ಅಂಕುರ್ ಬೆಟಗೇರಿ ಕೇಂದ್ರ ಸಾಹಿತ್ಯ ಅಕಾಡೆಮಿಯ indian Literature ಪತ್ರಿಕೆಯ ಸಹಾಯಕ ಸಂಪಾದಕರು.
‘ಮಾಳವಿಕಾ ಮತ್ತು ಇತರ ಕಥೆಗಳು’ ಇವರ ಇತ್ತೀಚಿನ ಕಥಾ ಸಂಕಲನ.
ಇದು ಮ್ಯಾನಿಫೆಸ್ಟೋ ಬರೆಯುವ ಕಾಲವಲ್ಲ, ಮ್ಯಾನಿಫೆಸ್ಟೋವನ್ನು ಗಂಭೀರವಾಗಿ ತೆಗೆದುಕೊಳ್ಳುವ ಕಾಲವಂತೂ ಅಲ್ಲವೇ ಅಲ್ಲ, ಆದರೂ
ಒಂದು ಮ್ಯಾನಿಫೆಸ್ಟೋ.
ನಾವು ಸತ್ಯ ಹೇಳಲು, ಸೌಂದರ್ಯ ಸೃಷ್ಟಿಸಲು ಕವಿತೆ ಬರೆಯುವುದಿಲ್ಲ: ನಮ್ಮ ಹಿಂದೆ ಬಂದು ಹೋಗಿರುವ ಕವಿಗಳೆಲ್ಲರೂ ಹೇಗೆ ತಮ್ಮ ಶಬ್ದಗಳ ಸೌಂದರ್ಯದಲ್ಲಿ ಮುಳುಗಿ ಮೋಸಹೋದರು ಎಂಬ ಅರಿವಿನಲ್ಲಿ ಬರೆಯುತ್ತೇವೆ.
ನಾಳೆ ಸಾವು ಬಂದರೆ ಜೀವನಕ್ಕೆ ನಾವು ಕಂಡುಕೊಂಡ ಉತ್ತರಗಳು ನಾವು ಬರೆದಿಟ್ಟ ಹಾಳೆಗಳಲ್ಲಿವೆ ಎಂದು ಹೇಳಿ ಅವನ ಜೊತೆಗೆ ಹೋಗುವುದರಲ್ಲಿ ಯಾವುದೋ ನಿಶ್ಚಿಂತತೆಯ ಭಾವವಿದೆ. ಈ ನಿಶ್ಚಿಂತತೆಯ ಭಾವ ಮತ್ತು ಇದರ ಅಭಾವ ಸೃಜನಶೀಲ ಪ್ರಕ್ರಿಯೆಯಲ್ಲಿ ಮಹತ್ವಪೂರ್ಣವಾದ ಪಾತ್ರ ವಹಿಸುತ್ತದೆ ಎಂಬುದು ನಾವು ಕಂಡುಕೊಂಡ ಸತ್ಯ.
ಕಾವ್ಯ ‘ಪ್ರಕೃತಿ’ ಮತ್ತು ನಮ್ಮ ನಡುವೆ, ನಮ್ಮ ಮತ್ತು ಸಮಾಜದ ನಡುವೆ ಒಂದು ಸಂಧಾನದ ಕೆಲಸ; ಕಾವ್ಯ ನಾವು ಬದುಕಲು ನಿರ್ಮಿಸಿಕೊಂಡ ಮಾನವ-ವ್ಯವಸ್ಥೆ.
‘ಸತ್ಯ’ ಎಂಬ ಮಾನವಕೋಟಿಗಾಗಿ ನಿರ್ಮಿತ ಮಾನವ-ವ್ಯವಸ್ಥೆಯ ಕಟ್ಟುವಿಕೆ ಮತ್ತು ಕೆಡವುವಿಕೆ ನಮ್ಮ ಕಾವ್ಯದ ಕೆಲಸ ಎಂದು ನಾವು ನಂಬುತ್ತೇವೆ.
ಹುಡುಕುತ್ತಿರುವವರಿಗೆ ಹುಡುಕಹೊರಟಿರುವುದನ್ನು ಒಂದು ಸ್ತರದಲ್ಲಿ ಶಬ್ದಗಳ “ಅಲೌಕಿಕದಲ್ಲಿ” ಕಟ್ಟಿಕೊಡುವುದು, ಮತ್ತೊಂದು ಸ್ತರದಲ್ಲಿ ಹುಡುಕಹೊರಟಿರುವುದನ್ನು ರೂಪಕ ಪ್ರತಿಮೆಗಳ ಮೂಲಕ ಉದ್ದೀಪಿಸುವುದು – ನಾವು ಮಾಡ ಬಯಸುವ ಕೆಲಸಗಳು.
ನಾವು ಯುವ ಕವಿಗಳಲ್ಲ: ನಮ್ಮ ಕಾವ್ಯ ಹೊಮ್ಮುವ ಆತ್ಮಗಳು ಇತಿಹಾಸದ ಪಳೆಯುಳಿಕೆಗಳಂತೆ, ಪಾಳು ಬಿದ್ದಿರುವ ಅರಮನೆಗಳಂತೆ, ಗತಿಸಿದ ಕಾಲಕ್ಕೆ ಜೀವಂತ ಸಾಕ್ಷಿಗಳು. ನಮ್ಮ ಆತ್ಮಗಳು ನಮ್ಮ ದೇಹಗಳನ್ನು ತಮ್ಮ ವಕ್ತಾರರನ್ನಾಗಿ ಸ್ವೀಕರಿಸಿರುವುದು ನಮ್ಮ ಮಹಾ ಸೌಭಾಗ್ಯವೆಂದು ನಾವು ತಿಳಿಯುವುದಿಲ್ಲ.
ನಾವು ಕವಿಗಳು ನೀವು ಓದುಗರು ಎಂಬ ಭೇದದ ಮೂಲದಲ್ಲಿರುವುದು ಅಜ್ನಾನ ಎಂಬುದು ನಮಗೆ ಮನವರಿಕೆಯಾಗಿದೆ. ಯಾರ ದೇಹದಲ್ಲಿ ಕವಿತೆ ತನ್ನ ಮೂಲ ಸ್ವರೂಪವಾದ ಶಕ್ತಿ (ಅನುಭವ) ಮತ್ತು ಅರಿವಿನಲ್ಲಿ ಅನಾವರಣಗೊಳ್ಳುತ್ತದೋ ಅವರು ಆ ಕವಿತೆಯ ಸೃಷ್ಟಿಕರ್ತರು. ಕವಿತೆಯನ್ನು ಆವಾಹಿಸಿಕೊಳ್ಳುವುದು, ಕವಿತೆಯನ್ನು ಜೀವಿಸುವುದು ಕವಿತೆಯನ್ನು ರಚಿಸುವಷ್ಟೇ ಉತ್ಕಟ ಸೃಜನಶೀಲತೆಯ ಕೆಲಸ ಎಂದು ನಾವು ನಂಬುತ್ತೇವೆ.
ಕ್ಲೀಷೆಗಳು ಮತ್ತು ಸಿದ್ಧ ಮಾದರಿಗಳು ಯಾವಾಗಲೂ ಅರೆ ಸತ್ಯವನ್ನು ಹೇಳುತ್ತವೆ ಎಂಬುದು ನಮ್ಮ ಆಳವಾದ ನಂಬಿಕೆ. ಆದ್ದರಿಂದ ಹೊಸ ಮಾದರಿಗಳ ಸೃಷ್ಟಿ ನಮ್ಮ ಕಾವ್ಯದ ಮೂಲಭೂತ, ಸಾವಯವ ಅವಶ್ಯಕತೆ.
ಬರೆದುದು ಮಾತ್ರ ಕಾವ್ಯವಲ್ಲ. ಎಲ್ಲ ಕಲೆಗಳಲ್ಲೂ ನಮ್ಮ ಕಾವ್ಯ ಧರ್ಮವನ್ನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ. ಜೀವನದ ಆಯ್ಕೆಗಳಲ್ಲಿ ಮತ್ತು ನಿತ್ಯ ಜೀವನದ ಸಂರಚನೆಯಲ್ಲಿ ಕಾವ್ಯ ಮಹತ್ವದ ಪಾತ್ರ ವಹಿಸಬೇಕೆಂಬುದು ನಮ್ಮ ಮಹಾತ್ವಾಕಾಂಕ್ಷೆ. ಇಂಥಾ ಕಾವ್ಯ ನಮ್ಮ ಉಸಿರಿನ ಭಾಗವಾಗುವುದರೊಂದಿಗೆ ಕ್ರಾಂತಿಕಾರಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳು ಪ್ರತಿಯೊಬ್ಬನ ಸಹಜ ಕ್ರಿಯೆಯಿಂದ ಉಂಟಾಗುವುದು.
ತಂತ್ರಜ್ಞಾನ ನಮ್ಮ ಪರಿಸರದ ಬಹುಮುಖ್ಯ ಭಾಗವಾಗುತ್ತಿರುವುದರಿಂದ ತಂತ್ರಜ್ಞಾನವನ್ನು ಮನುಷ್ಯೀಕರಿಸುವ, ಜೀವನದ ಪರಿಪೂರ್ಣ ಅರಳುವಿಕೆಗೆ ಅದು ಅಡ್ಡಿಯಾಗದಂತೆ ನೋಡಿಕೊಳ್ಳುವ, ಅದನ್ನು ಸೃಜನಶೀಲವಾಗಿ ಮರುಹೊಂದಿಸುವ ಕೆಲಸ ನಮ್ಮೆದುರಿಗಿದೆ. ಅದರ ಹಿಂದಿನ ಪ್ರಜ್ಞೆ: ತಂತ್ರಜ್ಞಾನ ನಮ್ಮನ್ನು ಆಳಬಾರದು, ನಾವು ತಂತ್ರಜ್ಞಾನವನ್ನು ಆಳಬೇಕು.
ಇಲ್ಲಿ ನಾವು ಎಂದರೆ ನಾನು ಮತ್ತು ನನ್ನ ಪ್ರತಿರೂಪಗಳು. ನನ್ನ ಜೊತೆಗೆ ಇನ್ನೂ ಯಾರ್ಯಾರಿದ್ದಾರೆ ಎಂಬುದು ನನಗಿನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಈ ಚಳವಳಿಗೆ ಹೆಸರು ಮತ್ತು ಮುಂದಾಳುಗಳಿಲ್ಲ. ಹೆಸರು ಮತ್ತು ಮುಂದಾಳುಗಳು ಚಳವಳಿಯ ನೈಜ ಬೆಳವಣಿಗೆಗೆ ಮಾರಕ ಎಂಬುದು ನಮ್ಮ ಅಭಿಮತ.
ಸಹಿ,
ಅಂಕುರ್ ಬೆಟಗೇರಿ
೧೩ ಸೆಪ್ಟೆಂಬರ್ ೨೦೦೮







0 Comments