ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼಎಚ್ಚೆಸ್ವಿʼ ಕಣ್ಣಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ…

ಹಿರಿಯ ಕವಿ ಎಚ್‌ ಎಚ್‌ ವೆಂಕಟೇಶಮೂರ್ತಿ ಅವರ ಹೊಸದಾಗಿ ಬಂದಿರುವ ʻಉತ್ತರಾರ್ಧʼ ಸಮಗ್ರ ಕವಿತೆಗಳು ಸಂಕಲನಕ್ಕೆ ಚಿಂತಾಮಣಿ ಕೊಡ್ಲೆಕೆರೆ ಅವರ ಸೊಗಸಾದ ಬೆನ್ನುಡಿ.. ನಿಮ್ಮ ಓದಿಗಾಗಿ..

ಚಿಂತಾಮಣಿ ಕೊಡ್ಲೆಕೆರೆ

ಕಾವ್ಯಯೋಗ – ಇದು ಎಚ್.ಎಸ್.ವಿ.ಯವರ ನಿರಂತರ ಕಾವ್ಯತತ್ಪರತೆಗೆ ಸಾರ್ಥಕವಾಗಿ ಅನ್ವಯವಾಗುವ ಪದ. ಉತ್ತರಾಯಣದ ಬಳಿಕ ಪ್ರಕಟವಾದ ಅವರ ಆರು ಕವನ ಸಂಗ್ರಹಗಳು ಇಲ್ಲೀಗ ಒಟ್ಟಾಗಿ ಬರುತ್ತಿವೆ. ಕಾವ್ಯರಚನೆಯ ತೀವ್ರತೆ, ದಾಹ, ಮೋಹಗಳು ಈ ಹಿರಿಯ ಪರಿಣತ ಕವಿಯ ಕಾವ್ಯಜೀವನದ ಉತ್ತರಾರ್ಧದಲ್ಲಿ ಮೂಡಿ ಬಂದಿರುವ ಈ ಕವಿತೆಗಳಲ್ಲೂ ನವಜೀವಂತಿಕೆಯಿಂದ ಕಂಗೊಳಿಸುತ್ತಿವೆ.

‘ನನ್ನ ಅಹಂಕೃತಿಯನ್ನಳಿಸು’ ಎಂದು ಭಿನ್ನಹ ಗೈಯುತ್ತಲೇ ಅವರ ಸತತೋದ್ಯೋಗ ಮುಂದುವರಿದಿದೆ. ‘ಹಕ್ಕಿ ಹಕ್ಕಿಯಲ್ಲ – ಅದು ಆಕಾಶದ ಹೃದಯ’ ಎಂಬಂಥ ಹೊಸ ಕಾಣ್ಕೆ ನೀಡುವ ಅವರ ಕಣ್ಣುಗಳಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ. ಆ ಕಣ್ಣೋಟಕ್ಕೆ ಗುಬ್ಬಿಯು ಬಾನಿಗೆ ಕಟ್ಟಿದ ಗೆಜ್ಜೆಯಾಗಿ ಕಾಣುವುದು.

ಸಿಡಿಮದ್ದಿನ ಸದ್ದು, ಹೊಗೆಗಳ ಮಧ್ಯೆ ದೀಪಲಕ್ಷ್ಮಿ ನಟ್ಟನಡುಬೀದಿಯಲ್ಲಿ ಬೆದರಿ ನಿಂತಂತೆ ತೋರುವುದು. ಅಮ್ಮನ ಅನ್ನದ ತಪ್ಪಲೆ ಮೈತುಂಬ ಬೂದಿ ಬಡಕೊಂಡ ಜಂಗಮಸಾಧು! ಅಭಿಜಾತ ಯಕ್ಷಗಾನ ಕಲಾವಿದನೊಬ್ಬನ ಇಂದಿನ ನೃತ್ಯ, ಉತ್ಕೃಷ್ಟ ಸಂಗೀತಗಾರನೊಬ್ಬನ ಇಂದಿನ ರಾಗಾಲಾಪ ಹೇಗೆ ಹಿಂದು-ಇಂದು-ಮುಂದುಗಳನ್ನು ಏಕತ್ರಗೊಳಿಸಿಕೊಂಡು ಸಂಭವಿಸುವುದೋ ಹಾಗೆ ಈ ಕವಿಯ ಕಾವ್ಯಸೃಷ್ಟಿ. ಜಗನ್ನಾಶಕ ಮಹಾಪೂರದ ವಿಹ್ವಲ ವಿಲಾಪಗಳ, ವಿಕೃತ ಚಿತ್ರಗಳ ಗಾಢ ಅರಿವಿನೊಡನೆಯೇ ಹೃದ್ಗೀತೆಯ ಸಾಲುಗಳನ್ನು ಸಂಕಲ್ಪ ಶಕ್ತಿಯಿಂದ ರಚಿಸುತ್ತ ಎಚ್ಚೆಸ್ವಿ ಕನ್ನಡದ ಘನ ಕಾವ್ಯಪರಂಪರೆಯನ್ನು ಬೆಳೆಸುತ್ತಿದ್ದಾರೆ.

‍ಲೇಖಕರು Admin

17 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading