ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಕ್ಕ’ ನೀಳ್ಗತೆ – ಭಾಗ ೧

ಅಕ್ಕನ ಮದುವೆ

-ಟಿ.ತಿಮ್ಮಪ್ಪ

ಭಾಗ-1
ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು ತೊಡುವ ಸಂಭ್ರಮವಾದರೆ ಇನ್ನೊಂದು ಕಡೆ ಚಿಕ್ಕಂದಿನಿಂದಲೂ ತನ್ನನ್ನು ಕೈಹಿಡಿದುಕೊಂಡು ಎಲ್ಲಿಗೆ ಹೋದರೂ ಕರೆದುಕೊಂಡು ಹೋಗುತ್ತಿದ್ದ, ತನಗೆ ಅನ್ನ ಮಾಡಿ ಉಣಿಸಿ ಅವಳೇ ಒಗೆದಿದ್ದ ಇಸ್ಕೂಲಿನ ಯೂನಿಫಾರ್ಮ ಬಟ್ಟೆ ತೊಡಿಸಿ ತಲೆ ಬಾಚಿ ಇಸ್ಕೂಲಿಗೆ ಕಳುಹಿಸುತಿದ್ದ, ತಿಳಿಯದ ಗಣಿತದ ಲೆಕ್ಕಗಳನ್ನು ಮಾಡಿಕೊಡುತಿದ್ದ ಅಕ್ಕ ತನ್ನನ್ನು ಬಿಟ್ಟು ಬೇರೆಯ ಮನೆಗೆ ಹೋಗುತ್ತಾಳೆ ಎನ್ನುವ ದುಃಖವೂ ಮನಸ್ಸಿನಲ್ಲಿ ಮೂಡಿತ್ತು. ತನ್ನ ಸ್ನೇಹಿತ ಮಂಜನಿಗೆ ಕೊಡಬೇಕೆಂದು ಅಪ್ಪನ ಬಳಿ ಕೇಳಿ ತಂದಿದ್ದ ಲಗ್ನಪತ್ರಿಕೆ ಯಾಕೋ ನನ್ನ ಬಳಿಯೇ ಇರಲಿ ಎನಿಸಿ ಶಾಲೆ ಬಿಟ್ಟ ಮೇಲೆ ಮಂಜನಿಗೆ ‘ಮಂಜ.. ಭಾನುವಾರ ಯಡೂರು ದೇವಸ್ಥಾನದಲ್ಲಿ ನಮ್ಮಕ್ಕುನ ಮದುವೆ.. ಊರಿಂದ ಟೆಂಪೋ ಮಾಡಿದೀವಿ.. ಬಾರೋ..’ ಅಂತ ಬಾಯಿಮಾತಿನಲ್ಲಿಯೇ ಮದುವೆಗೆ ಕರೆದ ಪುಟ್ಟನಿಗೆ ಮಂಜ ‘ಬತ್ತೀನಿ ಕಣೋ..’ಅಂದ. ‘ಮರೀಬ್ಯಾಡ..’ ಎಂದು ಹೇಳಿ ಉತ್ಸಾಹದಿಂದ ಮನೆಯ ಕಡೆ ಹೊರಟ ಪುಟ್ಟ.
ಪುಟ್ಟನಿಗೆ ಅಕ್ಕನಂತೆಯೇ ಯಡಿಯೂರಿನಲ್ಲಿ ಪಿಯೂಸಿ ಮುಗಿಸಿದ್ದ ಊರಿನ ಆಕೆಯ ಸ್ನೇಹಿತೆಯರೆಲ್ಲರೂ ಕಾಲೇಜು ಓದಲು ಕುಣಿಗಲ್ಲಿಗೆ ಹೋಗಿ ಬರುತ್ತಿರುವುದು ತಿಳಿದಿತ್ತು. ‘ಅಕ್ಕನೂ ಕಾಲೇಜಿಗೆ ಹೋಗಿ ಬರ್ಲಿ ಬಿಡವ್ವೋ..’ ಎಂದ ಅವನ ಮಾತಿಗೆ ಅವ್ವ, ‘ನಾವೇನು ಕುಬೇರುನ ಮೊಮ್ಮಕ್ಕಳಾ.. ಹೆಂಗೋ ಅವಳಿಗೊಂದು ಮದ್ವೆ ಆಗಿ ನಾಲೋರಂತೆ ಸಂಸಾರ ಮಾಡ್ಕಂಡಿದ್ರೆ ಸಾಕು’ ಎಂದು ಹೇಳಿ ನಿಟ್ಟುಸಿರುಬಿಟ್ಟಿದ್ದು ಯಾಕೆಂದು ಪುಟ್ಟನಿಗೆ ತಿಳಿದಿರಲಿಲ್ಲ. ಆದರೆ ಅಕ್ಕ ಯಡಿಯೂರಿನಲ್ಲಿ ಆಟೋ ಓಡಿಸುತ್ತಿದ್ದ ಕೊನೆಯ ಮನೆ ರಾಜಣ್ಣನ ಜೊತೆ ಆಗಾಗ ನಗುತ್ತಾ ಮಾತನಾಡುತ್ತಾ ನಿಂತಿರುತ್ತಿದ್ದುದು ಕಂಡು ಅವಳು ಅವನನ್ನೇ ಮದುವೆಯಾಗುತ್ತಾಳೇನೋ ಎಂಬ ಸಂಶಯ ಅವನಿಗೆ ಬಂದಿತ್ತು. ಆಗೊಮ್ಮ ಈಗೊಮ್ಮೆ ರಾಜಣ್ಣ ಅವನ ಆಟೋದಲ್ಲಿ ತನ್ನನ್ನು ಕುಳ್ಳಿರಿಸಿಕೊಂಡು ಊರಿನಿಂದ ಮಾಗಡಿಪಾಳ್ಯ ಕ್ರಾಸಿನ ರಸ್ತೆಯವರೆಗೂ ಕರೆದುಕೊಂಡು ಹೋಗುತ್ತಿದ್ದುದು ಪುಟ್ಟನಿಗೂ ಖುಷಿ ಕೊಡುವ ವಿಚಾರವೇ ಆಗಿತ್ತು. ರಾಜಣ್ಣ ಒಂದು ದಿನ ‘ಏನೋ ಪುಟ್ಟ.. ನಿಮ್ಮಕ್ಕನಿಗೆ ಯಾವ ಹೂವು ಇಷ್ಟಾನೋ..’ ಎಂದು ಕೇಳಿದಾಗ ಪುಟ್ಟನಿಗೆ ತನ್ನ ಅಕ್ಕನಿಗೆ ಯಾವ ಹೂವು ಇಷ್ಟವೆಂದು ಸರಿಯಾಗಿ ತಿಳಿದಿರಲಿಲ್ಲ. ಸುಮ್ಮನೆ ಅವಳಿಗೆ ಯಾವಾಗಲೂ ಕನಕಾಂಬರ ಹೂವು ಕಂಡರೆ ತುಂಬಾ ಇಷ್ಟ ಅಂತ ಹೇಳಿದ್ದ. ಮಾರನೇ ದಿನ ಪುಟ್ಟ ಇಸ್ಕೂಲಿನಿಂದ ಬಂದಾಗ ದಾರಿಯಲ್ಲಿ ಕಾಯುತಿದ್ದ ರಾಜಣ್ಣ ಪೇಪರಿನಲ್ಲಿ ಸುತ್ತಿದ್ದ ಕನಕಾಂಬರ ಹೂವನ್ನು ‘ನಿಮ್ಮಕ್ಕನಿಗೆ ಕೊಡು..’ ಅಂತ ಹೇಳಿ ಅವನ ಕೈಯಲ್ಲಿ ಕೊಟ್ಟಿದ್ದ. ರಾಜಣ್ಣ ಕೊಟ್ಟಿದ್ದ ಹೂವನ್ನು ಕೈಯಲ್ಲಿಯೇ ಹಿಡಿದುಕೊಂಡು ಬಂದ ಪುಟ್ಟ ‘ಅಕ್ಕೋ.. ತಗೋಳೇ ರಾಜಣ್ಣ ಕೊಟ್ಟ..’ ಎಂದಾಗ ಅಕ್ಕ ಗಾಬರಿಯಾಗಿ ‘ಅವ್ವುಂಗೇನಾದ್ರೂ ಗೊತ್ತಾದ್ರೆ ಇಬ್ರುಗೂ ಗಾಚಾರ ಬಿಡಿಸಿಬುಡ್ತಾಳೆ.. ಮೊದ್ಲು ಓಡೋಗಿ ಅವ್ನಿಗೇ ವಾಪಸ್ ಕೊಟ್ಬುಟ್ಟು ಬರೋಗು..’ ಅಂದಳು. ಪುಟ್ಟ ಬ್ಯಾಗನ್ನು ನಡುಮನೆಯಲ್ಲಿ ಬಿಸಾಕಿ ಓಡಿಹೋಗಿ ‘ಅಕ್ಕುಂಗೆ ಬ್ಯಾಡ್ವಂತೆ ತಗೋಳಪ್ಪ..’ಅಂತ ಹೇಳಿ ಹೂವನ್ನು ಅವನ ಆಟೋದಲ್ಲಿಟ್ಟು ‘ಯಾಕಂತೋ..’ ಅಂದ ರಾಜಣ್ಣನಿಗೆ ‘ನಂಗೊತ್ತಿಲ್ಲಪ್ಪ ..’ ಅಂದವನೇ ಓಡಿ ಬಂದಿದ್ದ. ಅಂದೇ ಕಡೆಯ ದಿನವಾಗಿತ್ತು. ಮತ್ತೆ ಅಕ್ಕ ರಾಜಣ್ಣನೊಂದಿಗೆ ಮಾತನಾಡುವುದನ್ನು ಪುಟ್ಟ ನೋಡಿರಲೇ ಇಲ್ಲ.
ಇದಾದ ಸುಮಾರು ದಿನಗಳ ಬಳಿಕ ಒಂದು ದಿನ ರಾತ್ರಿ ಎಲೆಕ್ಟ್ರಿಕ್ ದೀಪದ ಮಂಕು ಬೆಳಕಲ್ಲಿ ಪುಟ್ಟ ಶಾಲೆಯಲ್ಲಿ ಗಣಿತದ ಮೇಷ್ಟ್ರು ಕೊಟ್ಟಿದ್ದ ಯಾವುದೋ ಲೆಕ್ಕಗಳು ಅರ್ಥವಾಗದೇ ತಲೆಕೆರೆದುಕೊಂಡು ಕುಳಿತಿದ್ದ. ಅಕ್ಕ ನಿಂಗೆಷ್ಟು ಬರ್ತದೋ ಮೊದ್ಲು ಮಾಡು ಬರದೇ ಇದ್ರೆ ಆಮೇಲೆ ನಾನು ಹೇಳಿಕೊಡ್ತೀನಿ ಅಂತ ಹೇಳಿದ್ದಳು. ಇವನು ಲೆಕ್ಕದ ಬಗ್ಗೆ ತಲೆಕೆಡಿಸಿಕೊಂಡಿರುವಾಗ ಮನೆಯೊಳಗೆ ಬಿಳಿಯ ಪ್ಯಾಂಟು ಬಿಳಿಯ ಜುಬ್ಬಾ ತೊಟ್ಟಿದ್ದ ಕಪ್ಪನೆಯ ಕುಳ್ಳಗಿನ ಆಸಾಮಿಯೊಬ್ಬ ಬಗಲಿಗೆ ಬ್ಯಾಗು ತಗುಲಿಹಾಕಿಕೊಂಡು ಬಂದ. ಅವ್ವ ಅವನಿಗೆ ಚಾಪೆ ಹಾಸಿ ‘ಕುತ್ಕೊಳಣ್ಣಾ..’ ಎಂದು ಹೇಳಿ ಕಾಫಿ ಮಾಡಿಕೊಟ್ಟಿದ್ದಳು. ಅಷ್ಟರಲ್ಲಿ ಅಪ್ಪನೂ ಬಂದು ಅವನನ್ನು ‘ಚೆನ್ನಾಗಿದೀರಾ..’ ಎಂದು ಕೇಳಿ ಪಕ್ಕದಲ್ಲಿಯೇ ಕುಳಿತುಕೊಂಡ.
ಬಂದ ಆಸಾಮಿ ಕಾಫಿ ಕುಡಿದು ನಿಧಾನವಾಗಿ ಮಾತಿಗೆ ಆರಂಭಿಸಿದ್ದ. ‘ಏವನ್ ಕುಟುಂಬದ ಹುಡುಗ. ಒಬ್ನೇ ಮಗ. ಬೆಂಗಳೂರಲ್ಲಿ ಸಣ್ಣುದೊಂದು ಬಿಸಿನೆಸ್ ಮಾಡ್ಕಂಡಿದಾನೆ… ಸ್ವಂತ ಮಹಡಿ ಮನೆ ಐತೆ. .ಮೇಲ್ಗಡೆ ಅವ್ರು ಇದ್ಕಂಡು ಕೆಳಗೆ ಬಾಡಿಗೆ ಕೊಟ್ಟಿದಾರೆ. ಒಳ್ಳೇ ಜನ.. ನಿಮ್ಮುಡುಗೀನ ರಾಣಿಯಂಗೆ ನೋಡ್ಕೋತಾರೆ.. ಹೂಂ ಅಂದ್ರೆ ಕರ್ಕಂಡು ಬತ್ತೀನಿ..’ ಅಂತ ಕೇಳಿದಾಗ ಅವ್ವ ‘ಅಣ್ಣೋ.. ನಮಗೇನು ಗೊತ್ತಾಯ್ತದೆ.. ಕಾಲದಿಂದ ನೀವು ನಮ್ಮನ್ನ ನೋಡಿರೋರು.. ಒಂದು ಜಗಳಕ್ಕೋದೋರಲ್ಲ.. ಗುದ್ದಾಟುಕ್ಕೋದೋರಲ್ಲ.. ಏನೋ ಆ ಪರಮಾತ್ಮುನ ದಯೆಯಿಂದ ನಮ್ಮ ಮಗಳು ಸುಖವಾಗಿದ್ರೆ ನಮಗೆ ಅದೇ ಸಾಕು.. ನಿಮ್ಮದೇ ಎಲ್ಲಾ ತೀಮರ್ಾನ’ ಅಂದಳು. ಅಪ್ಪನೂ ಹೌದೆನ್ನುವಂತೆ ತಲೆಯಾಡಿಸಿದ್ದ. ಪುಟ್ಟನಿಗೆ ಬೆಂಗಳೂರಿನ ಹೆಸರು ಕೇಳಿ ತುಸು ಬೇಸರವಾಯಿತು. ಬೆಂಗಳೂರು ಅಷ್ಟೊಂದು ದೂರ, ಇಲ್ಲೇ ಹತ್ರ ಆಗಿದ್ರೆ ಆವಾಗಾವಾಗ ಹೋಗಿ ಅಕ್ಕುನ್ನ ನೋಡಿಕೊಂಡು ಬರಬಹುದಿತ್ತು ಅಂತ ಅವನಿಗೆ ಅನ್ನಿಸಿತು. ಅಕ್ಕನಿಗೆ ಇಷ್ಟವಾಗಿರಬಹುದೇನೋ ಎಂದುಕೊಂಡು ಎದ್ದವನೇ ಅಡುಗೆ ಮನೆಯಲ್ಲಿ ಗೋಡಗೊರಗಿ ನಿಂತಿದ್ದ ಅಕ್ಕನ ಬಳಿ ಹೋಗಿ ‘ಅಕ್ಕೋ.. ಕೇಳಿಸ್ಕಂಡಾ..’ ಅಂದಿದ್ದಕ್ಕೆ ಅವಳು ನಾಚುತ್ತಾ ‘ಹೂಂ..’ ಅಂದಿದ್ದು ಕಂಡು ಪುಟ್ಟನಿಗೆ ಸೋಜಿಗವಾಯಿತು.
ಅದಾದ ನಾಲ್ಕು ದಿನದ ನಂತರ ಅಕ್ಕನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದು ಬೆಳ್ಳಂಬೆಳಿಗ್ಗೆಯೇ ಚಿಕ್ಕವ್ವ-ಚಿಕ್ಕಪ್ಪ ಮನೆಗೆ ಬಂದಿದ್ದರು. ಅವ್ವ ಮತ್ತು ಚಿಕ್ಕವ್ವ ಅಡಿಗೆ ಮನೆಯಲ್ಲಿ ಓಡಾಡಿಕೊಂಡು ಏನೇನೋ ಮಾಡುತಿದ್ದರು. ಉಪ್ಪಿಟ್ಟಿನ ವಾಸನೆ ಪುಟ್ಟನ ಮೂಗಿಗೆ ಘಮ್ಮೆಂದು ಅಡರಿತು. ಅಕ್ಕ ಸ್ನಾನ ಮಾಡಿ ಚಿಕ್ಕವ್ವನ ರೇಸಿಮೆ ಸೀರೆ ಉಟ್ಟಿದ್ದಳು. ಮನೆಯಲ್ಲಿಯೇ ಇರೋಣವೆಂದು ಅವನಿಗೆ ಮನಸ್ಸಾದರೂ ಇಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾಕೋ ಬದ್ಮಾಷ್ ಕ್ಲಾಸಿಗೆ ಬಂದಿರಲಿಲ್ಲ ಅಂತ ಬಯ್ಯುತ್ತಾರೆ ಎಂದು ಭಯವಾಗಿ ಬ್ಯಾಗು ತಗುಲಿ ಹಾಕಿಕೊಂಡು ಇಸ್ಕೂಲಿಗೆ ಹೋದರೂ ಮನಸ್ಸೆಲ್ಲಾ ಮನೆಯಲ್ಲಿಯೇ ಇತ್ತು. ಸಾಯಂಕಾಲ ಇಸ್ಕೂಲಿನಿಂದ ಓಡೋಡಿಬಂದವನೇ ‘ಅಕ್ಕೋ… ಭಾವ ಹೆಂಗವ್ನೆ’ ಎಂದು ಅಕ್ಕನನ್ನು ಕೇಳಿದ. ‘ಚೆನ್ನಾಗವ್ನೆ.. ಆದ್ರೆ ತಲೆ ಮೇಲೆ ಎರಡು ಕೊಂಬಿದಾವೆ..’ ಅಂತ ಹೇಳಿ ಅಕ್ಕ ಬಾಯಿ ತುಂಬಾ ನಕ್ಕಿದ್ದು ಕಂಡು ಪುಟ್ಟನಿಗೆ ಅಕ್ಕ ಮದುವೆಗೆ ರೆಡಿಯಾಗಿಬುಟ್ಟವಳೆ ಅನ್ನಿಸಿ ಹೊಟ್ಟೆಕಿಚ್ಚಾಯಿತು. ರಾತ್ರಿ ಊಟ ಮಾಡಿದ ನಂತರ ಅಪ್ಪ ಮತ್ತು ಅವ್ವ ಇಬ್ಬರೂ ಎಲೆ ಅಡಿಕೆ ಹಾಕಿಕೊಂಡು ಬಂದು ಪಡಸಾಲೆಯಲ್ಲಿ ಸಮಾಧಾನವಾಗಿ ಕುಳಿತು ತಿಟ್ಟಿನ ಹತ್ತಿರ ತಕ್ಕಲು ಬಿದ್ದಿದ್ದ ಒಂದು ಎಕರೆ ಹೊಲವನ್ನು ಮಾರಿಬಿಡಾನ ಎಂದು ಮಾತನಾಡಿಕೊಂಡಿದ್ದು ಕೇಳಿಸಿತು.

ಅಕ್ಕನಿಗೆ ಮದುವೆ ಗೊತ್ತಾದ ಮೇಲೆ ಒಂದು ದಿನ ಅಪ್ಪ ಮತ್ತು ಚಿಕ್ಕಪ್ಪ ಇಬ್ಬರೂ ಒಗೆದು ಮಡಿ ಮಾಡಿದ್ದ ಶರಟು ಪಂಚೆಗಳನ್ನು ಧರಿಸಿ ಬೆಂಗಳೂರಿಗೆ ಹೊರಟಿದ್ದರು. ಅಪ್ಪ ಕೈಯಲ್ಲಿ ಖಾಕಿ ಕೈಚೀಲವನ್ನು ಸುತ್ತಿ ಹಿಡಿದುಕೊಂಡಿದ್ದ. ಅವರು ಹೊರಡುವಾಗ ಅವ್ವ ‘ಜಾಪಾನ.. ಎಲ್ಲಾದ್ರೂ ಉದುರಿಸಿಬುಟ್ಟೀಯಾ..’ ಎಂದು ಎರಡೆರಡು ಬಾರಿ ಅಪ್ಪನನ್ನು ಎಚ್ಚರಿಸಿದ್ದಳು. ಅಪ್ಪ ಮತ್ತು ಚಿಕ್ಕಪ್ಪ ಮನೆಯಿಂದ ಹೋದ ಮೇಲೆ ಪುಟ್ಟನಿಗೆ ಕುತೂಹಲವಾಗಿ ‘ಅವ್ವೋ.. ಅದೇನವ್ವೋ.. ಅಪ್ಪ ಬ್ಯಾಗಲ್ಲಿ ಸುತ್ಕಂಡು ತಗಂಡೋಗಿದ್ದು’ ಎಂದು ಕೇಳಿದ. ‘ನಿಮ್ಮ ಭಾವುಂಗೆ ವಾಚು, ಉಂಗುರ, ಕತ್ತಿಗೆ ಚೈನು, ಬಟ್ಟೆ, ಹೊಸ ಬೈಕು ಎಲ್ಲಾ ತಗಳ್ಳಕ್ಕೆ ದುಡ್ಡು ಕಣೋ ಮಗಾ..’ಎಂದ ಅವ್ವನ ಮಾತು ಕೇಳಿ ಪುಟ್ಟನಿಗೆ ‘ಅದುಕ್ಕೆಲ್ಲಾ ನಾವೇ ದುಡ್ಡು ಕೊಡಬೇಕಾ..’ ಎನಿಸಿದರೂ ಮತ್ತೆ ಅವ್ವನನ್ನು ಪ್ರಶ್ನೆ ಕೇಳಲಿಲ್ಲ.
ಮದುವೆಯ ದಿನ ಮಂಜ ಹೇಳಿದಂತೆ ಬಂದಿದ್ದ. ಪುಟ್ಟ ಹೊಸ ಪ್ಯಾಂಟು ಶರಟು ತೊಟ್ಟು ಯಾವುದೋ ಸಂಭ್ರಮದಿಂದ ಅವನ ಜೊತೆ ಓಡಾಡುತಿದ್ದ. ಅಕ್ಕನ ಜೊತೆ ಅವಳ ಕಾಲೇಜು ಸ್ನೇಹಿತೆಯರು ಮತ್ತು ಊರಿನ ವಾರಿಗೆಯ ಹುಡುಗಿಯರು ಇದ್ದರು. ಇದರಿಂದಾಗಿ ಪುಟ್ಟನಿಗೆ ಅವಳ ಜೊತೆ ಹೆಚ್ಚು ಸಮಯ ಕಳೆಯುವುದು ಸಾಧ್ಯವಾಗಲಿಲ್ಲ. ಅಲ್ಲಿಯವರಗೆ ಭಾವವನ್ನು ನೋಡಿರದ ಪುಟ್ಟನಿಗೆ ಭಾವ ಪರವಾಗಿಲ್ಲ.. ರಾಜಣ್ಣನಷ್ಟೇನು ಚೆನ್ನಾಗಿಲ್ಲ ಅನ್ನಿಸಿತು. ಮದುವೆಗೆ ಬಂದ ರಾಜಣ್ಣ ಪುಟ್ಟನಿಗೆ ಮುಖ ಕೊಟ್ಟು ಮಾತನಾಡಿಸದಿದ್ದುದು ಕಂಡು ಅವನಿಗೆ ಒಂದು ತರ ಆಯಿತು. ವಾಲಗ ಡೋಲಿನ ಸದ್ದಿನ ನಡುವೆ ಅಕ್ಕ ತಲೆ ತಗ್ಗಿಸಿ ಭಾವನಿಂದ ತಾಳಿ ಕಟ್ಟಿಸಿಕೊಂಡಿದ್ದನ್ನು ನೋಡಿ ‘ಅಕ್ಕ ಇನ್ನು ನಮ್ಮನ್ನೆಲ್ಲಾ ಬಿಟ್ಟು ಭಾವನ ಮನೆಗೆ ಹೊರಡುತ್ತಾಳೆ’ ಎಂದು ಅನಿಸಿ ಏನನ್ನೋ ಕಳೆದುಕೊಂಡಂತೆ ಭಾಸವಾಗತೊಡಗಿತು.
ಮದುವೆ ಮುಗಿದು ಎಲ್ಲರೂ ಊಟಮಾಡಿ ಹೊರಟು ಹೋದ ಮೇಲೆ ಅಕ್ಕ, ಭಾವನ ಜೊತೆ ಹೊರಡಲು ಸಿದ್ಧವಾದಳು. ಬೆಂಗಳೂರಿನಿಂದ ಬಸ್ಸು ಮಾಡಿಕೊಂಡು ಬಂದಿದ್ದ ಭಾವನ ಕಡೆಯವರು ಎಲ್ಲರೂ ಆಗಲೇ ಬಸ್ಸಿನಲ್ಲಿ ಕುಳಿತಿದ್ದರು. ಅಕ್ಕನನ್ನು ಕಳುಹಿಸಲು ಅಲ್ಲಿ ನಿಂತಿದ್ದ ಚಿಕ್ಕಮ್ಮ-ಚಿಕ್ಕಪ್ಪ, ಅತ್ತೆ-ಮಾವ ಮತ್ತು ತಾತ-ಅಜ್ಜಿಯರಿಗೆಲ್ಲಾ ಕಾಲಿಗೆ ಬಿದ್ದ ಅಕ್ಕ ಕೊನೆಯದಾಗಿ ಅವ್ವ-ಅಪ್ಪನ ಬಳಿ ಬಂದಳು. ಕಾಲಿಗೆ ಬಿದ್ದ ಅಕ್ಕನನ್ನು ಎತ್ತಿ ತಬ್ಬಿಕೊಂಡ ಅವ್ವ ‘ಒಳ್ಳೇ ಹೆಸ್ರು ತರಬೇಕು ಕಣವ್ವಾ..’ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಾಗ ಪುಟ್ಟನಿಗೂ ಅಳು ತಡೆಯಲಾಗಲಿಲ್ಲ. ಅಪ್ಪ ಹೆಗಲ ಮೇಲಿದ್ದ ಹೊಸ ಟವೆಲನ್ನ ಬಾಯಿಯಲ್ಲಿ ಬಿಗಿಯಾಗಿ ಕಚ್ಚಿ ಹಿಡಿದು ನಿಂತಿದ್ದ. ಅಕ್ಕ ಕಾಲಿಗೆ ಬೀಳುವ ಮುಂಚೆಯೇ ಅವಳನ್ನು ಹಿಡಿದು ಮೇಲೆತ್ತಿ ತಲೆಸವರಿದವನು ಏನೂ ಮಾತನಾಡಲೇ ಇಲ್ಲ. ಸುರಿಯುತ್ತಿದ್ದ ಕಣ್ಣೀರನ್ನು ಮುಂಗೈಯಲ್ಲಿ ಒರೆಸಿಕೊಂಡ ಅಕ್ಕ ಪುಟ್ಟನ ಬಳಿಗೆ ಬಂದು ‘ಚೆನ್ನಾಗಿ ಓದ್ಕೋ..’ ಅಂದಾಗ ಪುಟ್ಟ ಅಳುತ್ತಾ ಊ.. ಊ.. ಅಂತ ತಲೆಯಲ್ಲಾಡಿಸಿದ. ‘ಬೆಂಗಳೂರಿಗೆ ಹೋದ ಮ್ಯಾಲೆ ನನ್ನುನ್ನ ಮರ್ತುಬಿಡಬ್ಯಾಡ..’ ಎಂದು ಹೇಳಬೇಕೆಂದುಕೊಂಡ ಪುಟ್ಟನಿಗೆ ಗಂಟಲು ಕಟ್ಟಿದಂತಾಗಿ ಮಾತನಾಡಲು ಆಗಲೇ ಇಲ್ಲ. ಅಷ್ಟರಲ್ಲಿ ‘ಟೈಮಾಯ್ತು.. ಎಷ್ಟೊತ್ತು ಕಾಯೋದು..’ ಎಂದು ಕೂಗಿಕೊಳ್ಳುತ್ತಿದ್ದ ಭಾವನ ಅಮ್ಮನ ಧ್ವನಿ ಕೇಳಿ ಅಕ್ಕ ಸರಸರನೆ ನಡೆದು ಹೋಗಿ ಬಸ್ಸು ಹತ್ತಿ ಕುಳಿತಳು.
ಭಾಗ-2

ಅಕ್ಕ, ಭಾವನ ಜೊತೆ ಬಸ್ಸಿನಲ್ಲಿ ಹೊರಟುಹೋದ ಮೇಲೆ ಅಕ್ಕನನ್ನು ಕಳುಹಿಸಲು ನಿಂತಿದ್ದ ಎಲ್ಲರೂ ಟೆಂಪೋ ಹತ್ತಿದರು. ಮಂಜ ಆಗಲೇ ಹೊರಟುಹೋಗಿದ್ದ. ಪುಟ್ಟ ಟೆಂಪೋದಲ್ಲಿ ಅವ್ವನ ಪಕ್ಕ ಕುಳಿತು ಊರಿಗೆ ಬಂದ. ಅವೊತ್ತು ರಾತ್ರಿ ಚಿಕ್ಕಮ್ಮ, ಅತ್ತೆ ಮತ್ತು ಅಜ್ಜಿ ಪುಟ್ಟನ ಮನೆಯಲ್ಲಿಯೇ ಉಳಿದಿದ್ದರು. ಅವರೆಲ್ಲಾ ಇದ್ದರೂ ಪುಟ್ಟನಿಗೇಕೋ ಅಕ್ಕನಿಲ್ಲದೇ ಮನೆ ಖಾಲಿ ಖಾಲಿ ಎನಿಸಿತೊಡಗಿತು. ಬೇಕೋ ಬೇಡವೋ ಎಂಬಂತೆ ಮದುವೆಯಲ್ಲಿ ಉಳಿದಿದ್ದ ಅನ್ನ-ಸಾರನ್ನೇ ತಿಂದು ಪಡಸಾಲೆಯಲ್ಲಿ ಕುಳಿತಿದ್ದ ಅವ್ವನ ತೊಡೆಯ ಮೇಲೆ ಮಲಗಿದರೂ ಅವನಿಗೆ ಯಾಕೋ ಸಮಾಧಾನವಾಗಲಿಲ್ಲ. ನಡುಮನೆಗೆ ಬಂದು ಮೂಲೆಯಲ್ಲಿದ್ದ ಚಾಪೆ ಹಾಸಿಕೊಂಡು ಮಲಗುವಾಗ ಅಕ್ಕನ ದಿಂಬನ್ನು ಪಕ್ಕದಲ್ಲಿ ಇರಿಸಿಕೊಂಡರೂ ಅವನ ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಬೆಂಗಳೂರಿನ ಭಾವನ ಮನೆಯಲ್ಲಿ ಅಕ್ಕ ಏನು ಮಾಡುತಿದ್ದಾಳೋ ಎಂದು ಯೋಚನೆಯಾಯಿತು. ಎಷ್ಟೋ ಹೊತ್ತಾದ ಮೇಲೆ ಹೊರಗೆ ಕುಳಿತಿದ್ದ ಅಜ್ಜಿ ಬಂದು ಪುಟ್ಟನ ಪಕ್ಕದಲ್ಲಿದ್ದ ಅಕ್ಕನ ದಿಂಬನ್ನು ಎಳೆದುಕೊಂಡು ಮಲಗಿದಳು. ನಿದ್ರೆ ಬಾರದೆ ಪದೇ ಪದೇ ಮಗ್ಗುಲು ಬದಲಿಸುತಿದ್ದ ಪುಟ್ಟನನ್ನು ಕಂಡು ಅಜ್ಜಿ ‘ಅದ್ಯಾಕಂಗೆ ಮುಲುಗರಿತಿದೀಯೋ.. ಸುಮ್ಮುನೆ ಮಲಕ್ಕೋ..’ ಎಂದಳು. ತಕ್ಷಣವೇ ಪುಟ್ಟ ‘ಅಜ್ಜೀ.. ಅಕ್ಕ ಊಟ ಮಾಡಿರ್ತಾಳಾ..’ಅಂದ. ‘ಇನ್ನೇನು ಉಪಾಸ ಇರ್ತಾಳಾ.. ಅಲ್ಲಿರೋರು ನಮ್ಮಂಗೆ ಮನುಸ್ರೇ ಅಲ್ವಾ..’ಅಂದ ಅಜ್ಜಿಯ ಮಾತು ಕೇಳಿ ಪುಟ್ಟನಿಗೆ ತುಸು ಸಮಾಧಾನವಾಯಿತು. ಒಡನೆಯೇ ಅಕ್ಕನ ಜೊತೆಯಲ್ಲಿ ಅಕ್ಕಿಯ ಗಂಟು ಹಿಡಿದು ಹೋಗಿದ್ದ ಚಿಕ್ಕಪ್ಪನ ಮಗಳು ಚಿಕ್ಕಕ್ಕನ ನೆನಪಾಗಿ ಹೆಂಗೋ ಇಬ್ರು ಅವ್ರೆ ಬಿಡು ಅಂದುಕೊಂಡು ಮುಸುಕು ಹಾಕಿ ಮಲಗಿದ.
ಮತ್ತೆ ಎರಡು ದಿನ ಬಿಟ್ಟು ಅಕ್ಕ, ಭಾವನ ಜೊತೆಯಲ್ಲಿ ಬಂದಳು. ಭಾವನಿಗೆ ಇದ್ದ ಕಡೆಯೇ ಊಟ ತಿಂಡಿ ಎಲ್ಲಾ ಸಪ್ಲೇ ಮಾಡುತಿದ್ದ ಅಕ್ಕನ ಜೊತೆ ಜಾಸ್ತಿ ಹೊತ್ತು ಕಳೆಯುವುದು ಪುಟ್ಟನಿಗೆ ಆಗಲಿಲ್ಲ. ಅಕ್ಕ-ಭಾವ ಇಬ್ಬರೂ ರಾತ್ರಿ ಚಿಕ್ಕಪ್ಪನ ಮನೆಗೆ ಹೋಗಿ ಮಲಗಿದ್ದು ಬಂದರು. ಎರಡು ದಿನ ಹೀಗೆಯೇ ಕಾಲ ಕಳೆದವರು ಮೂರನೆಯ ದಿನ ಬೆಂಗಳೂರಿಗೆ ಹೊರಟು ನಿಂತರು. ಮತ್ತೆ ಅಕ್ಕ-ಭಾವನನ್ನು ಕಳುಹಿಸಲು ಅಪ್ಪ-ಅವ್ವ, ಚಿಕ್ಕಪ್ಪ-ಚಿಕ್ಕಮ್ಮ ಎಲ್ಲರ ಜೊತೆಯಲ್ಲಿ ಪುಟ್ಟ ಮಾಗಡಿಪಾಳ್ಯದ ಕ್ರಾಸಿನವರೆಗೂ ನಡೆದುಕೊಂಡು ಬಂದು ಬಸ್ಸು ಹತ್ತಿಸಿ ಅಕ್ಕನಿಗೆ ಟಾಟಾ ಮಾಡಿದ. ಯಾವಾಗಲೂ ಪಟಪಟನೆ ಮಾತನಾಡುತಿದ್ದ ಅಕ್ಕ ಯಾಕೋ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ ಎನ್ನಿಸಿತು. ತಮ್ಮ ಮನೆಯಲ್ಲಿ ಮೊಬೈಲ್ ಫೋನು ಇಲ್ಲದೇ ಇದ್ದಿದ್ದರಿಂದ ಅವ್ವ ‘ಚಿಕ್ಕಪ್ಪುಂಗೆ ಫೋನು ಮಾಡ್ತಾ ಇರೇ ತಾಯಿ..’ ಎಂದಳು.
ಅಕ್ಕ ಚೆನ್ನಾಗಿ ಓದ್ಕೋ ಅಂತ ಹೇಳಿದ್ದು ಪುಟ್ಟನ ತಲೆಗೆ ನಾಟಿತ್ತು. ಇಸ್ಕೂಲಿಂದ ಬಂದ ತಕ್ಷಣ ಪುಸ್ತಕ ಹಿಡಿದುಕೊಂಡು ಎಲ್ಲವನ್ನೂ ಬಾಯಿಪಾಠ ಮಾಡಲು ಶುರುಮಾಡಿದ. ಅಪ್ಪ-ಅವ್ವ ಇಬ್ಬರೂ ಮನೆಯಲ್ಲಿಲ್ಲ್ಲದಾಗ ಪಕ್ಕದ ಮನೆಗೆ ಬೀಗ ಕೊಟ್ಟು ಹೋಗುವುದು ಬಂದು ಬೀಗ ತೆಗೆದುಕೊಂಡು ಕೈಕಾಲು ಮುಖ ತೊಳೆದುಕೊಂಡು ಓದುವುದು ಮಾಡುತಿದ್ದ. ಆದರೂ ಅಕ್ಕನ ನೆನಪು ಅವನನ್ನು ಪದೇ ಪದೇ ಕಾಡುತಿತ್ತು. ಅಕ್ಕ ಏನಾದರೂ ಫೋನು ಮಡಿದ್ಲಾ.. ನನ್ನುನ್ನ ಕೇಳಿದ್ಲಾ ಅಂತ ವಿಚಾರಿಸಲು ಆಗಾಗ ಚಿಕ್ಕಪ್ಪನ ಮನೆಯ ಹತ್ತಿರ ಹೋಗಿ ಬರುತಿದ್ದ. ಹೋದ ಮೇಲೆ ಎರಡು ಮೂರು ಬಾರಿ ಅಕ್ಕ ಫೋನು ಮಾಡಿದ್ದಳು. ಎಲ್ಲರನ್ನೂ ಕೇಳಿದ್ದಳು. ಪುಟ್ಟನನ್ನೂ ಕೇಳಿ ಅವ್ನಿಗೆ ಚೆನ್ನಾಗಿ ಓದಕ್ಕೇಳು ಚಿಗವ್ವಾ ಅಂತ ತಿಳಿಸಿದ್ದಳು. ಅದಾದ ಮೇಲೆ ಅಕ್ಕ ಫೋನು ಮಾಡುತಿದ್ದುದು ಬಹಳ ಅಪರೂಪವಾಗಿತ್ತು.
ಅಕ್ಕನ ಮದುವೆಯಾಗಿ ಮೂರು ತಿಂಗಳು ಕಳೆದಿತ್ತು. ಒಂದು ದಿನ ಅಪ್ಪ ಬೆಳಿಗ್ಗೆಯೇ ಎದ್ದವನು ಯಾಕೋ ತಾಯಿ ಕನಸಿಗೆ ಬಂದಿದ್ಲು ಮಧ್ಯಾಹ್ನುದ ಬಸ್ಸಿಗೆ ಹೋಗಿ ನೋಡ್ಕಂಬತ್ತೀನಿ ಅಂತ ಹೊರಟಿದ್ದ. ಪುಟ್ಟನಿಗೂ ಹೋಗಬೇಕೆನ್ನುವ ಆಸೆಯುಟ್ಟಿ ನಾನೂ ಬತ್ತಿನಿ ಅಂದಾಗ ಇಸ್ಕೂಲು ತಪ್ಪಿಸ್ಕಂಡು ಹೋಗೋದು ಬ್ಯಾಡ.. ನಾನು ನೀನು ಒಂದು ಸತರ್ಿ ಹೋಗಾನ.. ಮನೆಯೋರೆಲ್ಲಾ ಹೋದ್ರೆ ಏನಂದ್ಕತಾರೋ ಎಂದು ಅವ್ವ ಅವನನ್ನು ಸುಮ್ಮನಿರಿಸಿದಳು.
ಬೆಂಗಳೂರಿಗೆ ಹೋಗಿ ಸಾಯಂಕಾಲದ ಬಸ್ಸಿಗೆ ವಾಪಾಸು ಬಂದ ಅಪ್ಪ ಯಾಕೋ ಸಪ್ಪೆ ಮುಖ ಹಾಕಿಕೊಂಡು ಗೋಡೆಗೊರಗಿ ಕುಳಿತದ್ದನ್ನು ಕಂಡು ಪುಟ್ಟನಿಗೆ ಯಾಕೆಂದು ತಿಳಿಯಲಿಲ್ಲ. ಅವ್ವ ಗಾಬರಿಯಿಂದ ‘ಇದ್ಯಾಕ್ ಮಾರಾಯ.. ಹಿಂಗ್ ಕುತ್ಕಂಡೆ.. ತಾಯಿ ಚೆನ್ನಾಗವ್ಳಾ..’ಅಂತ ಕೇಳಿದಳು. ‘ಏನ್ ಚೆಂದುವೋ ಏನೋ.. ಮದ್ವೆಯಾದ ಹೆಣ್ಮಗೀನ ಮುಖ ಹೆಂಗಿರಬೇಕು.. ನನ್ಮಗಳ ಮುಖದಲ್ಲಿ ಆ ಕಳೇವೇ ಇಲ್ಲ. ಮನೆ ಒರೆಸ್ಕಂಡು, ಬಟ್ಟೆ ಒಕ್ಕಂಡು ಸಾಯಂಕಾಲ ನಾಕು ಗಂಟೆಯಾಗಿದ್ರೂ ಊಟ ಮಾಡಿರಲಿಲ್ಲ.. ಬೀಗತಿ ಮಂಚದ ಮ್ಯಾಲೆ ಮಲುಕ್ಕಂಡಿದ್ದೋಳು ಆಮ್ಯಾಲೆ ತಟ್ಟೆನಲ್ಲಿ ಅನ್ನ ಸಾರು ಹಾಕ್ಕಂಡು ಬಂದು ಕೊಟ್ಟ ಮ್ಯಾಲೆ ಮೂಲೇಲಿ ಕುತ್ಕಂಡು ಊಟ ಮಾಡಿದ್ಲು. ಅಪ್ಪ ಬಂದವ್ನೆ ಅಂತ ‘ಊಟ ಮಾಡಪ್ಪೋ..’ ಅಂತ ಹೇಳೋ ಸಕ್ತೀನೂ ಅದುಕ್ಕಿಲ್ಲ..’ ಅಂತ ಹೇಳಿ ಕಣ್ಣಲ್ಲಿ ನೀರು ಹಾಕಿದಾಗ ಪುಟ್ಟನಿಗೆ ಭಾವನ ಮನೆಯಲ್ಲಿ ಅಕ್ಕ ಆರಾಮಾಗಿಲ್ಲ ಅನ್ನಿಸಿ ಹೊಟ್ಟೇನಲ್ಲಿ ಸಂಕಟವಾಯಿತು. ‘ಅದೇನು ಸಣ್ಣಮಕ್ಕಳು ಆಡದಂಗೆ ಆಡ್ತೀಯಾ.. ಹೆಣ್ಮಕ್ಕಳು ಎಲ್ಲಾ ಕೆಲ್ಸ ಮಾಡ್ಬೇಕು.. ಸುಮ್ನೆ ಕಾಲು ಮ್ಯಾಲೆ ಕಾಲು ಹಾಕ್ಕಂಡು ಕುಂತಿರಕ್ಕಾಯ್ತದಾ.. ಏನೇ ಮಾಡಿದ್ರೂ ಅದು ಅವರ ಮನೆ ಅಲ್ವಾ.. ಬ್ಯಾರೇರ ಮನೇನ.. ಸುಮ್ನಿರು ಇನ್ನೊಂದು ಸಲ್ಪ ದಿಸ ಹೋದ್ರೆ ಸರಿಯಾಯ್ತದೆ..’ ಅಂತ ಅವ್ವನೇ ಧೈರ್ಯ ಹೇಳಿದರೂ ಅವಳ ಮುಖದಲ್ಲಿ ಯಾವುದೋ ಚಿಂತೆ ಎದ್ದು ಕಾಣಿಸುತಿತ್ತು.
ಅಕ್ಕ ಬೆಂಗಳೂರಿನಲ್ಲಿ ಭಾವನ ಮನೆಯಲ್ಲಿ ಚೆನ್ನಾಗಿಲ್ಲ ಎಂದು ತಿಳಿದೊಡನೆ ಪುಟ್ಟ ಬಂಬ್ರಾಯಿಸ್ವಾಮಿ, ಹಟ್ಟಿಲಕ್ಕಮ್ಮ, ಜಲದಿಗೆರಮ್ಮ, ದೊಡ್ಡಮ್ಮ-ಚಿಕ್ಕಮ್ಮ ನಮ್ಮಕ್ಕುನ್ನ ಚೆನ್ನಾಗಿರಂಗೆ ಮಾಡಿ ಅಂತ ದಿನವೂ ಮಲಗುವಾಗ ಪ್ರಾಥರ್ಿಸಿಕೊಳ್ಳುತಿದ್ದ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಚಿಕ್ಕಪ್ಪ ಮನೆಗೆ ಬಂದು ‘ಅಳೀಮಯ್ಯಾರು ಫೋನು ಮಾಡಿದ್ರು ಕಣೋ ಯಣ್ಣೋ..’ ಅಂತ ಅಪ್ಪನ ಬಳಿ ಮಾತಿಗಾರಂಭಿಸಿ ‘ಅವ್ರಿಗೆ ಏನೋ ಯಾಪಾರುಕ್ಕೆ ಅಜರ್ೆಂಟಾಗಿ ಮೂವತ್ತು ಸಾವ್ರ ದುಡ್ಡು ಕೊಡಬೇಕಂತೆ..’ ಅಂದಾಗ ಅಪ್ಪ-ಅವ್ವನ ಮುಖಗಳು ಸೀದ ರೊಟ್ಟಿಯಂತಾಗಿದ್ದವು. ‘ಈಗ್ಲೇ ಜಮೀನು ಮಾರಿ ಮದ್ವೆ ಮಾಡಿ ಕೈಯ್ಯಲ್ಲಿ ಮೂರು ಕಾಸಿಲ್ದೆ ಕೂತಿದೀವಿ.. ಎಲ್ಲಿಂದ ತಂಕೋಡಾನೊ ಚಿಕ್ಕೋನೇ..’ ಅಂತ ಅವ್ವ ರಾಗ ತೆಗೆದಿದ್ದಳು. ‘ಅಂಗಂದ್ರೆ ಆಯ್ತದೇನಕ್ಕೋ.. ಏನಾರ ಮಾಡ್ಬೇಕು… ಹೊಸ ನೆಂಟುಸ್ತನ ಬ್ಯಾರೆ..’ ಎಂದು ಚಿಕ್ಕಪ್ಪ ಹೇಳಿದಾಗ ಅಪ್ಪ-ಅವ್ವ ಇಬ್ಬರೂ ಏನು ಮಾಡುವುದೆಂದು ತಿಳಿಯದೆ ಯೋಚನೆ ಮಾಡುತಿದ್ದರು. ‘ತೊರೆ ತಾವ ಇರೋ ಗದ್ದೇನ ಮೂರು ವರ್ಸದ ಬೆಳೆಗೆ ಯಾರಿಗಾರ ಕೊಟ್ಟುಬುಡಬೇಕು.. ಅಷ್ಟೇ ಮಾಡಕ್ಕಾಗದು..’ಅಂತ ಅಪ್ಪ ಅಂದಾಗ ‘ಅಂಗೆ ಮಾಡಣ್ಣೋ.. ನಾನೂ ಯಾರಾದ್ರೂ ಸಿಕ್ಕದ್ರೆ ಇಚಾರಿಸ್ತೀನಿ’ ಎಂದು ಹೇಳಿ ಚಿಕ್ಕಪ್ಪ ಹೊರಟುಹೋಗಿದ್ದ.
ಅಪ್ಪ ದಿನಾ ರಾತ್ರಿ ಮುಖ ಒಣಗಿಸಿಕೊಂಡು ಬಂದು ‘ತೊರೇಲಿ ನೀರಿಲ್ಲ.. ಯಾರೂ ಗದ್ದೆ ತಗಳಕ್ಕೆ ಒಪ್ತಾ ಇಲ್ಲ..’ ಅಂತ ಬಂದು ಗೋಡೆಗೊರಗಿ ಕುಳಿತುಬಿಡುತಿದ್ದ. ಅವ್ವ ‘ಇನ್ಯಾರುನ್ನಾದ್ರು ಇಚಾರಿಸು ಮಾರಾಯ.. ನಮ್ಮ ಹಣೆಬರ ಎಂಗಾಯ್ತದೋ ಅಂಗಾಗ್ಲಿ..’ ಎಂದು ಹೇಳುತಿದ್ದಳು. ಪುಟ್ಟನಿಗೆ ಇದುನ್ನೆಲ್ಲಾ ಕೇಳಿಸಿಕೊಂಡು ಭಾವನ ಮನೆಯವರು ಒಳ್ಳೆಯ ಜನರಲ್ಲ ಎಂದು ತಿಳಿದು ಬೇಜಾರಾಗುತಿತ್ತು. ಅಕ್ಕ ರಾಜಣ್ಣನನ್ನೇ ಮದುವೆಯಾಗಿದ್ದರೆ ನಮ್ಮೂರಿನಲ್ಲೇ ಇದ್ದುಕಂಡು ಚೆನ್ನಾಗಿರುತಿದ್ದಳೇನೋ ಎಂಬ ಯೋಚನೆಯೂ ಬರುತಿತ್ತು. ಹೆಂಗೋ ಅಪ್ಪ ದುಡ್ಡು ತಕ್ಕಂಡೋಗಿ ಕೊಟ್ರೆ ಆಮ್ಯಾಲೆ ಅಕ್ಕ ಚೆನ್ನಾಗಿರ್ತಾಳೇನೋ ಅಂದುಕೊಂಡ. ಚಿಕ್ಕಪ್ಪ ಬಂದು ‘ಮತ್ತೆ ಬೀಗ್ರು ಫೋನು ಮಾಡಿದ್ರು ಕಣೋ ಯಣ್ಣೋ..’ ಎಂದು ಹೇಳಿ ಹೋಗಿದ್ದ. ಅವ್ವ-ಅಪ್ಪ ಇಬ್ಬರೂ ಸರಿಯಾಗಿ ಊಟ ಮಾಡದೇ ಯಾವಾಗಲೂ ಯೋಚಿಸುತ್ತಾ ಕುಳಿತಿರುತಿದ್ದರು.
ಆಮೇಲೆ ಒಂದು ದಿನ ಇಸ್ಕೂಲಿನಿಂದ ಬಂದ ಪುಟ್ಟನಿಗೆ ಅಕ್ಕ ಒಬ್ಬಳೇ ಊರಿಗೆ ಬಂದು ಮನೆಯಲ್ಲಿದ್ದುದು ಕಂಡು ಖುಷಿಯಾಯಿತು. ನೋಡಿದ ತಕ್ಷಣ ಅಕ್ಕ ಯಾಕೋ ಸವೆದುಹೋಗಿದ್ದಾಳೆ ಎನ್ನಿಸಿತು. ಆದರೂ ‘ಚೆನ್ನಾಗಿದ್ದೀಯೇನಕ್ಕೋ..’ ಎಂದು ಅಕ್ಕನ ಕೈಹಿಡಿದು ಕೇಳಿದ ಪುಟ್ಟನಿಗೆ ಅಕ್ಕ ಏನನ್ನೂ ಮಾತನಾಡದೆ ಬರೀ ‘ಊ..’ ಅಂದಿದ್ದು ಕಂಡು ನಿರಾಸೆಯಾಯಿತು. ಅಕ್ಕನ ಮುಖದಲ್ಲಿ ನಗೆ ಇರಲಿಲ್ಲ. ರಾತ್ರಿ ಅವ್ವ-ಅಪ್ಪನ ಎದುರು ‘ದುಡ್ಡು ಇಸ್ಕಂಡು ಬರೋವರ್ಗೂ ಮನೆಗೆ ಬರ್ಬೇಡ ಅಂದವ್ರೆ..’ ಅಂತ ಹೇಳಿದ ಅಕ್ಕನ ಮಾತು ಕೇಳಿ ಅವ್ವ-ಅಪ್ಪ ಇಬ್ಬರೂ ಕೆನ್ನೆಗೆ ಕೈ ಊರಿಕೊಂಡು ಕುಳಿತುಬಿಟ್ಟರು. ಅಕ್ಕ ಅವೊತ್ತು ರಾತ್ರಿ ಹೊಟ್ಟೆ ತುಂಬಾ ಬಡಿಸಿಕೊಂಡು ಊಟ ಮಾಡಿ ಬೇಗ ಮಲಗಿಕೊಂಡಿದ್ದು ಯಾಕೆಂದು ಪುಟ್ಟನಿಗೆ ತಿಳಿಯಲಿಲ್ಲ.
ಮಾರನೇ ದಿನ ಶನಿವಾರದ ಒಪ್ಪತ್ತಿನ ಇಸ್ಕೂಲು ಮುಗಿಸಿಕೊಂಡು ಅಕ್ಕ ಮನೆಯಲ್ಲಿದ್ದಾಳೆಂದು ಪುಟ್ಟ ಓಡೋಡಿ ಬಂದ. ಅಕ್ಕ ಮುಂದಿನ ಬಾಗಿಲ ಬಳಿ ಬೆಳಕಿಗೆ ಕುಳಿತಿದ್ದವಳು ತೊಟ್ಟಿದ್ದ ರವಿಕೆಯ ತೋಳನ್ನು ಮೇಲಿನವರೆಗೆ ಸರಿಸಿ ಎಡಗಡೆಯ ತೋಳಿನ ಮೇಲಿದ್ದ ಗಾಯಕ್ಕೆ ಉಗುಳು ಹಚ್ಚುತಿದ್ದಿದನ್ನು ಕಂಡು ಪುಟ್ಟನಿಗೆ ಗಾಬರಿಯಾಗಿ ‘ಅಕ್ಕೋ.. ಏನಾಯ್ತೇ..’ ಅಂದು ಕೂಗಿದ. ಪುಟ್ಟನ ದನಿ ಕೇಳಿ ಅಕ್ಕ ತಟ್ಟನೆ ರವಿಕೆಯ ತೋಳನ್ನು ಕೆಳಗೆಳೆದು ಮುಚ್ಚಿಕೊಂಡು ಪುಟ್ಟನನ್ನೇ ಒಂದು ಕ್ಷಣ ದಿಟ್ಟಿಸಿದಳು. ಪುಟ್ಟ ಕುಸಿದು ಅಕ್ಕನ ಪಕ್ಕ ಕುಳಿತು ‘ಯಾರೇ ಅಕ್ಕೋ.. ಅಂಗೆ ಬರೆ ಬರಂಗೆ ಹೊಡೆದಿದ್ದು..’ ಅಂದ. ಅಕ್ಕ ಕಣ್ಣುಗಳಲ್ಲಿ ನೀರು ತುಂಬಿಕೊಂಡು ‘ಯಾರೂ ಹೊಡೀಲಿಲ್ಲ.. ಅವ್ವ-ಅಪ್ಪುಂಗೆ ಹೇಳ್ಬೇಡ.. ಭಾಷೆ ಕೊಡು..’ಎಂದು ಪುಟ್ಟನ ಕೈಮೇಲೆ ಕೈಯಿಟ್ಟು ಭಾಷೆ ತೆಗೆದುಕೊಂಡಳು. ಪುಟ್ಟನಿಗೆ ಏನು ಮಾಡುವುದೆಂದು ತಿಳಿಯದೆ ಸುಮ್ಮನಾಗಿಬಿಟ್ಟ.
ಅಕ್ಕ ಮನೆಗೆ ಬಂದು ಒಂದು ವಾರವಾದ ನಂತರ ಅಪ್ಪ ಒಂದು ದಿನ ರಾತ್ರಿ ‘ಗದ್ದೇನ ಐದು ವಸರ್ುದ ಬೆಳೆಗೆ ಕೊಟ್ಬುಟ್ಟೆ.. ನಾಳಿಕ್ಕೆ ದುಡ್ಡು ತಂದು ಕೊಡ್ತಾರಂತೆ’ ಅಂದಾಗ ಅವ್ವನ ಮುಖದಲ್ಲಿ ಸಮಾಧಾನ ಕಾಣಿಸಿಕೊಂಡಿತ್ತು. ಮಾರನೇ ದಿನ ಅಪ್ಪ ಹೇಳಿದಂತೆ ದುಡ್ಡು ತೆಗೆದುಕೊಂಡು ಬಂದಿದ್ದ. ಅವ್ವ ‘ನಾಳೆ ಬೆಳಿಗ್ಗೆ ಚಿಕ್ಕೋನ ಜತಿ ಮಾಡಿ ತಾಯೀನ ಕಳಿಸಿಕೊಡೋನ’ ಅಂದಿದ್ದು ಕೇಳಿ ಪುಟ್ಟನಿಗೆ ಬೇಸರವಾಯಿತು. ‘ಇನ್ನೊಂದು ಸಲ್ಪ ದಿನ ಅಕ್ಕ ಇಲ್ಲೇ ಇರ್ಲಿ ಬಿಡವ್ವೋ…’ ಅಂದ ಪುಟ್ಟನಿಗೆ ಅವ್ವ ‘ನಿಂಗೊತ್ತಾಗಕ್ಕಿಲ್ಲ ಸುಮ್ನಿರು….’ ಅಂದಳು. ಬೆಳಿಗ್ಗೆ ಚಿಕ್ಕಪ್ಪ ಖಾಕಿ ಕೈಚೀಲದಲ್ಲಿ ದುಡ್ಡನ್ನು ಸುತ್ತಿಕೊಂಡು ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದು ಕಂಡು ಪುಟ್ಟ ಇನ್ನು ಮ್ಯಾಲೆ ಅಕ್ಕ ಚೆನ್ನಾಗಿರ್ತಾಳೆ ಅಂದುಕೊಂಡ.
 

‍ಲೇಖಕರು avadhi

3 April, 2013

2 Comments

  1. ಮಂಜುನಾಥ ದಾಸನಪುರ

    ವಾಸ್ತವಕ್ಕೆ ತೀರ ಹತ್ತಿರವಾದ ಬರಹ. ಕಥೆಯಲ್ಲಿರುವ ಪುಟ್ಟನ ರೀತಿಯಲ್ಲಿಯೇ ಅಕ್ಕಂದಿರ ಕಷ್ಟಗಳನ್ನು ನೋಡಿಯೂ, ಏನು ಮಾಡಲಾಗದಂತ್ತಹ ಅಸಾಯಕ ಸ್ಥಿತಿ……….ನಿಮ್ಮ ಬರಹ ಹೃದಯಸ್ಪರ್ಶಿಯಾಗಿತ್ತು.

    • ಟಿ.ತಿಮ್ಮಪ್ಪ

      ಮಂಜುನಾಥ ದಾಸನಪುರರವರಿಗೆ ಧನ್ಯವಾದಗಳು.

Trackbacks/Pingbacks

  1. ‘ಅಕ್ಕ’ , ನೀಳ್ಗತೆ – ಭಾಗ ೨ « ಅವಧಿ / avadhi - [...] ಇಲ್ಲಿಯವರೆಗೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading