ಅದಮ್ಯ ಪ್ರೇಮಿಯ ಗಜಲ್ ಹಾಡಿನ ಹಾಗೆ..

ದಿಲಾವರ್ ರಾಮದುರ್ಗ

 

ಬದುಕು ಸಾವನ್ನೇ ದಿಟ್ಟಿಸುತ್ತಲಿರುವುದಲ್ಲ. ಜೀವ ದೇಹದಿಂದ ಅನಂತದೆಡೆಗೆ ಹಾರುವ ಕ್ಷಣದತನಕ ಒಳಗೇ ಇರುವ ಅದಾವುದೋ ಶಕ್ತಿ ಅಥವಾ ಚೇತನ ಮನಸು, ದೇಹ, ಜೀವ, ಆತ್ಮದ ಜೊತೆ ನಿರಂತರ ಅನುಸಂಧಾನದಲ್ಲಿರುತ್ತದೇನೋ.. ಬದುಕಿನ ಯಾವುದೋ ಹಂತದಲ್ಲಿ ದುರ್ಬಲಗೊಳ್ಳುವ ಮನಸು ಸಾವಿನ ಧ್ಯಾನಕ್ಕೆ, ಆತ್ಮಹತ್ಯೆಯಂಥ ಪ್ರವೃತ್ತಿಗಿಳಿವುದೇ! ಆಸೆ, ಪಡೆವ. ಕಳಕೊಳ್ಳುವ ಹಂಬಲ, ತುಡಿತ …

ಎಲ್ಲದರಲ್ಲೂ ಸೋತು ನಿಂತಾಗ, ಇಷ್ಟು ವಿಶಾಲ ಟೈಂ ಅಂಡ್‌ ಸ್ಪೇಸ್‌ನಲ್ಲಿ ತನ್ನದೇ ಸ್ಪೇಸ್‌ಗಾಗಿ ತಡಕಾಡಿ ನಿರಾಶಗೊಂಡಾಗ ಎಲ್ಲವನ್ನು ಶಾಶ್ವತವಾಗಿ ಮರೆಯಲು ಅಂಥದೊಂದು ಪ್ರವೃತ್ತಿ ಶುರುವಾಗುತ್ತದೆ. ಸೋಲುಗಳನ್ನೋ, ಅವಮಾನಗಳನ್ನೋ, ಹತಾಶಗಳನ್ನೋ, ನೋವುಗಳನ್ನೋ, ಮುಜುಗರಗಳನ್ನೋ… ಅದೇನೇನನ್ನೋ ಕಾರಣಗಳ ಮಾಡಿಕೊಳ್ಳಬಹುದು ಆ ಪ್ರವೃತ್ತಿ !

ಆತ್ಮ ಹತ್ಯೆಯ ನಿರ್ಣಾಯಕ ಕ್ಷಣದಲ್ಲಿ ಅದಾವುದೋ ನಮ್ಮೊಳಗಿನ ಚೇತನ ಮತ್ತೆ ರಚ್ಚೆ ಹಿಡಿದು ಹಿಂದಕ್ಕೆಳೆಯುತ್ತದೆ. ತನಗೆ ಈ ಕ್ಷಣ ನೀನು ಬೇಕೇ ಬೇಕೆನ್ನುವ ಹಟಕ್ಕೆ ಬಿದ್ದ ಪುಟ್ಟ ಕಂದ, ಅಮ್ಮನ ಸೆರಗು ಹಿಡಿದು ನಿಲ್ಲುವ ಹಾಗೆ. ಸ್ವಲ್ಪ ನಿಂತು ಬಿಡೋ, ಕತ್ತಲಾವರಿಸುತ್ತಿದೆ, ಮಳೆ ಜೋರು, ಗಾಳಿಯೂ ಬಿರು ಬೀಸುತ್ತಲಿದೆ, ಗುಡುಗು ಮಿಂಚೂ ಮೂಡುತ್ತಿದೆ, ಪ್ರಶಾಂತ ನದಿಯ ಅಲೆಗಳು ಯಾಕೋ ರೊಚ್ಚಿಗೆದ್ದಂತಿವೆ, ದೋಣಿ ಸಾಗದು, ಸ್ವಲ್ಪ ಸಮಯ ನಿಂತು ಬಿಡೋ… ಹೊರಟೇ ನಿಂತವರನ್ನು ತಡೆಯುವ ಅದಮ್ಯ ಪ್ರೇಮಿಯ ಗಜಲ್ ಹಾಡಿನ ಹಾಗೆ.

ದೇಹ ಗೂಡಲ್ಲಿ ಸ್ವಚ್ಛಂದವಾಗಿ ಹಾರಾಡುವ ಪ್ರಾಣ ಪಕ್ಷಿ ಅನಂತದೆಡೆ ರೆಕ್ಕೆ ಅಗಲಿಸಲು ತಾವು ತೊರೆಯುವುದಕ್ಕೆ ಸಜ್ಜಾಗುವುದಾದರೂ ಹೇಗೆನ್ನುವ ದಿಗಿಲು ನನ್ನದು! ಉಳಿಸಿಕೊಳ್ಳಲು ಅದರೊಂದಿಗೆ ಒಳಗಿನ ಚೇತನದ ಸೆಣಸಾಟ ಕಲ್ಪನೆಗೆ ಮೀರಿದ್ದು. ದಾರ್ಶನಿಕನಿಗೆ ದಕ್ಕಬಹುದಾದ ಇಂಥ ಅನುಭವವನ್ನು ರಂಗಮುಖೇನ ಅದ್ಭುತ ಬಹುಸ್ವರ ಸಂಗೀತದೊಂದಿಗೆ ಕಟ್ಟಿಕೊಟ್ಟ ಪೊಲೆಂಡ್‌ ನ ಝಾರ್‌ ತಂಡದ ಪ್ರತಿ ನಟ, ನಟಿ, ಸಂಗೀತ ಕಲಾವಿದರು, ನಾಟಕದ ವಸ್ತುವಿನ ಆತ್ಮದ ಬೆಳಕನ್ನೇ ರಂಗದ ಮೇಲೆ ಸೂಸಿದಂಥ ಬೆರಗು ಸೃಷ್ಟಿಸಿದ ಬೆಳಕು ವಿನ್ಯಾಸಕಾರ, ತಂತ್ರಜ್ಞರಿಗೆ ನಾನು ಫುಲ್‌ ಫಿದಾ.

ಸಂಭಾಷಣೆಗಳಿಲ್ಲದೇ ಅಭಿನಯ, ಸಂಯೋಜನೆ, ಪ್ರತಿ ಪರಿಕರದ ಜೊತೆಗಿನ ನಟ, ನಟಿಯರ ಅನುಸಂಧಾನದಂಥ ತೀವ್ರ, ತೀಕ್ಷ್ಣ ಮೂವ್‌ಮೆಂಟ್‌ಗಳೊಂದಿಗೆ ತನಗೇ ದರ್ಶನವಾದಂತಿರುವ ಭಾವವನ್ನು ದೃಶ್ಯರೂಪದಲ್ಲಿ ಬಿಚ್ಚಿಟ್ಟ ನಿರ್ದೇಶಕನಿಗೆ ದಿಲ್‌ ಸೇ ಸಲಾಂ. ಇಂಥದೊಂದು ಅದ್ಭುತ ಅನುಭವ ಸವಿಯಲು ಥಿಯೇಟರ್‌ ಓಲಿಂಪಿಕ್ಸ್‌ ಮೂಲಕ ಅವಕಾಶ ಮಾಡಿಕೊಟ್ಟ ಸಿ. ಬಸವಲಿಂಗಯ್ಯ.. ಥ್ಯಾಂಕ್‌ ಯು.

Theatre Olympics 2018

Organised by: NSD Bengaluru CentrePlay (Nob-verbal): Caesarean Section.

Essays on Suicide/Enacted by: ZAR Theatre Polland
Direction- Jarosław Fret

‍ಲೇಖಕರು Avadhi GK

February 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: