ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು ಚೆಲ್ಲುತ್ತಿದೆ.
ಈ ಚರ್ಚೆಯ ಭಾಗವಾಗಿ ಸುಂದರ ರಾಯರು ಮಂಡಿಸಿದ ಅಭಿಪ್ರಾಯಕ್ಕೆ ಮತ್ತೆ ಜಿ ಎನ್ ಅಶೋಕ ವರ್ಧನ ಹಾಗೂ ಅಭಯ ಸಿಂಹ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಅಭಿಪ್ರಾಯಕ್ಕೂ ಸ್ವಾಗತ
ಸುಂದರ ರಾಯರು ಪ್ರೇಕ್ಷಕನ ಪ್ರತಿನಿಧಿಯಾದದ್ದು ಹೇಗೆ?
ಸುಂದರ ರಾಯರು ಪ್ರೇಕ್ಷಕನ ಪ್ರತಿನಿಧಿಯಾದದ್ದು ಹೇಗೆ? ನನ್ನ ಟಿಪ್ಪಣಿಯಲ್ಲಿ ಹಾಕಿದ ಹಾಗೆ ನಾವು ಮೂವರು, ನಾಟಕವನ್ನು ಮೆಚ್ಚಿಕೊಂಡವರು ಪ್ರೇಕ್ಷಕರಲ್ಲವೇ? ಅಂದು ವಾಪಾಸಾಗುವ ದಾರಿಯಲ್ಲಿ ಮಾತಾಡದಿದ್ದರೂ ಅನಂತರ ತಿಳಿದ ಪ್ರಕಾರ ನಮ್ಮ ಜೊತೆಯಲ್ಲೇ ಇದ್ದ ಡಾ|ವಿದ್ಯಾ ಹಾಗೂ ಅವರ ಮಗ ಸುಧನ್ವ ಕೂಡಾ ನಾಟಕ ಮೆಚ್ಚಿಕೊಂಡವರೇ ಇದ್ದಾರೆ. ವೆಂಕಟ್ರಮಣ ಉಪಾಧ್ಯರ ಹಾಗೆ ವೈಯಕ್ತಿಕ ಇಷ್ಟಾನಿಷ್ಟ ಸಾರಬಹುದು, ಸಂಶಯಗಳನ್ನೂ ತೋಡಿಕೊಳ್ಳಬಹುದು ಮತ್ತೂ ಯಾರಿಗೂ ಕಾರಣ ಕೊಡದೇ ತಿರಸ್ಕರಿಸಬಹುದು. ಆದರೆ ಪ್ರೇಕ್ಷಕನಿಗೆ ಮಾಡುವ ಮೋಸ ಎನ್ನುವ ಕ್ರಮ ಸರಿಯಲ್ಲ. ರಾಯರ ಸಾಹಿತ್ಯ, ಸಂಗೀತಾದಿ ಲಲಿತ ಕಲೆಗಳ ಎಲ್ಲಾ ಪೂರ್ವಾನುಭವಗಳು ಇಲ್ಲಿ ಯಾಕೋ ಮಂಕಾಗಿ ಇನ್ನೇನೋ ಪೂರ್ವಾಗ್ರಹ ಮೆರೆದಂತೆ ಕಾಣುತ್ತದೆ. ಉಳಿದಂತೆ ಇತರರು ಇಲ್ಲಿ ಸಾಕಷ್ಟು ಹೇಳಿದ್ದಾರೆ.
-ಜಿ ಎನ್ ಅಶೋಕವರ್ಧನ
reading between the linesನಲ್ಲಿ..
