ನಾನ್ ರೆಸಿಡೆಂಟ್ ಸಾಹಿತ್ಯ: ನಮ್ಮೊಡನಿದ್ದೂ ನಮ್ಮಂತಾಗದ..
– ಡಾ. ಎಚ್. ಎಸ್. ಅನುಪಮಾ
‘ಜನವರಿ ೨೫, ೨೬, ೨೭ರಂದು ನಡೆಯಲಿರುವ ಸಾಹಿತ್ಯ ಸಂಭ್ರಮಕ್ಕೆ ಧಾರವಾಡ ಸಜ್ಜಾಗುತ್ತಿದೆ. ಈ ಸಂಭ್ರಮ ಅಂತಿಂಥದಲ್ಲ! ನಾನ್‌ರೆಸಿಡೆಂಟ್ ಸಾಹಿತಿಗಳು, ಮತ್ತೆ ನೋಡಲು ಸಿಗಲಾರದವರು, ಪ್ರಶಸ್ತಿ ಪಡೆದವರು, ಪಡೆಯಲು ಕ್ಯೂ ನಿಂತವರು, ಎಲ್ಲರೂ ಇಲ್ಲಿ ನೆರೆಯುತ್ತಾರೆ. ಪುಷ್ಪಕ ವಿಮಾನಗಳಲ್ಲಿ ಸ್ವರ್ಗದಿಂದ ಧರೆಗಿಳಿವವರನ್ನು ನೋಡಲು ಇಂದೇ ನಿಮ್ಮ ಪ್ರವೇಶ ಕಾಯ್ದಿರಿಸಿಕೊಳ್ಳಿ, ಏಕೆಂದರೆ ಮೊದಲು ಬಂದ ೨೫೦ ಜನರಿಗಷ್ಟೇ ಪ್ರವೇಶ.
ನೀವು ಧಾಸಾಸಂದಲ್ಲಿ ಪಾಲ್ಗೊಳ್ಳಬಯಸುವಿರಾದರೆ ಮೊದಲು ಪ್ರತಿನಿಧಿ ಶುಲ್ಕ ೧೫೦೦ ರೂಪಾಯಿ ಹಾಗೂ ಹೋಗಿಬರುವ ಪ್ರಯಾಣಕ್ಕೆ ಮತ್ತು ರಾತ್ರಿ ಊಟವಸತಿಯ ಖರ್ಚಿಗೆ ಕಿಸೆಯಲ್ಲಿ ಹಣವಿದೆಯೇ ನೋಡಿಕೊಳ್ಳಿ. ಹಣವಿಲ್ಲವೇ? ಕ್ಷಮಿಸಿ, ನಿಮ್ಮ ಕತೆಕವಿತೆಕಾಳಜಿಗಳು ಪ್ರವೇಶಕ್ಕೆ ಅರ್ಹತೆ ಒದಗಿಸುವುದಿಲ್ಲ. ನೆನಪಿಡಿ: ಕತೆಕವಿತೆಗಳಿಂದ ಹೊಟ್ಟೆ ತುಂಬುವುದಿಲ್ಲ.
ವಿಶೇಷ ಸೂಚನೆ: ವಿದ್ಯಾರ್ಥಿಗಳಿಗೆಂದೇ ಭಾರೀ ವಿಶೇಷ ರಿಯಾಯ್ತಿ ನೀಡಲಾಗಿದೆ. ಪ್ರತಿನಿಧಿ ಶುಲ್ಕ ಕೇವಲ ಒಂದು ಸಾವಿರ ಮಾತ್ರ.
ಪ್ರವೇಶಕ್ಕೆ ಅನುಮತಿ ನೀಡುವ ಹಕ್ಕು ಕಾದಿರಿಸಲಾಗಿದೆ. ಪ್ರವೇಶ ಗಿಟ್ಟಿಸಿದವರು ನಿಮ್ಮ ಪೆನ್ನು, ಸಿಗರೇಟು ವಗೈರೆ ಶಸ್ತ್ರಾಸ್ತ್ರಗಳನ್ನೆಲ್ಲ ತ್ಯಜಿಸಿ ಬನ್ನಿ. ಬಾಯಿ ಮುಚ್ಚಿಕೊಳ್ಳಲು ಬಟ್ಟೆ ಕಡ್ಡಾಯ. ಏಕೆಂದರೆ ಸಭ್ಯತೆಗೆ ಮೊದಲ ಪ್ರಾಶಸ್ತ್ಯ. ನಿಮ್ಮ ಪ್ರಶ್ನೆ, ಚರ್ಚೆ ಡೀಸೆಂಟ್ ಅಲ್ಲದಿದ್ದರೆ ಹೊರಹಾಕುವ, ಉಳಿದ ಅವಧಿಗೆ ಒಳಬಿಟ್ಟುಕೊಳ್ಳದೇ ಇರುವ ಎಲ್ಲ ಹಕ್ಕು ಸಂಘಟಕರಿಗಿದೆ.’

***
ಇಂಥ ವಿಕಟ ಮಾತುಗಳಲ್ಲಲ್ಲದೇ ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮ ಕುರಿತ ಬರಹ ಟೇಕ್ ಆಫ್ ಆಗುವುದಿಲ್ಲ.
ಮೊದಲ ಬಾರಿಗೆ ಧಾರವಾಡದ ಸಾಹಿತ್ಯ ವಲಯದ ದಿಗ್ಗಜರು ಸೇರಿ ನಡೆಸುತ್ತಿರುವ ಈ ಸಂಭ್ರಮವನ್ನು ಸಂಘಟಿಸಿದ ಉದ್ದೇಶ, ಅದರ ನಿಯಮ ನಿಬಂಧನೆಗಳತ್ತ ಕಣ್ಣು ಹಾಯಿಸಿದರೆ ಜನಪರ ಸಾಹಿತ್ಯ, ಚಳುವಳಿ, ಕನ್ನಡಭಾಷೆ ಇಂಥ ಮಾತುಗಳಿಗೆ ಅವರ ನಿಘಂಟುಗಳಲ್ಲಿ ಏನರ್ಥವಿದೆ ಎಂಬ ಕುತೂಹಲವಾಗುತ್ತದೆ. ಭಾರೀ ಪ್ರತಿನಿಧಿ ಶುಲ್ಕ ವಿಧಿಸಿ ೪೦ ಲಕ್ಷ ಖರ್ಚಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬರಬಹುದೆಂದು ನಿರೀಕ್ಷಿಸಿರುವುದು ಕೇವಲ ೪೦೦ ಜನ ಮಾತ್ರ. ಉದ್ದೇಶಿತ ವೆಚ್ಚದಲ್ಲಿ ೧೦ ಲಕ್ಷ ಕನ್ನಡ ಸಂಸ್ಕೃತಿ ಇಲಾಖೆಯದು. ಧಾರವಾಡ ವಿಶ್ವವಿದ್ಯಾಲಯ ತನ್ನ ಸ್ಥಳವನ್ನು ಉಚಿತವಾಗಿ ಬಳಸಿಕೊಳ್ಳಲು ಅನುಮತಿ ನೀಡಿದೆ. ಪ್ರತಿದಿನ ಬೆಳಿಗ್ಗೆ ತಿಂಡಿಯಿದೆ, ಮಧ್ಯಾಹ್ನ ಊಟವಿದೆ. ಅದಕ್ಕೂ ಪ್ರಾಯೋಜಕರನ್ನು ಹುಡುಕಲಾಗುತ್ತಿದೆ. ರಾತ್ರಿ ಊಟ ಮತ್ತು ವಸತಿ ನಿಮ್ಮದೇ. ಅಲ್ಲಿ ಪುಸ್ತಕ ಮಳಿಗೆ ಹಾಕಬಯಸುವವರು ೧೫೦೦ ರೂ. ಶುಲ್ಕ ನೀಡಬೇಕು. ಅಲ್ಲಿಗೆ ಬರುವವರು ಸಭ್ಯವಾಗಿ ವರ್ತಿಸಬೇಕು. ಅಸಭ್ಯ ಪ್ರಶ್ನೆ, ಚರ್ಚೆಗೆ ಅವಕಾಶವಿಲ್ಲ.
ಕೆಲವೇ ಜನ ಭಾಗವಹಿಸಬಹುದಾದ ಇಂಥ ಡಿಸೈನರ್ ಕಾರ್ಯಕ್ರಮ ಯಾರಿಗಾಗಿ? ಸರ್ಕಾರ ಸಾಕುತ್ತಿರುವ ಎಷ್ಟೋ ಬಿಳಿಯಾನೆಗಳ ಯಾದಿಯಲ್ಲಿ ಇಂಥ ಇನ್ನೊಂದನ್ನು ಸೇರಿಸುವ ಅಗತ್ಯವಾದರೂ ಏನಿತ್ತು? ಇದಾದ ಎರಡೇ ವಾರಗಳಲ್ಲಿ ಧಾರವಾಡಕ್ಕೆ ಹತ್ತಿರದ ಬಿಜಾಪುರದಲ್ಲಿ ಕೋಟ್ಯಂತರ ವೆಚ್ಚದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವಾಗ ಹದಿನೈದು ದಿನ ಮೊದಲು ಈ ಹೈ ಪ್ರೊಫೈಲ್ ಕಾರ್ಯಕ್ರಮ ನಡೆಸುವ ಉದ್ದೇಶ ಏನು?
ಸಾಹಿತ್ಯ ಕಲೆಗಳು ದಂತ ಗೋಪುರದಲ್ಲಿ ಹುಟ್ಟಿ ಬೆಳೆಯಲಿಲ್ಲ. ಅವು ಕೇರಾಫ್ ಫುಟ್‌ಪಾತ್ ಅರಳಿ ಈ ನೆಲೆ ತಲುಪಿವೆ. ಕೇಳುಗ, ಓದುಗನೇ ಅದರ ಜೀವಾಳ. ಹಾಗಿರುವಾಗ ಕಾಸಿದ್ದರೆ ಬಂದು ಕೇಳು, ಇಲ್ಲದಿದ್ದರೆ ಹೊರಗಿರು ಎನ್ನುವ ನಿಯಮ ಕನ್ನಡ ಸಾಹಿತ್ಯ ಪರಂಪರೆಗಷ್ಟೇ ವಿರೋಧಿಯಲ್ಲ, ಜನ ವಿರೋಧಿಯೂ ಆಗುತ್ತದೆ. ಕನ್ನಡ ಸಾಹಿತ್ಯಕ್ಕೆ ಅನನ್ಯವಾದ ಒಂದು ಜನಸ್ನೇಹಿ, ಜನಪರ ಪರಂಪರೆಯಿದೆ. ಮೌಖಿಕ ಪರಂಪರೆಯೂ ಕೂಡಾ ಕೇಳುಗನಿಗೆ ‘ಶರಣು’ ಎಂದೇ ಹೇಳಲು ಶುರುಮಾಡುತ್ತದೆ. ರಾಜಾಶ್ರಯ ನೆಚ್ಚದೇ ಜನಸಾಮಾನ್ಯರ ನಡುವೆ ಬದುಕಿ ಬರೆದ ಕವಿಗಳಿದ್ದಾರೆ. ಮನೆಮನೆಗೆ ಪುಸ್ತಕ ಹೊತ್ತು ಮಾರಿ ಪುಸ್ತಕ ಪ್ರೀತಿ ಹೆಚ್ಚಿಸಿದ ಗಳಗನಾಥರಂಥವರಿದ್ದಾರೆ. ಟಿಎಡಿಎ ಗೊತ್ತೇ ಇಲ್ಲದೆ ಊರೂರಿಗೆ ಒಂದು ಭಾಷಣ, ಕವಿತೆ ಕೇಳಲಿಕ್ಕೆ, ಹೇಳಲಿಕ್ಕೆ ತಿರುಗುವವರಿದ್ದಾರೆ. ಹೋರಾಟ ಚಳುವಳಿಗಳ ಮೂಲಕ ಜನರ ನಡುವಿನಿಂದಲೇ ರೂಪುಗೊಂಡ ಸಾಹಿತಿಗಳಿದ್ದಾರೆ. ಸಾಹಿತ್ಯ ಹುಟ್ಟುವುದೂ, ಬೆಳೆಯುವುದೂ ಜನಸಂವೇದನೆಯಿಂದ, ಜನರಿಗಾಗಿ ಎನ್ನುವುದಾದರೆ ಅಂಥ ಕತೆ, ಕವಿತೆ, ಚರ್ಚೆಗಳನ್ನು ಮುಚ್ಚಿದ ಬಾಗಿಲಿನ ಒಳಗೆ ನಡೆಸಿದರೆ ಅದನ್ನು ಸಾಹಿತ್ಯ ಸಂಭ್ರಮವೆನ್ನುವುದು ಹೇಗೆ?
ಕಿಸೆಯಲ್ಲಿ ಕಾಸಿಲ್ಲದವ ಒಳಬರಲು ಅಯೋಗ್ಯನೆಂದು ನಿರ್ಧರಿಸುವ ಇಂಥ ಸಮ್ಮೇಳನಗಳು ಆಳದಲ್ಲಿ ಜನರಿಂದ ಸಾಹಿತಿಗಳನ್ನು, ಸಾಹಿತ್ಯವನ್ನು ದೂರ ಒಯ್ಯುವ; ಸಾಹಿತ್ಯವನ್ನೂ ಮಾರುಕಟ್ಟೆಯನ್ನಾಗಿಸುವ; ಯಾವುದು ಹೊರಗೆ ಯಾವುದು ಒಳಗೆ ಎಂದು ಮೊದಲೇ ನಿರ್ಧರಿಸಿ ಪ್ರತ್ಯೇಕತಾ ನೀತಿಯನ್ನು ಬೆಳೆಸುವ; ಚರ್ಚೆ-ವಾಗ್ವಾದ-ಠರಾವುಗಳ ನೈಜ ಸ್ಫೂರ್ತಿಯನ್ನೇ ನಾಶ ಮಾಡುವ ಕನ್ನಡ ವಿರೋಧಿ ಚಟುವಟಿಕೆಯಾಗಿದೆ. ಈಗ ಎಲ್ಲೆಡೆ ಪ್ರವೇಶಿಸಿರುವ ಕಾರ್ಪೋರೇಟ್ ಸಂಸ್ಕೃತಿ ಸಾಹಿತ್ಯ ಲೋಕವನ್ನೂ ಭ್ರಷ್ಟಗೊಳಿಸಿದ ಸೂಚನೆಯಾಗಿದೆ. ಒಂದೆಡೆ ಬನ್ನಿ ಎಂದು ಕರೆದರೆ ಬಟ್ಟೆ ಇಸ್ತ್ರಿ ಮಾಡಿಕೊಂಡು ಕವಿಗಳು ಓಡೋಡಿ ಬರುತ್ತಾರೆಂದು ಭಾವಿಸುವ ಬಂಡವಾಳಶಾಹಿ ಸಾಹಿತ್ಯ ಸಂಘಟಕರು; ಮತ್ತೊಂದೆಡೆ ಕೇಳುಗರನ್ನು ‘ಪೇಯಿಂಗ್ ಕೆಪಾಸಿಟಿ’ ಮೇಲೆ ಮೊದಲೇ ನಿರ್ಧರಿಸುವ ಶ್ರೇಷ್ಠತೆಯ ವ್ಯಸನಿಗಳು – ಇದರ ನಡುವೆ ನಿಜವಾದ ಸಾಹಿತಿ-ಸಾಹಿತ್ಯ ಎಲ್ಲೋ ಸೊರಗುತ್ತದೆ.
ಸಾರ್ವಜನಿಕ ಆಡಂಬರ ಮತ್ತು ಕೀಳು ಅಭಿರುಚಿಯ ವಿಜೃಂಭಣೆಯನ್ನು ಮೆಚ್ಚುವ ಗುಣ ಜನಸಾಮಾನ್ಯರಲ್ಲೂ ಕಾಣತೊಡಗಿದೆ. ಆದರೆ ಬರಹಗಾರನೂ ಹಾಗೇ ಆದರೆ? ಬರಹಗಾರನಿಗೆ ಇಂಥವಕ್ಕೆಲ್ಲ ಸಿಟ್ಟೇ ಬಾರದೆ ಸಿನಿಕನಾದರೆ? ಬಂದರೂ ಆ ಸಿಟ್ಟು ಬರೀ ನೈತಿಕ ಆಕ್ರೋಶದಲ್ಲಿ ಕೊನೆಗೊಂಡರೆ? ಆಗ ದುಷ್ಟಕೂಟಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ ಕನ್ನಡದ ಅನನ್ಯ ಪರಂಪರೆಯನ್ನು ಹಾದುಬಂದ, ಚಳುವಳಿ-ಸಿದ್ಧಾಂತಗಳಿಂದ ತಮ್ಮ ತಾತ್ವಿಕತೆ ರೂಪಿಸಿಕೊಂಡ ಅನೇಕ ಸೂಕ್ಷ್ಮ ಮನಸ್ಸುಗಳು ವ್ಯವಹಾರದ ಕಸರತ್ತಿನಂತಿರುವ ಈ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ಸಾಹಿತ್ಯದ ದುರಂತವಾಗಿ ಕಾಣುತ್ತಿದೆ.
ಆದರೂ ಕಾಲ ಮಿಂಚಿಲ್ಲ. ಮನೆಯೊಳಗೆ ಕಸ ಬೀಳುತ್ತಲೇ ಇರುತ್ತದೆ, ಅದನ್ನು ಗುಡಿಸಿ ಎಸೆಯುತ್ತಲೇ ಇರಬೇಕು. ಧೈರ್ಯವಾಗಿ ಯೋಚಿಸುವ ಮನಸ್ಸುಗಳು ಒಂದೆಡೆ ಸೇರಿ ಜನಸ್ನೇಹಿಯಲ್ಲದ ಸಾಹಿತ್ಯಿಕ ಸಂಭ್ರಮಾಚರಣೆಗಳನ್ನು ವಿರೋಧಿಸಬೇಕು. ಆ ನೆವದಲ್ಲಿ ಜನಪರ ಕಾಳಜಿಯ ಮನಸ್ಸುಗಳು ಒಂದಾಗಬೇಕು.
ಈ ‘ಸಂಭ್ರಮ’ದ ಎಡಬಲ ತಿಳಿಯದೇ ಅದರಲ್ಲಿ ಭಾಗವಹಿಸಹೊರಟ ಹಿರಿಯರೇ, ಸ್ನೇಹಿತರೇ, ಹೊರಬನ್ನಿ. ಎಲ್ಲಕ್ಕೂ ಇದ್ದೇ ಇದೆ ಪರ್ಯಾಯ..






0 Comments