(ಫೇಸ್ ಬುಕ್ಕಿನಲ್ಲಿ ಹಂಚಿಕೊಂಡ ಬರಹ)
ದಿಲಾವರ್ ರಾಮದುರ್ಗ
ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ ಹೆಣ್ಣುಗಳ ಮೇಲೆ. ಇದು ಒಂದು ರೆಗ್ಯುಲರ್ ಫೆನಾಮಿನಾ.
ಆದರೆ…
“1998ರಲ್ಲಿ ನನ್ನ ಆಸ್ಪತ್ರೆಗೆ ಮೊತ್ತಮೊದಲ ಹೊರರೋಗಿಯಾಗಿ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣನ್ನು ಕರೆತಂದರು. ಅತ್ಯಾಚಾರಿಗಳು ಆ ಹೆಣ್ಣು ದೇಹ ತಿಂದು ಮುಗಿಸಿ ಅದರ ಯೋನಿಯೊಳಕ್ಕೆ ಮತ್ತು ತೊಡೆಗಳ ಮೇಲೆ ಹಲ್ಲಿನ ಗಾಯದ ಜತೆಗೆ ಬುಲೆಟ್ ಗಳನ್ನು ಹಾರಿಸಿದ್ದರು. ಅಂಥ ಬರ್ಬರ ಅತ್ಯಾಚಾರದ ಪ್ರಕರಣವನ್ನು ನಾನು ಹಿಂದೆಂದೂ ಕೇಳಿಲ್ಲ. ನೋಡಿಲ್ಲ..
ಆಗಾಗ ನಡೆಯುತ್ತಲೇ ಇದ್ದ ಆಂತರಿಕ ಕಲಹಗಳು, ಜನಾಂಗಿಕ ಸಂಘರ್ಷಗಳಿಂದ ಹೆಚ್ಚುತ್ತಿದ್ದ ಹಿಂಸೆ, ಅತ್ಯಾಚಾರದ ಪ್ರಕರಣಗಳಲ್ಲಿ ನಲುಗುವ ಹೆಣ್ಣುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಟೆಂಟುಗಳನ್ನು ಬಳಸಿ ಆಸ್ಪತ್ರೆ ರೂಪಿಸಿದ್ದೆ. 1998ರಲ್ಲಿ ನಡೆದ ದಾಳಿ ಆಸ್ಪತ್ರೆಯ ಜತೆಗೆ 35 ರೋಗಿಗಳನ್ನೂ ಮುಗಿಸಿಹಾಕಿತ್ತು. ಆದರೂ ಆಸ್ಪತ್ರೆಯನ್ನು ಪುನರ್ ರೂಪಿಸಿದೆ. ಆಗ ಬಂದ ಮೊದಲ ಪ್ರಕರಣವೇ ಈ ಮೇಲಿನ ಹೆಣ್ಣುಮಗಳದ್ದು.
ಬರೋಬ್ಬರಿ ಮೂರು ತಿಂಗಳು ನಂತರ ಅದಕ್ಕೂ ಬರ್ಬರವಾದ ಪ್ರಕರಣವೊಂದು ನನ್ನ ಕಂಗೆಡಿಸಿತು. ಅದು ಸಾಮೂಹಿಕ ಅತ್ಯಾಚಾರದ ಪ್ರಕರಣ. ಅತ್ಯಾಚಾರಕ್ಕೊಳಗಾದ 45 ಹೆಂಗಸರು ಒಂದೇ ದಿನ ಆಸ್ಪತ್ರೆಗೆ ದಾಖಲಾದರು. ಅವರೇ ಹೇಳಿದಂತೆ ‘ನಾವೆಲ್ಲ ಒಂದೇ ಗ್ರಾಮದವರು. ಇಡೀ ಗ್ರಾಮದ ಯಾವ ಹೆಂಗಸು, ಮಗುವನ್ನು ಬಿಡದೆ ಯುದ್ಧಕೋರರು ಅತ್ಯಾಚಾರ ಮಾಡಿದರು’. ಆಘಾತದ ಅಂಶವೆಂದರೆ ಎಲ್ಲರ ಮರ್ಮಾಂಗಗಳ ಮೇಲೆ ಸುಟ್ಟ ಗಾಯಗಳಿದ್ದವು. ಇದೇನು!? ಎಂದು ನೋಡಿದಾಗ, ಅದು ಸುರಿಯಲ್ಪಟ್ಟ ಕೆಮಿಕಲ್ ನಿಂದ ಆದ ಗಾಯ ಎನ್ನುವುದು ತಿಳಿಯಿತು. ಅತ್ಯಾಚಾರಿಗಳು ಹೆಣ್ಣನ್ನು ಬಲಾತ್ಕಾರ ಮಾಡಿ, ಅವರ ಮರ್ಮಾಂಗಗಳ ಮೇಲೆ ಕೆಮಿಕಲ್ ಸುರಿದುಬಿಟ್ಟಿದ್ದರು!
ಇದು ನನ್ನ ಆತ್ಮಾವಲೋಕನಕ್ಕೆ ಒಳಪಡಿಸಿಬಿಟ್ಟಿತು. ಇದು ಬರಿಯ ಯುದ್ಧದ ಬರ್ಬರತೆ ಅಷ್ಟೇ ಅಲ್ಲ. ಇದು ಒಂದು ಯುದ್ಧದ ಪರಿಣಾಮಕಾರಿ ತಂತ್ರ. ಯುದ್ಧಕೋರರು ಅತ್ಯಾಚಾರವನ್ನೂ ಒಂದು ಪ್ರಬಲ ಅಸ್ತ್ರವಾಗಿ ಬಳಸುತ್ತಿರುವ ಹೀನ ಪರಿ ಎನ್ನುವ ಅಂಶ ಗಮನಕ್ಕೆ ಬಂದಿತು.

ಇಡೀ ಹಳ್ಳಿಗೆ ಹಳ್ಳಿಯ ಹೆಣ್ಣುಗಳನ್ನು ಎಲ್ಲರ ಮುಂದೆ ಸಾಮೂಹಿಕ ಅತ್ಯಾಚರಕ್ಕೊಳಪಡಿಸಿ ಜನರಲ್ಲಿ ಭೀತಿ ಹುಟ್ಟಿಸುವ ತಂತ್ರವಿದು. ಅವರೆಲ್ಲ ಈ ಬರ್ಬರತೆಗೆ ಹೆದರಿ ತಮ್ಮ ಮನೆ, ತೋಟ, ಗದ್ದೆ ಮತ್ತು ಬದುಕಿನ ನೆಲೆಗಳನ್ನೆಲ್ಲ ಬಿಟ್ಟು ಗುಳೆ ಹೋಗುವಂತೆ ಮಾಡುವ ವ್ಯವಸ್ಥಿತ ತಂತ್ರವಿದು ಅನಿಸಿ ಹಿಂಸೆಯಾಯಿತು.
ಆಗಲೇ ನನ್ನ ಕಾರ್ಯಾಚರಣೆ ಬೇರೆಯದೇ ದಿಕ್ಕಿನತ್ತ ಸಾಗಬೇಕೆನಿಸಿತು. ಮೊದಲು ಹೀಗೆ ಅತ್ಯಾಚಾರಕ್ಕೊಳಗಾದ ಹೆಣ್ಣುಗಳಲ್ಲಿ ಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಪುಟಿದೇಳುವ ಹುಮ್ಮಸ್ಸು ಇದೆಯಾ ಎನ್ನುವುದರ ಮನೋವೈಜ್ಞಾನಿಕ ಪರೀಕ್ಷೆ ನನಗೆ ಮುಖ್ಯವೆನಿಸಿತು. ಮುಂದಿನ ಹಂತದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯತ್ತ ಗಮನ ಹರಿಸುವುದು. ಮೂರನೇಯ ಹಂತವಾಗಿ ಅವರ ಸಮಾಜೋ-ಆರ್ಥಿಕ ಆಯಾಮಗಳ ಮೇಲೆ ಗಮನ ವಹಿಸುವುದು ಮುಖ್ಯವೆನಿಸಿತು. ಏಕೆಂದರೆ ಆಸ್ಪತ್ರೆ ಸೇರುವಾಗ ಎಷ್ಟೋ ಮಹಿಳಾ ರೋಗಿಗಳ ಮೇಲೆ ತುಂಡು ಬಟ್ಟೆಯೂ ಇರಲಿಲ್ಲ.! ಅವರನ್ನು ಒಂದಷ್ಟು ಕಾಲ ನೋಡಿಕೊಳ್ಳಬೇಕು. ಅವರಿಗೆ ಅನ್ನ, ಆಹಾರ, ಬಟ್ಟೆ ಒದಗಿಸಬೇಕು. ಇದರ ಜತೆಗೆ ಮುಖ್ಯವಾಗಿ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡುವಷ್ಟೊತ್ತಿಗೆ ಅವರಲ್ಲಿ ಮಾನಸಿಕವಾಗಿ ಬದುಕನ್ನು ಎದುರಿಸುವ ಸ್ಥೈರ್ಯ ತುಂಬಬೇಕು.
ನಾಲ್ಕನೆಯ ಹಂತವಾಗಿ ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅವರು ಗುರುತಿಸಬಲ್ಲವರಾಗಿದ್ದರೆ ಅಂಥ ಆಕ್ರಮಣಕೋರರ ಮೇಲೆ ಕಾನೂನುಬದ್ಧ ಹೋರಾಟ ನಡೆಸುವುದಕ್ಕೆ ಕಾನೂನು ನೆರವು ಒದಗಿಸುವುದು ಕೂಡ ಆಗಬೇಕು.
* * *
ಹೀಗೆ ನನ್ನ ಆಲೋಚನೆಗಳು ಕಾರ್ಯರೂಪಕ್ಕಿಳಿದು ಅಂತೂ 2011 ರಲ್ಲಿ ಇಂಥ ಅತ್ಯಾಚಾರದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತ ಬಂದಿತು. ಹಲವು ಶಾಂತಿ ಸಂಧಾನಗಳಿಂದ ಇಡೀ ಪ್ರದೇಶದ ತುಂಬ ನೆಮ್ಮದಿ ನೆಲೆಗೊಳ್ಳತೊಡಗಿದೆ ಎನ್ನುವಾಗಲೇ ಮತ್ತಷ್ಟು ಅತ್ಯಾಚಾರದ ಪ್ರಕರಣಗಳು ಕಳೆದ ವರ್ಷ ಹೆಡೆಬಿಚ್ಚಿಕೊಂಡವು. ಮತ್ತೆ ಅದನ್ನು ಯುದ್ಧ ಸಂಬಂಧಿ ವಿದ್ಯಮಾನಗಳೆಂದು, ಜನಾಂಗಿಕ ಕಲಹಗಳ ಪರಿಣಾಮವೆಂದು ವ್ಯಾಖ್ಯಾನಿಸುವುದು ನಡೆಯಿತು. ಅದೇ ಈಗಲೂ ಮುಂದುವರಿಯುತ್ತಿದೆ ಕೂಡ.
* * *
ವಾಸ್ತವಾಗಿ ಇದು ದೇಶಗಳ ನಡುವಿನ ಯುದ್ಧವಲ್ಲ. ಧರ್ಮಗಳ ನಡುವಿನ ಸಂಘರ್ಷವಂತೂ ಅಲ್ಲವೇ ಅಲ್ಲ. ಇದು ಆರ್ಥಿಕ ಹಿತಾಸಕ್ತಿಗಳು ಕಲಹ ಸೃಷ್ಟಿಸಿ, ಸಂಘಟಿಸುತ್ತಿರುವ ಯುದ್ಧ! ಹೆಣ್ಣುಗಳ ದೇಹದ ಮೇಲೆ ಅತ್ಯಾಚಾರದ ಅಸ್ತ್ರಗಳು ನರ್ತಿಸುವ ಮೂಲಕ ನಡೆಸಲ್ಪಡುತ್ತಿರುವ ಆರ್ಥಿಕ ಹಿತಾಸಕ್ತಿಯ ಯುದ್ಧ! ಇದು ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈಗಲೂ ಜಾರಿಯಲ್ಲಿದೆ.”
-ಇದು ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಡಾ. ಡೆನಿಸ್ ಮುಕ್ವೇಜ್ ಬಿಚ್ಚಿಟ್ಟ ಕಾಂಗೋದ ಜ್ವಲಂತ ಚಿತ್ರಣ.
ಈ ಡಾ. ಡೆನಿಸ್ ಮುಕ್ವೇಜ್ ತಮ್ಮ ತಂಡದೊಂದಿಗೆ ಈತನಕ ಅತ್ಯಾಚಾರಕ್ಕೊಳಗಾದ 30 ಸಾವಿರ ಹೆಣ್ಣುಗಳಿಗೆ ಚಿಕಿತ್ಸೆ ನೀಡಿದವರು. “ಕಳೆದ 16 ವರ್ಷಗಳಿಂದ ಕಾಂಗೋದಲ್ಲಿ ನಡೆಯುತ್ತಿರುವ ಈ ಹಿಂಸೆಗೆ ಮೂಕಪ್ರೇಕ್ಷಕರಾದ ವಿಶ್ವಸಮೂದಾಯಕ್ಕೆ ಏನೆಂದು ಹೇಳಲಿ?” ಎಂದು ವಿಶ್ವಸಂಸ್ಥೆಯ 2012ರ ಸಭೆಯಲ್ಲಿ ಗುಡುಗಿದ್ದೂ ಕೂಡ ಇದೇ ಡಾ. ಡೆನಿಸ್ ಮುಕ್ವೇಜ್.
* * *
ನಮ್ಮ ದೆಹಲಿಯಲ್ಲಿ, ದೇಶದ ತುಂಬ ಮತ್ತು ಮನೆ ಮನೆಗಳಲ್ಲಿ ಹೆಣ್ಣುಗಳ ಮೇಲೆ, ಅಮಾಯಕ ಬಾಲೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಯಾವ ಮುಖವಿದೆ? ಯಾವ ಪ್ರೇರಣೆ? ಆರ್ಥಿಕದ್ದಾ? ಮಾನಸಿಕ ಅಧೋಗತಿಯದಾ? ಸಾಮಾಜಿಕ ಅಹಂಕಾರದ್ದಾ?
ನಮ್ಮಲ್ಲಿ ಹುಡುಕಿದರೂ ಇಂಥದ್ದರ ವಿರುದ್ಧ ಅರ್ಥಪೂರ್ಣ ಮರುಯುದ್ಧ ಸಾರಬಲ್ಲ ಡಾ. ಡೆನಿಸ್ ಮುಕ್ವೇಜ್ ಅಂಥ ಒಬ್ಬನಾದರೂ ಸಿಕ್ಕುತ್ತಾರಾ?
(ಇದು ಒಂದೆಡೆ ಓದಿದ್ದು. ಅದನ್ನಿಲ್ಲಿ ಹಂಚಿಕೊಂಡೆನಷ್ಟೇ)







thumba chennagide, adre ondede dukha.