ಕಾಣದ ಕಡಲಿಗೆ ಹಂಬಲಿಸಿದೆ ಮನ..
ಹೆಜ್ಜೆ 12
ಬಡಗಣದಲ್ಲೊಂದು ಮಾದರಿ ಶಾಲೆ

ಬೆಳಿಗ್ಗೆ ಎದ್ದು ಕಿಟಕಿಯ ಹತ್ತಿರ ಹೋಗಿ ನೋಡಿದೆ. ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ಬರುತ್ತಿತ್ತು. ಸೂರ್ಯ ಕಾಣಲಿಲ್ಲ. ಸಮಯವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಹೋಗಿ ತಲೆ ಸ್ನಾನ ಮಾಡಿ, ಬಟ್ಟೆಗಳನ್ನು ಬ್ಯಾಗಿಗೆ ತುಂಬಿಕೊಂಡು ಶಾಲೆಯ ಕಡೆಗೆ ನಡೆದೆ. ಶಾಲೆಯ ಮುಖ್ಯೋಪಾಧ್ಯಾಯರು ಪರಿಚಯವಾಗಿ ನನ್ನ ಉಪನ್ಯಾಸದ ವಿಚಾರವನ್ನು ತಿಳಿಸಿ, ಒಪ್ಪಿಗೆ ಪಡೆದೆ. ನಂತರ ಅವರ ಜೊತೆಯೇ ಉಪಹಾರ ಸ್ವೀಕರಿಸಿ ಪ್ರಾರ್ಥನೆಯ ಸಮಯಕ್ಕೆ ಶಾಲೆಯ ಹತ್ತಿರ ಹೋದೆ. ಪ್ರಾರ್ಥನೆಯ ನಂತರ ಪ್ರಾಥಮಿಕ ಶಾಲೆಯ ಮಕ್ಕಳನ್ನು ಒಳಗೆ ಕಳುಹಿಸಿ, ಪ್ರೌಢಶಾಲೆಯ ಮಕ್ಕಳನ್ನು ಅಲ್ಲೇ ಮೈದಾನದಲ್ಲಿ ಕೂರಿಸಿ ನನಗೆ ಧ್ವನಿವರ್ಧಕದಲ್ಲಿ ಮಾತನಾಡುವಂತೆ ಅನುವು ಮಾಡಿಕೊಟ್ಟರು. ನಾನು ಎಂದಿನಂತೆ ಮಾತನಾಡಲು ಪ್ರಾರಂಭಿಸಿದೆ. ಮಕ್ಕಳು ಚೆನ್ನಾಗಿಯೇ ಸಹಕರಿಸುತ್ತಿದ್ದರು. ಶಿಕ್ಷಕರ ಮುಖದಲ್ಲೂ ಮಂದಹಾಸ ಮೂಡಿತ್ತು.
ಆದರೆ ತಾನು ಮಹಾರಾಜನೆಂದು ಕರೆಸಿಕೊಳ್ಳುವ ಖಾವಿಧಾರಿ ಸ್ವಾಮೀಜಿ ಮುಖ್ಯೋಪಾಧ್ಯಾಯರಿಗೆ ದೂರವಾಣಿ ಕರೆಮಾಡಿ, ಈ ಉಪನ್ಯಾಸಕ್ಕೆ ತನ್ನ ಅಪ್ಪಣೆ ಪಡೆದಿಲ್ಲವೆಂದು ತಕರಾರು ಎತ್ತಿದ. ಮುಖ್ಯೋಪಾಧ್ಯಾಯರು ನನ್ನ ಹತ್ತಿರ ಬಂದು ಇದರ ಬಗ್ಗೆ ವಿಚಾರಿಸಿದರು. ಸ್ವಾಮೀಜಿಯೇ ನನ್ನ ಬಗ್ಗೆ ಕೂಲಂಕುಷವಾಗಿ ವಿಚಾರಿಸಿ, ಇಲ್ಲಿ ಉಳಿಯಲು ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದರು ಎಂದೆ. ಮತ್ತ್ಯಾಕೆ ಅವರು ಆ ರೀತಿ ಮಾತನಾಡಿದರು ಎಂದು ತಲೆಕೆಡಸಿಕೊಂಡು ನನ್ನ ಮಾತುಗಳನ್ನು ನಿಲ್ಲಿಸುವಂತೆ ವಿನಯವಾಗಿ ಸೂಚಿಸಿದರು. ಇನ್ನೂ ಮಕ್ಕಳಿಂದ ಪ್ರತಿಜ್ಞೆಯನ್ನೇ ಪಡೆದಿರಲಿಲ್ಲ. ನನಗೆ ತುಂಬಾ ಬೇಸರವಾಯಿತು.
ಸಾರ್ವಜನಿಕರ ದೇಣಿಗೆಯಿಂದ ಮಠಮಾನ್ಯಗಳನ್ನು ಕಟ್ಟಿಸಿಕೊಂಡು ಸೊಕ್ಕಿನಿಂದ ಮೆರೆಯುತ್ತಿರುವ ಇಂತಹ ವ್ಯಕ್ತಿಗಳನ್ನು ಕಂಡರೆ ನನಗೆ ಅಸಹ್ಯವಾಗುತ್ತದೆ. ಇಲ್ಲಿ ಯಾವ ಬಡವರ ಸೇವೆಯಾಗಲೀ ಅಥವಾ ಬಡಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಕೆಲಸಗಳಾಗಲೀ ನಡೆಯುತ್ತಿರಲಿಲ್ಲ. ಇದು ಹಣದಾಹದಿಂದ ನಡೆಯುತ್ತಿರುವ ಒಂದು ಖಾಸಗಿ ಶಿಕ್ಷಣ ಸಂಸ್ಥೆಯಷ್ಟೇ. ಶಾಲೆಯ ವಿಷಯಗಳನ್ನು ಮುಖ್ಯೋಪಾಧ್ಯಾಯರ ವಿವೇಚನೆಗೆ ಮತ್ತು ಕಾಲೇಜಿನ ವಿಷಯಗಳನ್ನು ಆಯಾ ಪ್ರಾಂಶುಪಾಲರ ವಿವೇಚನೆಗೆ ಬಿಡದೆ, ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸಿಕೊಂಡು ತೊಂದರೆ ಕೊಡುವ ಇಂತಹ ಮಹಾರಾಜರ ಸಂಸ್ಥೆಯಲ್ಲಿ ಓದಿದ ಮಕ್ಕಳನ್ನು ಆ ದೇವರೇ ಕಾಪಾಡಬೇಕು.
ಆವರಣದಲ್ಲೆಲ್ಲಾ ಗುಜರಿ ಸಾಮಾನು ಚೆಲ್ಲಾಡಿತ್ತು. ಬಹುತೇಕ ಕಡೆಗಳಲ್ಲಿ ಸ್ವಚ್ಛತೆಯ ಕೊರತೆ, ಖಾಲಿ ಜಾಗದಲ್ಲಿ ಎತ್ತರಕ್ಕೆ ಬೆಳೆದು ನಿಂತಿದ್ದ ಗಿಡಗಂಟೆಗಳು ಕಣ್ಣಿಗೆ ರಾಚುವಂತಿತ್ತು. ಮುಖ್ಯೋಪಾಧ್ಯಾಯರಿಂದ ಅಭಿನಂದನಾ ಪತ್ರ ಪಡೆದು, ಆ ಕಿರಿಯ ಸ್ವಾಮಿಗೆ ನನ್ನ ಅಭಿನಂದನೆ ತಿಳಿಸಿ, ಹೊರಗೆ ಬರುವಾಗ ದಾರಿಯ ಎಡಕ್ಕಿದ್ದ ನವಗ್ರಹಗಳು ಕಣ್ಣಿಗೆ ಬಿದ್ದವು. ಹಾಗೇ ಉದ್ಯಾನ ಸುತ್ತಿ ಒಂದೊಂದು ಗ್ರಹಗಳ ರೂಪುರೇಷೆಗಳನ್ನು ವೀಕ್ಷಿಸುತ್ತಿದ್ದೆ. ಸುಮಾರು ಇಪ್ಪತ್ತು ಅಡಿಗಳಷ್ಟು ಎತ್ತರದ ಗ್ರಹಗಳ ಆಕಾರದಲ್ಲಿ ಮೂಡಿದ್ದ ಸಿಮೆಂಟಿನ ಶಿಲೆಗಳ ಮೇಲೆ, ಹದಿನೈದು ಅಡಿಗಳ ಗೊಮ್ಮಟೇಶನ ಶಿಲೆಗಳು. ಅವುಗಳಿಂದ ಸಾಮಾನ್ಯ ಜನರಿಗೆ ಏನು ಪ್ರಯೋಜನವಾಗುತ್ತಿದೆ ಎಂಬುದು ನನಗೆ ತಿಳಿಯಲ್ಲಿಲ್ಲ. ಅವು ಯಾವ ನೀತಿ ಪಾಠವನ್ನೂ ಹೇಳುತ್ತಿರಲಿಲ್ಲ, ಯಾರಿಗೂ ಸೂರನ್ನೂ ಸಹ ಕಲ್ಪಿಸುತ್ತಿರಲಿಲ್ಲ ಮತ್ತು ಯಾರ ಹೊಟ್ಟೆಯನ್ನೂ ತುಂಬಿಸುತ್ತಿರಲಿಲ್ಲ.
ಅವುಗಳ ಬಗ್ಗೆ ವಿಚಾರಿಸಿದ ನಂತರ ಗೊತ್ತಾಗಿದ್ದು, ನವಗ್ರಹ ಕ್ಷೇತ್ರದ ಮಹಾರಾಜರು, ಹಾಸನ ಜಿಲ್ಲೆಯಲ್ಲಿರುವ ಗೊಮ್ಮಟೇಶನನ್ನು ಮೀರಿಸುವ ಶಿಲೆಯನ್ನು ಕಟ್ಟಿಸುವ ಪಣತೊಟ್ಟು ಮೂಡಿದಂತಹ ಕಟ್ಟಡಗಳಿವು. ಫ್ರ್ಯಾನ್ಸ್ ನ ಐಫೆಲ್ ಟವರ್‍ನಂತೆಯೇ ಭಾರತದಲ್ಲಿ ಅದಕ್ಕಿಂತ ಎತ್ತರವಾದ ಟವರ್ ನಿರ್ಮಿಸಿದರೆ, ಮೂಲ ಐಫೆಲ್ ಟವರ್‍ಗಿಂತ ಪ್ರಖ್ಯಾತಿ ಪಡೆಯಲು ಸಾಧ್ಯವೇ? ಆಯಾ ಸ್ಥಳಕ್ಕೆ ನೂರಾರು, ಸಾವಿರಾರು ವರ್ಷಗಳ ಇತಿಹಾಸವಿರುತ್ತದೆ. ಇತಿಹಾಸದಲ್ಲಿ ಪ್ರಖ್ಯಾತಿ ಪಡೆದಂತಹ ಶಿಲ್ಪಿಗಳಿಂದ ಅವುಗಳ ವಿನ್ಯಾಸ ಮಾಡಿಸಿರುತ್ತಾರೆ. ಅವುಗಳನ್ನು ಮೀರಿಸುವ ಔಚಿತ್ಯವಾದರೂ ಏನು. ಇದು ಅವರವರ ಅಹಂಕಾರವನ್ನು ಪ್ರದರ್ಶಿಸುತ್ತದೆ. ಸಾರ್ವಜನಿಕರಿಂದ ದೇಣಿಗೆ ಪಡೆದು, ಸಮಾಜದ ಒಳತಿಗಾಗಿ ಕೆಲಸಮಾಡದೆ ಈ ತರಹ ಮೂರ್ಖತನವನ್ನು ಪ್ರದರ್ಶಿಸುವಂತಹ ಮಹಾರಾಜರು ನಮಗೆ ಬೇಕೆ? ಎನ್ನುವ ಪ್ರಶ್ನೆ ಮೂಡಿದ್ದು ಸುಳ್ಳಲ್ಲ. ಸುತ್ತಾ ಮುತ್ತ ಇರುವ ಹಳ್ಳಿಗರದ್ದು ಇದೇ ಪ್ರಶ್ನೆ.
ಈ ಚಿಂತನೆಯಲ್ಲೇ ಸಾಗಿ ವರೂರಿನ ಉಜ್ಜಯಿನಿ ಸಿದ್ದೇಶ್ವರ ಸರ್ಕಾರಿ ಪ್ರೌಢಶಾಲೆ ತಲುಪಿದೆ. ಶಾಲೆಯ ವಾತಾವರಣ ಸ್ವಚ್ಛವಾಗಿತ್ತು. ಕಟ್ಟಡ, ಕಟ್ಟೆ, ಗೋಡೆಗಳಿಗೆಲ್ಲಾ ಸುಣ್ಣ ಬಣ್ಣ ಹೊಡೆದು ಮಿಂಚುತ್ತಿತ್ತು. ಆವರಣದಲ್ಲಿ ಸಾಕಷ್ಟು ಗಿಡ ಮರಗಳನ್ನು ಬೆಳೆಸಿದ್ದರು. ನನ್ನ ಉಪನ್ಯಾಸದ ಕೆಲಸವನ್ನು ಬಹಳ ಸುಲಭ ಮಾಡಿದರು. ಶಾಲೆಯ ಶಿಕ್ಷಕರಾದ ವಿವೇಕಾನಂದರವರು ನನ್ನನ್ನು ಮತ್ತು ಇತರೆ ಶಿಕ್ಷಕರನ್ನು ಹತ್ತಿರದ ಹೋಟೆಲ್‍ಗೆ ಕರೆದುಕೊಂಡು ಹೋಗಿ ಉಪಹಾರ ಕೊಡಿಸಿ ಉಪಚರಿಸಿದರು. ಹಾಗೂ ನನ್ನ ಈ ಕೆಲಸದಲ್ಲಿ ಅವರುಗಳೂ ಭಾಗಿಯಾಗಿ, ಹೆಚ್ಚು ಗಿಡ ಮರಗಳನ್ನು ಬೆಳೆಸುವುದಾಗಿ ತಿಳಿಸಿದರು.
ಶಾಲೆಗೆ ಕಾಂಪೌಂಡು ಇಲ್ಲದ ಕಾರಣ, ಊರಿನ ಜನರು ದನಗಳನ್ನು ಬಿಟ್ಟು ಆವರಣದಲ್ಲಿ ನೆಟ್ಟ ಸಸಿಗಳನ್ನು ಮೇಯಿಸಿ ಬಿಡುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಅದಕ್ಕೆ ನಾನೊಂದು ಉಪಾಯ ಹೇಳಿದೆ. ತಿಂಗಳಿಗೆ ಒಮ್ಮೆ ಊರಿನ ಬೀದಿಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿ, ಯಾರು ಸಹಕರಿಸುವುದಿಲ್ಲವೋ ಅವರಿಗೆ ಧಿಕ್ಕಾರ ಕೂಗಿಸಿ ಎಂದೆ. ಊರಿನ ಮುಖಂಡರನ್ನು ಈ ಕಾರ್ಯದಲ್ಲಿ ಭಾಗಿಗಳಾಗಿ ಮಾಡಬೇಕು ಎಂದು ತಿಳಿಸಿದೆ. ಹಾಗೆಯೇ ಮಾಡುವುದಾಗಿ ಭರವಸೆ ಕೊಟ್ಟು ನನ್ನನ್ನು ಆತ್ಮೀಯವಾಗಿ ಬೀಳ್ಕೊಟ್ಟರು.
ಆಗಲೇ ತುಂತುರು ಮಳೆ ಶುರುವಾಗಿತ್ತು. ಮಳೆಗಾಳಿಯಲ್ಲೇ ನನ್ನ ನಡಿಗೆ ರಾಮನಕೊಪ್ಪದತ್ತ ಸಾಗಿತು. ಮಾರ್ಗ ಮಧ್ಯೆ ಮಳೆಯ ಬಿರುಸು ಜೋರಾಗಿದ್ದರಿಂದ ರಸ್ತೆ ಬದಿಯ ಒಂದು ಅಂಗಡಿಯಲ್ಲಿ ಆಶ್ರಯಿಸಿದೆ. ಮಳೆ ನಿಂತ ನಂತರ ನಡಿಗೆಯನ್ನು ಮುಂದುವರಿಸಿ ರಾಮನಕೊಪ್ಪದ ಎಸ್.ಎಸ್.ಪೋಲಿಸ ಪಾಟೀಲ ಸರ್ಕಾರಿ ಪ್ರೌಢಶಾಲೆಯನ್ನು ತಲುಪಿದೆ. ಶಾಲೆಯ ಆವರಣದ ಕೌಂಪೌಂಡಿನ ಕೆಲಸ ಬಿರುಸಿನಿಂದ ಸಾಗಿದ್ದು ಮೊದಲನೇ ಅಚ್ಚರಿ. ಆವರಣ ಬಹಳ ಸ್ವಚ್ಛಂದವಾಗಿ ಇಟ್ಟುಕೊಂಡಿದ್ದು ಎರಡನೇ ಅಚ್ಚರಿ. ಆದಾಗಲೇ ಹದಿನೈದು ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದುದು ಮೂರನೇ ಅಚ್ಚರಿ. ಶಿಕ್ಷಕರ ಸಮೇತ, ಶಾಲೆಯ ವಿದ್ಯಾರ್ಥಿಗಳೆಲ್ಲರೂ ಶಿಸ್ತಿನಿಂದ ತಮ್ಮ ಪಾದರಕ್ಷೆಗಳನ್ನು ತರಗತಿಯ ಹೊರಗೆ ಇಟ್ಟಿದ್ದ ಮೇಜಿನಲ್ಲಿಟ್ಟು ಒಳಗೆ ಹೋಗುತ್ತಿದ್ದುದು ನಾಲ್ಕನೇ ಅಚ್ಚರಿ.
ಅಲ್ಲಿನ ಕಲಾ ಶಿಕ್ಷಕರಾದ ಸುರೇಶ್ ಅರ್ಕಸಾಲಿರವರು ಸ್ವತಃ ಅತ್ಯುತ್ತಮ ಕಲಾವಿದರಾಗಿದ್ದು, ಕಾರ್ಯಾಲಯದ ಗೋಡೆಗಳ ಮೇಲೆಲ್ಲಾ ಅವರ ಕೈಚಳಕ ಮೂಡಿತ್ತು. ಅವರ ವಾಲ್ಮೀಕಿ ಮಹರ್ಷಿ, ತಾಳೆ ಗರಿಯ ಮೇಲೆ ಸಂಯುಕ್ತ ವೇಳಾ ಪಟ್ಟಿ, ಬೆಳ್ಳಾನೆ ಎರಡೆತ್ತು ಎಂಬ ಸುಗ್ಗಿಯ ಕುಣಿತದ ಕಲೆ ಮತ್ತು ದಕ್ಷ ಯಜ್ಞ ನಾಟಕದ ಪರಿಕಲ್ಪನೆಗಳು ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿದ್ದು ಐದನೆ ಅಚ್ಚರಿ. ಸುರೇಶ್‍ರವರೇ ತಮ್ಮ ಶಾಲೆಯ ಮೇಜು, ಕುರ್ಚಿ, ಬೀರುಗಳಿಗೆ ಬಣ್ಣ ಬಳಿದ ಚಂದವಾಗಿಟ್ಟುಕೊಂಡು ಇತರರಿಗೆ ವಸ್ತುಗಳ ಖರೀದಿ ಮಾತ್ರವಲ್ಲಾ, ಅವುಗಳ ನಿರ್ವಹಣೆಯೂ ಅಷ್ಟೇ ಮುಖ್ಯವೆಂಬುದನ್ನು ತಿಳಿಸಿಕೊಟ್ಟು ಮಾದರಿಯಾಗಿದ್ದುದು ಆರನೆ ಅಚ್ಚರಿ.
ಮುಖ್ಯೋಪಾಧ್ಯಾಯರಾದ ಕುಂಬಾರಗೇರಿಯವರಿಗಿದ್ದ ಶಾಲೆಯ ಪರಿಕಲ್ಪನೆ, ತಮ್ಮ ಸ್ನೇಹಿತರಿಂದ ಮತ್ತು ಸಾರ್ವಜನಿಕರಿಂದ ದೇಣಿಗೆ ಪಡೆದು ಖರೀದಿಸಿದ್ದ ಕಂಪ್ಯೂಟರ್, ಡಿಜಿಟಲ್ ಪ್ರಿಂಟರ್, ಪ್ರತೀ ತರಗತಿಯಲ್ಲೂ ಧ್ವನಿವರ್ಧಕ, ಪಾದರಕ್ಷೆಗಳನ್ನು ಬಿಡಲು ಬೇಕಾದಂತಹ ಕಪಾಟುಗಳು, ನೀರಿನ ಟ್ಯಾಂಕರ್‍ಗಳು ಮತ್ತು ಇತರೆ ವಸ್ತುಗಳೊಂದಿಗೆ ತಮ್ಮ ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಎಲ್ಲಾ ಸೌಲಭ್ಯಗಳು ಮಕ್ಕಳಿಗೆ ಉಚಿತವಾಗಿ ದೊರೆಯುವಂತೆ ಮಾಡಿದ್ದು ಏಳನೆಯ ಅಚ್ಚರಿ. ತಮ್ಮ ದೂರದೃಷ್ಟಿಯಿಂದ ಸಭೆ ಸಮಾರಂಭಗಳಿಗೆ ಬೇಕಾದಂತಹ ಒಂದು ಸಭಾಂಗಣವನ್ನು ಶಾಲೆಯ ಮೊದಲೆನೆಯ ಮಹಡಿಯಲ್ಲಿ ಕಟ್ಟಿಸಿದ್ದುದು ಎಂಟನೆಯ ಅಚ್ಚರಿ.
ಇಷ್ಟೆಲ್ಲಾ ಇದ್ದ ಮೇಲೆ ಶಾಲೆಯ ಮಕ್ಕಳಲ್ಲಿ ಶಿಸ್ತು ಬೆಳೆಯದೇ ಇರುತ್ತದೆಯೇ? ನನ್ನ ಉಪನ್ಯಾಸವನ್ನು ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಲ್ಲದೆ, ಮಕ್ಕಳೂ ಕೂಡ ಉತ್ತಮ ರೀತಿಯಲ್ಲಿ ಗ್ರಹಿಸಿ ಸಹಕರಿಸಿದರು. ಉಪನ್ಯಾಸದ ನಂತರ ನನ್ನ ಜೊತೆ ಸಂವಾದ ನಡೆಸಿ ನನ್ನ ದೂರವಾಣಿ ಸಂಖ್ಯೆ ಮತ್ತು ಹಸ್ತಾಕ್ಷರ ಪಡೆದರು. ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಶಾಲೆಯ ಶೌಚಾಲಯವನ್ನೇ ಉಪಯೋಗಿಸುತ್ತಿದ್ದುದು ಒಂಬತ್ತನೇ ಅಚ್ಚರಿ. ಈ ತನಕ ನಾ ನೋಡಿದ ಸರ್ಕಾರಿ ಪ್ರೌಢಶಾಲೆಗಳಲ್ಲಿ ರಾಮನಕೊಪ್ಪ ಸರ್ಕಾರಿ ಪ್ರೌಢಶಾಲೆಯು ಅತ್ಯುತ್ತಮ ಪ್ರೌಢಶಾಲೆ ಎಂದರೆ ಉತ್ಪ್ರೇಕ್ಷೆ ಯಾಗಲಾರದು. ಇಂತಹ ಮಾದರಿ ಶಾಲೆಯಲ್ಲಿ, ಮಾದರೀ ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೇ ಪುಣ್ಯವಂತರು.
ಶಾಲೆಯ ವತಿಯಿಂದ ನನಗೆ ಇನ್ನೂರು ರೂಪಾಯಿಗಳ ಗೌರವ ಧನ ನೀಡಿ ಅಭಿನಂಧಿಸಿ ನನ್ನನ್ನು ಬೀಳ್ಕೊಟ್ಟರು. ನನಗೆ ಎರಡು ದಿನಗಳು ಉಳಿದುಕೊಳ್ಳಲು ಹತ್ತಿರವೇ ಇದ್ದ ಗಾಯತ್ರಿ ತಪೋವನದಲ್ಲಿ ವ್ಯವಸ್ಥೆ ಕಲ್ಪಿಸಿದರು. ಕಲಾ ಶಿಕ್ಷಕರಾದ ಸುರೇಶ್‍ರವರು ಮಧ್ಯಾಹ್ನದ ಬಿಸಿಯೂಟದ ಜೊತೆ ಅವತ್ತಿನ ವಿಶೇಷ ಸಿಹಿಯನ್ನು ಬಡಿಸಿ ನನ್ನನ್ನು ಆತ್ಮೀಯವಾಗಿ ಸತ್ಕರಿಸಿ, ನಾನು ಬರೆಯುತ್ತಿರುವ ಪುಸ್ತಕದ ಪರಿಕಲ್ಪನೆಯನ್ನು ಅವರೇ ಮಾಡಿಕೊಡುವುದಾಗಿ ವಾಗ್ದಾನ ನೀಡಿದರು. ಶಾಲೆಯ ವಿದ್ಯಾರ್ಥಿ ದರ್ಶನ್ ಜೊತೆಯಲ್ಲಿ ಗಾಯತ್ರಿ ತಪೋವನಕ್ಕೆ ಬಂದೆ. ಅವನು ಗಾಯತ್ರಿ ಮಠದ ನಿರ್ವಾಹಕರೊಂದಿಗೆ ಮಾತನಾಡಿ ನನಗೆ ಒಂದು ಸುಸಜ್ಜಿತವಾದ ಕೊಠಡಿ ಕೊಡಿಸಿದ. ಮುಖ ತೊಳೆದು ಮಠದಲ್ಲಿ ನಡೆಯುವ ಸಂಜೆಯ ಗಾಯತ್ರಿ ಮಾತೆಯ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡೆ. ರಾತ್ರಿಯ ಪ್ರಸಾದಕ್ಕೆ ಅನ್ನ ಸಾಂಬಾರ್, ಕೇಸರಿ ಬಾತ್, ಮಜ್ಜಿಗೆ ಇತ್ತು. ಊಟಮಾಡಿ, ಸ್ವಲ್ಪ ವಿಹಾರಕ್ಕೆಂದು ರಾಷ್ಟ್ರೀಯ ಹೆದ್ದಾರಿಯ ಕಡೆಗೆ ನಡೆದು ಸೊಳ್ಳೆ ಬತ್ತಿಯನ್ನು ತಂದು ಕೊಠಡಿಯಲ್ಲಿ ಹಚ್ಚಿ ಬೆಚ್ಚನೆ ಮಲಗಿಕೊಂಡೆ.
[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 68 ಮೈಲುಗಳು]





0 Comments