ಸಿರ್ ಪಕ್ಡು
– ಡಾ ಅಶೋಕ್ ಕೆ ಆರ್
ಕ್ರಿಸ್ಮಸ್ ರಜೆ, ಹೊಸ ವರ್ಷದ ನೆಪದಲ್ಲಿ ವಿಪರೀತ ಕೆಲಸವಿತ್ತು. ಕೆಲಸದಿಂದ ಬೇಸತ್ತ ರಾಜೀವ ವರ್ಷದ ಮೊದಲ ವಾರ ನಾಲ್ಕು ದಿನ ರಜೆ ಮಾಡಿದ್ದ. ಮೊದಲ ದಿನ ನಿದ್ರೆಯಲ್ಲೇ ವಿದೇಶಿ ಪರ್ಫ್ಯೂಮ್ ವರೆಗೆ ಎಲ್ಲವೂ ಸಿಗುವ ಅಂಗಡಿ ಇಟ್ಟಿದ್ದ ಅಜಯ. ರಾಜೀವನ ಕೆಲಸಕ್ಕೂ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಅವನ ಅಂಗಡಿ ತಲುಪಿ ಅದೂ ಇದೂ ಮಾತನಾಡುತ್ತ ಮಧ್ಯಾಹ್ನದವರೆಗೆ ಸಮಯ ಕಳೆದ. ಪಕ್ಕದ ಹೋಟೆಲ್ಲಿನಿಂದ ಊಟ ತರಿಸಿ ಮಾಡಿದ. ಅಂಗಡಿಯ ಎದುರಿಗೆ ಕುಳಿತಿದ್ದ ಹುಡುಗಿಯೊಬ್ಬಳ ಕಡೆಗೆ ದೃಷ್ಟಿ ಹರಿಯಿತು. ಬೆಳಿಗ್ಗಿನಿಂದಲೂ ಅಲ್ಲಿಯೇ ಕುಳಿತಿದ್ದಳು. ಇಪ್ಪತ್ತರ ಆಸುಪಾಸಿನವಳು. ನಿಮಿಷಕ್ಕೊಮ್ಮೆ ಮೊಬೈಲು ಹೊರತೆಗೆದು ಯಾರಿಗೋ ಫೋನ್ ಮಾಡುತ್ತಿದ್ದಳು. ಲೈನ್ ಸಿಗುತ್ತಿರಲಿಲ್ಲವೋ ಅಥವಾ ಅತ್ತ ಕಡೆಯವರು ಕರೆ ಸ್ವೀಕರಿಸುತ್ತಿರಲಿಲ್ಲವೋ ತಿಳಿಯದು. ಚಡಪಡಿಕೆಯಿತ್ತು ಅವಳಲ್ಲಿ. ನೀರಿನ ಬಾಟಲಿ ಖರೀದಿಸಲು ಅಜಯನ ಅಂಗಡಿಯ ಹತ್ತಿರ ಬಂದಾಗ ಅವಳನ್ನು ಗಮನಿಸಿ ನೋಡಿದ. ಬಾಡಿದ ಮುಖ, ಕಣ್ಣು ಕೆಂಪಗಾಗಿದ್ದವು. ಕಪ್ಪೂ ಅಲ್ಲದ ಕೆಂಪೂ ಅಲ್ಲದ ಮೈಬಣ್ಣ. ಒಟ್ಟಿನಲ್ಲಿ ಲಕ್ಷಣವಾಗಿದ್ದಳು. ನೀರಿನೊಡನೆ ಒಂದು ಬಿಸ್ಕೆಟ್ ಪ್ಯಾಕೆಟ್ ಖರೀದಿಸಿ ಕುಳಿತಿದ್ದ ಜಾಗಕ್ಕೆ ಹಿಂದಿರುಗಿದಳು. ಒಂದೆರಡು ಬಿಸ್ಕೆಟ್ ತಿಂದು ಗುಟುಕು ನೀರು ಕುಡಿದು ಮೊಬೈಲ್ ಹೊರತೆಗೆದಳು. ಕರೆ ಮಾಡುವ ಆಟ ಮುಂದುವರೆಯಿತು. ರಾಜೀವ ಅಜಯನ ಕಡೆ ನೋಡಿದ. ರಾಜೀವನ ಮನವನ್ನು ಅರ್ಥಮಾಡಿಕೊಂಡವನಂತೆ ಮುಗುಳ್ನಗುತ್ತಾ “ನಮ್ ರಾಜೀವ್ ಸಾಹೇಬ್ರಿಗೆ ಆ ಹುಡುಗಿ ಬಗ್ಗೆ ಆಸಕ್ತಿ ಮೂಡಿರೋ ಆಗಿದೆ” ಎಂದ. “ಇರಬಹುದೋ ಏನೋ ನನಗೂ ಗೊತ್ತಿಲ್ಲಪ್ಪ” ರಾಜೀವನೂ ನಗುತ್ತಾ ಉತ್ತರಿಸಿದ. ಸಂಜೆಯಾಗುತ್ತ ಬಂತು. ಹುಡುಗಿ ಕುಳಿತ ಜಾಗದಿಂದ ಅಲುಗಾಡಿರಲಿಲ್ಲ. “ನೀನೇನಂತಿ ಅಜಯ. ಹೋಗಿ ಮಾತನಾಡಿಸಲಾ?” ಎಂದು ಕೇಳಿದ. “ಮ್. ಬೆಳಿಗ್ಗೆನಿಂದ ಇಲ್ಲೇ ಕುಳಿತಿದ್ದಾಳೆ. ನೋಡಿದ್ರೆ ಯಾವುದೋ ತೊಂದರೆಯಲ್ಲಿರೋ ರೀತಿ ಕಾಣುತ್ತೆ. ಹೋಗಿ ಮಾತನಾಡಿಸಿ ನೋಡು. ಏನಾದ್ರೂ ಆಗಬಹುದು” ಅಜಯನಿಂದಲೂ ಪ್ರೋತ್ಸಾಹ ಸಿಕ್ಕಿದ ಮೇಲೆ ಸುತ್ತಮುತ್ತ ನೋಡುತ್ತ ಅವಳೆಡೆಗೆ ಹೆಜ್ಜೆ ಹಾಕಿದ.

ಬಳಿ ಹೋಗಿ ಅವಳ ಪಕ್ಕದ ಸೀಟಿನಲ್ಲಿ ಆಸೀನನಾದ.ಇವನೆಡೆಗೆ ಒಮ್ಮೆ ನೋಡಿ ಮುದುಡಿ ಕುಳಿತಳು. ಎರಡು ನಿಮಿಷದ ನಂತರ ಅವಳೆಡೆಗೆ ತಿರುಗಿ “ನಮಸ್ತೆ ಮೇಡಂ” ಎಂದ. ಕಷ್ಟಪಟ್ಟು ಮುಗುಳ್ನಕ್ಕಳು. ಪ್ರತಿಕ್ರಿಯಸಲಿಲ್ಲ. ರಾಜೀವನೇ ಮಾತು ಮುಂದುವರೆಸಿದ. “ಬೆಳಿಗ್ಗೆಯಿಂದ ನೋಡ್ತಿದ್ದೀನಿ. ಇಲ್ಲೇ ಕುಳಿತಿದ್ದೀರ. ಏನೋ ತೊಂದರೆಯಲ್ಲಿರೋ ಹಾಗಿದೆ. ಏನೂಂತ ಕೇಳಬಹುದಾ? ವೈಯಕ್ತಿಕವಾದುದೇನಾದರೂ ಇರಬಹುದು. ಹೇಳಲೇಬೇಕು ಅಂತ ಬಲವಂತ ಮಾಡೋನಲ್ಲ. ಏನಾದ್ರು ಸಹಾಯ ಬೇಕಾದ್ರೆ ಕೇಳಿ” ಎಂದ್ಹೇಳಿ ಮುಖ ತಿರುಗಿಸಿ ಹೊರಡಲು ಸಿದ್ಧನಾಗಿದ್ದ ಬಸ್ಸಿನ ಕಡೆಗೆ ನೋಡಿದ. “ತೊಂದರೆಯೇನೂ ಇಲ್ಲ ಬಿಡಿ”. ಎಂದುತ್ತರಿಸಿ ಸುಮ್ಮನಾದಳು. ಅವಳ ಕಣ್ಣು ಸುಮ್ಮನಿರಲಿಲ್ಲ. ಅಳಲಾರಂಭಿಸಿತ್ತು. “ಯಾಕ್ ಮೇಡಂ ಅಳ್ತಿದ್ದೀರ. ತೊಂದರೆ ಇಲ್ಲ ಅಂತ ಸುಖಾಸುಮ್ಮನೆ ಸುಳ್ಯಾಕಾಡ್ತೀರಾ? ಏನಾಯ್ತು ಹೇಳಿ? ಮನೆ ಬಿಟ್ಟು ಬಂದಿದ್ದೀರಾ ಹೇಗೆ?” ಎಂದು ಪ್ರಶ್ನಿಸಿದ. ನಿಲ್ಲುವವರೆಗೂ ಸುಮ್ಮನಿದ್ದ. “ನಿಮ್ಮ ಹೆಸರು?” ಎಂದ. “ರುಕ್ಮಿಣಿ” ಎಂದುತ್ತರಿಸಿದಳು. ಮರೆಯಲಾಗದ ನೆನಪೊಂದು ಮತ್ತೆ ನೆನಪಾಗಿ ಮ್ಲಾನವದನನಾದ. ಮೌನಿಯಾದ. ಕಣ್ಣಪರದೆಯ ಮೇಲೊಂದು ತೆಳುನೀರ ಪರದೆ ಪಡಿಮೂಡಿತು. ಭೂತಕಾಲದ ನೆನಪುಗಳ ಸಾಂಗತ್ಯದಿಂದ ವರ್ತಮಾನಕ್ಕೆ ಬರಲು ಕೊಂಚ ಸಮಯ ಹಿಡಿಯಿತು ರಾಜೀವನಿಗೆ.
“ಏನಾಯ್ತು ಹೇಳಿ ರುಕ್ಮಿಣಿ. ನನ್ನ ಕೈಲಾದ ಸಹಾಯ ಮಾಡ್ತೀನಿ. ಭಯ ಬೇಡ” ಎಂದ. ಆತುರದ ನಿರ್ಧಾರವೊಂದರಿಂದ ಜೀವನದ ದಿಕ್ಕೇ ತಪ್ಪಿಹೋಗುತ್ತಿರುವ ಆತಂಕದಿಂದ ಕುಳಿತಿದ್ದ ರುಕ್ಮಿಣಿಗೆ ತನ್ನ ಕಷ್ಟವನ್ನಂಚಿಕೊಳ್ಳಲು ಯಾರಾದರೊಬ್ಬರ ಅವಶ್ಯಕತೆಯಿತ್ತು. ಈ ಆಗುಂತಕನೊಡನೆ ಹೇಳಿಕೊಳ್ಳಲೋ ಬೇಡವೋ ಎಂಬ ಅನುಮಾನದೊಡನೆಯೇ ಮಾತನಾಡಲಾರಂಭಿಸಿದಳು.
ಮೈಸೂರಿನ ಸಿದ್ಧಾರ್ಥ ಲೇಔಟಿನಲ್ಲಿ ವಾಸ. ಅಪ್ಪ ಅಮ್ಮ ಇಬ್ಬರೂ ಬ್ಯಾಂಕೊಂದರಲ್ಲಿ ಕೆಲಸಕ್ಕಿದ್ದರು. ಒಬ್ಬಳೇ ಮಗಳು ರುಕ್ಮಿಣಿ. ಬಿ ಎಸ್ಸಿ ಕೊನೆಯ ವರ್ಷ ಓದುತ್ತಿದ್ದಳು. ಅಚಾನಕ್ಕಾಗಿ ಫೇಸ್ ಬುಕ್ಕಿನಲ್ಲಿ ನಾಲ್ಕು ತಿಂಗಳ ಮೊದಲು ಪರಿಚಯವಾದವನು ದಿವಾಕರ. ಮಂದಾಪುರದ ರಾಜಶೇಖರ ಮೆಡಿಕಲ್ ಕಾಲೇಜಿನಲ್ಲಿ ಕೊನೆಯ ವರ್ಷ ಓದುತ್ತಿದ್ದ. ಸ್ಕೂಲಿನ ಗೆಳೆಯ ದಿವಾಕರನೇನಾದರೂ ಫೇಸ್ ಬುಕ್ಕಿನಲ್ಲಿದ್ದಾನಾ? ಎಂದು ಹುಡುಕುತ್ತಿದ್ದವಳು ಈ ದಿವಾಕರನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಈ ದಿವಾಕರ ಆ ದಿವಾಕರನಲ್ಲ ಎಂಬುದು ಗೊತ್ತಾಯಿತಾದರೂ ಹೊಸತೊಂದು ಗೆಳೆತನಕ್ಕೆ ತೊಂದರೆಯಾಗಲಿಲ್ಲ. ಅಪರೂಪಕ್ಕೆ ಆಕಸ್ಮಿಕವಾಗಿ ಇಬ್ಬರೂ ಆನ್ ಲೈನಿನಲ್ಲಿ ಒಟ್ಟಿಗೆ ಬಂದಾಗ ಚಾಟ್ ಮಾಡುತ್ತಿದ್ದರು. ದಿನಕಳೆದಂತೆ ಚಾಟ್ ಮಾಡಲೆಂದೇ ಒಂದೇ ಸಮಯಕ್ಕೆ ಲಾಗಿನ್ ಆಗುತ್ತಿದ್ದರು. ಅದೊಂದು ದಿನ ದಿವಾಕರ “ಫೇಸ್ ಬುಕ್ಕಿನಲ್ಲಿ ಚಾಟ್ ಮಾಡೋದು ನನಗೆ ಅಷ್ಟೊಂದು ಇಷ್ಟವಾಗಲ್ಲ” ಎಂದಿದ್ದ. ಮೊಬೈಲ್ ನಂಬರ್ ಕೇಳುತ್ತಿದ್ದಾನೆಂಬ ಅರಿವು ಮೂಡಿತಾದರೂ ರುಕ್ಮಿಣಿ ತಕ್ಷಣಕ್ಕೆ ನಂಬರ್ ಕೊಡಲಿಲ್ಲ. ದಿವಾಕರನ ಮಾತುಗಳು ಆಸಕ್ತಕರವಾಗಿ ನಂಬಿಕೆಗೆ ಅರ್ಹನೆಂಬ ಭಾವ ಮೂಡಿದ ಮೇಲೆ ತಾನಾಗಿಯೇ ನಂಬರ್ ಕೇಳಿ ಪಡೆದಳು. ಕಪಾಟಿನ ಮೂಲೆಯಲ್ಲೆಲ್ಲೋ ದೂಳು ಹಿಡಿಯುತ್ತಾ ಕುಳಿತಿದ್ದ ಇಯರ್ ಫೋನಿಗೆ ಜೀವ ಬಂತು. ಮನೆಯಿಂದ ಕಾಲೇಜಿಗೆ ಹೋಗುವಾಗ, ಹಿಂದಿರುಗಿ ಬರುವಾಗ ಅರ್ಧರ್ಧ ಘಂಟೆ ಮಾತು. ಮನೆಯಲ್ಲಿ ಯಾರೂ ಇಲ್ಲದಾಗ ಮತ್ತೆ ಮಾತು. ಮನೆಯವರ ಉಪಸ್ಥಿತಿಯಲ್ಲಿ ಮಾತುಗಳು ಮೆಸೇಜಿನ ಮುಖಾಂತರ ಹರಿದಾಡುತ್ತಿತ್ತು. “ನೀವು ನನಗೆ ತುಂಬಾ ಇಷ್ಟವಾಗ್ತೀರ ಕಣ್ರೀ” ಎಂದೊಮ್ಮೆ ದಿವಾಕರ ಹೇಳಿದಾಗ ರುಕ್ಮಿಣಿ ಹುಸಿಕೋಪ ಪ್ರದರ್ಶಿದ್ದಳು. “ಯಾಕೆ? ಏನಾದ್ರೂ ನೋವಾಗುವ ಹಾಗೆ ಮಾತನಾಡಿದೆನಾ?” ಎಂದಾತ ಪದೇ ಪದೇ ಕೇಳಿದಾಗ ನಗುತ್ತಾ “ನೀನು ನನಗೆ ತುಂಬಾ ಇಷ್ಟವಾಗ್ತೀಯ ಕಣೇ ಅಂತ ಹೇಳಬೇಕು ದಿವೂ. ಬಹುವಚನ ಬೇಡ” ಎಂದಿದ್ದಳು. ಮಾತು ಮೆಸೇಜು ಹೆಚ್ಚಾಗುತ್ತ ಹೋಯಿತು. ‘ಪರೀಕ್ಷೆ ಮುಗಿದು ಪಾಸಾಗಿ ಈಗ ಡಾ ದಿವಾಕರ್ ಆಗಿದ್ದೇನೆ’ ಎಂದಾಗ ಸಂಭ್ರಮಪಟ್ಟಳು. ‘ಒಂದು ದಿನ ಮಂದಾಪುರಕ್ಕೆ ಬಾ ರುಕ್ಕು. ಇಬ್ಬರೂ ಭೇಟಿಯಾಗೋಣ, ಸುತ್ತಾಡೋಣ’ ಕರೆಯುತ್ತಲೇ ಇದ್ದ. ಮನೆಯವರ ಭಯದಿಂದ ಹೊರಡಲಿಲ್ಲ. ಕೆಲವೊಂದು ದಿನದ ನಂತರ ಕರೆ ಮಾಡಿದಾಗ ಏನೊಂದೂ ಮಾತನಾಡದೆ ದಿವಾಕರ ಅಳಹತ್ತಿದ. ರುಕ್ಮಿಣಿಗೆ ಗಾಬರಿಯಾಯಿತು. ದಿವಾಕರನಿಗೆ ಮದುವೆ ಗೊತ್ತು ಮಾಡಿದ್ದಾರಂತೆ. ಅತ್ತೆಯ ಮಗಳು. ಇನ್ನೊಂದು ತಿಂಗಳಿಗೆ ನಿಶ್ಚಿತಾರ್ಥ. ರುಕ್ಮಿಣಿಯ ವಿಷಯ ಮನೆಯವರಿಗೆ ಹೇಳಿದ ಮೇಲೆ ಮದುವೆಯನ್ನು ಆದಷ್ಟು ಬೇಗನೆ ಮುಗಿಸಿಬಿಡುವ ಆತುರದಲ್ಲಿದ್ದಾರಂತೆ. ನಿನ್ನನ್ನು ಬಿಟ್ಟು ಇನ್ಯರನ್ನೂ ಮದುವೆಯಾಗಲು ಸಾಧ್ಯವಿಲ್ಲ ರುಕ್ಮಿಣಿ. ನಿನ್ನ ಮನೆಯವರಿಗೆ ವಿಷಯ ತಿಳಿಸಿ ಅವರನ್ನು ಒಪ್ಪಿಸಾದರೂ ಬಾ ಅಥವಾ ಅವರಿಗೆ ಹೇಳದಿದ್ದರೂ ಅಥವಾ ಒಪ್ಪದಿದ್ದರೂ ಪರವಾಯಿಲ್ಲ ಮೊದಲು ಮಂದಾಪುರಕ್ಕೆ ಬಂದುಬಿಡು. ಮಂಗಳಾದೇವಿ ದೇವಸ್ಥಾನದಲ್ಲಿ ಮದುವೆಯಾಗಿಬಿಡುವ. ನಂತರ ಯಾರೇನೂ ಮಾಡ್ತಾರೋ ನೋಡಿಕೊಳ್ಳೋಣ ಎಂದಿದ್ದ. ಮೂರು ದಿನದ ಕಾಲಾವಕಾಶ ಕೇಳಿದ್ದಳು. ಮನೆಯವರಿಗೆ ತಿಳಿಸುವ ಧೈರ್ಯವಾಗಲಿಲ್ಲ. ದಿವಾಕರನನ್ನು ಕಳೆದುಕೊಳ್ಳುವ ಇಷ್ಟವೂ ಇರಲಿಲ್ಲ. ಮಂದಾಪುರಕ್ಕೆ ಹೋಗಿ ಮದುವೆ ಶಾಸ್ತ್ರ ಮುಗಿಸಿಬಿಡುವ; ಒಬ್ಬಳೇ ಮಗಳು, ಏನೋ ಆತುರದಲ್ಲಿ ಬಿದ್ದು ನಮಗೆ ನೋವು ಮಾಡಿದ್ದಾಳೆ ಎಂದು ಮನೆಯವರು ಕ್ಷಮಿಸಿಬಿಡುತ್ತಾರೆಂಬ ನಂಬುಗೆ. ಮಂದಾಪುರದ ಗೆಳತಿಯ ಮನೆಗೆ ಹೋಗುತ್ತಿದ್ದೇನೆ ಎಂಬ ನೆಪ ಹೇಳಿ ಹೊರಟಿದ್ದಳು. ಬಸ್ ಸ್ಟ್ಯಾಂಡಿಗೆ ಬಂದು ಫೋನ್ ಮಾಡು ಎಂದಿದ್ದ ದಿವಾಕರ. ಬೆಳಿಗ್ಗೆಯಿಂದ ಅದೇ ಪ್ರಯತ್ನದಲ್ಲಿದ್ದಳು. ಅವನ ಫೋನ್ ಸ್ವಿಚ್ ಆಫ್ ಆಗಿತ್ತು!

“ಅಲ್ಲಮ್ಮ, ಗುರುತಿಲ್ಲ, ಪರಿಚಯವಿಲ್ಲ. ಇಂಟರ್ನೆಟ್ಟಿನಲ್ಲಿ ಆರಂಭವಾದ ಪ್ರೀತಿಗೆ ಮನೆಯವರನ್ನೇ ಬಿಟ್ಟು ಬಂದೆಯಾ?!”
“ಇಲ್ಲ ದಿವೂ ತುಂಬಾ ಒಳ್ಳೆಯವನು”
“ಒಳ್ಳೆಯವನಾಗಿದ್ದರೆ ನೀನು ಬರುವ ಮೊದಲೇ ಬಸ್ ಸ್ಟ್ಯಾಂಡಿಗೆ ಬರಬೇಕಿತ್ತಲ್ಲವೇ? ಕೊನೇಪಕ್ಷ ಫೋನದ್ರೂ ಆನ್ ಇರಬೇಕಿತ್ತಲ್ಲಾ?”
“ಇಲ್ಲ ದಿವೂ ಫೋನ್ ಮಾಡಿಲ್ಲ. ಅವರ ಮನೆಯವರಿಗೆ ಈ ನಮ್ಮ ಮದುವೆಯ ವಿಷಯ ತಿಳಿದು ಫೋನ್ ಕಿತ್ತುಕೊಂಡು ಅವನನ್ನು ಕೂಡಿಹಾಕಿರಬೇಕು”
“ಮ್. ಇರಬಹುದೇನೋ. ಆದರೂ ಈ ರೀತಿ ಮನೆಬಿಟ್ಟು ಬಂದಿರೋದು ಸರಿಯಾ? ಹೋಗ್ಲಿಬಿಡು. ಅವನ ಕಾಲೇಜಿನ ಹೆಸರೇನಂದೆ?”
“ರಾಜಶೇಖರ್ ಮೆಡಿಕಲ್ ಕಾಲೇಜ್”
“ರಾಜಶೇಖರ್ ಮೆಡಿಕಲ್ ಕಾಲೇಜ್? ಯಾವುದದು ಕೇಳಿದ ಹಾಗೇ ಇಲ್ವಲ್ಲ. ಸರಿ ಬಾ. ಆ ಕಾಲೇಜಿನ ಹತ್ತಿರವೇ ಹೋಗಿ ವಿಚಾರಿಸೋಣ. ಅವನು ಸಿಗದಿದ್ರೂ ಅವನ ಮನೆಯ ವಿಳಾಸವನ್ನಾದ್ರೂ ಪತ್ತೆ ಮಾಡೋಣ” ಎಂದ್ಹೇಳುತ್ತ ಮೇಲೆದ್ದ ರಾಜೀವ. ಹೋಗಲೋ ಬೇಡವೋ ಎಂಬ ದ್ವಂದ್ವದಲ್ಲಿದ್ದವಳಿಗೆ ರಾಜೀವನ ಮೇಲೆ ನಂಬುಗೆ ಬರಲಿಲ್ಲವಾದರೂ ಅಪನಂಬಿಕೆಯೂ ಮೂಡಲಿಲ್ಲ. ಆಸರೆಗಾಗಿ ಒಬ್ಬರು ಸಿಕ್ಕಿದ್ದಾರೆ. ಇವರ ಮೂಲಕವಾದರೂ ದಿವಾಕರ ಸಿಗುತ್ತಾನೇನೋ ಎಂಬ ಆಸೆಯಿಂದ ಹೊರಟಳು.
ಅಜಯನ ಅಂಗಡಿಯ ಬಳಿ ಹೋದ. ರುಕ್ಮಿಣಿ ಹಿಂಬಾಲಿಸಿದಳು.
“ಅಜಯ. ಈ ರಾಜಶೇಖರ್ ಮೆಡಿಕಲ್ ಕಾಲೇಜ್ ಎಲ್ಲಿ ಬರುತ್ತೆ?”
“ಅದಾ! ಉಡುಪಿ ರೋಡಲ್ಲಿರೋದು”
“ಆರ್. ಎಂ. ಸಿ ಅಂತೀವಲ್ಲ ಅದೇನಾ?”
“ಹೌದು ಯಾಕೆ?”
“ವಿಷಯ ಎಲ್ಲ ಬಂದು ಹೇಳ್ತೀನಿ.” ರುಕ್ಮಿಣಿಯ ಜೊತೆ ಆಟೋ ಏರಿದ ರಾಜೀವ.
* * * * *
ಊರ ಹೊರವಲಯದಲ್ಲಿದ್ದ ಕಾಲೇಜಿಗೆ ತಲುಪುವಷ್ಟರಲ್ಲಿ ಆರೂ ಮೂವತ್ತಾಗಿತ್ತು. ಸೆಕ್ಯುರಿಟಿಯವನ ಬಳಿ ಹೋಗಿ ಡಾ ದಿವಾಕರನನ್ನು ನೋಡಬೇಕೆಂದು ಕೇಳಿದರು. ಸೆಕ್ಯುರಿಟಿಯವನು ಕೆಲಸಕ್ಕೆ ಸೇರಿ ಒಂದು ವಾರವಾಗಿತ್ತಷ್ಟೇ. ಅವನಿಗೆ ಗೊತ್ತಿರಲಿಲ್ಲ. ಮರದ ಕೆಳಗೆ ಬೈಕುಗಳನ್ನು ನಿಲ್ಲಿಸಿಕೊಂಡು ಹರಟೆ ಹೊಡೆಯುತ್ತಿದ್ದ ಹುಡುಗರ ಬಳಿ ಬಂದರು.
“ಇಲ್ಲಿ ಡಾ ದಿವಾಕರ್ ಅಂಥ ಇದ್ದಾರಂಥಲ್ಲ. ನಿಮಗೇನಾದರೂ ಗೊತ್ತಿದೆಯಾ?” ರಾಜೀವ ಕೇಳಿದ.
“ಡಾ ದಿವಾಕರ್? ಯಾವ ಡಿಪಾರ್ಟ್ ಮೆಂಟೂ?”
“ದಿವೂ ಈಗಷ್ಟೇ ಫೈನಲ್ ಇಯರ್ ಪಾಸಾಗಿ ಇಂಟರ್ನ್ ಶಿಪ್ಪು ಮಾಡುತ್ತಿದ್ದಾನೆ” ರುಕ್ಮಿಣಿ ಹೇಳಿದಳು.
“ಇಂಟರ್ನ್ ಶಿಪ್ಪಾ?!! ಇದೇ ಕಾಲೇಜಾ?!” ಹೇಳಿದವನ ದನಿಯಲ್ಲಿ ಅಚ್ಚರಿಯಿತ್ತು.
“ಹೌದು. ರಾಜಶೇಖರ್ ಮೆಡಿಕಲ್ ಕಾಲೇಜೇ”
“ಇಲ್ಲ ಮೇಡಂ. ನಿಮಗ್ಯಾರೋ ತಪ್ಪು ಹೇಳಿದ್ದಾರೆ. ಈ ಕಾಲೇಜು ಶುರುವಾಗಿ ಕೇವಲ ಎರಡು ವರ್ಷವಾಗಿದೆ. ಇನ್ನು ಇದೇ ಕಾಲೇಜಲ್ಲಿ ಫೈನಲ್ ಇಯರ್ ಪಾಸಾಗಿ ಡಾಕ್ಟರಾಗೋದು ಹೇಗೆ ಸಾಧ್ಯ?! ಇನ್ನೊಮ್ಮೆ ವಿಚಾರಿಸಿ ಬಹುಶಃ ಬೇರೆ ಕಾಲೇಜಿರಬೇಕು”. ಅವನ ಮಾತು ಕೇಳುತ್ತಿದ್ದಂತೆ ರುಕ್ಮಿಣಿಗೆ ಕಣ್ಣು ಕತ್ತಲಾಗಿ ಕುಸಿದು ಕುಳಿತಳು. ತಿಂಗಳುಗಳಿಂದ ಬೆಳೆದ ನಂಬಿಕೆಯ ಸೌಧ ಕುಸಿದು ಬಿತ್ತು. “ಏನಾಯ್ತೆಂಬ” ಹುಡುಗರ ಪ್ರಶ್ನೆಗಳಿಗೆ ಉತ್ತರವನ್ನೀಯದೆ ರುಕ್ಮಿಣಿಗೆ ಆಸರೆ ಕೊಟ್ಟು ಕಾಲೇಜಿನಿಂದ ಹೊರಬಿದ್ದ ರಾಜೀವ. ಅಘಾತಕ್ಕೊಳಗಾಗಿ ಅಳಲಾರಂಭಿಸಿದ್ದಳು. ಅಳು ಕೊಂಚ ತಗ್ಗಿದ ನಂತರ “ಬಿಡಿ ರುಕ್ಮಿಣಿ. ಅವನ್ಯಾರೋ ಬೇಕಂತಲೇ ನಿಮ್ಮ ಜೊತೆ ಆಟವಾಡಿದ್ದಾನೆ. ಅವಶ್ಯಕ್ಕಿಂತ ಹೆಚ್ಚಾಗಿ ಅವನನ್ನು ನಂಬಿ ತಪ್ಪು ಮಾಡಿಬಿಟ್ಟಿರಿ. ಏನೋ ಇಷ್ಟಕ್ಕೆ ಮುಗೀತಲ್ಲ ಅಂತ ಸಂತಸಪಡಿ. ಭೇಟಿಯಾಗಿ ಮತ್ತೇನಾದರೂ ಅನಾಹುತ ಮಾಡಿಬಿಟ್ಟಿದ್ದರೆ? ಛೀ ಛೀ ಅವೆಲ್ಲಾ ಯೋಚಿಸೋದೂ ತಪ್ಪು. ನಡೀರಿ ಇನ್ನೂ ಸಮಯವಿದೆ. ನಿಮ್ಮ ಊರಿನ ಬಸ್ಸು ಹತ್ತಿಸುತ್ತೀನಿ. ಇವತ್ತಿನ ದಿನ ನಿಮ್ಮ ಜೀವನದಲ್ಲಿ ಇರಲೇ ಇಲ್ಲ ಎಂದುಕೊಂಡು ಬಿಡಿ” ರಾಜೀವನ ಸಂತೈಕೆಯ ಮಾತುಗಳು ಪರಿಣಾಮ ಬೀರದೆ ಇರಲಿಲ್ಲ. ಅಳು ನಿಲ್ಲಿಸಿ ಏನೊಂದೂ ಮಾತನಾಡದೆ ಕೈಗೆತ್ತಿಕೊಂಡಳು ಇನ್ನು ಹೊರಡುವ ಎಂಬಂತೆ.
ಮತ್ತೊಂದು ಆಟೋ ಏರಿದರು. ಇನ್ನೇನು ಆಟೋ ಚಲಿಸಬೇಕೆನ್ನುವಷ್ಟರಲ್ಲಿ ರಾಜೀವನನ್ನು ತಳ್ಳುತ್ತಾ “ಏನ್ ರಾಜೀವ್ ಸಾಹೇಬ್ರು ಇಷ್ಟು ದೂರ” ಎನ್ನುತ್ತ ಕಾನ್ಸ್ ಸ್ಟೇಬಲ್ ಫಯಾಜ್ ಆಟೋ ಹತ್ತಿದ. ಕೆಲಸಕ್ಕೆ ರಜೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ದಿನ ಸಿಕ್ಕಿದ ರುಕ್ಮಿಣಿ, ಅವಳ ಕಷ್ಟ ನೋವುಗಳನ್ನು ನೆನೆಸಿಕೊಳ್ಳುತ್ತಲೇ ಜರ್ಜರಿತನಾಗಿದ್ದ ರಾಜೀವನ ಮುಖದಲ್ಲಿ ಫಯಾಜನನ್ನು ಕಾಣುತ್ತಲೇ ಪ್ರೇತಕಳೆ ಮೂಡಿತು. ಬಾಯ ಪಸೆಯಾರಿತು. “ಇಲ್ಲೇ ಮೆಡಿಕಲ್ ಕಾಲೇಜಿನತ್ತಿರ ಬಂದಿದ್ದೆ” ತೊದಲುತ್ತಾ ನುಡಿದ. “ಓಹೋ! ಹೊಸದಾಗಿ ಶುರುವಾಗಿರೋ ಈ ಕಾಲೇಜಿನಲ್ಲೂ ನಿಮ್ಮ ಬ್ಯುಸಿನೆಸ್ಸು ಶುರುವಾಗಿದೆಯಾ?!” ರಾಜೀವ ಪ್ರತಿಕ್ರಿಯಿಸಲಿಲ್ಲ. ಎತ್ತ ಕಡೆಗೆ ಹೋಗಬೇಕೆಂದು ತಿಳಿಯದೆ ಇವರೆಡೆಗೇ ನೋಡುತ್ತಿದ್ದ ಡ್ರೈವರನಿಗೆ ಫಯಾಜ್ “ಮೊದಲು ಪೋಲೀಸ್ ಸ್ಟೇಷನ್ನಿಗೆ ನಡೆಸಪ್ಪ” ಎಂದ. ತನ್ನದೇ ಭಾವ ಸುನಾಮಿಯಲ್ಲಿ ಕೊಚ್ಚಿಹೋಗುತ್ತಿದ್ದ ರುಕ್ಮಿಣಿಗೆ ಇವರ ಮಾತುಗಳು ಕೇಳಲೇ ಇಲ್ಲ. ಯಾರೋ ರಾಜೀವನ ಸ್ನೇಹಿತನಿರಬೇಕೆಂದುಕೊಂಡಳಷ್ಟೇ.
* * * * *
ವಾರದ ಹಿಂದೆ ರೈಲ್ವೆ ಹಳಿಯ ಮೇಲೆ ಸಿಕ್ಕ ಯುವತಿಯ ಹೆಣದ ಗುರುತು ಪತ್ತೆಯಾಗದ ಚಡಪಡಿಕೆಯಲ್ಲಿದ್ದ ಯಶಸ್. ಕೆಲಸಕ್ಕೆ ಸೇರಿದ ತರುವಾಯ ಕಂಡ ಮೊದಲ ಕಷ್ಟದ ಪ್ರಕರಣವದು. ಎರಡು ಸುತ್ತು ಟೀ ಮುಗಿಸಿ ಮತ್ತೊಂದನ್ನು ತರಲು ಹೇಳಿ ಠಾಣೆಯೊಳಗೇ ಅತ್ತಿಂದಿತ್ತ ಓಡಾಡುತ್ತಿದ್ದನು. ಫಯಾಜ್ ರಾಜೀವ ಮತ್ತು ರುಕ್ಮಿಣಿಯೊಡನೆ ಠಾಣೆಯೊಳಗೆ ಪ್ರವೇಶಿಸಿದ. ರಾಜೀವನ ಪರಿಚಯವಿತ್ತು ಯಶಸ್ ಗೆ. ರಾಜೀವನ ಜೊತೆಗೆ ಒಂದು ಹುಡುಗಿಯೂ ಇದ್ದ ಮೇಲೆ ಇಂಥದ್ದೆ ಪ್ರಕರಣವೆಂಬ ಅಂದಾಜಾಯಿತಾದರೂ ‘ಏನು ಕೇಸೆಂಬಂತೆ’ ಫಯಾಜನ ಕಡೆಗೆ ನೋಡಿದ. “ಇಷ್ಟು ದಿನ ಬರೀ ಸಿಟಿ ಲಿಮಿಟ್ಟಿನೊಳಗೆ ವ್ಯವಹಾರ ನಡೆಸುತ್ತಿದ್ದೋರು ಹೊಸದಾಗಿ ಶುರುವಾಗಿರೋ ಆರ್. ಎಂ ಸಿ ಕಾಲೇಜಿಗೂ ವ್ಯವಾರ ವಿಸ್ತರಿಸಿಕೊಂಡಿದ್ದಾರೆ ನೋಡಿ ಸರ್. ವ್ಯವಾರ ಮುಗ್ಸಿ ಕಾಲೇಜಿಂದ ಹೊರಗೆ ಬರ್ತಿದ್ದಾಗೆ ಹಿಡಿದು ತಂದೆ” ಎಂದು ಹೇಳಿದ. ‘ಏನೋ ಸರಿಯಿಲ್ಲ’ ಎಂಬ ಅರಿವು ಮೂಡಲಾರಂಭಿಸಿತು ರುಕ್ಮಿಣಿಗೆ. ಮತ್ತೊಂದೆರಡು ಸುತ್ತು ನಡೆದಾಡಿ ಮೇಜಿನ ಮೇಲೆ ಕುಳಿತು ಕೈಸನ್ನೆ ಮಾಡಿ ರಾಜೀವನನ್ನು ಹತ್ತಿರ ಕರೆದ.
“ಏನೋ ನಿಂದು ಕಥೆ? ಸ್ಟೂಡೆಂಟ್ಸುಗಳನ್ನೂ ಹಾಳೂ ಮಾಡಿಬಿಡಬೇಕು ಅಂಥ ಮಾಡಿದ್ದೀಯಾ?”
“ಇಲ್ಲ ಸರ್. ಆ ವ್ಯವಹಾರದ ಮೇಲೆ ಹೋಗಿರಲಿಲ್ಲ ಅಲ್ಲಿಗೆ”
“ಓಹೋ! ಮತ್ತಿನ್ಯಾವ ವ್ಯವಾರದ ಮೇಲೆ ಹೋಗಿದ್ದು”
ರುಕ್ಮಿಣಿಯ ಕಡೆಗೆ ಕೈತೋರಿಸುತ್ತಾ “ಸರ್ ಈ ಹುಡುಗಿಗೆ ಫೇಸ್ ಬುಕ್ಕಿನಲ್ಲಿ….”ಮಾತು ಮುಗಿಯುವ ಮುನ್ನ ಛಟೀರೆಂದು ಕೆನ್ನೆಯ ಮೇಲೆ ಯಶಸ್ ನ ಕೈಬೆರಳು ಮೂಡಿತು. ರುಕ್ಮಿಣಿ ಅಳಲಾರಂಭಿಸಿದ್ದಳು.
“ಹಲ್ಕಾಗಳ… ಫೇಸ್ ಬುಕ್ ಉಪಯೋಗಿಸ್ಕಂಡೂ ವ್ಯವಾರ ಮಾಡೋಕೆ ಶುರು ಮಾಡಿಬಿಟ್ರಾ?”
“ಸರ್ ನಮ್ಮ ತಾಯಾಣೆ ಇಲ್ಲ ಸರ್. ನಾನೇಳೋದು ಪೂರ್ತಿ ಕೇಳಿ ಸರ್”
“ಮ್. ಏನೋ ಕಥೆ ಸಿದ್ಧಮಾಡ್ಕೊಂಡೇ ಬಂದಿದ್ದೀಯಾ ಅನ್ಸುತ್ತೆ. ಹೇಳು. ನನಗೂ ಏನೋ ಟೆನ್ಶನ್. ನಿನ್ನ ಕಥೇ ಕೇಳಿದ್ರೆ ಮೂಡು ಸರಿಹೋಗ್ಬೋದು” ನಗುತ್ತ ಹೇಳಿದ.
“ಕಥೆ ಅಲ್ಲ ಸರ್….”
“ನೀನು ಸುಮ್ಮನೆ ವಿಷಯ ಹೇಳಪ್ಪ. ಕಥೇನೋ ಅಲ್ಲವೋ ನಾವು ನಿರ್ಧರಿಸ್ತೀವಿ. ರೀ ಫಯಾಜ್ ಆ ಹುಡ್ಗೀನ ಹೊರಗೆ ಕುಳಿಸಿ. ಇವನ ಕಥೆ ಕೇಳಿದ ಮೇಲೆ ಅವಳ ಕಥೇನೂ ಕೇಳೋಣ” ಇನ್ಸ್ ಪೆಕ್ಟರ್ ರೂಮಿನ ಹೊರಗಿದ್ದ ಮರದ ಬೆಂಚಿನ ಮೇಲೆ ಕುಳಿತವಳಿಗೆ ಒಳಗಿನ ಮಾತುಗಳು ತೀರ ಸ್ಪಷ್ಟವಾಗಲ್ಲದಿದ್ದರೂ ಕೇಳುತ್ತಿತ್ತು. ರಾಜೀವ ರುಕ್ಮಿಣಿ ತನಗೆ ಹೇಳಿದ್ದೆಲ್ಲವನ್ನೂ ಒಪ್ಪಿಸಿದ. ಕಾಲೇಜಿನ ಬಳಿ ನಡೆದ ಸಂಗತಿಯನ್ನೂ ಹೇಳಿದ. ನಗುತ್ತಲೇ ಅವನು ಹೇಳಿದ್ದನ್ನು ಕೇಳಿದ ಯಶಸ್ “ ಪರ್ವಾಗಿಲ್ಲ ಕಣಯ್ಯ. ಒಳ್ಳೇ ಕಥೆ! ಅಸಹಾಯಕರಿಗೆ ಸಹಾಯ ಮಾಡುವಷ್ಟು ಒಳ್ಳೆ ಬುದ್ಧಿ ಯಾವಾಗ ಬಂತು ನಿನಗೆ?”
“ಸರ್. ನಿಜವಾಗ್ಲೂ ಕಥೆ ಅಲ್ಲ ಸರ್. ಬೇಕಾದ್ರೆ ಅವಳನ್ನೂ ಕರೆಸಿ ಕೇಳಿ”
“ಊರು ಬಿಟ್ಟು ಬಂದೋರ ತಲೆ ಸವರಿ, ಬಲವಂತ ಮಾಡಿ ನಿಮ್ಮ ದಂಧೆಗೆ ಎಳ್ಕೊಳ್ಳೋ ಬುದ್ಧಿ ನಿಂದು. ಅಂಥದ್ರಲ್ಲಿ ಈ ಪರಿ ಒಳ್ಳೆಯವನಾಗಿಬಿಟ್ಟಿದ್ದೀ ಅಂದ್ರೆ ಹೆಂಗಯ್ಯ ನಂಬೋದು?”
“ಸರ್. ಆ ಹುಡುಗಿ ಹೆಸರು ರುಕ್ಮಿಣಿ ಅಂಥ”
“ಅದಕ್ಕೇ?!”
“ಸರ್” ವಿಷಯದ ಅರಿವಾದವನಂತೆ ಫಯಾಜ್ ಮಾತನಾಡಿದ “ಇವನು ಹೇಳ್ತಿರೋದು ನಿಜವಿರಬೇಕು ಸರ್”
“ಅದೆಂಗ್ರಿ ಫಯಾಜ್”
“ಈ ರಾಜೀವನ ತಂಗಿ ಒಬ್ಬಳಿದ್ದಳು. ಅವಳ ಹೆಸರೂ ರುಕ್ಮಿಣಿ ಅಂಥ. ಮುದ್ದಾದ ಹುಡುಗಿ. ಚೆಂದ ಓದ್ತಿದ್ದಳು. ಅವಳಿಗೆ ಈ ದಂಧೆ ಇಷ್ಟವಿರಲಿಲ್ಲ. ಆದರೆ ಇವರಮ್ಮನಿಗೆ ರುಕ್ಮಿಣಿ ದಂಧೆಗೆ ಇಳಿದ್ರೆ ಒಳ್ಳೆ ಬ್ಯುಸಿನೆಸ್ಸಾಗುತ್ತೆ ಅನ್ನೋ ಕೆಟ್ಟಬುದ್ಧಿ. ಹಾಗೂ ಹೀಗೂ ಈ ರಾಜೀವನ ಸಹಾಯದಿಂದ ರುಕ್ಮಿಣಿ ಡಿಗ್ರಿ ಸೇರಿದ್ಲು. ಕೊನೆಗೊಂದು ದಿನ……ನಾಚಿಕೆಯಾಗುತ್ತೆ ಹೇಳ್ಕೊಳ್ಳೋಕೆ ನಮ್ಮದೇ ಡಿಪಾರ್ಟ್ ಮೆಂಟಿನ ದೊಡ್ಡ ಮನುಷ್ಯನೊಬ್ಬ ರುಕ್ಮಿಣಿಯನ್ನು ನೋಡಿ ಅವಳು ಬೇಕೇ ಬೇಕು ಇಲ್ಲಾಂದ್ರೆ ದಂಧೆ ಮುಚ್ಚಿಸಿಬಿಡ್ತೀನಿ ಅಂತ ಎಗರಾಡಿದ್ರು. ರಾಜೀವ ಲಾಡ್ಜಿನಲ್ಲಿಲ್ಲದ ಸಮಯದಲ್ಲಿ ಆ ದೊಡ್ಡ ಮನುಷ್ಯ ರುಕ್ಮಿಣಿಯನ್ನು ಬಲತ್ಕರಿಸಲು ಹೋಗಿ ಮೂರನೇ ಮಹಡಿಯಿಂದ ಕೆಳಗೆ ಹಾರಿ ಸತ್ತುಹೋಗಿದ್ದಳು ರುಕ್ಮಿಣಿ. ನೀವು ಬರೋದಿಕ್ಕೆ ಮುಂಚೆ ನಡೆದಿದ್ದು ಸರ್”
“ಮ್. ಆದರೂ ಇವರನ್ನು ನಂಬೋದಿಕ್ಕಾಗಲ್ಲ ಕಣ್ರೀ ಫಯಾಜ್. ಈ ರಾಜೀವನ ಅಮ್ಮ…..ಅಯ್ಯಪ್ಪ ….ದಂಧೇಲಿರೋ ಎಷ್ಟೊ ಹೆಣ್ಮಕ್ಳನ್ನು ನೋಡಿದ್ದೀನಿ. ಇವರ ಅಮ್ಮನಷ್ಟು ದುರ್ಬುದ್ದಿಯವರನ್ನು ಕಂಡಿಲ್ಲ” ರಾಜೀವನ ಕಡೆಗೆ ತಿರುಗಿ “ನಮ್ಮ ಫಯಾಜ್ ಮಾತಿಗೆ ಬೆಲೆಕೊಟ್ಟು ನಿನ್ನ ಕಥೆ ಸತ್ಯವಿರಬಹುದೂಂತ ನಂಬ್ತೀನಿ. ಹೋಗಿ ಆ ಹುಡುಗೀನ ಕಳಿಸು”
ಅಳು ಬತ್ತಿ ಕುಳಿತಿದ್ದಳು ರುಕ್ಮಿಣಿ. ಅವಳ ದೃಷ್ಟಿಯನ್ನೆದುರಿಸಲಾಗದೆ ಒಳಗೆ ಹೋಗುವಂತೆ ಹೇಳಿದ.
“ನೀನೇಳಮ್ಮ. ಈ ರಾಜೀವ ಎಲ್ಲಿ ಸಿಕ್ದ. ಏನ್ ಕಥೆ? ಸುಳ್ಳಾಡಿದ್ರೆ ಚಮ್ಡಾ ಸುಲಿದುಬಿಡ್ತೀನಿ”
ಇಬ್ಬರ ಹೇಳಿಕೆಯಲ್ಲೂ ವ್ಯತ್ಯಾಸಗಳಿರಲಿಲ್ಲ. ಕಾಲೇಜ್ ಐಡಿ ಕೇಳಿದ. ಪುಣ್ಯವಶಾತ್ ಬ್ಯಾಗಿನಲ್ಲೇ ಇತ್ತು. ತೋರಿಸಿದಳು. ಒಂದಷ್ಟು ಬುದ್ಧಿಮಾತುಗಳನ್ನು ಹೇಳಿ ರಾಜೀವನನ್ನು ಒಳಕರೆದ.
“ನೋಡಯ್ಯಾ ನನಗಿನ್ನೂ ನಿಮ್ಮಿಬ್ಬರ ಮೇಲೆ ಅನುಮಾನವಿದ್ದೇ ಇದೆ. ನಮ್ಮ ಫಯಾಜ್ ಮಾತಿಗೆ ಬೆಲೆಕೊಟ್ಟು ನಿಮ್ಮನ್ನು ಬಿಡ್ತಿದ್ದೀನಿ. ಈಗ ಈ ಹುಡ್ಗೀನಾ ಎಲ್ಲಿಗೆ ಕರೆದುಕೊಂಡು ಹೋಗ್ತಿ? ಮನೆಗೆ ಕರೆದುಕೊಂಡು ಹೋಗಿ ನಾಳೆ ಕಳಿಸ್ತೀಯಾ?”
“ಅಯ್ಯಯ್ಯೋ! ಮನೆಗೆ ಕರೆದುಕೊಂಡು ಹೋದ್ರೆ ನಮ್ಮಮ್ಮ ಹುರಿದು ಮುಕ್ಕಿಬಿಡ್ತಾಳಷ್ಟೇ! ಮೈಸೂರಿಗೆ ಇನ್ನೂ ಬೇಕಾದಷ್ಟು ಬಸ್ಸುಗಳಿವೆ. ಕರೆದುಕೊಂಡು ಹೋಗಿ ಬಸ್ಸತ್ತಿಸುತ್ತೀನಿ”
“ಅದೇ ಸರಿ. ಫಯಾಜ್ ಕೂಡ ನಿಮ್ಮ ಜೊತೆ ಬರ್ತಾರೆ. ಫಯಾಜ್, ಆ ಹುಡುಗಿಗೆ ನಮ್ಮ ಠಾಣೆ ನಂಬರ್ ಕೊಡಿ. ಅವಳ ನಂಬರ್ರೂ ತೆಗೆದುಕೊಳ್ಳಿ. ನೋಡಮ್ಮ ರುಕ್ಮಿಣಿ. ಊರು ತಲುಪುತ್ತಿದ್ದ ಹಾಗೆ ಫೋನ್ ಮಾಡ್ಬೇಕು ತಿಳೀತಾ?” ತಲೆಯಾಡಿಸಿದಳು.
ದಾರಿಯಲ್ಯಾರೂ ಮಾತನಾಡಲಿಲ್ಲ. ಬಸ್ಸು ಸಿದ್ಧವಾಗಿ ನಿಂತಿತ್ತು. ರಾಜೀವನೇ ಕಂಡಕ್ಟರ್ ಬಳಿ ಹೋಗಿ ಮೈಸೂರಿಗೊಂದು ಟಿಕೆಟ್ ತೆಗೆದುಕೊಂಡ. ಟಿಕೇಟ್ ಈಸಿಕೊಂಡು ಹಣ ನೀಡಿದಳು. ನಿರಾಕರಿಸಿದ.
ಬ್ಯಾಗನ್ನೆತ್ತಿಕೊಂಡು ಬಸ್ಸಿನ ಮೆಟ್ಟಿಲನ್ನೇರಿದವಳು ಹಿಂದೆ ತಿರುಗಿ “ಅಕಸ್ಮಾತ್……. ಅಕಸ್ಮಾತ್ ನನ್ನ ಹೆಸರು ರುಕ್ಮಿಣಿಯಾಗಿರದೆ ಹೋಗಿದ್ದರೆ…..?” ತಲೆತಗ್ಗಿಸಿ ನಿಂತವನ ಮೌನವೇ ಅವಳಿಗೆ ಉತ್ತರ ನೀಡಿತ್ತು.






Kathe tumba hidisthu ….
ಇದೊಂದು ನಿಜವಾಗಿ ನಮ್ಮ ಕಣ್ಮುಂದೆಯೇ ನಡೆಯುತ್ತಿದೆಯೇನೋ ಎನ್ನುವಂತಹ ಭಾವ ಮೂಡಿಸಿದ ಬರಹ
ಇವತ್ತಿನ ದಿನಗಳಿಗೆ ಹೊಂದುವಂಥಾ ಕಥಾವಸ್ತು…. ಚೆನ್ನಾಗಿದೆ
Good One.
chennagide!