ಅದಕ್ಕೆ ನನ್ನಪ್ಪ ಅಂದ್ರೆ ನಂಗಿಷ್ಟ!

ಅಪ್ಪನೆಂಬೋ ಗುರು..

shreekala d s

ಶ್ರೀಕಲಾ ಡಿ ಎಸ್

 

ಆ ಹಾರ್ಟ್ ಶೇಪ್ ತಟ್ಟೆ ನೋಡಿದಾಗೆಲ್ಲಾ ನೆನಪಾಗುತ್ತದೆ.

ಆಗಷ್ಟೇ ಶಾಲೆಯ ಮುಖ ಕಂಡ ಪುಟ್ಟ ಹುಡುಗಿ ನಾನು. ಎಲ್ಲವೂ ಹೊಸದು, ಬೆರಗು. ಸರಿಯಾಗಿ ಅ ಆ ಇ ಈ ಬರುತ್ತಿರಲಿಲ್ಲ. ಅಷ್ಟರಲ್ಲೇ ಭಾಷಣ ಮಾಡಲು ಹೇಳಿಬಿಟ್ಟಿದ್ದರು. ಸ್ಟೇಜ್ ಹತ್ತಿ ನೂರಾರು ಮಂದಿಯ ಎದುರು ನಿಂತು ಮಾತನಾಡೋದು ಅಂದರೆ ಆ ಆರರ ಹರೆಯದಲ್ಲಿ ಸುಲಭವೇ ? ಹೊಟ್ಟೆಯ ಒಳಗಿಂದ ಹುಟ್ಟಿ ದೇಹದ ತುಂಬೆಲ್ಲಾ ಹರಿಯುವ ಅದೆಂತಹುದೋ ವಿಚಿತ್ರ ಆತಂಕ ಅವತ್ತೇ ಮೊದಲ ಬಾರಿ ಆಗಿದ್ದು. ಚೀಟಿ ತೆಗೆ ತೆಗೆದು ನೋಡಿಕೊಳ್ಳುತ್ತಿದೆ. ಮೈಕೈ ಎಲ್ಲಾ ನನಗಷ್ಟೇ ತಿಳಿಯುವಂತೆ ನಡುಗುತ್ತಿತ್ತು.

ಆದರೂ ಅದು ಅಪ್ಪನಿಗೆ ಹೇಗೆ ತಿಳಿಯಿತೋ? ಪಕ್ಕದಲ್ಲೇ ಇದ್ದ ಅಪ್ಪ ನನ್ನ ಕೈ ಹಿಡಿದುಕೊಂಡ. ಮೆಲ್ಲಗೆ ಹಸ್ತವನ್ನೊಮ್ಮೆ ಅದುಮಿ ಕಣ್ಣಲ್ಲೇ ಆತ್ಮವಿಶ್ವಾಸವನ್ನು ಹರಿಯಬಿಟ್ಟ. `ಹೋಗು ಪುಟ್ಟಿ… ಚೆನ್ನಾಗಿ ಮಾತಾಡು’ ಎಂದವನೇ `ನಿನ್ನಿಂದ ಸಾಧ್ಯವಿದೆ’ ಎಂಬಂತೆ ಭುಜವನ್ನು ಅದಮ್ಯ ಅಕ್ಕರೆಯಿಂದ ತಡವಿದ. ಆ ಕ್ಷಣ ಭಯ ಇಲ್ಲದಾಯಿತು. ವೇದಿಕೆ ಮೇಲೇರಿ ನಿಂತು `ಭಾವೈಕ್ಯತೆ’ ಬಗ್ಗೆ ಭಾಷಣ ಮಾಡಿಯೇ ಬಿಟ್ಟೆ. ಇದೇ ಹಾರ್ಟ್  ಶೇಪ್ ಸ್ಟೀಲ್ ತಟ್ಟೆ ಬಹುಮಾನವಾಗಿ ಬಂತು. ಈಗದು ನಮ್ಮನೆಯ ದೇವರ ಕೋಣೆಯಲ್ಲಿ ದೀಪವಿರಿಸುವ `ದೇವರ ಪಾತ್ರೆ’. ಬೆಳಕನ್ನು ಹಿಡಿದಿಟ್ಟುಕೊಂಡ ಗಟ್ಟಿ ಬುಡ.

ಆವತ್ತು ಅಂತಹ ಬುಡವನ್ನು ಸೃಷ್ಟಿಸಿದ್ದು ನನ್ನಪ್ಪ. ಇವತ್ತು ಅದೇ ಬುನಾದಿಯ ಮೇಲೆ ನಿಂತಿದ್ದೇನೆ. ಅಲುಗಾಡಲು ಬಿಡುತ್ತಿಲ್ಲ ಅದು. ಭಾವೈಕ್ಯತೆ ಶಬ್ದದ ಅರ್ಥ ಅಂದು ಆಗಿರಲಿಲ್ಲ. ಅಪ್ಪ ಏನು ಬರೆದು ಕೊಟ್ಟಿದ್ದನೋ ಅದನ್ನು ಉರು ಹೊಡೆದು ಒಪ್ಪಿಸಿ ಶಹಭಾಸ್ ಎನಿಸಿಕೊಂಡಿದ್ದೆ. ಆವತ್ತೇ ಕೊನೆ. ವೇದಿಕೆಯ ಭಯ ಇಲ್ಲದಾಯಿತು. ಆವತ್ತು ಬೆನ್ನು ತಟ್ಟಿದ ಕೈ ಇವತ್ತಿನ ತನಕವೂ ತಟ್ಟುತ್ತಲೇ ಬಂದಿದೆ. ಕೊಂಚವೂ ನೋಯುತ್ತಿಲ್ಲವಲ್ಲ ಅಪ್ಪನ ಕೈ.

ಭಾಷಣ ಮಾಡಿಸುತ್ತಲೇ ಬಂದ. ಪ್ರಬಂಧಗಳ ಬರೆಸುತ್ತಲೇ ಬಂದ. ರಾಶಿ ರಾಶಿ ಕಥೆಗಳ ಹೇಳಿದ. ಭರತನಾಟ್ಯ ಕ್ಲಾಸ್ ಮುಗಿಯುವ ತನಕ ಜೊತೆಗಿರುತ್ತಿದ್ದ. ಆಮೇಲೆ ಮೆಲ್ಲಗೆ ಶುರು ನಡಿಗೆ. ಸಂಜೆ ಆರರ ಹೊತ್ತಿಗೆ ಇಬ್ಬರೂ ಹರಟುತ್ತಾ ಅರ್ಧಗಂಟೆ ದಾರಿಯನ್ನು ಒಂದು ಗಂಟೆ ನಡೆದು ಮನೆ ಸೇರುತ್ತಿದ್ದೆವು.

ಮನೆಯೇ ಮೊದಲ ಪಾಠ ಶಾಲೆ. ನನ್ನ ಪಾಲಿಗೆ ಅದು ಸತ್ಯವೇ. ಆದರೆ ಪಿಯುಸಿ ಆರಂಭಗೊಳ್ಳುತ್ತಿದ್ದಂತೆ ಮನೆಯೇ ಶಾಲೆಗೆ ಬಂದಿತ್ತು ! ಅಪ್ಪ ಅಲ್ಲಿ ನನಗೆ ಕನ್ನಡ ಸಾಹಿತ್ಯ ಕಲಿಸೋ ಗುರುಪಾದಪ್ಪನಾದ! ಅಪ್ಪನೇ ಶಾಲೆಯಲ್ಲೂ ಗುರುವಾಗುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಕನ್ನಡವನ್ನು ಚೆಂದಗೆ ಹೇಳಿಕೊಟ್ಟ ಒಳ್ಳೆಯ ಮೇಷ್ಟ್ರು ಆತ. ಅಭಿನಯದ ಪಾಠ ಮಾಡಿದ ಕಲಾವಿದ. ತಾಳ್ಮೆಯ ಪ್ರತಿರೂಪ. ಸಂಸ್ಕಾರದ ಬೀಜವನ್ನು ಅದ್ಭುತವಾಗಿ ಬಿತ್ತಿದಾತ.

ಆವತ್ತು ಪತ್ರಿಕೋದ್ಯಮ ಬೆಂಗಳೂರಿನತ್ತ ಕಾಲಿಡುವಂತೆ ಮಾಡಿತು. ಬ್ಯಾಗ್ ಹಿಡಿದು ಬಸ್ ಏರಿಸಲು ಬಂದಿದ್ದ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇಬ್ಬರೂ ಸ್ಟ್ರಾಂಗ್ ಎಂಬಂತೆ ನಟಿಸುತ್ತಿದ್ದೆವು. ಎಷ್ಟೆಂದರೂ ಕಣ್ಣ ಹನಿಗಳಿಗೆ ನಟನೆ ಬರುವುದಿಲ್ಲ. ಒಬ್ಬರಿಗೊಬ್ಬರ ಮುಖ ಕಾಣಬಾರದು, ಅದರಲ್ಲಿರುವ ಭಾವವನ್ನು ಓದಬಾರದು ಎಂಬಂತೆ ಕಣ್ಣ ಹನಿಗಳೇ ಪರದೆ ಸೃಷ್ಟಿಸಿದ್ದವು. ಪದೇ ಪದೇ ಕನ್ನಡಕ ಸರಿ ಮಾಡಿಕೊಳ್ಳುತ್ತಿದ್ದ ಅಪ್ಪ.

ಆದರೆ ಕ್ಷಣಗಳಲ್ಲೇ ಹಳೆಯ ಅಪ್ಪನಾದ. ಪುಟ್ಟ ಹುಡುಗಿಯನ್ನು ವೇದಿಕೆ ಏರಿಸಿದ ಅಪ್ಪ. `ನಿನ್ನಿಂದ ಸಾಧ್ಯವಿದೆ’ ಎಂದು ಭುಜ ತಟ್ಟಿದ. ಕಣ್ಣಲ್ಲಿ ಅದೇ ಆತ್ಮವಿಶ್ವಾಸ!

ಬದುಕೆಂದರೆ ಏನು ಎಂದು ಕಲಿಸಿಕೊಟ್ಟ ಅಪ್ಪನೆಂಬ ಶಿಕ್ಷಕನಿಗೆ ಧನ್ಯವಾದ ಎಂಬ ಪದವೇ ಚಿಕ್ಕದು. ಇಂತಹ ಅಪ್ಪ-ಗುರು ಎಲ್ಲರಿಗೂ ಸಿಗಲಿ.

ಅದಕ್ಕೆ ನನ್ನಪ್ಪ ಅಂದ್ರೆ ನಂಗಿಷ್ಟ!

‍ಲೇಖಕರು Admin

January 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಮಾಲಿನಿ

    ನನ್ನಪ್ಪ ನೆನಪಾದರು. ಅಪ್ಪ ಎಂಬ ಅದ್ಭುತವನ್ನು ವರ್ಣಿಸಲು ಮಾತುಗಳಿಲ್ಲ. ಮನ ಮುಟ್ಟಿತು, ಈ ಬೆಳಗಿನಂದು ನನ್ನಪ್ಪನ ನೆನಪು ತಂದು ಕೊಟ್ಟ ನಿಮ್ಮ ಅಪ್ಪನ ಕುರಿತ ಬರಹಕ್ಕೆ Big thanks.
    ಪ್ರೀತಿಯಿಂದ ಮಾಲಿನಿ.

    ಪ್ರತಿಕ್ರಿಯೆ
  2. Anonymous

    Nice.
    ಧೈರ್ಯ, ಪ್ರೀತಿ ತುಂಬುವ ಜೀವಗಳು ತಂದೆ ತಾಯಿ.
    ಬರಹಕ್ಕಿಳಿಸಿದ ತಂಗಿ. Good luck.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: