ಅಕ್ಕಿಮಂಗಲ ಮಂಜುನಾಥ್ ಬರೆದ ಮಕ್ಕಳ ಪದ್ಯಗಳು

 ೧6-150x1501
ಅಕ್ಕಿಮಂಗಲ ಮಂಜುನಾಥ್
ಚೆಂಡಿನ ಅಳಲು 
ಇದ್ದಿತು ಒಂದು ಬಣ್ಣದ ಚೆಂಡು
ಆಕಾರವೋ ಚಂದಿರನಂತಹ ಗುಂಡು
ದಿನವೂ ಬರುತಿರೆ ಬಾಲರ ದಂಡು
ಪುಟಿ ಪುಟಿ ಕುಣಿವುದು ಅವರನು ಕಂಡು
ಎಲ್ಲಾ ಹುಡುಗರು ಸಡಗರದಿಂದ
ಕುಣಿಸಿ ಆಡುತಿರೆ ನೋಡಲು ಚೆಂದ
ಬೇಸರ ಎಲ್ಲವೂ ಕಳೆವುದು ಕಂದ
ಮನದಲಿ ಮೂಡುವುದಾನಂದ
ಆಟವ ಆಡಲು ರಂಗನು ಬಂದು
ಬೀಸಿ ಒಗೆದನು ಕಾಲಲಿ ಅಂದು
ಹಾರಿತು ಚೆಂಡು ಎಲ್ಲಕು ಮುಂದು
ಮುಳ್ಳಲಿ ಬಿದ್ದಿತು ಒದೆತವ ತಿಂದು
ಮುಳ್ಳಿಗು ಚೆಂಡಿಗು ಎಂತದು ವೈರ
ಚುಚ್ಚಲು ಹೋಯಿತು ಮುಳ್ಳಿನ ಸಾರ
ಕುಸಿದು ಬಿದ್ದಿತು ಇಲ್ಲದೆ ಉಸಿರು
ಆಗ ಬಿಟ್ಟಿತಿದು ನಿಟ್ಟುಸಿರು
“ದಿನವೂ ತಿಂದೆನು ಒದೆತವ ನೂರು
ಬಾರಿಸುತ್ತಿದ್ದರು ಕೈಯಲಿ ಜೋರು
ಅಲ್ಲಿ ನನ್ನದೇ ಬಲು ದರಬಾರು
ಈಗ ನನ್ನನು ಕೇಳುವರಾರು?”
ಎಂದು ದುಃಖಿಸುತ ಅತ್ತಿತು ಚೆಂಡು
ತನಗೆ ಒದಗಿದ ದುಃಸ್ಥಿತಿ ಕಂಡು
ಈ ಕತೆ ಅರಿಯಿರಿ ಮಕ್ಕಳೆ ನೀವು
ದುಷ್ಟರ ಜೊತೆಗಿರೆ ತಪ್ಪದು ನೋವು
೩
ಅರಿಯದ ಇರುವೆಯ ಕತೆ
ಕಿಂದರಿ ಜೋಗಿಯು ಕಿನ್ನರಿ ನಾದಕೆ
ಇಲಿಗಳು ಹೊರಟಂತೆ
ಸಾಲಲಿ ಹೊರಟವು ಇರುವೆಯ ಹಿಂಡು
ಸಕ್ಕರೆ ಡಬ್ಬಕ್ಕೆ
ಇರುವೆಯ ಹಿಂಡು ಶಿಸ್ತಿನ ದಂಡು
ಹೊರಟರೆ ಸಾಲಲ್ಲಿ
ಪ್ರಾರ್ಥನೆ ಮಾಡುವ ಮಕ್ಕಳು ನಿಲುವರು
ನಾಚುತ ಸಾಲಿನಲಿ
ಸಕ್ಕರೆ ಡಬ್ಬಕೆ ಮುತ್ತಿಗೆ ಹಾಕಿ
ಹೊಯ್ಯಲು ಅವಣಿಸಿರೆ
ಗೀಚಿದಳಮ್ಮನು ಲಕ್ಷ್ಮಣ ರೇಖೆಯ
ಡಬ್ಬದ ಸುತ್ತ ಗೆರೆ
ಏನಿದು ಕೋಟೆ ! ನಮಗಿದು ಸಾಟಿ ?
ದಾಟಲು ಗೆರೆಯನ್ನು
ಅರಿಯದೆ ತಿಂದು ಸತ್ತವು ಮುಂದು
ತಲುಪದೆ ಗುರಿಯನ್ನು
ಗುಂಡನ ಶಾಲೆ
೨
ಶಾಲಗೆ ಹೋದ ನಂ ಗುಂಡ
ಸೈಕಲ್ ತುಳಿಯುತ್ತ
ಮೂಟೆ ಮೂಟೆ ವಿದ್ಯೆ ಕಲಿತು
ದೊಡ್ಡವ ಆಗೋಕೆ
ಮನೇಲಿ ಉಂಡ ಮೂರು ಮುದ್ದೆ
ಶಾಲೇಲಿ ಹೊಡೆದ ಗಡದ್ದು ನಿದ್ದೆ
ಕಿವಿ ಕೊರೆಯವಂಥ ಗೊರಕೆ;
ಆಹಾ! ಎಂಥ ಅರಿಕೆ?
ಗುರುಗಳು ಖಂಡಿತ ಬೆಚ್ಚಿದರಯ್ಯೋ
ಗುಂಡನ ಗೊರಕೆಯ ಸ್ವರಕ್ಕೆ
ಮಕ್ಕಳು ಬೆದರಿ ತರತರ ಗುಟ್ಟಿ
ನಡುಗಿದರಯ್ಯೋ ಜ್ವರಕ್ಕೆ
ಗುರುಗಳು ಗುಂಡನ ಬೆನ್ನಿಗೆ ಗುದ್ದಿ
ಏಳಿದರೆಷ್ಟೋ ಬುದ್ಧಿ
ಏನೇ ಆಗಲಿ ಕಲಿಯನು ವಿದ್ದೆ
ಮನೆಗೂ ಹೋಯಿತು ಸುದ್ದಿ
ವಿಷಯವ ತಿಳಿದು ಅಪ್ಪನು ಹೇಳಿದ
“ಮನೆಗೇ ಬಂದೆಯಾ ಗುಂಡ?
ಸ್ಲೇಟು ಬಳಪ ಪುಸ್ತಕ ಬಟ್ಟೆ
ಎಲ್ಲವೂ ನಿನಗೆ ದಂಡ
ಶಾಲೆಯು ಸಾಕು ತೋಟಕೆ ನಡೆಯೋ
ತಿನ್ನುತ ಚಕ್ಕುಲಿ ತುಂಡ
ನಿನಗೂ ಕಾದಿದೆ ನನ್ನಂತೆಯೇ
ಬದುಕಿನ ಬವಣೆಯ ಕೆಂಡ”
 ಅಸಹಾಯಕ
೧
ನಾಯಿ ಮರಿಗೆ ನಾಲ್ಕು ಕಾಲು!
ನನಗೆ ಮಾತ್ರ ಎರಡೇ
ಇಂಥ ಮೋಸ ಮಾಡ ಬಹುದೇ
ದೇವಾ ನಿನಗೆ ಕುರುಡೇ?
ಕೋತಿ ಮರಿಗೆ ಎಂಥ ಶಕ್ತಿ!
ಜಿಗಿಯುತ್ತದೆ ಮರವ
ನನ್ನ ಕೈಲಿ ಆಗದಲ್ಲ
ನಾನು ಬಹಳ ಬಡವ
ಗುಡ್ಡ ಕಾಡು ಅಲೆಯ ಬಹುದು
ನಮ್ಮ ಮನೆಯ ಕುರಿ
ನಾನು ಕೂತು ಓದಬೇಕು
ಜಾಣ ಗೂಬೆ ಮರಿ
ಅಟ್ಟ ಪಾತ್ರೆ ಎಲ್ಲ ಸಹ
ಬೆಕ್ಕಿಗೆ ಸ್ವತಂತ್ರ
ನಾ ಅಮ್ಮನಿಂದ ಪಡೆಯ ಬೇಕು
ಎಂಥಾ ವಿಚಿತ್ರ!
ರೆಕ್ಕೆ ಬಡಿದು ಹಾರುವುದು
ಚಿಕ್ಕ ಹಕ್ಕಿ ಮೇಲೆ!
ನನ್ನ ಕೈಲಿ ಆಗದಲ್ಲ
ನೊಂದು ಕೊಳುವೆ ಇಲ್ಲೆ
ನಾಯಿ,ಕೋತಿ,ಕುರಿ,ಬೆಕ್ಕು-
ಚಿಕ್ಕ ಹಕ್ಕಿ ಕಂಡು
ಅವಕ್ಕಿಂತಲೂ ಅಸಹಾಯಕ
ಎಂದುಕೊಳುವೆ ನೊಂದು

 

‍ಲೇಖಕರು avadhi-sandhyarani

August 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. mahesh kalal

    ಶಾಲಗೆ ಹೋದ ನಂ ಗುಂಡ
    ಸೈಕಲ್ ತುಳಿಯುತ್ತ
    ಮೂಟೆ ಮೂಟೆ ವಿದ್ಯೆ ಕಲಿತು
    ದೊಡ್ಡವ ಆಗೋಕೆ
    ಮನೇಲಿ ಉಂಡ ಮೂರು ಮುದ್ದೆ
    ಶಾಲೇಲಿ ಹೊಡೆದ ಗಡದ್ದು ನಿದ್ದೆ
    ಕಿವಿ ಕೊರೆಯವಂಥ ಗೊರಕೆ;
    ಆಹಾ! ಎಂಥ ಅರಿಕೆ? sir fine

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಅಭಿನಂದನೆಗಳು , ಮಹೇಶ್ ಸರ್ . ಚೆಂಡಿನ ಅಳಲು ಪದ್ಯದಲ್ಲಿ ಒಂದು ಸಾಲು “ಚುಚ್ಚಲು ಹೋಯಿತು ಮುಳ್ಳಿನ ಸಾರ “ಎಂದಿದೆ. “ಚುಚ್ಚಲು ಹೋಯಿತು ಒಳಗಿನ ಸಾರ” ಎಂದು ಓದಿಕೊಳ್ಳಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: