ಜಿ ಎನ್ ಮೋಹನ್
ಇದು ಮುಯ್ಯಿಗೆ ಮುಯ್ಯಿ
ಪ್ರೀತಿಯ ಮುಯ್ಯಿ
ನನ್ನ ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕೃತಿಗೆ ಪುತಿನ ಕಾವ್ಯ ಪ್ರಶಸ್ತಿ ಬಂದಾಗ ಅಕ್ಷತಾ ತುಂಬು ಪ್ರೀತಿಯಿಂದ
ಅವರ ಗೆಳೆಯರೆಲ್ಲರೂ ಕೂಡಿ ನಡೆಸುತ್ತಿದ್ದ ಬ್ಲಾಗ್ ‘ನಾವು ನಮ್ಮಲ್ಲಿ..’ ಗೆ ಒಂದು ಪ್ರೀತಿಯ ಬರಹ ಬರೆದಿದ್ದರು
ಈಗ ಕೆ ಅಕ್ಷತಾ ಅವರ ‘ ನೀರ ಮೇಲಣ ಚಿತ್ರ’ ಕೃತಿಗೆ ಅದೇ ಪುತಿನ ಕಾವ್ಯ ಪ್ರಶಸ್ತಿ ಸಂದಿದೆ. ನನಗೂ ಬರೆಯುವ ಒಂದು ಅವಕಾಶ ಸಿಕ್ಕಿದೆ

ಕೆ ಅಕ್ಷತಾ ಹೆಸರು ನನ್ನ ಕಿವಿಗೆ ಬಿದ್ದದ್ದು ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಸಜ್ಜಾಗುತ್ತಿದ್ದಾಗ.
ಆಗ ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ನಾನು ಸಾಹಿತ್ಯ ಸಮ್ಮೇಳನಕ್ಕೂ ಹೊಸ ಕವರೇಜ್ ಟಚ್ ಕೊಡಬೇಕು ಎಂದು ನಿರ್ಧರಿಸಿದ್ದೆ
ಹಾಗಾಗಿ ಆದಷ್ಟೂ ಹೊಸ ಬರಹಗಾರರನ್ನಿಟ್ಟುಕೊಂಡು ಒಂದು ಪ್ರೊಮೊ ತಯಾರಿಸಬೇಕು ಎಂದು ತಯಾರಿ ನಡೆಸಿದ್ದೆ.
ಹಾಗೆ ಹೊಸ ಬರಹಗಾರರ ಪಡೆಯ ಪಟ್ಟಿ ಮಾಡುವಾಗ ಎನ್ ಕೆ ಹನುಮಂತಯ್ಯ, ಕವಿತಾ ರೈ, ಅನಿತಾ ಹುಳಿಯಾರ್ ಹೆಸರ ಜೊತೆಗೆ ಸೇರಿದ್ದು ಕೆ ಅಕ್ಷತಾ
ಅಕ್ಷತಾ ಅವರ ಪರಿಚಯ ನನಗೆ ಇರಲಿಲ್ಲ. ಆದರೆ ಅವರ ಕವಿತೆಗಳ ಪರಿಚಯ ಖಂಡಿತಾ ಇತ್ತು.
ಅಕ್ಷತಾ ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ನಮ್ಮ ಈಟಿವಿ ತೆರೆಯ ಮೇಲೆಯೇ
ಆ ನಂತರ ಈ ಪ್ರೊಮೊ ಕಾರಣದಿಂದಾಗಿ ಫೋನ್ ಮಿತ್ರರಾದ ಅಕ್ಷತಾ ನಾನು ಸಾಕಷ್ಟು ದೂರ ನಡೆದೆವು
ಅಕ್ಷತಾ ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಎನ್ನುವ ಮೊದಲ ಕವನ ಸಂಕಲನ ತಂದು ಅಲ್ಲಿಯೇ ನಿಂತಿದ್ದ ದಿನಗಳು ಅವು
ನಾನು ಅವರ ಆ ಸಂಕಲನದ ಕವಿತೆಗಳಿಗೆ ಶರಣಾಗಿದ್ದೆ.
ಹಾಗಾಗಿ ಆಗ ನಾನು ನಡೆಸುತ್ತಿದ್ದ ‘ಮೇಫ್ಲವರ್ ಮೀಡಿಯಾ ಹೌಸ್’ ಗೆ ಕವಿತೆ ಓದಿ ಎಂದು ಕರೆತಂದೆ. ಅದಕ್ಕೆ ಹೇಮಾ ವೆಂಕಟ್ ಸಹಾ ಕೂಡಿಕೊಂಡರು
ಕವಿತೆಗಳ ಮಳೆ

ಅಲ್ಲಿಂದ ಶುರುವಾದ ಪರಿಚಯದ ಸಲುಗೆ ಅವರು ‘ಅವಧಿ’ಯ ಬೆಸ್ಟ್ ಬರಹಗಳನ್ನು ಆಯ್ದು ಕೊಡುವ ನಮ್ಮ ಯೋಜನೆಗೆ ಜೊತೆಯಾದರು
ಕೆ ಅಕ್ಷತಾ ಹಾಗೂ ಸುಧನ್ವ ದೇರಾಜೆ ಇಬ್ಬರೂ ಕೂಡಿ ಆ ಲೇಖನಗಳನ್ನು ಸಂಪಾದಿಸಿಕೊಟ್ಟರು
ಆ ವೇಳೆಗಾಗಲೇ ನನಗೆ ಅಕ್ಷತಾಗಿರುವ ಸಾಮರ್ಥ್ಯದ ನೇರ ಅನುಭವವಾಗಿತ್ತು
ಅಕ್ಷತಾ ಒಮ್ಮೆ ಮಾತನಾಡುತ್ತಾ ಶಿವಮೊಗ್ಗದಲ್ಲಿ ಇನ್ನೇನು ಮಾಡುವುದು ಎನ್ನುವಂತೆ ಅದು ನಿಟ್ಟುಸಿರೋ ಎನ್ನುವಂತೆ ಮಾತಾಡಿದ್ದರು
ಅದಕ್ಕೆ ನಾನು ಯಾಕೆ ಪ್ರಕಾಶನವನ್ನೇ ಮುನ್ನೆಡೆಸಬಾರದು? ಮುನ್ನುಗ್ಗು ಎಂದೆ
ಹೇಗೆ? ಎಂದು ಹಿಂದೇಟು ಹೊಡೆದ ಅಕ್ಷತಾಗೆ ‘ಅದೆಲ್ಲಾ ಸಿಂಪಲ್ ಅಮ್ಮ ಧುಮುಕು ಅಷ್ಟೇ’ ಅಂದೆ
ಅವರೋ ಧುಮುಕಿಯೇ ಬಿಟ್ಟರು
ಜಿ ಎಚ್ ನಾಯಕ್ ರ ‘ಮತ್ತೆ ಮತ್ತೆ ಪಂಪ’ ಕೃತಿ ತರಬಹುದು ಎಂದು ಅವರು ಯೋಚಿಸಿದಾಗ ಅದಕ್ಕೆ
ನಾನು ರಾಮೋಜಿ ಫಿಲಂ ಸಿಟಿ ಯಲ್ಲಿ ತೆಗೆದ ಜೋಡಿ ಮೊಗ್ಗಿನ ಫೋಟೋ ಮುಖಪುಟವಾಯಿತು.
ಗೆಳೆಯ ಎಂ ಆರ್ ಗುರುಪ್ರಸಾದ್ ಅವರಿಂದ ವಿನ್ಯಾಸವೂ ಆಯಿತು.
ಮುದ್ರಣ ಹೇಗೆ ಎಂದುಕೊಂಡಾಗ ಇಳಾ ಗುರುವನ್ನು ಪರಿಚಯಿಸಿದೆ.
ನೋಡನೋಡುತ್ತಾ ‘ಅಹರ್ನಿಶಿ’ ಎರಡನೆಯ ಕೂಸನ್ನು ಹಡೆದೇಬಿಟ್ಟಿತು
ಆ ನಂತರ ಅಕ್ಷತಾ ಗೆ ಹುಮ್ಮಸ್ಸು ಎನ್ನುವುದು ಕಟ್ಟೆಯೊಡೆಯಿತು
ಯು ಆರ್ ಅನಂತ ಮೂರ್ತಿ ಅವರ ಬ್ರೆಕ್ಟ್ ಕವಿತೆಗಳ ಅನುವಾದವನ್ನು ಹಿಡಿದು ನಿಂತರು.
‘ಮತ್ತೆ ಮತ್ತೆ ಬ್ರೆಕ್ಟ್’ ಎಂದು ಹೆಸರಿಟ್ಟರು .
ಆಗ ನಾನು ಗೆಳೆಯ ಅಪಾರನನ್ನು ಪರಿಚಯಿಸಿಕೊಟ್ಟೆ ಅಪಾರನೋ ಅದರ ಮುಖಪುಟ, ಒಳಪುಟ ವಿನ್ಯಾಸ ಎಷ್ಟು ಚೆನ್ನಾಗಿ ಕಟ್ಟಿಕೊಂಡನೆಂದರೆ
ಇಂದಿಗೂ ಅಪಾರನ ವಿನ್ಯಾಸಗಳಲ್ಲಿ ನನಗೆ ಇಷ್ಟವಾದದ್ದು ಅದು.

ಆ ನಂತರ ಅಕ್ಷತಾ ಜಗ್ಗಲೂ ಇಲ್ಲ ಕುಗ್ಗಲೂ ಇಲ್ಲ
ಕನ್ನಡ ಕಂಡ ಭಿನ್ನ ಆಲೋಚನೆಯ, ಆಳ ಅರಿವಿನ ಎಂ ಎಸ್ ಆಶಾದೇವಿ, ಅವರಲ್ಲದೆ ಕಿ ರಂ ನಾಗರಾಜ್ ಇಬ್ಬರೂ
ಅಕ್ಷತಾರ ಬೆಂಗಾವಲಿಗಿದ್ದರು.
ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ನನಗೆ ಅಚ್ಚುಮೆಚ್ಚು
ಅಕ್ಷತಾಳಿಗೆ ಆ ರೂಪಕ ಜೋಡಿಸಲು ನನಗೆ ಇಷ್ಟ
ಭೂಮಿಯೊಳಗೆ ಗೊತ್ತಿಲ್ಲದೆಯೇ ಹರಿಯುವ ನೀರಿನ ಸೆಲೆ ಇದ್ದಂತೆ
ಇದು ಈಗ ಎಲ್ಲರಿಗೂ ಗೊತ್ತು
‘ನಾವು ನಮ್ಮಲ್ಲಿ’ ಯ ಜೊತೆಗೆ ಆಕೆ ಅನೇಕ ಹೋರಾಟಗಳ, ಸಂಘಟನೆಗಳ, ಕಾವ್ಯಾಸಕ್ತರ, ಪ್ರಕಾಶಕರ, ತುಡುಗು ಹಿಂಡಿನ ‘ಕೋಟ್ಲೆ’ಯ ಹಿಂದೆ
ಸದಾ ಒಂದು ಜೀವಸೆಲೆಯಂತೆ ನಿಂತಿದ್ದಾರೆ
ಆಕೆಗೆ ಸ್ಪಷ್ಟ ನೋಟವಿದೆ
ಅದಕ್ಕೂ ಸ್ಪಷ್ಟವಾಗಿ ಯಾವ ಕೆಲಸ ಹೇಗೆ ಮಾಡಬೇಕು ಎಂದು ಗೊತ್ತಿದೆ
ಅದಕ್ಕೂ ಸ್ಪಷ್ಟವಾಗಿ ತನ್ನ ಒಂದೊಂದು ಕೆಲಸವೂ ಯಾವ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಿದೆ
ಕನ್ನಡ ಕಂಡ ಒಳ್ಳೆಯ ಕೃತಿಗಳನೇಕವು ಅಕ್ಷತಾಳ ಜೋಳಿಗೆಯಿಂದ ಬಂದದ್ದು ಎನ್ನುವುದು ಸಂತಸದ ಸಂಗತಿ
ಅಕ್ಷತಾ ಬರೆಯದೆ ಪಕ್ಕಕ್ಕೆ ಪೆನ್ನು ತೆಗೆದಿಟ್ಟಾಗ ಕಣ್ಣಲ್ಲೇ ಗದರಿ ‘ದಣಪೆಯಾಚೆ..’ ಎನ್ನುವ ಅಂಕಣ ಬರೆಸಿದೆ
ಅವಧಿಗಾಗಿ.
ಓದುಗರನ್ನು ನಿಜಕ್ಕೂ ಕೈ ಹಿಡಿದು ದಣಪೆಯಾಚೆ ಕರೆದೊಯ್ದ ಬರಹಗಳು ಅವು
ಸಧ್ಯದಲ್ಲೇ ಅದೂ ನಿಮ್ಮ ಅಂಗೈನಲ್ಲಿರುತ್ತದೆ.
ಅಕ್ಷತಾ ಎಂದರೇ ದಣಪೆ
ದಣಪೆ ಎನ್ನುವುದು ನಮ್ಮ ನಿಮ್ಮ ಎದೆ ಅಂಗಳಕ್ಕಿರುವ ದಾರಿ
ಅದು ಹೆದ್ದಾರಿಯಲ್ಲ
ಆತ್ಮೀಯ ದಾರಿ
ಅಕ್ಷತಾ ಪ್ರೀತಿ ಹಾಗೂ ಜಗಳ ಎರಡಲ್ಲೂ ಮಿಂದವರಿಗೆ ಅಕ್ಷತಾ ಎನ್ನುವುದು ಈ ಲೋಕಕ್ಕೆ ಬೇಕಿರುವ ಕಕ್ಕುಲಾತಿ ಎನ್ನುವುದು ಗೊತ್ತಾಗಿ ಹೋಗುತ್ತದೆ
ಅಕ್ಷತಾ ಇನ್ನೂ ಬರೆಯುತ್ತಿರಲಿ ಬರೆಸುತ್ತಿರಲಿ
ದಣಪೆ ದಾಟಿ ಹೊರಬರಲು ಹಾತೊರೆಯುವ ಮನಸ್ಸುಗಳಿಗೆ ಕೀಲಿ ಕೈಯಾಗಲಿ






ನವ್ಯ ಕವಿಗಳನ್ನು ಕಡಲ ತೀರಕ್ಕೆ ತಲುಪಿಸುವ ತಮ್ಮ ಮನೋಭಾವಕ್ಕೆ ಶರಣು ಸರ್.
ಅಕ್ಷತಾವರಿಗೆ ಅಭಿನಂದನೆಗಳು.
ಅಭಿನಂದನೆಗಳು ಅಕ್ಷತಾ ಮೆಡಮ್
ಥ್ಯಾಂಕ್ಸ್ ಮೋಹನ್ …. ಇದನ್ನು ನನ್ನ ಪ್ರೀತಿಯ ಶಾಂತಕ್ಕ (ಜಿ .ಪಿ ಬಸವರಾಜು ಸರ್ ಹೆಂಡತಿ) ಅಕ್ಷತಾ ಎನ್ನುವ ಟೊಣಪೆ ಅಂತ ಓದ್ಕೊಂಡು … ಫೋನ್ ಮಾಡಿದ್ರು ….!!
Congrats to Akshata Mam
ಅಕ್ಷತಾಗೆ ಎಲ್ಲಾ ರೀತಿಯಿಂದ ನೋಡಿದರೂ ಅಹರ್ನಿಶಿ ಅನ್ವರ್ಥ. ಈ ಅಹರ್ನಿಶಿ ಜೋಳಿಗೆಯಿಂದ ನನ್ನ (ಕಥಾ ಸಂಕಲನ) `ಜೋಗತಿ ಜೋಳಿಗೆ’ ಹೊರ ಬಂದಿದ್ದೆಂಬ ಅಭಿಮಾನದ ಜೊತೆಗೆ ಈ ಪ್ರೀತಿಯ ಲೇಖನಕ್ಕೆ ಧನ್ಯವಾದಗಳು. ನಿಮಗಿಷ್ಟವಾದ ಅಕ್ಷತಾ ಕವಿತೆಗಳಲ್ಲಿ ಒಂದನ್ನ ಅವಧಿಯ ಓದುಗರಿಗೆ ಈಗೊಮ್ಮೆ ಓದಿಸಿಬಿಡಿ ಮೋಹನ್ ಅವರೇ.
ಅನುಪಮಾ ಪ್ರಸಾದ್.
ಅಭಿನಂದನೆಗಳು ಮೆಡಂ…