ಅಂಕಿತ ಪುಸ್ತಕ ಮೀಡಿಯಾ ಮಾಲಿಕೆಯನ್ನು ಆರಂಭಿಸಿದೆ. ವರ್ಷದಲ್ಲಿ ಮಾಧ್ಯಮ ರಂಗದ ಅನುಭವಗಳನ್ನು ಒರೆಗಿಕ್ಕುವ ಕನಿಷ್ಠ ಆರು ಕೃತಿಗಳನ್ನು ನೀಡಬೇಕು ಎನ್ನುವುದು ಅಂಕಿತದ ಹಂಬಲ.
ಈ ಮಾಲಿಕೆಯನ್ನು ನಾನು ಸಂಪಾದಿಸಿದ್ದೇನೆ. ಈ ಮಾಲಿಕೆಯ ಮೊದಲ ಕಂತಾಗಿ ಚಿದಂಬರ ಬೈಕಂಪಾಡಿ, ಎಂ ಬಿ ಶ್ರೀನಿವಾಸ ಗೌಡ, ಸುಘೋಷ್ ಎಸ ನಿಗಳೆ ಅವರ ಕೃತಿಗಳು ಬಿಡುಗಡೆಯಾಗುತ್ತಿದೆ.
ನಾಳೆ (ಜೂನ್ ೧೨)ರಂದು ಬೆಳಗ್ಗೆ ೧೦ ಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಕಾರ್ಯಕ್ರಮ. ಖಂಡಿತಾ ಬನ್ನಿ. ಮಾಲಿಕೆಗೆ ಬರೆದ ಚುಟುಕು ಮಾತು ಇಲ್ಲಿದೆ-
–
ಪತ್ರಿಕೋದ್ಯಮವನ್ನು ‘ನಾಲ್ಕನೆಯ ಆಸ್ತಿ’ ಎನ್ನುತ್ತೇವೆ. ಹಾಗೆ ನಾಲ್ಕನೆಯ ಆಸ್ತಿ ಎಂಬ ಕಲ್ಪನೆಯೇ ತಪ್ಪು ಎನ್ನುವುದನ್ನು ಅನುಭವ ಕಲಿಸಿಕೊಟ್ಟಿದೆ. ಹಾಗಾದರೆ ನಾವು ಕಾಣುವುದಕ್ಕಿಂತಲೂ ಇನ್ನೇನನ್ನೋ ಅನುಭವ ಕಲಿಸಿಕೊಡುತ್ತದೆಯೇ ಎಂದು ಪ್ರಶ್ನಿಸಿಕೊಂಡಾಗ ಹುಟ್ಟಿದ್ದು ಈ ‘ಮೀಡಿಯಾ ಮಾಲಿಕೆ’ ಆಲೋಚನೆ. ನಾಲ್ಕು ಕೋಣೆಯ ಚೌಕಟ್ಟಿನೊಳಗೆ ಕೂತು ತಾರೆಗಳನ್ನು ಮೀಟುವುದೂ, ಚಂದಿರನನ್ನು ದಾಟುವುದೂ ತೀರಾ ಸುಲಭ. ಆದರೆ ಅನುಭವದ ಕ್ಯಾನ್ವಾಸ್ ನಲ್ಲಿ ಹಾಗಲ್ಲ. ಅಲ್ಲಿ ಭಿನ್ನ ಪಾಠವಿರುತ್ತದೆ. ಅಂತಹ ಭಿನ್ನ ಪಾಠಗಳನ್ನು ಪಡೆದಿರುವವರು ನೇರವಾಗಿ ತಮ್ಮ ಅನುಭವಗಳನ್ನು ಬಣ್ಣಿಸಿಕೊಳ್ಳುವುದೇ ಈ ಮಾಲಿಕೆಯ ವಿಶೇಷ. ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ‘ಕೆಂಡದ ಮೇಲೆ ನಡೆದವನಿಗೆ ಮಾತ್ರವೇ ಕೆಂಡದ ಅನುಭವಗಳನ್ನು ಬಣ್ಣಿಸಲು ಸಾಧ್ಯ’ ಎನ್ನುತ್ತಿದ್ದರು. ಬಹುಷಃ ಇದೂ ಕೂಡಾ ಈ ಮಾಲಿಕೆ ಹುಟ್ಟಲು ಕುಮ್ಮಕ್ಕು ಕೊಟ್ಟಿರಬಹುದು.
ಇದು ಮಾಧ್ಯಮ ಯುಗ. ದಿನಕ್ಕೊಂದು ಹೊಸ ಮಾಧ್ಯಮ ತಂತ್ರಜ್ಞಾನ ತಲೆ ಎತ್ತುತ್ತಿರುವ ಈ ದಿನಗಳಲ್ಲಿ ನಾವು ಥೇಟ್ ಬೆಂಗಳೂರಿನ ಟ್ರಾಫಿಕ್ ಜ್ಯಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಂತವರಾಗಿದ್ದೇವೆ. ಮುಂದೆ ಹೋಗಲೂ ಸಾಧ್ಯವಿಲ್ಲ, ಹಿಂದೆಯೂ…ಹಾಗಾಗಿಯೇ ಈ ಮಾಧ್ಯಮವನ್ನು ಅರಿತವರು, ಅನುಭವಿಸಿದವರು ತಮ್ಮ ಅನುಭವಗಳನ್ನು ಬರೆದರೆ ಒಳ್ಳೆಯದು ಅನಿಸಿತು. ಅನಿವಾರ್ಯವಾಗಿ ಪ್ರತಿಯೊಬ್ಬರೂ ಮಾಧ್ಯಮಕ್ಕೆ ತೆರೆದುಕೊಳ್ಳಲೇಬೇಕಾಗಿರುವ ಇಂದಿನ ದಿನಗಳಲ್ಲಿ ಮಾಧ್ಯಮ ಲೋಕವನ್ನು ಅರ್ಥೈಸುವುದು ಈ ಪ್ರಯತ್ನದ ಉದ್ಧೇಶ.
ಕನ್ನಡದಲ್ಲಿ ಈ ರೀತಿಯ ಪ್ರಯತ್ನಗಳಾಗಿಲ್ಲ. ಮಾಧ್ಯಮ ಲೋಕದ ಬಗ್ಗೆ ಬೆರಳೆಣಿಕೆಯಷ್ಟು ಮಾತ್ರ ಪುಸ್ತಕಗಳಿವೆ. ಹಾಗಾಗಿ ಈ ಮಾಲಿಕೆ ಮಾಧ್ಯಮ ಬಳಕೆದಾರರಿಗೂ, ಮಾಧ್ಯಮ ವಿದ್ಯಾರ್ಥಿಗಳಿಗೂ, ಮಾಧ್ಯಮ ರಂಗದಲ್ಲಿರುವವರಿಗೂ ಒಂದು ತೋರುದೀಪ. ಈ ಕೃತಿಗಳು ಮಾತನಾಡುತ್ತಿರುವುದು ಈ ಕೃತಿಗಳನ್ನು ಬರೆದವರು ಕಂಡ ಸತ್ಯಗಳನ್ನು ಮಾತ್ರ. ಇದೇ ಅಂತಿಮವಲ್ಲ. ಈ ಕೃತಿಗಳು ಚರ್ಚೆಯನ್ನು ಪ್ರೇರೇಪಿಸುತ್ತವೆ. ಮಾಧ್ಯಮ ಲೋಕವನ್ನು ಅರಿಯಲು ಸಹಾಯ ಮಾಡುತ್ತವೆ. ಈ ಅರಿವನ್ನು ವಿಸ್ತರಿಸಲು ನೀವು ಜೊತೆಗೂಡಿ ಎನ್ನುವುದು ನಮ್ಮ ಮನವಿ
ಜಿ ಎನ್ ಮೋಹನ್









ಪುಸ್ತಕ ಬರೆದಿರುವ ಲೇಖಕರಿಗೂ, ಪುಸ್ತಕ ಸಂಪಾದನೆ ಮಾಡುತ್ತಿರುವ ಮೋಹನ್ ಜಿ ಅವರಿಗೂ ಅಭಿನಂದನೆ. ವಡ್ಡಸೆ೯ ರಘುರಾಮಶೆಟ್ಟಿ ಅವರು ದೇವರಾಜ ಅರಸು ಅವರ ಬಗ್ಗೆ ಬಹಳ ಒಳ್ಳೆಯ ಪುಸ್ತಕವನ್ನು ಬರೆದಿದ್ದಾರೆ. ನಾನು ಎಷ್ಟು ಸಲ ಓದಿದ್ದೇ ಎಂಬುದೇ ಮರೆತು ಹೋಗಿದೆ. ಕನಾ೯ಟಕ ಕಂಡ ಅಪರೂಪದ ರಾಜಕಾರಣಿಯ ಬಗ್ಗೆ ಸಮಗ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಪರಿಚಯಿಸಿದ್ದಾರೆ. `ಕನ್ನಡಪ್ರಭ’ ದ ನನ್ನ ಹಿರಿಯ ಸಹೋದ್ಯೋಗಿಯಾಗಿದ್ದ ಚಿದಂಬರ ಬೈಕಂಪಾಡಿ ಅವರು ವಡ್ಡಸೆ೯ ಅವರ ಬಗ್ಗೆ ಬರೆಯುತ್ತಿದನ್ನು ಗಮನಿಸಿದ್ದೆ. ಕೆಲವೇ ದಿವಸಗಳ ಹಿಂದೆಯಷ್ಟೆ ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರು. ನಾನೇ ಪುಸ್ತಕ ಯಾವಾಗ ಬಿಡುಗಡೆ ಎಂದು ಕೇಳಿದ್ದೆ. ಈಗ ಪುಸ್ತಕ ಬಿಡುಗಡೆಯ ದಿನಾಂಕ ಅಧಿಕೖತವಾಗಿ ಹೊರಬಿದ್ದಿದೆ. ಎಲ್ಲರಿಗೂ ಶುಭವಾಗಲಿ. ಅವಧಿಯಲ್ಲಿ ಪುಸ್ತಕಗಳ ಕವರ್ ಪೇಜ್ ನೋಡುತ್ತಿದ್ದಂತೆ ನನಗೂ ಕಾಮಿಕ್ ಆಗಿ ವರದಿಗಾರಿಕೆಯ ಅನುಭವಗಳನ್ನು ದಾಖಲಿಸಬೇಕು ಅನ್ನಿಸುತ್ತಿದೆ.
ಉಗಮ ಶ್ರೀನಿವಾಸ್
ಯಾಕೆ ಬರೀಬಾರದು ಉಗಮ..
ನಿಜಕ್ಕೂ ಚೆನ್ನಾಗಿದ್ದರೆ ನೆಕ್ಸ್ಟ್ ನಿಮ್ಮದೇ ಯಾಕಾಗಬಾರದು??
thank you mohan sir
ಹೊಸ ಮಾಲಿಕೆಯ ಬಗ್ಗೆ ಕುತೂಹಲ ಮೂಡಿದೆ. ಮುಂಗಾರು ಬಗ್ಗೆ ಬಹಳ ತಿಳಿದುಕೊಳ್ಳುವುದಿದೆ ಎಂದುಕೊಂಡಿದ್ದವನಿಗೆ ಈಗ ಸಮಾಧಾನವಾಯ್ತು. ಬೈಕಂಪಾಡಿಯವರಂಥ ಅನುಭವಿಗಳಿಂದ ಇನ್ನಷ್ಟು ಕೃತಿಗಳನ್ನು ಈ ಮಾಲಿಕೆಯಲ್ಲಿ ನೋಡುವ ಆಸೆ.
priya mohan nimma saahasakke dhanyavaadagalu. avashya munduvaresiri