ಹನುಮಂತ ಹಾಲಿಗೇರಿ
ಜೈಪುರ ಸಾಹಿತ್ಯ ಸಮ್ಮೇಳನದ ಬಗ್ಗೆ ಕೇವಲ ಕೇಳಿ ಗೊತ್ತಿದ್ದ, ಪತ್ರಿಕೆಗಳಲ್ಲಿ ಓದಿ ಗೊತ್ತಿದ್ದ ನನಗೆ ನಮ್ಮ ಧಾರವಾಡದಲ್ಲಿಯೆ ಅಂಥದ್ದೆ ಸಾಹಿತ್ಯ ಸಂಭ್ರಮ ನಡೆಸಲಾಗುವುದು ಎಂದು ಕೇಳಿ ತುಂಬಾ ಖುಷಿ ಪಟ್ಟಿದ್ದೆ. ಸಾಧ್ಯವಾದರೆ ಎರಡು ದಿನ ಬಿಡುವು ಮಾಡಿಕೊಂಡು ಹೋದರಾಯಿತು ಎಂದು ಕೊಂಡಿದ್ದೆ. ನಂತರದಲ್ಲಿ ಧಾರವಾಡದ ಗೆಳಯನೊಬ್ಬ ನನಗೆ ಅದರ ಆಹ್ವಾನ ಪತ್ರಿಕೆ ಮೇಲ್ ಮಾಡಿದ್ದ. ಆದರೆ, ಆಹ್ವಾನ ಪತ್ರಿಕೆಯನ್ನು ನೋಡಿದಾಗ ಭಯಂಕರ ಭಯವಾಗಿ ಬಿಟ್ಟಿತ್ತು. ನನ್ನ ಭಯಕ್ಕೆ ಮೊದಲನೆಯದು 1500 ರೂ.ದುಡ್ಡು ಕಟ್ಟಬೇಕು ಎಂಬುದು ಒಂದು ಕಾರಣವಾದರೆ, ಇನ್ನೊಂದು ಸಂಭ್ರಮ ಪಡಲು ಪಾಲಿಸಬೇಕಾದ ರೂಲ್ಸುಗಳು.
ಸಭೆಯಲ್ಲಿ ಪ್ರಶ್ನೆ ಕೇಳಬಾರದು, ನಡುವೆ ಮಾತನಾಡಬಾರದು ಎಂಬ ರೂಲ್ಸು ನನ್ನಲ್ಲಿ ಭಯಂಕರ ಭಯವನ್ನು ಹುಟ್ಟಿಸತೊಡಗಿತು. ಚರ್ಚೆ ಕಾವೇರಿದಾಗ ನನ್ನೊಳಗೆ ಅದುಮಿಟ್ಟುಕೊಳ್ಳಲಾರದೆ ಏನಾದರೂ ಪ್ರಶ್ನೆ ಕೇಳಿ, ಸಂಘಟಕರು ನನ್ನನ್ನು ಹೊರಗೆ ದೂಡಲು ಬಂದು, ಆಗ ಜನ ಎಲ್ಲ ನನ್ನ ಆವಸ್ಥೆ ನೋಡಿ ನಗತೊಡಗಿದರೆ ದೊಡ್ಡ ರಾದ್ಧಾಂತವಾದೀತು. ಅದು ನಮ್ಮಂಥವರಿಗೆ ಅಲ್ಲವೇ ಅಲ್ಲ. ಅದುಮಿಟ್ಟುಕೊಳ್ಳುವ ಶಕ್ತರಾದವರು ಬೇಕಾದರೆ ಹೋಗಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡು ಅದರ ಸಹವಾಸವೇ ಬೇಡ ಎಂದುಕೊಂಡು ಸುಮ್ಮನಾಗಿದ್ದೆ.
ಈಗ ಅದರ ಬಗ್ಗೆ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದ್ದು, ನನ್ನ ಅಭಿಮತವನ್ನೆ ಹಿರಿಯ ಸಾಹಿತಿಗಳು ಪುಷ್ಟೀಕರಿಸುತ್ತಿರುವುದು ನೋಡಿ ನನಗೆ ಬಹಳಷ್ಟು ಸಂತೋಷ ಮತ್ತು ದಿಗಿಲಾಗುತ್ತಿದೆ. ಬಸವರಾಜ ಸೂಳಿಭಾವಿ, ಜಗದೀಶ ಕೊಪ್ಪ ಮುಂತಾದವರು ಅದರ ವಿರುದ್ಧ ಫೇಸಬುಕ್ ಮತ್ತು ಈಮೇಲ್ ಮೋಲಕ ದೊಡ್ಡ ಸಮರವನ್ನೆ ಸಾರಿದ್ದಾರೆ.
ನಾನು ಮೊದಲು ನನ್ನೊಳಗೆ ಮಾತ್ರ ಇದರ ಬಗ್ಗೆ ಹೇಸಿಗೆಪಟ್ಟುಕೊಂಡು ಸುಮ್ಮನಾಗಿದ್ದೆ. ಆಗ ನನಗೆ ಹೀಗೆ ಬಹಿರಂಗವಾಗಿ ವಿರೋಸಬಹುದು ಎಂಬುದು ನನ್ನ ಗಮನಕ್ಕೆ ಬಂದೆ ಇರಲ್ಲಿಲ್ಲ. ಸೂಳಿಭಾವಿಯವರಂಥವರು ಖರ್ಚಿಲ್ಲದೆ, ಶ್ರಮವಿಲ್ಲದೆ ಹೀಗೆ ಒಬ್ಬರ ಈಮೇಲ್ ಇನ್ನೊಬ್ಬರಿಗೆ ಕಳಿಸುವ ಮೂಲಕ ದೊಡ್ಡ ಪ್ರತಿರೋಧದ ಸೇತುವೆಯನ್ನು ನಿರ್ಮಿಸುತ್ತಿದ್ದಾರಲ್ಲ ಎನಿಸಿತು.
ಬೆಂಗಳೂರಿನಲ್ಲಿಯೂ ದುಡ್ಡು ಇಸಿದುಕೊಂಡು ಕಥೆ- ಕವಿತೆ ಬರೆಯುವ ಕಲೆ ಹೇಳಿಕೊಡುವ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತಿವೆ. ಉದಾಹರಣೆಗಾಗಿ ಚಾಮರಾಜಪೇಟೆಯಲ್ಲಿನ ಸಂಜೀವ ಕುಲಕಣರ್ಿಯವರ ಸಂಭ್ರಮ ಗುಡಿ ಎಂಬ ಸಂಸ್ಥೆಯಲ್ಲಿ ಕಥೆ ಕವಿತೆ ರಚಿಸುವುದನ್ನು ಹೇಳಿಕೊಡಲಾಗುತ್ತದೆ. ಆದರೆ, ಅದಕ್ಕೆ ನೀವು ಸಾವಿರಾರು ರೂ. ದುಡ್ಡು ನೀಡಬೇಕಾಗುತ್ತದೆ. ನಿಜ ಹೇಳಬೇಕೆಂದರೆ ಈ ಸಂಸ್ಥೆ ನಡೆಸುವವರಿಗೂ ಕತೆ ಕವಿತೆ ಬರೆಯುವುದು ಗೊತ್ತಿಲ್ಲ. ಆ ಮಾತು ಬೇರೆ.
ಧಾರವಾಡದಲ್ಲಿ ಪಾಪು, ಸೂಳಿಭಾವಿಯಂಥವರು ಎಚ್ಚರದ ಸ್ಥಿತಿಯಲ್ಲಿರುವುದರಿಂದ ಸಾಹಿತ್ಯ ಮಾರಿಕೊಳ್ಳುವ ಕಂಪನಿಯೊಂದಕ್ಕೆ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಿದೆ. ಪಾಪ, ಹಿರಿಯರಾದ ಗೋವಿಂದರಾಜ ಗಿರಡ್ಡಿಯವರು ದೊಡ್ಡ ಬರಹಗಾರರು. ಇಳಿ ವಯಸ್ಸಿನಲ್ಲಿ ತಮ್ಮ ಬರವಣಿಗೆ ಕಲೆಯನ್ನು ಆಸಕ್ತರಿಗೆ ಮಾರಿಕೊಳ್ಳುವ ಭರದಲ್ಲಿ ಇಂಥ ಎಡವಟ್ಟು ಮಡಿಕೊಂಡಿರುವುದಕ್ಕೆ ಬೇಸರವೆನಿಸುತ್ತದೆ.






0 Comments