-ವಿಶಾಲ್ ಮ್ಯಾಸರ್
ನಾವು ಹೇಗೆಲ್ಲ
ಮಾತಾಡಬಹುದು
ಬಾಯಿಂದ, ಕೈಯಿಂದ
ಕಣ್ಣಿಂದ, ಕಾಲಿಂದ
ಕೊನೆಗೆ ಸುಮ್ಮನಿರುವುದರಿಂದ
ಲಾರ್ಡ್ ಒಂದು, ಎರೆಡು
ಹೀಗೆ ಸಂಖ್ಯೆಗಳನ್ನು ಹೆಚ್ಚಿಸುತ್ತ
ಇರುವ ವಯಸ್ಸಿಗೆ ಬಂದು ನಿಲ್ಲಿ
ನನಗನ್ನಿಸುವ ಮಟ್ಟಿಗೆ ಏನನ್ನಾದರೂ ನಂಬರ್ನಲ್ಲಿ ಎಣಿಕೆ ಮಾಡುವುದು ಒಂದು ಒಳ್ಳೆಯ ಪಾಪ ಇರಬಹುದು
ಅಂಗುಲ ಅಂಗುಲ ಆವರಿಸುತ್ತಾ ಮಾತುಗಳು, ವಯಸ್ಸುಗಳು
ಅದೆಲ್ಲಿಗೆ ಕರೆದು ಒಯ್ಯುತ್ತವೆ
ಒಂದೋ ಅಂಕೆಯಿಲ್ಲದ ನಿಶಬ್ದಕ್ಕೆ
ಇಲ್ಲವೋ ಎಲ್ಲವನ್ನೂ ಮರೆಸುವ ಮಹಾ ಸ್ಪೋಟಕ್ಕೆ
ತಿರುಗುವ ಫ್ಯಾನು
ಖಾಲಿ ಸಿಲೆಂಡರು
ತುಂಬಿದ ಅಕ್ಕಿ ಚೀಲ
ಅಥವಾ ಒಂದು
ವಿಶಾಲವಾದ ಮರ
ಇವುಗಳನು ಪಕ್ಕಕ್ಕೆ ಇಟ್ಟು
ನೋಡಲು ಸಾಧ್ಯವೇ?
ಒಂದು ಸುತ್ತಿ ಸುಳಿಸುವ ಗಾಳಿ
ಇನ್ನೊಂದು ತುಂಬಿದ ವ್ಯಾಕ್ಯೂಮ್
ಮತ್ತೊಂದು ಹಸಿವಿಗೆ ಜಾಗವಿರದ ಹೊಟ್ಟೆ
ಮಗದೊಂದು ಎಲ್ಲವನ್ನೂ ನೆರಳಲ್ಲಿ ಲೀನವಾಗಿಸುವ ಅಪ್ಪುಗೆ
ಒಣಗಿದ ಎಲೆಗಳು
ಉಸಿರು ಕಟ್ಟಿಸುವ ಬೇರಿಗೆ
ತೆಳುವಾದ ಕೂದಲು
ಅಲುಗಾಡುವ ಹೆಜ್ಜೆಗಳಿಗೆ
ಶಬ್ದದ ಮಾತು
ಗಣಿತದ ಕಾಲ
ಏನು ಕಲಿಸಲು ಸಾಧ್ಯ?






0 Comments