ಅದೊಂದು ಅಪೂರ್ವ ರಾಗ..

ರಾಘವನ್ ಚಕ್ರವರ್ತಿ 

೧೯೮೬-೮೭ ರ ಸಮಯ. ಹಿಂದಿ ಪ್ರಚಾರ ಸಭೆಯವರ “ಹಿಂದಿ ಪ್ರವೇಶ ಪರೀಕ್ಷೆ”ಯನ್ನು ಹೇಗೋ ಮುಕ್ಕರಿದು ಮುಗಿಸಿದ್ದೆ. ನಾನು ಬಹಳ ಗೌರವಿಸುವ ಅಪ್ಪಟ ಕನ್ನಡತಿ, ಹಿಂದಿ ಪ್ರಚಾರಕಿ ಜಯಲಕ್ಷ್ಮೀ ಮೇಡಂ ನನ್ನ ಮೇಲಿಟ್ಟಿದ್ದ ಪ್ರೀತಿಗಾಗಿ ಹಿಂದಿ ರಾಷ್ಟ್ರಭಾಷ ಪರೀಕ್ಷೆಯನ್ನೂ ತೆಗೆದುಕೊಳ್ಳಬೇಕಾಯಿತು. ಮೇಡಂ ಮನೆಗೆ ಬರುತ್ತಿದ್ದ ಸಣ್ಣಪುಟ್ಟ ಹೈಕಳೂ ಸಹ ಮನ ಬಂದಂತೆ ಹಿಂದಿ ಮಾತಾಡುತ್ತಿದ್ದು ನೋಡಿದಾಗ ಅಚ್ಚರಿ ಎನಿಸುತ್ತಿತ್ತು. ಅದೇಕೋ ನನಗೂ ಹಿಂದಿಗೂ ಆಗಿ ಬಂದಿಲ್ಲ. ಪರೀಕ್ಷೆ ಹೇಗಾದರೂ ತಪ್ಪಲಿ ಎಂದು ಹರಕೆ ಹೊತ್ತು ವಿಧಿಯಿಲ್ಲದೇ ಓದುತ್ತಿದ್ದೆ. ಮೇಡಂ ಆಗಾಗ ಪ್ರೀತಿಯಿಂದ ವಿಚಾರಣೆ ಮಾಡುತ್ತಿದ್ದರು. ಪ್ರವೇಶ ಪರೀಕ್ಷೆಗಿಂತ ’ರಾಷ್ಟ್ರಭಾಷೆ’ಗೆ ಹೆಚ್ಚು ಕಷ್ಟಪಡಬೇಕಿತ್ತು. ಅಲ್ಲದೇ ಪರೀಕ್ಷೆ ಒಂದು ಭಾನುವಾರಕ್ಕೆ ಯೋಜಿತವಾಗಿತ್ತು. ಪರೀಕ್ಷೆಗೂ ಓದುತ್ತಾ, ತಪ್ಪಿಸಿಕೊಳ್ಳುವ ಸುಲಭೋಪಾಯಗಳನ್ನೂ ಶೋಧಿಸುತ್ತಾ ಧರ್ಮಸಂಕಟಕ್ಕೆ ತುತ್ತಾದೆ.

ಮರೋಚರಿತ್ರ, ಸ್ವಾತಿಮುತ್ಯಂ, ಸಿಗಪ್ಪು ರೋಜಾಗಳ್ ನಂತಹ ಚಿತ್ರಗಳನ್ನು ನೋಡಿ ಕಮಲಹಾಸನ್ ರ ಅಭಿಮಾನಿಯಾಗಿಹೋಗಿದ್ದೆ. ’ಸಾಗರ ಸಂಗಮಂ’ ನೋಡಲಾಗಿರಲಿಲ್ಲ. ನೋಡಲೇ ಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ನೋಡಲಾಗಲಿಲ್ಲ ಎಂಬ ಕೊರಗಿತ್ತು. ಥೀಯೇಟರ್ ಗಳಿಗೆ ಹೋಗುವ ಧೈರ್ಯವಿರಲಿಲ್ಲ. ಅಲ್ಲದೇ ಆಗಾಗಲೇ ’ಸಾಗರ ಸಂಗಮಂ’ ಬಂದು ಹೋಗಿಯೂ ಆಗಿತ್ತು. ಮೈಸೂರಿನ ಗಾಯತ್ರಿ ಟಾಕೀಸಿನಲ್ಲಿ ಬಹಳ ದಿನ(೧೦೦ ?) ಓಡಿತ್ತೆಂದು ಕೇಳಿದ್ದೆ. ಹೇಗಾದರೂ ಆ ಚಿತ್ರ ನೋಡಲೇಬೇಕು. ಆದರೆ ಹೇಗೆ? ಈಗಿನಂತೆ ಟೀವಿ ಚಾನೆಲ್ ಗಳಿರಲಿಲ್ಲ. ಇದ್ದದ್ದು ಊರಿಗೊಬ್ಬಳೆ ಪದ್ಮಾವತಿ..ನಮ್ಮ ದೂ.ದ.

ದೂದ ದಲ್ಲಿ ಹಿಂದಿಯ ಗೌಡಿಕೆ ಅವಿಚ್ಚಿನ್ನವಾಗಿ ಸಾಗಿತ್ತು. ಪ್ರತಿ ಭಾನುವಾರ ಪ್ರಾದೇಶಿಕ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿತ್ತು. (ಅವರೂ ಪಾಪ ಬದುಕಿಕೊಳ್ಳಲಿ ಎಂಬ ಧೋರಣೆ). ಇಂತಹ ಸಮಯದಲ್ಲಿಯೇ ನಮ್ಮ ಹಂಸಗೀತೆ, ಶರಪಂಜರಗಳೂ ಪ್ರಸಾರ ಭಾಗ್ಯಕಂಡಿದ್ದವು. ’ರಾಷ್ಟ್ರಭಾಷೆ’ಯ ಗ್ರಹಚಾರವೋ, ನನ್ನ ಅದೃಷ್ಟವೋ, ಪರೀಕ್ಷೆ ಇದ್ದ ದಿನವೇ ’ಸಾಗರ ಸಂಗಮಂ’ ಪ್ರಸಾರವಾಗುವುದೆಂದು ತಿಳಿದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. (ಅಂದು ಜುಹ್ನು ಬರೂವ ರ ಅಸ್ಸಾಮಿ ಚಿತ್ರ ಬರಬೇಕಿತ್ತಂತೆ..ಕೊನೆಯಲ್ಲಿ ’ಸಾಗರ ಸಂಗಮಂ’ ಗೆ ಅದೃಷ್ಟ ಒಲಿಯಿತು). ದೂ.ದ ಕ್ಕೆ ಮನಸ್ಸಿನಲ್ಲೇ ಥ್ಯಾಂಕ್ಸ್ ಹೇಳಿ, ’ರಾಷ್ಟ್ರಭಾಷೆ’ ಯನ್ನು ಏನು ಮಾಡುವುದು ಎಂದು ಯೋಚಿತನಾದೆ. ಭಾನುವಾರ ಬೆಳಿಗ್ಗೆ ಪರೀಕ್ಷೆಯ ಪೂರ್ವಾರ್ಧ ಮುಗಿಸಿ, ಉತ್ತರಾರ್ಧ ಆರಂಭವಾಗುವ ವೇಳೆಗೆ ಪರೀಕ್ಷಾ ಕೇಂದ್ರದಿಂದ ಪಲಾಯನಗೈದೆ. ’ಸಾಗರ ಸಂಗಮಂ’ ನೋಡಿ ನಿರಾಳನಾದೆ.

ಒಂದೇ ತಿಂಗಳು. ಫಲಿತಾಂಶ ಬಂತು. ಪೂರ್ವಾರ್ಧದಲ್ಲಿ ಅಚ್ಚರಿಯಾಗುವಂತೆ ’ಪಾಸ್’ ಆಗಿದ್ದೆ. ಸಹಜವಾಗಿಯೇ ಮಧ್ಯಾಹ್ನದ ವಿಷಯಕ್ಕೆ ’ಆಬ್ಸೆಂಟ್’ ಎಂದು ಬಂದಿತ್ತು. ಗೊತ್ತಿರುವ ವಿಚಾರ. ತಣ್ಣಗಿದ್ದೆ. ಆದರೆ ಪ್ರೀತಿಯ ಮೇಡಂ ಪ್ರಚಾರ ಸಮಿತಿಯ ಕಛೇರಿಗೆ ಹೋಗಿ ’ಆ ಹುಡುಗನಿಗೇಕೆ Absent..ಹಾಕಿದ್ದೀರಿ. ಎಲ್ಲೋಹ್ತು ಅವನ ಪೇಪರ್. ಅವನು ಹಾಗೆಲ್ಲಾ ತಪ್ಪಿಸಿಕೊಳ್ಳೊನಲ್ಲ’ ಎಂದೆಲ್ಲಾ interrogation ಮಾಡಿದರೆಂಬ ವಿಚಾರ ಕೇಳಿ ಕಂಗಾಲಾಗಿ ಹೋದೆ. ಮತ್ತೊಬ್ಬ ಸತ್ಯಸಂಧ ಸಹಪಾಠಿ ಯ ಮುಖಾಂತರ ’ಅವನಿಗೆ ಸಡನ್ ಆಗಿ ಹುಷಾರಿರಲಿಲ್ಲ. ಅದಕ್ಕೇ ಅವತ್ ಮಧ್ಯಾಹ್ನಾನೇ ಹೊರಟ್ ಬಿಟ್ಟ’ ಎಂಬ (ಅ)ಸತ್ಯವಾಕ್ಕನ್ನು ಮೇಡಂ ಯಜಮಾನರಿಗೆ ರವಾನಿಸಲಾಯ್ತು.

ಮೇಡಮ್ ಮನೆ ಕಡೆ ತಿರುಗಿ ಹೋಗಿಲ್ಲ. ಅಪಾರ ಜ್ಞಾಪಕ ಶಕ್ತಿಯ ಆಕೆ ’ಆಮೇಲಾದ್ರೂ ಇನ್ನೊಂದ್ ಪೇಪರ್ ಬರೆದ್ಯಾ ಇಲ್ವಾ’ ಎಂದು ಕೇಳುವ ಎಲ್ಲಾ ಸಾಧ್ಯತೆಗಳಿರುವುದರಿಂದ ಜಯನಗರದ ಕಡೆ ಹೆಚ್ಚು ಹೋಗುತ್ತಿಲ್ಲ  :-). ಮೇಡಂ ಚೆನ್ನಾಗಿರಲಿ.
.
’ಅತಿಶಯ ರಾಗಮ್..ಆನಂದ ರಾಗಮ್’ ಎನ್ನುತ್ತಾ ತಮ್ಮನ್ನೇ ಮರೆತು ಹಾಡಿದ ಅಭಿನಯಿಸಿದ ’ಅಪೂರ್ವ ರಾಗಂಗಳ್’ ನ ಕಮಲ್…ಇಂದು ಭಾರತೀಯ ಸಿನಿಮಾದ ಒಂದು ಅಧ್ಯಾಯವೇ ಆಗಿದ್ದಾರೆ. ನವೆಂಬರ್ ೭ ಅವರ ಜನ್ಮದಿನ. ಎರಡು
ವರ್ಷಗಳ ಹಿಂದಿನ ಹರಿದು ಹಂಚಿಹೋಗಿದ್ದ ಲೇಖನಗಳನ್ನು ಇಲ್ಲಿ ಸೇರಿಸಿದ್ದೇನೆ.
===========
’ಉಲಗನಾಯಗನ್’ ಕಮಲಹಾಸನ್ ಪದ್ಮಭೂಷಣರಾಗಿದ್ದಾರೆ. ಅಚ್ಚರಿಯ ವಿಷಯವೇನಲ್ಲ. ದಶಕಗಳಿಂದ ಅವರಿಗೆ ಪ್ರದಾನವಾದ ಪ್ರಶಸ್ತಿಗಳು ಹತ್ತು ನೂರಿರಬಹುದು. ಇದೀಗ ’ಪದ್ಮಭೂಷಣ’ದ ಗರಿ..ಸರದಿ.ಅವರಿಗೆ ಅಭಿನಂದನೆ ಸಲ್ಲಿಸೋಣ. ಹದಿನಾರು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದು ’ಇನ್ನುಮುಂದೆ ಪ್ರಶಸ್ತಿ ಬೇಡ..ಬೇರೆಯಯವರಿಗೂ ಕೊಡಿ’ ಎಂದು ಪ್ರಶಸ್ತಿ ಸಮಿತಿಗೆ ತಿಳಿಸಿದ ಕಮಲ್ ಗೆ ಹಲವು ವರ್ಷಗಳಿಂದಲೇ ಫಿಲಂಫೇರ್ ಪ್ರಶಸ್ತಿಗಳು ಬರುತ್ತಿಲ್ಲ !!

ಐದರ ಬಾಲಕನಾಗಿದ್ದಾಗಲೇ ಸಿನಿಮಾಲೋಕ ಪ್ರವೇಶಿಸಿದ ಕಮಲ್, ಅಂದಿನ ಎಮ್.ಜಿ.ಆರ್-ಸಾವಿತ್ರಿ-ಶಿವಾಜಿ-ಜೆಮಿನಿ ಯರಿಂದ ಇಂದಿನ ಪ್ರಕಾಶ್ ರೈ-ಮಾಧವನ್-ರಮೇಶ್ ಅರವಿಂದ್ ವರೆಗೂ ಹಲವು ತಲೆಮಾರಿನವರೊಂದಿಗೆ ಅಭಿನಯಿಸಿದ್ದಾರೆ. ಚಿತ್ರರಂಗದ ಬೆಳವಣಿಗೆಯೊಂದಿಗೇ ತನ್ನ ಜೀವನವನ್ನೂ ಗುರುತಿಸಿಕೊಳ್ಳುತ್ತಾ ಸಾಗಿದ ಅಣ್ಣಾವ್ರು, ಎ ಎನ್ ಆರ್ ರಂತಹ ಅಪರೂಪದ ಕಲಾವಿದರ ಸಾಲಿಗೆ ಕಮಲ್ ಸೇರುತ್ತಾರೆ. ೫೦ ವರ್ಷಕ್ಕೂ ಮೀರಿದ ಅವರ ಸಿನಿಮಾ ಜೀವನದಲ್ಲಿಯೇ ತಮಿಳು ಚಿತ್ರರಂಗದ ಹಲವು ಏಳು-ಬೀಳುಗಳೂ ಹಾಸುಹೊಕ್ಕಾಗಿವೆ. ಈ ಸುದೀರ್ಘ ಒಡನಾಟವೇ ಅವರನ್ನೊಬ್ಬ ಪಕ್ಕಾ ಕಲಾವಿದನಾಗಿ ತಂತ್ರಜ್ಞನಾಗಿ ರೂಪಿಸಿದೆ. ಸಿನಿಮಾದ ಹಲವು ವಿಭಾಗಗಳಲ್ಲಿ ಅವರಿಗೆ ಪರಿಶ್ರಮವಿದೆ.

ಕಮಲ್ ರಲ್ಲಿನ ಅಪ್ರತಿಮ ಕಲಾವಿದನನ್ನು ಹೊರಹೊಮ್ಮಿಸಿದ, ಅವನನ್ನು ಮನಮುಟ್ಟುವಂತೆ ನಿರೂಪಿಸಿದ, ಜನಮಾನಸ ತಲುಪಿಸಿದ ನಿರ್ದೇಶಕರಲ್ಲಿ, ಅವರ ಗುರು ಬಾಲಚಂದರ್, ಬಾಲುಮಹೇಂದ್ರ (’ಕೋಕಿಲ’ ನಿರ್ದೇಶಿಸಿ, ನಮ್ಮ ಮೋಹನ್ ಗೆ ’ಕೋಕಿಲಾ ಮೋಹನ್’ ಎಂಬ ಹೆಸರು ಬರಲು ಕಾರಣಕರ್ತರು), ಭಾರತಿರಾಜ, ಸಿಂಗೀತಮ್, ಕೆ.ವಿಶ್ವನಾಥ್, ಮಣಿರತ್ನಂ..ಇಂತಹ ದಿಗ್ಗಜರ ಪಡೆಯೇ ಇದೆ. ವಾಲಿ-ಇಳಯರಾಜಾ ರ ಪಾತ್ರವೇನೂ ಕಡಿಮೆ ಇಲ್ಲ. ಅಪೂರ್ವ ರಾಗಂಗಳ್, ಮೂನ್ರಾಂ ಪಿರೈ, ಪದಿನಾರು ವಯದನಿಲೆ, ರಾಜ ಪಾರ್ವೈ, ಪುಷ್ಪಕ ವಿಮಾನ, ಸಾಗರ-ಸಂಗಮಂ, ನಾಯಗನ್..ಕಮಲ್ ರ ನಟನಾ ಸಾಮರ್ಥ್ಯಕ್ಕೆ ಪ್ರಬಲ ಸಾಕ್ಷಿಯಾಗಿ ನಿಲ್ಲುವ ಚಿತ್ರಗಳು.

ಇತ್ತೀಚಿಗೆ ಬಂದ ’ಅನ್ಬೇ ಸಿವಂ’ ಕಮಲ್ ರಲ್ಲಿನ ಕಲಾವಿದ ಇನ್ನೂ ಸಶಕ್ತವಾಗಿದ್ದನೆಂಬುದನ್ನು ದೃಢಪಡಿಸಿದ ಚಿತ್ರ. ’ಮಹಾನದಿ’ಯಲ್ಲಿ ನಾಯಕ ಸೇಡಿನ ಹಾದಿ ತುಳಿದರೂ, ಕಮಲ್ ಅಭಿನಯಕಾಗಿ ಮಾತ್ರ ಸ್ಮರಣೀಯವೆನಿಸುತ್ತದೆ. ’ತೇವರ್ ಮಗನ್’ ನಲ್ಲಿ ಇಳಯರಾಜಾರ ಮಾಂತ್ರಿಕತೆಗೂ ಪಾಲಿದೆ. ಸಿನಿಮಾದ ಸೀರಿಯಸ್ ವಿದ್ಯಾರ್ಥಿಗಳು, ಚಿತ್ರರಸಿಕರಿಬ್ಬರೂ ಮರೆಯಲಾಗದ ’ಪುಷ್ಪಕ ವಿಮಾನ’..ಕಮಲ್-ಸಿಂಗೀತಮ್ ಜೋಡಿಗೆ ಮಾತ್ರ ಸಾಧ್ಯವಾಗುವಂತಹದ್ದು.

ಹಾಗೆಯೇ ಕಮಲ್ ರಲ್ಲಿನ ಕಲಾವಿದನೇ ಜನರನ್ನು ಹೆಚ್ಚು ತಲುಪಿದ್ದಾನೆ. ಅವರಲ್ಲಿಯ ನಿರ್ದೇಶಕ ’ಅರ್ಥರೈಟಿಸ್’ ಪೀಡಿತ  🙂 ಓಡಿಬಿಡಬೇಕೆಂಬ ಹಂಬಲ..ಆದರೆ ಓಡಲಾರ. ’ವಿರುಮಾಂಡಿ’ಯಲ್ಲಿ ಜಾಳಾಗಿಬಿಡುವ ಕಥೆ, ಎಲ್ಲೊ ಒಮ್ಮೆ ’ತೇವರ್ ಮಗನ್’ ರನ್ನು ನೆನಪಿಸುವ ದೃಶ್ಯಗಳು ಒಂದು ಉದಾಹರಣೆ.

ಗುರುದತ್, ಮೀನಾಕುಮಾರಿ, ಕಲ್ಪನ, ಶೋಭಾ…ಸಿನಿಮಾವನ್ನು ಒಂದು ಕಲೆಯಾಗಿ, ಪ್ರತಿಭೆ ಪ್ರದರ್ಶಿಸುವ ವೇದಿಕೆಯಾಗಿ ಗ್ರಹಿಸಿದರು. ಆದರೆ ಅಸಹಾಯಕತೆ, ದುಗುಡ, ಭ್ರಮನಿರಸನ, ಹತಾಶೆ, ನಿರಾಶೆಗಳನ್ನು ಮೀರಿದ ಬದುಕನ್ನು ಬಾಳಲಾಗಲಿಲ್ಲ. ತಮ್ಮ ಪಾತ್ರಗಳಿಗೆ ಪರಕಾಯ-ಪ್ರವೇಶಿಸಿದರು..ಜೀವ ತುಂಬಿದರು. ತೆರೆಯ ಮೇಲೆ ಅಭಿನಯಿಸಿ ತೋರಿದ ಜೀವನಪ್ರೇಮ ನಿಜಜೀವನದಲ್ಲಿ ಸಾಕಾರವಾಗಲಿಲ್ಲ. ಇವರೆಲ್ಲಾ ಕೊನೆಗೆ ದುರಂತಪಾತ್ರಗಳೇ ಆಗಿಹೋದರು. ವ್ಯಸನಕ್ಕೆ ಬಲಿಯಾದರು. ಇಲ್ಲವೇ ತಮ್ಮನ್ನು ತಾವೇ ಕೊಂದುಕೊಂಡರು. ಕಮಲ್ ಭಿನ್ನವಾಗಿ ನಿಲ್ಲುವುದು ಇಲ್ಲಿ. ತನ್ನ ವೈಯಕ್ತಿಕ ಜೀವನದಲ್ಲಿ ಹಲವು ಇಳಿತ ಕಂಡ (ಸುಮಾರೆಲ್ಲಾ ಸ್ವಯಂಕೃತಾಪರಾಧ)ಕಮಲ್ ಕಲೆಯನ್ನೂ ಮೀರಿದ, ಬರಿಯ ಪ್ರತಿಭಾ ಪ್ರದರ್ಶನದ ವೇದಿಕೆಯಷ್ಟೇ ಆಗದ

ಸಿನಿಮಾವನ್ನು ಹುಡುಕತೊಡಗಿದರು. ನಿಜಜೀವನದ ತಮ್ಮ ಪಾತ್ರ ’ಮೂನ್ರಾಂ ಪಿರೈ’ ತರಹವೋ, ’ಮರೋಚರಿತ್ರ’ ತರಹವೋ ಆಗದಂತೆ ನೋಡಿಕೊಂಡರು. ಹತಾಶೆ-ನಿರಾಶೆ ಗಳನ್ನು ಮರೆಯಬೇಕೆಂದುಕೊಂಡರೋ, ಅಥವಾ ಸಿನಿಮಾ ಮಾಯೆಯೇ ಆಪೋಶನ ತೆಗೆದುಕೊಂಡಿತೋ..ಸಿನಿಮಾವನ್ನು ಬರಿಯ profession ಮಾಡಿಕೊಳ್ಳದೇ Obsession ಮಾಡಿಕೊಂಡರು. ’ಅಪೂರ್ವ ಸಹೋದರ್ ಗಳ್’, ’ಮೈಕೆಲ್ ಮದನ ಕಾಮರಾಜನ್’ ಗಳಲ್ಲಿ ನಗಿಸಿ ಸುಸ್ತು ಮಾಡಿದರು. ’ಮುಂಬೈ ಎಕ್ಸ್ ಪ್ರೆಸ್’, ’ಪಂಚತಂತ್ರಮ್’ ನಂತಹ ಚಿತ್ರಗಳನ್ನು ಮಾಡುವಾಗ ತೀವ್ರ ಸಾಂಸಾರಿಕ ಸಂಕಷ್ಟದಲ್ಲಿದ್ದ ಕಮಲ್ ದಿನವಿಡೀ ದೈತ್ಯನಂತೆ ಸಿನಿಮಾ ಚಟುವಟಿಕೆಗಳಲ್ಲಿ ಹೇಗೆ ತೊಡಗಿಕೊಂಡಿದ್ದರೆಂಬುದನ್ನು ರಮೇಶ್ ಅರವಿಂದ್ ಒಂದುಕಡೆ ಹೇಳಿದ್ದಾರೆ.

ಕನ್ನಡನಾಡಿನೊಂದಿಗೂ ಕಮಲ್ ಗೆ ಅನ್ಯೋನ್ಯ ಸಂಬಂಧವಿದೆ. ತಮಿಳುನಾಡಿನಲ್ಲಿ ರಾಜಕೀಯಸ್ಥರ ಧೋರಣೆಯಿಂದ ಜಿಗುಪ್ಸಿತರಾದಗಲೆಲ್ಲಾ ಕಮಲ್ ಗೆ ಸಾಂತ್ವನಸಿಕ್ಕುವುದು ಕನ್ನಡಿಗರಿಂದ. ಕಮಲ್ ಚಿತ್ರವೊಂದು ಹಿಟ್ ಆಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದು ಕೂಡಾ
ಬೆಂಗಳೂರಿಗರ ಹೊಣೆಗಾರಿಕೆಯೇ !! ಕನ್ನಡದ ಬಿ.ವಿ.ಕಾರಂತರಲ್ಲಿ ತನ್ನ ಮೊದಲ ಗುರು ಕಂಡ ಕಮಲ್ ಅದನ್ನು ನಿರ್ವಂಚನೆಯಿಂದ ಹೇಳಿಕೊಳ್ಳುತ್ತಾರೆ. ’ರಾಮ ಶಾಮ ಭಾಮ’ದಲ್ಲಿ ಹುಬ್ಬಳ್ಳಿಯ ಕನ್ನಡ ಕಲಿತು, ಪಕ್ಕಾ ’ಹುಬ್ಬಳ್ಳಿಯಾಂವ’ನಂತೆಯೇ ಅರಳುಹುರಿದಂತೆ ಮಾತನಾಡಿದ್ದು ಅಚ್ಚರಿ ತರುತ್ತದೆ. ಕನ್ನಡ ಚಿತ್ರೋದ್ಯಮಕ್ಕೆ ೭೫ ತುಂಬಿದಾಗ ಕಮಲ್ ಕನ್ನಡದಲ್ಲಿ ಮಾಡಿದ ಭಾಷಣ ಸ್ಮರಣೀಯ.

ಕಮಲ್ ರ ಅಭಿನಯ ಚಾತುರ್ಯವನ್ನು ಎಲ್ಲರೂ ಮೆಚ್ಚುತ್ತಾರೆ. ’ವ್ಯಕ್ತಿ’ಯಾಗಿ ಕಮಲ್ ತಮಿಳು ಸಿನಿಮಾದ ಮಂದಿಗೆ ಬಿಸಿತುಪ್ಪವಾಗಿದ್ದರೆಂಬುದೂ ನಿಜ. ಹಲವರೊಂದಿಗೆ ಅಷ್ಟಕ್ಕಷ್ಟೇ..ಅವರ ಸ್ವಭಾವವೂ ಇದಕ್ಕೆ ಕಾರಣವಿರಬಹುದು. ತಾವು ಮತ್ತು ತಮ್ಮ ಸಿನಿಮಾ ಇತರರಿಗಿಂತ ಭಿನ್ನ ಎಂಬುದನ್ನು ತೋರುವ ಹಂಬಲವೂ ಇದಕ್ಕೆ ಕಾರಣವಿರಬಹುದು. ಮುಕ್ತಾ ಶ್ರೀನಿವಾಸನ್, ಮಣಿರತ್ನಂ ರೊಂದಿಗೆ ’ನಾಯಗನ್’ ಸಂದರ್ಭದಲ್ಲಿ ಮಾಡಿಕೊಂಡ ಕಿರಿಕಿರಿ, ’ವೇಟ್ಟೈಯಾಡು ವೆಳಿಯಾಡು’ ಮಾಡುವಾಗ ಗೌತಮ್ ಮೆನನ್ ಜೊತೆಗಿನ ಮುಸುಕಿನ ಗುದ್ದಾಟ, ಮುಸುಕಿನೊಳಗೇ ಉಳಿಯಲಿಲ್ಲ. ಇವರ್ಯಾರೂ ಈಗ ಕಮಲ್ ಬಳಿ ನುಸುಳುತ್ತಿಲ್ಲ. ’ಇರುವರ್’ ನ ತಮಿಳ್ ಸೆಲ್ವಂ ಪಾತ್ರ ಪ್ರಕಾಶ್ ರಾಜ್ ಪಾಲಾಗಿದ್ದು, ಅವರಿಗೆ ಆ ಪಾತ್ರದಿಂದ ರಾಷ್ಟ್ರ ಪ್ರಶಸ್ತಿ ಬಂದಿದ್ದು ಈಗ ಇತಿಹಾಸ. ಅಗಾಧವಾಗಿ ಬೆಳೆದಿರುವ ಕಮಲ್ ಗೆ ನಿರ್ದೇಶಕರ ವರಸೆಗಳಾವುದೂ ಹೊಸದಲ್ಲ. ’ದಶಾವತಾರಮ್’, ’ಅವ್ವೈ ಷಣ್ಮುಗಿ’ ಯಲ್ಲಿ ರವಿಕುಮಾರ್ ’ಡಮ್ಮಿ’ಯಾಗಿದ್ದು ಕಮಲ್ ರನ್ನು ಬಲ್ಲವರಿಗೆಲ್ಲಾ ತಿಳಿದದ್ದೇ.

ಅವರ ಸ್ವಭಾವ ಏನೇ ಇರಲಿ, ತಮ್ಮನ್ನು ಪೊರೆದ ತಮಿಳು ಚಿತ್ರರಂಗಕ್ಕೆ, ತಮಿಳು ಪ್ರೇಕ್ಷಕರಿಗೆ ಏನಾದರೂ ಪ್ರತಿಯಾಗಿ ಕೊಡಬೇಕು, ಏನಾದರೂ ಭಿನ್ನವಾಗಿ ತೋರಿಸಬೇಕೆಂಬ ಅಕಾಂಕ್ಷೆ, ಛಲಗಳು ಕಮಲ್ ಎಲ್ಲಾ ಕಾಲಕ್ಕೂ ಸಲ್ಲುವಂತೆ ಮಾಡಿವೆ. ೯೦ರ ದಶಕದಲ್ಲಿ ಮಾಡಿದ ’ಮೈಕೆಲ್ ಮದನ ಕಾಮರಾಜನ್’ ಎಂಬ ಪಕ್ಕಾ ಕಾಮಿಡಿ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ’ಲ್ಯಾಪ್ ಟಾಪ್’ ತೋರಿಸಿದ್ದರು. (ನಮ್ಮ ಅರ್.ಎನ್.ಜಯಗೋಪಾಲ್, ಆರ್.ಎನ್.ಕೃಷ್ಣಪ್ರಸಾದ್, ಸುಧೀಂದ್ರ, ಹೊನ್ನವಳ್ಳಿ ಕೂಡಾ ಈ ಚಿತ್ರದಲ್ಲಿದ್ದರು !!) ತಂತ್ರಜ್ಞಾನದಲ್ಲಿ ಹೊಸದೇನು ಬಂದರೂ ತಾವು ಅದನ್ನು ಪ್ರಯೋಗಿಸಿನೋಡಬೇಕೆಂಬ ಇಚ್ಛೆ ಈ ಇಳಿವಯಸ್ಸಿನಲ್ಲೂ ಅವರಿಗಿದೆ. ನಾಸ್ತಿಕರಾಗಿ, ’ಕಮ್ಯುನಿಸ್ಟ್’ ರಾಗಿ ಗುರುತಿಸಿಕೊಳ್ಳಲು ಹಂಬಲಿಸುವ ಕಮಲ್, ಮಹಾನ್ ಆಸ್ತಿಕರಾದ ವಾಲಿ, ’ಸುಜಾತ’ ತರದವರ ಬಳಿ ಬಹಳ ಗೌರವವಾಗಿ ನಡೆದುಕೊಂಡರು.

ಹಾಗಾದರೆ ಕಮಲ್ ಮಾಡದ ಪಾತ್ರಗಳೇ ಇಲ್ಲವೇ? ಎಲ್ಲಾ ಪಾತ್ರಗಳನ್ನೂ ಮಾಡಿ ಮುಗಿಸಿಯಾಯಿತೆ? ’ಇಲ್ಲ’ ಎಂದು ಹೇಳಬೇಕಾಗುತ್ತದೆ. ’ಭಕ್ತ ಪ್ರಹ್ಲಾದ’ನ ಹಿರಣ್ಯ ಕಶಿಪು, ’ಬೆಳದಿಂಗಳ ಬಾಲೆ’ಯ ರೇವಂತ್, ’ಒಂದಾನೊಂದು ಕಾಲದಲ್ಲಿ’ಯ ಗಂಡುಗಲಿ ಅಥವಾ ಪೆರ್ಮಾಡಿ…ಹೇಳುತ್ತಾ ಹೋಗಬಹುದು. ’ಬೆಳದಿಂಗಳ ಬಾಲೆ’ಯನ್ನು ಸ್ವತಃ ಕಮಲ್ ಕೊಂಡಾಡಿದ್ದರು. ಕೊನೆಗೂ ಆ ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡಲಾಗಲಿಲ್ಲ.

ಹಲವು ಬಾರಿ ಕಮಲ್ ತಮ್ಮ ಅಧಿಕಪ್ರಸಂಗಿತನಕ್ಕೆ ಟೀಕೆಗೊಳಗಾಗಿದ್ದಾರೆ. ಒಂದು ಉದಾಹರಣೆ ನೋಡಿ. ಅಣ್ಣಾವ್ರನ್ನು ಕದ್ದೊಯ್ದಿದ್ದ ವೀರಪ್ಪನ್ ನೊಂದಿಗೆ ’ಶಾಂತಿದೂತ’ನಂತೆ ಪ್ರತ್ಯಕ್ಷರಾಗಿ, ವೀರಪ್ಪನ್ ಜೊತೆ ಮಾತುಕತೆಯಾಡಿ, ಅಣ್ಣಾವ್ರನ್ನು ’ಬಿಡುಗಡೆ’ ಮಾಡಿಸಿದರೆಂದು ಹೇಳಲಾದ ನೆಡುಮಾರನ್ ನೆನಪಿರಬಹುದು. ನೆಡುಮಾರನ್ ರ ಮೇಲೆ ಗುರುತರ ಆಪಾದನೆಗಳಿವೆ. ರಾಜೀವ್ ಹತ್ಯೆಯ ಸಂಚುಕೋರರಿಗಾಗಿ ಕೋಟ್ಯಾಂತರ ಹಣ ಸಂಗ್ರಹಿಸಿದ ನೆಡುಮಾರನ್, ಆ ಹಣವನ್ನು ಏನು ಮಾಡಿದರು…ಅವರ ಕುಟುಂಬಗಳ ಸಲುವಾಗಿ ವ್ಯಯಿಸಿದರಾ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಅವರು ಇಂದಿಗೂ ಕೊಟ್ಟಿಲ್ಲ. ಸ್ವತಃ ಕರುಣಾನಿಧಿಗೆ ನೆಡುಮಾರನ್ ಅಂದರೆ ಅಷ್ಟಕ್ಕಷ್ಟೇ. ಎಲ್ ಟಿ ಟಿ ಇ ಯಾದಿಯಾಗಿ ಹಲವು ಉಗ್ರಸಂಘಟನೆಗಳೊಂದಿಗೆ ಕೈಜೋಡಿಸಿದ್ದ (ಈಗಲೂ ಸಹಾ) ನೆಡುಮಾರನ್ ಪೋಟಾ, ಟಾಡಾ ಕಾಯಿದೆಗಳೆರದರಲ್ಲೂ ಬಂಧಿಯಾಗಿ ಸೆರೆಮನೆಯಲ್ಲಿ ವರುಶಗಳನ್ನು ಕಳೆದಿದ್ದರು. ಅಣ್ಣಾವ್ರನ್ನು ಬಿಡುಗಡೆ ಮಾಡಿಸಲು ನೆಡುಮಾರನ್ ತರದವರ ಮಧ್ಯಸ್ಥಿಕೆಯನ್ನು ಚೊ.ರಾಮಸ್ವಾಮಿಯಾದಿಯಾಗಿ ಹಲವು ಪತ್ರಕರ್ತರು ವಿರೋಧಿಸಿದ್ದರು. ಆದರೆ ಕಾಡೊಳಗಿದ್ದ ವೀರಪ್ಪನ್, ಸಂಧಾನಕ್ಕೆ ನೆಡುಮಾರನ್ ಬರಲೇಬೇಕು ಎಂದು ಹಠಹಿಡಿದಿದ್ದ. ಕೊನೆಗೂ ನೆಡುಮಾರನ್ ಉಪಸ್ಥಿತಿಯಲ್ಲಿಯೇ ಅಣ್ಣಾವ್ರ ಬಿಡುಗಡೆ ಆಯಿತು.

ಇಂತಹ ಕೃತ್ರಿಮ ಹಿನ್ನಲೆಯ ನೆಡುಮಾರನ್, ಕಾಡಿನಿಂದ ಚೆನ್ನೈಗೆ ವಾಪಾಸಾದಾಗ, ಉಲಗನಾಯಗನ್ ಕಮಲ್ ಅವರ ಮನೆಗೆ ಹೋಗಿ ಕೈಕುಲುಕಿ ಅಭಿನಂದಿಸಿ ಬಂದಿದ್ದು ಕರುಣಾನಿಧಿಗೂ ಇರಿಸುಮುರುಸಾಗಿತ್ತು. ’ಕಳೆದೆರಡು ತಿಂಗಳಿಂದ ಆಗಿದ್ದ ಆತಂಕ ದೂರವಾಯ್ತು. ಒಬ್ಬ ತಮಿಳನಾಗಿ ಮತ್ತೊಬ್ಬ ತಮಿಳನನ್ನು ಅಭಿನಂದಿಸಿದ್ದೇನೆ. ಸಮಸ್ಯೆ ಇತ್ಯರ್ಥವಾಯಿತು.” ಎಂದು ಕಮಲ್ ಪ್ರತಿಕ್ರಿಯಿಸಿದ್ದರು. ನೆಡುಮಾರನ್ ಹಿನ್ನಲೆ ಬಗ್ಗೆ ಪ್ರಸ್ತಾಪಿಸಿದಾಗ, ’ಒಬ್ಬ ತಮಿಳನಾಗಿ ಅವರನ್ನು ಅಭಿನಂದಿಸಿ ಕೃತಜ್ಞತೆ ತಿಳಿಸುವುದು ನನ್ನ ಕರ್ತವ್ಯವಾಗಿತ್ತು’ ಎಂದು ಕಮಲ್ ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡರು. ’ರಜನೀಕಾಂತ್ ಮಾಡದ್ದನ್ನು ತಾನು ಮಾಡಿದ್ದೇನೆ ಎಂದು ತೋರ್ಪಡಿಸಿಕೊಳ್ಳುವ ಆತುರ’ ಎಂದು ರಜನಿ ಅಭಿಮಾನಿಗಳಾದಿಯಾಗಿ ತಮಿಳು ಚಿತ್ರರಂಗದ ಹಲವರು ಕಟಕಿಯಾಡಿದ್ದರು. ಕಸುಬಿನಲ್ಲೂ ಅವರು ತೋರಿದ ಇಂತಹ ಸ್ವಲ್ಪ ಅತಿರೇಕವೆನಿಸುವ ವರ್ತನೆಯಿಂದಲೇ, ಒಂದು ಮೈಲಿಗಲ್ಲಾಗಬಹುದಾಗಿದ್ದ ’ಹೇ ರಾಮ್’ ತರದ ಚಿತ್ರಗಳು ತೋಪಾದವು.

ಕಮಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಹಾತೊರಿಯುತ್ತಿದ್ದಾರೆ. ಎಲ್ಲಾ ಸಿದ್ಧತೆಗಳೂ ನಡೆಯುತ್ತಿವೆ. ಮುಂಬೈ ಗೆ ಹೋಗಿ ರಾಜ್ ಠಾಕ್ರೆಯನ್ನು ಕೂಡಾ ಭೇಟಿಯಾಗಿ ಸುಮಾರು ಒಂದು ಘಂಟೆ ಮಾತನಾಡಿ ಬಂದಿದ್ದಾರೆ  :-). ’ಆತ ನನ್ನ ಹಳೆಯ ಮಿತ್ರ..ಕುಶಲ ವಿಚಾರಿಸಿ ಬಂದೆ’ ಎಂದು ಸ್ವಲ್ಪ ದಿನ ಅಚ್ಚರಿ ಮೂಡಿಸಿದ್ದರು. ಈ ನಡುವೆ ಒಂದು ಪರ್ಯಾಯ ಶಕ್ತಿಯೇ ಇರಬಹುದೇನೋ ಎಂದು ಭ್ರಮಿಸಿದ್ದ, ಈಗ ಅಪ್ಪಟ ರಾಜಕಾರಣಿಯಾಗಿರುವ ಕೇಜ್ರೀವಾಲರೆಂಬ ರಾಜಕಾರಣಿಯೂ ಕಮಲ್ ರನ್ನು ಭೇಟಿಯಾಗಿದ್ದಾರೆ. ಕಳೆದ ವರ್ಷ ಅಪನಗದೀಕರಣವನ್ನು ಕೊಂಡಾಡಿ, ಈಗ ಕ್ಷಣಾರ್ಧದಲ್ಲಿ ಜ್ಞಾನೋದಯವಾದವರಂತೆ..’ತಪ್ಪು ಮಾಡಿಬಿಟ್ಟೆ…ನನ್ನ ಹೇಳಿಕೆ ವಾಪಸು ಪಡೆಯುತ್ತೇನೆ…ಮೋದಿ ಕೂಡಾ ತಪ್ಪು ಒಪ್ಪಿಕೊಂಡು ಸರಿಯಾಗಿ ನಡೆಯಲಿ’ ಎಂಬ ಮುಚ್ಚಳಿಕೆಯನ್ನು ಒಪ್ಪಿಸಿದರು. ಕೇಜ್ರೀವಾಲರ ಭೇಟಿಗೂ (ಸೆಪ್ಟೆಂಬರ್ ೨೧), ಕಮಲ್ ರ ’ತಪ್ಪೊಪ್ಪಿಗೆ’ಗೂ (ಅಕ್ಟೋಬರ್ ೨೭) ಗೂ ಕೇವಲ ಒಂದು ತಿಂಗಳ ಅಂತರ  🙂

ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ, ಆಗ ಕೇಂದ್ರ ಸಚಿವರಾಗಿದ್ದ ಚಿದಂಬರಂ ಅತಿಥಿಯಾಗಿದ್ದ ಚೆನ್ನೈನ ಸಮಾರಂಭವೊಂದರಲ್ಲಿ, ಕಮಲ್ ’ಧೋತಿಉಡುವರೊಬ್ಬರು ಭಾರತದ ಪ್ರಧಾನಿಯಾಗಬೇಕು..ತಮಿಳರ ಬಹಳ ದಿನದ ಕನಸು’ ಎಂದರು. ಚಿದಂಬರಂ ಪ್ರಧಾನಿಯಾಗಲಿ ಎಂಬ ಆಶಯವನ್ನು ಕಮಲ್ ವ್ಯಕ್ತಪಡಿಸಿದ್ದರು. (ಕರುಣಾನಿಧಿಯೂ ಇದನ್ನೇ ಹೇಳಿದ್ದರು)ಜಯಲಲಿತಾಗೆ ರೇಗಿತು. ಭಾರತದ ಪ್ರಧಾನಿ ಯಾರಾಗಬೇಕು ಎಂಬುದನ್ನು ಹೇಳಲು ಕಮಲ್ ಯಾರು ಎಂದು ಕಿಡಿಕಾರಿದಾಗ, ಎಚ್ಚೆತ್ತ ಕಮಲ್ ’ನಾನು ತಮಿಳರೊಬ್ಬರು ಪ್ರಧಾನಿಯಾಗಲಿ ಎಂದು ಹೇಳಿದೆ ಅಷ್ಟೆ’ ಎಂದರು. ಪರೋಕ್ಷವಾಗಿ ಜಯಲಲಿತಾ ಪ್ರಧಾನಿಯಾಗಲು ಅನರ್ಹಳು, ಅಥವಾ ಆಕೆ ಪ್ರಧಾನಿಯಾಗುವುದು ಬೇಡ ಎಂಬ ಒಳಾರ್ಥವನ್ನು ಗ್ರಹಿಸಿದ ಜಯಲಲಿತಾ, ಕಮಲ್ ರನ್ನು ದ್ವೇಷಿಸಲಾರಂಭಿಸಿದರು.

