
ಎಚ್ ಎನ್ ಆರತಿ
ಅಪ್ಪಾಜಿಗೆ ಅಂಬರದಲ್ಲಿ 80!!!
ನಾಡೋಜ ಪ್ರೊ. ಹಂಪನಾ ಅವರ 80ರ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದದ್ದು, ಭೂಮಿ ಮೇಲಲ್ಲ, ಆಕಾಶದಲ್ಲಿ!!!
ಜನ, ಕೋಟಿ ಖರ್ಚು ಮಾಡುತ್ತಾರಂತೆ, ವಿಮಾನದಲ್ಲಿ, ಗಗಗನದಲ್ಲಿ, ಮೇಘಗಳ ಮಧ್ಯೆ, ಸ್ವರ್ಗಕ್ಕೆ ಏಣಿಹಾಕಿದಂತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ! ಆದರೆ, ಯಾವುದೇ ಯೋಜಿತ ಉದ್ದೇಶವಿಲ್ಲದೇ ಅಕ್ಟೋಬರ್ 6-7 ಆಗುವ ಮಧ್ಯರಾತ್ರಿ ನಾವು ಲುಫ್ತಾನ್ಸಾ ವಿಮಾನದಲ್ಲಿ ಫ್ರಾಂಕ್ ಫರ್ಟ್ ಗೆ ಹಾರುತ್ತಿದ್ದೆವು. ನನ್ನ ಅಣ್ಣ ಹರ್ಷವರ್ಧನ ಶುಭಕೋರಿ ಕೊಟ್ಟ ಒಂದು ದೊಡ್ಡ ಹೂಗುಚ್ಛ ನನ್ನ ತಂದೆಯವರ ಕೈಲಿತ್ತು.

ಅದರ ಸೌಂದರ್ಯಕ್ಕೆ ಮರುಳಾದ ಜರ್ಮನ್ ಗಗನಸಖಿ ನಮ್ಮ ಬಳಿ ಬಂದು ಆ ಪುಷ್ಪಜೋಡಣೆಯನ್ನು ಹೊಗಳುತ್ತಾ ಅದರ ಬಗ್ಗೆ ವಿಚಾರಿಸಿದಾಗ ನಾವು ಸಹಜವಾಗಿ, ಈ ಘಳಿಗೆ ನಮ್ಮ ತಂದೆಯ 80ನೇ ಹುಟ್ಟುಹಬ್ಬವೆಂದು ಹೇಳಿದ ಕೂಡಲೇ ಇಡೀ ವಿಮಾನದಲ್ಲಿ ವಿದ್ಯುತ್ ಸಂಚಾರವಾದಂತೆ ಆಕೆ ಸಂಭ್ರಮಿಸಿದಳು.
ಅಪ್ಪಾಜಿ ಹೋದಕಡೆಯೆಲ್ಲಾ ಆಗುವಂತೆ, ಈಗ ಮತ್ತೆ ಗಗನದಲ್ಲೂ ನಮ್ಮ ತಂದೆ VIP ಆಗಬೇಕಾಯ್ತು! Business class ಗೆ ಪರಿವರ್ತನೆ ಮಾಡಿ, ಅಲ್ಲೂ ರಾಜೋಪಚಾರ ದೊರೆಯಿತು, ಈ “ನಾಗರಾಜ”ರಿಗೆ!
![]()
ಅಪ್ಪಾಜಿ!!!
ದಿನಗಳೆದಂತೆ ನನಗೆ ಸೋಜಿಗವಾಗೋದು, ಎಲ್ಲರಿಗೂ (ನನ್ನನ್ನೂ ಸೇರಿ) ವಯಸ್ಸಾಗುತ್ತಾ ಬರುತ್ತಿದ್ದರೆ, ಜೀವನೋತ್ಸಾಹ ತುಂಬಿ ತುಳುಕುವ ನನ್ನ ತಂದೆ, ದಿನದಿಂದ ದಿನಕ್ಕೆ ಇನ್ನೂ ಹೆಚ್ಚು ಪುಟಿಯುತ್ತಾ ಯೌವನಿಗರಾಗುತ್ತಿರುವುದು!
ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ ಉರುಫ್ ಹಂಪನಾ ಎಂದೇ ಹೆಸರಾಗಿರುವ ಈ ವಿದ್ವಾಂಸರೂ, ಸಂಶೋಧಕರೂ, ಹಿರಿಯ ಸಾಹಿತಿಯೂ ಆಗಿರುವ ಅಪ್ಪಾಜಿಗೆ ಈಗ 80! ಇದು ಜಗತ್ತಿನ 8ನೇ ಅದ್ಭುತವೇ ಸರಿ. ಶುಗರ್, ಬಿಪಿಗಳನ್ನು ಹತ್ತಿರಕ್ಕೂ ಸೇರಿಸದೇ, ಈಗಲೂ ಮೂರು-ನಾಲ್ಕು ಒಬ್ಬಟ್ಟನ್ನು ಒಂದು ಮಿಳ್ಳೆ ತುಪ್ಪದೊಂದಿಗೆ ಸಲೀಸಾಗಿ ಸವಿಯಬಲ್ಲ ಈ ಸೊಗಸುಗಾರ, ನಗುಮೊಗದ ಸರದಾರ, ಚೈತನ್ಯದ ಮೋಡಿಗಾರ ಹಂಪನಾ ಅವರ ಹೃದಯವೆಂದರೆ ಅದು ಮೊಗೆದಷ್ಟೂ ಸಿಗುವ ಜೀವನಪ್ರೀತಿಯ ಅಮೃತಹೊತ್ತ ಕಣಜ.
ನಾಡೋಜ ಪ್ರೊ. ಹಂಪನಾ ಅವರ ಜೀವನವನ್ನು ನಾಲ್ಕು ಪ್ರಮುಖ ಘಟ್ಟಗಳಾಗಿ ವಿಂಗಡಿಸಬಹುದು ಅನಿಸುತ್ತದೆ.
ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ವಿದ್ಯಾರ್ಥಿದೆಸೆಯಲ್ಲಿ ಪಟ್ಟಣಗಳನ್ನು ಬದಲಾಯಿಸುತ್ತಾ, ಕೊನೆಗೆ ಗರಿಷ್ಠ ಅಂಕಗಳೊಡನೆ ಕನ್ನಡ ಸ್ನಾತಕೋತ್ತರ ಪದವಿ ಪಡೆದ “ಬೆರಗಿ”ನ ಹಂತ.
ನಂತರ ಅವರ ಪ್ರೇಮ, ಅಂತರಜಾತೀಯ ವಿವಾಹ, ವಿಸ್ತಾರ ಕ್ಯಾನ್ವಾಸಿನ ಬರವಣಿಗೆ ಹಾಗೂ ಅಪಾರ ಶಿಷ್ಯವೃಂದದ ಮೆಚ್ಚಿನ ಗುರುಗಳಾಗಿ ವಿದ್ಯಾದಾನ ಮಾಡಿದ “ಅರಿವಿ”ನ ಘಟ್ಟ.
ತನ್ನಲ್ಲಿನ ನಾಯಕತ್ವದ ಗುಣಗಳನ್ನು ದುಡಿಸಿಕೊಂಡು, ಬಂದ ರಾಜಕೀಯ ಆಹ್ವಾನಗಳನ್ನು ತಿರಸ್ಕರಿಸಿ, ಕನ್ನಡ ಭಾಷೆಯ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಸ್ತರಿಸಿದ ಭಾಗ. 8 ವರ್ಷಗಳಷ್ಟು ಸುಧೀರ್ಘವಾಗಿ ಅಧ್ಯಕ್ಷರಾಗಿ, ಆ ಸಂಸ್ಥೆಯ ಬಾಗಿಲುಗಳನ್ನು ಎಲ್ಲ ಜಾತಿ ಮತ ಪಂಗಡಗಳಿಗೆ, ಅಪಾರ ದೂಷಣೆ-ಕುತಂತ್ರಗಳ ನಡುವೆಯೂ ತೆರೆದಿಟ್ಟ “ಸವಾಲು-ಸಂಘರ್ಷ”ದ ಘಟ್ಟ.
ನಾಲ್ಲನೆಯ ಮುಖ್ಯ ಮಜಲಾಗಿ, ಹಂಪನಾ ಅವರು ಇಂಗ್ಲಿಷ್ ಭಾಷೆಯಲ್ಲಿ ಬರೆಯತೊಡಗಿದ್ದನ್ನು ಗುರುತಿಸಬಯಸುತ್ತೇನೆ. 20 ಕ್ಕೂ ಹೆಚ್ಚಿನ ಮಹತ್ವದ ಸಂಶೋಧನಾ ಕೃತಿಗಳನ್ನು, ಚರಿತ್ರೆಯ, ವಾಸ್ತುಶಿಲ್ಪದ, ಜೈನ ಸಿದ್ಧಾಂತದ ಹೊತ್ತಿಗೆಗಳನ್ನು ಕನ್ನಡೇತರರಿಗಾಗಿ, ಹೊರದೇಶದ ವಿದ್ವದ್ ಕುತೂಹಲಿಗಳಿಗಾಗಿ ರಚಿಸಿರುವುದು ಹಂಪನಾ ಅವರು ಕನ್ನಡ ಸಾಹಿತ್ಯದ ವಿಸ್ತಾರಕ್ಕೆ ಕೊಟ್ಟ ಬಹುಮೂಲ್ಯ ಬಳುವಳಿ. “ಸಾಫಲ್ಯ”ದ ಘಟ್ಟವಿದು.
ಇಂತಪ್ಪ ಸಾಧಕ ಹಂಪನಾಗರಾಜಯ್ಯ ಅವರ 80ರ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದದ್ದು, ಭೂಮಿ ಮೇಲಲ್ಲ, ಆಕಾಶದಲ್ಲಿ!!!
ಜನ, ಕೋಟಿ ಖರ್ಚು ಮಾಡುತ್ತಾರಂತೆ, ವಿಮಾನದಲ್ಲಿ, ಗಗಗನದಲ್ಲಿ, ಮೇಘಗಳ ಮಧ್ಯೆ, ಸ್ವರ್ಗಕ್ಕೆ ಏಣಿಹಾಕಿದಂತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ! ಆದರೆ, ಯಾವುದೇ ಯೋಜಿತ ಉದ್ದೇಶವಿಲ್ಲದೇ ಅಕ್ಟೋಬರ್ 6-7 ಆಗುವ ಮಧ್ಯರಾತ್ರಿ ನಾವು ಲುಫ್ತಾನ್ಸಾ ವಿಮಾನದಲ್ಲಿ ಫ್ರಾಂಕ್ ಫರ್ಟ್ ಗೆ ಹಾರುತ್ತಿದ್ದೆವು. ನನ್ನ ಅಣ್ಣ ಹರ್ಷವರ್ಧನ ಶುಭಕೋರಿ ಕೊಟ್ಟ ಒಂದು ದೊಡ್ಡ ಹೂಗುಚ್ಛ ನನ್ನ ತಂದೆಯವರ ಕೈಲಿತ್ತು.
ಅದರ ಸೌಂದರ್ಯಕ್ಕೆ ಮರುಳಾದ ಜರ್ಮನ್ ಗಗನಸಖಿ ನಮ್ಮ ಬಳಿ ಬಂದು ಆ ಪುಷ್ಪಜೋಡಣೆಯನ್ನು ಹೊಗಳುತ್ತಾ ಅದರ ಬಗ್ಗೆ ವಿಚಾರಿಸಿದಾಗ ನಾವು ಸಹಜವಾಗಿ, ಈ ಘಳಿಗೆ ನಮ್ಮ ತಂದೆಯ 80ನೇ ಹುಟ್ಟುಹಬ್ಬವೆಂದು ಹೇಳಿದ ಕೂಡಲೇ ಇಡೀ ವಿಮಾನದಲ್ಲಿ ವಿದ್ಯುತ್ ಸಂಚಾರವಾದಂತೆ ಆಕೆ ಸಂಭ್ರಮಿಸಿದಳು. ಅಪ್ಪಾಜಿ ಹೋದಕಡೆಯೆಲ್ಲಾ ಆಗುವಂತೆ, ಈಗ ಮತ್ತೆ ಗಗನದಲ್ಲೂ ನಮ್ಮ ತಂದೆ VIP ಆಗಬೇಕಾಯ್ತು! Business class ಗೆ ಪರಿವರ್ತನೆ ಮಾಡಿ, ಅಲ್ಲೂ ರಾಜೋಪಚಾರ ದೊರೆಯಿತು, ಈ “ನಾಗರಾಜ”ರಿಗೆ!
ಮುಖ್ಯಕತೆಗಿಂತಾ ಉಪಕತೆಯೇ ಜೋರಾದ ಈ ಲೇಖನದಲ್ಲಿ, ನಂತರದ ಫ್ರಾಂಕ್ಫರ್ಟಿನ 3 ದಿವಸಗಳನ್ನು ಎಗರಿಸಿ, ಸೀದಾ ಬರ್ಲಿನ್ ನ ಸುಪ್ರಸಿದ್ಧ ಹಂಬೋಲ್ಟ್ ಯೂನಿವರ್ಸಿಟಿಗೆ ಹೋಗೋಣ. ಅಕ್ಟೋಬರ್ 10ರಂದು ಬೆಳಿಗ್ಗೆ ಪ್ರೊ.ಹಂಪನಾ ಅವರ ಹುಟ್ಟುಹಬ್ಬದ ಆಚರಣೆ.
ಪ್ರಸಿದ್ಧ ಚಿಂತಕ, ಬರಹಗಾರ ಹಂಬೋಲ್ಟ್ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ವಿಶ್ವವಿದ್ಯಾನಿಲಯ ಹಲವು ವಿಭಾಗಗಳಲ್ಲಿ ಅದೆಷ್ಟೋ ಎಕರೆಗಟ್ಟಲೆ ವಿಶಾಲವಾಗಿ ಹರಡಿದೆ.
Centre for the Study of Modern Jainism ಹಾಗೂ Department of Museum Studies ವತಿಯಿಂದ ಆಯೋಜಿಸಲ್ಪಟ್ಟಿದ್ದ ಈ ಕಾರ್ಯಕ್ರಮದ ಮುಖ್ಯ ರೂವಾರಿ ಪ್ರೊ.ಪ್ಯಾಟ್ರಿಕ್ ಕ್ರೂಗರ್.
ಆರಡಿ ಮೂರು ಅಂಗುಲ ಎತ್ತರದ ಪ್ಯಾಟ್ರಿಕ್ ಅವರು ಮಗುವಿನಂತೆ ಮುಗುಳುನಗುತ್ತಾ ಬಂದು ಹಂಪನಾ ಅವರನ್ನು ಬಿಗಿದಪ್ಪಿ ಬರಮಾಡಿಕೊಂಡ ದೃಶ್ಯ ಇನ್ನೂ ಕಣ್ಣಲ್ಲೇ ಕೂತಂತಿದೆ.
ಪ್ರಪಂಚದ ವಿವಿಧ ದೇಶಗಳಿಂದ ಅನೇಕ ವಿದ್ವಾಂಸರು ಹಂಪನಾ ಅವರನ್ನು ಅಭಿನಂದಿಸಲೆಂದೇ ಬರ್ಲಿನ್ ಗೆ ಬಂದಿದ್ದ ವಿಶೇಷ ಸಭೆಯಿದು. ನಿರಾಳವಾಗಿ ಜುಳುಜುಳು ಹರಿವ ನದಿಗೆ ಅಂಟುಕೊಂಡಿದ್ದ ಸಭಾಂಗಣವಂತೂ ಕಾರ್ಯಕ್ರಮಕ್ಕೆ ಸುಂದರ ಮುನ್ನುಡಿ ಬರೆದಂತಿತ್ತು.
8 ಡಿಗ್ರಿ ಚಳಿಯೊಡನೆ ಥಂಡಿ ಗಾಳಿ ಬಲವಾಗಿ ಬೀಸುತ್ತಿದ್ದರೂ, ತುಂಬಿದ ಕೊಡದಂತಿದ್ದ ವಿದ್ವದ್ ಜನರ ಮನಸ್ಥಿತಿಯಂತೆ ಹಿತವಾಗಿ ಇರುವಂತೆ ಉಷ್ಣತಾ ವ್ಯವಸ್ಥೆ ಮಾಡಲಾಗಿತ್ತು.
ಅನೇಕ ಚಾಕೊಲೇಟ್, ಬಿಸ್ಕತ್ತುಗಳನ್ನು ಅಂದವಾಗಿ ಜೋಡಿಸಿಟ್ಟದ್ದರೂ, ನಮ್ಮ ಅಪ್ಪಾಜಿ ಹಿರಿಯ ಮಗಳು ರಾಜ್ಯಶ್ರೀ ಮೂಡಬಿದ್ರೆಯಿಂದ ಹೊತ್ತುತಂದ ಹುರಿದ ಗೋಡಂಬಿಯನ್ನು ಅಲ್ಲಿ ಜೋಡಿಸಿದ್ದಂತೂ, ವಿದೇಶೀ ವಿದ್ವಾಂಸರಿಗೆ ತುಂಬಾ ಮುದ ನೀಡಿತು. ಪದೇಪದೇ ಎಲ್ಲರ ಕೈ ಅಲ್ಲಿಗೇ ಹೋಗಿದ್ದು ನೋಡಿದ ಮೇಲಂತೂ, ನಮ್ಮ ತಂದೆಯ ಅಭಿರುಚಿಯ ಬಗ್ಗೆ ನಮಗೂ ಹೆಮ್ಮೆ.
ನಾನು ಮತ್ತು ನನ್ನ ಅಕ್ಕ ರಾಜ್ಯಶ್ರೀಯ ಪ್ರಾರ್ಥನೆಯಿಂದ ಕಾರ್ಯಕ್ರಮ ಶುಭಾರಂಭಗೊಂಡಿತು. ಜೈನ ಸಂಪ್ರದಾಯದ ನಮೋಕಾರ ಮಂತ್ರ ಹಾಗೂ ಪ್ರಾಕೃತ ಭಾಷೆಯ ಗೊಮ್ಮಟಸ್ತುತಿಯನ್ನು ಇಬ್ಬರೂ ಹಾಡಿದೆವು.
ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿ, ಹಂಪನಾ ಅವರ ಅಧ್ಯಯನ-ಅಧ್ಯಾಪನದ ಬಗ್ಗೆ ಬೆಳಕು ಚೆಲ್ಲಿ, ಈ ಸಮಾರಂಭದ ಮಹತ್ವ ವಿವರಿಸಿದವರು ಪ್ರೊ.ಪ್ಯಾಟ್ರಿಕ್ ಕ್ರೂಗರ್.
ಡಾ.ಆಲಿವರ್ ರಂಪ್, ಹಿರಿಯ ವಿದ್ವಾಂಸರು ಹಾಗೂ Department of South Asian Art Historyಯ ಮುಖ್ಯಸ್ಥರಾಗಿದ್ದವರು. ಹಂಪನಾ ಅವರ ಒಟ್ಟಾರೆ ಇಂಗ್ಲಿಷ್ ಬರವಣಿಗೆಯಿಂದ ವಿದೇಶದಲ್ಲಿರುವ ವಿದ್ವಾಂಸರಿಗೆ ಹೇಗೆ ಅದು ಅಧ್ಯಯನಕ್ಕೆ ವರವಾಗಿ ಪರಿಣಮಿಸಿದೆ ಎಂಬುದನ್ನು ವಿವರಿಸಿದರು.
ಹಂಪನಾ 80ರ ಗೌರವಕ್ಕೆಂದು ಪ್ರಪಂಚದ ಉತ್ತಮ ಸಂಶೋಧಕರು ಬರೆದ ಪ್ರಬಂಧಗಳ ಮೌಲಿಕ ಕೃತಿ “ಸನ್ಮತಿ” ವಿದ್ವದ್ ಗ್ರಂಥವನ್ನು ಲೋಕಾರ್ಪಣೆ ಮಾಡಿದವರು ಖ್ಯಾತ ಸಂಶೋಧಕಿ ಪ್ರೊ. ಡಾ. ನಳಿನಿ ಬಲಬೀರ್ ಅವರು. ಪ್ಯಾರಿಸಿನ ಸಾರ್ಬೋನೆ ವಿಶ್ವವಿದ್ಯಾಲಯದಲ್ಲಿ Department of Iranian and Indian Studiesನ ಮುಖ್ಯಸ್ಥರು.
ಹಂಪನಾ ಅವರಿಗೆ 75 ತುಂಬಿದಾಗ ಸಮರ್ಪಿಸಿದ ಗೌರವ ಗ್ರಂಥದ ಸಂಪಾದಕಿಯಾಗಿ ಗುರುತರ ಜವಾಬ್ದಾರಿಯನ್ನು ವಹಿಸಿದ್ದ ಪ್ರೊ.ನಳಿನಿ ಬಲಬೀರ್, ತನಗಾದ ಸಂತಸ, ಆತ್ಮತೃಪ್ತಿಯ ಬಗ್ಗೆ ಹಂಪನಾ ಎಂಬ ಚೇತನದ ಕತೃರ್ತ್ವ ಶಕ್ತಿಯ ಬಗ್ಗೆ ವಿವರಿಸಿದರು.
ಡಾ.ನಟಾಲಿಯಾ ಜೆಲೆಜ್ನೋವಾ ಬಂದಿದ್ದು ರಷ್ಯಾದ ಮಾಸ್ಕೋದಿಂದ. ಚಟುವಟಿಕೆಯ ಈ ಸುಂದರ ವಿದ್ವಾಂಸೆ ರಷ್ಯಾದಲ್ಲಿ ಜೈನ ಅಧ್ಯಯನದ ಕುರಿತು ಮಾತನಾಡಿದರು. ಅವರು ಭಾರತಕ್ಕೆ ಬಂದು ಸೊಗಸಾದ ಹಿಂದಿ ಕಲಿತಿರುವುದೇ ಅಚ್ಚರಿ. ಅಲ್ಲದೇ ದಿನಕ್ಕೆ ಒಂದೇ ಹೊತ್ತು ಊಟ ಮಾಡುವ ಇವರು ಸೂರ್ಯಾಸ್ತವಾದ ಮೇಲೆ ಜೈನ ಸಂಪ್ರದಾಯದಂತೆ ಊಟ ಕೂಡಾ ಮಾಡುವುದಿಲ್ಲ ಎಂಬ ಸುದ್ದಿ ತಿಳಿದು ಅಚ್ಚರಿಯಾಯಿತು.
ಅಲ್ಲಿದ್ದ ಬಹುಪಾಲು ಮಂದಿ ಸಸ್ಯಾಹಾರಿಗಳಾದ್ದರಿಂದ ಒಂದು ವಿಶಿಷ್ಟವಾದ “ವೇಗನ್” ರೆಸ್ಟೋರೆಂಟ್ ನಲ್ಲಿ ಮಧ್ಯಾಹ್ನ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು.
ನದಿಯ ತೀರದಲ್ಲಿ ಸೊಗಸಾದ ವಾತಾವರಣದಲ್ಲಿ ಕೇಳಿಬರುತ್ತದ್ದ ಸಂಭಾಷಣೆ, ಈಗಿನ ಯುವಕರನ್ನು ವಿಷಯದ ಆಳ ಅಧ್ಯಯನಕ್ಕೆ ಕರೆತರುವುದು ಹೇಗೆ? ಎಂಬುದಾಗಿತ್ತು. ಒಬ್ಬೊಬ್ಬರೂ ಕನಿಷ್ಟ 30 ವರ್ಷಗಳಷ್ಟು ಅದ್ಯಾಪಕ ವೃತ್ತಿಯಲ್ಲಿದ್ದವರು…
ನಂತರ ಮತ್ತೆ ಆರಂಭಗೊಂಡ ಸಮಾರಂಭದಲ್ಲಿ, ಶತಮಾನಗಳಷ್ಟು ಪುರಾತನ ಪ್ರಾಕೃತ ಗ್ರಂಥ “ಕುವಲಯಮಾಲ”ವನ್ನು ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿರುವ ಪ್ರೊ.ಕ್ರಿಸ್ಟೀನ್ ಚೋಜ್ನಾಕಿ, ಕುವಲಯಮಾಲ ಕುರಿತು ವಿಸೃತವಾಗಿ ವಿವರಿಸಿದರು.
ಅಪಭ್ರಂಷ ಭಾಷೆಯಲ್ಲಿರುವ “ಗಣಿತಸಾರ ಕೌಂಬುದಿ”ಯ ಬಗ್ಗೆ ವಿಸ್ತಾರವಾಗಿ, ಗಣಿತದ ಬಂಧಗಳ ಚಿತ್ರಗಳ ಮೂಲಕ ವಿವರಿಸಿದವರು, ಡಾ.ಎಸ್.ಆರ್.ಶರ್ಮ. ಜರ್ಮನಿಯಲ್ಲೇ ದಶಕಗಳಿಂದ ನೆಲೆಸಿರುವ ಇವರು, ಹಂಪನಾ ಅವರಿಗೆ ಗೌರವ ಸೂಚಿಸಿ, ಯಾವ ಕಡೆಯಿಂದ ಕೂಡಿದರೂ 80 ಸಂಖ್ಯೆ ಬರುವ ಗಣಿತದ ಚೌಕಟ್ಟನ್ನು ತಯಾರಿಸಿ, ಶುಭಕೋರಿದ್ದು ಎಲ್ಲರ ಮನಸೆಳೆಯಿತು.
ಪ್ರಾಗ್ ಝೆಕ್ ರಿಪಬ್ಲಿಕ್ ನಲ್ಲಿ ನಡೆಯುತ್ತಿರುವ ಅಧ್ಯಯನ ಕುರಿತು ಮಾತನಾಡಿದವರು, ಡಾ.ಜೋಸೆಫ್ ಬರ್ತೋಸೆಕ್. ಸಂತನಂತಾ ಭುಜದಾಟುವ ಬಂಗಾರಬಣ್ಣದ ಕೂದಲಿನ ಈ ಅಧ್ಯಾಪಕರು ಅಪ್ಪಾಜಿಯನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ ಜೀವ.
ನೆದರ್ ಲ್ಯಾಂಡ್ ನ ಪ್ರೊ. ಜೈಂಝಂಬೋಸ್ ತನ್ನ ವಿದ್ಯಾರ್ಥಿದೆಸೆಯಿಂದಲೂ ಹಂಪನಾ ಹೇಗೆ ತನಗೆ ಮಾರ್ಗದರ್ಶನ ಮಾಡಿದರು ಎಂಬುದನ್ನು ವಿವರಿಸಿದರು. 70ರ ದಶಕದಲ್ಲಿ ತಾನು ಕೇವಲ ಒಬ್ಬ ವಿದ್ಯಾರ್ಥಿಯಾಗಿ ಬರೆದ ಪತ್ರಕ್ಕೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಂದ ಸ್ವಹಸ್ತಾಕ್ಷರದಲ್ಲಿ ಉತ್ತರ ಬರೆದ ಭೂಮಿ ತೂಕದ ವಿದ್ವಾಂಸ, ಈ ಹಂಪನಾ ಎಂದು ಹೇಳುತ್ತಾ, ಯಾವ ಸಂಶಯವಿದ್ದರೂ, ಯಾವುದೇ ಸಮಯದಲ್ಲೂ, ಯಾರಿಗಾದರೂ ಹಂಪನಾ ಸಹಾಯ ಮಾಡುತ್ತಾರೆ, ಅದಕ್ಕೆ ನಾನೇ ಉದಾಹರಣೆ ಎಂದು ಭಾವಪೂರ್ಣವಾಗಿ ನುಡಿದರು.
ಒಂದು ತಿಂಗಳು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದ ಜರ್ಮನಿಯ ವಿದ್ಯಾರ್ಥಿಗಳು ಅವರವರ ಅಧ್ಯಯನ ಕುರಿತು ಮಂಡಿಸಿದ ಪ್ರಬಂಧಗಳು ಅಸಕ್ತಿಪೂರ್ಣವಾಗಿದ್ದವು.
ಹಿರಿಯ ವಿದ್ವಾಂಸ ಪ್ರೊ.ಹಂಪನಾ ಅವರು ಮಾತನಾಡಿ, ತಾನು ಈಗಲೂ ಬರೆಯಲು ಕೂತರೆ ಇನ್ನೂ 25 ವರ್ಷಗಳಿಗಾಗುವಷ್ಟು ಮಾಹಿತಿ ತನ್ನ ಬಳಿ ಇದೆ ಎಂದು ಹೇಳಿದಾಗ ಎಲ್ಲರೂ ಎದ್ದು ನಿಂತು ಕರತಾಡನ ಮಾಡಿದರು. ನಾನು ಇಲ್ಲಿ ಅಂತಾರಾಷ್ರ್ಟೀಯಮಟ್ಟದಲ್ಲಿ ನಿಂತಿರುವುದೆ ಒಂದು ವಿಸ್ಮಯ ಎಂದ ಹಂಪನಾ, ಹಂಪಸಂದ್ರದ ನೆಲದಿಂದ ಬಂದವನು ಈ ಗೌರವಕ್ಕೆ ಪಾತ್ರನಾಗಿರುವುದಕ್ಕೆ ಅನೇಕರು ಕಾರಣವೆಂದು, ತನ್ನ ಗುರುಪರಂಪರೆಯಿಂದ ಹಲವರನ್ನು ಸ್ಮರಿಸಿದರು.
ಅಪೂರ್ವ ಹಾಸ್ಯಪ್ರಜ್ಞೆ ಹೊಂದಿರುವ ಹಂಪನಾ, ಅಜಾತಶತ್ರು. ಈಗಲೂ 10 ರಿಂದ 12 ಗಂಟೆಗಳ ಕಾಲ ಪುಸ್ತಕಗಳ ನಡುವೆಯೇ ಕಾಲ ಕಳೆಯುವ ಅವರ ಏಕಾಗ್ರತೆ, ಅಧ್ಯಯನಶೀಲತೆ ಹಾಗೂ ನಿಗರ್ವಿ ಸ್ವಭಾವ ಅನುಕರಣೀಯ.
ಜರಿ ಶಾಲು ಹೊದಿಸಿ, ಪೇಟ ತೊಡಿಸಿ, ಏಲಕ್ಕಿ ಹಾರ ತೊಡಿಸಿ ಹಂಪನಾ ಅವರಿಗೆ ಮಾಡಿದ ಸನ್ಮಾನ ಅವರ ವಿದ್ವತ್ತಿಗೆ ಮಾಡಿದ ಗೌರವ. ಪ್ರೊ.ಕಮಲಾ ಹಂಪನಾ, ಹಂಪನಾ ದಂಪತಿಗಳಿಗೆ ನಾಡು ನೀಡಿದ ಮನ್ನಣೆಯೊಂದಿಗೆ, ಈಗ ವಿದೇಶದ ನೆಲದಲ್ಲೂ ನುಡಿನಮನ, ಗೌರವ ಸಂಪುಟ ಸಮರ್ಪಣೆ ಕನ್ನಡಕ್ಕೆ ಸಿಕ್ಕ ಮನ್ನಣೆಯೂ ಹೌದು.
ಆರತಿ.ಎಚ್.ಎನ್



0 Comments