ಮೈಸೂರಿನಲ್ಲಿ ಜರುಗಿದ ಮದುವೆಯೊಂದು ದೇಶದ ಎಲ್ಲೆಡೆ ಚರ್ಚೆಯನ್ನು ಹುಟ್ಟು ಹಾಕಿದೆ.
ಮಂಡ್ಯದ ಯುವ ಜೋಡಿಯೊಂದು ಮದುವೆಗೆ ಸಜ್ಜಾದದ್ದೇ ತಡ ಜಾತಿ, ಧರ್ಮದ ಪ್ರಶ್ನೆಗಳು ಎದ್ದು ನಿಂತವು. ಹಿಂದೂ ಹುಡುಗಿ- ಮುಸ್ಲಿಂ ಹುಡುಗ ಎನ್ನುವುದು ಒಂದೆಡೆ ಜಾತಿ ಸಂಘಟನೆಯನ್ನೂ, ಇನ್ನೊಂದೆಡೆ ಕೋಮು ಸಂಘಟನೆಗಳನ್ನೂ ಚುರುಕುಗೊಳಿಸಿತು.
ಈ ಮಧ್ಯೆ ಈ ಮದುವೆಯಲ್ಲಿ ಮತಾಂತರ ಆಗಿದ್ದು ಏಕೆ? ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕೇಳಿಬರುತ್ತಿದೆ. ಮತಾಂತರ ಇಲ್ಲದೆ ಮದುವೆಯಾಗಲು ಸಾಧ್ಯವಾಗಿದ್ದರೆ ಅದು ಒಂದು ಮಹಾನ್ ಮೌಲ್ಯವಾಗುತ್ತಿತ್ತು ಎನ್ನುವ ವಾದ.
ಈ ಬಗ್ಗೆ ಮೂವರು ಚಿಂತಕರ ನೋಟ ಇಲ್ಲಿದೆ
ನಿಮ್ಮ ಅಭಿಪ್ರಾಯ ಏನು
ಮೇಲ್ ಮಾಡಿ
avadhimag@gmail.com

ಉಷಾ ಕಟ್ಟೇಮನೆ
ನಿನ್ನೆ ಮಂಡ್ಯದಲ್ಲಾದ ಮದುವೆ ಅಂತರ್ಧರ್ಮೀಯ ಮದುವೆ ಎಂಬುದನ್ನು ನಾನೊಪ್ಪುವುದಿಲ್ಲ.
ಹುಡುಗಿ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗಿ ಮದುವೆಯಾಗಿದ್ದಾಳೆ. ಮುಂದೆ ಅವಳು ಓರ್ವ ಮುಸ್ಲಿಂ ಆಗಿ ಬದುಕುತ್ತಾಳೆ.
ಒಂದು ವೇಳೆ ಆಕೆ ಹಿಂದುವೇ ಆಗಿದ್ದು, ಆತ ಮುಸ್ಲಿಮನೇ ಆಗಿದ್ದು.. ಸ್ವಂತ ವ್ಯಕ್ತಿತ್ವಗಳನ್ನು ಉಳಿಸಿಕೊಂಡು ಮದುವೆ ಆಗಿದ್ದರೆ ಅದು ಪ್ರೇಮದ ಗೆಲುವಾಗುತ್ತಿತ್ತು.
ಇಷ್ಟೆಲ್ಲಾ ರಾದ್ಧಾಂತವಾದ ಮೇಲೂ ಅವರು ಅವರಾಗಿಯೇ ಉಳಿದುಕೊಂಡು, ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಯಾಕೆಂದರೆ ಎರಡೂ ಮನೆಯವರು ವಿದ್ಯಾವಂತರಾಗಿದ್ದು ಆರ್ಥಿಕವಾಗಿ ಸದೃಢರಾಗಿದ್ದರು. ಆರ್ಥಿಕ ಸ್ವಾಲಂಬನೆಯೆಂಬುದು ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿಬಿಡುತ್ತದೆ.
ಅವರು ತಮ್ಮ ತಮ್ಮ ನಿಲುವುಗಳಿಗೆ ಬದ್ಧರಾಗಿ ನಿಂತಾಗ ಒಂದು ವೇಳೆ.. ಒಂದು ವೇಳೆ ಪ್ರೇಮ ವೈಪಲ್ಯವೇ ಆಗಿದ್ದರೂ ಅದೊಂದು ದಾಖಲೆಯಾಗಿ, ಮೇಲ್ಪಂಕ್ತಿಯಾಗಿ ಉಳಿದುಬಿಡುತ್ತಿತ್ತು.
ಆದ್ರೆ ಈಗ ಈ ಮದುವೆ ಹತ್ತರಲ್ಲಿ ಹನ್ನೊಂದನೆಯದಾಗಿ ವ್ಯವಸ್ಥೆಯ ಭಾಗವಾಗಿ ಹೋಗಿದೆ.
ಮದುವೆಯೆಂಬುದು ಖಾಸಗಿ ವಿಷಯ.
ಹಾಗಾಗಿ ಇನ್ನು ಮುಂದೆ ಇದರ ಬಗ್ಗೆ ನಾವು ಮೌನವಾಗಿರೋದೇ ಒಳ್ಳೆಯದು.
ಅವರಿಬ್ಬರೂ ಸುಖವಾಗಿರಲಿ, ಇದಷ್ಟೇ ನಮ್ಮ ಹಾರೈಕೆ.

ಹರವು ಸ್ಫೂರ್ತಿ ಗೌಡ
ಮಂಡ್ಯ ಭಿನ್ನ ಧರ್ಮೀಯ ವಿವಾಹ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾಯಿತು, ಧರ್ಮ ಗಡಿಗಳನ್ನು ಮೀರಿ ನಡೆದ ಮದುವೆ ಮುಟ್ಟಿದ್ದಾದರು ಎಲ್ಲಿಗೆ ಮತ್ತೊಂದು ಧರ್ಮಕ್ಕೆ ಮಾತಾಂತರಗೊಳ್ಳುವುದ??
ಇದರಲ್ಲಿ ಇಂದಿನ ಕಾಲಘಟ್ಟಕ್ಕೆ ಬೇಕಾದ ಕ್ರಾಂತಿಕಾರಿಯಾದ ಹೊಸದ್ದೇನು ಇದೆ.. ಬಸವ ಕಾಲದಲ್ಲೇ ಅಂತರಜಾತಿ ವಿವಾಹ ಚಾಲ್ತಿಗೆ ಬಂತು.. ಸಮಕಾಲೀನ ವರ್ತಮಾನಕ್ಕೆ ಬದಲಾಗಬೇಕಿದ್ದ ಹೆಣ್ಣಿನ ಸ್ಥಾನಮಾನದ ಹಲವು ಧರ್ಮ ಸೂಕ್ಷ್ಮತೆ ಹಾಗೇ ಉಳಿದಿದೆ..
ಹುಡುಗನ ಧರ್ಮಕ್ಕೆ ಮಾತಾಂತರಗೊಳ್ಳುವ ಸ್ತ್ರೀ ಅಸ್ಮಿತೆ ಎಲ್ಲಿ?? ನಾವೆಲ್ಲರೂ ಬೆಂಬಲಿಸಬೇಕಾದ್ದು ಮಾತಾಂತರವ?? ಇಬ್ಬರು ತಮ್ಮ ಧರ್ಮಗಳನ್ನು ತೊರೆಯಬಹುದಿತ್ತು.. ಹಿಂದು-ಮುಸ್ಲಿಂ ಯಾವ ಧರ್ಮವು ಬೇಕಾಗಿರಲಿಲ್ಲ ಪ್ರೇಮ ಧರ್ಮವನ್ನ ಆಯ್ಕೆ ಮಾಡಿಕೊಳ್ಳಬಹುದಿತ್ತು..

ಸಂವರ್ಥ ಸಾಹಿಲ್
ಮಂಡ್ಯದ ಜೋಡಿ ಪರಸರ ಪ್ರೀತಿಸಿ ಮದುವೆ ಆಗಲು ನಿಶ್ಚಯಿಸಿದರು. ಅದು ಅಂತರ್ಧರ್ಮೀಯ ವಿವಾಹ. ಅದರಲ್ಲಿ ಹೆಣ್ಣು ಹಿಂದುವಾಗಿದ್ದು ಗಂಡು ಮುಸಲ್ಮಾನನಾಗಿದ್ದಾನೆ. ಸಂಘ ಪರಿವಾರ ತಾನು ನಂಬಿದ ಸಿದ್ಧಾಂತಕ್ಕೆ ವಿರುದ್ಧ ದಿಕ್ಕಿನಲ್ಲಿ ಈ ಮದುವೆ ಸಾಗುತ್ತಿದೆ ಎಂಬ ಕಾರಣಕ್ಕೆ ಈ ಮದುವೆಯನ್ನು ತಡೆಯಲು ಪ್ರಯತ್ನಿಸಿತ್ತು.
ಸಂಘ ಪರಿವಾರವನ್ನು ವಿರೋಧಿಸುವ ಭರದಲ್ಲಿ ಇದು ಮತಗಳ ನಡುವಿನ ಗೋಡೆಯನ್ನು ಶಾಶ್ವತವಾಗಿ ಕೆಡವುವ ಮತ್ತು ಕೋಮು ಸಾಮರಸ್ಯದ ಪ್ರತೀಕ ಈ ಮದುವೆ ಎಂಬಂತೆ ಹಲವರಿಂದ
ಬಿಂಬಿಸಲಾಯಿತು. ಅದೇ ಮಂದಿ ಮದುವೆ ನಡೆದ ಬಳಿಕ ಹೆಣ್ಣು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಕಾರಣಕ್ಕೆ ಈ ಮದುವೆ ಕುರಿತು ಆಕ್ಷೇಪ ಎತ್ತುತ್ತಿರುವುದು ಸ್ವಲ್ಪ ವಿಚಿತ್ರವಾಗಿದೆ.
ಈ ಮದುವೆ ನಾವು ನಂಬಿದ ಸಿದ್ಧಾಂತಗಳ ಎತ್ತಿ ಹಿಡಿಯುವ ರೀತಿಯಲ್ಲಿ ಆಗಲಿಲ್ಲ ಎಂದು ಬೇಸರಿಸಿಕೊಳ್ಳುವುದು ಸಂಘ ಪರಿವಾರ ತಾನು ನಂಬಿದ ಸಿದ್ಧಾಂತದ ಪ್ರಕಾರ ಆ ಹೆಣ್ಣು ಮಗಳು ನಡೆದುಕೊಂಡಿಲ್ಲ ಎಂದು ಹೇಳುವುದಕ್ಕೆ ಸ್ವಲ್ಪ ಸಮನಾಗಿದೆಯೇನೋ ಅಂತ ಅನ್ನಿಸುತ್ತಿದೆ.
ಮದುವೆಯಲ್ಲಿ ಯಾವಾಗಲು ಹೆಣ್ಣು ಮತ್ತು ಹೆಣ್ಣಿನ ಕಡೆಯವರೇ ಬಾಗಬೇಕು ಎಂಬುದು ದುರಂತ.
ಆದರೂ ಕನಿಷ್ಠ ಮತಗಳ ಗೋಡೆ ದಾಟಿ ಒಂದು ಮದುವೆ ನಡೆಯಿತು ಎಂಬುದೇ ದೊಡ್ಡ ಸಂಗತಿ. ಆ ಮದುವೆ ಮತಗಳ ಗೋಡೆ ಮುರಿಯಲಿಲ್ಲ ಎಂಬುದು ಎಂಬುದು ಅಷ್ಟೊಂದು ದೊಡ್ಡ ಸಮಸ್ಯೆ ಆಗಬೇಕಿಲ್ಲ ಎಂದು ನನ್ನ ಅನಿಸಿಕೆ. ಅಷ್ಟಕ್ಕೂ ಆ ಜೋಡಿ ಕೋಮು ಸೌಹಾರ್ದದ ಮೌಲ್ಯ ಎತ್ತಿ ಹಿಡಿಯಲು ಮದುವೆ ಆಗಲು ಹೊರಟಿದ್ದೇ ಅಲ್ಲ. ಸೌಹಾರ್ದದ ಮತ್ತು ಜಾತಿಮುಕ್ತ ಸಮಾಜದ ಅಗತ್ಯ ಇರುವಾಗಲೂ ಆ ನಿರೀಕ್ಷೆಯನ್ನು ಅವರ ಮೇಲೆ ಹೇರುವುದು ಸರಿಯಲ್ಲ.
ಕ್ರಾಂತಿಯೇ ಬೇಕಿದ್ದರೆ ನಾವು ಇಲ್ಲಿ ಕೇಳಿಕೊಳ್ಳಬೇಕಾದ ಇನ್ನೂ ಮೂಲಭೂತವಾದ ಪ್ರಶ್ನೆಗಳು: ಮದುವೆಗೆ ಅಪ್ಪ-ಅಮ್ಮನ ಅಪ್ಪಣೆ ಯಾಕೆ ಅಗತ್ಯ ಇತ್ತು? ಪರಸ್ಪರ ಇಷ್ಟ ಇದ್ದರೆ ಸಾಕಲ್ಲವೆ ಜೊತೆಗಿರಲು! ಮದುವೆ ಅನ್ನುವುದೇ ಯಾಕೆ ಅಗತ್ಯ ಇತ್ತು? ಮದುವೆ ಆಗದೆಯೂ ಒಟ್ಟಿಗೆ ಬಾಳ್ವೆ ನೆಡೆಸಬಹುದಿತ್ತಲ್ಲವೆ?
ಆದರ್ಶಗಳು ಬೇಕು. ಆದರೆ ಬದುಕು ನಮ್ಮ ಆದರ್ಶಗಳನ್ನು ವಾಸ್ತವಾಗಿಸುವ ದಿಕ್ಕಿನಲ್ಲಿ ಯಾವಾಗಲೂ ಸಾಗುವುದಿಲ್ಲ ಎಂಬ ವಿನಯ ನಮಗಿರಲಿ.
ಆ ಹೆಣ್ಣಿಗೆ ಕಾನೂನು ಪ್ರಕಾರವಾಗಿ ಮತಾಂತರ ಹೊಂದುವ ಹಕ್ಕು ಇದೆ. ಅದನ್ನು ಗೌರವಿಸೋಣ. ಪ್ರೀತಿಸಿದ ಜೋಡಿ ಇಂದು ಒಟ್ಟಿಗಿದೆ, ಅದರ ಬಗ್ಗೆ ಸಂತೋಷ ಪಡೋಣ.





ಇತಿಹಾಸದ ಉದ್ದಕ್ಕೂ ಹಲವು ಅಂತರಜಾತೀಯ, ಅಂತರ್ ಧರ್ಮೀಯ ಮದುವೆಗಳಾಗಿವೆ. ಪುರುಷ ಪ್ರಧಾನ ವ್ಯವಸ್ಥೆಯೇ ಜಾರಿಗೆ ತಂದಿರುವ ಈ ಮದುವೆ ಎಂಬ ವ್ಯವಸ್ಥೆಯಲ್ಲಿ ಸಹಜವಾಗಿ ಪುರುಷರ ಜಾತಿ ಧರ್ಮಗಳ ವಲಯವೇ ಅಂತಿಮವಾಗಿ ಗೆಲುವು ಪಡೆಯುತ್ತಿದೆ ಎಂಬುದೇ ವಿಷಾದ. ಇನ್ನೂ ಎಷ್ಟು ಈ ರೀತಿಯ ಮದುವೆಗಳಾದರೂ ಪರಿಸ್ಥಿತಿ ಹೀಗೇ ಮುಂದುವರೆಯುತ್ತದೆ ಎಂಬುದು ಕಹಿ ವಾಸ್ತವ
ಹುಡುಗಿ ಹುಡುಗನ ಲವ್ 12-13 ವಷ್ದ್ದು. ಅಂದರೆ ಅವಳಿಗೆ ಎಷ್ಟು ವಯಸ್ಸು ಆಗ? ಪ್ರಬುದ್ಧಳಾಗಿರುವಾಗ ಮತಾಂತರ ಪ್ರೇಮ ಸಹಜ. ಇವಳದು ಹಸಿಬಿಸಿ ಪ್ರೇಮ. ಮತಾಂತರ ಒಂದು ಧರ್ಮದಹೇರಿಕೆ ಮತ್ತು ಹೆಣ್ಣ್ಣಿನ ಶೋಷಣೆಗೆ ಉದಾಹರಣೆ. ಆನಂದ ಋಗ್ವೇದಿ ಅವರ ಅಭಿಪ್ರಾಯ ಒಪ್ಪಿಗೆ. ಇಬ್ಬರೂ ಧರ್ಮ ನಿರಪೇಕ್ಷವಾಗಿದ್ದರೆ ಅದು ಸೆಕ್ಯುಲರ್ ಮತ್ತು ಅಂತರ್ಧರ್ಮೀಯ ಮದುವೆಯ ಅರ್ಥವನ್ನು ಪ್ರತಿನಿಧಿಸುತ್ತಿತ್ತು. ಧರ್ಮದ ಬಗ್ಗೆ ತಿಳಿವಳಿಕೆಯಿಲ್ಲದ ವಯಸ್ಸಿನಲ್ಲಿ ಅವಳಿಗೆ ಯಾವುದೇ ಧರ್ಮ ಸ್ವೀಕರಿಸಲು ಸ್ವಾತಂತ್ರ್ಯ ಇದೆ ಎಂಬ ಮಾತು ಸಾರ್ಥಸಮರ್ಥನೆಯಲ್ಲ..
ಆಶಿತಾ-ಶಕೀಲ್ ರವರ ಪ್ರೇಮ ಮತ್ತು ಮದುವೆ ಬಗ್ಗೆ : ಮದುವೆ ಆಗಬೇಕು ಮಾನವರ ನಡುವೆ.ಮದುವೆ ಆಗಿದ್ದು ಮಾನವರ ನಡುವೆ. ಆದರೆ ನಾವು ಕೇವಲ ಮಾನವರಷ್ಟೇ ಎಂದು ಅವರು ಒಪ್ಪಿಕೊಳ್ಳಲಾಗದ ಸ್ಥಿತಿ ಇಂದು ಎಲ್ಲ ಧರ್ಮಗಳಲ್ಲೂ ವ್ಯಾಪಕವಾಗಿದೆ.ಬುದ್ಧಿ ಮಂಜಾಗಿದೆ
ಮತಾಂತರ ಆಗಬೇಕು ಎಲ್ಲರೂ ಎಲ್ಲ ಧರ್ಮಗಳನ್ನೂ ತ್ಯಜಿಸಿ ಮಾನವ ಪಥಕ್ಕೆ – “ಜಾತಿ ಮತದ ಗುಹೆಗಳಿಂದ ಹೊರ ಬನ್ನಿರಿ ಬಯಲಿಗೆ ಕೃತಕ ತಿಮಿರದಾಳದಿಂದ ವಿಸ್ತಾರದ ಬೆಳಕಿಗೆ.” ಈ ಅರಿವನ್ನು ಎಲ್ಲರಿಗೂ ಮೂಡಿಸುವಲ್ಲಿ ಶ್ರಮಿಸೋಣ.ಈ ಅರಿವು ಮೂಡುವವರೆಗೂ ಅವರವರ ಇಚ್ಛೆ. ಹಕ್ಕು.
ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಅರ್ಥ .
ಮಂಡ್ಯದಲ್ಲಿ ಮೊದಲ ಲವ್ ಜಿಹಾದ್ ಮಾಡಿದವನು-ಮೇಲುಕೋಟೆಯ ಚೆಲುವ ಅಥವಾ ಚೆಲುವರಾಯ. ದೆಹಲಿ ಬಾದಶಹಾನ ಮಗಳು ಬೀಬಿ ನಾಚ್ಚಿಯಾರ್ ಳನ್ನು ಹಾರಿಸಿಕೊಂಡು ಬಂದವನು. ಮತ್ತು ಇದಕ್ಕೆ ಭಾರತದ ಪ್ರಸಿದ್ಧ ದೇವತೆಗಳೆಲ್ಲ ಸಹಾಯ, ಬೆಂಬಲ ಕೊಟ್ಟರು-ಇದು ಜಾನಪದ ಕಾವ್ಯದೊಂದು ತುಣುಕು.( “ಪ್ರೇಮ ಉಕ್ಕಿತೋ ಸಾಗರದ್ಹಾಂಗ ” ಇದರಲ್ಲಿ ಭಾರತದ ಆದಿ ದಂಪತಿಗಳಾದ ಶಿವ-ಸತಿ, ಶಿವ-ಪಾರ್ವತಿ, ದುಶ್ಯಂತ-ಶಕುಂತಲೆ , ವಿಕ್ರಮ-ಊರ್ವಶಿ ಮೊದಲಾದ ಅನೇಕ ಪ್ರಾಚೀನ ಮತ್ತು ಚಾಮುಂಡಿ-ನಂಜುಂಡೇಶ್ವರ ,ಬಿಳಿಗಿರಿ ರಂಗ -ಕುಸುಮಾಲೆ,ಚುಂಚನಗಿರಿ ಭೈರವ -ಕುರುಬತಿ ಮಾಳಮ್ಮ ಹೀಗೆ ಹಲವು ಜಾನಪದ ಜಾತಿ ಮತ ಮೀರಿದ ಪ್ರಣಯಗಳು ಮತ್ತು ಇತ್ತೀಚಿನ ಹಲವು ಪ್ರೇಮಿಗಳ ಅನುಭವಗಳನ್ನು ಸಂಕಲಿಸಿದ ಪುಸ್ತಕದಲ್ಲಿ ಈ ಪ್ರಸಂಗವೂ ಇದೆ. ಸಂಪಾದಕರು-ಜಿ.ಎನ್.ನಾಗರಾಜ್ ಮತ್ತು ಬಿ.ರಾಜಶೇಖರ ಮೂರ್ತಿ ಈ ಪುಸ್ತಕವನ್ನು ಆಶಿತಾ ಮತ್ತು ಅವರ ಪೋಷಕರಿಗೆ ನೀಡಲಾಯಿತು. ಪುಸ್ತಕ ಬೇಕಾದವರು ನಮ್ಮ ಇನ್ಬಾಕ್ಸ್ ಗಳಿಗೆ ಮೇಸೇಜ್ ಕೊಡಿ)
ಇದು ಈ ಮದುವೆ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಹಾಕಿದ ಕಾಮೆಂಟುಗಳು.
೧. ”ಒಂದು ವೇಳೆ ಆಕೆ ಹಿಂದುವೇ ಆಗಿದ್ದು, ಆತ ಮುಸ್ಲಿಮನೇ ಆಗಿದ್ದು.. ಸ್ವಂತ ವ್ಯಕ್ತಿತ್ವಗಳನ್ನು ಉಳಿಸಿಕೊಂಡು ಮದುವೆ ಆಗಿದ್ದರೆ ಅದು ಪ್ರೇಮದ ಗೆಲುವಾಗುತ್ತಿತ್ತು’
೨. ಹುಡುಗನ ಧರ್ಮಕ್ಕೆ ಮಾತಾಂತರಗೊಳ್ಳುವ ಸ್ತ್ರೀ ಅಸ್ಮಿತೆ ಎಲ್ಲಿ?? ನಾವೆಲ್ಲರೂ ಬೆಂಬಲಿಸಬೇಕಾದ್ದು ಮಾತಾಂತರವ?? ಇಬ್ಬರು ತಮ್ಮ ಧರ್ಮಗಳನ್ನು ತೊರೆಯಬಹುದಿತ್ತು.. ಹಿಂದು-ಮುಸ್ಲಿಂ ಯಾವ ಧರ್ಮವು ಬೇಕಾಗಿರಲಿಲ್ಲ ಪ್ರೇಮ ಧರ್ಮವನ್ನ ಆಯ್ಕೆ ಮಾಡಿಕೊಳ್ಳಬಹುದಿತ್ತು..
ಮೇಲಿನ ಎರಡೂ ಅಭಿಪ್ರಾಯಗಳು ಒಪ್ಪತಕ್ಕದ್ದೇ ಯಾವಾಗ ಒಪ್ಪತಕ್ಕದ್ದು ಎಂದರೆ ಹುಡುಗ- ಹುಡುಗಿ, “ನಮಗೆ ಯಾವ ಧರ್ಮದಲ್ಲಿಯೂ ನಂಬಿಕೆ ಇಲ್ಲ, ಪ್ರೇಮ ಎನ್ನುವದೊಂದೆ ಧರ್ಮ ಇದೆ ಅದನ್ನು ಅನುಸರಿಸುತ್ತೇವೆ” ಎಂದು ಮದುವೆಗಿಂತ ಮೊದಲೆ ತಮ್ಮ ಅಭಿಪ್ರಾಯವನ್ನು ಪಬ್ಲಿಕ್ ಜೊತೆ ಹಂಚಿಕೊಂಡಿದ್ದಿದ್ದರೆ, (ನನಗೆ ಗೊತ್ತಿಲ್ಲ).
ನಿಜ, ಕಾನೂನು ಬದ್ಧವಾಗಿ ಮತಾಂತರವಾಗುವ ಹಕ್ಕು ಆ ಹೆಣ್ಣುಮಗಳಿಗೆ ಮತ್ತು ಯಾರಿಗೇ ಆಗಲಿ ಇದೆ. ಹಾಗಂತ ಎಲ್ಲ ಹಿಂದೂಗಳೂ ಮತಾಂತರಕ್ಕೆ ಈಡಾದಾರು ಎಂಬ ಭಯ ಸಲ್ಲದು. ಇಲ್ಲಿ ಗಮನಿಸಬೇಕಾದ ಸಂಗತಿ ಏನಂದರೆ, ಒಬ್ಬ ವ್ಯಕ್ತಿ ತಾನು ಹುಟ್ಟಿದ ಸಂಸ್ಕೃತಿ -ಆಚರಣೆಗಳನ್ನು ತೊರೆದು ಇನ್ನೊಂದು ರೀತಿಯ ಸಂಸ್ಕೃತಿ ಮತಾಚರಣೆಯ ನಿಯಮಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ/ಳೆಂದರೆ ಆತನಿಗೆ/ಆಕೆಗೆ ತನ್ನ ಮೂಲ ಸಂಸ್ಕೃತಿಯ ಕಡೆಗೆ ವಿಮುಖತೆ ಬೆಳೆದಿದೆ ಎಂದರ್ಥ. ಅಂಥವರನ್ನು ಹಿಡಿದು ಮೂಲ ನೆಲೆಯಲ್ಲಿಯೇ ಇರ‍್ರಿ ಎನ್ನುವುದರಲ್ಲಿ ಅರ್ಥವಿಲ್ಲ… ಈ ಸತ್ಯವನ್ನು ಮನಗಂಡ ತಂದೆ-ತಾಯಿ ಮಾತ್ರ ಅಂತಹ ಮದುವೆಗೆ ಬೆಂಬಲಿಸುತ್ತಾರೆ. ಹೀಗೆ ಬೆಂಬಲಿಸುವುದು ಉಳಿದೆಲ್ಲ ಅವಘಡ(ಮರ್ಯಾದಾ ಹತ್ಯೆ, ಇಲ್ಲವೆ ಪೋಷಕರ ಆತ್ಮಹತ್ಯೆ, ಹುಡುಗ/ಹುಡುಗಿಯ ಆತ್ಮಹತ್ಯೆ)ಗಳಿಗಿಂತ ಉತ್ತಮ ಮಾರ್ಗ .
ondu velhe aake tanna dharmada identity inda horabaralu oppade iddiddare aagaluu atha iste preetiyinda vivahavaaguttiddane embudu prashne? aake hosadagi sadhisiddu enu illa
Don’t know what happened to this case. Hopefully there was as much support for this couple as the Mandya one. But I don’t think there was support of any kind from any group. If anyone knows more about this case, please update.
ನನ್ನ ತಂದೆ ಮನೆಗೆ ಬಂದಾಗ ಶ್ರೀರಾಮನವಮಿಯನ್ನು, ಗಂಡನ ಮನೆಯಲ್ಲಿದ್ದಾಗ ರಂಜಾನ್ ಅನ್ನು ಆಚರಿಸುತ್ತೇನೆ ಎಂದು ಆಶಿತಾ ಹೇಳಿದ್ದಾರೆ. ಸಾಮಾನ್ಯವಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಗಳು ಗಂಡನ ಮನೆ ಸಂಪ್ರದಾಯ ಪಾಲಿಸುವುದು ಸಹಜ. ಅಂತದ್ದರಲ್ಲಿ ಆಶಿತಾ ಮಾಡಿರುವುದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ. ಮದುಎಯ ನಂತರವೂ ಆಕೆ ಮೂಲದಂತೆಯೇ ಇರಬೇಕಿತ್ತು ಎಂದು ಬಯಸುವುದು ಈ ಪ್ರಕರಣದ ಮಟ್ಟಿಗೆ ಮದುವೆಯನ್ನು ಒಪ್ಪದಿರುವವರ ಮಾತುಗಳು. ಮನುಷ್ಯರು ಮದುವೆಯಾಗಿದ್ದಾರೆ. ಮನುಷ್ಯರಾಗಿಯೇ ಬದುಕಲು ಬಿಟ್ಟುಬಿಡೋಣ. ಅವರ ಮೇಲೆ ಇಂತಹ ಒತ್ತಡಗಳು ಬಿದ್ದು, ಅವರು ಆ ಒತ್ತಡವನ್ನು ತಡೆಯಲಾರದೆ ಒಡೆದುಹೋದರೆ ಮತ್ತೆ ನೋಡಿ ನಾವು ಆವತ್ತೇ ಹೇಳಿದ್ದೆವೆ ಎನ್ನುವುದು ಬೇಡ. ಸುಖವಾಗಿ ಮಾದರಿಯಾಗಿರಲಿ
ಸದ್ದಿಲ್ಲದೆ ಎಷ್ಟೋ ಅಂತಧರ್ಮೀಯ ಮದುವೆಗಳು ಬಹು ಹಿಂದಿನಿಂದಲೂ ನಡೆದು ಹೋಗಿವೆ ಮತ್ತು ಈಗಲೂ ನಡೆಯುತ್ತಿವೆ ಯಾವುದೇ ಪ್ರಚಾರವಿಲ್ಲದೆ ,ವಿಶೇಷತೆಇಲ್ಲದೆ. ಸಾಮಾನ್ಯವಾಗಿ ಹಿಂದು ಮುಸ್ಲಿಂ ಮದುವೆಗಳಲ್ಲಿ ಹಿಂದು ವಧು ಮುಸ್ಲಿಂ ವರನನ್ನು ಮದುವೆಯಾಗುವಾಗ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುತ್ತಾಳೆ.ಆದರೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಯಾರೂ ಮತಾಂತರ ಹೊಂದದೆ ವಿವಾಹವಾಗುವುದು ಸಮಂಜಸ.ಅಂತಹ ಕೆಲಸವನ್ನು ಇತ್ತೀಚೆಗೆ ಸೈಫ್ ಅಲಿಖಾನ್ ರನ್ನು ಮದುವೆಯಾದ ಕರೀನಾ ಕಪೂರ್ ಮಾಡಿದ್ದಾರೆ, ಇದು ವಿಶೇಷತೆ ಮೆಚ್ಚಬೇಕಾದಂತದ್ದು.
ಪ್ರಚಾರದಿಂದ,ರಾಧ್ಧಾಂತದಿಂದ ಗಮನ ಸೆಳೆಯಲಷ್ಟೇ ನಡೆದುಹೋದ ಮದುವೆಯಂಬಂತೆ ಆಶಿತಾ-ಶಕೀಲರ ಮದುವೆ ಬಿಂಬಿತವಾಯಿತಷ್ಟೇ ವಿಶೇಷತೆಯೆನಿಲ್ಲ. ಇಬ್ಬರೂ ಸಾಮರಸ್ಯದಿಂದ ಆಧರ್ಶ ದಾಂಪತ್ಯ ನಡೆಸಲು ಎಂದಷ್ಟೇ ಹಾರೈಕೆ. ಮಾನವ ಉತ್ತಮನಾಗಿ ಬಾಳಲು ಮಾನವೀಯತೆ ಒಂದ್ದಿದ್ದರೆ ಸಾಕು, ಅದೇ ಮಾನವಧರ್ಮ ಮತ್ತು ಶ್ರೇಷ್ಠವಾದ ಧರ್ಮ.