’ವಿಶ್ವರೂಪಂ’ ಚಿತ್ರದ ಸೆಟೆಲೈಟ್ ಪ್ರಸಾರದ ಹಕ್ಕುಗಳಿಗಾಗಿ ಜಯಾಟೀವಿಯವರು ದುಂಬಾಲು ಬಿದ್ದಾಗ, ಕಮಲ್ ಒಪ್ಪಿರಲಿಲ್ಲ. ಜಯಲಲಿತಾಗೆ ಆಗಲೇ ಅಸಮಾಧಾನವಾಗಿತ್ತು. ತಮಿಳು ಪ್ರಧಾನಿ ವಿಚಾರದಲ್ಲಿ ಅದು ದ್ವೇಷಕ್ಕೆ ತಿರುಗಿತು. ’ವಿಶ್ವರೂಪಂ’ ಬಿಡುಗಡೆಗೆ ತಡೆಯೊಡ್ಡಿದ ಜಯಾ ಸೇಡು ತೀರಿಸಿಕೊಂಡರು. ಕಮಲ್ ರನ್ನು ಜಿಗುಪ್ಸೆಗೆ, ಅಪಾರಯಾತನೆಗೆ ಈಡುಮಾಡಿದ ದಿನಗಳವು. ಸೆನ್ಸಾರ್ ಒಪ್ಪಿಗೆ ಸೂಚಿಸಿದ ನಂತರವೂ, ಚಿತ್ರವನ್ನು ಬಿಡುಗಡೆಗೆ ಮುಂಚಯೇ ತಮಿಳುನಾಡಿನ ಮುಸ್ಲಿಂ ಸಂಘಟನೆಗಳಿಗೊಮ್ಮೆ ನೋಡಿಸಬೇಕಾಗಿ ಬಂದಿದ್ದು, ಚಿತ್ರ ವೀಕ್ಷಿಸಿದ ಕೋಮಿನ ನಾಯಕರು, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಆಜ್ಞಾಪಿಸಿದ್ದು ತೀವ್ರ ಆಕ್ಷೇಪಾರ್ಹ. ಕಮಲ್ ತೀವ್ರ ಒತ್ತಡದಲ್ಲಿದ್ದರು.

ಎನ್.ಟಿ.ಆರ್, ಎಂ.ಜಿ.ಆರ್ ರಾಜಕೀಯಕ್ಕೆ ಬಂದರು. ಸಿನಿಮಾದಲ್ಲಿ ಮೆರೆದ ಆದರ್ಶಗಳೆಲ್ಲಾ ಕ್ರಮೇಣ ಮೂಲೆಗುಂಪಾಗಿದ್ದನ್ನು ಕಣ್ಣಾರೆ ಕಂಡರು. ತಮ್ಮ ಪಕ್ಷಗಳು ಭ್ರಷ್ಟಗೊಂಡಿದ್ದನ್ನು ನೋಡಿ ಸಹಿಸಿಕೊಂಡರು. ಜನ ಸದಾ ಅವರ ಬೆನ್ನಿಗೆ ನಿಲ್ಲಲಿಲ್ಲ. ಆದರ್ಶ ಹೀರೋಗಳನ್ನು ಸಿನಿಮಾ ಸ್ಕೋಪ್ ನಲ್ಲಿ ತೋರಿಸಿದ ದಾಸರಿ, ತಾವೇ ಭ್ರಷ್ಟಸಚಿವರಾಗಿ ಇಹಲೋಕ ತ್ಯಜಿಸಿದರು. ವಿಶ್ವವನ್ನೇ ಆಳಿಬಿಡುವ ಉತ್ಕಟ ಉತ್ಸಾಹದಿಂದ ಚಿರಂಜೀವಿ ಸ್ಥಾಪಿಸಿದ ’ಪ್ರಜಾರಾಜ್ಯಂ’ ಎಂಬ ಪಕ್ಷ ನಾಮಾವಶೇಷವಾಯಿತು. ಒಂದು ಎಂ.ಪಿ ಸೀಟ್ ಟಿಕೆಟ್ ಗೆ ನಾಲ್ಕು ಕೋಟಿಯಂತೆ ಕಸಿದುಕೊಂಡು ಉಪ್ಪರಿಗೆಯ ಆಚೆಗೂ ಹಣಪೇರಿಸಿದ ಚಿರು, ಸದ್ದಿಲ್ಲದೇ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಪಕ್ಷವನ್ನು ಲೀನಗೊಳಿಸಿಬಿಟ್ಟರು. ಕಾಂಗ್ರೆಸ್ಸ್ ಕೊಟ್ಟ ಪ್ರವಾಸ ಮಂತ್ರಿಯ ಪಟ್ಟಕ್ಕಾಗಿ ಚಿರು ವರ್ಷಾನುಕಾಲ ನಡೆಸಿದ ಕಸರತ್ತು, ಅವರ ಬಗ್ಗೆ ಮರುಕ ತರುತ್ತದೆ. ಜಯಲಲಿತಾ-ಕರುಣಾನಿಧಿ ನಡೆಸಿದ ಭ್ರಷ್ಟಾಚಾರದ ಬಗ್ಗೆ ವಿಶೇಷವಾಗಿ ಹೇಳುವುದೇನೂ ಇಲ್ಲ.

ಕಮಲಹಾಸನ್ ಗೆ ಇದ್ಯಾವುದೂ ತಿಳಿಯದ ವಿಚಾರವೇನೂ ಅಲ್ಲ. ಪ್ರಸಕ್ತ ಪರಿಸ್ಥಿತಿಯಲ್ಲಿ ಆದರ್ಶವಾದಿ ಕಮಲ್, ಭ್ರಷ್ಟರಾಗಲು ಹೆಚ್ಚು ಸಮಯವೇನೂ ಹಿಡಿಯದು. ಮೊನ್ನೆ ಸಂದರ್ಶನವೊಂದರಲ್ಲಿ ’ಹೊಸಪಕ್ಷ ಕಟ್ಟಲು ಕನಿಷ್ಟ 30 ಕೋಟಿಯಾದರೂ ಬೇಕು’ ಎಂದು ’ಒಪ್ಪಿ’ಕೊಂಡಿರುವ ಕಮಲ್, ಈಗ ದೇಣಿಗೆ ಸಂಗ್ರಹಕ್ಕೆ ಇಳಿದಿದ್ದಾರೆ. ತಮಿಳುನಾಡಿನ ಸರ್ವ ತಮಿಳರೂ ಕಮಲ್ ಅಭಿಮಾನಿಗಳೇನೂ ಅಲ್ಲ. ’ಮುಖ್ಯಮಂತ್ರಿ’ಯಾಗಲು ಕನಸುತ್ತಿರುವ ಕಮಲ್ ರಿಗೆ ಯಶಸ್ಸು ಸಿಗಲಿ. ಇತ್ತೀಚಿನ ವರ್ಷಗಳ ಚುನಾವಣೆಗಳಲ್ಲಿ ಮೊದಲಿಗಿಂತಲೂ ಹೆಚ್ಚು ಸೂಕ್ಷ್ಮತೆ ತೋರುತ್ತಿರುವ ತಮಿಳು ಮತದಾರ ಕಮಲ್ ಗೆ ಒಲಿಯುತ್ತಾನೆಯೇ?

ಕುತೂಹಲವಿದೆ.

‍ಲೇಖಕರು avadhi

November 11, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: