ಅಣ್ಣಾವ್ರನ್ನು ಹೆಗಲಿಗೇರಿಸಿ ನಡೆದೇ ನಡೆದರು..

ರುಕ್ಕೋಜಿ ಚಿತ್ರಿಸಿದ ರಾಜ್‌ಕುಮಾರ್‌

na da

ನಾ. ದಾಮೋದರ ಶೆಟ್ಟಿ

ಇಲ್ಲಿಯ ರೇಖಾ ಚಿತ್ರಗಳು: ಪ ಸ ಕುಮಾರ್

rukkojiಈ ಕಾಲಘಟ್ಟದ ಅಸಾಮಾನ್ಯ ಕಾಣ್ಕೆಯನ್ನು- ಕನ್ನಡ ಚಲನಚಿತ್ರ ರಂಗದ ಮೇರು ವ್ಯಕ್ತಿತ್ವವಾದ ಡಾ. ರಾಜಕುಮಾರ್‌ ಅವರ ಮೂಲಕ- ದರ್ಶಿಸುವುದಕ್ಕೆ ಸಾಧ್ಯವಾದುದು ನಾಡಿನ ಹಿರಿಯ ಪತ್ರಕರ್ತ, ಚಲನಚಿತ್ರ ವಿಮರ್ಶಕರಾದ ದೊಡ್ಡಹುಲ್ಲೂರು ರುಕ್ಕೋಜಿ ಅವರಿಗೆ.

ಅದೊಂದು ತಪಸ್ಸು ; ಎರಡೂವರೆ ದಶಕಗಳ ಕಾಲದ ಸುದೀರ್ಘ‌ ತಪಸ್ಸು. ಮೊದಲ ಹತ್ತು ವರ್ಷಗಳ ಕಾಲ ತನ್ನ ಉದ್ಯೋಗದ ಜೊತೆಜೊತೆಗೆ ಡಾ. ರಾಜಕುಮಾರ್‌ ಅವರ ಕುರಿತ ಮಾಹಿತಿ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದ ರುಕ್ಕೋಜಿಯವರಿಗೆ ನೋಡು ನೋಡುತ್ತಿದ್ದಂತೆಯೆ ತಾನು ಕೈಗೆತ್ತಿಕೊಂಡ ವಿಷಯದ ಹರಹು ನೋಡಿ ದಂಗು ಬಡಿದಿರಬೇಕು. ಇದು ಹೀಗೆ ಹೋಗಿ ಹಾಗೆ ಬರುವ ಪಾತ್ರ ಧಾರಿಯೊಬ್ಬನ ಕತೆಯಲ್ಲ. ಹೀಗೇ ಹೋದರೆೆ ಸಾಗರದಿಂದ ಕೊಡ ನೀರು ಎತ್ತಿದಂತಾದೀತೆಂದು ಭಾವಿಸಿದ ರುಕ್ಕೋಜಿಯವರು ಅನ್ನ ಕೊಡುವ ಉದ್ಯೋಗಕ್ಕೆ ತಿಲಾಂಜಲಿಯಿತ್ತು ಮಾನ ಕೊಡುವ ಕಾಯಕಕ್ಕೆ ಕೈಯಿಕ್ಕಿದರು.

ಮುಂದಿನ ಹದಿನೈದು ವರ್ಷಗಳು ರುಕ್ಕೋಜಿಯವರ ಸತ್ವಪರೀಕ್ಷೆಯ ದಿನಗಳು. ಛಲಬಿಡದ ತ್ರಿವಿಕ್ರಮನಂತೆ ಅಣ್ಣಾವ್ರನ್ನು ಹೆಗಲಿಗೇರಿಸಿ ನಡೆದೇ ನಡೆದರು. ಕೈಯಲ್ಲಿ ಲೇಖನಿಯ ಖಡ್ಗವನ್ನು ಧರಿಸಿ ಕರ್ನಾಟಕ ಸಾಹಿತ್ಯ ಚರಿತ್ರೆಯ ಮೂಲೆ ಮೂಲೆಗೂ ಪ್ರವೇಶಿಸಿದರು.
ಚರಿತ್ರೆಯ ನಡುವಿನಿಂದ ಡಾ. ರಾಜಕುಮಾರರು- ಅದರ ಅಂಗವಾಗಿದ್ದುಕೊಂಡೇ- ಪುಟಿದೇಳುವ ಬಗೆಯನ್ನು ಕಂಡುಂಡರು. ಅದುತನಕ ಅಣ್ಣಾವ್ರ ಕುರಿತಾದ ಬಿಡಿಬಿಡಿ ಹೊತ್ತಗೆಗಳು ಅನೇಕ ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಆದರೆ ಇಷ್ಟೊಂದು ಸಮಗ್ರವಾಗಿ ಹಾಗೂ ಯಾವ ದಾಖಲೆಗೂ ಸೇರಿರದ, ಕೇಳಿಯೂ ಅರಿಯದ ಅದೆಷ್ಟೋ ವಿವರಗಳನ್ನು ಅಕ್ಷರಕ್ಕಿಳಿಸಲು ಸಾಧ್ಯವಾದದ್ದು ಏಕಾಂಗವೀರ ದೊಡ್ಡಹುಲ್ಲೂರು ರುಕ್ಕೋಜಿ ಅವರ ಎಂಟೆದೆಗೆ.

ಇದೆಂಥ ಸಾಧನೆ!
rajkumar1ಅದೆಷ್ಟೋ ಕಾರ್ಮಿಕರು ಅದೆಷ್ಟೋ ವರ್ಷಗಳ ದುಡಿಮೆ ಮಾಡಿ, ಅದೆಷ್ಟೋ ಮಂದಿಯನ್ನು ಬಲಿಯಾಗಿಸಿ ತಾಜಮಹಲಿನಂಥ ಕಟ್ಟಡವನ್ನು ಕಟ್ಟಿದ ಚರಿತ್ರೆಯನ್ನು ಕೇಳಿದ್ದೇವೆ. ನೆಟ್ಟಗೆ ಸ್ಥಿರ ಆದಾಯವೂ ಇಲ್ಲದೆ, ಆರೋಗ್ಯವನ್ನೂ ಕೆಡಿಸಿಕೊಂಡು, ಆರ್ಥಿಕ ಸಮಸ್ಯೆಯ ಪರಾಕಾಷ್ಠೆಯನ್ನೂ ಅನುಭವಿಸಿ ಹದಿನೈದು ನಿರಂತರ ವರ್ಷಗಳ ಕಾಲ ಆಯುಷ್ಯದ ಬಂಡಿಯ ಗಾಲಿಗಳನ್ನು ಸವೆಯಿಸಿ ನೂರ ನಲುವತ್ತೆರಡು ಮಂದಿಯ ಸಂದರ್ಶನ ಮಾಡಿ, 212 ಚಲನಚಿತ್ರಗಳ ಸಮಗ್ರ ಮಾಹಿತಿಯನ್ನು ಕಲೆಹಾಕಿ, ಆ ಕಾಲದಲ್ಲಿ ಅಣ್ಣಾವ್ರ ಜೊತೆಗಿದ್ದ ಹಾಗೂ ಇಂದು ಇಲ್ಲದಿರುವ ಚಿತ್ರರಂಗದ ವಿವಿಧ ಪ್ರಕಾರದ ಅಪೂರ್ವ ವ್ಯಕ್ತಿಗಳ ವಿವರಗಳನ್ನು ಸಂಗ್ರಹಿಸಿ ದಾಖಲೆ ಸ್ಥಾಪಿಸಿದ್ದಾರೆ ರುಕ್ಕೋಜಿಯವರು.

ರಾಜಕುಮಾರ್‌ ಅಭಿನಯಿಸಿದ ಚಿತ್ರಗಳ ನೂರೈವತ್ತು ಚಿತ್ರಗೀತೆ ಕಿರುಹೊತ್ತಗೆಗಳನ್ನು ಎಲ್ಲೆಲ್ಲಿಂದಲೋ ಸಂಗ್ರಹಿಸಿದ್ದಾರೆ. ಒಂದು ಗ್ರಂಥಾಲಯಕ್ಕೆ ಸಾಕಾಗುವಷ್ಟು ಚಿತ್ರರಂಗದ ಹಾಗೂ ಡಾ. ರಾಜಕುಮಾರ್‌ ಅವರ ಕುರಿತಾದ ಪುಸ್ತಕಗಳನ್ನು ಕೂಡಿಹಾಕಿ ಅಭ್ಯಾಸ ಮಾಡಿದ್ದಾರೆ. ಉಪಯುಕ್ತ ಮಾಹಿತಿಗಳನ್ನು ಆಯ್ದು ದಾಖಲಿಸಿದ್ದಾರೆ.

ಅಪರೂಪದ ಸ್ಥಿರಚಿತ್ರಗಳು
ದೊಡ್ಡಹುಲ್ಲೂರು ರುಕ್ಕೋಜಿಯವರು ಸಂಗ್ರಹಿಸಿದ್ದ ಸುಮಾರು ಇಪ್ಪತ್ತು ಸಾವಿರ ಸ್ಥಿರಚಿತ್ರಗಳಲ್ಲಿ ಯೋಗ್ಯತಾನುಸಾರ ಎಂಟು ಸಾವಿರದ 710 ಚಿತ್ರಗಳನ್ನು ಆಯ್ದು ಎರಡೂ ಸಂಪುಟಗಳಲ್ಲಿ ಅಳವಡಿಸಿದ್ದಾರೆ. ಅವುಗಳಲ್ಲಿ ಮುನ್ನೂರಕ್ಕೂ ಅಧಿಕ ಅಪರೂಪದ ಚಿತ್ರಗಳು ವಿಶಿಷ್ಟ ವಿನ್ಯಾಸದೊಂದಿಗೆ ರಾರಾಜಿಸಿವೆ. ಪ್ರತಿಯೊಂದು ಚಲನಚಿತ್ರದ ಕುರಿತು ವಿವರ ನೀಡುವಾಗ ಆಯಾ ಚಿತ್ರತಂಡದ ಹಿನ್ನೆಲೆ ಹಾಗೂ ಮುನ್ನೆಲೆಯಲ್ಲಿ ದುಡಿದವರ ಸಮಗ್ರ ಮಾಹಿತಿ, ಆಯಾ ಸಿನಿಮಾದ ಹಾಗೂ ಅದರ ಹಿನ್ನೆಲೆಯ ಪ್ರಮುಖರ ಅಪರೂಪದ ಸ್ಥಿರಚಿತ್ರಗಳು, ಪ್ರಮುಖವಾದ ಅಥವಾ ಜನಪ್ರಿಯವಾದ ಒಂದು ಹಾಡು, ಚಿತ್ರದ ಕಥಾಸಾರ, ರಾಜ್‌ಕುಮಾರರ ಹೊರತಾಗಿ ಆ ಚಿತ್ರದ ಜವಾಬ್ದಾರಿ ಹೊತ್ತ ಅಥವಾ ನಟಿಸಿದ ಪ್ರಮುಖರೊಬ್ಬರ ಸುದೀರ್ಘ‌ ವಿವರ ಇತ್ಯಾದಿ ಹಲವು ಮಹತ್ವದ ಅಂಶಗಳನ್ನು ದಾಖಲಿಸಿದ್ದಾರೆ. ಅರ್ಥಾತ್‌ ಡಾ. ರಾಜ್‌ಕುಮಾರ್‌ ಅಭಿನಯಿಸಿದ ಯಾವುದೇ ಚಲನಚಿತ್ರದ ಮಾಹಿತಿಗೆ ಇನ್ನೆಲ್ಲಿಯೂ ಹುಡುಕುವ ಅಗತ್ಯ ಬಾರದ ಹಾಗೆ ರುಕ್ಕೋಜಿಯವರು ನೋಡಿಕೊಂಡಿದ್ದಾರೆ.

rajkumarಯಾರದೋ ಸಂಗ್ರಹದಲ್ಲಿದ್ದ ಅಪರೂಪದ ಚಿತ್ರವೊಂದನ್ನು ಇಪ್ಪತ್ತೆ„ದು ಸಾವಿರ ರೂಪಾಯಿ ಕೊಟ್ಟು ರುಕ್ಕೋಜಿಯವರು ಕೊಂಡುತಂದು ಸಂಪುಟದಲ್ಲಿ ಅಳವಡಿಸಿದರೆಂದರೆ ಅಚ್ಚರಿಪಡಬೇಕಿಲ್ಲ. ಐದು ವರ್ಷಗಳಲ್ಲಿ ಗ್ರಂಥ ರಚನೆ ಮಾಡಿ, ಐದು ಲಕ್ಷ ರೂಪಾಯಿಯಲ್ಲಿ ಮುದ್ರಣ ಮಾಡಿಬಿಡಬಹುದೆಂದು ಯೋಚಿಸಿದ್ದು ಹದಿನೈದು ವರ್ಷಕ್ಕೆ ಹೋಗಿ ಮುದ್ರಣ ವೆಚ್ಚ ಎಂಬತ್ತೇಳು ಲಕ್ಷಕ್ಕೆ ತಲುಪಿದರೆ ಅಚ್ಚರಿಪಡಬೇಕಿಲ್ಲ!

ರಾಜ್‌ಕುಮಾರ್‌ ಅಭಿನಯಿಸಿದ 212 ಚಿತ್ರಗಳಲ್ಲದೆ 42 ಚಿತ್ರಗಳು ಅಪೂರ್ಣವಾಗಿ ಕುಳಿತುದರ ಬಗ್ಗೆ ಸಮಗ್ರ ವಿವರ ನೀಡಿದರೆಂದರೆ ಅಚ್ಚರಿಪಡಬೇಕಿಲ್ಲ. ರಾಜ್‌ಕುಮಾರ್‌ ಅವರ ಜೊತೆಗೆ ಯಾವ್ಯಾವ ನಟ ಯಾ ನಟಿಯರು ಎಷ್ಟೆಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರು ಎಂಬ ಸಮಗ್ರ ಮಾಹಿತಿಯನ್ನು ಒಂದೆಡೆ ತಂದು ನೀಡಿದ್ದಾರೆಂದರೆ ಅಚ್ಚರಿಪಡಬೇಕಿಲ್ಲ.

ಎಳೆಯವರಿದ್ದಾಗಲೇ ಶಾಸ್ತ್ರೀಯ ಸಂಗೀತ ಕಲಿತ ರಾಜ್‌ಕುಮಾರ್‌ ಬೆಂಗಳೂರು ಹಾಗೂ ಸುತ್ತಮುತ್ತ 12 ಸಂಗೀತ ಕಛೇರಿಗಳನ್ನು ನಡೆಸಿದ್ದರು ಎಂಬುದಕ್ಕೆ ದಾಖಲೆ ನೀಡಿದರೆ ಅದಕ್ಕೂ ಅಚ್ಚರಿ ಪಡಬೇಕಿಲ್ಲ.
ಅವರು ಹಾರ್ಮೋನಿಯಮ್‌ ಹಾಗೂ ಸಿತಾರ್‌ ವಾದಕರಾಗಿದ್ದರು ಎಂದರೂ ಅಚ್ಚರಿ ಪಡಬೇಕಿಲ್ಲ. ಗುಬ್ಬಿ ವೀರಣ್ಣನವರ ಪ್ರೀತಿಯ ಕರೆಯೇ ಮುತ್ತುರಾಜನನ್ನು ರಾಜ್‌ಕುಮಾರ್‌ ಮಾಡಿತು ಎಂದರೂ ಅಚ್ಚರಿ ಪಡಬೇಕಿಲ್ಲ. ಇಂತಹ ಅದೆಷ್ಟು ಅಚ್ಚರಿಯ ಪ್ರಸಂಗಗಳು ಸೇರಿಕೊಂಡು ಈ ಮಹಾನ್‌ ಸಂಪುಟಗಳು ನಿರ್ಮಾಣಗೊಂಡಿವೆ ಎಂಬದನ್ನು ತಿಳಿದಾಗ ನಿಜಕ್ಕೂ ಅಚ್ಚರಿಯೆನಿಸುವುದಿಲ್ಲವೆ?

ಆನೆ ಮುಟ್ಟಿ ಎಳೆದ ರೇಖೆ
ಡಾ. ರಾಜ್‌ಕುಮಾರ್‌ ಸಮಗ್ರ ಚರಿತ್ರೆಯ ಎರಡು ಸಂಪುಟಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಕೊಡುವ ಉದ್ದೇಶದಿಂದ ರುಕ್ಕೋಜಿಯವರು ಪುಸ್ತಕ ಪರಿಚಯ ಮತ್ತು ದಿಗ್ಗಜರ ಅಭಿಪ್ರಾಯಗಳು ಎಂಬ ಪ್ರತ್ಯೇಕ ಪುಸ್ತಕವೊಂದನ್ನು ಹೊರತಂದಿದ್ದಾರೆ. ಎರಡು ಸಂಪುಟಗಳನ್ನು ಪರಿಚಯಿಸಿಕೊಡುವ ಈ ಕೃತಿಗೆ ಕನ್ನಡದ ಯಾವುದೇ ಮಹತ್ವದ ಕೃತಿಗಿರುವ ಕಸುವು ಇದೆ ಎಂಬುದು ಇನ್ನೊಂದು ಗಮನಾರ್ಹ ಸಂಗತಿ! ಇಲ್ಲಿ ಕನ್ನಡದ ಒಬ್ಬೊಬ್ಬ ದಿಗ್ಗಜನೂ ಒಂದೊಂದು ರೇಖೆಯನ್ನೆಳೆದು ಮತ್ತೂಂದು ಗಜವನ್ನು ಕಂಡುಕೊಳ್ಳಲು ಪ್ರಯತ್ನಪಟ್ಟಿದ್ದಾರೆ.

rajkumar pa sa kumar3

ಎಲ್ಲರೂ ಸಂಪುಟಗಳ ಮಹತ್ತನ್ನು ಬರಹತ್ತನ್ನು ಕಂಡು ಬೆರಗಾದವರೇ . ಇದನ್ನು ಬರೆಯುವುದು ತಪಸ್ಸಾಗಿದ್ದರೆ ಓದುವುದು ಕೂಡ ಒಂದು ಆದರಣೀಯ ತಪಸ್ಸೇ ಎಂಬ ನಿಲುವಿಗೆ ಎಲ್ಲರೂ ಬಂದಿದ್ದಾರೆ.

ಡಾ. ಯು. ಆರ್‌. ಅನಂತಮೂರ್ತಿಯವರು ಬೃಹತ್‌ ಅವಳಿ ಸಂಪುಟಗಳ ಬಗ್ಗೆ ವ್ಯಾಪಕವಾದ ರಾಜ್‌ಕುಮಾರರ ಜೀವನದಷ್ಟೇ ವ್ಯಾಪಕವಾದ ಜೀವನ ಚಿತ್ರಗಳನ್ನು ಸಂಗ್ರಹಿಸಿದ ಈ ಪುಸ್ತಕಗಳು ಎನ್‌ಸೈಕ್ಲೋಪೀಡಿಯಾದಂತೆಯೂ ಇವೆ ಎಂದು ಹೇಳಿದ್ದಾರೆ. ಜಗತ್ತಿನ ಯಾವ ಭಾಷೆಯಲ್ಲೂ ಒಬ್ಬ ಮೇರು ನಟನ ಕುರಿತು ಇಂಥ ಕೃತಿಯೊಂದು ಬಂದಿಲ್ಲವೆಂದು ನಿಸ್ಸಂಕೋಚವಾಗಿ ಹೇಳಬಹುದು ಎಂಬುದು ಕವಿ ಸಿದ್ದಲಿಂಗಯ್ಯನವರ ಅಂಬೋಣ. ಎಂ.ಎಂ. ಕಲುಬುರ್ಗಿಯವರು ಭಾರತೀಯ ಚಲನಚಿತ್ರದ ಇತಿಹಾಸದಲ್ಲಿಯೇ ಇದು ಮಹತ್ವದ ಕೃತಿ ಎಂದು ಸಾರಿದ್ದಾರೆ. ಡಾ. ಕಂಬಾರ, ದೇಜಗೌ, ಪಾಪು, ಬರಗೂರು, ಮರುಳಸಿದ್ದಪ್ಪಮೊದಲಾದವರು ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶತಾಯುಷಿಗಳಾದ ಏಣಗಿ ಬಾಳಪ್ಪನವರು ಹೇಳುವ ಮಾತು ನೋಡಿ: “ಖರೇ ಹೇಳ್ತೀನಿ, ರಾಜ್‌ ಕುಮಾರ್‌ ಹ್ಯಾಂಗ್‌ ಇದ್ರೋ ಇದೂ ಹಂಗಾ ಐತಿ!’ ಅವರ ಅನುಭವದ ಮೂಸೆಯಿಂದ ಮೂಡಿಬಂದ ಮಾತಿದು! ರಾಜ್‌ಕುಮಾರ್‌ ಮಾತನಾಡುವ ಮೃದು ಶೈಲಿ- ಓದುಗರಿಗೆ ಚರಿತ್ರೆಯ ಜಿಗುಟು ಅಪ್ರಿಯವೆಂಬುದನ್ನು ಮನಗಂಡು- ಬಳಸಲಾದ ಸರಳ ಕಥನ ಶೈಲಿ ಇವು ಇಲ್ಲಿನ ಪ್ರತಿ ವಿವರವನ್ನೂ ಆಸ್ವಾದಿಸುವಂತೆ ಮಾಡುತ್ತದೆ. ಆದ್ದರಿಂದಲೇ ಏಣಿಗಿಯವರ ಮಾತು ಮಹತ್ವದ್ದೆನಿಸುತ್ತದೆ.

rajkumar3ಕನ್ನಡ ನಾಡಿನ ಹೆಸರಾಂತ ಕವಿಗಳಾದ ಪ್ರೊ. ಕೆ.ಎಸ್‌. ನಿಸಾರ್‌ ಅಹಮದರು ರುಕ್ಕೋಜಿಯವರ ಕೈಯಲ್ಲಿದ್ದ ಎರಡು ಸಂಪುಟಗಳನ್ನು ಕೈಗೆತ್ತಿಕೊಂಡು ಭೀಮಗಾತ್ರದ ಈ ಗ್ರಂಥಾವಳಿಯ ವಿಷಯ ಸಂಚಯಕ್ಕೆ ರುಕ್ಕೋಜಿಯವರು ಪಟ್ಟಿರುವ ಅಪ್ರತಿಮ ಸಾಹಸ ಯಾರಿಗಾದರೂ ದಂಗುಬಡಿಸುವಂತಹುದು ಎಂದು ಹೇಳಿದ್ದಾರೆ.

ಗಿರೀಶ್‌ ಕಾಸರವಳ್ಳಿಯವರು ಈ ಸಂಪುಟಗಳನ್ನು ಗ್ರಹಿಸಿ, ಆಘ್ರಾಣಿಸಿ ವ್ಯಕ್ತಪಡಿಸಿದ ಅಭಿವ್ಯಕ್ತಿ ಇನ್ನೊಂದು ಆಯಾಮವನ್ನು ತೆರೆದಿಡುತ್ತದೆ. ನನ್ನ ಗ್ರಹಿಕೆಯ ಬುಡವನ್ನೇ ಅಲ್ಲಾಡಿಸಿ ರಾಜ್‌ಕುಮಾರ್‌ ಅವರನ್ನು ವಿಭಿನ್ನ ನೆಲೆಯಿಂದ ನೋಡುವಂತೆ ಮಾಡಿದ ಕೃತಿ. ಇಂತಹ ಮಾತುಗಳು ರುಕ್ಕೋಜಿಯವರ ಗತಿಸಿದ ಹದಿನೈದು ಬರಿಸಗಳ ಆಯುಷ್ಯ ನಿಜಕ್ಕೂ ಸಾರ್ಥಕ್ಯವುಳ್ಳದ್ದು ಎಂಬುದನ್ನು ಸಾರಿ ಹೇಳುತ್ತವೆ.

ಕನ್ನಡ ಚಲನ ಚಿತ್ರರಂಗದ ದಿಕ್ಕು ದೆಸೆಯನ್ನು ಗುರುತಿಸಬಲ್ಲ ಚೈತನ್ಯ ಕೂಡ ಈ ಸಂಪುಟಗಳಿಗಿವೆ ಎಂಬ ಅವರ ವಿಮರ್ಶಾತ್ಮಕ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ. ಈ ಸಂಪುಟಗಳ ಆಧಾರದಿಂದ ಎರಡೋ ಮೂರೋ ಪಿಎಚ್‌.ಡಿಗಳನ್ನು ಸಿದ್ಧಪಡಿಸಬಹುದು. ಅಷ್ಟೊಂದು ಸರಕು ಅಯಾಚಿತವಾಗಿ ಇಲ್ಲಿಯೇ ದೊರಕಿಬಿಡುತ್ತದೆ.

ಎರಡು ಬೃಹತ್‌ ಸಂಪುಟಗಳು
ರಾಮಾಯಣದ, ಮಹಾಭಾರತಗಳ ಹಲವಾರು ಸಂಪುಟಗಳಂತೆ ಇವನ್ನೂ ಒಂದಿಪ್ಪತ್ತು ಸಂಪುಟಗಳಾಗಿಯಾದರೂ ಪ್ರಕಟಿಸಬಹುದಿತ್ತಲ್ಲ ಎಂದು ಕೆಲವೊಮ್ಮೆ ತೋರಿಹೋಗುವುದುಂಟು. ಅಷ್ಟೊಂದು ಹರಹು ಇವಕ್ಕಿದೆ. ಒಟ್ಟಾರೆಯಾಗಿ ಎರಡು ಸಾವಿರದ ಒಂದು ನೂರ ನಲುವತ್ತೆಂಟು ಪುಟಗಳ ಎರಡು ಸಂಪುಟಗಳು. ಎರಡೂ ಸಂಪುಟಗಳಲ್ಲಿ ಸಮಾನವಾಗಿ ಹಂಚಿಹೋಗಿವೆ. ಸಮಗ್ರ ನೋಟ ಎಡತಾಕಬೇಕಿದ್ದರೆ ಅದು ಹೀಗೆಯೇ ಪ್ರಕಟಗೊಳ್ಳಬೇಕು. ಮೊದಲನೆಯ ಸಂಪುಟದಲ್ಲಿ ರಾಜ್‌ಕುಮಾರರ ಬದುಕು ಹರಡಿಕೊಂಡಿದ್ದರೆ ಎರಡನೆಯದರಲ್ಲಿ ಅವರು ಅಭಿನಯಿಸಿದ ಚಲನಚಿತ್ರಗಳ ಸಮಗ್ರ ಮಾಹಿತಿಯಿದೆ. ಪ್ರತಿಯೊಂದು ಘಟನೆಯೂ-ಅದು ಬದುಕಿನ ಕುರಿತಿರಲಿ, ಚಲನ ಚಿತ್ರಗಳ ಕುರಿತಿರಲಿ- ಛಾಯಾಚಿತ್ರ ಹಾಗೂ ಚಂದ್ರನಾಥ ಆಚಾರ್ಯರ ರೇಖಾಚಿತ್ರಗಳನ್ನು ಬಳಸಿಕೊಂಡೇ ಬೆಳಕು ಕಂಡಿವೆ.

rajkumar pa sa kumar1ರಾಜ್‌ಕುಮಾರರ ಬದುಕನ್ನು ಕುರಿತು ಬರೆಯತೊಡಗಿದಾಗ ಚರಿತ್ರೆಯಲ್ಲಿ ಅವರನ್ನು ಎಲ್ಲಿಟ್ಟು ನೋಡಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಹಾಗಾಗಿಯೇ ರುಕ್ಕೋಜಿಯವರು ಕರ್ನಾಟಕದ ಚರಿತ್ರೆಯನ್ನು ಕೆದಕುತ್ತಾರೆ. ಅದರಲ್ಲೂ 1700ರಿಂದ 1950ರ ತನಕದ ವೃತ್ತಿಕಂಪೆನಿಗಳು ನಡೆದು ಬಂದ ದಾರಿಯನ್ನು ತಡಕಾಡುತ್ತಾರೆ. ಅಲ್ಲೇ ನಮಗೆ ರಾಜ್‌ಕುಮಾರರ ತೀರ್ಥರೂಪರಾದ ಆ ಕಾಲದ ಮಹಾನ್‌ ನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಎದುರಾಗುವುದು. ಮುತ್ತುರಾಜ ಕಾಣಿಸುವ ಹೊತ್ತಿಗೆ ವೃತ್ತಿ ರಂಗಭೂಮಿಯ ಧ್ವನಿ ತಾರಕದಲ್ಲಿರುತ್ತದೆ. ಹಾಗಾಗಿಯೇ ಇಲ್ಲಿ ನೀಡಲಾಗಿರುವ ಚಾರಿತ್ರಿಕ ಹಿನ್ನೆಲೆಗೆ ಮಹತ್ವವಿದೆ. ಗಟ್ಟಿ ತಳಪಾಯದಲ್ಲಿ ಸುಂದರ ಮಹಲನ್ನು ಎಬ್ಬಿಸಿರುವುದು ಗೋಚರಿಸುತ್ತದೆ.

ರಾಜ್‌ಕುಮಾರ್‌ ಅವರ ಜೀವನವೆಂದರೆ ಅದು ಅನೇಕ ಬಗೆಯ ಸಂಘರ್ಷದ, ಸಾನ್ನಿಧ್ಯದ, ಆದರ್ಶದ ಗುತ್ಛ. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ್ದರೂ ಕಾರಣಾಂತರಗಳಿಂದ ದಟ್ಟ ದರಿದ್ರರಾದವರು. ಶೈಕ್ಷಣಿಕ ಪದವಿ ಪಟ್ಟಗಳಿಲ್ಲದ ಅವರು ರಂಗ ಹಾಗೂ ಸಿನಿಮಾ ರಂಗವನ್ನು ವಿಶ್ವವಿದ್ಯಾಲಯವೆಂದು ಸ್ವೀಕರಿಸಿ ಅಲ್ಲೇ ಕಲಿತು ಸಕಲಕಲಾವಲ್ಲಭರಾದರು. ತುಳುಕದ ಕೊಡವಾದ ಅವರು ಅಭಿಮಾನಿ ದೇವರುಗಳನ್ನು ಆರಾಧಿಸಿದರು. ಆಯಾ ಪಾತ್ರದ ಒಳಕ್ಕೆ ಪರಕಾಯ ಪ್ರವೇಶ ನಡೆಸುವ ಅವರ ಆಂತರಿಕ ಸಾಮರ್ಥ್ಯಕ್ಕೆ ಹಾಗೂ ಬಹಿರಂಗವಾಗಿ ಅದೇ ಪಾತ್ರವಾಗುವ ಇನ್ನೊಂದು ಅಪ್ಪಟ ಮುಖಕ್ಕೆ ಯಾರಾದರೂ ಬೆರಗಾಗಲೇ ಬೇಕು. ನರ್ತಕಿಯಿಂದ ನರ್ತನವನ್ನು ಬೇರ್ಪಡಿಸಲು ಸಾಧ್ಯವಾಗದಿರುವಂತಹ ಸೂಕ್ಷ್ಮ ಗುಣವನ್ನು ಅಣ್ಣಾವ್ರು ಹೊಂದಿದ್ದಾರೆ ಎಂಬುದನ್ನು ರುಕ್ಕೋಜಿಯವರು ಚೆನ್ನಾಗಿಯೇ ಗುರುತಿಸಿದ್ದಾರೆ.

ರಾಜ್‌ಕುಮಾರ್‌ ಬದುಕಿನ ಅನೇಕ ಮಜಲುಗಳಲ್ಲಿ ಒಂದು ಹೋರಾಟದ ಮಜಲು. ಅದು ಗೋಕಾಕ್‌ ಚಳುವಳಿಯಿರಬಹುದು, ನೆಲ ಜಲ ಸಂಬಂಧವಾದ ಚಳುವಳಿಯಿರಬಹುದು, ಮದ್ಯಪಾನ ನಿರೋಧ ಚಳುವಳಿಯಿರಬಹುದು- ಅಂಥವನ್ನು ನಮ್ಮ ರಾಜ್ಯದ ಮುಕ್ಕೋಟಿ ಕನ್ನಡಿಗರ ಸಮಸ್ಯೆಯೆಂದೇ ಪರಿಭಾವಿಸಿ, ಕರ್ನಾಟಕದ ಜನತೆಗೆ ಪರಿಹಾರ ಕೊಡಲು ಶ್ರಮಿಸಿದ ವಿವರಗಳನ್ನು ರುಕ್ಕೋಜಿಯವರು ಚಿತ್ರಸಮೇತ ಅಳವಡಿಸಿದ್ದಾರೆ.

rajkumar pa sa kumar2ನರಹಂತಕ ವೀರಪ್ಪನ್‌ನ ದೆಸೆಯಿಂದ ನೂರ ಎಂಟು ದಿನ ನರಕ ಅನುಭವಿಸಿದ ಡಾ. ರಾಜ್‌ಕುಮಾರ್‌ ಕುರಿತು ನಕ್ಕೀರನ್‌ ಗೋಪಾಲನ್‌ ಬರೆದ ಲೇಖನ ಹಾಗೂ ಅವರು ನೀಡಿದ ಸ್ಥಿರಚಿತ್ರಗಳ ಅಮೂಲ್ಯ ಸಂಗ್ರಹವನ್ನೂ ಇಲ್ಲಿ ಅಡಕಗೊಳಿಸಲಾಗಿದೆ. ಕರ್ನಾಟಕವನ್ನು ತಲ್ಲಣಗೊಳಿಸಿದ ಅವರ ಸಾವಿನ ವಾರ್ತೆಯ ಪರಿಣಾಮಗಳ ಸಮಗ್ರ ನೋಟವನ್ನು ಲೇಖಕರು ಅತಿಮನೋಜ್ಞವಾಗಿ ಸೆರೆಹಿಡಿದಿದ್ದಾರೆ.

ಈ ಸಂಪುಟಗಳನ್ನು ಕೈಗೆತ್ತಿಕೊಳ್ಳುವುದೆಂದರೆ – ಯಾರಿಗಾದರೂ ಅಷ್ಟೆ- ಅದೇನೋ ಒಂದು ವಿಶಿಷ್ಟ ಬಗೆಯ ರೋಮಾಂಚನ. ಕನ್ನಡದ ಪ್ರತಿಯೊಂದು ಗ್ರಂಥಾಲಯದಲ್ಲಿ ಈ ಸಂಪುಟಗಳು ಇರಬೇಕು. ಅತ್ಯುತ್ತಮ ಕಾಗದ ಹಾಗೂ ಬೈಂಡಿಂಗ್‌ ನಿಮಿತ್ತವಾಗಿ ಸಂಪುಟಗಳ ಆಯುಸ್ಸು ಕನಿಷ್ಠ ಇನ್ನೂರ ಐವತ್ತು ವರ್ಷಗಳಾದರೂ ಇರಬಹುದು ಎಂದು ಅಂದಾಜಿಸಲಾಗಿದೆ.

ಇವನ್ನು ಕೈಗೆತ್ತಿಕೊಳ್ಳುವಂತೆ ಮಾಡುವಲ್ಲಿ ರುಕ್ಕೋಜಿಯವರೊಂದಿಗೆ ಇತರ ಹಲವು ಕೈಗಳು ಕೈಜೋಡಿಸಿವೆ. ಬಿ.ಎನ್‌. ಸುಬ್ರಹ್ಮಣ್ಯ, ಡಿ.ಸಿ. ನಾಗೇಶ್‌ ಹಾಗೂ ಹೆಚ್‌.ಕೆ ಗೋವಿಂದಪ್ಪ, ವಿಶುಕುಮಾರ್‌ ಮೊದಲಾದ ಅವರ ಆತ್ಮೀಯ ಸ್ನೇಹಿತರ ಬೆಂಬಲದೊಂದಿಗೆ ಕಳೆದ ವರ್ಷವೇ ಸಿದ್ಧಗೊಂಡ ಈ ಸಂಪುಟಗಳನ್ನು ಈ ವರ್ಷವಾದರೂ ಬಿಡುಗಡೆ ಮಾಡುವುದು ಸಾಧ್ಯವಾಗಿರುವುದೊಂದು ಸಮಾಧಾನಕರ ಅಂಶ. ಯುಗದಲ್ಲೆಲ್ಲೊ ಒಮ್ಮೆ ನಡೆಯುವ ಇಂತಹ ಮಹತ್ತರ ಪ್ರಸವಗಳು ನೆಲವಡರುವಾಗ ಬರುವ ಎಡರು ತೊಡರುಗಳು ಅನೇಕ ಬಗೆಯವು. ಅವೆಲ್ಲವನ್ನೂ ಮೀರಿ ಅಭಿಮಾನಿ ದೇವರುಗಳತ್ತ ದಾಪುಗಾಲಿಡಲು ಕಾತರಿಸುತ್ತಿರುವ ಸಂಪುಟದ್ವಯಗಳನ್ನು ಅಭಿಮಾನದಿಂದ ಬರಮಾಡಿಕೊಳ್ಳೋಣ.

 

‍ಲೇಖಕರು admin

October 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: