-ನಾ ದಿವಾಕರ
ಸಮಾಜ ಸಂಸ್ಕೃತಿಯ ಬೆಳಕಲ್ಲಿ ಸಾಹಿತ್ಯದ ಮೇರು..
ಎಚ್.ಎಸ್. ಶ್ರೀಮತಿ ಅವರು ತಮ್ಮ “ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂದರ್ಭ” ಕೃತಿಯಲ್ಲಿ ಆರಂಭದಲ್ಲೆ ಹೇಳುವ ಮಾತುಗಳು ಸಾರ್ವಕಾಲಿಕ ಸತ್ಯ. “ಪಿತೃಪ್ರಧಾನ ಸಮಾಜದಲ್ಲಿ ಎಲ್ಲ ಜ್ಞಾನವಲಯಗಳ ಚಿಂತನಾ ಕ್ರಮಗಳಲ್ಲಿಯೂ ʼಮಾನವ ಕೇಂದ್ರಿತʼ ಎಂಬ ಮಾತು ʼಪುರುಷ ಕೇಂದ್ರಿತʼ ಎಂಬ ಅರ್ಥದಲ್ಲಷ್ಟೇ ಬಳಕೆಗೊಳ್ಳುತ್ತಿರುವುದು, ಸ್ವಲ್ಪ ಪರೀಕ್ಷಿಸಿ ನೋಡಿದರೆ, ಸಾಹಿತ್ಯ ಮತ್ತು ಕಲಾ ವಲಯಗಳ ಚಿಂತನೆಗಳೂ ಈ ಗುಣದ್ದೇ ಆಗಿರುತ್ತದೆ, ʼಮಾನವ ಸಮಾಜʼ ಎಂಬುದರಲ್ಲಿ ಎಂದೂ ಸ್ತ್ರೀಯು ಒಳಗೊಂಡದ್ದೇ ಇಲ್ಲ” (ಪುಟ 1). ಈ ಅಭಿವ್ಯಕ್ತಿಯ ಗೂಡಾರ್ಥವನ್ನು ಗ್ರಹಿಸಬೇಕಾದರೆ, ಸಾಹಿತ್ಯಾಧ್ಯಯನ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ಯಾವುದೇ ಸಾಹಿತ್ಯದ ಒಳಾರ್ಥಗಳನ್ನು ಗ್ರಹಿಸುವಾಗ, ಓದುಗರಲ್ಲಿರಬೇಕಾದ ಸಮಾಜಮುಖಿ ಪ್ರಜ್ಞೆ ಮತ್ತು ಲಿಂಗ ಸೂಕ್ಷ್ಮತೆಯ ಅರಿವು.
ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಸಾಹಿತ್ಯವನ್ನು, ವಸ್ತುನಿಷ್ಠವಾಗಿ ವಿಮರ್ಶಿಸಿದಾಗ ಅಥವಾ ಅವರ ಕೃತಿಗಳ ಹೂರಣವನ್ನು ಹೊರತೆಗೆದು ನೋಡಿದಾಗ, ಮೇಲಿನ ಮಾತುಗಳ ಹಿಂದಿನ ತರ್ಕವನ್ನೂ ಗ್ರಹಿಸಲು ಸಾಧ್ಯ. ಇನ್ನಿತರ ಸಾಹಿತಿಗಳ ಬರಹಗಳಲ್ಲೂ ಇದನ್ನು ಕಾಣಬಹುದು. ಭೈರಪ್ಪ ಕನ್ನಡದ ಮೇರು ಸಾಹಿತಿಯಾಗಿ, ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದೇ ಅಪಾರ ಸಂಖ್ಯೆಯ ಓದುಗರನ್ನು ಸಂಪಾದಿಸಿದ್ದರಿಂದ ಮತ್ತು ಅವರ ಕೃತಿಗಳಲ್ಲಿ ಸಮಾಜವನ್ನು ಕಟ್ಟಿಕೊಡುವ ರೀತಿ, ಅದನ್ನು ಸಮಕಾಲೀನಗೊಳಿಸಿ ಅನಾವರಣಗೊಳಿಸುವ ಶೈಲಿ ಇವುಗಳನ್ನು ಗಮನಿಸಿದಾಗ, ಅವರ ಸಾಹಿತ್ಯಿಕ ಕೊಡುಗೆ ಮತ್ತು ಮೇಲರಿಮೆಯನ್ನು ಕುರಿತು ಮಾತನಾಡುವಾಗ, ಈ ಮೇಲಿನ ವ್ಯಾಖ್ಯಾನ ಸಹಜವಾಗಿ ಮನಸ್ಸಿನಲ್ಲಿ ಹಾದು ಹೋಗುತ್ತದೆ.
ಸಾಹಿತ್ಯಿಕ ಅಭಿವ್ಯಕ್ತಿಯ ಆಯಾಮಗಳು
ಎಚ್.ಎಸ್.ಶ್ರೀಮತಿ ಅವರೇ ಮತ್ತೊಂದೆಡೆ ಹೇಳುವ ಹಾಗೆ ಸಾಹಿತ್ಯ, ಕೃತಿಕಾರರ ಅಭಿವ್ಯಕ್ತಿಯ ಮಾಧ್ಯಮ ಎಂದು ಸಾಮಾನ್ಯವಾಗಿ ಪರಿಭಾವಿಸಿದರೂ, ಅದು ಪ್ರಧಾನವಾಗಿ ಒಂದು ಸಾಂಸ್ಕೃತಿಕ ಉತ್ಪನ್ನವೇ ಆಗಿರುತ್ತದೆ. ಹಾಗಾಗಿಯೇ ಪಿತೃಪ್ರಧಾನ ಸಮಾಜದಲ್ಲಿ ಸೃಷ್ಟಿಯಾಗುವ ಎಲ್ಲ ಸಾಹಿತ್ಯ ಕೃತಿಗಳೂ ಪಿತೃಪ್ರಧಾನ ಚಿಂತನೆಗಳನ್ನೇ ಪ್ರತಿಪಾದಿಸುತ್ತವೆ. ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕೃತಿಗಳನ್ನು ಮೌಲಿಕವಾಗಿ ನೋಡಿದಾಗ, ಸಾಹಿತ್ಯಿಕವಾಗಿ ಉನ್ನತ ಮಟ್ಟವನ್ನು ಗುರುತಿಸಬಹುದು. ಸಾಹಿತ್ಯದಲ್ಲಿ ಸೃಜನಶೀಲತೆ ಎಂಬ ಒಂದು ಗುಣಲಕ್ಷಣವನ್ನೂ ಪರಿಗಣಿಸಿದಾಗ, ಈ ಸೃಜನಶೀಲ ಪ್ರಯತ್ನಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂದು ಮೌಲ್ಯಮಾಪನ ಮಾಡುವುದು ಅನಿವಾರ್ಯವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಭೈರಪ್ಪ ಅವರ ವಂಶವೃಕ್ಷದಿಂದ ಉತ್ತರಕಾಂಡದವರೆಗೂ ಅಕ್ಷರ ಪಯಣವನ್ನು ವಿಮರ್ಶಾತ್ಮಕವಾಗಿಯೇ ನೋಡಬೇಕಾಗುತ್ತದೆ.
ಕನ್ನಡದ ಚಿಂತಕರೊಬ್ಬರು “ಭೈರಪ್ಪ ಬರಹಗಾರರಷ್ಟೇ ಸಾಹಿತಿ ಅಲ್ಲ” ಎಂದು ಹೇಳಿರುವುದು ವರದಿಯಾಗಿದೆ. ಇಲ್ಲಿ ʼಸಾಹಿತಿʼ ಎಂಬ ವ್ಯಕ್ತಿತ್ವವನ್ನು ನಿರ್ವಚಿಸುವುದು ಯಾರು, ಹೇಗೆ, ಯಾವ ಮಾನದಂಡಗಳಲ್ಲಿ ಎಂಬ ಹಲವು ಜಟಿಲ ಪ್ರಶ್ನೆಗಳು ಎದುರಾಗುತ್ತವೆ. ಇದಮಿತ್ಥಂ ಎಂಬ ಒಂದು ನಿಯಮ ಸೂತ್ರ ಬಳಸಿ ʼಸಾಹಿತಿʼ ಎಂಬ ಪದವನ್ನು ನಿರ್ವಚಿಸುವುದು ಹಲವು ಸಿಕ್ಕುಗಳಿಗೆ ಕಾರಣವೂ ಆಗುತ್ತದೆ. ಪಾರಂಪರಿಕವಾಗಿ ಒಪ್ಪಿತವಾದ ಪ್ರಮೇಯಗಳನ್ನೇ ಬಳಸಬೇಕಾಗುತ್ತದೆ. ತಮ್ಮ ಬರಹಗಳ ಮೂಲಕ, ಕಾವ್ಯದ ಪ್ರತಿಮೆ ರೂಪಕಗಳಲ್ಲಿ, ಗದ್ಯ ಸಾಹಿತ್ಯದ ಸಾಮಾಜಿಕ ಸಂರಚನೆ-ಸಂಕಥನಗಳಲ್ಲಿ, ನಾಟಕಗಳ ದೃಶ್ಯ ರೂಪಕಗಳಲ್ಲಿ, ಬರಹಗಾರರು ವ್ಯಕ್ತಪಡಿಸುವ ಸಾಮಾಜಿಕ ಕಾಳಜಿ, ಕಳಕಳಿ, ಸಮಾಜಮುಖಿ ಧೋರಣೆ ಮತ್ತು ತಮ್ಮ ಬದುಕಿನಲ್ಲಿ ಕಂಡಿರಬಹುದಾದ ಸಮಾಜದ ಮತ್ತೊಂದು ಮಗ್ಗುಲಿನ ವಿಮರ್ಶಾತ್ಮಕ ಒಳನೋಟ ಇವುಗಳು ಬರಹಗಾರರನ್ನು ಸಾಹಿತಿ ಎಂಬ ಆವರಣಕ್ಕೆ ಒಳಪಡಿಸುತ್ತದೆ.
ಭೈರಪ್ಪ-ಸಾಹಿತ್ಯದ ಇತಿಮಿತಿಗಳು
ಭೈರಪ್ಪನವರ ಸಾಹಿತ್ಯ ಕೃತಿಗಳನ್ನು ಸೂಕ್ಷ್ಮವಾಗಿ, ವಿಮರ್ಶಾತ್ಮಕವಾಗಿ ಗಮನಿಸಿದಾಗ, ಅವರ ಕಥಾ ಹಂದರಗಳಲ್ಲಿ , ತಾವು ಕಂಡ ಸಮಾಜವನ್ನು ಗಟ್ಟಿಯಾಗಿ ಕಟ್ಟಿಕೊಡುವ, ಓದುಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ರೀತಿಯಲ್ಲಿ ಸಮಾಜದ ಒಳಹೊರಗುಗಳನ್ನು ಹಿಡಿದಿಸುವ ಒಂದು ಅದ್ಭುತ ಶೈಲಿಯನ್ನು ಕಾಣಬಹುದು. ಗೃಹಭಂಗ ಒಂದು ಅತ್ಯುತ್ತಮ ನಿದರ್ಶನವಾಗಿ ಕಾಣುತ್ತದೆ. ಆದರೆ ಅವರ ಕಾದಂಬರಿಗಳಲ್ಲಿ ಸಮಾಜದ ಮತ್ತೊಂದು ಮಗ್ಗುಲು, ಕಥಾ ಹಂದರದ ಕೇಂದ್ರವಸ್ತು ಆಗುವುದಿಲ್ಲ ಅಥವಾ ಆ ಮಗ್ಗುಲಿನಲ್ಲಿ ಕಾಣಬಹುದಾದ ತಲ್ಲಣಗಳು ಮತ್ತು ಆತಂಕಗಳು, ಮುಖ್ಯ ಕಥಾವಸ್ತುವಿನ ಒಂದು ಭಾಗವಾಗಿ ಕಾಣಿಸಿಕೊಳ್ಳುವುದಿಲ್ಲ. ಸೃಜನಶೀಲತೆಯ ಪ್ರಶ್ನೆ ಎದುರಾದಾಗ, ಭೈರಪ್ಪನವರ ಸಾಹಿತ್ಯದಲ್ಲಿ ಉದ್ದಕ್ಕೂ ಕಾಣಬಹುದಾದ ವ್ಯತ್ಯಯ ಇದು.
ವಿಮರ್ಶಾತ್ಮಕವಾಗಿ ನೋಡಿದಾಗ, ಸಾಹಿತ್ಯದಲ್ಲಿ ಅಪೇಕ್ಷಿಸಬಹುದಾದ ಕಣ್ಣೋಟ ಮತ್ತು ಒಳನೋಟ ಎರಡನ್ನೂ ಮೌಲಿಕ ನೆಲೆಯಲ್ಲಿ ನಿಷ್ಕರ್ಷೆ ಮಾಡಬೇಕಾಗುತ್ತದೆ. ಅಂದರೆ, ಕಣ್ಣೋಟದಲ್ಲಿ ಗಮನಿಸಬಹುದಾದ ಮೇಲ್ ಪದರದ ಸಮಾಜವನ್ನು, ಅದ್ಭುತವಾಗಿ ಸಾಹಿತ್ಯಿಕ ಸೌಂದರ್ಯದೊಂದಿಗೆ ವಿಷದಪಡಿಸಿದ್ದರೂ, ಒಳನೋಟದ ಮೂಲಕ ಗಮನಿಸಲೇಬೇಕಾದ ಮತ್ತೊಂದು ಸಮಾಜದ ತಾರತಮ್ಯ, ದೌರ್ಜನ್ಯ, ಅಸಮಾನತೆ, ಬಡತನ, ಹಸಿವು, ದಬ್ಬಾಳಿಕೆ ಮುಂತಾದ ಪ್ರವೃತ್ತಿಗಳನ್ನು ಗುರುತಿಸಬೇಕಾದರೆ ಒಳನೋಟ ಇರಬೇಕು. ಇದು ಇಲ್ಲವಾದಾಗ, ಓದುಗರಿಗೆ ಕಾದಂಬರಿಗಳ ಕಥಾವಸ್ತು ಅಪ್ಯಾಯಮಾನವಾಗಿ ಕಂಡರೂ, ಆ ಕಥಾ ಹಂದರದಲ್ಲಿ ಹರಡಿಕೊಳ್ಳುವ ಸಮಾಜದ ಮತ್ತೊಂದು ಮುಖವಾಡ ಅಥವಾ ಮಗ್ಗುಲು ಅಪರಿಚಿತವಾಗಿಯೇ ಉಳಿದುಬಿಡುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಗುರುತಿಸಬಹುದಾದ ಎರಡು ಅಂಶಗಳು ಎಂದರೆ ಸ್ತ್ರೀವಾದಿ ನೆಲೆಯಲ್ಲಿ ಮಹಿಳಾ ಸಂವೇದನೆ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ನೆಲೆಯಲ್ಲಿ ಅಸ್ಪೃಶ್ಯತೆ, ಬಡತನ, ಹಸಿವು, ನಿರ್ಗತಿಕತೆ ಮತ್ತು ಅನ್ಯಾಯಗಳು.
ಭೈರಪ್ಪ ಅವರ ಅತ್ಯುತ್ತಮ ಸಾಹಿತ್ಯಿಕ ಕೃತಿಗಳಲ್ಲೊಂದಾದ, ಅವರ ಆತ್ಮಕತೆಯನ್ನು ಬಿಂಬಿಸುವ ʼಭಿತ್ತಿʼ, ಅವರ ವೈಯುಕ್ತಿಕ ಜೀವನದಲ್ಲಿ ಅನುಭವಿಸಿದ ಹಸಿವೆ, ಬಡತನ, ಅಪಮಾನ ಮತ್ತು ನಿತ್ಯ ಬದುಕಿನ ಸಂಕಟಗಳನ್ನು ಮನಮುಟ್ಟುವಂತೆ ತೆರೆದಿಡುತ್ತದೆ. ನವೋದಯ ಮತ್ತು ಪ್ರಗತಿಶೀಲ- ನವ್ಯ ಸಾಹಿತ್ಯದ ಸಂದರ್ಭದಲ್ಲಿ ನಿಂತು ನೋಡಿದಾಗ ಈ ಅವಧಿಯಲ್ಲೇ ತಮ್ಮ ಸಾಹಿತ್ಯ ಕೃಷಿಯನ್ನು ಬೆಳೆಸಿಕೊಂಡು ಬಂದ ಭೈರಪ್ಪನವರಿಗೆ, ತಾವು ಅನುಭವಿಸಿದ ಸಂಕಷ್ಟಗಳು-ಅಪಮಾನಗಳು, ಅನುಭಾವದ ನೆಲೆಯಲ್ಲಿ ಸುತ್ತಲಿನ ಸಮಾಜದಲ್ಲೂ ಕಾಣಲೇಬೇಕಿತ್ತಲ್ಲವೇ ? ಸಾಮಾನ್ಯವಾಗಿ ಮೇಲ್ಜಾತಿಯ ಪರಿಸರದಲ್ಲೇ ಬೆಳೆದಿದ್ದರೂ, ತಾನು ಕಂಡ ಅಮಾನುಷ ಸಮಾಜದ ಒಂದು ಚಿತ್ರಣ, ಮನಸ್ಸಿನಲ್ಲಿ ಸಹಜವಾಗಿ ನಾಟಿರುತ್ತದೆ. ಇದನ್ನು ಸೂಕ್ಷ್ಮವಾಗಿ ಒಳಹೊಕ್ಕು ನೋಡುವ ಒಂದು ಸಂವೇದನಾಶೀಲತೆ ಸಾಹಿತಿಯಲ್ಲಿ ಇರುವುದೇ ಆದರೆ, ಅದು ಸೃಜನಾತ್ಮಕವಾಗಿ ಸಾಹಿತ್ಯಿಕ ರೂಪ ಪಡೆದುಕೊಳ್ಳುತ್ತದೆ. ಇದನ್ನು ನಾವು ರಾಜಕಾರಣಿಗಳಲ್ಲಿ ಅಪೇಕ್ಷಿಸಲಾಗುವುದಿಲ್ಲ. ಆದರೆ ಸಾಹಿತಿಯಲ್ಲಿ ಈ ಅನುಭಾವಿಕ ಸಂವೇದನೆ ಇರಬೇಕಾಗುತ್ತದೆ.
ಹಾಗಿದ್ದಾಗಲೇ ಅವರು ರಚಿಸುವ ಯಾವುದೇ ಪ್ರಕಾರದ ಸಾಹಿತ್ಯದಲ್ಲಿ ಸಂವೇದನೆ-ಸ್ಪಂದನೆ ಎನ್ನುವುದು ಆಲಂಕಾರಿಕವಾಗದೆ, ತಾವು ಸೃಷ್ಟಿಸುವ ಕಥಾಹಂದರಗಳಲ್ಲಿ, ಕಾವ್ಯಪ್ರತಿಮೆ ಮತ್ತು ರೂಪಕಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಸಾಹಿತ್ಯ ವಿಮರ್ಶೆ ಮತ್ತು ಮೀಮಾಂಸೆಗಳನ್ನು ದಾಟಿ ನೋಡಿದಾಗ, ಭಾರತದ ಸಂದರ್ಭದಲ್ಲಿ ಸಾಹಿತಿಗಳಲ್ಲಿ ಈ ಸಂವೇದನೆ ಇರಲೇಬೇಕಾಗುತ್ತದೆ. ಏಕೆಂದರೆ ಸಾಹಿತ್ಯ ಸೃಷ್ಟಿಯಾಗುವುದು ಶೂನ್ಯದಲ್ಲಿ ಅಲ್ಲ ಅಥವಾ ಕಲ್ಪನಾ ಜಗತ್ತಿನಲ್ಲಿ ಅಲ್ಲ. ಸಮಾಜದ ಗರ್ಭದಿಂದಲೇ, ಸಂಸ್ಕೃತಿಗಳ ಅನುಸಂಧಾನದೊಂದಿಗೆ ಸಾಹಿತ್ಯ ಮೊಳೆಯುತ್ತದೆ. ಭಾರತದ ಸಂದರ್ಭದಲ್ಲಿ ನೋಡಿದಾಗ, ನಮ್ಮ ಸಮಾಜವನ್ನು ಇಂದಿಗೂ ಕಾಡುತ್ತಿರುವ ಜಾತಿ ದೌರ್ಜನ್ಯ, ಅಸ್ಪೃಶ್ಯತೆ, ಸಾಮಾಜಿಕ ತರತಮಗಳು, ಅಸಮಾನತೆ, ಮತ್ತು ನಿರ್ಗತಿಕತೆಯು ನಿರ್ದಿಷ್ಟ ಸಾಹಿತ್ಯ ಕೃತಿಯ ಮೂಲ ವಸ್ತು ಆಗದಿದ್ದರೂ, ಅದರ ಒಂದು ಮಗ್ಗುಲನ್ನು ಓದುಗರ ಮುಂಡಿಸುವ ನೈತಿಕ ಜವಾಬ್ದಾರಿ ಸಾಹಿತಿಯ ಮೇಲಿರುತ್ತದೆ.
ತಾತ್ವಿಕ ವರ್ಗೀಕರಣಗಳನ್ನು ದಾಟಿ
ಇದನ್ನು ಎಡ-ಬಲ ಎಂಬ ತಾತ್ವಿಕ ವರ್ಗೀಕರಣಕ್ಕೊಳಪಡಿಸುವುದರ ಬದಲು, ಪುರೋಗಾಮಿ-ಪ್ರತಿಗಾಮಿ ನೆಲೆಯಲ್ಲಿ ವಿಶ್ಲೇಷಿಸಿದಾಗ, ಭೈರಪ್ಪನವರ ಕಾದಂಬರಿಗಳಲ್ಲಿ ಈ ಸಾಮಾಜಿಕ ಸಮಸ್ಯೆಗಳಾಗಲೀ, ಆಳಕ್ಕಿಳಿದಿರುವ ಜಾತಿ ಶ್ರೇಷ್ಠತೆಯ ವ್ಯಾಧಿಯಾಗಲೀ, ಅಸ್ಪೃಶ್ಯತೆ ಮತ್ತು ಬಡತನದಂತಹ ಅಮಾನವೀಯ ವಿದ್ಯಮಾನಗಳಾಗಲೀ ಕಾಣಸಿಗುವುದು ಅಪರೂಪ. 1960-70ರ ದಶಕದ ಸಾಮಾಜಿಕ ತಲ್ಲಣಗಳ ಪ್ರತ್ಯಕ್ಷದರ್ಶಿಯಾಗಿದ್ದ ಭೈರಪ್ಪನವರು ಸಮಾಜದ ಈ ಅಮಾನವೀಯ ಮಗ್ಗುಲನ್ನೇಕೆ ಪ್ರಧಾನವಾಗಿ ಬಿಂಬಿಸಲಿಲ್ಲ ಎಂಬ ಜಿಜ್ಞಾಸೆ ಸಹಜವಾಗಿ ಮೂಡುತ್ತದೆ. ಇದು ಆಗಲೇಬೇಕೆಂದಿಲ್ಲ ಆದರೆ, ಸಮಾಜ ಮತ್ತು ಸಂಸ್ಕೃತಿಯ ಪ್ರಭಾವದಿಂದಲೇ ಸೃಷ್ಟಿಯಾಗುವ ಸಾಹಿತ್ಯದಲ್ಲಿ ಅದೇ ವಲಯಗಳಲ್ಲಿರುವ ಸಮಾಜವಿರೋಧಿ ಪದ್ಧತಿಗಳು ಅಭಿವ್ಯಕ್ತಗೊಳ್ಳದೆ ಇರುವುದು ಸೋಜಿಗದ ಸಂಗತಿ. ಇಲ್ಲಿ ನಮಗೆ ʼ ಹೇಮಾವತಿ ʼ ಕತೆಯ ಕರ್ತೃ ಗೊರೂರು ರಾಮಸ್ವಾಮಿ ಐಯ್ಯಂಗಾರ್ ನಿದರ್ಶನಪ್ರಾಯರಾಗಿ ಕಾಣುತ್ತಾರೆ.
ಭೈರಪ್ಪನವರ ಸಾಹಿತ್ಯದ ವಿಮರ್ಶೆಯಲ್ಲಿ ಕಾಣುವ ಮತ್ತೊಂದು ವಿಚಾರ ಎಂದರೆ ಮಹಿಳಾ ಸಂವೇದನೆ. ಎಚ್. ಎಸ್. ಶ್ರೀಮತಿಯವರ ಮೇಲೆ ಉಲ್ಲೇಖಿಸಿರುವ, “ಸ್ತ್ರೀವಾದಿ ಸಾಹಿತ್ಯ ವಿಮರ್ಶೆ” ಕೃತಿಯಲ್ಲಿ “ಪುರುಷರು ಬರೆದ ಕಾವ್ಯದ ಉದ್ದಕ್ಕೂ ಮಹಿಳೆಯು ಹರಡಿಕೊಂಡಿರುತ್ತಾಳೆ. ನಿಜ, ಆದರೂ ಅವರು ಬರೆಯುವ ಚರಿತ್ರೆಯ ಯಾವ ಎಳೆಯಲ್ಲಿಯೂ ಅವಳು ಕಾಣದೆ ಹೋಗುತ್ತಾಳೆ” ಎಂಬ ವರ್ಜೀನಿಯಾ ಊಲ್ಫ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾರೆ (ಪುಟ 25). ಇದನ್ನು ಗದ್ಯ ಸಾಹಿತ್ಯಕ್ಕೂ ವಿಸ್ತರಿಸಿ, ಭೈರಪ್ಪನವರ ಧರ್ಮಶ್ರೀ—ಜಲಪಾತ ದೂರಸರಿದರು ಕಾದಂಬರಿಗಳಿಂದ ಕವಲು-ಉತ್ತರಕಾಂಡದವರೆಗೂ ನೋಡಿದಾಗ ಈ ಕೃತಿಗಳಲ್ಲಿ ಮಹಿಳೆಯೇ ಕೇಂದ್ರ ಬಿಂದುವಾಗಿದ್ದರೂ, ಮಹಿಳಾ ಸಂವೇದನೆಗಿಂತಲೂ ಹೆಚ್ಚಾಗಿ, ಹೆಣ್ಣನ್ನು ಅಧೀನಳನ್ನಾಗಿ ಕಾಣುವ ಸ್ತ್ರೀ ದ್ವೇಷದ (Mysoginic) ಭಾವನೆಗಳೇ ಪ್ರಧಾನವಾಗಿ ಕಾಣುತ್ತವೆ. ಈ ನಿಟ್ಟಿನಲ್ಲಿ ವಿಮರ್ಶಕರು ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದದ ಕಲ್ಪನೆ ನೆಲೆಗೊಂಡ 1970ರ ದಶಕದಲ್ಲೇ ತಮ್ಮ ಸಾಹಿತ್ಯದ ಉತ್ತುಂಗ ತಲುಪಿದ್ದ ಭೈರಪ್ಪನವರು, ಸ್ತ್ರೀ ಸಂವೇದನೆಗೆ ಹೇಗೆ ವಿಮುಖರಾದರು ಎಂಬ ಪ್ರಶ್ನೆ ಶಾಶ್ವತವಾಗಿ ಉಳಿಯುತ್ತದೆ.
ತಾತ್ವಿಕತೆಯ ನೆಲೆಯಲ್ಲಿ ಸಾಹಿತ್ಯ
ಕನ್ನಡದ ಮತ್ತೋರ್ವ ಚಿಂತಕರು ಎತ್ತಿರುವ, ಭೈರಪ್ಪನವರು ಆರೆಸ್ಸೆಸ್ ಅಜೆಂಡಾಗಳನ್ನು ಇಟ್ಟುಕೊಂಡೇ ಸಾಹಿತ್ಯ ರಚನೆ ಮಾಡುತ್ತಿದ್ದರೇ ಎಂಬ ಪ್ರಶ್ನೆಯನ್ನು ಮತ್ತೊಂದು ಮಜಲಿನಲ್ಲಿ ನೋಡಿದಾಗ, ಸಾಂಪ್ರದಾಯಿಕ ಸಮಾಜ ಮತ್ತು ಸನಾತನವಾದಿ ಮನಸ್ಸುಗಳಿಗೆ, ವಿಶೇಷವಾಗಿ ಸಂಘಪರಿವಾರಕ್ಕೆ, ಭೈರಪ್ಪನವರ ಸಾಹಿತ್ಯದಲ್ಲಿ ಕಾಣುವ ಈ ಕೊರತೆಗಳೇ, ಸಾಂಸ್ಥಿಕ ರಾಜಕಾರಣಕ್ಕೆ ಪೂರಕವಾಗಿ ಪರಿಣಮಿಸಿದವು ಎಂದು ಹೇಳಬಹುದು. ಉತ್ತಮ ಕಾದಂಬರಿಕಾರರಾಗಿ ಭೈರಪ್ಪನವರು ಸಮಾಜವನ್ನು ಕಟ್ಟಿಕೊಡುವ ರೀತಿಯನ್ನು ಗಮನಿಸಿದಾಗ, ಕೆಲವು ಪೂರ್ವಗ್ರಹಗಳನ್ನು ಗುರುತಿಸಬಹುದಾದರೂ, ಅಜೆಂಡಾ ಇಟ್ಟುಕೊಂಡು ಬರೆದಂತೆ ತೋರುವುದಿಲ್ಲ. ಬದಲಾಗಿ, ಅವರ ಸಾಹಿತ್ಯಿಕ ಅಭಿವ್ಯಕ್ತಿಯಲ್ಲಿ ಸಮಾಜಮುಖಿ ಧೋರಣೆ ಹೆಚ್ಚು ಪ್ರಧಾನವಾಗಿ ಕಾಣುವುದಿಲ್ಲ ಎಂದು ಹೇಳಬಹುದು.
ಹಾಗಾಗಿಯೇ ಅವರ ಮಹಿಳಾ ವಿರೋಧಿ ಎನಿಸುವ ಧೋರಣೆಗಳು ಸಾಕಷ್ಟು ವಿಮರ್ಶೆಗೊಳಗಾಗಿವೆ. ತಮ್ಮದೇ ಆದ ಸೈದ್ಧಾಂತಿಕ-ತಾತ್ವಿಕ ನಿಲುವು ಹೊಂದಿರುವ ಸ್ವಾಯತ್ತತೆ ಸಾಹಿತಿಗಳಿಗೆ ಇದ್ದೇ ಇರುತ್ತದೆ. ಆದರೆ ವ್ಯಕ್ತಿಗತ ಬದುಕಿನಲ್ಲಿ, ವೈಯುಕ್ತಿಕವಾಗಿ ಸಮಾಜ ಕಡೆಗೆ ನೋಡುವ ವಿಧಾನ ಮತ್ತು ಅಲ್ಲಿ ಅನುಸರಿಸುವ ಔದಾರ್ಯ, ಸಹೃದಯತೆ, ಸಹಾನುಭೂತಿ, ಸಮಾಜಪರ ಕಾಳಜಿ ಈ ಲಕ್ಷಣಗಳೆಲ್ಲವೂ, ಅದೇ ವ್ಯಕ್ತಿಯ ಸಾಹಿತ್ಯದಲ್ಲಿ ಅಭಿವ್ಯಕ್ತವಾಗದೆ ಇರುವುದು ಹೇಗೆ ? ಈ ಜಟಿಲ ಪ್ರಶ್ನೆಗೆ ಸಾಹಿತ್ಯ ಮೀಮಾಂಸಕರು ಉತ್ತರ ಶೋಧಿಸಬೇಕಿದೆ. ಈ ಪ್ರಶ್ನೆ ಎಲ್ಲ ಪ್ರಕಾರಗಳ, ಎಲ್ಲ ಸಾಹಿತಿಗಳಿಗೂ ಅನ್ವಯಿಸುವಂತಹುದು. ಅಂದರೆ, ತಾವು ಬದುಕಿದ ಸಮಾಜದ ತಲ್ಲಣಗಳನ್ನು ತಮ್ಮ ಸಾಹಿತ್ಯದಲ್ಲಿ ಅಭಿವ್ಯಕ್ತಗೊಳಿಸದೆ ಇರುವುದು ಹೇಗೆ ಸಾಧ್ಯ ಎಂಬ ಜಿಜ್ಞಾಸೆ. ಭೈರಪ್ಪನವರ ಈ ಸಾಹಿತ್ಯಿಕ ಸಾಂಪ್ರದಾಯಿಕತೆಯ ಕಾರಣದಿಂದಲೇ, ಅವರ ಸಂಶೋಧನಾ ಕಾದಂಬರಿಗಳಾಗಿ ಹೊರಬಂದ ಆವರಣ, ಉತ್ತರಕಾಂಡ ಮೊದಲಾದವು ಬಲಪಂಥೀಯ ರಾಜಕಾರಣಕ್ಕೆ, ಪ್ರತಿಗಾಮಿ ಶಕ್ತಿಗಳಿಗೆ ಅಪ್ಯಾಯಮಾನವಾಗಿ ಕಂಡಿದ್ದು ವಾಸ್ತವ.
ವ್ಯಕ್ತಿಯಾಗಿ ಎಸ್. ಎಲ್. ಭೈರಪ್ಪ
ಈ ಸಾಹಿತ್ಯಿಕ ಪರಿಸರದಿಂದ ಹೊರಗೆ ನೋಡಿದಾಗ, ಭೈರಪ್ಪನವರು ಒಬ್ಬ ವ್ಯಕ್ತಿಯಾಗಿ ಭಿನ್ನವಾಗಿಯೇ ಕಾಣುತ್ತಾರೆ. ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರ ಮನೆಯಲ್ಲಿ ತಂಗಿದ್ದುದು, ಮೈಸೂರಿನ ಒಡನಾಡಿ ಸಂಸ್ಥೆಯೊಡನೆ ಅವರ ಒಡನಾಟ, ತಮ್ಮ ಅಂತ್ಯಸಂಸ್ಕಾರದ ಹಕ್ಕನ್ನು, ತಾವು ಬೆಳೆದುಬಂದ ಸಂಪ್ರದಾಯವನ್ನು ಧಿಕ್ಕರಿಸಿ, ಮಾನಸ ಪುತ್ರಿಗೆ ನೀಡಿದ್ದು ಇವೆಲ್ಲವೂ ಅವರಲ್ಲಿನ ಮತ್ತೊಂದು ಮಗ್ಗುಲನ್ನು ಬಿಂಬಿಸುತ್ತದೆ. ನನ್ನ ಬ್ಯಾಂಕ್ ಸೇವೆಯ ಅವಧಿಯಲ್ಲಿ ಐದಾರು ವರ್ಷಗಳ ಕಾಲ ಗ್ರಾಹಕರಾಗಿ ನಿರಂತರ ಸಂಪರ್ಕದಲಿದ್ದ ಭೈರಪ್ಪನವರು, ಎಂದೂ ಸಹ ವಿಐಪಿ ಮನೋಭಾವವನ್ನು ಪ್ರದರ್ಶಿಸಿದವರಲ್ಲ. ಮೆನೇಜರ್ ಅವರ ಚೇಂಬರ್‌ನಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿದರೂ, “ಅದೇಕೆ, ನಾನೂ ಒಬ್ಬ ಗ್ರಾಹಕನಷ್ಟೆ, ಎಲ್ಲರ ನಡುವೆ ಕುಳಿತಿರುತ್ತೇನೆ” ಎನ್ನುತ್ತಾ ಇತರರ ನಡುವೆಯೇ ತಾಳ್ಮೆಯಿಂದ ಕುಳಿತಿರುತ್ತಿದ್ದರು. ಅಷ್ಟೇ ಅಲ್ಲ ತಮ್ಮನ್ನು ಪ್ರಸಿದ್ಧ ಸಾಹಿತಿ ಎಂದು ಬಿಂಬಿಸಿಕೊಳ್ಳುವ ಯಾವ ವರ್ತನೆಯೂ ಅವರಲ್ಲಿ ಕಾಣಲಾಗುತ್ತಿರಲಿಲ್ಲ.
ಎಸ್.ಎಲ್.ಭೈರಪ್ಪ ಅವರ ಸಾಹಿತ್ಯಿಕ ಸಾಧನೆ ಅಥವಾ ಪರಿಪಕ್ವತೆಯನ್ನು ಪ್ರಶ್ನಿಸುವಂತಿಲ್ಲ. ಕೊರತೆ ಕಾಣುವುದೇ ಆದರೆ ಅವರ ಸಾಹಿತ್ಯಿಕ ಅಕ್ಷರಾಭಿವ್ಯಕ್ತಿಯಲ್ಲಿ ಮರೆಯಾಗಿದ್ದ ಮಹಿಳಾ ಸಂವೇದನೆ, ಸಮಾಜಮುಖಿ ಧೋರಣೆ ಮತ್ತು ತಳಸ್ತರದ ಸಮಾಜದ ಸಂಕಟ-ತಲ್ಲಣಗಳಿಗೆ ಸ್ಪಂದನೆ. ತಾವು ಬದುಕಿದ ಸಮಾಜದ ಎಲ್ಲ ಆಯಾಮಗಳನ್ನೂ ಸಂಧಿಸಿ, ಅಲ್ಲಿನ ನೋವು ತಲ್ಲಣಗಳಿಗೆ ಸ್ಪಂದಿಸಿ, ಅಭಿವ್ಯಕ್ತಿಸುವುದು ಸಾಹಿತಿಯೊಬ್ಬರ ಆದ್ಯತೆಯಾದಾಗಲೇ, ಅಲ್ಲಿ ಸಾರ್ವಕಾಲಿಕ ಸಾಹಿತ್ಯ ಸೃಷ್ಟಿಯಾಗುತ್ತದೆ. ಉತ್ತಮ-ಶ್ರೇಷ್ಠ-ಅತಿ ಶ್ರೇಷ್ಠ ಎಂಬ ಗುಣವಿಶೇಷಣಗಳಿಂದಾಚೆ ನೋಡಿದಾಗ, ಅಂತಹ ಸಾಹಿತ್ಯವೇ ಭವಿಷ್ಯದ ಸಮಾಜಕ್ಕೆ ದಿಕ್ಸೂಚಿಯಾಗಿ, ಮಾರ್ಗದರ್ಶಕವಾಗಿ ಪರಿಣಮಿಸುತ್ತದೆ.
ಮತ್ತೊಂದೆಡೆ ಅಂತಹ ಸಾಹಿತ್ಯವೇ ಯುವ ತಲೆಮಾರಿನ ಸಾಹಿತ್ಯಾಸಕ್ತರಿಗೆ, ಅಧ್ಯಯನಕಾರರಿಗೆ ಮತ್ತು ಸಾಹಿತಿಯಾಗಲು ಬಯಸುವವರಿಗೆ ಒಂದು ಮಾದರಿಯನ್ನೂ ಹಾಕಿಕೊಡುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ಭೈರಪ್ಪನವರ ಸಾಹಿತ್ಯ, ಕನ್ನಡದ ವರ್ತಮಾನದ ಅಥವಾ ಭವಿಷ್ಯದ ತಲೆಮಾರಿಗೆ ಒಂದು ಮಾದರಿಯನ್ನು ಬಿಟ್ಟುಹೋಗಿಲ್ಲ. ಅವರ ಶೈಲಿ, ಕಥಾ ಹಂದರವನ್ನು ಬಿಗಿಯಾಗಿ ಹಿಡಿದಿಡುವ ವಿಧಾನ, ವಿಸ್ತರಿಸುವ ಮಾದರಿ ಮತ್ತು ಸಮಾಜವನ್ನು ಬಿಂಬಿಸುವ ತರ್ಕ ಇವೆಲ್ಲವೂ ಅಪ್ಯಾಯಮಾನವಾಗಿ ಕಂಡರೂ, ವರ್ತಮಾನ-ಭವಿಷ್ಯದ ಸಮಾಜಕ್ಕೆ ಅಗತ್ಯವಾದ ಸಮಾಜಮುಖಿ ಸಾಹಿತ್ಯಿಕ ಮಾದರಿಯನ್ನು ಅವರ ಸಾಹಿತ್ಯದಲ್ಲಿ ಗುರುತಿಸಲಾಗುವುದಿಲ್ಲ. ವಿಡಂಬನೆ ಎಂದರೆ ಅವರ ಈ ಕೊರತೆಯೇ ಪ್ರತಿಗಾಮಿ ಶಕ್ತಿಗಳಿಗೆ ಒಂದು ಅಸ್ತ್ರವಾಗಿ ಪರಿಣಮಿಸಿರುವುದು.
ಅಗಲಿದ ಸಾಹಿತಿಗೆ ವಂದಿಸುತ್ತಾ…
ಈ ಹಲವು ಜಿಜ್ಞಾಸೆ, ಸೋಜಿಗ ಮತ್ತು ಜಟಿಲ ಪ್ರಶ್ನೆಗಳನ್ನು ನಮ್ಮ ನಡುವೆ ಬಿಟ್ಟು ಎಸ್.ಎಲ್. ಭೈರಪ್ಪ ಸಾಹಿತ್ಯವಲಯದಲ್ಲಿ ಒಂದು ನಿರ್ವಾತ ಸೃಷ್ಟಿಸಿ ನಿರ್ಗಮಿಸಿದ್ದಾರೆ. ನಮ್ಮ ವರ್ತಮಾನದ ತಾತ್ವಿಕ ಚಿಂತನೆಗಳಿಗೆ ನಿಲುಕದಂತಹ, ನಮ್ಮನ್ನು ಅಗಲಿದ ಸಾಹಿತಿಗಳನ್ನು,ಚಿಂತಕರನ್ನು ನಿರಾಕರಿಸುವ ಒಂದು ಧೋರಣೆ ವ್ಯಾಪಕವಾಗಿರುವ ಈ ಹೊತ್ತಿನಲ್ಲಿ, ಭೈರಪ್ಪ ಅವರ ಸಾಹಿತ್ಯವನ್ನು ನಿರಾಕರಿಸುವುದಕ್ಕಿಂತಲೂ, ಅವರ ಕೃತಿಗಳೊಂದಿಗೆ ಅನುಸಂಧಾನ ಮಾಡುತ್ತಾ, ವಿಮರ್ಶಾತ್ಮಕವಾಗಿ ನೋಡುವುದು ಅಗತ್ಯ. ಹಾಗಾದಲ್ಲಿ ಇಂದಿನ ಹಾಗೂ ಮುಂದಿನ ಸಾಹಿತ್ಯಾಭಿವ್ಯಕ್ತಿಯ ಪರಿಚಾರಕರಿಗೆ , ತಾವು ಏನಾಗಬೇಕು ಎಷ್ಟು ಎತ್ತರಕ್ಕೇರಬೇಕು ಎನ್ನುವುದಕ್ಕಿಂತಲೂ, ತಾವು ಯಾವ ತಪ್ಪು ಮಾಡಬಾರದು ಎಂಬ ಸ್ವ ಅರಿವು ಮೂಡಲು ಸಾಧ್ಯ. ಇದು ಡಿಜಿಟಲ್ ಯುಗದ ಯುವ ಸಮೂಹ ಕಲಿಯಬೇಕಾಗಿರುವ ಪಾಠ ಆಗಲೂ ಸಾಧ್ಯ.
ಮೇರು ಸಾಹಿತಿಯಾಗಿ, ಕೆಲವು ಅತ್ಯುತ್ತಮ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ, ಅಷ್ಟೇ ವಿವಾದಾತ್ಮಕ ಕೃತಿಗಳನ್ನೂ ಜನರ ನಡುವೆ ಬಿಟ್ಟು, ಸಾರ್ವಜನಿಕವಾಗಿ ಸಾಹಿತ್ಯಿಕ ವಿಮರ್ಶೆ ಮತ್ತು ಸಂಕಥನಳಿಗೆ ಅವಕಾಶವನ್ನು ಕಲ್ಪಿಸಿ, ಈಗ ನಮ್ಮಿಂದ ಶಾಶ್ವತವಾಗಿ ದೂರವಾಗಿರುವ ಕುತೂಹಲಕಾರಿ (Intreguing) ವ್ಯಕ್ತಿತ್ವವಾಗಿ ಭೈರಪ್ಪ ನೆನಪಿನಲ್ಲುಳಿಯುತ್ತಾರೆ. ಭಾರತದ ಹಾಗೂ ವಿದೇಶಿ ಬಾಷೆಗಳಿಗೆ ಅನುವಾದವಾಗಿರುವ ಕನ್ನಡ ಸಾಹಿತ್ಯ ಕೃತಿಗಳಲ್ಲಿ ಭೈರಪ್ಪನವರ ಕೃತಿಗಳು ಹೆಚ್ಚು ಕಾಣುತ್ತವೆ. ಅವರ ಬಲಪಂಥೀಯ ರಾಜಕೀಯ ಧೋರಣೆ, ಸನಾತನವಾದಿ ಚಿಂತನಾ ಕ್ರಮ, ಸಂಪ್ರದಾಯವಾದಿ ಧಾರ್ಮಿಕ ಆಲೋಚನೆಗಳು ಬಲಪಂಥೀಯ ರಾಜಕಾರಣಕ್ಕೆ ಬಂಡವಾಳವಾಗಿದ್ದು, ಸಾಂಸ್ಕೃತಿಕ ರಾಜಕಾರಣದ ನೆಲೆಯಲ್ಲಿ ಕಾಲದ ಅನಿವಾರ್ಯತೆಯಾಗಿ ಕಾಣುತ್ತದೆ. ಆದರೆ ಈ ಅಂಶಗಳೇ ಭವಿಷ್ಯದ ಸಮನ್ವಯ ಸಮಾಜದ ಕನಸು ಕಾಣುವ ಯುವ ಸಮುದಾಯಕ್ಕೆ ನಿರ್ಣಾಯಕ ಸವಾಲುಗಳಾಗಿಯೂ ಕಾಣಬೇಕಿದೆ.
ಅಂತಿಮವಾಗಿ
ಭೈರಪ್ಪನವರಿಂದ ತಳಸಮುದಾಯಗಳ ನೋವು ಸಂಕಟಗಳನ್ನು ಬಿಂಬಿಸುವ ಕಾರಂತರ ʼಚೋಮನದುಡಿʼ ಯಂತಹ ಪಾತ್ರವನ್ನು ಸೃಷ್ಟಿಸಲಾಗಲಿಲ್ಲ. ಇದಕ್ಕೆ ಕಾರಣವೆಂದರೆ, ಸಾಹಿತಿಯಾದವರು ತಾವು ಬದುಕಿದ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿ, ತಮ್ಮ ಕೃತಿಯಲ್ಲಿ ಒಳನೋಟಗಳೊಂದಿಗೆ ಅಭಿವ್ಯಕ್ತಿಸುತ್ತಾರೆ. ವೈಯುಕ್ತಿಕ ಜೀವನದಲ್ಲಿ ಅಪಾರವಾದ ಹಸಿವುಂಡ ಭೈರಪ್ಪನವರಿಗೆ ದಮನಿತ ಜನಸಮುದಾಯಗಳ ಹಸಿವು ಸಂಕಟಗಳು ಕಾಣಲಿಲ್ಲವೇ ? ಕುವೆಂಪು ಅವರ ಕಾದಂಬರಿಗಳಲ್ಲಿ ಬರುವ ಇಡೀ ಸಮಾಜದ ಚಿತ್ರಣದಲ್ಲಿ ಯಾವುದೂ ತಪ್ಪಿಸಿಕೊಳ್ಳುವುದಿಲ್ಲ. ಅಲ್ಲವೇ ? ಎಂ. ಟಿ. ವಾಸುದೇವ ನಾಯರ್ ಅವರ ಸಾಹಿತ್ಯದಲ್ಲೂ ಪಾತೃ ಸೃಷ್ಟಿ ಮತ್ತು ಸಂದರ್ಭಗಳ ಆಯ್ಕೆಯಲ್ಲಿ ಕುವೆಂಪು ಅವರಂತೆಯೇ ಇರುವುದನ್ನು ಗಮನಿಸಬಹುದು. ಭೈರಪ್ಪನವರಲ್ಲಿ ಇದನ್ನು ನಿರೀಕ್ಷಿಸುವುದು ತಪ್ಪೇನಲ್ಲ ಅಲ್ಲವೇ ?
ಮುಸಲ್ಮಾನರ ಮನೆಯಲ್ಲಿ ತಂಗಿದ್ದು, ಅವರ ಸಮಾಜದ ವಿಚಾರಗಳನ್ನು ತಿಳಿದುಕೊಡಂತೆಯೇ ದಲಿತ ಕೂಲಿಕಾರನ ಮನೆಯಲ್ಲಿ ಉಳಿದುಕೊಳ್ಳುವಂತಾಗಿದ್ದರೆ, ಇಂತಹ ಸಮಾಜಮುಖಿ ಸಾಹಿತ್ಯ ಕೃತಿ ಮೂಡಬಹುದಿತ್ತು. ಆದರೆ ಭೈರಪ್ಪ ಎಂದೂ ಸಹ ದೂರ ಉಳಿದವರಂತೆಯೇ ಇದ್ದರು. ಇತರ ಸಾಹಿತ್ಯಗಳ ಚರ್ಚೆಗಳಲ್ಲಿ ಅಥವಾ ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸಲಿಲ್ಲ. ಅವರದೇ ಸಾಹಿತ್ಯ ಕುರಿತ ವಿಚಾರ ಗೋಷ್ಠಿಗಳಲ್ಲೂ ಭಾಗವಹಿಸುತ್ತಿರಲಿಲ್ಲ. ಹಾಗಾಗಿ ಸಾಮಾಜಿಕ ಚಳುವಳಿಗಳಿಂದ ಸಾಹಿತಿಯೊಬ್ಬ ಕಲಿಯಬಹುದಾದ ನೂರಾರು ಪಾಠಗಳು ಅವರಿಗೆ ದಕ್ಕಲಿಲ್ಲ. ಆವರಣ ಕೃತಿಯನ್ನು ಪ್ರಕಟಿಸುವ ಮುನ್ನ ಕೆಲವೇ ಆಪ್ತರಿಂದ ಓದಿಸಿದ್ದರು. ಅವರ ಸಮಾಜವೂ ಇಷ್ಟಕ್ಕೇ ಸೀಮಿತವಾಗಿತ್ತು. ಆದರೂ ಜನಪ್ರಿಯ ಸಾಹಿತಿಯಾಗಿ ಅವರ ಸಾಹಿತ್ಯಕ್ಕೆ ಮಿಡಿಯುವ ದೊಡ್ಡ ವರ್ಗವು ಸಮಾಜದಲ್ಲಿದೆ. ಅದು ಸಾಹಿತ್ಯವನ್ನು ಓದುವ ವರ್ಗವಷ್ಟೆ. ಆಂಗ್ಲ ಸಾಹಿತ್ಯದಲ್ಲಿ 19ನೆ ಶತಮಾನದ ಕಾದಂಬರಿಗಳು ಹೀಗಿರುತ್ತಿದ್ದವು. (Pride and Prejudice ಕೃತಿಯ ಸಮಾಜವನ್ನು ಗಮನಿಸಬಹುದು.)
ಇದು ಭೈರಪ್ಪನವರ ಕೊರತೆ ಎನ್ನುವುದಕ್ಕಂತಲೂ, ಈ ಅಂತರ್ಮುಖಿ ಸಾಹಿತ್ಯಿಕ ಧೋರಣೆಗೆ ಕಾರಣಗಳನ್ನು ಶೋಧಿಸಬೇಕಿದೆ. ಸಾಹಿತ್ಯ ವಿಮರ್ಶೆ ಬೆಳೆಯುವುದೇ ಇಂತಹ ಹುಡುಕಾಟಗಳಲ್ಲಿ. ಎಸ್. ಎಲ್. ಭೈರಪ್ಪ ಮತ್ತು ಅವರ ಸಾಹಿತ್ಯಿಕ ಕೊಡುಗೆಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿರುವುದು ವಾಸ್ತವ. ಹಾಗೆಯೇ ಆರೋಗ್ಯಕರ ವಿಮರ್ಶೆಯ ಆಕರವಾಗಿರುವುದೂ ವಾಸ್ತವ. ಈ ಭಿನ್ನ ನೆಲೆಗಳಲ್ಲಿ ನಿಂತು ನೋಡಿದಾಗ, ಭೈರಪ್ಪ ನಮ್ಮ ನಡುವೆ ಇದ್ದ ಒಬ್ಬ ಮೇರು ಸಾಹಿತಿಯಾಗಿ ಕಾಣುತ್ತಾರೆ. ಚರಿತ್ರೆಯ ಯಾವ ಕಾಲದಲ್ಲೂ, ಯಾವ ಸಮಾಜವೂ ಈ ಜಿಜ್ಞಾಸೆ-ಗೊಂದಲದಿಂದ ಮುಕ್ತವಾಗಿಲ್ಲ. ಈ ದೃಷ್ಟಿಯಿಂದಲೇ, ಅಗಲಿದ ಮೇರು ಸಾಹಿತಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಬೇಕಿದೆ. ಅವರ ಸಾಹಿತ್ಯ ನಮ್ಮ ನಡುವೆ ಶಾಶ್ವತವಾಗಿ ಉಳಿಯುತ್ತದೆ, ನೆನಪುಗಳೂ ಸಹ.
ಅಗಲಿದ ಮೇರು ಸಾಹಿತಿಗೆ ಹೃದಯಪೂರ್ವಕ ಶ್ರದ್ಧಾಂಜಲಿ !






0 Comments