ಸರ್… ನೋಡುಗನಿಗೆ ಬೋರ್ ಆಗುತ್ತೆ ಎನ್ನುವುದು ಕೇವಲ ಸಾಪೇಕ್ಷವಾದದ್ದಲ್ಲವೇ? ಅದರ ಸಾಧಾರೀಕರಣ ಸರಿಯೇ? ನಾಟಕದ ವೇಗ ಕಡಿಮೆಯಾದರೆ ಪ್ರೇಕ್ಷಕರಿಗೆ ಅದು ಬೋರ್ ಆಗುತ್ತದೆ ಎನ್ನುವುದೂ ನಮ್ಮೊಳಗೆ ರೂಢವಾಗಿರುವ ಯಾವುದೋ ಒಂದು ಗತಿಯ ಸೂಚಕವೇ ಅಲ್ಲವೇ? ಈ ವೇಗದೊಡನೆ ಸಂವಾದಿಸುತ್ತಿರುವುದು ನಾಟಕದ ಒಂದು ಗುಣ ಎಂದೇ ನನ್ನ ಭಾವನೆ. ಎಲ್ಲವೂ ನಿತ್ಯಸತ್ಯಗಳಂತೆಯೇ ಇರಬೇಕೆನ್ನುವ ನಿಯಮವನ್ನು ನಾಟಕದ ಮೂಲಭೂತ ನಿಯಮವೇ ಧಿಕ್ಕರಿಸುತ್ತದಲ್ಲ? ನೀರಿನ ಲೋಟವನ್ನು ನಟ ಎತ್ತಬೇಕಾದರೆ ಅದು ಅಲ್ಲಿ ಇದ್ದರೂ ಸರಿಯೇ ಇಲ್ಲದಿದ್ದರೂ ಸರಿಯೇ, ಪ್ರೇಕ್ಷಕ ಅಲ್ಲಿ ನೀರಿನ ಲೋಟ ಇದೆ ಎಂದು ನಂಬುವುದರಿಂದಷ್ಟೇ ಅದರ ಅಸ್ಥಿತ್ವ ರೂಪುಗೊಳ್ಳುವುದಲ್ಲವೇ? ಹೀಗೇ ನಾಟಕದಲ್ಲಿನ ಚಲನೆಯ ವೇಗವೂ ಎಂದು ನನ್ನ ಅನಿಸಿಕೆ. ಇದನ್ನೇ ಸಿನೆಮಾ ಮಾಧ್ಯಮಕ್ಕೆ ಹೋಲಿಸಿ ನೋಡೋಣ, ಈ ವೇಗವನ್ನು ನಾವು ನಿರಾಕರಿಸಿದರೆ, ಸಿನೆಮಾದಲ್ಲಿ ’ಸ್ಲೋ-ಮೋಷನ್’ ಅರ್ಥ ಕಳೆದುಕೊಳ್ಳುತ್ತದೆ. ಅಂತೆಯೇ ಪರದೆಯ ಮೇಲೆ ಬಿಂಬಿತವಾಗುವ ಘಟನೆಗಳ ನಡುವಿನ ಸಾಪೇಕ್ಷ ಸಮಯವೂ ತಪ್ಪು ಎಂದಾಗುತ್ತದೆ. ಇವೆಲ್ಲವೂ ಪ್ರೇಕ್ಷಕನ ಮನಸ್ಸಿನ ನಿಯಂತ್ರಣಕ್ಕಾಗಿ ನಾಟಕಕಾರ ಅಥವಾ ಸಿನೆಮಾ ನಿರ್ದೇಶಕ ಬಳಸುವ ತಂತ್ರವಷ್ಟೇ?
ಇನ್ನು ನಾಟಕಕ್ಕೆ ಮಾತು ಖಂಡಿತಾ ಅಗತ್ಯವಲ್ಲ ಎಂದು ನನ್ನ ಅನಿಸಿಕೆ. ರಂಗದ ಮೇಲೆ ಕೇವಲ ನಟನೆಯಿಂದ ಅಭಿವ್ಯಕ್ತಗೊಳಿಸಲಾಗದ ಅಮೂರ್ತಗಳ ಸಾಧನೆಗೆ, ಮಾತನ್ನು ಬಳಸಬಹುದು ಅಥವಾ ಕೇವಲ ಒಂದು ರಂಗಪರಿಕರವಾಗಿಯೂ ಮಾತನ್ನು ಬಳಸಬಹುದು. ಆದರೆ, ಮಾತನ್ನು ಬಳಸದೆಯೂ ಅಮೂರ್ತವನ್ನು ಕಟ್ಟಲು ಸಾಧ್ಯವಾದಾಗ ಮಾತು ಎನ್ನುವುದು ರಂಗಭೂಮಿಗೆ ಅನಗತ್ಯ ಕಿರಿಕಿರಿಯಾಗುತ್ತದಲ್ಲವೇ? ಪ್ರಸ್ತುತಿ ವಾಚಾಳಿ ಎನಿಸಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಪ್ರಸ್ತುತ ’ನೀರಿನ ನಿಲುತಾಣ’ ನಾಟಕದಲ್ಲಿ ಮಾತಿಲ್ಲದೇ ಯಾವುದೇ ನಷ್ಟವಾಯಿತೆಂದು ನನಗಂತೂ ಅನಿಸಲಿಲ್ಲ.
ಇನ್ನು ಕೂಟ ಶ್ಲೋಕದ ಕುರಿತಾದ ಪ್ರಸ್ತಾಪಕ್ಕೆ, ಪ್ರತಿಯೊಂದು ಕೃತಿಯೂ ಒಂದು ಮಟ್ಟಿನ ಕೂಟಶ್ಲೋಕವೇ ಅಲ್ಲವೇ? ಎಲ್ಲವನ್ನೂ ಬಿಚ್ಚಿತೋರಿಸುವ ಅಗತ್ಯ ಒಂದು ಸಾಹಿತ್ಯ ಕೃತಿಗೆ ಇಲ್ಲವಲ್ಲಾ? ಬಹುಷಃ ಅಂಥಾದ್ದನ್ನು ಒಂದು ಪತ್ರಕರ್ತ ವರದಿ ಎನ್ನಬಹುದೇನೋ? (ಇಂದಿನ ಸಂದರ್ಭದಲ್ಲಿ ಅದೂ ಎಲ್ಲವನ್ನೂ ವಾಸ್ತವವಾಗಿ ಹೇಳುವುದಿಲ್ಲವಲ್ಲಾ!) ಸಾಹಿತ್ಯದ, ಕೃತಿಯ ನಿಜಸ್ವಾರಸ್ಯವಿರುವುದೇ ಅದರ reading between the linesನಲ್ಲಿ ಅಲ್ಲವೇ?
-ಅಭಯಸಿಂಹ







ನೀರ ನಿಲುತಾಣದ ವಿಮರ್ಶೆಯ ವಿವಾದ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ!
ಈ ಲೇಖನ ಕೊಂಚ ದೀರ್ಘವಾಗುವುದು ಅನಿವಾರ್ಯ ಎಂದು ಕಾಣುತ್ತದೆ.
ನನ್ನ ಸಾಹಿತ್ಯಾಸಕ್ತಿ ಸೀಮಿತವಾದದ್ದೆಂದು ಮೊದಲೇ ಹೇಳಿದ್ದೆನಷ್ಟೆ. ಶ್ರೀ ನರೇಂದ್ರ ಪೈಗಳು “ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು.” ಎಂದಿದ್ದಾರೆ. ಅವರ ಈ ಮಾತು, ವಿಷಯವನ್ನು ಸಂಪೂರ್ಣವಾಗಿ ಬೇರೆ ಕಡೆ ತಿರುಗಿಸುವುದಕ್ಕೆ ನನಗೊಂದು ಅವಕಾಶ ಮಾಡಿಕೊಟ್ಟಿದೆ. ಅವರಿಗೆ ಧನ್ಯವಾದ..
ನನಗೆ ಮುಖ್ಯವಾದ ಪ್ರಶ್ನೆ ನಾಟಕಕ್ಕೆ ಮಾತು ಇಲ್ಲದಿದ್ದರೂ ನಡೆಯುತ್ತದೆಯೇ, ನಟರ ಚಲನೆ ಅತಿವಿಲಂಬಿತವಾದರೆ ಅದು ಪ್ರೇಕ್ಷಕರ ಮೇಲೆ ಏನು ಪರಿಣಾಮ ಮಾಡುತ್ತದೆ ಎಂಬುದು. ಅಸಹನೆ, ಪೂರ್ವಾಗ್ರಹ, ಮೋಸ ಇದಕ್ಕೆಲ್ಲ ನನ್ನಲ್ಲಿ ವಿವರಣೆ ಇಲ್ಲ. ಆದರೆ ನಿಮ್ಹಾನ್ಸ್ ಬಗ್ಗೆ ಒಂದು ಸಣ್ಣ ವಿವರಣೆ ಅಗತ್ಯ ಎಂದು ಅನಿಸುತ್ತಿದೆ. ಮೊನ್ನೆ ಒಂದು ಮದುವೆಗೆ ಹೋಗಿದ್ದೆ. ದೇವು ಹನೆಹಳ್ಳಿ ಸಹ ಬಂದಿದ್ದರು. ಸ್ನೇಹಿತರ ದೊಡ್ಡ ಗುಂಪೇ ಅಲ್ಲಿತ್ತು. ಮಾತು ಎಲ್ಲಿಂದ ಎಲ್ಲಿಗೋ ಹೋಗಿ ಅದು ಹೇಗೋ ಒಬ್ಬರು ಮಹಿಳೆಯ ವಿಷಯಕ್ಕೆ ಬಂತು. ದೇವು “ಅಯ್ಯ ಅವಳು (ದೊಡ್ಡ ಮನುಷ್ಯರೊಬ್ಬರ ಹೆಸರು ಹೇಳಿ) ಕೀಪ್ ಮಾರಾಯ್ರೆ” ಎಂದರು. ನನಗೆ ಆ ಮಹಿಳೆಯ ಹೆಸರೂ ಗೊತ್ತು. ದೇವು ಯಾರ ಹೆಸರು ಹೇಳಿದರೆನ್ನುವುದೂ ಗೊತ್ತು. ಹಾಗಂತ, ಮನೆಗೆ ಬಂದವನು, “ದೇವು ಹೀಗೆ ಹೇಳಿದರು” ಎಂದು ಅವರು ಹೇಳಿದ್ದನ್ನು ಯಥಾವತ್ತಾಗಿ ಅಂತರ್ಜಾಲದಲ್ಲಿ ತೇಲಿಬಿಡಲೆ? ಅದು ಸರಿಯೆ? ದೇವು ಹೇಳಿದ ಮಾತು ಒಂದು ಸಣ್ಣ ಗುಂಪಿಗೆ ಸೀಮಿತವಾಗಿರಬೇಕಾದ ಮಾತಲ್ಲವೆ? ಸಾಮಾನ್ಯವಾಗಿ ನಾವೆಲ್ಲ, ಸ್ನೇಹಿತರ ಒಂದು ಸಣ್ಣ ಗುಂಪಿನಲ್ಲಿದ್ದಾಗ, ಕೆಲವು ಸಡಿಲ ಮಾತುಗಳನ್ನು ಆಡುತ್ತೇವೆ. ಗುಂಪಿನಲ್ಲಿ ಹೆಂಗಸರು, ಮಕ್ಕಳು ಇಲ್ಲದಿದ್ದರೆ “ಅವಾಚ್ಯ” ಶಬ್ದಗಳನ್ನೂ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ. ಈ ಮಾತುಗಳನ್ನು, ಯಾರ ಕುರಿತು ಆಡಿರುತ್ತೇವೋ, ಅಂಥವರ ಕಿವಿಗೆ ಹಸಿಹಸಿಯಾಗಿ ಅವು ಹೋಗಿಬೀಳುತ್ತವೆ ಎಂಬ ಅನುಮಾನವಿದ್ದರೆ ಮಾತ್ರ ಮಾತಾಡುವಾಗ ಎಚ್ಚರ ವಹಿಸುತ್ತೇವೆ. ಐದಾರು ಜನ ಪರಸ್ಪರ ಪರಿಚಿತರೇ ಇದ್ದ (ಅಶೋಕರಂತೂ ನನ್ನ ನಿಡುಗಾಲದ ಗೆಳೆಯ) ಒಂದು ಸಣ್ಣ ವೃತ್ತದಲ್ಲಿ ನಾನಾಡಿದ ಮಾತು, ಮಾರನೆಯ ದಿನ ಅಂತರ್ಜಾಲದ ಮೂಲಕ ನೇರವಾಗಿ ನೀನಾಸಂ ಕಿವಿಗೇ ಹೋಗಿಬಿಡುತ್ತದೆ, ಇಡೀ ಜಗತ್ತಿಗೆ ಪ್ರಚಾರವಾಗಿಬಿಡುತ್ತದೆ ಎಂದು ಗೊತ್ತಿದ್ದರೆ, ಬಹುಶಃ ನಾನು ಎಚ್ಚರ ವಹಿಸುತ್ತಿದ್ದೆ. ಈಗ ನನಗೆ ಉಳಿದಿರುವ ಸಮಾಧಾನ ಇಷ್ಟೆ: ಈ ಮಾತುಗಳನ್ನು ನಾನು ಪತ್ರಿಕಾಗೋಷ್ಟಿ ಕರೆದೋ, ನಾಟಕದ ಕುರಿತ ಸೆಮಿನಾರ್ ನಲ್ಲೋ ಆಡಲಿಲ್ಲ. ಕೇವಲ ಖಾಸಗಿಯಾಗಿ ಆಡಿದ್ದೆ ಎಂಬುದು.
ಅಭಯರ ಈಗಿನ ಮಾತು: “ನಾಟಕಕ್ಕೆ ಮಾತು ಖಂಡಿತಾ ಅಗತ್ಯವಲ್ಲ ಎಂದು ನನ್ನ ಅನಿಸಿಕೆ”. ಕಳೆದ ತಿಂಗಳು ಪಿ. ಆರ್. ಮೀರಾಗೆ ಕೊಟ್ಟ ಸಂದರ್ಶನದಲ್ಲಿ ಅಭಯ ಉವಾಚ:”ಹಾಡು ಚಿತ್ರಕ್ಕೆ ಒಂದು ಅಡ್ವಾಂಟೇಜ್. ಆರು ಗಂಟೆಯಲ್ಲಿ ಹೇಳುವ ಕಥೆಯನ್ನ ಒಂದಿಷ್ಟು ಹಾಡುಗಳನ್ನು ಜೊತೆಗಿಟ್ಟುಕೊಂಡು ಮೂರು ಗಂಟೆಯಲ್ಲಿ ಕಟ್ಟಿಕೊಡಬಹುದು ಹಾಡನ್ನೂ ಕಥೆಯ ಒಂದು ಭಾಗವಾಗಿಸಿದಾಗ”. ಹಾಡು ಮಾತಿನ ಮತ್ತೊಂದು ರೂಪ ತಾನೆ? ಸಿನಿಮಾಕ್ಕೇ ಅದು ಅಡ್ವಾಂಟೇಜ್ ಎನ್ನುವುದಾದರೆ, ಅಭಯ, ನಾಟಕಕ್ಕೆ ಯಾಕಲ್ಲ? ಇನ್ನು “ಕೂಟಶ್ಲೋಕ”ದ ಕುರಿತಾದ ಅಭಯರ ಪ್ರಶ್ನೆಗೆ ಉತ್ತರ ಸುಲಭವಲ್ಲ. ಅವರು ಶತಾವಧಾನಿ ಆರ್. ಗಣೇಶರಂಥ ವಿದ್ವಾಂಸರ ಶಿಷ್ಯತ್ವ ಒಂದೋ ಎರಡೋ ವರ್ಷ ಮಾಡಿದರೆ ಈ ಪ್ರಶ್ನೆಗೆ ಅವರಿಗೆ ಉತ್ತರ ಸಿಗಬಹುದು. ಇದು ಪುಸ್ತಕ ಓದಿದರೆ, ಅರ್ಥವಾಗುವ ವಿಷಯ ಎಂದು ನನಗೆ ಅನಿಸುವುದಿಲ್ಲ. ಸಂಗೀತ, ನೃತ್ಯಗಳ ಹಾಗೆ ಗುರುಮುಖೇನ ಅರ್ಥ ಮಾಡಿಕೊಳ್ಳಬೇಕಾದದ್ದು.
ಇಲ್ಲಿಗೆ ನಾಟಕದ ಬಗ್ಗೆ ನನ್ನ ಚರ್ಚೆ ನಿಲ್ಲಿಸುತ್ತೇನೆ.
*****************
ಇನ್ನು ಮುಂದಿನ ಬರವಣಿಗೆ ನಾಟಕಕ್ಕೆ ಸಂಬಂಧಿಸಿದ್ದಲ್ಲ. “ಅವಧಿ” ಸರಿ ಕಂಡರೆ ಮಾತ್ರ ಇದನ್ನು ಪ್ರಕಟಿಸಬಹುದು.
ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಂಡೇ ಬದುಕುತ್ತಿದ್ದೇವೆ. ಆದರೆ, ನಾನು ಮೈಕಿನ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ನಾಟಕದ ಪ್ರಯೋಗವನ್ನು ಮಾತ್ರ ಅಲ್ಲ, ಮೈಕನ್ನು ಸಹ “ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರ ಪೈಕಿ” ಅಲ್ಲ.
ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ!
ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:”ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?” (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ). ಅವರು ನನಗೆ ಭಜನೆಯ ಮಹತ್ವವನ್ನೂ, “ಭಜನೆಯಿದ್ದಲ್ಲಿ ವಿಭಜನೆ ಇಲ್ಲ” ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, “ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?” ಎಂದೆ. ಆಗ ಅವರು ” ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ ಉಮೇದೇ ಬರುವುದಿಲ್ಲ” ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ..
ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ.
ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ ಪರಿಹಾರದ ಮಾತೆಲ್ಲಿ ಬಂತು?
ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು ಪತ್ರ ಬರೆದೆ:
“ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ
ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ.
೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ
೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ
೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ)
೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ
(ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.)
ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ.
ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ.”
ಜಿಲ್ಲಾಧಿಕಾರಿಗಳು “ಸೂಕ್ತ ಹಿಂಬರಹ ನೀಡುವುದು” ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು.
ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ “ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: “ಬರೆದು ನೋಡಿದ್ದೀರಾ?” ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ.
ನನ್ನದೊಂದು ಬ್ಲಾಗ್ ಇದೆ. http://www.sundararao.blogspot.com ಆಸಕ್ತರು ನೋಡಬಹುದು: