ಅಂಗೋಲಾದ 'ಪಾರ್ಲರ್'ನಲ್ಲಿ ಕಾಯ್ಕಿಣಿ

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.
kaikini
 
ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು
ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.
ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ
ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬರು ರಂಗಪ್ರವೇಶ ಮಾಡಿದರು. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕರು.     
ಸ್ಫೂರ್ತಿ ಗಿರೀಶ್ ಪಾರ್ಲರ್ ಹೊಕ್ಕ ನಂತರ ಈಗ ರವಿ ಕುಲಕರ್ಣಿಎಂಟ್ರಿ ಕೊಟ್ಟರು. 
ಈಗ ಅಂಗೋಲಾದಿಂದ, ಅಂಕೋಲಾ ಅಲ್ಲ- ಪ್ರಸಾದ್ ಕೆ ಪಾರ್ಲರ್ ನೊಳಗೆ ಹೆಜ್ಜೆ ಹಾಕಿದ್ದಾರೆ    
jayanth kaikini vachike
ನಿಮ್ಮ ಮನದಾಳದೊಳಗೂ ನವಿರಾದ ಭಾವಗಳಿದ್ದರೆ ತಡ ಯಾಕೆ?
ನೀವೂ ಬರೆದು ಕಳಿಸಿ

Prasad

ಅಂಗೋಲಾದಿಂದ ಪ್ರಸಾದ್ ಕೆ 

ಈ ಹೆಂಗಸು ಕಣ್ಣು ಮುಚ್ಚಿ ಕಂಫರ್ಟ್ ಸೀಟಿಗೊರಗಿ, ಸಿದ್ಧಳೆಂಬಂತೆ ಹುಬ್ಬು ಮೇಲೇರಿಸುತ್ತಾಳೆ.
ಪಾರ್ಲರಿನಾಕೆ ಬಂದು ಹೆಂಗಸು ಕುಳಿತಿದ್ದ ಆರಾಮದ ಆಸನವನ್ನು ಕೊಂಚ ಎತ್ತರಿಸುತ್ತಾಳೆ. ಪುಸಕ್ ಪುಸಕ್ ಎಂದು ಮುಖ ತುಂಬಾ ನೀರು ಸಿಂಪಡಿಸಿ ಕೂತಿದ್ದ ಹೆಂಗಸಿನ ಭುಜವನ್ನು ಮೃದುವಾಗಿ ಒತ್ತಿ “ರಿಲ್ಯಾಕ್ಸ್” ಎನ್ನುತ್ತಾಳೆ. ಕೂತಿದ್ದ ಅವಳಿಗೆ ಒಮ್ಮೆಲೇ ರಾಜಮರ್ಯಾದೆಯ ಫೀಲ್ ಬಂದು ಕಣ್ಣ ಕತ್ತಲಿನಲ್ಲೇ ಸ್ವಲ್ಪ ನಿರಾಳವಾದಂತೆನಿಸುತ್ತದೆ. ಅದೊಂಥರಾ ವಿಚಿತ್ರವಾದ, ಹಮ್ಮಿನಿಂದ ಕೂಡಿದ ಸಮಾಧಾನ ಎಂದನಿಸುತ್ತದೆ ಅವಳಿಗೆ.
bride moonಹಸಿವಿಲ್ಲದಿದ್ದರೂ ಕಾರಣವಿಲ್ಲದೆ ಫೈವ್ ಸ್ಟಾರ್ ಹೋಟೇಲೊಂದಕ್ಕೆ ತೆರಳಿ ಮಧ್ಯಾಹ್ನದ ಒಂದು ಊಟ ಮಾಡಲು ನಾಲ್ಕು ದಿನದ ಸಂಬಳವನ್ನು ಸುಟ್ಟು, ಉದ್ದನೆಯ ಟೋಪಿ ಧರಿಸಿದ ಅಲ್ಲಿಯ ಸೇವಕರಿಂದ ಸಲಾಂ ಹೊಡೆಸಿಕೊಳ್ಳುವಾಗ ಉಂಟಾಗುವ ನಿರುಪದ್ರವಿ, ನಿಷ್ಪ್ರಯೋಜಕ ಹೆಮ್ಮೆ. ಊಟದ ನೆಪವಿತ್ತು ತೆತ್ತ ದುಬಾರಿ ಮೊತ್ತ ಆ ಸಲಾಮಿಗೆ, ಆ ನಿಮಿಷ ಮಾತ್ರದ ಸೆಲೆಬ್ರಿಟಿ ಫೀಲಿಗೆ ಮಾಫಿ. ಹೆಂಗಸಿನ ತುಟಿಯಂಚಿನಲ್ಲಿ ತನ್ನಷ್ಟಕ್ಕೇ ನಗುವೊಂದು ಮೂಡುತ್ತದೆ. ಈಗೀಗ ಮೂಡತೊಡಗಿರುವ, ತುಟಿಯ ಅಂಚಿನಿಂದ ಕೆಳಮುಖವಾಗಿ ಹೋಗುತ್ತಿರುವ ಮುಖದ ನಿರಿಗೆಗಳು ಇವಳ ತುಟಿಯ ಚಲನೆಗೆ ಬಿಂಕದಿಂದ ಮಳ್ಳಿಯಂತೆ ಬೀಗಿ, ಬಾಗುತ್ತವೆ.
ಕಣ್ಣುಗಳು ಮುಚ್ಚಿದ್ದರೂ ಶಬ್ದಗಳಿಗೇನು ಕೊರತೆಯೇ. ನಾಣ್ಯ ಹೆಕ್ಕಿ ತಂದ ಹುಡುಗ ಒರೆಸುವ ಬಟ್ಟೆಯನ್ನು ಬಕೆಟ್ ಒಂದರಲ್ಲಿ ತುಂಬಿಸಿಟ್ಟ ನೀರಿನಲ್ಲಿ ಮುಳುಗಿಸಿ, ಮುಳುಗಿಸಿ ಹಿಂಡಿ ತೆಗೆಯುತ್ತಿರುವ ಶಬ್ದ ಕಿವಿಗೆ ಬೀಳುತ್ತದೆ. ಸದ್ಯಕ್ಕೆ ಅವಳಿಗೆ ಅದುವೇ ಜಲತರಂಗ. ಹೆಸರು ನೆನಪಿಡಲು ಸಾಧ್ಯವಾಗದಂಥಾ ಯಾವ್ಯಾವೋ ಕ್ರೀಮುಗಳನ್ನು ಅದ್ದಿರುವ ಬೌಲ್ ಒಂದರಲ್ಲಿ ಬ್ಯುಸಿಯಾಗಿ ಮುಳುಗೇಳುತ್ತಿರುವ ಬ್ರಷ್ ನ ಚಲನೆ ಪಿಸುಮಾತಿನಂತೆ ಕೇಳುತ್ತದೆ. ಒಂದೆರಡು ಹನಿ ಜೀವನಪ್ರೀತಿಯೂ, ಇನ್ನೊಂದಿಷ್ಟು ಕನಸುಗಳೂ ಆ ಬೌಲಿನಲ್ಲಿ ಹಾಕುವಂತಿದ್ದರೆ ಎಷ್ಟು ಚೆನ್ನ ಅನ್ನಿಸುತ್ತದೆ.
`ಅಬ್ಬಾ… ಎಷ್ಟು ಪ್ರತಿಭಾವಂತೆ ಈ ಪಾರ್ಲರಿನಾಕೆ’ ಎಂಬ ಉದ್ಗಾರ ಸುಮ್ಮನೆ ಮನದಲ್ಲೇ ಮೂಡಿ, ಮಾತಿನಲ್ಲಿ ಹೊರಬರದೆ ಬಿದ್ದುಹೋಗುತ್ತದೆ. ಪಾರ್ಲರಿನಾಕೆಗೆ “ಥ್ಯಾಂಕ್ಯೂ” ಎಂದು ದೀರ್ಘವೆಳೆದೂ ಇನ್ನೂ ಯಾಕೆ ಇಲ್ಲೇ ಇದ್ದಾಳೆ ಎಂಬ ಅಚ್ಚರಿ ಮದುಮಗಳು ತನ್ನ ಸೆಲ್ ಫೋನಿನಲ್ಲಿ ಮಾಡುತ್ತಿರುವ ಟಿಕ್-ಟಿಕ್ ಸೌಂಡಿನಿಂದ ಇವಳಿಗುಂಟಾಗುತ್ತಿದೆ. ಅವನೊಂದಿಗೆ ಚಾಟ್ ಮಾಡುತ್ತಿರಬೇಕು. ಅಥವಾ ಫೇಸ್ಬುಕ್ಕಿನಲ್ಲಿ ಕೆಲಸಕ್ಕೆ ಬಾರದ ಸ್ಟೇಟಸ್ ಅಪ್ಡೇಟ್ ಹಾಕುತ್ತಿರಬೇಕು. ಈ ಸೆಲ್ ಫೋನಿನ ಟಿಕ್-ಟಿಕ್ ಆಲಾಪದ ಜೊತೆ ಮದುಮಗಳ ಹೈ-ಹೀಲ್ಸ್ ಸದ್ದೂ ಸಾಥ್ ನೀಡುತ್ತಿದೆ. `ಅಯ್ಯೋ, ಈ ಜನರೇಶನ್ನೇ’ ಎಂದು ಹೆಂಗಸು ಕೂತಲ್ಲೇ ಮೌನವಾಗಿ ನಿಡುಸುಯ್ಯುತ್ತಾಳೆ.
ಮೆಲ್ಲನೆ ಪಾರ್ಲರಿನಾಕೆಯ ರೇಷ್ಮೆ ಕೈಗಳು ಹೆಂಗಸಿನ ಮುಖದ ಮೇಲೆ ತನ್ನ ಕೈಚಳಕವನ್ನು ಶುರುಮಾಡಿದೊಡನೆಯೇ ಹೆಂಗಸಿನ ಯೋಚನಾಲಹರಿಗೆ ತೆರೆಬೀಳುತ್ತದೆ. ಯಾರು ಏನೇ ಹೇಳಲಿ ಅದ್ಭುತ ಕಲಾಕಾರಿಕೆಯಿದು. ಈಗಷ್ಟೇ ತನ್ನ ಬಗಲಿನಲ್ಲಿ ಕೂತಿದ್ದ, ದೇವಲೋಕದ ಅಪ್ಸರೆಯಂತೆ ಸಿಂಗರಿಸಿಕೊಂಡ ಮದುಮಗಳ ಚಿತ್ರ ನೆನಪಾದೊಡನೆಯೇ ಹೆಂಗಸು, ಈ ಅರವತ್ತರಿಂದ ತೊಂಭತ್ತು ನಿಮಿಷಗಳ ಬಳಿಕ ತಾತ್ಕಾಲಿಕವಾಗಿಯಾದರೂ ಮರೆಯಾಗಲಿರುವ ತನ್ನ ಸುಕ್ಕುಗಳ, ಡಾರ್ಕ್ ಸರ್ಕಲ್ ಗಳ ಬಗ್ಗೆ ಕಲ್ಪಿಸಿಕೊಂಡು ಹಿರಿಹಿರಿ ಹಿಗ್ಗುತ್ತಾಳೆ. ಪಾರ್ಲರಿನಾಕೆಯ ಕೋಮಲ ಕೈಬೆರಳುಗಳು ಹೆಂಗಸಿನ ಮುಖದ ಉಬ್ಬುತಗ್ಗುಗಳಿಗೂ, ಮೂಲೆಮೂಲೆಗಳಿಗೂ ತೆಳು ದ್ರವವೊಂದನ್ನು ಲೇಪಿಸಿ ಮಸಾಜ್ ಮಾಡುತ್ತಾ, ಹಿಮದ ದಿಬ್ಬಗಳಲ್ಲಿ ಐಸ್-ಸ್ಕೇಟಿಂಗ್ ಮಾಡುತ್ತಿರುವಂತೆ ವಿಹರಿಸುತ್ತವೆ. ಜೊತೆಗೇ ಹೆಂಗಸು ಈ ಸೋಕಾಲ್ಡ್ ರಿಲಾಕ್ಸ್ ಪ್ರಕ್ರಿಯೆಯ ಎರಡನೇ ಹಂತಕ್ಕೆ ತಣ್ಣಗೆ ಜಾರುತ್ತಾಳೆ. ಮದುಮಗಳು ಬಹುಶಃ ಹೊರಟು ಹೋದಳು ಅನ್ನಿಸುತ್ತೆ. ಅವಳ ಟಿಕ್-ಟಿಕ್ ಸದ್ದು ಮರೆಯಾಗಿದೆ.
ಸ್ಕಿನ್ನು, ಮಾಯಿಶ್ಚರ್ರು, ಫೇಸ್ಪ್ಯಾಕು… ಹೀಗೆ ಪಾರ್ಲರಿನಾಕೆ ಇಂಪಾಗಿ ಹೇಳುತ್ತಿರುವ ಆರ್.ಜೆ ಶೈಲಿಯ ಏನೇನೋ ನಾನ್-ಸ್ಟಾಪ್ ಕಂಗ್ಲಿಷ್ ಮಾತುಗಳು ಕೂತಿದ್ದ ಹೆಂಗಸಿನ ಕಿವಿಗಿಂತ ಹೆಚ್ಚಾಗಿ ಗಾಳಿಯಲ್ಲೇ ತೇಲಿಹೋಗುತ್ತಿರುತ್ತವೆ. ಪಾಪ, ಅವಳಿಗೇನು ಗೊತ್ತು ಮಧ್ಯವಯಸ್ಸಿನ ಹೆಂಗಸೊಬ್ಬಳ ತಾಪತ್ರಯಗಳ, ಗೊಣಗಾಟಗಳ, ಅಸಹಾಯಕತೆಗಳ ಮುಗಿಯದ ಪಟ್ಟಿ. ಮಧ್ಯಕ್ಕೇ ಅವಳ ಮಾತನ್ನು ತುಂಡರಿಸಿ, “ಕಿಟಕಿ ಬಾಗಿಲನ್ನು ಸ್ವಲ್ಪ ತೆರೆಯಬಾರದೇ” ಎಂದು ಕಣ್ಮುಚ್ಚಿಕೊಂಡೇ ಸಲಹೆಯನ್ನೂ, ಆ ಶೇಡ್ ಉಳ್ಳ ಆಜ್ಞೆಯನ್ನೂ ಹೆಂಗಸು ನೀಡುತ್ತಾಳೆ. “ಅರೇ ಮೇಡಂ, ಸ್ವಲ್ಪ ವೇಯಿಟ್ ಮಾಡಿ, ಕರೆಂಟ್ ಬಂದೇ ಬಿಡುತ್ತದೆ. ಕಿಟಕಿ ಓಪನ್ ಮಾಡಿದ್ರೆ ಸುಮ್ನೆ ಧೂಳು, ಶಬ್ದ” ಅನ್ನುತ್ತಾಳೆ ಪಾರ್ಲರಿನಾಕೆ. ಹೂಂ ಎನ್ನುತ್ತಾ ಹೆಂಗಸು ಮತ್ತೊಮ್ಮೆ ತನ್ನ ಯೋಚನಾ ಲಹರಿಗೆ ಮೆಲ್ಲನೆ ಜಾರಲು ಪ್ರಯತ್ನಿಸುತ್ತಾಳೆ.
make up kitಅದೂ ಸರೀನೆ ಅನ್ನಿ. ಕಿಟಕಿ ತೆರೆದ್ರೆ ಅನಾವಶ್ಯಕ ಸದ್ದು, ಧೂಳು. ಹೌದು, ಇದೇ ಕಿಟಕಿಯಾಚಿನ ಸಮಾಜದ್ದು. ಅಲ್ಲೋ ಇಲ್ಲೋ ಚಕ್ಕನೆ ಮಳೆಯಂತೆ ಬಂದು ಮರೆಯಾಗುವ ಕೆಲವು ಇಂಪನ್ನು ಬಿಟ್ಟರೆ ಸಮಾಜದ ಸದ್ದು ಕೂಡ ಕರ್ಕಶ, ನಿರಂತರ ಮತ್ತು ಭಯಾನಕ. ವರ್ಷವಿಡೀ ಧರ್ಮ, ದೇವರು, ಜಾತಿ, ಹಗರಣ, ಮೀಸಲಾತಿ, ಆಪಾದನೆ, ಕಿತ್ತಾಟ, ಗೊಣಗಾಟ, ಟ್ರಾಫಿಕ್ಕು, ಮೈಕು, ಟೀವಿ-ಇಂಟರ್ನೆಟ್ಟು, ಮೀಟಿಂಗು, ಪ್ರೆಸೆಂಟೇಶನ್ನು, ಕ್ರೈಮು, ಎಫ್ಫೆಮ್ಮು… ಇನ್ನೂ ಏನೇನೋ. ಬೆಳಗ್ಗಿನ ರಂಗೋಲಿ ಹಾಕುವ ಸಮಯಕ್ಕಷ್ಟೇ ಎಮ್ಮೆಸ್ ಸುಬ್ಬುಲಕ್ಷ್ಮಿಯವರ ಕೌಸಲ್ಯಾ ಸುಪ್ರಜಾ ದ ಕನವರಿಕೆಗೆ ಪ್ರೋಗ್ರಾಮ್ಡ್ ಆದ ಮೆದುಳು. ಸಂಗೀತದ ದನಿಯಷ್ಟೇ ಕೇಳಿದ್ದು, ಪದಗಳ ಲಾಲಿತ್ಯದ ಬಗ್ಗೆ ಚಿಂತಿಸುವ ವ್ಯವಧಾನವಿಲ್ಲ.
ಕಿವಿಯಲ್ಲಿ ತುರುಕಿದ್ದ ಇಯರ್-ಬಡ್ಡುಗಳು ಹೊರಸೂಸುವ “ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ…” ಹಾಡಿಗೆ ಲಿಪ್-ಸ್ಟಿಕ್ ಮೆತ್ತಿದ ತುಟಿಗಳು ಯಾಂತ್ರಿಕವಾಗಿ ಗುನುಗುತ್ತವೆಯೇ ಹೊರತು ಶಬ್ದಗಳೊಂದಿಗೆ ಆಟವಾಡುವ, ಭಾವನೆಗಳನ್ನು ರಮಿಸುವ ಕವಿಯ, ಕವಿತೆಯ ಗೋಜಿಗೇ ಮನಸ್ಸು ಹೋಗುವುದಿಲ್ಲ. ಅಚಾನಕ್ಕಾಗಿ, “ಹಲೋ, ಫಿಲಾಸಫಿ ಚಚ್ಚಬೇಡ. ನೀನು ಕೂಡ ಈ ಕಿಟಕಿಯಾಚಿನ ಸಮಾಜದ ಭಾಗವೇ. ಈ ಬಹುಮಹಡಿ ಕಟ್ಟಡದಿಂದ ಹೊರಬೀಳುತ್ತಲೇ ನೀನೂ ಪಾಪ-ಪುಣ್ಯಗಳಲ್ಲಿ ಉಳಿದವರಷ್ಟೇ ಭಾಗಿ” ಎಂದು ಅಂತಃಸಾಕ್ಷಿ ಹೇಳಿದಂತಾಗಿ ಯೋಚನೆಗಳಿಗೆ ಇನ್ನೊಮ್ಮೆ ಬ್ರೇಕ್ ಬಿತ್ತು. ಆ ಸಮಾಜಕ್ಕೆಂದೇ ಈ ಪಾರ್ಲರಿನಲ್ಲಿ ತೋರಿಕೆಯ ಮುಖವಾಡವೊಂದನ್ನು ಮಾಡಿಸಿಕೊಂಡು ಧರಿಸಲು ಬಂದಿದ್ದಲ್ಲವೇ ಅವಳು. ಸೋ… ಇದೂ ಸರೀನೇ ಅನ್ನಿ.
ಅಷ್ಟರಲ್ಲಿ ಹೋಗಿದ್ದ ಮದುಮಗಳು ವಾಪಾಸು ಬಂದಳು ಅನ್ನಿಸುತ್ತೆ. “ನಾಲ್ಕು ಫ್ಲೋರು ಇಳಿದರೆ ಸುಮ್ನೆ ಅಗೈನ್ ಸ್ವೆಟ್ಟಾಗುತ್ತೆ. ಅದ್ಕೇ ವಾಪಸ್ ಬಂದೆ. ಅವನಿಗೂ ಮೆಸೇಜ್ ಕಳ್ಸಿ ಆಮೇಲೆ ಬಾ ಅಂದೆ. ಕರೆಂಟ್ ಬಂದ ಕೂಡ್ಲೇ ಐದು ನಿಮಿಷ ಏಸಿ ಹವಾ ತಗೊಂಡು ಹೋಗ್ತೀನಿ. ಅಂದಹಾಗೆ ಕರೆಂಟು ಯೂಶುವಲೀ ಇಲ್ಲಿ ಬೇಗ ಬರುತ್ತೆ ಅಲ್ವಾ?”, ಎಂದು ಮುದ್ದುಮುದ್ದಾಗಿ ಆಶಾಭಾವದಿಂದ ಕೇಳುತ್ತಾಳೆ ನಮ್ಮ ಮದುವಣಗಿತ್ತಿ. “ಹೌದು.. ಡೋಂಟ್ ವರಿ ಡಿಯರ್… ಜಸ್ಟ್ ಅ ಕಪಲ್ ಆಫ್ ಮಿನಿಟ್ಸ್ ಅಷ್ಟೇ” ಎಂದು ಪಾರ್ಲರಿನಾಕೆ ಸುಳ್ಳುಹೇಳುತ್ತಾಳೆ. ಕರೆಂಟೇನು ಪತಿರಾಯನೇ ಕರೆದಾಕ್ಷಣ ಓಡಿ ಬರಲು! ಆದರೆ ಸತ್ಯವನ್ನಾದರೂ ಹೇಗೆ ಹೇಳುತ್ತಾಳೆ ಪಾಪ, ಈಗಷ್ಟೇ ಈ ಹೆಂಗಸಿಗೆ `ಸ್ವಲ್ಪ ವೇಯಿಟ್ ಮಾಡಿ ಮೇಡಂ’ ಅಂತ ಭರವಸೆ ಕೊಟ್ಟಿಲ್ಲವೇ. ಕೆಲಸ ಮಾಡುತ್ತಿರುವ ಬಾಲಕ ಈ ನಾಟಕವನ್ನು ಎಂಜಾಯ್ ಮಾಡುತ್ತಾ ತನ್ನಷ್ಟಕ್ಕೇ ಮುಸಿಮುಸಿ ನಗುತ್ತಾನೆ. “ಏಯ್, ಹೋಗಿ ಕೋಲ್ಡ್ ಡ್ರಿಂಕ್ಸ್ ತಗೊಂಡು ಬಾ” ಅಂತ ಹೇಳಿ ಪಾರ್ಲರಿನಾಕೆ ನೂರರ ಎರಡು ನೋಟನ್ನು ಬಾಲಕನ ಕೈಯಲ್ಲಿ ತುರುಕಿ ಅವನನ್ನು ಓಡಿಸುತ್ತಾಳೆ.
“ಅರೇ… ಯಾಕೆ ಸುಮ್ನೆ… ಬೇಡ ಬಿಡಿ” ಅನ್ನುತ್ತಾ ಹೆಂಗಸು ಮತ್ತು ಮದುಮಗಳು ತಲೆಯಾಡಿಸಿ, ವಿನಾಕಾರಣ ಸೌಜನ್ಯದ ನಾಟಕವಾಡುತ್ತಾ, ಉಸಿರುಗಟ್ಟಿಸುವ ಸೆಕೆಯಲ್ಲಿ ಕೋಲ್ಡ್ ಡ್ರಿಂಕ್ಸ್ ನ ಅನಿರೀಕ್ಷಿತ ಆಗಮನದ ಬಗ್ಗೆ ಒಳಗೊಳಗೇ ಖುಷಿಪಡುತ್ತಾರೆ. ಬಾಲಕ ನೋಟು ಹಿಡಿದು, ಸಲಾಮು ಹೊಡೆದು, ಅಲ್ಲಲ್ಲಿ ತೂತು ಬಿದ್ದ ತನ್ನ ಲೂಸು ಚಡ್ಡಿಯನ್ನು ಮೇಲಕ್ಕೆಳೆದುಕೊಂಡು ಚಕ್ಕನೆ ಮಾಯವಾಗುತ್ತಾನೆ. ಕೋಲ್ಡ್ ಡ್ರಿಂಕಿನ ಇನ್ನೂರು ರೂಪಾಯಿಯನ್ನು ಯಾವುದರಲ್ಲಿ ಅಡ್ಜೆಸ್ಟ್ ಮಾಡಬಹುದು ಎಂದು ಪಾರ್ಲರಿನಾಕೆ ತಲೆಯಲ್ಲೇ ಲೆಕ್ಕಹಾಕತೊಡಗುತ್ತಾಳೆ. ಮದುಮಗಳು ಗಾಜಿನ ಮೇಲ್ಮೈಯ ಟೀಪಾಯಿಯೊಂದರ ಮೇಲಿರಿಸಿದ್ದ ಯಾವುದೋ ಬಣ್ಣಬಣ್ಣದ ಫ್ಯಾಶನ್ ಮ್ಯಾಗಝೀನಿನ ಪುಟ ತಿರುವುತ್ತಾಳೆ.
make up5ಇತ್ತ ಮದುಮಗ ಆ ಪಾರ್ಲರಿನ ಓಣಿಯ ರೋಡನ್ನು ದಾಟಿ, ಪಕ್ಕದ ಅಡ್ಡರಸ್ತೆಗೆ ಬಂದು, ಮೂಲೆಯಲ್ಲಿದ್ದ ಗೂಡಂಗಡಿಗೆ ತೆರಳಿ ಚದುರಿಹೋಗಿದ್ದ ಚೂರುಪಾರು ನೆರಳಿನಲ್ಲಿ ಬೈಕು ನಿಲ್ಲಿಸುತ್ತಾನೆ. ಅಲ್ಲೇ ಕಾಯುತ್ತಿದ್ದ ಅವನ ಸ್ನೇಹಿತ “ಎಷ್ಟೊತ್ತೋ ನಿಮ್ದು, ರಿಜಿಸ್ಟ್ರೇಶನ್ ಆಫೀಸು ಕ್ಲೋಸ್ ಆದ್ರೆ ಕಷ್ಟ ಮಾರಾಯ” ಎಂದು ಗೊಣಗುತ್ತಾನೆ. “ಇವ್ರ ಅಲಂಕಾರ ಮುಗಿಯೋದೇ ಇಲ್ಲ ನೋಡು” ಎಂದು ನಿಡುಸುಯ್ಯುತ್ತಾ, ಬೆವರಿನಿಂದ ತೊಯ್ದ ಮುಖವನ್ನೂ, ಕತ್ತನ್ನೂ ಮಾಸಿದ ಬಣ್ಣದ ಕರ್ಚೀಫಿನಿಂದ ಒರೆಸುತ್ತಾ “ಒಂದು ಮೈಲ್ಡು ಸಿಗರೇಟು ಕೊಡಪ್ಪಾ” ಎಂದು ಅಂಗಡಿಯವನಿಗೆ ಆರ್ಡರು ಕೊಡುತ್ತಾನೆ. ಬೆವರಿನಿಂದ ತೊಯ್ದು ಅವನ ಹೊಸ ಶಟರ್ು ಅವನ ದೇಹಕ್ಕೆ ಕೊಂಚ ಅಂಟಿಕೊಂಡಿದೆ. “ಈಗ್ಲೇ ಬೇಕಾ ನಿಂಗೆ ಸಿಗರೇಟು. ಸ್ಮೆಲ್ ಬರುತ್ತೋ ಪುಣ್ಯಾತ್ಮ. ಸಿಗರೇಟು, ಡ್ರಿಂಕ್ಸು ಮುಟ್ಟೋದೇ ಇಲ್ಲ ಅಂತ ಪುಡಾರಿಗಳ ರೇಂಜಿಗೆ ಬುರುಡೆ ಬಿಟ್ಟಿದ್ದೀಯಾ ಹುಡ್ಗೀ ಜೊತೆ. ಮದುವೆ ದಿನಾನೇ ಡಿವೋರ್ಸ್ ಆಗ್ಬಿಡುತ್ತೆ ಮತ್ತೆ” ಎಂದು ಸುಮ್ಮನೆ ಮಾತಲ್ಲೇ ಕೆಣಕುತ್ತಾನೆ.
ಮದುಮಗ ಜೇಬಿನಲ್ಲಿದ್ದ ನಾಲ್ಕೈದು ಚ್ಯೂಯಿಂಗ್ ಗಮ್ ಗಳನ್ನು ತೋರಿಸುತ್ತಾ “ಒಳ್ಳೇ ಮಾತಾಡೋ ಗುರೂ… ಮೊದ್ಲೇ ಟೆನ್ಷನ್ನಿನಲ್ಲಿದ್ದೀನಿ” ಎನ್ನುತ್ತಾ, ಸಿಗರೇಟಿನ ಮೂತಿಗೆ ಕಿಡಿತಾಕಿಸುತ್ತಾ ಹೊಗೆಬಿಡುತ್ತಾನೆ. ಅವನ ಭಯಮಿಶ್ರಿತ ಕಣ್ಣುಗಳು ಈಗಲೂ ಅತ್ತಿತ್ತ ನೋಡುತ್ತಿವೆ. ನಿಮಿಷಕ್ಕೆ ಹತ್ತು ಬಾರಿ ವಾಚನ್ನೂ, ಇಪ್ಪತ್ತು ಬಾರಿ ಸೆಲ್ ಫೋನನ್ನು ಆನ್ ಮಾಡಿ ಅವಳಿಂದ ಮೆಸೇಜು ಬಂದಿದೆಯಾ ಅಂತ ನೋಡುತ್ತಲೂ ಇದ್ದಾನೆ. ಅವನೆದೆ ಇಂದು ರಣದುಂದುಭಿ. ಹೌದು, ಅವನನ್ನು ಸಂತೈಸುವ ಶಕ್ತಿ ನೇತುಹಾಕಿದ ಯಾವ ದೈತ್ಯ ಪೋಸ್ಟರುಗಳಿಗೂ ಇಲ್ಲ.
ಇತ್ತ ಪಾರ್ಲರಿನಲ್ಲಿ ಕೋಲ್ಡ್ ಡ್ರಿಂಕ್ಸ್ ಬಂದಾಗಿದೆ. ಇದರ ಜೊತೆಯೇ ಮದುವಣಗಿತ್ತಿ ಮತ್ತು ಹೆಂಗಸಿನ ಧ್ಯಾನ ಇನ್ನೂ ಬರದ ಕರೆಂಟಿನಿಂದ ಗಂಟಲಿನಲ್ಲಿ ಇಳಿಯುತ್ತಿರುವ ಕೋಲ್ಡ್ ಡ್ರಿಂಕಿಗೆ ಯಶಸ್ವಿಯಾಗಿ ಡೈವರ್ಟ್ ಆಗಿದೆ. ಮದುಮಗಳು ಆಗಾಗ ತನ್ನ ಸೀರೆಯ ನೆರಿಗೆಯನ್ನು ಸರಿಪಡಿಸುತ್ತಾ, ಹಚ್ಚಿದ ಕಾಡಿಗೆ ಸರಿಯಾಗೇ ಇದೆ ಎಂದು ಕನ್ನಡಿಯಲ್ಲಿ ದೃಢಪಡಿಸುತ್ತಾ ಬಣ್ಣದ ಪಾನೀಯವನ್ನು ಸವಿಯುತ್ತಿದ್ದಾಳೆ. ಹೆಂಗಸು ತನ್ನ ಮುಚ್ಚಿದ ಕಣ್ಣುಗಳ ಮೇಲೆ ಮಲಗಿದ್ದ ಸೌತೆ ಕಾಯಿಯ ಹೋಳನ್ನು ಪಕ್ಕದ ಟ್ರೇನಲ್ಲಿಟ್ಟು, ತರಹೇವಾರಿ ಕ್ರೀಮುಗಳಿಂದ ಲೇಪಿತ ತನ್ನ ಬಿಳೀ ಮುಖವಾಡದಂಥಾ ಮುಖವನ್ನು ಕೂತಲ್ಲೇ ಕನ್ನಡಿಯಲ್ಲಿ ನೋಡುತ್ತಾ ಸ್ಟ್ರಾ ನಿಂದ ಪಾನೀಯವನ್ನು ಹೀರುತ್ತಿದ್ದಾಳೆ.
ಅಲ್ಲಲ್ಲಿ ಕಾಣುವ ಬೆಳ್ಳಿಕೂದಲುಗಳು ಅವಳನ್ನು ಅಣಕಿಸುತ್ತವೆ. ಬಾಲಕ ಹೊಳೆಯುವ ಕನ್ನಡಿ ಮತ್ತು ಮಾರ್ಬಲ್ಲಿನ ನೆಲವನ್ನು ಬಿಟ್ಟು, ಉಳಿದ ಸಾಲುಕನ್ನಡಿಗಳೆದುರು ಗತ್ತಿನಿಂದ ನಿಂತಿದ್ದ ಒಂದೊಂದೇ ಬಾಟಲಿಗಳನ್ನು, ಬಣ್ಣಬಣ್ಣದ ಡಬ್ಬಿಗಳನ್ನು ವಾಪಾಸು ಶೆಲ್ಫ್ ಗಳಲ್ಲಿ ಇಡುತ್ತಿದ್ದಾನೆ. ಪಾರ್ಲರಿನಾಕೆ ಸಿಕ್ಕ ಒಂದೆರಡು ನಿಮಿಷಗಳನ್ನೇ ಅದೃಷ್ಟವೆಂದುಕೊಂಡು ಸೆಲ್ ಫೋನಿನಲ್ಲಿ ಏನೋ ಟಿಕ್-ಟಿಕ್ ಮಾಡುತ್ತಿದ್ದಾಳೆ. ಕರೆಂಟು ಬರದೆ ಲಿಫ್ಟ್ ಆನ್ ಆಗದ ಕಾರಣಕ್ಕೋ ಏನೋ ಯಾವ ಹೊಸ ಗಿರಾಕಿಯೂ ನಾಲ್ಕು ಮಹಡಿ ಹತ್ತಿ ಬರೋ ಧೈರ್ಯವನ್ನು ಇನ್ನೂ ಮಾಡಿರಲಿಲ್ಲ. ನಾಲ್ವರದ್ದೇ ಜುಗಲ್ಬಂದಿ ಮುಂದುವರಿಯುತ್ತಿದೆ ಈ ಪುಟ್ಟ ಕೋಣೆಯಲ್ಲಿ.
“ಇನ್ನೆಷ್ಟು ಟೈಮಾಗುತ್ತೆ?”, ಹೆಂಗಸು ಕೋಲ್ಡ್ ಡ್ರಿಂಕ್ ಮುಗಿಸಿ ಕೇಳಿದಳು. ಈಕೆ ಬರಲಿರುವ ಕರೆಂಟಿನ ಬಗ್ಗೆ ಕೇಳುತ್ತಿದ್ದಾಳೋ ಅಥವಾ ತನ್ನ ಮೇಕಪ್ ಬಗ್ಗೆ ಕೇಳುತ್ತಿದ್ದಾಳೋ ಎಂಬುದು ಗೊತ್ತಾಗದೆ ಪಾರ್ಲರಿನಾಕೆ ಎರಡು ಸೆಕೆಂಡು ತಡವರಿಸಿದಳು. “ಜಸ್ಟ್ ಫಿಫ್ಟೀನ್ ಮಿನಿಟ್ಸ್ ಮೋರ್ ಮ್ಯಾಮ್”, ಪಾರ್ಲರಿನಾಕೆ ಇಲ್ಲದ ಕಾನ್ಫಿಡೆನ್ಸಿನಿಂದ ಹೇಳಿದಳು. ತರಹೇವಾರಿ ಕ್ರೀಮುಗಳು ಮನೆಮಾಡಿಕೊಂಡು ಸದ್ಯಕ್ಕೆ ಯಕ್ಷಗಾನದ ವೇಷಧಾರಿಯಂತೆ ಆಗಿರುವ ಆ ಮುಖವನ್ನು ಅರ್ಧದಲ್ಲೇ ಆಕೆ ಬಿಟ್ಟುಹೋಗುವುದಿಲ್ಲ ಎಂಬುದು ಪಾರ್ಲರಿನಾಕೆಗೂ ಗೊತ್ತು. ಸೋ ಅಷ್ಟರಮಟ್ಟಿಗೆ ಆಕೆ ಸೇಫ್. “ಛೇ ಕರೆಂಟ್ ಬಂದೇ ಇಲ್ಲ”, ಮದುಮಗಳು ಈ ಬಾರಿ ತನಗೋ, ಇನ್ಯಾರಿಗೋ ಎಂಬ ಪರಿವೆಯಿಲ್ಲದೆ ಮಾತನಾಡದೇ ಮಲಗಿದ್ದ ಏರ್-ಕಂಡೀಷನರ್ ಕಡೆ ನೋಡುತ್ತಾ ಸುಮ್ಮನೆ ಗೊಣಗಿಕೊಂಡಳು. “ನಾನೂ ಅದನ್ನೇ ಯೋಚ್ನೆ ಮಾಡ್ತಾ ಇದೀನಿ. ಯೂಶುವಲೀ ದೇ ಡೋಂಟ್ ಟೇಕ್ ದಿಸ್ ಮಚ್ ಟೈಮ್ ಯು ನೋ”, ಅನ್ನುತ್ತಾ ಪಾರ್ಲರಿನಾಕೆ ಕೂಡ ಸಮಥರ್ಿಸಿಕೊಂಡಳು. ಬಾಲಕನಿಗೆ ಕೆಲಸ ಮುಗಿಸಿ, ಈ ಎಂದಿನ ಡೈಲಾಗ್-ಬಾಝಿಗಳನ್ನು ನೋಡಿ ಬೋರಾಗಿತ್ತೋ ಏನೋ, ಕೋಣೆಯ ಮೂಲೆಗೆ ಹೋಗಿ ತನ್ನ ನಾಣ್ಯದೊಂದಿಗೆ ಆಟವಾಡಲಾರಂಭಿಸಿದ.
ನಿರಂತರವಾಗಿ ಕಾಯುವುದೇ ಬಹುಶಃ ಜೀವನವೇನೋ. ಮದುಮಗಳಿಗೆ ರಿಜಿಸ್ಟ್ರೇಶನ್ ಆಫೀಸು ತೆರಳಲು ಅವಸರ. ಹೆಂಗಸಿಗೆ ಆದಷ್ಟು ಬೇಗ ಇಲ್ಲಿಂದ ಹೊರಬಿದ್ದು ಮಾಕರ್ೆಟ್ಟಿಗೆ ಹೋಗಿ, ತರಕಾರಿ ತಂದು ಮನೆಯ ಡಬಲ್ ಡೋರಿನ ಖಾಲಿ ಫ್ರಿಜ್ಜನ್ನು ತುಂಬಿಸಬೇಕು. ನಾಳೆಯ ಮದುವೆಗೆ ಧರಿಸಲಿರುವ ಭಾರದ ಕೆಂಪು ಸೀರೆಯನ್ನು ಇಸ್ತ್ರಿ ಮಾಡಬೇಕು. ಬಾಲಕನಿಗೆ ಘಂಟೆ ಆರರ ಬಳಿಕ ತನ್ನ ಬೆಂಕಿಪೊಟ್ಟಣದಂತಿರುವ ಮನೆಗೆ ಹೋಗಿ, ಸಿಕ್ಕ ಒಂದಿಷ್ಟು ಟೈಮಿನಲ್ಲಿ ಬೀದಿಯ ಮಕ್ಕಳೊಂದಿಗೆ ಬ್ಯಾಟು ಬೀಸುವ ತವಕ. `ಈ ಹಾಳು ಕರೆಂಟಿನಿಂದಾಗಿ ಬಿಸ್ನೆಸ್ಸು ಡೌನು’ ಎಂದು ಒಳಗೊಳಗೇ ನಿಟ್ಟುಸಿರಿಡುತ್ತಾ, ಯಾವಾಗ ಕರೆಂಟು ಬರುತ್ತದೋ ಎಂದು ಆಗಾಗ ಗೋಡೆಗಡಿಯಾರ ನೋಡುವ ಪಾರ್ಲರಿನಾಕೆ. ಅತ್ತ ಸಿಗರೇಟಿನೊಂದಿಗೆ ಗೂಡಂಗಡಿಯಲ್ಲಿ ಶಥಪಥ ತಿರುಗುತ್ತಿರುವ ಮದುಮಗ. ಎಲ್ಲರಿಗೂ ಗಡಿಬಿಡಿ, ಆತಂಕ. ಗಮ್ಯ ಮುಟ್ಟುವ ಧಾವಂತ!
ಸ್ವಲ್ಪ ಟೈಮಿದ್ದರೆ ಕೊಡಿ ಕಣ್ರೀ. ಬೇಕಾಗಿದ್ದವರಿಗೆಲ್ಲಾ ಒಂದೊಂದು ಮುಷ್ಟಿ ಹಂಚಬೇಕು.

‍ಲೇಖಕರು Avadhi

March 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: