ಳಬೇಕು.
    ಆರ್.ಎಸ್.ಎಸ್ ನ ಕುಮ್ಮಕ್ಕಿನಿಂದ ಪ್ರಧಾನಮಂತ್ರಿ ರೇಸಿನಲ್ಲಿರುವ ಮೋದಿ ಪ್ರಧಾನಿ ಸ್ಥಾನಕ್ಕೆ ಲಾಯಕ್ಕಲ್ಲದಿದ್ದರೂ ಆತನೊಬ್ಬ ಒಳ್ಳೆ ಮಾರ್ಕೆಟಿಂಗ್ ಮೈಂಡ್ ಇರುವ ವ್ಯಕ್ತಿ ಎಂದಷ್ಟೇ ಭಾವಿಸಬಹುದು. ಗುಜರಾತ್ ನಲ್ಲಿ ಕೇವಲ ಒಂದಷ್ಟು ಬೇಸಿಕ್ ಆಗಿ ಮಾಡಬೇಕಿದ್ದ ಕೆಲಸಗಳನ್ನು ಮಾಡಿದ್ದಾರೆ ಹೊರತು ಆತನನ್ನು ದೇಶ ಕಾಪಾಡಲಿಕ್ಕಾಗಿ ಬಂದ ಮಹಾನ್ ದೇವರ ಥರ ಕಾಣುತ್ತಿರುವುದು ಅಷ್ಟೇನು ಆರೋಗ್ಯಕರವಲ್ಲ… ರಾಮಮಂದಿರಗಳನ್ನು ಕಟ್ಟುವಲ್ಲಿನ ಆಸಕ್ತಿ ದೇಶವನ್ನು ಮುನ್ನಡೆಸುವುದರಲ್ಲಿ ಇಲ್ಲವೆಂದು ತೋರುತ್ತದೆ.

  9. Guru Prasad

    ಜಗದೀಶ್ ಅವರೆ, ಮೋದಿಯಂತವರು ಪ್ರಧಾನಿಯಾದರೆ ಆಗಬಹುದಾದಂತಹ ಅಪಾಯ ಮತ್ತು ಈ ನಿಟ್ಟಿನಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಉಂಟಾಗುವ ಆತಂಕ .. ಈ ಎರಡನ್ನು ಗ್ರಹಿಸಬಲ್ಲವರು ಅನಂತಮೂರ್ತಿಯವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಸುಷ್ಮಾ ಸ್ವರಾಜ್ ಹೇಳಿಕೆಗೆ ಅನಂತಮೂರ್ತಿಯವರ ಹೇಳಿಕೆಯನ್ನು ಹೊಲಿಸಿತ್ತಿರುವುದು, ಮೋದಿಯನ್ನು ಮಾಣಿಕ್ ಸರ್ಕಾರ್ ಗೆ ಹೋಲಿಸಿರುವುದು ಹಾಸ್ಯಾಸ್ಪದವಾಗಿದೆ. ಲೊಕಾಯುಕ್ತರ ನೇಮಕವಾಗದಂತೆ ನೋಡಿಕೊಳ್ಳುವುದು,ಸಿ ಎ ಜಿ ವರದಿ, ಟಾಟಾಗಳಿಗೆ ನೀಡಿದ ಬಳುವಳಿ ಇವೆಲ್ಲವನ್ನು ನೊಡಿದ ನಂತರವೂ ಮೋದಿ ಭ್ರಷ್ಟಾಚಾರಿ ಅಲ್ಲ ಎಂದರೆ ಏನನ್ನಬೇಕು?
    ಇದು ಅಂಗೈ ಹುಣ್ಣು.. ಅಡ್ಡಗೋಡೆ ಮೇಲೆ ದೀಪ ಇಡುವ ಅಗತ್ಯ ಖಂಡಿತಾ ಇಲ್ಲ.

  10. ಗಿರೀಶ್

    ತನ್ನ ಸಂಸಾರ ಸಾಕಲು ತೆಗೆದುಕೊಂಡು ಹೋಗುತ್ತಿದ್ದ ಕಾರ್ಮಿಕನೊಬ್ಬನ ಸಂಬಳವನ್ನು ಪಿಕ್ ಪಾಕೆಟ್ ಮಾಡಲಾಯಿತು. ಊಟವಿಲ್ಲದೇ ಇಡೀ ಸಂಸಾರ ಸತ್ತುಹೋಯಿತು. ಈಗ ಹೇಳಿ ಪಿಕ್ ಪಾಕೆಟಿನವನದು ತಪ್ಪಿಲ್ಲವೆ?
    ಇಷ್ಟಕ್ಕೂ ಮೋದಿ ನಡೆಸಿದ ಹತ್ಯೆಯ ಬಗ್ಗೆ ನಾನಾವತಿ ಮತ್ತು ಸರ್ವೋಚ್ಛ ನ್ಯಾಯಾಲಯವೇ ರಚಿಸಿದ SIT ಏನು ಹೇಳುತ್ತದೆ ಎನ್ನುವುದನ್ನು ಒಮ್ಮೆ ಪರಿಶೀಲಿಸಿ. ಸುಖಾಸುಮ್ಮನೆ ಆರೋಪ ಮಾಡುವುದರಿಂದಲೇ ಇಂದಿನ ಬರಹಗಾರರುಗಳಿಗೆ ಕವಡೆ ಕಿಮ್ಮತ್ತು ಇಲ್ಲದಾಗುತ್ತಿರುವುದು. ಇಡೀ ದೇಶದ ಜನತೆಯನ್ನು ಹಸಿವಿನ ಕಬಂಧಬಾಹುಗಳಿಗೆ ತಳ್ಳುತ್ತಿರುವವರನ್ನು ಪಿಕ್ ಪಾಕೆಟರುಗಳು ಎಂದು ಸರಕರಿಸಿರುವುದರ ಹಿಂದಿರುವ “ಕೈ”ಗಳು ಕೆಲಸ ಮಾಡಿವೆ.
    ಮಹದೇವ ಹಡಪದರೆ ಒಂದೂರಿನ ಜನಗಳ ಕಷ್ಟ ಪರಿಹರಿಸುವ ಭಾವಜೀವಿ ಎಂದಿಗೂ ಅತ್ಯಾಚಾರ ಮಾಡಲಾರ. ಕಟ್ಟು ಕಥೆಗಳು ಕಲ್ಪನಾ ವ್ಯೂಹಗಳ ಮೂಲಕ ದ್ವೇಷವನ್ನಷ್ಟೇ ಬಿತ್ತಲು ಉಪಯೋಗಿಸಿ ಕೊಳ್ಳಬೇಡಿ. ಸಮಸ್ಯೆ ಬಗೆಹರಿಸುವುದಿಲ್ಲ. ದ್ವೇಷವನ್ನು ಹರಡಲು ನಿಮಗಿರುವ ಕೌಶಲವನ್ನು ಉಪಯೋಗಿಸುದು ಸರ್ವತಾ ಸಾಧುವಲ್ಲ.

  11. ಸುರೇಶ‍್ ಕುಮಾರ್

    ಜಗದೀಶ್ ಕೊಪ್ಪರವರದ್ದು ಸರಿಯಾದ ನಿಲುವು. ಅದೇ ಸಂಧರ್ಭದಲ್ಲಿ ಇನ್ನೊಂದು ವಿಚಾರದ ಕಡೆಗೂ ಗಮನವಿರಬೇಕು. ಸುಷ್ಮ ಸ್ವರಾಜ್ ಮತ್ತು ಎಲ್ಲಾ ಸಂಘ ಪರಿವಾರಿಗಳು ಅಂದು ಸೋನಿಯಾರ ವಿದೇಶೀ ಮೂಲದ ಕಾರಣಕ್ಕೆ ಪ್ರಧಾನಿಯಾಗುವುದನ್ನು ಭಾವಾನಾತ್ಮಕ ನೆಲೆಯಾಗಿಸಿ ಪ್ರಚಾರ ಮಾಡುತ್ತಿದ್ದಾಗ, ನಮ್ಮ ಪ್ರಗತಿಪರ ಬರಹಗಾರರು ಪ್ರಾತಿನಿಧಿಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಈ ‘ಸಂಘಿ’ಗಳ ತಿರಸ್ಕಾರವನ್ನು ಪ್ರತಿಭಟಿಸಿದ್ದರು. ಆದರೆ ಇಂದು ಅದೇ ಮೌಲ್ಯವನ್ನು ಇವರು ಗಾಳಿಗೆ ತೂರುತ್ತಿರುವುದು ತರವಲ್ಲ. ಓರ್ವ ಬುದ್ದಿಜೀವಿಯಾಗಿ ಸರಿಯಾದ ಆಯ್ಕೆಯ ಬಗ್ಗೆ (ತಮ್ಮ ತಿಳುವಳಿಕೆಯ ಹಿನ್ನೆಲೆಯಲ್ಲಿ) ಜನತೆಗೆ ಮಾರ್ಗದರ್ಶನ, ತಿಳುವಳಿಕೆ ನೀಡುವ ಪ್ರಯತ್ನ ಮಾಡಲಿ ಅಂತಿಮವಾಗಿ ಆಯ್ಕೆಯನ್ನು ಜನರ ತೀರ್ಪಿಗೆ ಬಿಟ್ಟು ಅದನ್ನು ಗೌರವಿಸಲಿ. ಅದು ಪ್ರತಿನಿಧಿ ಪ್ರಜಾಪ್ರಭುತ್ತದ ಮೌಲದಲ್ಲಿ ನಂಬಿಕೆ ಇಟ್ಟವರಿಗೆ ಭೂಷಣ. ಅದನ್ನು ಬಿಟ್ಟು ಈ ರೀತಿಯ ಅತಿರೇಕದ ಹೇಳಿಕೆಗಳನ್ನು ನೀಡಿದರೆ ಹಿಂದಿನ ಸಂಘಿಗಳಿಗೆ ಮತ್ತು ಇಂದಿನ ಈ ಬುದ್ದಿಜೀವಿಗಳಿಗೆ ವ್ಯತ್ಯಾಸವೆಲ್ಲಿ ಉಳಿಯುತ್ತದೆ. ಅಂದ ಹಾಗೆ ಯಾವುದೇ ಸರ್ಕಾರವಾದರೂ ಅಸಮಾನ್ಯವಾದುದೇನೂ ಘಟಿಸದು. ಒಂದು ಸರ್ಕಾರ ಸ್ವರ್ಗ ತರುತ್ತದೆ ಮತ್ತೊಂದು ನರಕ ಸೃಷ್ಟಿಸಿಬಿಡುತ್ತದೆ ಎನ್ನುವುದು ಭ್ರಾಂತಿಯಷ್ಟೇ. ಎಲ್ಲಾ ಬಗೆಯ ನಾಯಕರ ಮತ್ತು ಪಕ್ಷಗಳ ಆಳ್ವಿಕೆಯನ್ನು ಕಂಡಿರುವ ಈ ದೇಶದಲ್ಲಿ ಈ ರೀತಿಯ ವಿಪರೀತ ಭಾವನೆಗಳಿಗೆ ಅರ್ಥವಿಲ್ಲ.

  12. srinivasamurthy

    ಸ್ವಾತಂತ್ರ ಬಂದಾಗಿನಿಂದ ಚುಕ್ಕಾಣಿ ಹಿಡಿದ ರಾಜಕಾರಣಿಗಳು ತಮ್ಮ ಅನುಭವವನ್ನು ಸಮಾಜಕ್ಕೆ ಅನ್ವೈಕೆ ಮಾಡುವುದರಲ್ಲಿ ಸೋತಿದ್ದಾರೆ. ಅಂತೆಯೆ ಕಾಂಗ್ರೆಸ್ ನಮ್ಮೆಲ್ಲರನ್ನು ಪರೋಕ್ಶ ಸಾಲದ ಗುಲಾಮಿಗಳನ್ನಾಗಿ ಮಾಡಿದೆ. ಮೈ ಭಾರತದ್ದು ಮನಸ್ಸು ಬೇರೆ ನಾಡಿನದ್ದು ಆಗಿರುವ ಕಾಂಗ್ರೆಸ್ಗಿಂತ ಬಿ.ಜೆ.ಪಿ ಕೊಂಚ ಈ ವಿಶಯದಲ್ಲಿ ಒಳ್ಳೆಯದು ಅನಿಸುತ್ತದೆ. ನಾವು ಈ ಹಿಂದೆ ಸ್ವತಂತ್ರವನ್ನು ಕಳೆದುಕೊಂಡದ್ದು ದುಡ್ಡಿನಿಂದ ಇಂದು ಹಂತಹಂತವಾಗಿ ಸ್ವಾತಂತ್ರವನ್ನು ಕಳೆದುಕೊಳ್ಳುವುದು ಹಣದಿಂದಲೆ ಎಂಬುವುದನ್ನು ಯಾರೂ ಮರೆಯಬಾರದು. ಎರಡು ವರ್ಶ ಕಾಂಗ್ ಸಾಕು. ಪ್ರತೀ ಚುನಾವಣೆಯಲ್ಲೂ ಎಲ್ಲಾ ಪಕ್ಶಗಳಲ್ಲೂ ಬದಲಾವಣೆಗಳು ಮೂಡಿರುತ್ತವೆ. ಒಂದೇ ಪಕ್ಶ ಇದ್ದರೆ ಹಗರಣಗಳನ್ನು ಮಾಡಿದವರು ಕುಲಾಸೆಯಾಗುವ ಸಾದ್ಯತೆ ಇರುತ್ತದೆ. ಹೀಗಾಗಿ ಅವರು ಮಾಡಿದ ಹೇಸಿಗೆಯನ್ನು ಇವರು ತೊಳೆಯಲಿ. ಇವರು ಮಾಡಿದ ಹೇಸಿಗೆಯನ್ನು ಅವರೂ ತೊಳೆಯಲಿ. ಒಂದು ವೇಳೆ ಈ ಇಬ್ಬರೂ ಈ ಇಬ್ಬರೂ ಮಾಡಿದ ಹೇಸಿಗೆಯನ್ನು ತೊಳೆಯಲಿಕ್ಕೆ ಆಗದೇ ಇದ್ದಲ್ಲಿ ಮತ್ತೊಬ್ಬರು ಇಬ್ಬರ ನಾಶಕ್ಕೆ ನಾಂದಿ ಹಾಡಬೇಕು. ಯಾರು ಅದನ್ನು ಹಾಡುವುದು? ನಿಮಗೆ ಎಲ್ಲಾ ತಿಳಿದಿದೆ.

  13. manjunathkargal

    ಮಾನ್ಯರೆ,
    ಅನಂತಮೂರ್ತಿಯವರ ಹೇಳಿಕೆಯನ್ನು ಸಾಂಕೇತಿಕವಾಗಿ ನಾವು ಗ್ರಹಿಸಬೇಕಾಗಿದೆ. ಅವರು ದೇಶಬಿಡುತ್ತೀನಿ ಅಂದರೆ ನಿಜ ಅರ್ಥದಲ್ಲಿ ದೇಶ ಬಿಡುತ್ತಾರೆ ಎಂದೇಕೆ ಭಾವಿಸಬೇಕು? ಹಾಗೆ ಹೇಳುವ ಮುಊಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡು ವೈಪರಿತ್ಯಕ್ಕೆ ಹೋಗುವ ಮುಊಲಕ ಬಿಜೆಪಿ ಯ ನಿಲುವನ್ನು ಉಗ್ರವಾಗಿ ವಿರೋಧಿಸುವ ಒಂದು ನೈತಿಕ ತಂತ್ರ ವ್ಯಕ್ತವಾಗುತ್ತದೆ. ಹೀಗಾದರೂ ಅವರ ನಿರ್ಧಾರಗಳನ್ನು ಬದಲಿಸಿಕೊಳ್ಳಬಹುದೆ ಎಂಬ ಆಶಯ ವ್ಯಕ್ತವಾಗುತ್ತದೆ. ಜೊತೆಗೆ ಮೋದಿ ಆಯ್ಕೆಯ ವಿರುದ್ದ ಬಲವಾದ ಪ್ರತಿರೋಧ ಒಡ್ಡುವ ಮಾತಿನಂತೆಯು ಇದು ನನಗೆ ಕಾಣುತ್ತದೆ.

  14. Kiran

    This write up looks as frivolous as the statement by Dr URA. He wont go anywhere. There should not be any fear of losing him, whatever may the political developments be. However, it would be interesting to learn how his behaviour changes if NaMo comes to power.
    Coming to MFH, there was no loss. He behaved like a classic escapist. He sounded no different from one Mr Nadeem, a music director, charged with a murder. MFH behaved more like a school boy who pelts stones at neighbours house and runs away when questioned.
    People who have no respect for constitution and electoral mandate are free to go anywhere, including Mars. Let the person who can stay with us and lead us at the time of distress come forward. We, as common people, will not escape anywhere.

  15. Swarna

    ಒಬ್ಬ ಚುನಾಯಿತ ಪ್ರತಿನಿಧಿ ಅಧಿಕಾರಕ್ಕೆ ಬಂದರೆ ದೇಶ ತೊರೆಯುತ್ತೇನೆ ಅನ್ನುವುದು
    ಚುನಾವಣಾ ವ್ಯವಸ್ಥೆಗೆ , ಚುನಾಯಿಸುವ ಮತದಾರರಿಗೆ ಮಾಡುವ ಅವಮಾನವಲ್ಲವೇ ?
    ತಮ್ಮ ವಿಚಾರಗಳನ್ನು ಒಪ್ಪದವರಿಗೆ ಒಂದು ಹಣೆ ಪಟ್ಟಿ ಕೊಡುವುದು ಮತ್ತು
    ಒಂದು ಸಿನೆಮಾ ಮಾಡಿ ನೋಡಲಿಲ್ಲ ಅಂದರೆ,ನಮ್ಮ ಪ್ರೇಕ್ಷಕ ಬೆಳಿದಿಲ್ಲ ಅನ್ನೋದು.
    ಒಟ್ಟಿನಲ್ಲಿ ನಿನ್ನ ಆಯ್ಕೆ ನನ್ನ ಆಯ್ಕೆಯಾಗದಿದ್ದರೆ ನೀನು ಮೂರ್ಖ, ಎಲ್ಲಿಗೆ ಸಾಗುತ್ತಿದ್ದೇವೆ ನಾವು ?
    ನಮ್ಮ ಆಯ್ಕೆ ಏನು ಅನ್ನೋದನ್ನ ನಿರ್ಧರಿಸಬೇಕಾಗಿರೋದು ಮತದಾರ, ಮಾಧ್ಯಮಗಳನ್ನು ಎಷ್ಟರ
    ಮಟ್ಟಿಗೆ ನಂಬ ಬೇಕು ಅನ್ನೋದು ಖಂಡಿತಾ ಸಾಮಾನ್ಯರಿಗೆ ಗೊತ್ತಿದೆ.

  16. Anonymous

    Hi sir,
    Every people has there own opinion so they thought that Modhiji is not good .

  17. Ananda Prasad

    ಮೋದಿ ಉಗ್ರ ಹಿಂದುತ್ವದ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದಿರುವ ಕಾರಣ ಮತ್ತು ತನ್ನ ಸಿದ್ಧಾಂತಗಳ ಈಡೇರಿಕೆಗಾಗಿ ಯಾವ ಮಟ್ಟಕ್ಕೂ ಹೋಗಬಲ್ಲ ವ್ಯಕ್ತಿ ಆಗಿರುವ ಕಾರಣ ಮೋದಿ ದೇಶದ ಪ್ರಧಾನಿಯಾದರೆ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತದಾ ಎಂಬುದು ದೇಶದ ಬಗ್ಗೆ ಕಾಳಜಿ ಪ್ರತಿಯೊಬ್ಬರೂ ಯೋಚಿಸಬೇಕಾದ ವಿಚಾರವಾಗಿದೆ. ಅಡ್ವಾಣಿಯವರನ್ನು ಮೂಲೆಗುಂಪು ಮಾಡುವುದರೊಂದಿಗೆ ಬಿಜೆಪಿ ಪಕ್ಷವು ಸಂಘ ಪರಿವಾರದ ಸಂಪೂರ್ಣ ಹಿಡಿತಕ್ಕೆ ಜಾರಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ವಿಚಾರವಾಗಿದೆ. ಸಂಘದ ವಿಚಾರಧಾರೆಗಳು ಧಾರ್ಮಿಕ ಮೂಲಭೂತವಾದವನ್ನು ಎತ್ತಿಹಿಡಿಯುವ ಮತ್ತು ತಮ್ಮ ಸಿದ್ಧಾಂತಗಳ ಈಡೇರಿಕೆಗಾಗಿ ರಕ್ತಪಾತವಾದರೂ ಪರವಾ ಇಲ್ಲ ಎಂಬ ಹಿನ್ನೆಲೆಯವಾದುದರಿಂದ ಸಂಘ ಪರಿವಾರಕ್ಕೆ ಅಧಿಕಾರ ಕೊಡುವುದು ಒಂದು ಗಂಭೀರ ತಪ್ಪು ಆಗುವ ಅಪಾಯ ಇದೆ. ಹೀಗಾಗಿ ದೇಶದ ಜನ ಇದನ್ನು ಲಘುವಾಗಿ ತೆಗೆದುಕೊಂಡರೆ ಭಾರೀ ದೀರ್ಘ ಕಾಲದ ಹಾಗೂ ಲಕ್ಷಾಂತರ ಜನರ ಬಲಿದಾನ ಹಾಗೂ ಹೋರಾಟದಿಂದ ಕಟ್ಟಿದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುವ ಅಪಾಯ ಮೋದಿ ಪ್ರಧಾನಿಯಾದರೆ ಒದಗುವ ಅಪಾಯ ಇದೆ.
    ಮೋದಿ ಒಂದೊಮ್ಮೆ ಮಿತ್ರಪಕ್ಷಗಳ ಸಹಕಾರ ಪಡೆದು ಒಂದು ಅವಧಿಗೆ ಪ್ರಧಾನಿಯಾದರೆ ಒದಗಬಹುದಾದ ಅಪಾಯಗಳು ಯಾವುವೆಂದರೆ: 1. ಸಂಘದ ಹಿಂದುತ್ವದ ಅಜೆಂಡಾ ಜಾರಿಗೆ ತರಲು ಸಂಘದ ಅಪಾರ ಒತ್ತಡ ಬರಬಹುದು. ಇದನ್ನು ಜಾರಿಗೆ ತರಲು ಮಿತ್ರಪಕ್ಷಗಳು ಅಡ್ಡಿಯಾಗುವುದರಿಂದ ಅದು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಹುನ್ನಾರ ನಡೆಸುವ ಅಪಾಯ ಇದೆ. ಬಿಜೆಪಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕಾದರೆ ಸಂಘ ಪರಿವಾರದ ಬೆಂಬಲದೊಂದಿಗೆ ಗುಜರಾತ್ ಮಾದರಿಯ ಉಗ್ರಹಿಂಸಾಕಾಂಡ ದೇಶಾದ್ಯಂತ ನಡೆಸುವ ಅಪಾಯ ಇದೆ. ಇಡೀ ದೇಶಾದ್ಯಂತ ಉಗ್ರ ಹಿಂಸಾಕಾಂಡ ನಡೆಸಿ ಕೋಮು ಧ್ರುವೀಕರಣ ನಡೆಸಿ ಮತ್ತೆ ಮಧ್ಯಂತರ ಚುನಾವಣೆಗೆ ಹೋದರೆ ಮೂರನೇ ಎರಡು ಬಹುಮತ ಪಡೆಯಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಮುಂದುವರಿಯುವ ಸಂಭವ ಇದೆ. ಮೋದಿಯೇ ಮಧ್ಯಂತರ ಚುನಾವಣೆಗಳ ಸಮಯದಲ್ಲಿ ಪ್ರಧಾನಿಯಾಗಿದ್ದರೆ ಹಿಂಸಾಕಾಂಡವನ್ನು ಹತ್ತಿಕ್ಕದೆ ಅದಕ್ಕೆ ತುಪ್ಪ ಸುರಿಯುವ ಅಪಾಯ ಇದೆ.
    2. ಮೋದಿ ಪ್ರಧಾನಿಯಾದರೆ ಉತ್ತಮ ಆಡಳಿತ ನೀಡಿ 5 ವರ್ಷಗಳ ನಂತರ ಚುನಾವಣೆಯಲ್ಲಿ ಮೂರನೇ ಎರಡು ಬಹುಮತ ಪಡೆದು ಹಿಂದುತ್ವದ ಅಜೆಂಡಾ ಜಾರಿಗೆ ತರುವ ಹಾಗೂ ಸಂವಿಧಾನ ತಿರುಚುವ ಅಪಾಯ ಇದೆ.
    3. ಮೋದಿ ಪ್ರಧಾನಿಯಾದಲ್ಲಿ ದೇಶದ ಪೋಲೀಸ್ ಬಲ ಹಾಗೂ ಸೈನ್ಯ ಬಲವನ್ನು ಕೇಸರೀಕರಣಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅಪಾಯ ಇದೆ. ಈವರೆಗೆ ಭಾರತೀಯ ಸೈನ್ಯ ಜಾತ್ಯತೀತ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಭಾರತೀಯ ಸೈನ್ಯವೆಲ್ಲಿಯಾದರೂ ಕೇಸರೀಕರಣಗೊಂಡರೆ ಭಾರತವೂ ಸಂಘ ಪರಿವಾರದ ಸರ್ವಾಧಿಕಾರಕ್ಕೆ ಸಿಕ್ಕಿ ನರಳುವ ಸಂಭವ ಇದೆ. ಪಾಕಿಸ್ತಾನದಲ್ಲಿ ಸೇನೆ ಮೂಲಭೂತವಾದಿಗಳ ಹಿಡಿತದಲ್ಲಿ ಇರುವ ಕಾರಣ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ ಮತ್ತು ಅದರಿಂದ ಹೊರಬರಲಾರದೆ ಒದ್ದಾಡುವಂತೆ ಆಗಿರುವುದು ನಮಗೆ ದಾರಿ ತೋರಿಸದೆ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಗೋರಿ ಕಟ್ಟಬೇಕಾದೀತು.
    ಸಂಘ ಪರಿವಾರವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿಯಲ್ಲಿ ಹಸ್ತಕ್ಷೇಪ ಮಾಡಿದೆ ಮತ್ತು ಸರ್ವಾಧಿಕಾರಿಯಂತೆ ನಡೆದುಕೊಂಡಿದೆ ಎಂಬುದನ್ನು ಕರ್ನಾಟಕದಲ್ಲಿ ನವೀನ ಸೂರಿಂಜೆ ಎಂಬ ಪತ್ರಕರ್ತರ ಬಂಧನ ಹಾಗೂ ಕರಾವಳಿ ಅಲೆ ಸಂಪಾದಕರ ಬಂಧನದಲ್ಲಿ ಸಾಬೀತಾಗಿದೆ. ಸದ್ಯ ಕಾಂಗ್ರೆಸ್ ಪಕ್ಷವು ಭ್ರಷ್ಟವಾದರೂ ಈವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಂಡು ಬಂದಿದೆ. ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ಅದನ್ನು ಸಹಿಸುವ ಗುಣ ಹೊಂದಿದೆ (ತುರ್ತು ಪರಿಸ್ಥಿತಿಯ ಒಂದು ಸಂದರ್ಭವನ್ನು ಹೊರತುಪಡಿಸಿ). ಇಂದು ಅಂತರ್ಜಾಲದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ ಗಾಂಧಿಯವರನ್ನು ಅತ್ಯಂತ ಹೀನಾಯವಾಗಿ ಏಕವಚನದಲ್ಲಿ ಕೀಳು ಭಾಷೆ ಬಳಸಿ ಬೈಯ್ಯುತ್ತಿದ್ದರೂ ಕಾಂಗ್ರೆಸ್ ಅದನ್ನು ಸಹಿಸಿಕೊಂಡಿದೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಕ್ಕ ಮಟ್ಟಿನ ಸಹನೆಯನ್ನಾದರೂ ಎತ್ತಿ ಹಿಡಿದಿದೆ. ದೇಶವು ಸಂಘ ಪರಿವಾರದ ಅಧಿಕಾರಕ್ಕೆ ಹೋದರೆ ಇಂಥ ಟೀಕೆಗಳು ಸಾಧ್ಯವೇ ಇಲ್ಲ ಮತ್ತು ಟೀಕಿಸಿದವರು ಜೈಲಿಗೆ ಹೋಗಬೇಕಾದೀತು ಎಂಬುದು ಕಂಡುಬರುತ್ತಾ ಇದೆ. ನಮಗೆ ಪ್ರಜಾಪ್ರಭುತ್ವ ಬೇಕೋ ಅಥವಾ ಅಭಿವೃದ್ಧಿಯ ಹೆಸರಿನಲ್ಲಿ ಅಥವಾ ಅಭಿವೃದ್ಧಿಯ ಆಮಿಷಕ್ಕೆ ಬಲಿಯಾಗಿ ಸರ್ವಾಧಿಕಾರದೆಡೆಗೆ ಹೋಗುವುದು ಇಷ್ಟವೋ ಎಂಬುದನ್ನು ದೇಶದ ಮತದಾರರೇ ನಿರ್ಧರಿಸಬೇಕಾಗಿದೆ. ನಾನು ಇದನ್ನು ದೇಶದ ಹಿತದೃಷ್ಟಿಯಿಂದ ಬರೆದಿದ್ದೇನೆಯೇ ಹೊರತು ಯಾವುದೇ ರಾಜಕೀಯ ಲಾಭವಾಗಲಿ ಅಥವಾ ಇನ್ನಿತರ ಪ್ರಯೋಜನವಾಗಲೀ ಇದರಿಂದ ನನಗೆ ಖಂಡಿತ ಇಲ್ಲ.

  18. narayanaswamy kempaiah

    My Dear Brothers, please understand what U R Anantha Murthy told. In his speech there is a TONE (Dhwani). You must understand once again what his intention. Otherwise you don’t understand his Dhwani.

  19. Naveena

    AAdarshagaladaru pramanikavagirabeku… Namma chintanegalu namma nireekshegalagiruthava.. Ufffff.. Chintisbeku.

  20. ಪ್ರಶಾಂತ್ ಭದ್ರಾವತಿ

    ಎಲ್ಲಾ ಪಕ್ಷಗಳನ್ನೂ ಬೇರೆಡೆ ಇಟ್ಟು ವಿಚಾರ ಮಾಡೋಣ.”ಗಾಂಧಿ,ನೆಹರು ತತ್ವ,ಸಿದ್ಧಾಂತ ಇಲ್ಲದ ದೇಶದಲ್ಲಿ ನಾನು ಬದುಕಲು ಇಚ್ಛೆ ಪಡುವುದಿಲ್ಲ.ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ದೇಶ ತೊರೆಯುತ್ತೇನೆ”ಎಂದಿರುವ ಅನಂತ ಮೂರ್ತಿಯವರಿಗೆ ಈಗಿನ ಪ್ರಧಾನಿಯು ಮಹಾನ್ ಗಾಂಧಿವಾದಿಯಾಗಿ ಕಾಣಿಸುತ್ತಿದ್ದಾರ?ಇಡೀ ದೇಶಕ್ಕೆ ದೇಶವೇ ಹಗರಣಗಳ ಬೆಂಕಿಯಲ್ಲಿ ಬೆಂದು ಹೋಗುತ್ತಿರುವಾಗ ಅವರು ನಮ್ಮ ದೇಶವನ್ನು ಏಕೆ ತೊರೆಯಲಿಲ್ಲ?
    ಮಹಾನ್ ಚಿಂತಕ!ರಾಗಿ ಗಾಂದಿ ತತ್ವವನ್ನು ಮರು ಪ್ರತಿಷ್ಠಾಪಿಸುವುದರ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು ದೇಶ ತೊರೆಯುವ ಬಗ್ಗೆ ಮಾತನಾಡಿರುವುದು ಎಷ್ಟು ಸರಿ?

  21. harish

    Anant Murthi avage modalu vote madi congress na gedisi. Adu agalilla andre aamele desh biduviranthe 🙂

  22. ಜಗದೀಶ್ ಕೊಪ್ಪ.

    ಗೆಳೆಯರೆ, ನನ್ನ ಮಾತುಗಳನ್ನು ಕೆಲವರು ಅವರವರ ಭಾವಕ್ಕೆ ಅರ್ಥೈಸಿಕೊಂಡಿದ್ದಾರೆ, ಇರಲಿ. ಆದರೆ, ಒಂದು ಮಾತನ್ನು ಸ್ಪೃಷ್ಟಪಡಿಸಬೇಕಿದೆ. ನಾನೇನು ಮೋದಿ ಅಭಿಮಾನಿಯಲ್ಲ. ಗೋದ್ರಾ ಘಟನೆ ಸಂಭವಿಸಿದಾಗ, ಕನ್ನಡದಲ್ಲಿ ಇದ್ದದ್ದು ಎರಡು ಛಾನಲ್ ಗಳು. ಉದಯಟಿ.ವಿ ಯಲ್ಲಿ, ನಾನು, ಮುಂಜಾನೆ ಸತ್ಯ, ಆರಾಧ್ಯ, ಬಿ.ಎಸ್.ಸತ್ಯನಾರಾಯಣ, ಮಂಜುನಾಥಚಾಂದ್, ಪ್ರಕಾಶ್ ಚಂದ್ರ, ಉದಯವಾರ್ತೆಯನ್ನು ನಿರ್ವಹಿಸುತ್ತಿದ್ದೆವು. ಈ ಟಿ.ವಿ ಯಲ್ಲಿ ಜಿ.ಎನ್. ಮೋಹನ್ ಮತ್ತು ಸಿದ್ದು ಕಾಳೋಜಿ ವಾರ್ತೆಯನ್ನು ನಿರ್ವಹಿಸುತ್ತಿದ್ದರು. ಪ್ರತಿದಿನ ನಮ್ಮ ಟೇಬಲ್ ಗಳಿಗೆ ರಾಯಿಟರ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸುದ್ಧಿ ಸಂಸ್ಥೆಗಳಿಂದ ಗೋದ್ರಾ ಹತ್ಯಾಕಾಂಡ ಕುರಿತಂತೆ ನೂರಾರು ನಿಮಿಷಗಗಳ ದೃಶ್ಯಾವಳಿಗಳು ತಲುಪುತ್ತಿದ್ದವು. ಅವುಗಳಲ್ಲಿ ನಾವು ವಾರ್ತೆಗೆ ಬಳಸುತ್ತಿದ್ದುದು ಕೇವಲ ಮೂರು ಅಥವಾ ನಾಲ್ಕು ನಿಮಿಷ ಮಾತ್ರ. ಆ ದೃಶ್ಯಗಳಲ್ಲಿ ಇರುತ್ತಿದ್ದ ಆಕ್ರಂಧನ, ನೋವು, ಕ್ರೌರ್ಯ ಇವೆಲ್ಲವೂ ಮನುಕುಲವನ್ನು ನಾಚಿಸುವಂತೆ ಇರುತ್ತಿದ್ದೆವು. ನಾವು ಗೆಳೆಯರು ಸುದ್ಧಿ ಸಿದ್ಧಪಡಿಸಿ ವಾರ್ತೆ ಪ್ರಸಾರ ಮಾಡಿ, ನಂತರ ಹೊರ ಬರುವಾಗ, ನಮ್ಮ ಸ್ಥಿತಿ, ಶವಗಾರದಲ್ಲಿ ಶವವನ್ನು ಅಡ್ಡಡ್ಡ ಸೀಳಿ ಹೊರಬಂದ ವೈದ್ಯರಂತೆ ಇರುತ್ತಿತ್ತು. ಈ ಅನುಭವ ನಮಗೆ ಜೀವನ ಪೂರ್ತಿ ಧರ್ಮದ ಬಗ್ಗೆ , ಜಾತಿಯ ಬಗ್ಗೆ ಮಾತನಾಡದಂತೆ ಪಾಠ ಕಲಿಸಿದೆ. ಇನ್ನು ಅನಂತಮೂರ್ತಿ ಅಭಿಪ್ರಾಯ ಕುರಿತಂತೆ ಹೇಳುವುದಾದರೆ, ನಾನು ಯಾವಾಗಲೂ ಕಣ್ಣೆದುರಿಗೆ ಸುಡುವ ಕೆಂಡಗಳಂತೆ ಇರುವ ವಾಸ್ತವಗಳನ್ನು ಇಟ್ಟುಕೊಂಡು ಮಾತನಾಡುವವನು.
    ಮೊದಲಿಗೆ ಒಂದು ಉದಾಹರಣೆ- ಕಳೆದ ಚುನಾವಣೆಯಲ್ಲಿ ನನ್ನ ಮಿತ್ರ ರವಿಕೃಷ್ಣಾರೆಡ್ಡಿ ಬೆಂಗಳೂರಿನ ಒಂದು ಕ್ಷೇತ್ರದಿಂದ ಸ್ಪರ್ಧಿಸಿ, ಕೇವಲ 26 ಸಾವಿರ ಮತಗಳನ್ನು ತೆಗೆದುಕೊಂಡರು. ಆದರೆ, ಕರ್ನಾಟಕದಲ್ಲಿ ತನ್ನ ಕ್ರೇತ್ರದ ಪ್ರತಿ ಮನೆಯ ಬಾಗಿಲನ್ನು ತಟ್ಟಿದ ಏಕೈಕ ಅಭ್ಯರ್ಥಿ ಅವರು. ಸತತ ಆರು ತಿಂಗಳು ಅವರು ಪಟ್ಟ ಶ್ರಮಕ್ಕೆ ಸಿಕ್ಕ ಮತಗಳು, 26 ಸಾವಿರ, ಧಿಡೀರನೆ ಕ್ರೇತ್ರಕ್ಕೆ ಇಳಿದ ಕಾಂಗ್ರೇಸ್ ಅಭ್ಯರ್ಥಿಗೆ ಸಿಕ್ಕ ಮತಗಳು ನಾಲ್ಕು ಲಕ್ಷಕ್ಕೂ ಅಧಿಕ. ನಮ್ಮ ಚಿಂತನೆಗಳು, ಹೋರಾಟಗಳು ಹೇಗೆ ಮಕಾಡೆ ಮಲಗಬಲ್ಲವು ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ.
    ಇನ್ನೂ ಎರಡನೇಯದಾಗಿ,ಬಿ.ಜೆ.ಪಿ ಸರ್ಕಾರದಲ್ಲಿ ಸಚಿವರಾಗಿದ್ದ ರಾಮಚಂದ್ರಗೌಡ ಎಂಬುವರು ಮಂಡ್ಯ ಮತ್ತು ಹಾಸನ ಮೆಡಿಕಲ್ ಕಾಲೇಜ್ ನೇಮಕಾತಿಯಲ್ಲಿ ನಡೆಸಿದ ಭ್ರಷ್ಟಾಚಾರದಿಂದಾಗಿ ತಮ್ಮ ಸಚಿವ ಸ್ಥಾನ ಕಳೆದುಕೊಂಡರು. ನಂತರ ಬೆಂಗಳೂರಿನ ಪದವೀಧರ ಕ್ರೇತ್ರದಿಂದ ಪುನಃ ಚುನಾಯಿತರಾದರು. ಅವರನ್ನು ಆರಿಸಿಕಳಿಸಿದ್ದು ಸಾಮಾನ್ಯ ಮತದಾರರಲ್ಲ. ಪ್ರತಿಷ್ಟಿತ ಬೆಂಗಳೂರು ನಗರದ ಪದವೀಧರರು. ಇಂತಹ ಕಟು ವಾಸ್ತವಗಳು ನಮ್ಮೆದುರು ಇರುವಾಗ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರು ಅಧ್ಯಕ್ಷ ಪ್ರಧಾನಿ ಆಗುವ ಅವಕಾಶ ಇರುವಾಗ, ಮೋದಿಗೆ ನನ್ನ ವಿರೋಧವಿದೆ ಎಂದು ಹೇಳಿದ್ದರೆ, ಅನಂತಮೂರ್ತಿಯವರ ಮಾತಿಗೆ ನನ್ನ ಅಭ್ಯಂತರವಿಲ್ಲ. ಒಂದು ವೇಳೆ ನಮ್ಮ ನಿರೀಕ್ಷೆ ಮೀರಿ ಮೋದಿ ಪ್ರಧಾನಿಯಾದರೆ, ಅನಂತ ಮೂರ್ತಿ ಏನು ಮಾಡಬಲ್ಲರು. ಈ ವಯಸ್ಸಿನಲ್ಲಿ ಅವರು ದೇಶ ತೊರೆಯಬಲ್ಲರೆ? ಸಂಘಪರಿವಾರದವರು, ಇನ್ನು ಏಕೆ ಬದುಕಿದ್ದೀರಿ? ಆತ್ಮ ಹತ್ಯೆ ಮಾಡಿಕೊಳ್ಳಿ ಎಂದರೆ ಮಾಡಿಕೊಳ್ಳಬಲ್ಲರೆ?
    ಒಂದು ಮಾತು ಸತ್ಯ, ನಾವು ಸಾಮಾಜಿಕ ತಾಣಗಳಲ್ಲಿ ಕ್ರಾಂತಿ ಮಾಡಬಲ್ಲವೆಂದು ಹಲವರು ಭ್ರಮಿಸಿದ್ದೇವೆ. ಇದು ವಿಮಾನ ಯಾನದಲ್ಲಿ ಮತ್ತು ಎ.ಸಿ.ದರ್ಜೆಯ ರೈಲುಗಳಲ್ಲಿ ವಾಂತಿ ಮಾಡಿಕೊಳ್ಳಲು ಕೊಡುವ ತಾತ್ಕಾಲಿಕ ಪ್ಲಾಸ್ಟಿಕ್ ಬ್ಯಾಗುಗಳು ಮಾತ್ರ. ಅನಿಸಿದ್ದನ್ನ,ನಾನೂ ಸೇರಿದಂತೆ ಎಲ್ಲರೂ ಇಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ. ನಮ್ಮ ನಿರೀಕ್ಷೆ, ಆಸೆ, ಆಕಾಂಕ್ಷೆ ಎಲ್ಲವನ್ನು ಅಗೋಚರ ಮತದಾರ ತಲೆಕೆಳೆಗೆ ಮಾಡಬಲ್ಲ.ಆ ಶಕ್ತಿಯನ್ನು ಪ್ರಜಾಪ್ರಭುತ್ವ ಮತದಾರನಿಗೆ ಕಲ್ಪಿಸಿದೆ.
    . ನಮಸ್ಕಾರ.

    • M.J.Rajeeva gowda

      ಭಾರತ ಈಗಲೂ ಸಹ ಕ್ರಿಯಾಶೀಲರು ನೆಮ್ಮದಿಯಿಂದ ಬದುಕಲು ತಕ್ಕಾಗಿಲ್ಲ ಎಂದು ನನ್ನ ಅನಿಸಿಕೆ. ಈಗಲೂ ಭಾರತವೇನು ಸ್ವರ್ಗವಾಗಿಲ್ಲ.ಮೋದಿವಾ(ವ್ಯಾ)ದಿಗಳು ಹೇಳುವಂತೆ ಮೋದಿ ಪ್ರಧಾನಿಯಾದರೆ ಉದ್ಧಾರವೂ ಆಗಿಹೋಗುವುದಿಲ್ಲ. ನಮ್ಮ ನಾಡಿನ ಮೊದಲ ಸಾಲಿನ ಬುದ್ಧಿಜೀವಿಗಳೆಲ್ಲ ಈ ದೇಶದ ಭವಿಷ್ಯದ ಬಗ್ಗೆ., ತಮ್ಮ ಮುಂದಿನ ಜನಾಂಗ ಹೇಗಿರಬೇಕೆಂದು ಎಂದೂ ಗಂಭೀರವಾಗಿ ಚಿಂತಿಸಿಯೂ ಇಲ್ಲ. ಈಗ ದೇಶ ಬಿಡುತ್ತೇನೆ., ಸತ್ತುಹೋಗಿರುತ್ತೇನೆ ಎಂದು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ. ಮೋದಿ ಪ್ರದಾನಿಯಾದರೆ ಅವನ ರಕ್ತದ ಹಸಿವು ಒಂದಷ್ಟು ಇಂಗಿಸಿಕೊಳ್ಳಬಹುದು. ಈ ಹಸಿವನ್ನು ಈಗಲೂ ಎಷ್ಟೋ ಜನ ಯಾವ ಯಾವ ರೂಪದಲ್ಲೋ ಇಂಗಿಸಿಕೊಳ್ಳುತ್ತಿದ್ದಾರೆ. ಮೋದಿಯಂತಹವರನ್ನು ಬೆಳೆಸಿರುವುದು ಇದೇ ಸಮಾಜ ತಾನೆ. ಇದು ಸುಶಿಕ್ಷಿತ ಸಮಾಜ ಎಸಿಕೊಳ್ಳಬೇಕಾದರೆ.. ಶಿಕ್ಷಿತರಿಗೆ ತನ್ನ ಸಹಮಾನವರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇರಬೇಕಿತ್ತು. ಸಮಾಜದ ಬಗ್ಗೆ ಒಂದು ಮುನ್ನೋಟವೂ ಇರಬೇಕಿತ್ತು. ಆದರೆ ಇವ್ಯಾವುವೂ ಇಲ್ಲದಿದ್ದರಿಂದಲೇ ಇಂತಹ ಸಮಾಜಕ್ಕೆ ಮೋದಿ ರಾಜನಾಗಿಬಿಡುವುದರಲ್ಲಿ(?) ಆಶ್ಚರ್ಯವೂ ಇಲ್ಲ.. ಅಸಾಧ್ಯವೂ ಅಲ್ಲ. ಇದೆಲ್ಲದರ ಮಧ್ಯೆ ಪ್ರಪಾತಕ್ಕೆ ಧುಮುಕಲು ಧಾವಿಸುತ್ತಿರುವ ಪ್ರವಾಹಕ್ಕೆ ಎದುರು ಈಜಿ ದಡ ಮುಟ್ಟಬೇಕೆನ್ನುವ ಜೀವನಪ್ರೀತಿಯುಳ್ಳ ಒಂದಷ್ಟು ಜನರೂ ಇಲ್ಲಿದ್ದಾರೆ. ಅಂತಹವರಲ್ಲೊಬ್ಬರಾಗಿ ಅನಂತಮೂರ್ತಿಯವರು ಇಲ್ಲಿಯೇ ಇರಬೇಕಲ್ಲವೆ..?

  23. Pushparaj Chowta

    ದೇಶದಲ್ಲಿನ ಸಾಮಾಜಿಕ, ರಾಜಕೀಯ, ಆರ್ಥಿಕ ಘಟನೆಗಳ ಬಗ್ಗೆ ದೇಶದ ಪ್ರಜೆಯಾಗಿ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕೇ ಹೊರತು, ತಾನು ದೇಶ ಬಿಟ್ಟು ತೊಲಗುತ್ತೇನೆ ಎನ್ನುವುದು ಹೇಡಿತನದ ಪರಮಾವಧಿ.
    ಅದೂ ಸಾಹಿತಿಯಾದರೂ ಸರಿ, ನನ್ನಂಥ ಬಡ ಪ್ರಜೆಯಾದರೂ ಸರಿ!
    ಎಂದಿಗೂ ಭಾರತೀಯನಾಗಿಯೇ ಇರುತ್ತೇನೆ!

  24. Sharanappa Bachalapur

    ಅನಂತಮೂರ್ತಿಯಂತಹವರು ಈ ದೇಶದಲ್ಲಿಯೇ ಇದ್ದು ಹತ್ಯಾಖಾಂಡವನ್ನು ಕೊನೆಗಾಣಿಸುವ ಪ್ರಯತ್ನ ಮಾಡಬೇಕೆ ಹೊರತು, ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದು ಸಾಮಾನ್ಯನಿಗೆ ಮೋದಿದಾ ಈ ದೇಶ ಎನ್ನುವಂತೆ ಮಾಡುತ್ತದೆ

  25. Raju Kharvi

    ಭಾರತವನ್ನು ಪ್ರೀತಿಸುವ ಯಾವ ಪ್ರಜೆಯೂ ಹೀಗೆ ಹೇಳಿಕೆ ನೀಡುವುದಿಲ್ಲ. ಇದಕ್ಕಿಂತ ಜಾಸ್ತಿ ಎನೂ ಹೇಳಲು ಸಾಧ್ಯವಿಲ್ಲ. ಕಾರಣ ಹೇಳಿಕೆ ನೀಡಿರುವುದು ಮಹನ್ ಸಾಹಿತಿ ಎನಿಸಿಕೊಂಡವರು.

  26. C. N. Ramachandran

    ಪ್ರಿಯರೆ: ನಾನು ಮೊನ್ನೆ ನಡೆದ ಕಾರ್ಯಕ್ರಮದಲ್ಲಿದ್ದೆ ಮತ್ತು ಅಂದು ಅನಂತಮೂರ್ತಿಯವರು ಹೇಳಿದುದನ್ನು ನಾನು ಅರ್ಥಮಾಡಿಕೊಂಡಿದ್ದುದು ಹೀಗೆ: “ಮೋದಿ ಪ್ರಧಾನಿಯಾದರೆ ’ಅಂತಹ’ ಭಾರತದಲ್ಲಿ ನಾನಿರಲು ಇಷ್ಟಪಡುವುದಿಲ್ಲ.” ಈ ಹೇಳಿಕೆಯ ಅರ್ಥ ’ನಾನು ದೇಶವನ್ನು ಬಿಟ್ಟು ಹೋಗುತ್ತೇನೆ’ ಎಂದು ಖಂಡಿತಾ ಅಲ್ಲ. ಅದರ ಅರ್ಥ, ’ಅಂತಹ ದೇಶ ನನಗೆ ಬೇಡ’ ಎಂದು. ಇದು ನಮ್ಮ ದೇಶವನ್ನೇ ಕುರಿತಾದ, ತುಂಬಾ ನೋವಿನ, ಕಳಕಳಿಯ, ಕಾಳಜಿಯ ಉದ್ಗಾರ.
    ಈ ಮಾತನ್ನು ಬೇರೆ ಬೇರೆ ಶಬ್ದಗಳಲ್ಲಿ ಅನಂತಮೂರ್ತಿಯವರು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ. ಅವರು ’ಇಂಡಿಯಾ’ ಬೇರೆ, ’ಭಾರತ’ ಬೇರೆ; ನನಗೆ ಇಂಡಿಯಾ ಬೇಕು — ಎನ್ನುವಾಗಲೂ ಇದೇ ಕಾಳಜಿ ಇದೆ: ಬಹು ಧರ್ಮೀಯ, ಬಹು ಸಾಂಸ್ಕೃತಿಕ, ಬಹು ಭಾಷಿಕ ಪರಿಕಲ್ಪನೆಯನ್ನು ಅವರು ’ಇಂಡಿಯಾ’ ಎಂದು ಕರೆಯುತ್ತಾರೆ; ಮತ್ತು ’ಏಕ ಮುಖಿ’ ಪರಿಕಲ್ಪನೆಯನ್ನು ’ಭಾರತ’ ಎಂದು ಕರೆಯುತ್ತಾರೆ. ಎಂದರೆ, ಅವರ ಮೊನ್ನೆಯ ಉದ್ಗಾರ ’ನನಗೆ ಬಹು ಮುಖಿಯಾದ ದೇಶೀಯ ವ್ಯವಸ್ಥೆ ಬೇಕು’ ಎಂಬ ಪ್ರಬುದ್ಧ ನಿಲುವನ್ನು ತೋರಿಸುತ್ತದೆ. ಈ ಹೇಳಿಕೆಯನ್ನು ’ಪಲಾಯನವಾದ,’ ’ನಮ್ಮ ದೇಶದ ಬಗ್ಗೆ ಪ್ರೀತಿಯಿಲ್ಲ,’ ಇತ್ಯಾದಿ ಅರ್ಥೈಸುವುದು; ಮತ್ತೆ ಈ ಹೇಳಿಕೆಗೆ ’ಕಾಂಗ್ರೆಸ್-ಸೋನಿಯಾ ಗಾಂಧಿ’ ಎಳೆದು ತರುವುದು ಅವರ ನಿಲುವಿಗೆ ನಾವು ತೋರುವ ಅಗೌರವ ಎಂದು ನನಗೆ ತೋರುತ್ತದೆ.
    ಇದೊಂದು ’ನೈತಿಕ-ರಾಜಕೀಯ ನಿಲುವು’; ಮತ್ತು ಈ ನಿಲುವನ್ನು ಸಾರ್ವಜನಿಕವಾಗಿ ಮಂಡಿಸುವುದಕ್ಕೆ ಹಾಗೂ ಆ ನಿಲುವಿಗೆ ಬದ್ಧರಾಗಿರುವುದಕ್ಕೆ ಅಗಾಧ ನೈತಿಕ ಪ್ರಜ್ಞೆ ಬೇಕು.
    ಸಿ. ಎನ್. ರಾಮಚಂದ್ರನ್

    • ಸತ್ಯನಾರಾಯಣ

      ಸರ್. ಸಮಸ್ಯೆ ಇರುವುದೇ ಇಲ್ಲಿ. ನೀವು ಕಾರ್ಯಕ್ರಮದಲ್ಲಿ ಹಾಜರಿದ್ದುದರಿಂದ ಹಾಗೂ ಅನಂತಮೂರ್ತಿಯವರ ಮಾತುಗಳನ್ನು ಸ್ವತಃ ಕೇಳಿಸಿಕೊಂಡಿದ್ದರಿಂದ ಅದನ್ನ ಸರಿಯಾಗಿ ಗ್ರಹಿಸಿದ್ದೀರಿ ಹಾಗೂ ಅರ್ಥೈಸಿದ್ದೀರಿ. ಆದರೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಓದಿದ ಸಾಮಾನ್ಯ ಓದುಗರು ಅದೇ ಮಾತುಗಳನ್ನು ಹೇಗೆ ಸ್ವೀಕರಿಸಿದ್ದಾರೆ ಹಾಗೂ ಅರ್ಥೈಸಿದ್ದಾರೆ ಎಂಬುದಕ್ಕೆ ಇಲ್ಲಿ ಹಾಗೂ ಮಾಧ್ಯಮಗಳಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿ.
      “ನಿಮ್ಮ ಅಭಿಪ್ರಾಯಗಳ ಪ್ರಕಾರ ನರೇಂದ್ರ ಮೋದಿಯವರನ್ನು ಮಾಧ್ಯಮಗಳು ಅತಿಯಾಗಿ ವೈಭವೀಕರಿಸುತ್ತಿವೆ ಎಂದು ನಾವೆಲ್ಲ ಓದಿದೆವು. ಇದೇ ಮಾಧ್ಯಮಗಳು ನಿಮ್ಮ ಮಾತುಗಳನ್ನೂ ಅತಿಯಾಗಿ ವೈಭವೀಕರಿಸುತ್ತಿವೆಎಂದು ನಿಮಗನ್ನಿಸುತ್ತಿಲ್ಲವೆ?” ಎಂಬ ಮಹಾಬಲಮೂರ್ತಿ ಕೊಡ್ಲಕೆರೆಯವರ ಪ್ರಶ್ನೆ (ವಿಜಯವಾಣಿ 17.9.13) ವಿಚಾರಾರ್ಹ ಅಲ್ಲವೆ?

    • ಸೀಮಾ ಹೊಸಮನೆ

      ನೈತಿಕ ಪ್ರಜ್ಞೆಯನ್ನು ಗುತ್ತಿಗೆ ಹಿಡಿದವರ ಹಾಗೆ ಮಾತನಾಡುವುದು ಬೇಡ.

  27. malini guruprasanna

    Obbaru Modi para, mattobbaru Modi virodha, But ondu maatra satya. yellaroo Aavesha bharitare. Why..? Nimma mundina Aaike Kai Irali athava Modi irali. eduraaligalannu dweshadinda noduva manastiti namma kannugalannu muchchi haakuvudillava.? Sikh naramedha yaarige gottilla, ADAKKAGI CONGRESSNAVARANNU RAKTASIKTA PAKSHA YENNALAADEETE? 1969ra Gujarat duranta yaarige gottilla?, CONGRESS KOLEGADUKA PAKSHAVE? illiyavaregoo deshadalli nadeda komugalabhegalu saaviraaru. Vibhajaneya nantarada hatyakandagaleshtu?. Hogali, Rama Bhaktaridda trainina avasheshagalu aaga yaava TV maadhyamakkoo sikkiralillavaa? Heli, yelladakkoo Modi Honeya..?Sikh naramedhadalli Rajiv gandhi paatra ide annalu saadhyavaa..? MODI PRADHANIYAADA KOODALE RAKTASIKTA BHARATA YEMBA HELIKE HAASYAASPADAVALLAVE? ADAKKINTA PICKPOCKETERS UTTAMA YEMBA HELIKE SINIK ANNISUTTIDE NANAGE. ADU PICKPOCKET ALLA, ROBBERY, DESHAVANNE DOCHUTTIDDARE. CONGRESSANNU SAMARTHISIKOLLALAAGADE PICKPOCKTERS ENDU OPPIKONDANTE AAGUVUDILLAVAA..? YEKE aSHTU MRUDUVAADA PADA, DORODEKORARU ENNALU SANKOCHAVE? BJPYO MODIYO BANDU KRANTI UNTU MAADABAHUDEMBA BHRAME NANAGILLA. NAMMA RAAJYAVANNE BJPYAVARU AALIDA REETI ADAKKE NIDARSHANA. HINDOMME VAJAPAYE BAGGEYOO IDE BHAVANE ITTU. BHARATA BADALAAITA..? NAAVU TV CHANNELGALANNU NODUTTA NODUTTA COURTGINTA MUNCHE TEERPU KODUVA ABHYASA BELESIKONDIDDEVENO. INNU ANATHA MURTHYYAVARA BAGGE HELUVUDAARE AVARU YAAVATTO TAMMA VAYASSIGE TAKKANTE MAATANAADILLA(ADU NANNA ABHIPRAYA). MODI PRADHANIYAADARE TAANU BADUKUVUDILLA EMBUDU SAANKETIKAVAADA PRATIBHATANEYE IRABAHUDU. MAATANAADUVA MUNNA YOCHISUVA ABHYASAVE AVARIGILLAVENO EMBA BHAVANE BARUVUDANTOO SATYA. NIJA, VAAKSWATANTRYAVANNU YAAROO AVARINDA KITTU KOLLALARARU. AVARA AADARSHAGALA REETIYE AVARU BADUKKIDDARE ADAKKONDU ARTHA BARUTTITTU. ADHIKAARADALLIRUVA PAKSHAGALA OLAIKE, ADARINDA AVARU PADEDA LAABHAGALU IVELLA YAARIGE GOTTILLA. CNR SIR HELIDANTE CONGRESS ANNU EE VAADADALLI ELEYUTTILLA, AADARE MODI BEDA SARI, MATYAARU? MODIYA AALVIKEYALLI ONDEONDU HATYAKANDA NADEDIDE, AADARE CONGRESSNAVARA ALVIKEYALLI SAAVIRAARU HATYAKAANDAGALOO NADEDIVE. AVARU ITARE KOMUGALANNU BADIDEBBISUVUDU HOSATE? (ITARE KOMUGALANNU MELETTUVUDU, SAMAANA DRUSHTIYINDA NODUVUDU BERE, AVARANNU ETTI KATTUVUDU BERE). ANANTHAMURTHY SIR ONDU PARYAYA NAAYAKARANNU SOOCHISIDDARE OLLEYADITTU. NAMMA DESHAKKE OLLEYA NAAYAKA SIKKALI, KUSIDIRUVA ARTHA VYAVASTE MELELALI, ADANNU RAHUL GANDHI MAADIDAROO SARI, MODI MAADIDAROO SARI, KALEDA 5 VARSHA KARNATAKADALLI NAAVU ANUBHAVISIDA STITI MAATRA BEDA.

  28. charitha

    ಅನಂತಮೂರ್ತಿಯವರನ್ನು ಒಬ್ಬ ‘ಪಲಾಯನವಾದಿ’ ಎಂದು ಗ್ರಹಿಸುವುದೇ ತಮಾಷೆಯಾಗಿದೆ! ಇನ್ನು, ಅವರನ್ನು ‘ಉಳಿಸಿಕೊಳ್ಳುವ’ ಬಗೆಗೆ ಕಾರ್ಪೆಂಟರ್ ಅವರ ಮುಗ್ಧ ಕಾಳಜಿಗೆ ನನ್ನ ಸಹಮತ!
    ರಾಜಕೀಯ ಮಾತಾಡುವುದೂ ಕೂಡ ಮೈಲಿಗೆ ಅನ್ನುವವರ ನಡುವೆ, ತಮ್ಮ ನಿಲುವನ್ನು ನಿಷ್ಠುರವಾಗಿ ಹೇಳಿಕೊಂಡು ಟೀಕೆಗಳನ್ನು ಮೈಮೇಲೆಳೆದುಕೊಳ್ಳುವ ಅನಂತಮೂರ್ತಿಯವರು ಮನೆಯ ಹಿರಿಯನಂತೆ ಕಾಣುತ್ತಾರೆ.
    ಇಲ್ಲಿ ಸಿ. ಎನ್. ರಾಮಚಂದ್ರನ್ ಅವರ ಗ್ರಹಿಕೆ ಸರಿಯಾದದ್ದು.
    “ಇದೊಂದು ’ನೈತಿಕ-ರಾಜಕೀಯ ನಿಲುವು’; ಮತ್ತು ಈ ನಿಲುವನ್ನು ಸಾರ್ವಜನಿಕವಾಗಿ ಮಂಡಿಸುವುದಕ್ಕೆ ಹಾಗೂ ಆ ನಿಲುವಿಗೆ ಬದ್ಧರಾಗಿರುವುದಕ್ಕೆ ಅಗಾಧ ನೈತಿಕ ಪ್ರಜ್ಞೆ ಬೇಕು.”
    – ಚರಿತಾ

  29. Anonymous

    ಅನಂತಮೂರ್ತಿಯವರು ಹೇಳಿಕೆಯನ್ನು ನಾನು ಅರ್ಥ ಮಾಡಿಕೊಂಡಂತೆ `ಮೋದಿಪ್ರಣೀತ ಕೋಮುವಾದಿ ಭಾವನೆಗಳನ್ನೇ ಬಂಡವಳವನ್ನಾಗಿ ಮಾಡಿಕೊಂಡು ಪ್ರಧಾನಿ ಹುದ್ದೆಗೆ ಆಯ್ಕೆ ಆದರೆ ಅಂತಹ ಭಾರತದಲ್ಲಿ ನಾನಿರಲು ಇಷ್ಟಪಡುವುದಿಲ್ಲ. ನೆಹರುಪ್ರಣೀತ ಗಾಂಧಿಪ್ರಣೀತ ಭಾರತ ನನ್ನ ಕನಸಿನ ಭಾರತ ಎಂದೂಕೂಡಾ ಅವರು ಹೇಳಿದ್ದನ್ನು ನಾನು ಕೇಳಿಸಿಕೊಂಡೆ. ಅಂದರೆ ನಾನು ಕೇಳಿದಂತೆ ಅಂತಹ ಭಾರತದಲ್ಲಿ ನಾನು ಬದುಕಿರಲು ಇಷ್ಟಪಡುವುದಿಲ್ಲ ಎಂದೂ ಕೂಡಾ ಹೇಳಿದ್ದನ್ನು ನಾನು ಕೇಳಿಸಿಕೊಂಡೆ. ಇದು ಅವರ ಹತಾಶೆಯ ಮಾತುಗಳೆಂದು ಅರ್ಥ ಮಾಡಿಕೊಳ್ಳಬೇಕೆಂದು ನನ್ನ ತಿಳಿವಳಿಕೆ. ಇಂದು ಭಾರತದ ಪ್ರಜೆ ತುಂಬಾ ಆತಂಕ, ಗೊಂದಲದಲ್ಲಿದ್ದಾನೆ. ರಾಜಕಾರಣಿಗಳು ಹೇಗಾದರೂ ಮಾಡಿ ಚುನಾವಣೆಯನ್ನು ಗೆದ್ದು ಬರಲು ಎಲ್ಲ ಬಗೆಯ ಸರ್ಕಸ್ಸನ್ನು ಮಾಡಿಬಿಡುತ್ತಾರೆ. ಇದುವೇ ಪ್ರಜಾಪ್ರಭುತ್ವದ ದುರಂತ. ಇದಂತೂ ಸತ್ಯ. ಮೊದಲಿನಂತೆ ಈಗ ನಿರ್ಭಯರಾಗಿ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ. ಕೋಮುವಾದಿ ಶಕ್ತಿಗಳು ಆಮಿಷ ಒಡ್ಡಿಯೋ, ಬೆದರಿಕೆ ಹಾಕಿಯೊ ಸ್ವತಂತ್ರರಾಗಿರಲು ಬಿಡುತ್ತಿಲ್ಲ. ಇದುವೇ ನಮ್ಮ ದ್ಶದ ದುರಂತವಾಗಿದೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading