‘ಅಆ ಮಂಟಪ’ದಲ್ಲಿ ‘ಸೇಬಿ ಕಿದ್ದಯ್ಯ’

ಸದಾ ಯುವಕರೊಂದಿಗೇ ಇರಬಯಸುತ್ತಿದ್ದ ಚಿರಯುವಕ
ಮಲ್ಲಿಕಾರ್ಜುನ ಹೊಸಪಾಳ್ಯ
ಕೆ. ಬಿ ಸಿದ್ದಯ್ಯನವರನ್ನು ಕಳೆದ ೨೫ ವರ್ಷಗಳಿಂದಲೂ ನೋಡುತ್ತಾ ಬೆಳೆದವನು ನಾನು. ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ತುಮಕೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ವೇದಿಕೆ ಮುಂಭಾಗ ಹಿರಿಯ ಕವಿ ವಿ. ಚಿಕ್ಕವೀರಯ್ಯ (ವೀಚಿ) ಅವರನ್ನು ದೂರದರ್ಶನದ ಪ್ರತಿನಿಧಿ ಸಂದರ್ಶನ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕವಿಗಳ ಬಗ್ಗೆ ಹೇಳುತ್ತಾ ವೀಚಿಯವರು ಕೆ.ಬಿ ಸಿದ್ದಯ್ಯನವರನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಅಷ್ಟೊತ್ತಿಗಾಗಲೇ ದೇವನೂರು ಮಹಾದೇವರ ಕುಸುಮಬಾಲೆಯನ್ನು ಓದಿದ್ದೆ. ಅದರಲ್ಲಿ ಒಂದು ಕಡೆ ‘ಕೇಬಿಯು ನೆಗಾಡ್ತಾ . .” ಎಂಬ ಸಾಲು ಬರುತ್ತದೆ. ಅವರೇ ಈ ಕೆ.ಬಿ. ಸಿದ್ದಯ್ಯ ಎಂದು ಸ್ನೇಹಿತರಿಂದ ತಿಳಿದಿತ್ತು.
ಈಗ ವೀಚಿಯವರೂ ಅದೇ ಹೆಸರನ್ನು ಉಲ್ಲೇಖ ಮಾಡಿದ್ದರಿಂದ ಕುತೂಹಲ ತಾಳಿ ಅವರ ಸಾಹಿತ್ಯವನ್ನು ಹುಡುಕಾಡಿದೆ. ಡಾ. ಹೆಚ್.ವಿ. ರಂಗಸ್ವಾಮಿಯವರ ಮನೆಯಲ್ಲಿ ‘ದಕ್ಲಕಥಾ ದೇವಿ ಕಾವ್ಯ’ ಸಿಕ್ಕಿತು. ನನ್ನ ಹುಡುಗು ಬುದ್ಧಿಗೆ ಆಗ ಅದು ಸರಿಯಾಗಿ ಅರ್ಥವೇ ಆಗಿರಲಿಲ್ಲ. ಬಳಸಿದ್ದ ಪದಗಳು, ವಾಕ್ಯಗಳು ನೋಡಿದೇಟಿಗೆ ಹೊಸಾ ಥರ ಅನಿಸಿದವು. ಏನೋ ಮಹತ್ತರವಾದುದು ಇದೆ ಅನಿಸುತ್ತಿತ್ತು, ಆದರೆ ಹೊಳೆಯುತ್ತಿರಲಿಲ್ಲ.
ಆನಂತರ ಅವರು ಸಾಹಿತ್ಯದ ಕಾರಣಕ್ಕಿಂತಲೂ ಸಾಮಾಜಿಕ ಸಂಗತಿಗಳಿಂದಲೇ ನನ್ನ ಕಣ್ಣಿಗೆ ಬೀಳುತ್ತಿದ್ದರು. ಯಾವುದೋ ಹೋರಾಟ, ಮತ್ತಾವುದೋ ಚಳವಳಿ, ಬುದ್ಧ ಹುಣ್ಣಿಮೆ, ಸಮತಾ ಸಂಘಟನೆಯ ಸಭೆ, ಯಾರದೋ ಮನೆಯ ಬಾಡೂಟ, ಅಂತರ್ಜಾತಿ ಮದುವೆ.. ಹೀಗೆ. ಈಗ ನೆನಪಿಸಿಕೊಳ್ಳುತ್ತಾ ಹೋದರೆ ನಾನು ನೋಡಿದಾಗೆಲ್ಲಾ ಅವರು ಯುವಕರ ಜೊತೆಗೆ ಇರುತ್ತಿದ್ದ ರೂಪವೇ ಕಣ್ಣೆದುರು ನಿಲ್ಲುತ್ತದೆ.
ಮೊದಲ ಸಲ ನೋಡಿದ್ದು ಒಂದು ಮದ್ಯಾಹ್ನ. ಮಾಲಿಂಗಪ್ಪನವರ ಮನೆಯ ಒಂದು ಕುಟುಂಬ ಸಮಾರಂಭದಲ್ಲಿ. ಅಲ್ಲಿ ಸುತ್ತಲೂ ಹುಡುಗರಂಥವರನ್ನು ಕೂರಿಸಿಕೊಂಡು ಹಳದಿ ಬಣ್ಣದ ದ್ರವವನ್ನು ಹೀರುತ್ತಿದ್ದರು. ನಾವೂ ಗೆಳೆಯರು ಅವರನ್ನು ಸೇರಿಕೊಂಡೆವು. ನಾನಿನ್ನೂ ಆಗ ತುಮಕೂರಿಗೆ ಹೊಸಬ. ಗೆಳೆಯ ಮಂಜು ನನಗೆ “ಏ ಮಲ್ಲಿಕಾ ಇದು ಜ್ಯೂಸು ಕಣೋ ಕುಡ್ಯೊ” ಎಂದು ಒಂದು ಗ್ಲಾಸು ನನ್ನ ಮುಂದೆ ಇಟ್ಟು ಪುಸಲಾಯಿಸುತ್ತಿದ್ದ. ನಾನು ಹುಳ್ಳುಳ್ಳಗೆ ನಗುತ್ತಾ ಹಿಂದೇಟು ಹಾಕುತ್ತಿದ್ದೆ. ಆಗ ಥಟ್ಟನೆ ಕೇಬಿಯವರು ಅವರ ತೋರು ಬೆರಳನ್ನು ಒಮ್ಮೆ ನನ್ನ ಕಡೆಗೂ, ಒಮ್ಮೆ ಗ್ಲಾಸಿನ ಕಡೆಗೂ ಲಾಠಿಯಂತೆ ತೋರಿಸುತ್ತಾ “ನೋಡಯ್ಯ ಇದು ವಿಸ್ಕಿ, ನಿನಗೆ ಕುಡೀಬೇಕು ಅನ್ನಿಸಿದ್ರೆ ಕುಡಿ, ಇಲ್ಲಾ ಸುಮ್ನಿರು” ಎಂದುಬಿಟ್ಟರು. ಇನ್ನೇನು ಮೊಳಕೆಯಾಗುತ್ತಿದ್ದ ನನ್ನ ಆಸೆ ಹಾಗೇ ಮುದುರಿಹೋಯಿತು.

ನನ್ನ ಮದುವೆ ಮಾಡಿಸುವುದರಲ್ಲಿ ಪ್ರಮುಖ ಪಾತ್ರವನ್ನು ಕೇಬಿಯವರು ವಹಿಸಿದ್ದರು. ಅದು ನನಗೆ ಹೆಮ್ಮೆಯ ಸಂಗತಿ. ಯಾವತ್ತೂ ಮರೆಯಲಾಗದ ಘಟನೆ. ಟೌನ್ ಹಾಲ್ ನಲ್ಲಿ ಮದುವೆ ಹೇಗೆ ಮಾಡಬೇಕು, ಯಾರ್ಯಾರನ್ನು ಕರೆಯಬೇಕು, ಸ್ಥಳ ಎಲ್ಲಿ ಮುಂತಾದುವನ್ನು ಚರ್ಚಿಸಲು ನಡೆದ ಸಭೆಗೆ ಬಂದು ಮಾರ್ಗದರ್ಶನ ಮಾಡಿದ್ದರು. ಮದುವೆಯ ದಿನ ಲಿಂಗಾಯಿತ-ಮಾದಿಗ ಸಂಗಮವಾದ ನಮ್ಮ ಜೋಡಿಯನ್ನು ೧೨ನೇ ಶತಮಾನದ ಹರಳಯ್ಯ-ಮಧುವಯ್ಯರ ಮಕ್ಕಳ ಮದುವೆಗೆ ಹೋಲಿಸಿ ಮಾತಾಡಿದ್ದ ನೆನಪು. ಜೊತೆಗೆ ನಾವು ಓದಿದ ಘೋಷಣೆಯಲ್ಲಿ ಇದ್ದ ಬುದ್ಧನ ಕರುಣೆಯ ಸಾಲುಗಳನ್ನು ಬಹುವಾಗಿ ಮೆಚ್ಚಿದ್ದರು. ಆಡಿದ್ದು ಎರಡೇ ನುಡಿಯಾದರೂ ಚಿಕ್ಕದಾಗಿ ಚೊಕ್ಕವಾಗಿತ್ತು. ಬಹು ಅರ್ಥಪೂರ್ಣವಾಗಿತ್ತು. ನಮ್ಮ ಮದುವೆಯಲ್ಲಿ ಅವರು ಮಾತನಾಡುತ್ತಿದ್ದ ಫೋಟೋ ನೋಡಿದಾಗೆಲ್ಲಾ ೨೦ ವರ್ಷವಾದರೂ ಸರ್ ಹಾಗೇ ಇದ್ದಾರಲ್ಲಾ ಅನಿಸುತ್ತಿತ್ತು. ಸಣ್ಣವಳಿದ್ದಾಗ ನನ್ನ ಮಗಳು ವಿಸ್ಮಯ ಮನೆಗೆ ಬರುತ್ತಿದ್ದ ಹಾಗೂ ಸಮಾರಂಭಗಳಲ್ಲಿ ಸಿಗುತ್ತಿದ್ದ ಕೇಬಿಯವರನ್ನು ‘ಸೇಬಿ ಕಿದ್ದಯ್ಯ’ ಎಂದು ತೊದಲು ನುಡಿಯುತ್ತಿದ್ದಳು. ಅದನ್ನು ಕೇಳಿ ಬಾಯ್ತುಂಬಾ ನಗುತ್ತಿದ್ದರು ಕೇಬಿ ಸರ್.
ನಮ್ಮ ಕುಟುಂಬದ ಮದುವೆ ವಿಚಾರದಲ್ಲಿ ಅವರದೊಂದು ವಿಶಿಷ್ಟ ದಾಖಲೆ ಇದೆ. ಏನೆಂದರೆ ನನ್ನ ಸಂಗಾತಿ ವಿಜಯ ಮತ್ತು ಅವರ ಇಬ್ಬರೂ ಅಕ್ಕಂದಿರ ಅಂತರ್ಜಾತಿ ವಿವಾಹ ಮಾಡಿಸುವುದರಲ್ಲೂ ಅವರೇ ಮುತುವರ್ಜಿ ವಹಿಸಿದ್ದರು. ಮುಂದೆ ನಿಂತು ಧೈರ್ಯ ತುಂಬಿದ್ದರು. ಇನ್ನೂ ಬಹಳಷ್ಟು ಇದೇ ರೀತಿಯ ಮದುವೆ ಮಾಡಿಸಿದ್ದರು.
ನನ್ನ ಹಾರಕದ ಕುರಿತ ಪುಸ್ತಕವನ್ನು ಓದಿ ತುಂಬಾ ಇಷ್ಟಪಟ್ಟಿದ್ದರು. ಅವರ ಕೆಂಕೆರೆ ಜಮೀನಿನಲ್ಲಿ ಹಾರಕ, ಕೊರಲೆ ಇತ್ಯಾದಿ ಸಿರಿಧಾನ್ಯ ಬೆಳೆಯುವ ಹಂಬಲ ಅವರಿಗಿತ್ತು. ‘’ಹೊಲಕ್ಕೆ ಬಂದು ಒಂದ್ಸಲ ನೋಡೋ” ಎಂದಿದ್ದರು. ಮಾಗಡಿ ಕಡೆ ಹೋದಾಗ ಹಾಗೇ ಜಮೀನಿಗೂ ಹೋಗಿದ್ದೆ, ಆದರೆ ಅವರಿರಲಿಲ್ಲ. ಕಳೆದ ವರ್ಷ ಬಿಡುಗಡೆಯಾದ ನನ್ನ ಪ್ರಬಂಧಗಳ ಪುಸ್ತಕ ಓದಿ “ಏನೋ ಈತರಕೀತರ” ಎಂದು ಪಕಾರನೆ ನಗಾಡಿದ್ದರು. “ಚೆನ್ನಾಗಿದೆ ಕಣೋ, ಬರೀತಾ ಇರು” ಎನ್ನಲು ಮರೆತಿರಲಿಲ್ಲ.

ಯುವ ಜನತೆಯೊಂದಿಗೆ ಹೆಚ್ಚು ಬೆರೆಯುತ್ತಿದ್ದ ಅವರ ವ್ಯಕ್ತಿತ್ವದ ವಿಶಿಷ್ಟತೆ ಬಗ್ಗೆ ಹೇಳಿದೆನಲ್ಲವೇ. ಅವರ ಮತ್ತೊಂದು ವೈಶಿಷ್ಟ್ಯವೆಂದರೆ ತುಮಕೂರಿನಲ್ಲಿ ನಡೆಯುವ ಬಹುತೇಕ ಸಾಹಿತ್ಯದ ಸಭೆ, ಸಮಾರಂಭ, ನಾಟಕ, ಪುಸ್ತಕ ಬಿಡುಗಡೆಗಳಲ್ಲಿ ಅವರು ಹಾಜರಾಗುತ್ತಿದ್ದರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲೇಬೇಕೆಂದು ಬಯಸುತ್ತಿರಲಿಲ್ಲ. ಒಂದಷ್ಟು ಯುವಕರೊಂದಿಗೆ ಆಗಮಿಸಿ ಆಯೋಜಕರ ಮುಖದಲ್ಲಿ ಅಚ್ಚರಿ ಮೂಡಿಸುತ್ತಿದ್ದರು. ವೇದಿಕೆಗೆ ಕರೆದರೆ ಖಡಕ್ಕಾಗಿ ನಾಲ್ಕು ಮಾತಾಡುತ್ತಿದ್ದರು. ಅವರ ಧ್ವನಿ ತುಂಬಾ ಚೆನ್ನಾಗಿತ್ತು, ಸಾಫ್ಟಾಗಿತ್ತು. ಅವರ ಕವನಗಳನ್ನು ಅವರ ವಾಚನದಲ್ಲೆಲ್ಲೆ ಕೇಳುವುದು ವಿಶಿಷ್ಟ ಅನುಭವ.
ತುಮಕೂರಿನ ಜಾತ್ಯತೀತ ಗುಂಪಿನ ನಡಿಗೆಗೆ ಅವರೆಷ್ಟು ಬಲ ತುಂಬಿದ್ದರು ಎಂಬುದಕ್ಕೆ ನಾನು ಕಂಡ ಒಂದು ಉದಾಹರಣೆ; ಅದು ‘ಆನುದೇವಾ ಹೊರಗಣವನು’ ಪುಸ್ತಕದ ಬಗ್ಗೆ ತೀವ್ರ ಪರ-ವಿರೋಧದ ಕಾಲ. ನಗರದ ಗ್ರಂಥಾಲಯ ಹಿಂಭಾಗ ಎರಡೂ ಗುಂಪಿನವರ ಸಂವಾದ ಇತ್ತು. ಪುಸ್ತಕ ವಿರೋಧಿಸುವರದೇ ದೊಡ್ಡ ಸಂಖ್ಯೆ. ಪುಸ್ತಕ ನಿಷೇಧಿಸಬೇಕೆಂದು ಅಬ್ಬರಿಸುತ್ತಿದ್ದರು. ವೇದಿಕೆಯ ಮೇಲಿದ್ದ ಕೇಬಿಯವರು ಅವರನ್ನೆಲ್ಲಾ ಸಮರ್ಥವಾಗಿ ಎದುರಿಸಿದರು. ಅದೂ ತಮ್ಮ ಎಂದಿನ ಸೌಮ್ಯ ಮಾತುಗಳಲ್ಲಿಯೇ. ತುಮಕೂರು ವಿಶ್ವವಿದ್ಯಾಲಯದ ಲೋಗೋ ಬದಲಾವಣೆ ಹಾಗೂ ಅದರ ಹೆಸರಿಗೆ ಸಂಬಂಧಿಸಿದಂತೆಯೂ ಹೋರಾಟಗಳು ನಡೆದಾಗ ಅದನ್ನು ಮುನ್ನಡೆಸಿದವರ ಬೆನ್ನಿಗೆ ಬಲವಾಗಿ ನಿಂತವರು.
ಮೊನ್ನೆ ಟೌನ್ ಹಾಲಿನಲ್ಲಿ “ಕೇಬಿಎಸ್ ಚಿರಾಯುವಾಗಲಿ” ಎಂದು ಅಳುತ್ತಲೇ ಕೂಗುತ್ತಿದ್ದ ನೂರಾರು ಯುವಕರನ್ನು ನೋಡುತ್ತಲೇ ಸಂಕಟವಾಗಿಬಿಟ್ಟಿತು. ಸತ್ತಾಗ ಅವರ ಹೊಲದಲ್ಲಿದ್ದ ಬೃಹತ್ ಆಲದ ಮರ ಮತ್ತು ಅದರ ಪಕ್ಕದಲ್ಲೇ ಇದ್ದ ಪುಟ್ಟ ಅಂಕೋಲೆ ಮರದ ನಡುವೆ ಹೂಳಬೇಕೆಂದು ಮೊದಲೇ ಹೇಳಿದ್ದರಂತೆ. ಅದಕ್ಕೆ ‘ಅಆ ಮಂಟಪ’ ಎಂಬ ಹೆಸರನ್ನೂ ಅವರೇ ಸೂಚಿಸಿದ್ದರಂತೆ. ಅಕ್ಷರ, ಶಿಕ್ಷಣ, ಜೀವವೈವಿಧ್ಯ, ನೆರಳು, ತಂಪÅ ಎಲ್ಲವನ್ನೂ ಸೂಚಿಸುವ ಪದ ಅದು.

‍ಲೇಖಕರು avadhi

October 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: