ಅಂಬೇಡ್ಕರ್ ಅವರ ಗಾಯ ನಂಜುಗಟ್ಟುತ್ತಿದೆ..
ಮಂಜುನಾಥ ದಾಸನಪುರ
ಕೆ. ಫಣಿರಾಜ್ ಅನುವಾದಿಸಿ, ಅಕ್ಷರ ಪ್ರಕಾಶನವು ಹೊರ ತಂದಿರುವ ‘ಬಿ.ಆರ್. ಅಂಬೇಡ್ಕರ್ ಅವರ ಆಯ್ದ ಬರಹಗಳು’ ಈ ಕೃತಿಯನ್ನು ಓದುತ್ತಿದ್ದಂತ್ತೆ ನನಗೆ, ನನ್ನ ಶಾಲಾ, ಕಾಲೇಜಿನ ದಿನಗಳು ನೆನೆಪಾದವು. ಅಂಬೇಡ್ಕರ್ರವರಿಗೆ ಬಾಲ್ಯದಲ್ಲಾದ ಅಸ್ಪೃಷ್ಯತೆಯ ಗಾಯಗಳು ಇನ್ನೂ ಮುಂದುವರೆದು ಅದು ಹೇಗೆ ನಂಜುಗಟ್ಟಿದೆ ಎಂಬುದು ನನ್ನ ಕಣ್ಣಿಗೆ ಚಿತ್ರದ ರೂಪದಲ್ಲಿ ಗೋಚರಿಸುತ್ತಾ ಹೋಯಿತು.
ಈ ಪುಸ್ತಕದ ಟಿಪ್ಪಣಿ ರೂಪದಲ್ಲಿರುವ ‘ಗೋರೆಗಾಂವ್ನ ಹಾದಿಹೆಜ್ಜೆಗಳು’ ಎಂಬ ಬರಹ ರೂಪವು ನನ್ನನ್ನು ಈ ಲೇಖನ ಬರೆಯಲು ಪ್ರೆರೇಪಿಸಿತು. 1901ರ ಸುಮಾರಿನಲ್ಲಿ ಅಂಬೇಡ್ಕರ್ ಸತಾರದಲ್ಲಿ ಇರುವಾಗ ತಂದೆ ರಾಮ್ಜೀ ಸತ್ಪಾಲ್ ದೂರದ ಗೊರೆಗಾಂವ್ನಲ್ಲಿ ಬಟವಾಡೆ ಗುಮಾಸ್ತೆ ಕೆಲಸದಲ್ಲಿರುತ್ತಾರೆ. ಎಷ್ಟು ದಿನಗಳಾದರೂ ಅಂಬೇಡ್ಕರ್ ಹಾಗೂ ಅಣ್ಣಂದಿರನ್ನು ನೋಡಲು ರಾಮ್ಜೀ ಸತ್ಪಾಲ್ ಬರುವುದಿಲ್ಲ. ಕೆಲಸದ ಒತ್ತಡ ಹೆಚ್ಚಿರುವುದರಿಂದ ಮಕ್ಕಳನ್ನೇ ಗೋರೆಗಾಂವ್ಗೆ ಕರೆಸಿಕೊಳ್ಳಲು ನಿರ್ಧರಿಸಿ ಪತ್ರ ಬರಿಯುತ್ತಾರೆ. ಈ ಪತ್ರವನ್ನು ಕಂಡ ಅಂಬೇಡ್ಕರ್ ಹಾಗೂ ಅಣ್ಣಂದಿರು ಅಪ್ಪನ್ನನ್ನು ನೋಡಲು ಗೋರೆಗಾಂವ್ಗೆ ಹೋಗಲು ನಿರ್ಧರಿಸುತ್ತಾರೆ.
ಪ್ರಯಾಣಕ್ಕೆ ಭರ್ಜರಿ ತಯಾರಿಯ ಸಲುವಾಗಿ ಇಂಗ್ಲೆಂಡಿನಲ್ಲಿ ತಯಾರಾದ ಹೊಸ ಅಂಗಿ, ಹೊಳೆಯುವ ಮಣಿಗಳನ್ನುಳ್ಳ ಟೊಟ್ಟಿ, ಬೂಟುಗಳು ಹಾಗೂ ಝರಿಯಂಚಿನ ಧೋತರಗಳನ್ನು ಧರಿಸುತ್ತಾರೆ. ಸತಾರಾದಿಂದ ಪ್ರಾರಂಭವಾದ ಇವರ ಪ್ರಯಾಣವು ಗೋರೆಗಾಂವ್ಗೆ ಹತ್ತಿರದ ನಿಲ್ದಾಣವಾದ ಮಸೂರ್ವರೆಗೂ ವೈಭವೊಪೇತವಾಗಿಯೇ ಬರುತ್ತಾರೆ. ಅಲ್ಲಿಂದ ಗೋರೆಗಾಂವ್ಗೆ ಎತ್ತಿನಗಾಡಿಯಲ್ಲಿ ಹೋಗಬೇಕಾಗಿರುತ್ತದೆ. ತಂದೆ ರಾಮ್ಜೀಸತ್ಪಾಲ್ ತನ್ನ ಕಡೆಯವರನ್ನು ರೈಲ್ವೆ ಸ್ಟೇಷನ್ಬಳಿ ಕಳಿಸುತ್ತೇನೆ ಹಾಗಾಗಿ ಆ ನಿಲ್ದಾಣದಲ್ಲಿಯೇ ಕಾಯುತ್ತಿರುವಂತೆ ಪತ್ರದಲ್ಲಿ ತಿಳಿಸಿರುತ್ತಾರೆ. ಹಾಗಾಗಿ ಸಂಜೆಯವರೆಗೂ ಅಂಬೇಡ್ಕರ್ ಹಾಗೂ ಅಣ್ಣಾಂದಿರೂ ಕಾಯುತ್ತಾ ಬೇಸತ್ತುತ್ತಾರೆ. ಎಷ್ಟೊತ್ತಾದರೂ ಅಪ್ಪನ ಕಡೆಯವರು ಬಾರದ ಕಾರಣ ಭಯಭೀತರಾಗುತ್ತಾರೆ. ಬಹುಹೊತ್ತಿನ ವರೆಗೂ ಇವರ ಅವಸ್ಥೆಯನ್ನು ಗಮನಿಸುತ್ತಿದ್ದ ಸ್ಟೇಷನ್ ಮಾಸ್ಟರ್ ಇವರ ಶಿಸ್ತಿನ ಉಡುಪು, ಮೈಮೇಲಿನ ಆಭರಣಗಳನ್ನು ನೋಡಿ ಇವರು ಬ್ರಾಹ್ಮಣ ಮಕ್ಕಳೆಂದು ತಿಳಿದು, ಇವರು ಪಡುತ್ತಿದ್ದ ಅವಸ್ಥೆಯನ್ನು ನೆನೆದು ಮರುಗುತ್ತಾರೆ. ಸ್ಟೇಷನ್ ಮಾಸ್ಟರ್ ಇವರ ಬಳಿ ಬಂದು ‘ನಿಮ್ಮ ಜಾತಿ ಯಾವುದು’ ಎನ್ನುವುದರ ಮೂಲಕ ಮಾತನ್ನು ಪ್ರಾರಂಭಿಸುತ್ತಾನೆ. ಆ ಹುಡುಗರು ತಮ್ಮ ಜಾತಿಯನ್ನು ಯಾವುದೇ ಮುಚ್ಚುಮರೆ ಇಲ್ಲದೆ ‘ಮಹರ್’ ಎನ್ನುತ್ತಾರೆ ಇದನ್ನು ಕೇಳಿದ ಮಾಸ್ಟರ್, ಒಮ್ಮೆ ದಿಗ್ಬ್ರಾಂತನಾಗುತ್ತಾನೆ. ನಾನು ಎಂಥ ಕೆಲಸ ಮಾಡುಬಿಟ್ಟೆ. ಅವರ ಬಾಯಿಂದ ಮಹಾರ್ ಎನ್ನುವ ಮಾತನ್ನು ಕೇಳುವುದರ ಮೂಲಕ ನನ್ನ ಕಿವಿಗಳು ಮಲಿನವಾಯಿತಲ್ಲಾ ಎನ್ನುವ ರೀತಿಯಲ್ಲಿ ತನ್ನನ್ನು ತಾನೇ ನೊಂದು ಕೊಳ್ಳುತ್ತಾನೆ. ನಂತರ ಏನನ್ನೂ ಮಾತನಾಡದೆ, ಬೀರುಸಾಗಿ ಅವರ ಕೋಣೆಗೆ ಹೋಗಿಬಿಡುತ್ತಾರೆ.
ಈ ಹುಡುಗರನ್ನು ಗೊರೆಂಗಾವ್ಗೆ ತಲುಪಿಸಲು ಯಾವ ಗಾಡಿಯವನೂ ಒಪ್ಪಲಿಲ್ಲ. ಆಗ ಸ್ಟೇಷನ್ ಮಾಸ್ಟರನ ಒಂದು ಉಪಾಯದ ಮೇರೆಗೆ, ಅಂಬೇಡ್ಕರ್ ಹಾಗೂ ಅಣ್ಣಾಂದಿರು ಎತ್ತಿನಗಾಡಿಗಳು ಇದ್ದ ಬಳಿಗೆ ಹೋಗಿ, ನಾವು ಗಾಡಿಗೆ ದುಪ್ಪಟ್ಟು ಹಣ ಕೊಡುತ್ತೇವೆ. ಹಾಗೂ ಗಾಡಿಯನ್ನು ನಾವೇ ಚಲಾಯಿಸುತ್ತೇವೆ ಎಂದು ಕೇಳಿಕೊಳ್ಳುತ್ತಾರೆ. ಇವರ ಮಾತಿಗೆ ಒಬ್ಬ ಗಾಡಿಯವನು ಒಪ್ಪುತ್ತಾನೆ.
ಗಾಡಿಯನ್ನು ಈ ಹುಡುಗರೆ ಚಲಾಯಿಸುತ್ತಾರೆ. ಗಾಡಿಯವನು ನಡೆಯುತ್ತಾ ಗಾಡಿಯ ಜೊತೆ ಸಾಗುತ್ತಾನೆ. ರಾತ್ರಿ ಸುಮಾರು ಏಂಟು ಗಂಟೆಯವರೆಗೂ ಎಡಬಿಡದೆ ಪ್ರಾಯಾಣಿಸುತ್ತಾರೆ. ಗಾಡಿಯವನು ಗಾಡಿಯನ್ನು ನಿಲ್ಲಿಸಲು ಹೇಳಿ ಅವನೇ ಗಾಡಿಯನ್ನು ಚಲಾಯಿಸುತ್ತಾನೆ. ಸ್ಪಲ್ಪ ದೂರದ ನಂತರ ಗಾಡಿಯನ್ನು ಕೊಳಚೆ ನೀರಿನ ಬಳಿ ನಿಲ್ಲಿಸಿ ಇನ್ನು ಮುಂದೆ ನೀರೆಲ್ಲೂ ಸಿಗುವುದಿಲ್ಲ. ಊಟ ಮಾಡುವುದಿದ್ದರೆ ಇಲ್ಲೇ ಮಾಡಿ ಎಂದು ಹೇಳಿ. ಆ ಗಾಡಿಯವನು ಊಟ ಮಾಡಲು ಅಲ್ಲಿಯೇ ಸಮೀಪ ಇರುವ ಊರಿನ ಬಳಿಗೆ ಹೋಗುತ್ತಾನೆ.
ಇವರಿಗೆ ಅದಾಗಲೇ ಹಸಿವು ಬಾಯಿಗೆ ಬಂದಿರುತ್ತದೆ. ಊಟ ಮಾಡಲು ಕುಂಟೆಯ ಬಳಿ ಸಮೀಪಿಸುತ್ತಿರುವಾಗಲೇ ಇವರ ಮೂಗಿಗೆ ದುರ್ಗಂಧ ನಾರುತ್ತದೆ. ಕಾಲನ್ನು ತೊಳೆಯಲು ಯೋಗ್ಯವಲ್ಲದ ನೀರನ್ನು ಕುಡಿಯಲು ಅವರ ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಅವರು ಊಟ ಮಾಡದೇ ಗಾಡಿಯವನಿಗಾಗಿ ಕಾಯುತ್ತಾ ಕೂರುತ್ತಾರೆ. ಸುಮಾರು ಹೊತ್ತಿನ ನಂತರ ಅವನು ಬರುತ್ತಾನೆ. ನಂತರ ಹೊರಟ ಪ್ರಯಾಣವೂ ರಾತ್ರಿ 10 ಘಂಟೆಯವರೆಗೂ ನಡೆದರೂ ಗೋರೆಗಾಂವ್ ಸಿಗುವುದಿಲ್ಲ. ಹುಡುಗರು ಆತಂಕದಿಂದ ಅಳಲು ಪ್ರಾರಂಭಿಸುತ್ತಾರೆ. ಇದನ್ನು ಗಮನಿಸಿದ ಗಾಡಿಯವನು ‘ಗೋರೆಗಾಂವ್ ಇನ್ನೂ ದೂರ ಇರುವುದರಿಂದ ಪ್ರಯಾಣವನ್ನು ಇಲ್ಲಿಗೆ ನಿಲ್ಲಿಸಿ ನಾಳೆಗೆ ಮುಂದುವರೆಸೋಣ’ಎಂದೇಳುತ್ತಾಆ ದಾರಿಯ ಮಧ್ಯೆದಲ್ಲಿಯೇ ಇದ್ದ ಸುಂಕದವನ ಗುಡಿಸಲ ಬಳಿ ಗಾಡಿಯನ್ನು ನಿಲ್ಲಿಸಿ ಅಂದು ತಂಗಲು ನಿರ್ಧಾರಿಸುತ್ತಾರೆ.
ಗಾಡಿಯವನು ಮಲಗಲು ಪ್ರಾರಂಭಿಸುತ್ತಾನೆ. ಈ ಬಾಲಕರಿಗೆ ಹಸಿವಿನಿಂದ ಹೊಟ್ಟೆ ಹಿಂಡುತ್ತಿದೆ. ಊಟವೆನೊ ಇದೆ. ಆದರೆ ಕುಡಿಯಲು ನೀರಿಲ್ಲ. ಏನು ಮಾಡುವುದೆಂದು ತೋಚದೆ ಕೊನೆಯ ಸಲವಾಗಿ ತಮ್ಮ ಅಳಲನ್ನು ಗಾಡಿಯವನ ಬಳಿ ಹೇಳಿಕೊಳ್ಳುತ್ತಾರೆ. ಅವನು ‘ನೀವು ಅಸ್ಪೃಷ್ಯರಾದ ಕಾರಣ ನಿಮಗೆ ನೀರನ್ನು ಯಾರೂ ಕೊಡುವುದಿಲ್ಲ. ಹಾಗೇ ಒಮ್ಮೆ ಯೋಚಿಸಿ ಆ ಸುಂಕದವನ ಬಳಿ ನೀವು ಮುಸ್ಲಿಂರೆಂದು ಪರಿಚಯಿಸಿಕೊಂಡು ಕೇಳಿ ನೋಡಿ’ ಎಂದು ಸಲಹೆ ಕೊಡುತ್ತಾನೆ. ಅದೇ ರೀತಿಯಲ್ಲಿ ಉದರ್ುವಿನಲ್ಲಿ ಕುಡಿಯಲು ನೀರು ಕೇಳುತ್ತಾರೆ. ಆದರೆ, ಆ ಸುಂಕದವನು ಇವರನ್ನು ಅನುಮಾನದಿಂದ ನೋಡಿ ನೀರು ನನ್ನ ಬಳಿ ಇಲ್ಲವೆಂದು ನಿರಾಕರಿಸುತ್ತಾನೆ. ಅಂದು ರಾತ್ರಿ ಆ ಬಾಲಕರು ಹಸಿವಿನಿಂದ ನಿದ್ದೆ ಮಾಡಲಾಗದೆ ಆಕಾಶದತ್ತ ತಮ್ಮ ಕಣ್ಣಗಳನ್ನು ನೆಟ್ಟು ಹಾಲಿನ ಬಣ್ಣವನ್ನು ಹೊಂದಿರುವ ಚಂದ್ರನನ್ನು ನೋಡುತ್ತಾ ಆ ರಾತ್ರಿ ಕಳೆದು ಮುಂಜಾನೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಗೋರೆಗಾಂವ್ ತಲಪುತ್ತಾರೆ. ಅಸ್ಪೃಷ್ಯರಾಗಿದ್ದ ಅಂಬೇಡ್ಕರ್ ಅಂದು ಅನುಭವಿಸಿದ ಉಪವಾಸ ಇಂದಿನವರೆಗೂ ಮುಂದುವರೆದಿದೆ. ಇವತ್ತಿಗೂ ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂಬುದಕ್ಕೆ ನನ್ನದೇ ಒಂದು ಅನುಭವವನ್ನು ಹೇಳಬೇಕೆನಿಸುತ್ತದೆ.
ಕಾಲೇಜು ದಿನಗಳಲ್ಲಿ ನನ್ನ ಸ್ನೇಹಿತ(ಜಾತಿಯಲ್ಲಿ ಒಕ್ಕಲಿಗ) ಐದಾರು ಜನ ಹುಡುಗರನ್ನು ಅವರ ಮನೆಗೆ ಆಹ್ವಾನಿಸಿದ. ಅದರಲ್ಲಿ ನಾನೂ ಒಬ್ಬನಾಗಿದ್ದೆ. ಕಾಲೇಜಿನಿಂದ ಬಸ್ಸಿನಲ್ಲಿ ಅವರ ಊರಿಗೆ ಹೊರೆಟೆವು. ಅವನು ಬಸ್ಸಿನಲ್ಲಿ ನನ್ನ ಪಕ್ಕ ಕುಳಿತ. ಸ್ವಲ್ಪ ದೂರ ಕ್ರಮಿಸಿದ ನಂತರ ‘ನಿನಗೊಂದು ವಿಷಯ ಹೇಳುತ್ತೇನೆ ಬೇಜಾರು ಮಾಡ್ಕೋಬ್ಯಾಡ ಎಂದ. ಹೇಳೋ ಪರವಾಗಿಲ್ಲ ಎಂದೆ. ನನ್ನ ಮನೆಯವರು ನಿನ್ನನ್ನು ಮಾತನಾಡಿಸುವ ಸಂದರ್ಭದಲ್ಲಿ ನಿನ್ನ ಜಾತಿಯನ್ನು ಕೇಳುತ್ತಾರೆ. ಆಗ ನೀನು ಒಕ್ಕಲಿಗ ಎಂದೇಳು ಎಂದ. ನನಗೆ ಎದೆ ಒಂದು ಕ್ಷಣ ದಸ್ಸಕ್ಕೆಂದಿತು.
ಅನಿರೀಕ್ಷಿತವಾಗಿ ಬಂದ ಈ ಮಾತಿನಿಂದ ಒಮ್ಮೆಲೆ ನಾನು ಚಕಿತನಾದೆ. ನಾನೇನು ಅವನಿಗೆ ಉತ್ತರಿಸಲಿಲ್ಲ. ಅವರ ಮನೆ ಸಮೀಪಿಸಿತು. ಅವರ ಮನೆಯ ಒಳಗೆ ಹೋದೆವು. ಸ್ನೇಹಿತನ ತಾತಾ ಇದ್ದ. ಮಿಕ್ಕವರೆಲ್ಲಾ ತೋಟಕ್ಕೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಅವರ ತಂದೆ, ತಾಯಿ ಬಂದರು. ಅವರೇ ನಮ್ಮನ್ನು ಪರಿಚಯ ಮಾಡಿಕೊಂಡರು. ಹೀಗೆ ಮಾತನಾಡುತ್ತಾ ಇರಬೇಕಾದರೆ. ನನ್ನ ಸ್ನೇಹಿತನ ತಂದೆ ನಮ್ಮ ಗುಂಪಿನಲ್ಲಿದ್ದ ಕಪ್ಪು ಹುಡುಗನನ್ನು ನಿನ್ನದು ಯಾವ ಜಾತಿಯೆಂದು ನಯವಾಗಿ ಕೇಳಿದರು. ಅವನು ಒಕ್ಕಲಿಗನಾಗಿದ್ದರಿಂದ ಅವನು ಧೈರ್ಯವಾಗಿಯೇ ಉತ್ತರಿಸಿದ. ಬಹುಶಃ ನನ್ನ ಮುಖ ಸ್ವಲ್ಪ ಬೆಳ್ಳಗಿತ್ತು. ಹಾಗಾಗಿ ತಪ್ಪಿಸಿಕೊಂಡೆ. ಸ್ವಲ್ಪ ಸಮಾಧಾನ ಆಯಿತು. ಆ ಘಟನೆಯನ್ನು ಇನ್ನೂ ಮರೆಯಲು ಸಾದ್ಯವಾಗುತ್ತಿಲ್ಲ. ಇಂತಹ ಹಲವು ಘಟನೆಗಳನ್ನು ಅನುಭವಿಸಿದ್ದೇನೆ. ಇದು ನನ್ನೊಬ್ಬನ ಅನುಭವವಲ್ಲ. ಇಂತಹದ್ದೇ ಸನ್ನಿವೇಷಗಳನ್ನು ನನ್ನ ಹಲವು ಸ್ನೇಹಿತರು ಪ್ರತಿನಿತ್ಯ ಅನುಭವಿಸುತ್ತಿರುವ ಮಾನಸಿಕ ಯಾತನೆಯಾಗಿದೆ.





ಹೌದು ನಿಜಕ್ಕೂ ನಂಜು ಗಾಯ. ಒಣಗಿದೆ ಎಂದು ಭಾವಿಸಿದರು ಯಾವುದೊ ಕ್ಷಣದಲ್ಲಿ ಧಗ್ ಎಂದು ಕಣ್ಬಿಟ್ಟು ನೋವು ಕೊಡುತ್ತದೆ.
sir, my computer does not recognise kannada letters. recetangle boxes are appearing in the place of letters. pl suggest a solution